ಅಂಥ ಪರಿಸ್ಥಿತಿಯಲ್ಲೂ ಸಿನಿಮಾ ನೋಡಬೇಕಾ?

Posted In : ಅಂಕಣಗಳು

ಅಂಥ ಪರಿಸ್ಥಿತಿಯಲ್ಲೂ ಸಿನಿಮಾ ನೋಡಬೇಕಾ? ಹುಬ್ಬಳ್ಳಿಯಿಂದ ಎನ್ ಚಂದ್ರು ಎಂಬುವವರು ಬರೆದ ಪತ್ರ ಕೆಲ ವಾರಗಳ ಹಿಂದೆಯೇ ಕೈಸೇರಿತ್ತು. ಅನೇಕ ಕೆಲಸಗಳ ನಡುವೆ ಗಡಿಬಿಡಿಯಲ್ಲಿ ಓದಲಾಗಿರಲಿಲ್ಲ. ಬಿಡುವು ಮಾಡಿಕೊಂಡು ಓದಿದೆ. ಹಂಚಿಕೊಳ್ಳಲೇಬೇಕು ಅಂತನ್ನಿಸಿತು. ಪರದೆ ಮೇಲಿನ ಸಿನಿಮಾ ನಟರು ಯಾಕೆ ಯಾರಿಗಾದರೂ ಹತ್ತಿರವಾಗುತ್ತಾರೆ ಎಂಬು–ದನ್ನು ತಿಳಿದುಕೊಳ್ಳುವುದಕ್ಕೋಸ್ಕರವಾದರೂ ಇದನ್ನೊಮ್ಮೆ ಓದಿ. ಭಾರತಿ ವಿಷ್ಣುವರ್ಧನ್ ಅವರಿಗೆ ನನ್ನ ನಮಸ್ಕಾರಗಳು. ನಾನು ಚಂದ್ರು. ಉತ್ತರ ಕರ್ನಾಟಕ ಭಾಗದ, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಪತ್ರ ಬರೆಯುತ್ತಿದ್ದೇನೆ.

ನಾನು ವಿಷ್ಣು ಸರ್ ಅವರ ತುಂಬಾ ದೊಡ್ಡ ಅಭಿಮಾನಿ. ಅವರನ್ನು ಕಳೆದ ಮೂವತ್ತೈದು ವರ್ಷಗಳಿಂದ ಆರಾಧಿಸುತ್ತಾ ಬಂದಿದ್ದೇನೆ. ವಿಶ್ವವಾಣಿಯಲ್ಲಿ ಪ್ರಕಟವಾಗುವ ನಿಮ್ಮ ಬಾಳ ಬಂಗಾರ ಅಂಕಣವನ್ನು ಪ್ರತೀ ಶುಕ್ರವಾರ ತಪ್ಪದೇ ಓದುತ್ತೇನೆ. ವಿಷ್ಣು ಅವರ ಬದುಕಿನ ಪುಟಗಳನ್ನು ನೀವು ಅಭಿಮಾನಿಗಳ ಮುಂದೆ ತೆರೆದಿಡುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ. ನಿಮ್ಮ ಚಿತ್ರಗಳನ್ನೂ ನೋಡುತ್ತಾ ಬೆಳೆದವನು ನಾನು. ಅವುಗಳಲ್ಲಿ ನನಗೆ ಹೆಚ್ಚು ಇಷ್ಟವಾದುದು ‘ಭಾಗ್ಯಜ್ಯೋತಿ’. ಆ ಚಿತ್ರದಲ್ಲಿ ನೀವು ನೀಡಿರುವ ಅಭಿನಯ ಮನೋಜ್ಞವಾಗಿದೆ. ಚಿತ್ರದಲ್ಲಿನ ಹಾಡುಗಳೂ ಅಷ್ಟೇ, ನನಗೆ ಪಂಚಪ್ರಾಣ.

‘ಕುಂಕುಮ ಹಣೆಯಲಿ…’, ‘ಗುಡಿ ಸೇರದಾ ಮುಡಿಯೆರಡ’. ಭಾಗ್ಯಜ್ಯೋತಿ ಚಿತ್ರದ ಕತೆಯೂ ಅಷ್ಟೇ ಸೊಗಸಾಗಿತ್ತು. ಅಲ್ಲಿ ನೀವು ಜಾತಿಗಿಂತ ಪ್ರೀತಿ ಮೇಲು ಎಂದು ಹೋರಾಡಿ ಗೆಲ್ಲುತ್ತೀರಿ. ಆ ಸಾಮಾಜಿಕ ಅಂಶ ನನಗೆ ಬಹಳ ಇಷ್ಟವಾಯಿತು. ವಿಷ್ಣು ಸರ್ ಮತ್ತು ನೀವು ಇಬ್ಬರೂ ಜತೆಯಾಗಿ ನಟಿಸಿದ್ದ ‘ಬಂಗಾರದ ಜಿಂಕೆ’ ಚಿತ್ರವೂ ನನಗೆ ಅಚ್ಚುಮೆಚ್ಚು. ಅದರಲ್ಲಿನ ‘ಒಲುಮೆ ಸಿರಿಯಾ ಕಂಡು’ ಹಾಡು ಕೂಡ ನಾನು ಆಗಾಗ ಕೇಳುವ ಹಾಡುಗಳಲ್ಲೊಂದು. ನಿಮ್ಮಿಬ್ಬರ ಅಭಿನಯದ ಇನ್ನೊಂದು ಚಿತ್ರ ‘ಮಕ್ಕಳ ಭಾಗ್ಯ’ದಲ್ಲಿ ‘ಓ ಗೆಳತಿ, ನನ್ನಾಣೆ, ನಿನ್ನಾಣೆ’ ಎಂಬೊಂದು ಹಾಡಿದೆ. ಆ ಹಾಡಿನಲ್ಲಿ ಒಂದು ಸಾಲು ಹೀಗೆ ಬರುತ್ತದೆ ‘ದುಂಬಿಯು ನಾನಾಗಿ ಬಳಿಯಿರುವೆ, ಹಾಯಾಗಿ ಹೂವಲ್ಲಿ ಮಲಗಿರುವೆ’.

ನಾನು ವಿಷ್ಣುವರ್ಧನ್ ಸ್ಮಾರಕದ ಬಳಿ ನಿಂದಾಗಲೆಲ್ಲ ಈ ಸಾಲು ನೆನಪಾಗುತ್ತದೆ. ವಿಷ್ಣು ಅವರು ನಮ್ಮಿಂದ ದೂರ ಹೋಗಿಲ್ಲ ಇಲ್ಲೇ ನಮ್ಮ ಬಳಿಯಿದ್ದಾರೆ ಎಂಬ ನಂಬಿಕೆ ಮನದಲ್ಲಿ ಬಲವಾಗಿ ಮೂಡುತ್ತದೆ. ಹಾಗೆ ಅಂದುಕೊಳ್ಳುವುದರಲ್ಲಿ ನಾನು ಮೊದಲಿಗನಾಗಿರಲಿಕ್ಕಿಲ್ಲ ಎನ್ನುವುದರ ಅರಿವೂ ನನಗಿದೆ. ನನ್ನಂತಹ ಸಾವಿರಾರು ಜನರಿಗೆ ವಿಷ್ಣು ಅವರು ಒಂದಿಲ್ಲೊಂದು ರೀತಿಯಲ್ಲಿ ಮಾದರಿಯಾಗಿದ್ದಾರೆ. ಬದುಕಿನಲ್ಲಿ ಹತಾಶನಾದ ಸಂದರ್ಭಗಳಲ್ಲಿ ಧೈರ್ಯ ತುಂಬಿ ಹುರಿದುಂಬಿಸಿದ್ದಾರೆ. ಅವರು ನೇರವಾಗಿ ಪ್ರತಿಯೊಬ್ಬ ಅಭಿಮಾನಿ ಯೊಡನೆ ಮುಖಾಮುಖಿ ಮಾತನಾಡದಿರ–ಬಹುದು ಆದರೆ ಸಿನಿಮಾಗಳ ಮೂಲಕ ಅಷ್ಟೂ ಕೋಟಿ ಕನ್ನಡಿಗರ ಜತೆ ಅವರು ಸಂವಹಿಸಿರುವುದು, ಅವರನ್ನು ತಲುಪಿರುವುದು ಕಡಿಮೆ ಸಾಧನೆಯೇನಲ್ಲ.

ವಿಷ್ಣು ಅಭಿಮಾನಿಗಳು ತಮ್ಮ ಸ್ವಂತ ಬದುಕನ್ನು ಮಾತ್ರವೆ ಹಸನು ಮಾಡಿಕೊಳ್ಳುವುದಿಲ್ಲ, ಮತ್ತೊಬ್ಬರ ಬದುಕನ್ನು ಕೂಡ ಬೆಳಗಲು ಯತ್ನಿಸುತ್ತಾರೆ. ನಾನು ವಿಷ್ಣು ಹುಟ್ಟಿದ ದಿನದಂದು ಬಡ, ಅಂಧ, ಹಾಗೂ ಅನಾಥ ಮಕ್ಕಳಿಗೆ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದೇನೆ. ಈ ವಿಚಾರವನ್ನು ನಾನು ಎಲ್ಲಿಯೂ ಹೇಳಿಕೊಳ್ಳಲು ಮುಜುಗರ ಪಡುತ್ತೇನಾದರೂ, ನನ್ನಂತಹ ಅನೇಕ ವಿಷ್ಣು ಅಭಿಮಾನಿಗಳು ಒಂದಿಲ್ಲೊಂದು ರೀತಿಯಲ್ಲಿ ಸಮಾಜ– ಸೇವೆಯಲ್ಲಿ ತೊಡಗಿದ್ದಾರೆ ಎನ್ನುವುದನ್ನು ನಾವು ಮನಗಾಣಬೇಕು.

ವಿಷ್ಣುವರ್ಧನ್ ನನಗೆ ಹೇಗೆ ಸ್ಫೂರ್ತಿಯಾದರು, ನನ್ನ ಬದುಕಿಗೆ ಹೇಗೆ ಬೆಳಕಾದರು ಎನ್ನುವ ವಿಚಾರವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಇಚ್ಚಿಸುತ್ತೇನೆ. ಚಿಕ್ಕಂದಿನಿಂದಲೇ ನನಗೆ ಸಿನಿಮಾ ಹುಚ್ಚು, ಸಿನಿಮಾ ಸಂಗೀತ ಆಲಿಸುವ ಗೀಳು ಅಂಟಿಕೊಂಡಿತ್ತು. ಅವೆರಡರ ಹುಚ್ಚು ತೀವ್ರವಾಗಿತ್ತು. ಮನೆಯಲ್ಲಿ ಅಮ್ಮ, ಅಕ್ಕ ಅಂಗಡಿಗೆ ಹೋಗಿ ಏನಾದರೂ ಸಾಮಾನು ತೆಗೆದುಕೊಂಡು ಬಾ ಅಂತ ನನ್ನ ಕೈಯಲ್ಲಿ ದುಡ್ಡು ಕೊಟ್ಟು ಕಳಿಸುತ್ತಿದ್ದರೆ ನಾನು ಮಾಡುತ್ತಿದ್ದುದೇ ಬೇರೆ. ಅಕ್ಕ ಅಮ್ಮ ಕೊಟ್ಟ ಸಾಮಾನು ಚೀಟಿಯನ್ನು ಎಸೆದು ನಾನು ಅವರು ಕೊಟ್ಟಿದ್ದ ದುಡ್ಡನ್ನು ಸಿನಿಮಾ ಮಂದಿರಕ್ಕೆ ಹೋಗಿ ಕಳೆಯುತ್ತಿದ್ದೆ. ಅದರಲ್ಲೂ ಸಿನಿಮಾ ಮಂದಿರದಲ್ಲಿ ವಿಷ್ಣುವರ್ಧನ್ ಅಭಿನಯದ ಚಿತ್ರವಿದ್ದರಂತೂ ಕೇಳುವುದೇ ಬೇಡ.

ಮಾಹಿತಿ ಸಿಕ್ಕ ದಿನವೇ ಮನೆಯಲ್ಲಿ ಏನಾದರೊಂದು ಸ್ಕೀಮ್ ಹಾಕಿ ಹೇಗೋ ಟಿಕೇಟು ದುಡ್ಡನ್ನು ಹೊಂದಿಸಿಕೊಳ್ಳುತ್ತಿದ್ದೆ. ಹೀಗೆಲ್ಲಾ ಪಡಿಪಾಟಲು ಪಟ್ಟಿದ್ದಕ್ಕೆ ನಾನು ವಿಷ್ಣು ಅಭಿಮಾನಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ನಮ್ಮದು ಬಡ ಕುಟುಂಬ. ಎಷ್ಟೋ ಸಲ ಊಟಕ್ಕೆ ಗತಿಯಿರುತ್ತಿರಲಿಲ್ಲ. ತುಂಬಾ ಕಷ್ಟದಲ್ಲಿದ್ದವು. ಅಂತಹ ಪರಿಸ್ಥಿತಿಯಲ್ಲೂ ಸಿನಿಮಾ ನೋಡಬೇಕಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನನಗೆ ವಿಷ್ಣು ಸಿನಿಮಾ–ಗಳೆಂದರೆ ಕಾಲಹರಣ ಮಾಡುವಂಥವಲ್ಲ, ಬದುಕಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಡುವ ತಾಣವಾಗಿತ್ತು. ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ. ತಂದೆ, ತಾಯಿ ಪತ್ನಿಯನ್ನು ಬಹಳ ಬೇಗನೆ ಆ ದೇವರು ಮೇಲಕ್ಕೆ ಕರೆಸಿಕೊಂಡುಬಿಟ್ಟ.

ಉಳಿದವನು ನಾನೊ–ಬ್ಬನೇ. ಅಗಲಿಕೆಯ ದುಃಖದಿಂದಾಗಿ ನಾನು ಮಾನಸಿಕ ಅಸ್ವಸ್ಥನಂತಾಗಿದ್ದೆ. ಬದುಕೇ ಶೂನ್ಯವಾಗಿತ್ತು. ಈ ಸಂದರ್ಭದಲ್ಲಿ ನನಗೆ ಆಶಾಕಿರಣದಂತೆ ಗೋಚರಿಸಿದ್ದು ವಿಷ್ಣು ಸಿನಿಮಾಗಳು. ನಾನು ವಿಷ್ಣು ಸರ್ ಸಿನಿಮಾಗಳಿಗೆ ಮೊರೆ ಹೋದೆ. ಅದು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದವು. ಹುಚ್ಚನಾಗುತ್ತಿದ್ದ ನನ್ನನ್ನು ಕೈ ಹಿಡಿದು ಮೇಲಕ್ಕೆ ಎತ್ತಿ ಸಹಾಯಹಸ್ತ ಚಾಚಿದವು. ಇದೇ ಸಮಯದಲ್ಲಿ ನಾನು ಸುಪ್ರಭಾತ, ಕರುಣಾಮಯಿ, ಸಿರಿವಂತ, ದೇವ, ಜೀವನಜ್ಯೋತಿ, ಕದಂಬ, ಯಜಮಾನ–ದಂತಹ ಸಿನಿಮಾಗಳನ್ನು ನೋಡಿದೆ. ಯಾರ ಆಸರೆಯೂ ಇಲ್ಲದೆ ಮುಳುಗುತ್ತಿದ್ದವನಿಗೆ ಈ ಸಿನಿಮಾಗಳು ಹುಲ್ಲುಕಡ್ಡಿಗಳಾದವು.

ನಿಧಾನಕ್ಕೆ ನಾನು ಸಮಸ್ಯೆಗಳ ಆ ಸುಳಿಯಿಂದ ಹೊರಬಂದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಮಾಧಾನದಿಂದ ಭವಿಷ್ಯದ ಕುರಿತು ಚಿಂತಿಸಿದೆ. ವಿಷ್ಣು ಅವರು ತಮ್ಮ ಪಾತ್ರಗಳ ಮೂಲಕ ನನ್ನನ್ನು ಆವರಿಸಿಕೊಂಡಿದ್ದರು. ‘ಯಜಮಾನ’ ಚಿತ್ರದಲ್ಲಿ ವಿಷ್ಣು ಅವರು ಕಷ್ಟ ಒದಗಿದಾಗ ಯಾವ ಯಾವುದೋ ವ್ಯವಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ತನಕ ನಿಲ್ಲದ ಛಲವಿಕ್ರಮನ ಪಾತ್ರದಲ್ಲಿ ನಟಿಸಿದ ವಿಷ್ಣು ನನಗೆ ಸ್ಫೂರ್ತಿಯಾದರು. ಆವತ್ತು ನೋಡಿದ ‘ಯಜಮಾನ’ ಚಿತ್ರ ಯಾವ ಕಾಲಕ್ಕೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವುದು ಖಚಿತ.

ವಿಷ್ಣು ಸರ್ ಅವರನ್ನು ಕಣ್ಣಾರೆ ನೋಡುವ ಅನೇಕ ಸಂದರ್ಭಗಳು ಎದುರಾದರೂ ಅವರನ್ನು ಮಾತಾಡಿಸುವ ಅವಕಾಶವಾಗಲಿಲ್ಲ. ಅದು ನನ್ನ ದೌರ್ಭಾಗ್ಯವೇ ಸರಿ. ಆದರೆ ಮೇಡಂ, ನಿಮ್ಮನ್ನು ವಿಷ್ಣುರವರ 64ನೇ ಹುಟ್ಟುಹಬ್ಬದಾಚರಣೆ ಸಮಯದಲ್ಲಿ ಭೇಟಿ ಮಾಡಿ ವಿಷ್ಣು ಅವರ ಭಾವಚಿತ್ರವೊಂದನ್ನು ನಿಮಗೆ ನೀಡಿ ಕೃತಾರ್ಥನಾಗಿದ್ದೆ. ವೃತ್ತಿಯಲ್ಲಿ ನಾನೊಬ್ಬ ಹೊಟೇಲ್ ಕಾರ್ಮಿಕ. ನನ್ನ ಬದುಕು ತುಂಬಾ ಚಿಕ್ಕದು. ಆದ್ದರಿಂದ ಇಲ್ಲಿ ಅಸೂಯೆ, ಸಣ್ಣತನಗಳಿಗೆ ಜಾಗ ನೀಡಿಲ್ಲ. ನನಗೆ ತುಂಬಾ ಆಸೆಗಳೇನಿಲ್ಲ. ಇದ್ದಿದ್ದರಲ್ಲಿ ತೃಪ್ತಿಪಟ್ಟುಕೊಂಡು, ಏನೂ ಇಲ್ಲದವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಇದ್ದು ಬಿಡಬೇಕೆಂದುಕೊಂಡಿದ್ದೇನೆ. ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ.

ಇಂತಿ ವಿಷ್ಣು ಅಭಿಮಾನಿ
ಎನ್. ಚಂದ್ರು ಹುಬ್ಬಳ್ಳಿ

-ಭಾರತಿ ವಿಷ್ಣುವರ್ಧನ್

Leave a Reply

Your email address will not be published. Required fields are marked *

fourteen − thirteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top