ಅನುಪಮ ಉತ್ಸಾಹದ ಬುಗ್ಗೆ ಈ ಅಮೆರಿಕನ್ನಡತಿ!

Posted In : ಅಂಕಣಗಳು, ತಿಳಿರು ತೋರಣ

ಅನುಪಮಾ ಎಂದು ಹೆಸರು. ಹೆಸರಿನಂತೆಯೇ ಎಲ್ಲರೂ ಇರುತ್ತಾರೆಂದೇನಿಲ್ಲ, ಇರಲೇಬೇಕೆಂದೂ ಇಲ್ಲವೆನ್ನಿ. ಆದರೆ ಇವರ ಹೆತ್ತವರು ಇವರಿಗೆ ಹೆಸರಿಡುವಾಗಲೇ ಬಹುಶಃ ಗೊತ್ತಿತ್ತು ಈಕೆ ನಿಜಾರ್ಥದಲ್ಲಿ ಅನುಪಮಳೇ ಆಗುತ್ತಾಳೆ, ಹೆಸರಿಗೆ ತಕ್ಕಂತೆಯೇ ಇರುತ್ತಾಳೆ ಎಂದು. ಕಳೆದ ಭಾನುವಾರ, ಹೊಸ ವರ್ಷದ ಮೊದಲ ದಿನ, ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಅನುಪಮಾ ಮಂಗಳವೇಢೆ ಪ್ರಸ್ತುತ ಪಡಿಸಿದ ‘ನೃತ್ಯನಮನ’ ಭರತನಾಟ್ಯ ಪ್ರದರ್ಶನ ಕಂಡು ಆನಂದಿಸಿದ ಆ ತಂದೆತಾಯಿಗೆ ಅದು ಭಾಸವಾಗಿರಬೇಕು. ಅಂದು ಅವರು ತಮ್ಮೆಲ್ಲ ಬಂಧುಮಿತ್ರರೊಂದಿಗೆ ಅನುಭವಿಸಿದ ರೋಮಾಂಚನ, ಎದೆತುಂಬಿದ ಧನ್ಯತಾಭಾವ ಅಕ್ಷರಗಳಲ್ಲಿ ಹಿಡಿಯಲಾರದ್ದು. ರಜೆಯಲ್ಲಿ ಊರಿಗೆ ಬಂದಿದ್ದ ನನಗೂ ಅದೃಷ್ಟವಶಾತ್ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸುಸಂದರ್ಭ. ಹಾಗಾಗಿ ನೃತ್ಯನಮನ ಸೌಂದರ್ಯದ ಬಗ್ಗೆಯೂ ವಿವರಿಸುತ್ತೇನೆ. ಮೊದಲು, ಅನುಪಮಾ ಎಂಬ ಈ ಅತ್ಯುತ್ಸಾಹಿ ಅಮೆರಿಕನ್ನಡತಿಯನ್ನು ಹೆಮ್ಮೆಯಿಂದ ನಿಮಗೆ ಪರಿಚಯಿಸುತ್ತೇನೆ.

2003-04ರ ಆಸುಪಾಸು. ನಾನು ದಟ್ಸ್ ಕನ್ನಡದಲ್ಲಿ ವಿಚಿತ್ರಾನ್ನ ಅಂಕಣ ಬರೆಯುತ್ತಿದ್ದೆ. ಅದರ ಓದುಗರಾಗಿ ಜಗದಗಲದ ಕನ್ನಡಿಗರು ನನಗೆ ಇ-ಪರಿಚಿತರಾಗಿದ್ದರು. ಇಂಟರ್‌ನೆಟ್‌ನಲ್ಲಿ ಕನ್ನಡವನ್ನು ಹುಡುಕಿಕೊಂಡು ಓದಲಿಕ್ಕೆ ಬರುವವರೆಂದರೆ ಅವರು ಸದಭಿರುಚಿಯ ಸಜ್ಜನರೇ ಆಗಿರುತ್ತಿದ್ದರು. ಅಂಥವರಲ್ಲಿ ಕೆಲವರು ಬರೀ ಓದುಗರಾಗಿಯಷ್ಟೇ ಉಳಿಯದೆ, ಲೇಖಕರೊಂದಿಗೆ ರಚನಾತ್ಮಕ ಸಂವಾದ ನಡೆಸುತ್ತಿದ್ದರು. ಕೆಲವರು ಚಿಕ್ಕಪುಟ್ಟ ಲೇಖನ, ಕತೆ, ಕವಿತೆ, ಪ್ರವಾಸಕಥನ ಬರೆದು ಅವು ಪ್ರಕಟಗೊಂಡದ್ದೂ ಇದೆ. ಒಟ್ಟಿನಲ್ಲಿ, ಮೈಲುಗಟ್ಟಲೆ ದೂರದಲ್ಲಿದ್ದು ಮುಖಪರಿಚಯವಿಲ್ಲದೆ ಬೆಳೆದಿದ್ದ ಆರೋಗ್ಯವಂತ ಪತ್ರಮೈತ್ರಿ ಅದು. ಹಾಗೆ ನನಗೆ ಇ-ಪರಿಚಿತರಾದವರಲ್ಲಿ ಶಿಕಾಗೊ ನಿವಾಸಿ ಅನುಪಮಾ ಮಂಗಳವೇಢೆ ಸಹ ಒಬ್ಬರು.

ಒಮ್ಮೆ ಸತ್ಸಂಗ ಭಜನೆ ಕುರಿತು ಆಕೆ ಬರೆದಿದ್ದ ವರದಿಯೊಂದಕ್ಕೆ ಮೆಚ್ಚುಗೆಯ ಮಿಂಚಂಚೆ ಕಳಿಸಿದ್ದೆ. ಖುಷಿಪಟ್ಟಿದ್ದರು. 2007ರಲ್ಲಿ ಶಿಕಾಗೊದಲ್ಲಿ ಕನ್ನಡ ಸಾಹಿತ್ಯರಂಗದ ವಸಂತೋತ್ಸವದಲ್ಲಿ, ಆಮೇಲೆ 2008ರಲ್ಲಿ ಶಿಕಾಗೊದಲ್ಲಿ ‘ಅಕ್ಕ’ ಸಮ್ಮೇಳನ ನಡೆದಾಗ ಅಲ್ಲಿ ಅನುಪಮಾ ನನಗೆ ಮುಖತಃ ಭೇಟಿಯಾದರು. ಮಂಗಳವೇಢೆ ಎಂದರೆ ಬಹುಶಃ ಧಾರವಾಡದವರೋ ಮಹಾರಾಷ್ಟ್ರ ಮೂಲದವರೋ ಇರಬಹುದೆಂಬ ನನ್ನ ಊಹೆಯನ್ನು ಅವರು ಸರಿಪಡಿಸಿದ್ದು ಆಗಲೇ. ತಾನು ಚನ್ನರಾಯಪಟ್ಟಣದವಳು, ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಲ್ಲಿ ಓದಿ, ಮದುವೆಯಾಗಿ ಅಮೆರಿಕಕ್ಕೆ ಬಂದು ಸ್ನಾತಕೋತ್ತರ ಪದವಿ ಪಡೆದು, ಐಟಿ ವೃತ್ತಿಯಲ್ಲಿರುವವಳು.

ಮೇಘನಾ ಮತ್ತು ಮಾನಸಿ ಎಂಬಿಬ್ಬರು ಪುಟ್ಟ ಹೆಣ್ಮಕ್ಕಳ ತಾಯಿ. ಬೆಂಗಳೂರಲ್ಲಿ ಹುಟ್ಟಿಬೆಳೆದು ಅಮೆರಿಕದಲ್ಲಿ ಪಿಎಚ್‌ಡಿ ಗಳಿಸಿ ಎಲೆಕ್ಟ್ರಾನಿಕ್ಸ್ ಉದ್ಯೋಗದಲ್ಲಿರುವ ನಿತಿನ್ ಮಂಗಳವೇಢೆ ತನ್ನ ಗಂಡ ಎಂದು ಸವಿವರ ತಿಳಿಸುವುದರ ಮೂಲಕ. 2008 ನವೆಂಬರ್ 1. ವಾಷಿಂಗ್ಟನ್ ಡಿಸಿಯ ನಮ್ಮ ‘ಕಾವೇರಿ’ ಕನ್ನಡಸಂಘದ ರಾಜ್ಯೋತ್ಸವದಲ್ಲಿ ಮಕ್ಕಳಿಗೆ ವೇಷಭೂಷಣ ತೊಡಿಸಿ ನಾಡಗೀತೆಗೆ ಸಮೂಹನೃತ್ಯದ ಕಾರ್ಯಕ್ರಮವೊಂದಿತ್ತು. ನನ್ನ ಮಗ ಸೃಜನ್‌ಗೆ ಶಂಕರಾಚಾರ್ಯರ ಪಾತ್ರ. ಆ ಕಾರ್ಯಕ್ರಮದ ಕೆಲವು ಚಿತ್ರಗಳನ್ನು ನನ್ನ ಪತ್ರಮಿತ್ರರಿಗೆಲ್ಲ ಕಳಿಸಿದ್ದೆ. ಪ್ರತಿಕ್ರಿಯೆ-ಪ್ರಶಂಸೆಗಳ ನಿರೀಕ್ಷೆಯಿಂದಲ್ಲ. ಒಂದು ಮಿಂಚಂಚೆ ಬಂತು. ‘ಶಂಕರಾಚಾರ್ಯರ ತಂದೆಗೆ ನಮಸ್ಕಾರ’ ಎಂದು ಮೊದಲ ವಾಕ್ಯ. ಬರೆದವರು ಶಿಕಾಗೊದಿಂದ ಅನುಪಮಾ ಮಂಗಳವೇಢೆ! ಆ ಒಂದು ವಾಕ್ಯ ಓದಿದ್ದೇ ತಡ ನನಗೊಂದು ವಿಶೇಷ ಅನುಭೂತಿ. ಇವರಲ್ಲೇನೋ ವಿಶೇಷತೆ ಇದೆ, ಅನನ್ಯತೆ ಇದೆ. ಇವರು ಸಾಮಾನ್ಯರಲ್ಲ, ಲವಲವಿಕೆಯ ಕ್ರಿಯಾಶೀಲತೆಯ ಒಂದು ಪ್ರಚ್ಛನ್ನಶಕ್ತಿ ಇವರಲ್ಲಿದೆ ಎಂದು ನನ್ನ ಮನಸ್ಸು ನುಡಿಯಿತು. ಅದುವರೆಗೂ ಮಂಗಳವೇಢೆ ಸರ್‌ನೇಮ್ ಬಗ್ಗೆಯಷ್ಟೇ ಗಮನಿಸಿದ್ದ ನನಗೆ ‘ಅನುಪಮಾ’ ಎಂಬ ಹೆಸರಿನಲ್ಲೇ ವಿಶೇಷತೆ ಅಡಗಿರುವುದು ತಿಳಿಯಿತು. ಆಮೇಲಿಂದ ಇವತ್ತಿನವರೆಗೂ ನಾನವರ ಬಗ್ಗೆೆ ತಿಳಿದುಕೊಂಡಿರುವುದೆಲ್ಲ ಅನುಪಮಾ ಅನ್ವರ್ಥನಾಮವೆಂದು ಮತ್ತೆಮತ್ತೆ ಸಾಬೀತುಪಡಿಸಿದ್ದೇ.

ಅನುಪಮಾ ‘ಈಶ’ ಅನುಯಾಯಿ. ಸದ್ಗುರು ಜಗ್ಗಿ ವಾಸುದೇವರಿಂದ ಪ್ರಭಾವಿತರಾದವರು. ಕೊಯಮತ್ತೂರಿನ ಧ್ಯಾನಲಿಂಗ ಕೇಂದ್ರಕ್ಕೂ, ಅಮೆರಿಕದ ಟೆನ್ನೆಸ್ಸಿಯಲ್ಲಿರುವ ಈಶ ಪ್ರತಿಷ್ಠಾನಕ್ಕೂ ಅನೇಕ ಸಲ ಹೋಗಿ ಬಂದಿದ್ದಾರೆ. 2009ರಲ್ಲಿ ಸದ್ಗುರು ಇದ್ದ ತಂಡದೊಂದಿಗೆ ಹಿಮಪರ್ವತವೇರಿ ಕೈಲಾಸ ಮಾನಸಸರೋವರ ಯಾತ್ರೆ ಮಾಡಿದ್ದಾರೆ. ಜೀವನದಲ್ಲಿ ಹೊಸ ಹುರುಪು ಪಡೆಯುವುದಕ್ಕೆ ಈಶ ಒಡನಾಟ ತನಗೆ ತುಂಬ ನೆರವಾಯ್ತು ಎನ್ನುತ್ತಾರೆ. ಶಿಕಾಗೊದ ‘ವಿದ್ಯಾಾರಣ್ಯ’ ಕನ್ನಡಕೂಟದಲ್ಲೂ ಸಕ್ರಿಯ ಸದಸ್ಯೆಯಾಗಿರುವ ಅನುಪಮಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ‘ಡಿಂಡಿಮ’ ಸುದ್ದಿಪತ್ರ ಮತ್ತು ‘ಸಂಗಮ’ ಸಂಚಿಕೆಗಳ ಸಂಪಾದಕ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ಕನ್ನಡಕೂಟದ ಕಾರ್ಯಕ್ರಮಗಳಲ್ಲಿ ವಿನೂತನ ಪ್ರಯೋಗಗಳನ್ನು ಪರಿಚಯಿಸಿದ್ದಾರೆ. ಪತಿ ಮತ್ತು ಪುತ್ರಿಯರನ್ನೂ, ಸಮಾನಮನಸ್ಕ ಸ್ನೇಹಿತರನ್ನೂ ಉತ್ತೇಜಿಸಿ ಒಟ್ಟುಸೇರಿಸಿ ನಗೆನಾಟಕ, ವೃಂದಗಾನ, ನೃತ್ಯರೂಪಕ ಪ್ರಸ್ತುತಿಗಳನ್ನು ಕೊಟ್ಟಿದ್ದಾರೆ. ವಾರಾಂತ್ಯಗಳಲ್ಲಿ ಮಕ್ಕಳಿಗೆ ಕನ್ನಡ ಓದು-ಬರಹ-ಮಾತು ಕಲಿಸುವ ‘ಸಿರಿಗನ್ನಡ’ ಶಾಲೆ ನಡೆಸಿದ್ದಾರೆ.

ಮಕ್ಕಳಿಂದ ಕೈಬರಹದಲ್ಲಿ ಪತ್ರ ಬರೆಸಿ ಕನ್ನಡಕೂಟದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅನುಪಮಾ ಇದ್ದಾರೆಂದರೆ ಅಲ್ಲೊಂದು ಚೈತನ್ಯದ ಚಿಲುಮೆ ಇದ್ದಂತೆ. ಅನುಪಮಾ ಮಾಡಿದ್ದೆಂದರೆ ಅದು ಬೆಸ್ಟ್ ಆಫ್ ಬೆಸ್ಟೇ ಆಗಿರುತ್ತದೆಂದು ಪ್ರತೀತಿ ಆಗುವಷ್ಟು ಉತ್ಸುಕತೆ. ಕೆಲ ವರ್ಷಗಳ ಹಿಂದೆ ಶಿಕಾಗೊ ಕನ್ನಡಿಗ ಶಿವಮೂರ್ತಿ ಕೀಲಾರ ‘ಸಾಗರದಾಚೆ ಸಪ್ತಸ್ವರ’ ಎಂಬ ಟಿವಿ ರಿಯಾಲಿಟಿ ಶೋ ನಿರ್ಮಿಸಿದ್ದರು. ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಪ್ರೊ.ಎಂ.ಕೃಷ್ಣೇಗೌಡ, ಜಯಂತ ಕಾಯ್ಕಿಣಿ, ರತ್ನಮಾಲಾ ಪ್ರಕಾಶ್ ಬಂದಿದ್ದರು. ಮುಖ್ಯ ಆಂಕರ್ ಆಗಿ ಕೀಲಾರರು ಆಯ್ದುಕೊಂಡಿದ್ದು ಅನುಪಮಾರನ್ನೇ.

ಶಿಕಾಗೊದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಮಿಂಚಿದ್ದ ಅನುಪಮಾ, ಆಮೇಲೆ ನ್ಯೂಜೆರ್ಸಿ, ಅಟ್ಲಾಂಟಾ, ಮತ್ತು ಸ್ಯಾನ್‌ಹೋಸೆಯಲ್ಲಿ ನಡೆದ ಅಕ್ಕ ಸಮ್ಮೇಳನಗಳಲ್ಲೂ, ಲಾಸ್ ಏಂಜಲೀಸ್ ಮತ್ತು ಬೆಂಗಳೂರಿನಲ್ಲಿ ನಡೆದ ನಾವಿಕ ಸಮ್ಮೇಳನಗಳಲ್ಲೂ ಆ ಜವಾಬ್ದಾರಿಯನ್ನು ಆಕರ್ಷಕವಾಗಿ ನಿರ್ವಹಿಸಿದರು. ಲಾಸ್ ಏಂಜಲೀಸ್‌ನ ಸಮ್ಮೇಳನದಲ್ಲಿ ರಂಗಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಿ ಕಿತ್ತೂರು ಚೆನ್ನಮ್ಮ ಮತ್ತು ಶಕುಂತಲಾ ಪಾತ್ರಗಳ ಅಭಿನಯಕ್ಕೆ ‘ರಂಗನಾವಿಕ’ ಪ್ರಶಸ್ತಿ ಗೆದ್ದರು. ಅಸ್ಖಲಿತ ಸ್ಪಷ್ಟ ಮಾತು, ಸಮಯಸ್ಫೂರ್ತಿ, ಕೈಗೆತ್ತಿಕೊಂಡ ಕೆಲಸವನ್ನು ಒಪ್ಪವಾಗಿ ಮಾಡಿಮುಗಿಸುವ ಶ್ರದ್ಧೆ ಮತ್ತು ಛಲ ಅನುಪಮಾಗೆ ಎಲ್ಲಿಲ್ಲದ ಬಲ. ಒಂದು ನಿದರ್ಶನವನ್ನು ಇಲ್ಲಿ ಉಲ್ಲೇಖಿಸಲೇಬೇಕು. ನ್ಯೂಜೆರ್ಸಿ ಅಕ್ಕ ಸಮ್ಮೇಳನದ ಮೊದಲ ದಿನ ಅನುಪಮಾ ಅಲ್ಲೆಲ್ಲೋ ಜನಜಂಗುಳಿಯಲ್ಲಿ ಮುಗ್ಗರಿಸಿ ಬಿದ್ದು ಪಾದ ತಿರುಚಿ ಸ್ನಾಯುಸೆಳೆತ ಮಾಡಿಕೊಂಡರು.

ಆಂಬ್ಯುಲೆನ್ಸ್ ಕರೆಸಿ ಪ್ರಥಮಚಿಕಿತ್ಸೆ ನೀಡಿ ಗಾಲಿಕುರ್ಚಿಯಲ್ಲಿ ಹೊಟೇಲ್ ರೂಮಿಗೆ ಒಯ್ಯಬೇಕಾಯ್ತು. ಬೇರೆ ಯಾರೇ ಆಗಿದ್ದರೂ ಧೃತಿಗೆಟ್ಟು ನೆಕ್‌ಸ್ಟ್‌ ಫ್ಲೈಟ್ ಹತ್ತಿ ಮನೆಗೆ ವಾಪಸಾಗುತ್ತಿದ್ದರೊ ಏನೊ. ಈಕೆ ಹೇಳಿ ಕೇಳಿ ಅನುಪಮಾ. ಎಣೆಯಿಲ್ಲದ ಛಲಗಾರ್ತಿ. ಮಾರನೆದಿನ ಅಷ್ಟಿಷ್ಟು ಕುಂಟುತ್ತಲೇ ಸಮ್ಮೇಳನದಲ್ಲೆಲ್ಲ ಓಡಾಡಿದರು, ಅಂದವಾಗಿ ನಿರೂಪಣೆಯನ್ನೂ ಮಾಡಿದರು. ಕಾಲುನೋವು ಆಮೇಲೂ ಒಂದೆರಡು ತಿಂಗಳು ಇತ್ತಂತೆ, ಈಮಧ್ಯೆ ಒಂದು ದಿನ ಫೇಸ್‌ಬುಕ್‌ನಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದರು: ‘ನಾನು ಶಿಕಾಗೊದ ಹೊರವಲಯದಲ್ಲಿ 14,000 ಅಡಿ ಎತ್ತರದಿಂದ ಸ್ಕೈ-ಡೈವಿಂಗ್ ಮಾಡಿದೆ’ ಎಂಬ ಅಡಿಟಿಪ್ಪಣಿ! ಎಲಾ ಇವಳ ಎಂದು ಯಾರಾದರೂ ಮೂಗಿನಮೇಲೆ ಬೆರಳಿಡಬೇಕಾದ್ದೇ. ಇಂಥ ವಿಸ್ಮಯದ ಅನುಪಮಾ ಒಬ್ಬ ಆದರ್ಶ ಗೃಹಿಣಿ ಕೂಡ. ಅವರ ಆದರಾತಿಥ್ಯ, ರುಚಿಕರ ಅಡುಗೆ, ನಿಷ್ಕಲ್ಮಷ ಪ್ರೀತಿಯ ಮಾತುಗಳು ಸ್ನೇಹಿತರಿಗೆ, ಬಂಧುಬಳಗದವರಿಗೆಲ್ಲ ಚಿರಪರಿಚಿತ. ಸ್ವಂತ ಅಕ್ಕನಿರಲಿ, ಗಂಡನ ತಂಗಿಯಿರಲಿ, ತಮ್ಮನ ಹೆಂಡತಿಯಿರಲಿ ಗುಲಗಂಜಿಯಷ್ಟೂ ಹೆಚ್ಚುಕಡಿಮೆ ಇಲ್ಲದ ಸಮಭಾವದ ಅಕ್ಕರೆ-ಆದರ. ಮಾವನೆಂದರೆ ಅಪ್ಪ-ಅಮ್ಮನಷ್ಟೇ ಪ್ರೀತಿ, ಸಲುಗೆ. ನೃತ್ಯಸಮಾರಂಭಗಳಲ್ಲಿ ಅವರ ಕುಟುಂಬಸ್ಥರೆಲ್ಲ ಸೇರಿದ್ದಾಗ ನಾನು ಕಣ್ಣಾರೆ ಕಂಡ ಸತ್ಯವಿದು.

ಐದಾರು ವರ್ಷಗಳ ಹಿಂದೆ ಒಮ್ಮೆ ನಾನು ಪತ್ನಿ ಸಹನಾಳೊಂದಿಗೆ ಬೆಂಗಳೂರಿನಿಂದ ಕಾರ್ಕಳಕ್ಕೆ ಡ್ರೈವ್ ಮಾಡಿಕೊಂಡು ಹೋದಾಗ, ಶಿಕಾಗೊದಲ್ಲಿದ್ದೇ ಆದೇಶ ನೀಡಿ ಚನ್ನರಾಯಪಟ್ಟಣದ ತನ್ನ ತವರುಮನೆಯಲ್ಲಿ ಸ್ವಲ್ಪಹೊತ್ತು ವಿರಮಿಸಿಯೇ ಪ್ರಯಾಣ ಮುಂದುವರಿಸಬೇಕೆಂದು ಆಗ್ರಹಿಸಿ ಅದು ಕಾರ್ಯರೂಪಕ್ಕೆ ಬರುವಂತೆ ಮಾಡಿದ್ದರು ಅನುಪಮಾ!
ಅತ್ಯುತ್ಸಾಹದ ಬುಗ್ಗೆಯಾದ ಅನುಪಮಾ ಭರತನಾಟ್ಯ ಕಲಿಕೆಯನ್ನು ಕೈಗೆತ್ತಿಕೊಂಡದ್ದು, ಅದರಲ್ಲಿ ಯಶಸ್ಸು ಸಾಧಿಸಿದ್ದೂ ಒಂದು ರೋಚಕ ಕಥೆ. ಒಮ್ಮೆ ವಿದ್ಯಾರಣ್ಯ ಕನ್ನಡಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನುಪಮಾ ಮತ್ತು ನಿತಿನ್ ಸೇರಿ ಒಂದು ಪ್ರೋಗ್ರಾಂ ಕೊಟ್ಟಿದ್ದರಂತೆ. ‘ಆರಾಧಿಸುವೆ ಮದನಾರಿ’ ನಿತಿನ್ ಹಾಡು, ಅನುಪಮಾ ನೃತ್ಯಾಭಿನಯ. ಪ್ರೇಕ್ಷಕರಿಂದ ಶಿಳ್ಳೆ-ಚಪ್ಪಾಳೆ ಸುರಿಮಳೆ. ಯಾರೋ ಒಬ್ಬರು ‘ಎಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತೀರಿ!

ಶಾಸ್ತ್ರೀಯ ನೃತ್ಯ ಕಲಿತಿದ್ದೀರಾ? ಯಾಕೆ ಕಲಿಯಬಾರದು? ಎಂದರಂತೆ. ಅದಾಗಲೇ ಸದ್ಗುರುವಿನಿಂದ ಪ್ರೇರಿತರಾಗಿದ್ದ ಅನುಪಮಾಗೆ ಯಾವುದಾದರೂ ದೈವಿಕ ಕಲೆಯನ್ನು ಕರಗತ ಮಾಡಿಕೊಳ್ಳುವ ಹೊಸ ಉತ್ಸಾಹ ಬೇರೆ. ಹೆಣ್ಮಕ್ಕಳಿಬ್ಬರನ್ನೂ ಶಿಕಾಗೊದಲ್ಲಿ ಮನೆ ಹತ್ತಿರದಲ್ಲೇ ಭರತನಾಟ್ಯ ಕಲಿಸುತ್ತಿದ್ದ ಕ್ಷಮಾ ಷಾ ಎಂಬುವವರಲ್ಲಿ ನೃತ್ಯಕಲಿಕೆಗೆ ಸೇರಿಸಿದ್ದರು. ಮಕ್ಕಳನ್ನು ಡ್ಯಾನ್ಸ್ ಕ್ಲಾಸಿಗೆ ಕರೆದುಕೊಂಡು ಹೋಗಿಬರುತ್ತಿದ್ದಾಗ, ಕ್ಷಮಾ ಷಾ ಅವರಲ್ಲೇ ತಾನೂ ಏಕೆ ಭರತನಾಟ್ಯ ಕಲಿಯಬಾರದು ಎಂಬ ಆಲೋಚನೆ ಅನುಪಮಾ ತಲೆಯಲ್ಲಿ. ನಿತಿನ್‌ರಿಂದ ನಿಶ್ಶರ್ತ ಬೆಂಬಲ. 35ರ ವಯಸ್ಸಾದರೇನಂತೆ ಕಲಿಕೆ ಶುರುವಾಗೇ ಬಿಟ್ಟಿತು. ಶ್ರದ್ಧೆಗೆ ಕೊರತೆಯಿಲ್ಲ, ಆಲಸ್ಯ ಇಲ್ಲವೇಇಲ್ಲ. ಮೈಬಗ್ಗಿಸಿ ನೃತ್ಯ ಕಲಿತರು. ಸತತ ಐದು ವರ್ಷ ಅಭ್ಯಾಸ ಮಾಡಿದರು. 2015ರ ಜುಲೈಯಲ್ಲಿ ಶಿಕಾಗೊದಲ್ಲೇ ಒಂದು ಸಭಾಂಗಣದಲ್ಲಿ ಸುಂದರ ಸಮಾರಂಭ ಏರ್ಪಡಿಸಿ ‘ರಂಗಪ್ರವೇಶ’ವನ್ನೂ ಮಾಡೇಬಿಟ್ಟರು. ಭಾರತದಿಂದ ಬಂದಿದ್ದ ಅರಂಗೇಟ್ರಂ ಆರ್ಕೆಸ್ಟ್ರಾ ತಂಡದವರಂತೂ ಇವರ ಉತ್ಸಾಹ, ಶಕ್ತಿ, ಶ್ರದ್ಧೆ, ಛಲಗಳನ್ನು ಕಂಡು ದಂಗಾದರು. ಸ್ನೇಹಿತರೆಲ್ಲ ಭಾವುಕರಾಗಿ ಆನಂದಬಾಷ್ಪ ಸುರಿಸಿದರು. ‘ನೀನು ನಿಜವಾಗಿಯೂ ನಮಗೆಲ್ಲ ಸ್ಫೂರ್ತಿ’ ಎಂದು ಕೊಂಡಾಡಿದರು.

ಆಹ್ವಾನಿತ ಮಿತ್ರವರ್ಗದಲ್ಲಿ ನಾನೂ ಇದ್ದೆ. ಅನುಪಮ ಅಪರಿಮಿತ ಉತ್ಸಾಹವನ್ನು ಮೆಚ್ಚಿದ್ದೆ.  ಭಾರತದಲ್ಲಿರುವ ಬಂಧುಮಿತ್ರರಿಗೆ ಬಾಲ್ಯಸ್ನೇಹಿತರಿಗೆ ರಂಗಪ್ರವೇಶದಲ್ಲಿ ಭಾಗವಹಿಸಲಿಕ್ಕಾಗಲಿಲ್ಲ, ತನ್ನ ಬಾಳಿನಲ್ಲಿ ಅವರೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ ಪ್ರತಿಯಾಗಿ ಅವರ ಸಮ್ಮುಖದಲ್ಲಿ ಒಂದು ನೃತ್ಯ ಕಾರ್ಯಕ್ರಮ ಆಯೋಜಿಸಬೇಕೆಂಬ ತುಡಿತ ಅನುಪಮಾಗೆ. ಕ್ರಿಸ್ಮಸ್ ರಜೆಯಲ್ಲಿ ಸಕುಟುಂಬವಾಗಿ ಬೆಂಗಳೂರಿಗೆ ಬಂದವರು ‘ನೃತ್ಯನಮನ’ವೆಂಬ ಪ್ರದರ್ಶನ ಏರ್ಪಡಿಸಿದರು. ಗುರು ಕ್ಷಮಾ ಷಾ ಸಹ ರಜೆಯಲ್ಲಿ ಭಾರತಕ್ಕೆ ಬಂದಿದ್ದವರು ಅದಕ್ಕೆ ಸಾಕ್ಷಿಯಾದರು. ಗಣೇಶಸ್ತುತಿ, ಮಹಿಷಾಸುರಮರ್ದಿನಿ ಶಕ್ತಿಭರಿತ ಪ್ರಸ್ತುತಿಗಳ ನಂತರ ‘ಬಾರೈ ರಘುವಂಶಚಂದ್ರನೇ…’ ಪದವರ್ಣದಲ್ಲಿ ಸವಿಸ್ತಾರ ನೃತ್ಯಾಭಿನಯ. ಆಮೇಲೆ ಅರ್ಧನಾರೀಶ್ವರ ಅಮೋಘ ರೂಪ. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ…’ ಪ್ರಸ್ತುತಿಯಲ್ಲಿ ಅನುಪಮಾ ಆಂಗಿಕ ವಾಚಿಕ ಅಭಿನಯ ಎಲ್ಲದರಲ್ಲೂ ಉತ್ತುಂಗಕ್ಕೇರಿದರು. ತದನಂತರ ‘ಸ್ವಾಗತಂ ಕೃಷ್ಣ…’- ನಿತಿನ್ ಗಾಯನಕ್ಕೆ ಅನುಪಮಾರೊಂದಿಗೆ ಮಕ್ಕಳು ಮೇಘನಾ-ಮಾನಸಿ ಜತೆಗೂಡಿ ಅದೊಂದು ಮಂಗಳವೇಢೆ ಫ್ಯಾಮಿಲಿ ಪ್ರೆಸೆಂಟೇಷನ್ ಆಯ್ತು.

ಎರಡು ತಾಸಿನ ಪ್ರದರ್ಶನದಲ್ಲಿ ಆರಂಭದಿಂದ ಕೊನೆಯ ತಿಲ್ಲಾನ ಮತ್ತು ಮಂಗಲಂವರೆಗೂ ನಿರರ್ಗಳ ಪುಟಿದೆದ್ದ ಅಂತಶ್ಶಕ್ತಿ. ಖಿಂಚ ಸಭಾಂಗಣದಲ್ಲಿ ಅನುಪಮ ಪ್ರತಿಭೆಯ ಸಿಂಚನ. ಪ್ರೇಕ್ಷಕರೆಲ್ಲ ಭಾವಪರವಶ. ಮುಖ್ಯಅತಿಥಿ ನೃತ್ಯವಿದುಷಿ ವೈಜಯಂತಿ ಕಾಶಿ ಮನದುಂಬಿ ಮೆಚ್ಚುಗೆಯ ಮಾತಾಡಿದರು. ಕೃಷ್ಣೇಗೌಡರು ಮತ್ತು ವಿಶ್ವೇಶ್ವರ ಭಟ್ಟರು ಇದು ನಂಬಲಿಕ್ಕೇ ಸಾಧ್ಯವಿಲ್ಲದಷ್ಟು ಅದ್ಭುತ ಅಚ್ಚರಿಯೆಂದರು. ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಿಸುವ ಛಲ ಮನುಷ್ಯನಿಗೆ ಬೇಕು ಎಂಬ ಮಾತನ್ನು ಕೃತಿಯಲ್ಲಿ ತೋರಿಸಿಕೊಟ್ಟರು ಅನುಪಮಾ.

Leave a Reply

Your email address will not be published. Required fields are marked *

twelve + 20 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top