ಆಕೆ ತಾನು ಸುರಕ್ಷಿತ ಅಂದುಕೊಳ್ಳುವ ಕಾಲ ಯಾವಾಗ?

Posted In : ಸಂಗಮ, ಸಂಪುಟ

ಹಾಲು ಕುಡಿಯದ ಬೆಕ್ಕನ್ನು ಕೊಟ್ಟಿದ್ದೀರಿ; ಇಲ್ಲದಿದ್ದರೆ ಎಲ್ಲರಿಗಿಂತ ಚೆನ್ನಾಗಿ ಬೆಳೆಸಿ ತೋರಿಸುತ್ತಿದ್ದೆ ಅನ್ನುತ್ತಾನೆ ಬೀರಬಲ್ಲ. ಅಚ್ಚರಿಗೊಂಡ ಅಕ್ಬರ್ ಹಾಲು ತರಿಸಿ ಬೆಕ್ಕಿನ ಮುಂದೆ ಇಟ್ಟಾಗ ಬೆಕ್ಕು ಹಾಲು ಕಂಡ ತಕ್ಷಣ ಓಡಿಹೋಗುತ್ತದೆ. ಯಾಕೆಂದರೆ ಈ ಮೊದಲು ಸುಡುವ ಹಾಲನ್ನು ಬೆಕ್ಕಿಗೆ ಕುಡಿಸಿ ಹಾಲು ಎಂದರೆ ಹೆದುರುವಂತೆ ಮಾಡಿದ್ದ ಬೀರಬಲ್ಲ. ಈ ಕಥೆಯನ್ನು ಇಲ್ಲಿ ಯಾಕೆ ನಿಮಗೆ ಹೇಳಬೇಕಾಯ್ತು ಅಂದರೆ ಹಾಲು ಕಂಡ ತಕ್ಷಣ ಓಡಿಹೋಗುವ ಬೆಕ್ಕಿನಂತೆ ಹೆಣ್ಣನ್ನು ಅನೈತಿಕವಾಗಿ ಮುಟ್ಟಲು ಭಯಪಟ್ಟು ಅವಳನ್ನು ಅವಳ ಪಾಡಿಗೆ ಬಿಡುವಂತಾಗಬೇಕಾದರೆ ಬೀರಬಲ್ಲ ಪ್ರಯೋಗಿಸಿದ ಸುಡುವ ಹಾಲಿನಂಥ ಮರ್ಮದ ಅವಶ್ಯಕತೆ ಇದೆಯೆಂದು ಅನಿಸುತ್ತಿಲ್ಲವೆ?

ಸಾಮಾನ್ಯವಾಗಿ ತಿಳಿವಳಿಕೆ ನೀಡಲು ಎರಡು ಮಾರ್ಗಗಳಿರುತ್ತವೆ. ಒಂದು ಪ್ರೀತಿಯಿಂದ ಪಕ್ಕದಲ್ಲಿ ಕೂರಿಸಿಕೊಂಡು ಹೇಳುವುದು. ಇನ್ನೊಂದು ದಂಡನೆ! ಮನುಷ್ಯನ ವಿಕೃತ ಗುಣಗಳಿಗೆ ಬರೀ ಮಾತು ಸರಿ ಹೋಗುವುದಿಲ್ಲ. ಅದಕ್ಕೆ ಏನಿದ್ದರೂ ಎರಡನೆಯದ್ದೇ ಸರಿ. ಈಗ ನಮ್ಮ ಈ ತರ್ಕವನ್ನು ನಿಲ್ಲಿಸಿ ವಿಷಯಕ್ಕೆ ಬರೋಣ.  ಮೊನ್ನೆ ಮೊನ್ನೆ ಹೊಸ ವರ್ಷದ ದಿನದಂದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಲೈಂಗಿಕ ಕಿರುಕುಳ ಇಡೀ ನಾಡನ್ನೇ ಬೆಚ್ಚಿಬೀಳಿಸಿದ್ದು ಖೇದಕರ.

ಬೆಂಗಳೂರು ಸೇಫಾ? ಬೆಂಗಳೂರು ಮತ್ತೊಂದು ದೆಹಲಿಯಾ? ಇಂಥ ಹಲವಾರು ಪ್ರಶ್ನೆಗಳು ಮೂಡಿದವು. ಇವಕ್ಕೆಲ್ಲ ಬೇರೆ ಬೇರೆ ತರ್ಕದ ಕಾರಣಗಳನ್ನು ಹುಡುಕಲು ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ನಮ್ಮ ದೇಶದ ವ್ಯವಸ್ಥೆಯ, ಕಾನೂನಿನ, ಸರಕಾರದ ದೌರ್ಬಲ್ಯವಲ್ಲದೇ ಮತ್ತೇನೂ ಅಲ್ಲ. ಸಿಂಗಾಪುರ್‌ನಲ್ಲಿ ಹುಡುಗರು ಹುಡುಗಿಯರನ್ನು ಕೇವಲ ರೇಗಿಸಲು ಕೂಡ ಬೆಂಕಿ ತುಳಿದಂತೆ ಆಡುತ್ತಾರೆ. ಯಾಕೆಂದರೆ ಅಲ್ಲಿಯ ಕಾನೂನುಗಳು ಯಾವ ಪರಿ ಇದ್ದಾವೆ ಅಂದರೆ ಆತ ಮತ್ತೊಮ್ಮೆ ಯಾವತ್ತೂ ಯಾವ ಹುಡುಗಿಯ ತಂಟೆಗೂ ಹೋಗಲಾರ!

ಇಂಥ ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತವೆ. ಮೂರೇ ದಿನಕ್ಕೆ ಅದರ ಬೆಳವಣಿಗೆ ಏನಾಯ್ತು ಎಂಬುದು ಸಮಾಜಕ್ಕೆ ಗೊತ್ತೇ ಆಗುವುದಿಲ್ಲ. ಆತ ಸಲೀಸಾಗಿ ಜಾಮೀನು ತಗೆದುಕೊಂಡು ಆಚೆ ಬಂದು ಆರಾಮಾಗಿಯೇ ಓಡಾಡಿಕೊಂಡಿರುತ್ತಾನೆ. ಕೆಲವೊಮ್ಮೆ ರಾಜಕೀಯವೂ ಇದರಲ್ಲಿ ಕೆಲಸ ಮಾಡಿರುತ್ತದೆ. ಇಂಥ ವಿಷಯಗಳಲ್ಲಿ ರಾಜಕೀಯ ಪಕ್ಷಗಳೂ ಕೂಡ ಪರಸ್ಪರ ಮಾತಿನ ದಾಳಿಯಲ್ಲಿ ಕಳೆದುಹೋಗುತ್ತವೆ. ಆದರೆ ಯಾರೂ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧರಿರುವುದಿಲ್ಲ.

ಜಾಗತಿಕ ಮಟ್ಟದಲ್ಲಿ ದೇಶವನ್ನು ತಲೆತಗ್ಗಿಸುವಂತೆ ಮಾಡಿದ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಕೊನೆಗೆ ಏನಾಯ್ತು? ತೀರ್ಪಿಗೆ ಎಷ್ಟು ದಿನಗಳು ಹಿಡಿಯಿತು? ಅಂಥ ಭಯಾನಕ ಘಟನೆಯಾದ ಮೇಲಾದರೂ ಒಂದು ಪ್ರಬಲವಾದ ಕಾನೂನು ಮತ್ತು ಶಿಕ್ಷೆಯನ್ನು ಜಾರಿಗೊಳಿಸಿ ಹೆಣ್ಣನ್ನು ಮುಟ್ಟಲು ಹೆದರುವಂತೆ ಮಾಡಿದ್ದಾರಾ? ಇಲ್ಲ! ಕೆಲವರು ಈ ವಿಷಯದಲ್ಲಿ ಮಾನವ ಹಕ್ಕುಗಳ ವಿಷಯವನ್ನು ಅಡ್ಡ ತರುತ್ತಾರೆ. ಯಾವುದು ಮಾನವ ಹಕ್ಕು? ಆರೋಪಿಯಾದವನಿಗೆ ಮಾತ್ರ ಮಾನವ ಹಕ್ಕಿನ ತತ್ತ್ವ ಅನ್ವಯಿಸುತ್ತದೆಯಾ? ಸಂತ್ರಸ್ತೆಗೆ ಅದು ಅನ್ವಯವಾಗದೆ? ಕಾರಣವಿಷ್ಟೇ, ನಮ್ಮ ವ್ಯವಸ್ಥೆ ಹೇಗೆ, ಯಾವುದರ ಮೇಲೆ ನಡೆಯುತ್ತದೆ ಎಂದು ಅರ್ಥ ಮಾಡಿಕೊಂಡಿರುವ ಜನರು ಇಂಥವುಗಳನ್ನು ಅರಾಮಾಗಿ ಜಯಿಸಿಕೊಂಡು ಬರಬಹುದು. ಏನೂ ಆಗಲಾರದು ಎಂಬ ಭಂಡ ಧೈರ್ಯದಿಂದಲೇ ಅಂಥ ಪ್ರಯತ್ನಕ್ಕೆ ಕೈ ಹಾಕುತ್ತಾರೆ.

ಘಟನೆಯಾದ ನಾಲ್ಕು ದಿನಕ್ಕೆ ವಿಚಾರಣೆ ಮುಗಿಸಿ ಗಲ್ಲಿಗೇರಿಸಿದರೆ ಸಮಾಜಕ್ಕೊಂದು ಭಯ ಬರುತ್ತದೆ. ಇಂಥ ಹತ್ತಾರು ಘಟನೆಗಳಲ್ಲಿ ಕಠೋರ ಶಿಕ್ಷೆ ನೀಡಿದರೆ ದೇಶವೇ ನೈತಿಕ ಭಯಕ್ಕೆ ಒಡ್ಡಿಕೊಳ್ಳುತ್ತದೆ. ಆದರೆ ನಮ್ಮ ಕಾನೂನು ವ್ಯವಸ್ಥೆ, ನ್ಯಾಯಾಲಯ ಇದಕ್ಕೆ ಉಲ್ಟಾ. ಅಂದ್ರೆ ಅತ್ಯಂತ ನಿಧಾನ! ಈ ಸಮಯದಲ್ಲಿ ಒಂದು ಜೋಕ್ ನೆನಪಾಗುತ್ತದೆ. 70ರ ವಯಸ್ಸಿನ ಅತ್ಯಾಚಾರದ ಆರೋಪಿಗೆ ಶಿಕ್ಷೆ ವಿಧಿಸಿ ಕರೆದುಕೊಂಡು ಹೋಗುವಾಗ ಯಾರೋ ಒಬ್ಬರು ಪಕ್ಕದಲ್ಲಿರುವವನಿಗೆ ಕೇಳಿದ್ನಂತೆ ‘70ನೇ ವಯಸ್ಸಿನಲ್ಲಿ ಅತ್ಯಾಚಾರನಾ? ಇವೆಲ್ಲ ಬೇಕಿತ್ತಾ?’ ಅಂತ. ಅದಕ್ಕೆ ಆರೋಪಿ ಹೇಳಿದನಂತೆ ‘21ನೇ ವಯಸ್ಸಿನಲ್ಲಿ ಮಾಡಿದ ಅತ್ಯಾಚಾರ ಇದು. ಇಂದು ತೀರ್ಪು ಬಂದು ಅಪರಾಧಿ ಎಂದಾಗಿದೆ ಅಷ್ಟೆ’. ಈ ಜೋಕಿಗೂ ನಮ್ಮ ಕಾನೂನು ವ್ಯವಸ್ಥೆಗೂ ಯಾವುದೇ ವ್ಯತ್ಯಾಸವಿಲ್ಲ! ಅಷ್ಟೇ ಅಲ್ಲದೆ ನಮ್ಮ ರಾಜಕೀಯ ಪಕ್ಷಗಳು, ಸರಕಾರಗಳು ಈ ನಿಟ್ಟಿನಲ್ಲಿ ಪ್ರಬಲವಾದ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಭಯಪಡುತ್ತವೆ. ಇನ್ನು ಅನೇಕ ಸಲ ರಾಜಕೀಯ ವ್ಯಕ್ತಿಗಳ ಕೃಪಾಪೋಷಣೆಯಿಂದ ಇಂಥ ಅರೋಪಿಗಳು ತಪ್ಪಿಸಿಕೊಂಡೂ ಹೋಗುತ್ತಾರೆ. ಹೀಗಾದಾಗ ಭಯವಾದರೂ ಬರಲು ಹೇಗೆ ಸಾಧ್ಯ!?

ಇನ್ನು ಕೆಲವರ ವಾದವೇನೆಂದರೆ, ಅವಳು ಯಾಕೆ ಅಷ್ಟು ಗಂಟೆಗೆ ಹೋಗಬೇಕು? ಆ ಬಟ್ಟೆ ಯಾಕೆ ಬೇಕು? ಅದನ್ನು ಯಾಕೆ ಹಾಗೆ ಮಾಡಬೇಕು? ಅದು ವ್ಯಕ್ತಿಯೊಬ್ಬನ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸಲು ನೀವು ಯಾರು? ವ್ಯವಸ್ಥೆ ಸರಿ ಮಾಡುವ ಮೊದಲು ಮಹಿಳೆಯನ್ನು ದೂರಿದರೆ? ಇನ್ನೂ ಕೆಲವರು ಕೆಲವರು ಆಧುನಿಕತೆಯ ಕಾರಣವೊಡ್ಡುತ್ತಾರೆ. ಇರಬಹುದು! ಆದರೆ ಅದಕ್ಕೂ ಒಂದು ಪರಿಹಾರ ಅಂತ ಇರುತ್ತಲ್ಲವೇ? ಅದನ್ನು ಕಂಡುಕೊಳ್ಳುವಲ್ಲಿ ಯಾಕೆ ಪ್ರಯತ್ನಿಸಬಾರದು? ಎಲ್ಲವನ್ನೂ ಕಾನೂನಿನ ಮೂಲಕವೇ ಸರಿಪಡಿಸಲಾಗದು ಎಂಬುದು ಕೆಲವರ ವಾದ. ಇರಬಹುದು, ಸತ್ಯವೂ ಕೂಡ. ಕಾನೂನು ಮಾಡುವ ಗರಿಷ್ಠ ಕೆಲಸವನ್ನು ಅದೇ ಮಾಡಬೇಕಲ್ಲವೇ? ಅದನ್ನು ತ್ವರಿತವಾಗಿ ಮಾಡಬೇಕಲ್ಲವೇ?

ಜನರ ಮನೋಭಾವ ಕೂಡ ಬದಲಾಗಬೇಕಿದೆ. ಅವೆಷ್ಟು ಹೆಣ್ಣು ಮಕ್ಕಳು ಅನ್ಯಾಯವಾದಾಗ ದೂರು ನೀಡಲು ಹೆದರಿ ಕಷ್ಟ, ನೋವು ಅನುಭವಿಸುತ್ತಲೇ ಕುಳಿತಿದ್ದಾರೆ ಎಂಬ ಸಣ್ಣ ಅಂದಾಜಾದರೂ ಇದೆಯೇ? ಆ ಹೆಣ್ಣು ಮಕ್ಕಳಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವಾ? ಅದನ್ನು ಅವರೇ ಹೇಳಬೇಕಾಗಿದೆ. ಅವರಿಗೆ ನ್ಯಾಯ ಸಿಗುತ್ತದೆಯೇ? ಸಿಗುವುದಾದರೆ ಎಷ್ಟು ದಿನಕ್ಕೆ ಎಂಬ ಸ್ಪಷ್ಟತೆ ಇಲ್ಲ. ಅಂದಮೇಲೆ ಅವಳು ದೂರು ನೀಡಲು ಹೇಗೆ ಮುಂದೆ ಬಂದಾಳು? ಅವಳಿಗೆ ಯಾವ ಭರವಸೆಗಳು ಉಳಿಯುತ್ತಿಲ್ಲ. ಒಂದು ಹೆಣ್ಣನ್ನು ಇಷ್ಟೊಂದು ಹೀನವಾಗಿ ನಡೆಸಿಕೊಳ್ಳುವ ಈ ವ್ಯವಸ್ಥೆಗೆ ಏನು ಹೇಳುವುದು? ಕೊನೆಯದಾಗಿ ಒಂದು ಮಾತು ನೆನಪಿಡಿ. ವ್ಯವಸ್ಥೆ, ಕಾನೂನಿನಲ್ಲಿ ತಿದ್ದುಪಡಿ ತಂದರೆ, ಕೇವಲ ಹೆಣ್ಣು ಅಥವಾ ಬೆಂಗಳೂರಷ್ಟೇ ಅಲ್ಲ ಸಮಾಜವೇ ಸೇಫ್ ಆಗಿರುತ್ತದೆ.

-ಸದಾಶಿವ್ ಸೊರಟೂರು
ಹವ್ಯಾಸಿ ಬರಹಗಾರರು

Leave a Reply

Your email address will not be published. Required fields are marked *

5 − five =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top