ದೇಶ
ಆರ್ಥಿಕ ಸ್ವತಂತ್ರ ಮಹಿಳೆಯರಿಂದ ಸಾಮಾಜಿಕ ಪಿಡುಗು ನಿವಾರಣೆ: ಪ್ರಧಾನಿ
ದೆಹಲಿ: ಆರ್ಥಿಕವಾಗಿ ಸಬಲೀಕರಣಗೊಂಡ ಮಹಿಳೆಯರು ಸಾಮಾಜಿಕ ಪಿಡುಗಿನ ವಿರುದ್ಧ ಸೆಟೆದು ನಿಲ್ಲಬಲ್ಲರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ ಇರುವ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಮಹಿಳಾ ಸಬಲೀಕರಣಕ್ಕೆ ಆರ್ಥಿಕ ಸ್ವಾತಂತ್ರ್ಯ ಅತ್ಯಗತ್ಯವಾಗಿದೆ. ಮಹಿಳೆಯರಲ್ಲಿ ಉದ್ಯಮಶೀಲತೆ ಸಹಜವಾಗಿಯೇ ಇದೆ. ಅವರಿಗೇನೂ ಹೇಳಿಕೊಡಬೇಕಾಗಿಲ್ಲ, ಸೂಕ್ತ ಅವಕಾಶಗಳನ್ನು ನೀಡಿದರೆ ಸಾಕು” ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಮೊಬೈಲ್ ತಂತ್ರಾಂಶದ ಮೂಲಕ ಮಾತನಾಡಿದ ಪ್ರಧಾನಿ, “ದೇಶದ ಮಹಿಳೆಯರಲ್ಲಿ ಭಾರೀ ಸಾಮರ್ಥ್ಯವಿದೆ, ಅವರಿಗೆ ಸೂಕ್ತ ಅವಕಾಶ ನೀಡಬೇಕಷ್ಟೇ. ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳೆಯರು ಇನ್ನಷ್ಟು ದಿಟ್ಟತನ ಬೆಳೆಸಿಕೊಂಡು ಸಾಮಾಜಿಕ ಪಿಡುಗುಗಳಿಗೆ ಅಂತ್ಯಹಾಡಬಹುದು” ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಹಿಳಾ ಸ್ವಸಹಾಯ ಗುಂಪುಗಳ ಕೊಡುಗೆಯನ್ನು ಪ್ರಧಾನಿ ಇದೇ ವೇಳೆ ಶ್ಲಾಘಿಸಿದ್ದಾರೆ. “2014ರಿಂದ ಆಚೆಗೆ 20 ಲಕ್ಷಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಂಘಟನೆಗಳನ್ನು ಪ್ರಾಶಸ್ತ್ಯ ನೀಡಿ ಕೇಂದ್ರ ಸರಕಾರ ಸೃಷ್ಟಿ ಮಾಡಿದೆ. ಈ ಮೂಲಕ 2.25 ಕೋಟಿಗೂ ಹೆಚ್ಚು ಕುಟುಂಬಗಳನ್ನು ಆರ್ಥಿಕ ಒಳಗೊಳ್ಳುವಿಕೆಗೆ ತರಲಾಗಿದೆ. ಇಲ್ಲಿಯವರೆಗೂ 45 ಲಕ್ಷ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳನ್ನು ಸೃಷ್ಟಿಸಿದ್ದು 5 ಕೋಟಿಗೂ ಮೀರಿದ ಕಾರ್ಯಕರ್ತೆಯರು ಇದ್ದಾರೆ” ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ ಕೃಷಿ ಹಾಗು ಪಶುಸಂಗೋಪನೆಗಳು ಮಹಿಳೆಯರ ಭಾಗಿಯಾಗುವಿಕೆ ಇಲ್ಲದೇ ನಡೆಯಲಾರವು ಎಂದು ಶಾ ತಿಳಿಸಿದ್ದಾರೆ.
ಸ್ವಸಹಾಯ ಗುಂಪುಗಳಿಂದಾಗಿ ತಮ್ಮ ಜೀವನಗಳಲ್ಲಿ ಏನೆಲ್ಲಾ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂಬ ವಿಚಾರಗಳನ್ನು ಸಮಾಲೋಚನೆ ವೇಳೆ ಮಹಿಳೆಯರು ಹೇಳಿಕೊಂಡಿದ್ದಾರೆ.