ಇತಿಹಾಸದಿಂದ ಮರೆಯಾಗಬೇಕಾದವರು ಮೆರೆಯತೊಡಗಿದಾಗ…

Posted In : ಸಕಾಲ, ಸಂಗಮ, ಸಂಪುಟ

chamundeshwari_of_mysore

ಫಾತಿಮಾ ಬೆಳವಾಡಿ
ಹವ್ಯಾಸಿ ಬರಹಗಾರರು

ಟಿಪ್ಪು ಸುಲ್ತಾನನ ಜಯಂತಿ ಮಾಡಿಯೇ ಸಿದ್ಧ ಎಂದು ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಮೊದಲಿಗೆ ಯಾವ ಮುಸ್ಲಿಮರು ವ್ಯಕ್ತಿ ಪೂಜೆಯಂಥ ಟಿಪ್ಪು ಸುಲ್ತಾನನ ಹುಟ್ಟುಹಬ್ಬ ಆಚರಿಸಲು ಇವರ ಬಳಿ ಕೇಳಿಕೊಂಡರು ಎನ್ನುವುದು ಪ್ರಶ್ನೆ. ಜಾತಿಗೊಂದರಂತೆ ಮಹಾನ್ ವ್ಯಕ್ತಿಗಳನ್ನು ಹುಡುಕಿ ಅವರ ಹುಟ್ಟುಹಬ್ಬ ಆಚರಿಸಿ ಆ ನೆಪದಲ್ಲಿ ಆ ಜಾತಿಯವರನ್ನು ಸಂತೋಷ ಪಡಿಸುವುದು ರಾಜಕೀಯ ಚಾಳಿಯಾಗಿ ಒಂದು ದಶಕದಿಂದ ರಾಜ್ಯದಲ್ಲಿ ಬೆಳೆದಿದೆ. ನನ್ನ ಗೆಳತಿಯೊಬ್ಬರು ವಾಲ್ಮೀಕಿ, ಕನಕದಾಸ, ಬಸವಣ್ಣರ ಹುಟ್ಟುಹಬ್ಬಕ್ಕೆ ರಜೆಯಿದೆ. ಆದರೆ ಅವರು ಆರಾಧಿಸಿದ ರಾಮನವಮಿ, ಕೃಷ್ಣಜಯಂತಿ, ಶಿವರಾತ್ರಿಗಳಿಗೆ ಸರಕಾರದ ಸಹಾಯ ಬೇಡ, ಶ್ರದ್ಧಾಳುಗಳಿಗೆ ಕನಿಷ್ಠ ರಜೆಯೂ ಇಲ್ಲ ಎಂದು ಬೇಸರದಿಂದ ಹೇಳಿದ್ದರು. ಟಿಪ್ಪು ಸುಲ್ತಾನ್ ಜಯಂತಿಯಲ್ಲೂ ಇದೇ ತಂತ್ರವನ್ನು ಕಾಣಬಹುದು. ಸಂತ ಶಿಶುನಾಳ ಶರೀಫರಂಥ ಸಾತ್ವಿಕರ ಜನ್ಮದಿನಾಚರಣೆ ಆಚರಿಸಿದರೆ ಬಹುಪಾಲು ಮುಸ್ಲಿಮರಿಗೆ (ಸುನ್ನೀ ಮುಸ್ಲಿಮರಿಗೆ) ಧಾರ್ಮಿಕ ಕಾರಣಗಳಿಂದಾಗಿ ಇಷ್ಟವಾಗದೆ ಇರಬಹುದು. ಟಿಪ್ಪು ಜಯಂತಿ ಆಚರಿಸಿದರೆ ಮುಸ್ಲಿಮರಷ್ಟೇ ಅಲ್ಲ ಸಂಘ ಪರಿವಾರದವರ ಬಾಯನ್ನೂ ಮುಚ್ಚಿಸಬಹುದು ಎಂಬ ತಂತ್ರ ಇದರ ಹಿಂದಿತ್ತು. ಆದರೆ ಅದುವೇ ಈಗ ಬಿಸಿತುಪ್ಪವಾಗಿ ಪರಿಣಮಿಸಿದೆ.
ಹೈದರಾಲಿ ಮತ್ತು ಟಿಪ್ಪು ನಿಜಕ್ಕೂ ಮುಸ್ಲಿಮರಿಗೆ ಆದರ್ಶಪ್ರಾಯರೇ? ಟಿಪ್ಪು ಸುಲ್ತಾನ್ ಕೇರಳ, ಕೊಡಗು, ಮದರಾಸಿನ ದಂಡಯಾತ್ರೆಗಳಲ್ಲಿ ಮಾಡಿದ ದುರಾಚಾರಗಳನ್ನು ಬ್ರಿಟಿಷರ ವಿರುದ್ಧದ ಹಗೆ, ರಾಷ್ಟ್ರಪ್ರೇಮ, ಸಾಮ್ರಾಜ್ಯ ವಿಸ್ತರಣೆಯ ಆಕಾಂಕ್ಷೆ ಎಂಬ ನೆಪವೊಡ್ಡಿ ಕ್ಷಮಿಸುವುದು ಮೂರ್ಖತನ! ಅನ್ಯಾಯ ಯಾವತ್ತಿದ್ದರೂ ಅನ್ಯಾಯವೇ. ದುರಾಚಾರ ದುರಾಚಾರವೇ. ಟಿಪ್ಪುವನ್ನು ಹೊಗಳುವವರು ಆತ ಮಾಡಿದ ಕೃತ್ಯಗಳನ್ನು ಸುಳ್ಳೆಂದು ಹೇಳದೇ, ಸರಿಯೆಂದು ಸಮರ್ಥಿಸಿಕೊಳ್ಳಲು ಬಾಯಿಲ್ಲದೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ, ಈ ರೀತಿ ಅವರು ಮಾಡಿಲ್ಲವೇ?, ಇವರು ಮಾಡಿಲ್ಲವೇ? ಎಂದು ಮೊಂಡವಾದ ಹೂಡುತ್ತಿದ್ದಾರಷ್ಟೆ ಅವರಿವರು ಮಾಡಿದರೆ ಟಿಪ್ಪು ಮಾಡಿದ್ದು ಕ್ಷಮಾರ್ಹವಾಗುತ್ತದೆಯೇ?
ಇನ್ನು ಇವನ ತಂದೆ ಹೈದರಾಲಿಯ ಬಗ್ಗೆ ನೋಡೋಣ.
ಬಾಡಿಗೆ ಸೈನಿಕನಾಗಿ ಬಂದು ಮೈಸೂರು ಹೊಕ್ಕ ಹೈದರಾಲಿ ಬೆಂಗಳೂರನ್ನು ಜಹಗೀರು ಪಡೆದು ಉಪ್ಪುಂಡ ಮನೆಗೆ ಎರಡು ಬಗೆದು ತಾನೇ ದೊರೆಯಾಗಲು ಮಾಡದ ಅನ್ಯಾಯಗಳಿಲ್ಲ. ಮೈಸೂರಿನ ರಾಜಮಾತೆ, ರಾಜಕುಮಾರರನ್ನು ಬಂಧನದಲ್ಲಿಟ್ಟ. ಒಬ್ಬೊಬ್ಬ ಸಾಮಂತರನ್ನೇ ಕೊಳ್ಳೆ ಹೊಡೆಯುತ್ತಾ ಚಿತ್ರದುರ್ಗ, ಮಡಕಶಿರಾ, ಮಧುಗಿರಿ, ಪಾವಗಡಗಳಲ್ಲಿ ಮಾಡಿದ ಅನ್ಯಾಯ ಅನಾಚಾರಗಳಿಗೆ ಲೆಕ್ಕವಿಲ್ಲ. ನಾಡದೇವತೆ ಚಾಮುಂಡಿಯ ಗುಡಿಯಲ್ಲಿ ಮೈಸೂರು ಅರಸರ ಚಿನ್ನಾಭರಣಗಳಿವೆ ಎಂಬ ಗಾಳಿಸುದ್ದಿಯನ್ನು ನಂಬಿ ಅದನ್ನು ವಶಪಡಿಸಿಕೊಳ್ಳಲು ಚಾಮುಂಡಿ ಬೆಟ್ಟದ ಮೇಲೆ ದಾಳಿ ಮಾಡಿದ. (ಆಗ ಅಲ್ಲಿ ಪೂಜೆ ಮಾಡುವವರು ನಿಜವಾದ ವಿಗ್ರಹದ ಮುಂದೆ ಗೋಡೆ ಕಟ್ಟಿ ಮುಚ್ಚಿ ಹೊರಗೆ ಬೇರೆ ವಿಗ್ರಹ ಇಟ್ಟು ಪೂಜಿಸುತ್ತ ಇದ್ದರಂತೆ. ದಾಳಿ ಮಾಡುತ್ತಾ ಬಂದ ಹೈದರಾಲಿ ಹೊರಗಿರುವ ಹೊಸ ವಿಗ್ರಹಕ್ಕೆ ಅಲಂಕಾರ ಮಾಡಿದ್ದ ಆಭರಣಗಳನ್ನು ಕಿತ್ತುಕೊಂಡು ಆ ವಿಗ್ರಹದ ಕೈಗಳನ್ನು ಮುರಿದು ವಿಕಾರ ಮಾಡಿ ಹೋದನಂತೆ. ಆ ಮುರಿದು ಹೋದ ವಿಗ್ರಹವನ್ನು ಈಗಲೂ ದೇವಸ್ಥಾನದ ಕಚೇರಿಯಲ್ಲಿ ಇಟ್ಟು ಗೌರವಿಸುತ್ತಿದ್ದಾರೆ)
ಕೆಳದಿ ಸಂಸ್ಥಾನದ ಮೇಲೆ ದಾಳಿ ನಡೆಸಿ ಅಸಹಾಯಕಳಾಗಿದ್ದ ರಾಜಮಾತೆ ವೀರಮ್ಮಾಜಿಯ ಎದುರಲ್ಲೇ ರಾಜ ಚೆನ್ನಬಸವ ನಾಯಕನ ಕೊಲೆ ಮಾಡಿದ. ಅವನ ಹೆಂಡತಿ ರಿಯ ಚೆನ್ನಮ್ಮಳ ಸೌಂದರ್ಯಕ್ಕೆ ಮರುಳಾಗಿ ಬಲವಂತದಿಂದ ಆಕೆಯನ್ನು ಒಲಿಸಿಕೊಳ್ಳಲು ನೋಡಿದ. ಆಕೆ ಅಲ್ಲಿಂದ ತಪ್ಪಿಸಿಕೊಂಡು ಕುದುರೆಮುಖದ ಹತ್ತಿರ ಇರುವ ಬಳ್ಳಾಲರಾಯನ ದುರ್ಗದ ಪಾಳುಕೊಟೆಯಲ್ಲಿ ಆಶ್ರಯ ಪಡೆದಳು. ಅಲ್ಲಿಗೂ ಹೈದರಾಲಿಯ ಸೈನಿಕರು ದಾಳಿ ಮಾಡಿದಾಗ ರಾಜಮಾತೆ ವೀರಮ್ಮಾಾಜಿ ವಿಷ ಸೇವಿಸಿ ಮರಣ ಹೊಂದಿದಳು. ಕಿರಿಯ ಚೆನ್ನಮ್ಮ ಪ್ರಪಾತಕ್ಕೆ (ಬಂಡಾಜೆ ಜಲಪಾತ) ನೆಗೆದು ಪ್ರಾಣ ತ್ಯಜಿಸಿದಳು. ಈಗಲೂ ಅಲ್ಲಿ ರಾಜಮಾತೆ ವೀರಮ್ಮಾಾಜಿ ಸಮಾಧಿಯ ಮಂಟಪ ಇದೆ.
ನನ್ನ ಸಹಪಾಠಿ ಮಂಜುಳಾ ಎಂಬವರ ಅಜ್ಜ ಬಾಸೇಗೌಡರು ಒಂದು ಕತೆ ಹೇಳಿದ್ದರು. ಹೈದರಾಲಿ ಕೆಳದಿಯ ಮೇಲೆ ದಾಳಿ ಮಾಡಿದಾಗ ಸ್ಥಳೀಯ ಜೈನರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕಾಡಿಗೆ ಅಟ್ಟಿದ್ದರಂತೆ. ಹೈದರಾಲಿಯ ಸೈನಿಕರು ಸಸ್ಯಾಹಾರಿ ಜೈನರನ್ನು ಸೆರೆ ಹಿಡಿದು, ಸಾಲಾಗಿ ಕೂರಿಸಿ ಅವರಿಗೆ ಬಲವಂತವಾಗಿ ಮಾಂಸಾಹಾರವನ್ನು ತುರುಕುತ್ತಿದ್ದರು. ಸೆರೆ ಹಿಡಿದ ಯುವಕರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಮತಾಂತರ ಮಾಡಿ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದ. ಮತಾಂತರವಾಗದ ಕೆಲವರು ತಪ್ಪಿಸಿಕೊಂಡು ಹಿಂತಿರುಗಿದರೂ ಮಾಂಸಾಹಾರ ತಿಂದದ್ದರಿಂದ ಮತ್ತೆ ಜೈನರಾಗದೆ ಹಿಂದೂಗಳಾಗಿ ಒಕ್ಕಲುತನ ಶುರು ಮಾಡಿದರಂತೆ. ಕುವೆಂಪು ಅವರು ‘ನೆನಪಿನ ದೋಣಿ’ಯಲ್ಲಿ ಮಲೆನಾಡ ಗೌಡರು ಹಿಂದೆ ಜೈನರಾಗಿದ್ದು ಮತ್ತೆ ಹಿಂದೂಗಳಾದವರೆಂದು ಬರೆದಿದ್ದರೂ ಕಾರಣ ಬರೆದಿಲ್ಲ. ಬಹುಶಃ ನಿಂತ ನೀರನ್ನು ಕಲುಕುವುದು ಅವರಿಗೆ ಇಷ್ಟ ಇರಲಿಲ್ಲವೇನೋ. ಅದು ಅವರ ದೊಡ್ಡತನ.
ಹೈದರಾಲಿಯನ್ನು ವಿರೋಧಿಸಿದ ನಾಡವ ಗೌಡರು ತಮ್ಮ ಸಂಸಾರವನ್ನು ಕಳೆದುಕೊಂಡರು, ಅಳಿದುಳಿದವರು ಊಟಿಯ ಸುತ್ತಲಿನ ಕಾಡುಗಳಲ್ಲಿ ತಲೆಮರೆಸಿಕೊಂಡು ಬದುಕಿ ಶಾಶ್ವತವಾಗಿ ಕನ್ನಡ ನಾಡಿನಿಂದ ದೂರಾದರು. ಅವರ ಬಳಿ ಹೈದರಾಲಿ ಟಿಪ್ಪುವಿನ ಹೆಸರು ಹೇಳಿದರೆ ಮುಖಕ್ಕೆ ಉಗಿಯುತ್ತಾರೆ. ಇವನ ಸೈನ್ಯಕ್ಕೆ ಕನ್ನಡಿಗರು ಸೇರಲು ಒಪ್ಪಿಕೊಳ್ಳದಿದ್ದಾಗ ತಮಿಳುನಾಡಿನಿಂದ ಬಾಡಿಗೆ ಸೈನಿಕರನ್ನು ತಂದು ಬೆಂಗಳೂರಿನ ಸುತ್ತ ಅವರನ್ನು ನೆಲೆಗೊಳಿಸಿದನು. ಆ ಕರ್ಮ ಫಲವನ್ನು ಇಂದಿಗೂ ಕರ್ನಾಟಕ ಅನುಭವಿಸುತ್ತಲೇ ಇದೆ.
ಟಿಪ್ಪು ಶೃಂಗೇರಿಗೆ ಯಾಗ ಮಾಡಲು ಹಣಕೊಟ್ಟ, ಕೊಲ್ಲೂರಿನಲ್ಲಿ ಲಾಲ್ ಸಲಾಮ್ ಮಂಗಳಾರತಿ ಮಾಡಿದ, ನಂಜನಗೂಡಿಗೆ ಪಚ್ಚೆಲಿಂಗ ಕೊಟ್ಟ ಇತ್ಯಾದಿಗಳು ಅವನು ಪಾಲಿಸಿದ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದೇ. ಇದಕ್ಕೂ ತಮ್ಮ ಚಿತ್ರ ಯಶಸ್ವಿಯಾಗಲಿ ಎಂದು ಕತ್ರಿನಾ ಕೈಫ್ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗುವುದು, ಬಾಲಿವುಡ್ ತಾರೆಯರು ದರ್ಗಾಕ್ಕೆ ಹೋಗಿ ಹೂವಿನಚಾದರ ಹೊದಿಸುವುದೂ, ಜಮೀರ್ ಅಹ್ಮದ್ ಸ್ಲಮ್‌ಗಳಲ್ಲಿ ದೀಪಾವಳಿ ಪಟಾಕಿ ಹಂಚುವುದೂ, ದೇವೇಗೌಡರು ಇಫ್ತಾರ್ ಏರ್ಪಡಿಸುವುದೂ, ಸುಷ್ಮಾ ಸ್ವರಾಜ್ ಇರಾನ್‌ನಲ್ಲಿ ಸ್ಕಾರ್ಫ್ ಹಾಕಿಕೊಳ್ಳುವುದಕ್ಕೂ ಯಾವ ವ್ಯತ್ಯಾಾಸವೂ ಇಲ್ಲ. ತಮ್ಮ ಕಾರ್ಯ ಸಾಧಿಸಲು ಇವೆಲ್ಲಾಾ ಒಂದು ತಂತ್ರವಷ್ಟೇ. ಇದರಲ್ಲಿ ಭಕ್ತಿ ಭಾವ ಇರಬೇಕೆಂದೇನಿಲ್ಲ.
ಮುಸ್ಲಿಮರ ಒಳಮನಸ್ಸಿನಲ್ಲಿರುವ ಅನಾಥ ಪ್ರಜ್ಞೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತ, ಅವರಿಗೆ ಸಾಂತ್ವನ ನೀಡುವ ನೆಪದಲ್ಲಿ ಅವರನ್ನು ಸಮಾಜದಿಂದ ಇನ್ನಷ್ಟು ವಿಮುಖರನ್ನಾಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಇವರೆಲ್ಲರ ಹುನ್ನಾರ. ಮುಸ್ಲಿಮರ ಹಿತ ಕಾಪಾಡುವ ಕಾರ್ಯವನ್ನು ಗುತ್ತಿಗೆ ಪಡೆದ ಬುದ್ಧಿಜೀವಿಗಳು ನಾಡ ಹಬ್ಬವನ್ನು ‘ಸಂಹಾರ ಸಂಸ್ಕೃತಿ’ ಎಂದು ಬೊಬ್ಬೆ ಹೊಡೆಯುತ್ತಾ ಸಂಹಾರವನ್ನೇ ಉದ್ಯೋಗ ಮಾಡಿಕೊಂಡಿದ್ದ ಅಪ್ಪ-ಮಗರನ್ನು ಆರಾಧಿಸುವುದನ್ನು ನೋಡಿದರೆ ಇವರ ತಲೆಯಲ್ಲಿ ಸೆಗಣಿ ಇದೆಯೇ ಅನ್ನಿಸುತ್ತದೆ. ಶೃಂಗೇರಿ ಸ್ವಾಮಿಗಳು ಒಮ್ಮೆ ರಂಜಾನ್ ಸಂದರ್ಭದಲ್ಲಿ ಮುಸ್ಲಿಮರಿಗೆ ನೋವಾಗುವುದಾದರೆ ಮಸೀದಿಯ ಮುಂದೆ ತಾವು ಬ್ಯಾಂಡ್ ಸಹಿತ ಪಲ್ಲಕ್ಕಿಯಲ್ಲಿ ಹೋಗದೆ ನಡೆದುಕೊಂಡೇ ಹೋಗುವುದಾಗಿ ಹೇಳಿ ಪಲ್ಲಕ್ಕಿಯಿಂದ ಇಳಿದು ಮೌನವಾಗಿ ನಡೆದು ಹೋದರಂತೆ. ಮರುದಿನ ಆ ಊರಿನ ಮುಸ್ಲಿಮರು ಸ್ವಾಮಿಗಳಿಗೆ ಫಲಾಹಾರ ತಂದು ಕೊಟ್ಟು ಧನ್ಯವಾದಗಳನ್ನು ಹೇಳಿದರಂತೆ. ಅಂಥ ಮನೋಭಾವವನ್ನು ಎಲ್ಲ ಮುಸ್ಲಿಮರೂ ಬೆಳೆಸಿಕೊಂಡು ಒಂದು ಕೋಮಿಗೆ ನೋವಾಗುವುದಾದರೆ ವ್ಯಕ್ತಿಿಪೂಜೆಯಂಥ ಟಿಪ್ಪು ಜಯಂತಿಯನ್ನು ಕೈಬಿಡಬೇಕು. ನಿಜವಾಗಿ ಮುಸ್ಲಿಮರನ್ನು ಒಂದು ಜಯಂತಿಯ ನೆಪದಲ್ಲಿ ಸಂತೋಷ ಪಡಿಸಬೇಕು ಅಂತಿದ್ದರೆ ಸರಕಾರ ಟಿಪ್ಪು, ಹೈದರಾಲಿಗಳ ವೈಭವೀಕರಣ ನಿಲ್ಲಿಸಿ ಕನ್ನಡ ನುಡಿಗೆ, ಸಂಸ್ಕೃತಿಗೆ ಕೊಡುಗೆ ಕೊಟ್ಟ ಸಂತಶಿಶುನಾಳರ ಜಯಂತಿ ಆಚರಿಸಲಿ. ಆದರೆ ರಜೆ ಕೊಡದೆ ಅರ್ಥಪೂರ್ಣವಾಗಿ ಆಚರಿಸಿ. ಹುಲಿಪಟ್ಟೆಯ ಧ್ವಜ ಹಿಡಿದ ಯುವಕರು ವೇಗವಾಗಿ ಸಾಗುವ ಜೀಪ್‌ಗಳ ಮೇಲೆ ಕುಳಿತು ಉದ್ರೇಕಕಾರಿ ಜಯಕಾರ ಹಾಕುತ್ತಾ ರಸ್ತೆಗಳಲ್ಲಿ ದೊಂಬಿ ಎಬ್ಬಿಸುವುದು ಯಾವ ಪುರುಷಾರ್ಥಕ್ಕೆ? ಇವರು ಹೆದರಿಸುತ್ತಾ ಸಾಗುವುದು ಯಾರನ್ನು? ಟಿಪ್ಪುವಿನ ಹೆಸರು ಹೇಳುತ್ತಾ ಕಲ್ಲು ತೂರಾಟ ನಡೆಸುವ ಆಚರಣೆ ಜಯಂತಿ ಆಗುವುದು ಹೇಗೆ? ನಮಗೆ ಸಂಹಾರ ಸಂಸ್ಕೃತಿ ಬೇಡ ಸೌಹಾರ್ದ ಸಂಸ್ಕೃತಿ ಬೇಕು!

One thought on “ಇತಿಹಾಸದಿಂದ ಮರೆಯಾಗಬೇಕಾದವರು ಮೆರೆಯತೊಡಗಿದಾಗ…

  1. swatantrya poorvada itihasagannu svaasti yembante vartididare tappagutte> veera rani balavadi mallamma madya patha> yendu horadidaru belavadi samsthana halagalillave? yavude acheranegalannu telegerisikondare anahutagale jasti> udaharanegagi sangolli rayanna brigade bekitte yemba prashne udisabahudalla! dhanyavadagalu, deshakkari horadida savarkar avaru marana hondiddu 1966 RALLI> alliyavare avaru yerlliddari yendu neevetilidukolli. dhasnyavada>

Leave a Reply

Your email address will not be published. Required fields are marked *

9 + eighteen =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top