About Us Advertise with us Be a Reporter E-Paper

ಅಂಕಣಗಳು

ಉತ್ತರ ಕರ್ನಾಟಕವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಹುನ್ನಾರ

‘ಹುನ್ನಾರ’:ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ

ಕರ್ನಾಟಕದ ಪುನಾರಚನೆ ಆದಾಗಿನಿಂದ ಬಹುತೇಕ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವವರು ಹಳೆಯ ಮೈಸೂರು ಸಂಸ್ಥಾನದ ಉತ್ತರ ಕರ್ನಾಟಕವನ್ನು ಅದರಲ್ಲೂ ವಿಶೇಷವಾಗಿ ಮುಂಬಯಿ ಕರ್ನಾಟಕವನ್ನು ನಿರ್ಲಕ್ಷಿಸುವುದನ್ನು ರಾಜಕೀಯ ವಿಶ್ಲೇಷಕರು, ಹಲವು ರಾಜಕಾರಣಿಗಳು ಆಗಾಗ ಹೇಳುತ್ತ ಬಂದಿದ್ದಾರೆ. ಅದರಲ್ಲೂ ಕೆಲವು ರಾಜಕಾರಣಿಗಳು ತಮ್ಮ ಸ್ವ-ಸಾಮರ್ಥ್ಯದಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ತಕ್ಷಣವೇ ಮೈಸೂರು, ಬೆಂಗಳೂರು ಭಾಗದ ರಾಜಕಾರಣಿಗಳು ಎಚ್ಚೆತ್ತು ಅವರನ್ನು ಅಲ್ಲಿಯೇ ಚಿವುಟಿ ಹಾಕಲು ಇನ್ನಿಲ್ಲದ ಪ್ರಯತ್ನ ಪ್ರಾರಂಭಿಸು ತ್ತಾರೆ.

ಅದು ಇತ್ತೀಚಿನ ರಾಜ್ಯ ವಿಧಾನಸಭೆ ಚುನಾ ವಣೆಯ ನಂತರ ಹಾಗೂ ಸಮ್ಮಿಶ್ರ ಸರಕಾರದ ಬಜೆಟ್‌ನಿಂದ ಮತ್ತೊಮ್ಮೆ ಎದ್ದು ಇದು ನಿನ್ನೆ ಮೊನ್ನೆಯದಲ್ಲ. ಒಲ್ಲದ ಹೆಣ್ಣನ್ನು ಕಟ್ಟಿಕೊಂಡಂತೆ ಮೈಸೂರು ಸಂಸ್ಥಾ ನದ ಜನರು ಉತ್ತರ ಕರ್ನಾಟಕದ ಜನ ರೊಂದಿಗೆ ಇಂದಿಗೂ ಭಾವನಾತ್ಮಕವಾಗಿ ಕೂಡಿಕೊಂಡಿಲ್ಲ. ಅದರ ಪರಿಣಾಮವಾಗಿ ಪ್ರತಿ ಬಜೆಟ್‌ನಲ್ಲೂ ಉತ್ತರ ಕರ್ನಾಟಕಕ್ಕೆ, ಅಲ್ಲಿಯ ರಾಜಕಾರಣಿಗಳಿಗೆ ಹಿನ್ನೆಡೆ ಆಗುತ್ತಿದೆ. ಈ ಬಗ್ಗೆ ಹಿರಿಯರಾದ ಎಚ್.ಕೆ.ಪಾಟೀಲರೇ ಬಜೆಟ್‌ನಲ್ಲಿ ನಮಗಾದ ಅನ್ಯಾಯ ಎತ್ತಿ ತೋರಿಸುವ ಪ್ರಸಂಗ ಬಂದದ್ದು ಈ ಭಾಗದ ಜನರ ದುರಂತ.

ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಇಲ್ಲಿಯ ರಾಜಕಾರಣಿಗಳು ಆಸ್ಥೆ ತೋರಿಸುತ್ತಿಲ್ಲ, ಹಳೆಯ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿಯ ಶೈಕ್ಷಣಿಕ, ಔದ್ಯೋಗಿಕ ಮತ್ತು ನೀರಾವರಿ ರಂಗಗಳಲ್ಲಿ ತಾರತಮ್ಯ ತೋರಿಸಲಾಗಿತ್ತಿದೆ ಎಂಬ ಭಾವನೆಯನ್ನು ಉತ್ತರ ಕರ್ನಾಟಕದ ಜನರಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಅದಕ್ಕೆ ಮೂಲ ಕಾರಣ ಮೈಸೂರು ಸಂಸ್ಥಾನದ ಭಾಗದ ಜನರೇ ಎಂಬುದೂ ನಿಚ್ಚಳವಾಗಿದೆ.

ರಾಜ್ಯ ಪುನಾರಚನೆಯ ನಂತರ ಅಧಿಕಾರಕ್ಕೆ ಬಂದ ಬಹುತೇಕ ಅರ್ಥ(ಹಣಕಾಸು)ಮಂತ್ರಿಗಳು ಮೈಸೂರು ಭಾಗದ ವರು. ಬಜೆಟ್‌ ನಲ್ಲಿ ವ್ಯವಸ್ಥಿತವಾಗಿ ಮೈಸೂರು ಭಾಗಕ್ಕೆ ಬೆಣ್ಣೆ, ಉತ್ತರ ಕರ್ನಾಟಕಕ್ಕೆ ಸುಣ್ಣ. ಇದನ್ನು ಯಾರೂ ಅಲ್ಲಗಳೆಯಲಾರರು. ಜ್ವಲಂತ ನಿದರ್ಶನವೇ ಕಳೆದ ಆರು ದಶಕಗಳಿಂದ ಪೂರ್ಣಗೊಳ್ಳದ ಕೃಷ್ಣಾ ಮೇಲ್ದಂಡೆ ಯೋಜನೆ. ಜೊತೆಗೆ ಈವೆರೆಗೆ ಒಂದೇ ಒಂದು ಬೃಹತ್ ಔದ್ಯೋಗಿಕ ಘಟಕವೂ ಸ್ಥಾಪನೆಗೊಳ್ಳಲಿಲ್ಲ. ಮಧ್ಯದಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಬಸವ ಸಾಗರ ಪೂರ್ತಿಗೊಳಿಸಿ ಕಲಬುರ್ಗಿ, ರಾಯಚೂರು ಭಾಗಗಳಿಗೆ ನೀರು ಹರಿಸಿದರು. ಅನಂತರದ ದಿನಗಳಲ್ಲಿ ಈ ಭಾಗದವರೇ ಆದ ಎಚ್.ಕೆ. ಪಾಟೀಲ್, ಬಸವರಾಜ ಬೊಮ್ಮಾಯಿ ಮತ್ತು ಎಂ.ಬಿ ಪಾಟೀಲರು ಜಲಸಂಪನ್ಮೂಲ ಮಂತ್ರಿಗಳಾಗಿ ಹಂತಹಂತವಾಗಿ ಯೋಜನೆ ಯನ್ನು ಮುಕ್ತಾಯದ ಹಂತಕ್ಕೆ ತಂದಿದ್ದು, ಕಾಮಗಾರಿಯಿನ್ನೂ ಮುಕ್ತಾಯವಾಗಿಲ್ಲ. ಮುಖ್ಯ ಕಾರಣವೇ ಕೊಡ ಬೇಕಾ ದಷ್ಟು ಅನುದಾನದ ಕೊರತೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಘೋಷಿಸಿ ಕಾಂಗ್ರೆಸ್ಸಿನವರು ಗೆದ್ದು ಬಂದರು. ಈ ಭಾಗದ ಎಂ.ಬಿ.ಪಾಟೀಲರಿಗೆ ಜಲಸಂಪನ್ಮೂಲ ಖಾತೆ ಕೊಟ್ಟಿದ್ದರು. ಆದರೆ ಸರಕಾರ ಐದು ವರುಷದಲ್ಲಿ ಒಮ್ಮೆಯೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತ್ಯೇಕವಾಗಿ ಹಣ ನೀಡಲಿಲ್ಲ. ಪ್ರತಿಪಕ್ಷಗಳು ಕೂಡ ಅದರ ಬಗ್ಗೆ ಪ್ರಸ್ತಾಪಿಸುತ್ತಿದ್ದರೂ ಪ್ರಯೋಜನವಾಗಲಿಲ್ಲ. ಕೊಟ್ಟ ಅನುದಾನದಲ್ಲಿಯೇ ಇಲ್ಲಿಯ ಯೋಜನೆಗಳನ್ನು ಒಂದು ಹಂತಕ್ಕೆ ತಂದದ್ದು ಪಾಟೀಲರ ಚಾಕಚಕ್ಯತೆಯಷ್ಟೇ. ಆದರೆ ಅವರ ರಾಜಕೀಯಕ್ಕೆ ಹಿನ್ನಡೆಯಾದದ್ದು ದುರಂತ.

ರಾಮಕೃಷ್ಣ ಹೆಗಡೆ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸುಕೊಂಡದ್ದು ಉತ್ತರ ರ್ನಾಟಕದ ಲಿಂಗಾಯತರ ಬೆಂಬಲದಿಂದಲೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದನ್ನು ಗಮನಿಸಿದ ಮೈಸೂರು ಸಂಸ್ಥಾನದ ರಾಜಕಾರಣಿಗಳು ವ್ಯವಸ್ಥಿತವಾಗಿ ಅವರನ್ನು ತಳ ಮಟ್ಟದಲ್ಲೇ ಚಿವುಟಿ ಹಾಕಿದ್ದರು. ಪಕ್ಷ ಕಟ್ಟಿ ಮುನ್ನಡೆಸಿದ ವ್ಯಕ್ತಿಯನ್ನೇ ಪಕ್ಷದಿಂದ ಹೊರಹಾಕಿದ್ದರು! ಹೆಗಡೆ ಅವರಿಂದ ತೆರವಾದ ಸ್ಥಾನದಲ್ಲಿ ಯಡಿಯೂರಪ್ಪನವರು ಲಿಂಗಾಯತರ ಬೆಂಬಲ ಪಡೆಯಲು ಯಶಸ್ವಿಯಾಗಿ, ಲಿಂಗಾಯತರ ನಾಯಕ ಎನಿಸಿಕೊಂಡರು. ಆದರೆ ಉತ್ತರಕರ್ನಾಟಕಕ್ಕೆ ಅವರ ಏನು? ಎಂಬುದಕ್ಕೆ ಉತ್ತರವಿಲ್ಲ.

ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಿದ್ದಂತೆಯೆ ಅವರನ್ನು ಎಂದು ಕೆಳಗೆ ಇಳಿಸುವುದು ಎಂದೇ ಯೋಚಿಸಲಾಗಿತ್ತು. ಅನಿವಾರ್ಯವಾಗಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸಂಗ ಬಂದಾಗ ಕೇವಲ 11 ತಿಂಗಳು ಎಂಬುದನ್ನು ಖಚಿತ ಮಾಡಿಕೊಂಡೇ ಕೊಟ್ಟರು. ಅದು ಯಾಕೆ ಎಂಬುದು ಗೊತ್ತಿಲ್ಲದ ವಿಚಾರವಲ್ಲ.

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುವ ಪ್ರಸಂಗ ಬಂದಾಗ ಶೆಟ್ಟರ್ ಅವರನ್ನೇ ಸಿಎಂ ಮಾಡಬಹುದಿತ್ತಲ್ಲ ವೇ! ಯಡಿಯೂರಪ್ಪ ಅವರಿಗೆ ಬಹು ಮುಖ್ಯವಾಗಿ ಬೆಂಬಲ ಇದ್ದದು ಕರ್ನಾಟಕದವರು ಎಂಬುದು ಆಗ ನೆನಪಿಗೆ ಬರಲಿಲ್ಲವೆ? ಇದೇ ನೋಡಿ, ಹಳೇ ಮೈಸೂರು ಸಂಸ್ಥಾನದ ಭಾಗದವರ ವ್ಯವಸ್ಥಿತ ರಾಜಕಾರಣ.

ಈ ಎಲ್ಲ ಅನ್ಯಾಯ ಪ್ರತಿಭಟಿಸುತ್ತ ಉಮೇಶ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಎಬ್ಬಿಸಿದಾಗ ಅವರ ಪಕ್ಷದವರೇ ಅವರ ಬಾಯಿ ಮುಚ್ಚಿಸಿದರು. ಇದು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಆಳುವ ಎಲ್ಲ ಪಕ್ಷಗಳಿಗೂ ಕರ್ನಾಟಕ ಎಂದರೆ ಹಳೆಯ ಮೈಸೂರು ಸಂಸ್ಥಾನವಷ್ಟೆ. ಉಳಿದ ಭಾಗದ ಜನರಿಗೆ ದ್ವಿತೀಯ ದರ್ಜೆಯ ಆದರೂ ಇದನ್ನು ಉತ್ತರಕ ರ್ನಾಟಕದ ಬಹುಸಂಖ್ಯಾತ ಮತ್ತು ರಾಜ್ಯ ರಾಜಕಾರಣದಲ್ಲಿ ಮುಖ್ಯ ಪಾತ್ರ ವಹಿಸುವ ಲಿಂಗಾಯತ ಮತದಾರರು ಗಮನಿಸಲಿಲ್ಲ. ತಮ್ಮ ಭಾಗದ ಒಬ್ಬರನ್ನೂ ಬೆಳೆಸುವ ಪ್ರಯತ್ನ ಮಾಡಲಿಲ್ಲ. ಉತ್ತರ ಕರ್ನಾಟಕದ ರಾಜಕಾರಣಿಗಳು ಹಾಗೊಂದು ವೇಳೆ ತಮ್ಮ ಸ್ವ ಸಾಮರ್ಥ್ಯದಿಂದ ರಾಜ್ಯ ರಾಜಕಾರಣದಲ್ಲಿ ಮುಂಚೂಣಿ ಯಲ್ಲಿ ಬರುವಂತೆ ಕಾಣಿಸಿದರೆ ಅವರನ್ನು ಮೊಳಕೆಯಲ್ಲೆ ಚಿವುಟಿ ಹಾಕುತ್ತಾರೆ ಎಂಬುದಕ್ಕೆ ಉದಾಹರಣೆಗಳ ಕೊರತೆಯಿಲ್ಲ.

ಈ ವರ್ಷ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲದೇ ಸಮ್ಮಿಶ್ರ ಸರಕಾರ ಕಳೆದ ಐದು ವರುಷಗಳಿಂದ ಆಡಳಿತ ದಲ್ಲಿದ್ದ ಕಾಂಗ್ರೆಸ್ ತಾನಾಗೇ ಹೋಗಿ ಜೆಡಿಎಸ್ ಜತೆ ಸೇರಿತು. ಇಲ್ಲಿಯೂ ಹಳೇ ಮೈಸೂರು ಸಂಸ್ಥಾನದ ರಾಜಕಾರಣಿಗಳದ್ದೇ ದರ್ಬಾರು. ಜಾತಿ, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಮುಖ್ಯ ಮಂತ್ರಿ ದಕ್ಷಿಣ ಭಾಗದವರಾದರೆ, ಉತ್ತರ ಕರ್ನಾಟಕ ಭಾಗದವರನ್ನು ಉಪಮುಖ್ಯಮಂತ್ರಿ ಮಾಡಲು ಆಗುತ್ತಿರಲಿಲ್ಲವೆ? ಮಂತ್ರಿ ಮಂಡಲ ರಚಿಸುವಾಗಲೂ ಉತ್ತರ ಕರ್ನಾಟಕ ಭಾಗಕ್ಕೆ ನಾಮಕೆವಾಸ್ತೆ ಒಬ್ಬ ಹಿರಿಯರನ್ನು ಸೇರಿಸಿಕೊಳ್ಳಲಾಯಿತು, ಇನ್ನುಳಿದ ಮೂವರು ಪ್ರಭಾವಿಗಳಾದ ಎಚ್.ಕೆ.ಪಾಟೀಲ, ಎಂ.ಬಿ. ಪಾಟೀಲ ಮತ್ತು ಸತೀಶ ಜಾರಕಿಹೊಳಿ ಅವರನ್ನೇ ಇನ್ನಿಲ್ಲದ ರಾದ್ಧಾಂತ ಮಾಡಲಾಯಿತು.

ಎಚ್.ಕೆ.ಪಾಟೀಲ್ ಎರಡು ದಶಕಗಳ ರಾಜಕಾರಣದ ಅನುಭವ ಪಡೆದು ಪ್ರಬುದ್ಧ ರಾಜಕಾರಣಿ ಎಂದು ಹೆಸರು ಪಡೆದವರು. ತಂದೆ ಕೆ.ಎಚ್ ಪಾಟೀಲ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಜನರು ಭಾವಿಸಿದ್ದರು. ಆದರೆ, ಅವರಿಗೆ ಸಿಎಂ ಸ್ಥಾನ ತಪ್ಪಿಸ ಲಾಗಿತ್ತು. ತಂದೆಯದ್ದು ಬಿಚ್ಚು ನುಡಿಯ ನಾಯಕತ್ವ, ಪುತ್ರನದ್ದು ಸೌಮ್ಯ,ಸರಳ ವ್ಯಕ್ತಿತ್ವದ ನಾಯಕತ್ವ. 2004ರಲ್ಲಿಯೂ ಎಚ್.ಕೆ.ಪಾಟೀಲರಿಗೆ ಒದಗಿ ಬರುತ್ತಿದ್ದ ಸಿಎಂ ಪದವಿಯನ್ನು ಅವರಿಂದ ತಪ್ಪಿಸಲಾಗಿತ್ತು.

ಎಂ.ಬಿ.ಪಾಟೀರದ್ದು ಇದಕ್ಕೆ ತದ್ವಿರುದ್ಧ, ಸೌಮ್ಯ ಸ್ವಭಾವದ ಅವರ ತಂದೆ ಪಾಟೀಲರು ಅಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಪ್ರಭಾವ ಬೆಳೆಸಿಕೊಂಡಿದ್ದರು. ಆಗಲೂ ಅವರು ಮತ್ತಷ್ಟು ಮುನ್ನಲೆಗೆ ಬರದಂತೆ ನೋಡಿಕೊಳ್ಳಲಾಗಿತ್ತು. ಅವರ ಪುತ್ರನದ್ದು ಬಿಚ್ಚು ನುಡಿಯ ಆಕ್ರಮಣಕ ರಾಜಕಾರಣ. ಕಳೆದ 20 ವರುಷಗಳಿಂದ ರಾಜಕಾರಣದಲ್ಲಿದ್ದು ಹಂತ ಹಂತವಾಗಿ ರಾಜ್ಯರಾಜಕಾರಣದಲ್ಲಿ ಮುಂಚೂಣಿಗೆ ಬಂದವರು. ತಮಗೆ ಕೊಟ್ಟ ನೀರಾವರಿ ಇಲಾಖೆಯಲ್ಲಿ ರಾಜ್ಯಾದ್ಯಂತ ಕೆಲಸ ಮಾಡಿ ರಾಷ್ಟ್ರದ ಗಮನ ಸೆಳೆದವರು. ಲಿಂಗಾಯತರ ಪ್ರಶ್ನಾತೀತ ನಾಯಕರೆನಿಸಿದ್ದ ಯಡಿಯೂರಪ್ಪ ಅವರಷ್ಟೇ ತಾವೂ ವರ್ಚಸ್ಸು ಪಡೆದರು. ಬಹುಶಃ ಅದೇ ಅವರ ಹಿನ್ನೆಡೆಗೆ ಆಗಿರಬಹುದು.

ಉತ್ತರ ಕರ್ನಾಟಕದ ಯಾರೊಬ್ಬರು ನಾಯಕನಾಗಿ ಬೆಳೆಯುತ್ತಿದ್ದರೂ ಅವರನ್ನು ತಡೆಯುವ ಹುನ್ನಾರ ನಡೆಯುತ್ತದೆ ಎಂಬು ದನ್ನು ಉತ್ತರ ಕರ್ನಾಟಕದ ಜನರೂ ಅರಿಯದೇ ಹೋದದ್ದು ದುರಂತ. ಮುಂದಿನ ಮುಖ್ಯಮಂತ್ರಿ ಆಗಬಹುದಾಗಿದ್ದ ಸಮರ್ಥರನ್ನು ಈಗಲೇ ಹತ್ತಿಕ್ಕುವ ಹುನ್ನಾರವಿದು ! ಇವರಂತೆಯೇ ಸತೀಶ ಜಾರಕಿಹೊಳಿ ಅವರೂ ಗಡಿ ನಾಡಿನಲ್ಲಿ ಮುಂದೆ ಬರುತ್ತಿರುವ ಹಿಂದುಳಿದ ಸಶಕ್ತ ರಾಜಕಾರಣಿ. ಅದೂ ಕೂಡ ಮೈಸೂರು ಭಾಗದವರಿಗೆ ನುಂಗಲಾರದ ತುತ್ತು. ಅದರ ಫಲವೇ ಅವರ ಇಂದಿನ ಸ್ಥಿತಿ.

ಇದು ರಾಜಕಾರಣದಲ್ಲಷ್ಟೇ ಉತ್ತರ ಕರ್ನಾಟಕವನ್ನು ಎಲ್ಲ ರಂಗಗಳಲ್ಲೂ ವ್ಯವಸ್ಥಿತವಾಗಿ ನಿರ್ಲಕ್ಷಿಸುವ ಪ್ರವೃತ್ತಿ ರಾಜ್ಯ ಪುನಾರಚನೆಯಿಂದಲೇ ನಡೆದು ಬಂದಿದೆ. ಅದು ನಿಗಮ ಮಂಡಳಿ, ಅಕಾಡೆಮಿ, ಪ್ರಾಧಿಕಾರಗಳು, ಪ್ರಶಸ್ತಿಗಳು ಯಾವುದೇ ಆಗಿದ್ದರು ಕೂಡ. ಕರ್ನಾಟಕ ಎಂದರೆ ಬೆಂಗಳೂರು, ಮೈಸೂರು ಮಾತ್ರ ಎಂದು ಹಿರಿಯರಾದ ಪಾಟೀಲ ಪುಟ್ಟಪ್ಪನವರು ಅಂದಿನಿಂದಲೇ ಹೇಳಿ(ಖಂಡಿಸಿ)ಕೊಂಡು ಬರುತ್ತಿದ್ದಾರೆ. ಆದರೆ ಪರಿಸ್ಥಿತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಇದುವೆ ಇಂದು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನಾಂದಿಯಾಗಿದ್ದರೆ ಅದರಲ್ಲಿ ಆಶ್ಚರ್ಯವೂ ಇಲ್ಲ. ಉತ್ತರ ಭಾಗದವರನ್ನು ಕಡೆಗಣಿಸುವ ಪ್ರಯತ್ನಕ್ಕೆ ತಡೆಯಾಗಬೇಕಿದೆ. ಮತ ಕೇಳಲು ಮಾತ್ರ ಉತ್ತರ ಕರ್ನಾಟಕ ಅಧಿಕಾರ ಮಾಡಲು ಮಾತ್ರ ದಕ್ಷಿಣದವರೇ ಎಂಬ ಮನಸ್ಥಿತಿ ಬದಲಾಗಬೇಕಿರುವುದು ಇಂದಿನ ಅಗತ್ಯವಾಗಿದೆ.

Related Articles

Leave a Reply

Your email address will not be published. Required fields are marked *

Language
Close