ಒಳ್ಳೆಯದರ ದುರುಪಯೋಗವನ್ನು ನಮ್ಮಿಂದ ಕಲಿಯಬೇಕು

Posted In : ಅಂಕಣಗಳು, ಪ್ರಥಮ ಪೂಜೆ

2017ರ ಏಪ್ರಿಲ್ 1ರಿಂದ ನಿಮ್ಮೆಲ್ಲ ಆಸ್ತಿ ಅಮಾನ್ಯಗೊಳ್ಳಲಿದೆ! ಈ ಅವಧಿಯಲ್ಲಿ ಮಾರಾಟ ಅಥವಾ ಖರೀದಿ ಸಾಧ್ಯವಿಲ್ಲ.
ಉಪನೋಂದಣಾಧಿಕಾರಿ ಕಚೇರಿಯಲ್ಲಿ 2018ರ ಮಾರ್ಚ್ 31ರೊಳಗೆ ಎಲ್ಲರೂ ಅವರವರ ಆಸ್ತಿಯನ್ನು ಸೂಕ್ತ ದಾಖಲೆಗಳೊಂದಿಗೆ ಇಪಿಪಿಬಿ ಅಂದರೆ ಇ-ಪ್ರಾಪರ್ಟಿ ಪಾಸ್‌ಬುಕ್‌ಗೆ ನೋಂದಾಯಿಸಬೇಕು. ಮಾಲೀಕರು ಸಂಪೂರ್ಣ ದಾಖಲೆಯೊಂದಿಗೆ ಸ್ವತಃ ಹಾಜರಾಗಿ ಇಪಿಪಿಬಿಗೆ ಆಸ್ತಿ ನೋಂದಣಿ ಮಾಡಿಕೊಳ್ಳಬೇಕು. ನೀವು ಯಾವುದೇ ಆಸ್ತಿಯನ್ನು ಇಪಿಪಿಬಿಯಲ್ಲಿ ನೋಂದಾಯಿಸದೇ ಮಾರಾಟ ಮಾಡುವಂತಿಲ್ಲ. ಇ-ಪ್ರಾಪರ್ಟಿ ಪಾಸ್‌ಬುಕ್ ನಿಮ್ಮ ಪಾನ್ ಹಾಗೂ ಆಧಾರ್ ನಂಬರ್‌ಗೆ ಲಿಂಕ್ ಆಗಿರುತ್ತದೆ. ಇಪಿಪಿಬಿಯಲ್ಲಿ ಸೇರಿದ ನಂತರವೇ ಆಸ್ತಿ ನಿಮ್ಮದಾಗುತ್ತದೆ. ತುರ್ತು ಮಾರಾಟ ಅಥವಾ ಅಡ ಇಡುವವರಿಗಾಗಿ ಪ್ರತ್ಯೇಕ ಕೌಂಟರ್ ಇರಲಿದೆ. 2018ರ ಮಾರ್ಚ್ 31ರ ನಂತರವೂ ಇಪಿಪಿಬಿಗೆ ಸೇರ್ಪಡೆಯಾಗದ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಹೀಗೊಂದು ಮೆಸೇಜ್ ವ್ಯಾಟ್ಸ್ ‌ಆ್ಯಪ್‌ನಲ್ಲಿ ಬರುತ್ತಿದೆ. ಕೇಂದ್ರ ಸರಕಾರದಲ್ಲಿ ವಿಚಾರಿಸಿದರೆ ಇಂತಹ ಯಾವುದೇ ಪ್ರಸ್ತಾವನೆ ಅಲ್ಲಿಲ್ಲ ಎಂಬುದು ಗೊತ್ತಾಯಿತು. ಈ ಮೆಸೇಜ್ ಅಂತಲ್ಲ. ಇಂಥ ಸಾಕಷ್ಟು ಮೆಸೇಜ್‌ಗಳು ವ್ಯಾಟ್ಸ್ ‌ಆ್ಯಪ್‌ನಲ್ಲಿ ನಮ್ಮ ಮೊಬೈಲ್‌ಗೆ ಬರುತ್ತಿರುತ್ತವೆ. ನಾಳೆಯಿಂದ ಸಂಚಾರ ನಿಯಮ ಉಲ್ಲಂಘಟನೆಗೆ ದಂಡ ಹೆಚ್ಚಾಗುತ್ತಂತೆ, ಅಕ್ಕಿ, ಬೇಳೆ ದರ ಡಬ್ಬಲ್ ಆಗುತ್ತಂತೆ. ಹಾಸನದ ಬಳಿ ಅಪಘಾತದಲ್ಲಿ ಪತಿ-ಪತ್ನಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಮಾತ್ರ ಉಳಿದಿದ್ದಾರೆ. ಅವರು ಎಲ್ಲಿಯವರು ಎಂದು ಹೇಳಲು ಮಕ್ಕಳಿಗೆ ಆಗುತ್ತಿಲ್ಲ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಫಾರ್ವರ್ಡ್ ಮಾಡಿ, ಅವರ ಸಂಬಂಧಿಕರನ್ನು ತಲುಪುವಂತಾಗಲಿ. ಪೊಲೀಸ್ ಒಬ್ಬ ಮಗುವನ್ನು ಕರೆದುಕೊಂಡಿರುವ ಚಿತ್ರ ಹಾಕಿ, ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಗುವೊಂದು ಸಿಕ್ಕಿದೆ, ಆದಷ್ಟು ಫಾರ್ವರ್ಡ್ ಮಾಡಿ, ಅದು ಅವರ ತಂದೆ- ತಾಯಿಯನ್ನು ಸೇರುವಂತಾಗಲಿ, ಯಾರಿಗೋ ಒ ನೆಗೆಟಿವ್ ರಕ್ತ ಬೇಕು, ಇನ್ಯಾವುದೋ ಎನ್‌ಜಿಒ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ, ಫಾರ್ವರ್ಡ್ ಮಾಡಿ ಎಲ್ಲ ಮಕ್ಕಳಿಗೆ ಸಹಾಯವಾಗಲಿ ಎಂಬರ್ಥದ ಮೆಸೇಜ್‌ಗಳು ಬರುತ್ತಲೇ ಇರುತ್ತವೆ.

ಬರುವ ಮೆಸೇಜ್‌ಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ಯಾರೂ ಗಮನಿಸುವುದಿಲ್ಲ. ಇತ್ತೀಚೆಗೆ ನಾನು ಗಮನಿಸಿದಂತೆ ವ್ಯಾಟ್ಸ್‌ಆ್ಯಪ್‌ನಲ್ಲಿ ಬರುತ್ತಿರುವ ಇಂತಹ ಮೆಸೇಜ್‌ಗಳಲ್ಲಿ ಶೇ.98ರಷ್ಟು ಸುಳ್ಳಾಗಿರುತ್ತವೆ!
ಸ್ವಲ್ಪ ಸಮಯದ ಹಿಂದೆ ಒಂದು ಎನ್‌ಜಿಒ ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳಿಗೆ ವಿದ್ಯಾರ್ಥಿವೇತನ ಕೊಡುತ್ತೆ, ಈ ಯೋಜನೆಗೆ ಇನ್‌ಫೋಸಿಸ್ ಪ್ರತಿಷ್ಠಾನದ ಸಹಕಾರವಿದೆ ಎಂಬ ಮೆಸೇಜ್ ಬಂದಿತ್ತು. ನಾನು ಇನ್ಫೋಸಿಸ್ ಪ್ರತಿಷ್ಠಾನದಲ್ಲಿ ವಿಚಾರಿಸಿದಾಗ, ಆ ಹೆಸರಿನ ಎನ್‌ಜಿಒಗೆ ಅವರು ಯಾವುದೇ ಯೋಜನೆಗೆ ಹಣ ನೀಡ್ತುತಿಲ್ಲ ಎಂಬುದು ತಿಳಿಯಿತು!

ಈ ಲೇಖನ ಬರೆಯುತ್ತಿದ್ದೆ. ಅಷ್ಟರಲ್ಲಿ 1ರಿಂದ 10 ವರ್ಷದ ಮಕ್ಕಳಿಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಿಮ್ಮೊಂದು ಶೇರ್‌ನಿಂದ ಒಂದು ಜೀವ ಉಳಿಯಬಹುದು ಅಂತ ಮೆಸೆಜ್ ಬಂತು. ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದೆ. ಅದು ಶ್ರೀಸತ್ಯಸಾಯಿ ಹೈಯರ್ ಮೆಡಿಕಲ್ ಸರ್ವೀಸ್‌ದು. ಆದರೆ ಈ ಆ ಫೋನನ್ನು ಯಾರೂ ರಿಸೀವ್ ಮಾಡಲಿಲ್ಲ. ಹಲವು ಬಾರಿಯ ಪ್ರಯತ್ನದ ನಂತರವೂ ಯಾರೂ ಆ ನಂಬರ್‌ನಲ್ಲಿ ಕರೆ ಸ್ವೀಕರಿಸಲಿಲ್ಲ.

ವ್ಯಾಟ್ಸ್ಆ್ಯಪ್, ಫೇಸ್‌ಬುಕ್‌ಗಳನ್ನು ಜನರ ನಡುವಿನ ಸಂಪರ್ಕ ಸುಲಭಗೊಳಿಸಲು ರೂಪಿಸಲಾಗಿದೆ. ಗೆಳೆಯರೊಂದಿಗೆ, ಕುಟುಂಬದವರೊಂದಿಗೆ ನಮ್ಮ ಸಂಗತಿಗಳನ್ನು ಹಂಚಿಕೊಳ್ಳಲು ಇವೆಲ್ಲ ತುಂಬ ಸಹಕಾರಿ. ಆದರೆ ನಾವು ಅವುಗಳನ್ನು ವಿರೂಪಗೊಳಿಸುತ್ತಿದ್ದೇವೆ. ನಮ್ಮ ಹಾಗೂ ಇನ್ನೊಬ್ಬರ ಸಮಯ ಹಾಳುಮಾಡಲು ಬಳಸುತ್ತಿದ್ದೇವೆ. ಯಾರ್ಯಾರದೋ ಜವಾಬ್ದಾರಿಯ ಬಗ್ಗೆ ಮಾತನಾಡುತ್ತೇವೆ. ಆದರೆ ನಾವೇನು ಮಾಡುತ್ತಿದ್ದೇವೆ? ದಿನಕ್ಕೆ ನೂರಾರು ಸುಳ್ಳುಗಳನ್ನು ಬೇಜವಾಬ್ದಾರಿತನದಿಂದ ಹರಡುತ್ತಿದ್ದೇವೆ. ‘ಬಂದಂತೆ ಫಾರ್ವರ್ಡ್ ಮಾಡಲಾಗಿದೆ’ ಎಂದು ಕೊನೆಯಲ್ಲಿ ಒಂದು ಸಾಲು ಸೇರಿಸಿಬಿಟ್ಟರೆ ಮುಗಿಯಿತು. ಬಂದ ಹಾಗೆ ಕಳುಹಿಸಿದ್ದೇನೆ, ನಂದೇನಿಲ್ಲ ಅಂದಂತೆ. ಬಂದ ಹಾಗೇ ಕಳುಹಿಸಿದರೂ ನಮ್ಮ ಜವಾಬ್ದಾರಿ ಏನೂ ಇಲ್ಲವೇ? ಒಂದು ಸುಳ್ಳನ್ನು ಹರಡಲು ನಾವೂ ಕಾರಣರಾದಂತೆ ಆಗಲಿಲ್ಲವೇ? ಯಾರಾದರೂ ಅದನ್ನು ನಂಬಿ ತೊಂದರೆಗೆ ಒಳಗಾದರೆ ನಾವೂ ಹೊಣೆಯಲ್ಲವೇ?

ಇದಕ್ಕೆ ಕಾರಣವೆಂದರೆ, ನಾನೇನೊ ಒಂದು ಮೆಸೇಜ್ ಫಾರ್ವರ್ಡ್ ಮಾಡಿ ಸಹಾಯ ಮಾಡಿದ್ದೇನೆ ಎಂಬ ಸಮಾಧಾನ ಪಡೆದುಕೊಳ್ಳಲು. ಆದರೆ ಅದು ನಿಜವಾ? ಸುಳ್ಳಾ ಎಂಬುದು ನಮಗೆ ಅಗತ್ಯವಿಲ್ಲದ ವಿಷಯ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಯಾವುದನ್ನು ಹೇಗೆ ಬಳಸಬೇಕು ಎಂಬುದೇ ಗೊತ್ತಿಲ್ಲವೇನೊ ಎಂಬ ಅನುಮಾನವೂ ಕಾಡುತ್ತಿದೆ. ಯಾವ ಗ್ರೂಪ್‌ನಲ್ಲಿ ಯಾವ ಮೆಸೇಜ್ ಕಳುಹಿಸಬಹುದು? ಅದು ಯಾಕಾಗಿ ಮಾಡಲಾದ ಗ್ರೂಪ್? ಈ ಮೆಸೇಜ್ ಅಲ್ಲಿ ಕಳುಹಿಸುವುದು ಸರಿಯಾ? ಕಾಲೇಜು ಹಳೆ ವಿದ್ಯಾರ್ಥಿಗಳ ಗ್ರೂಪ್‌ನಲ್ಲಿ ಯಾರದೋ ಅಜ್ಜ ತೀರಿಕೊಂಡಾಗ (ಒಬ್ಬರಿಗೂ ಅವರ ಪರಿಚಯ ಇರುವುದಿಲ್ಲ) ಎಲ್ಲರೂ ರಿಪ್ (ರೆಸ್ಟ್ ಇನ್ ಪೀಸ್) ಹೇಳುವವರೇ. ರಿಪ್ ಹೇಳದಿದ್ದರೆ ಅಮಾನವೀಯವೇನೊ ಎಂಬಷ್ಟರ ಮಟ್ಟಿಗಿದೆ ಈ ರಿಪ್ ಸಂಸ್ಕೃತಿ. ಯಾವ ಗ್ರೂಪ್‌ನಲ್ಲಿ ಯಾವ ಮೆಸೇಜ್ ಕಳುಹಿಸಬೇಕು, ಅದರಿಂದ ಉಳಿದ ಸದಸ್ಯರಿಗೆ ತೊಂದರೆಯಾಗಬಹುದಾ? ಆ ಗ್ರೂಪ್‌ನಲ್ಲಿ ಈ ವಿಷಯ ಚರ್ಚೆ ಮಾಡುವುದು ಸರಿಯಾ? ಈ ಮೆಸೇಜ್ ಕಳುಹಿಸುವುದರಿಂದ ನನ್ನ ಬಗ್ಗೆ ಉಳಿದ ಸದಸ್ಯರು ಏನಂದುಕೊಳ್ಳಬಹುದು? ಮುಂತಾದ ವಿವೇಚನೆಯನ್ನೇ ನಾವು ಮಾಡುತ್ತಿಲ್ಲ. ಅಕಸ್ಮಾತ್ ನಾವು ಹಾಕಿದ ಮೆಸೇಜನ್ನು ಯಾರಾದರೂ ವಿರೋಧಿಸಿದರೆ ‘ಸ್ವಾತಂತ್ರ್ಯ ಹರಣ’, ‘ಅಭಿವ್ಯಕ್ತಿ’ ಸ್ವಾತಂತ್ರ್ಯಕ್ಕೆ ದಕ್ಕೆ ಎಂದು ಕೂಗುವುದನ್ನು ಮಾತ್ರ ನಾವು ಚೆನ್ನಾಗಿ ಬಲ್ಲೆವು.

ಇತ್ತೀಚೆಗೆ ವ್ಯಾಟ್ಸ್ ‌ಆ್ಯಪ್‌ನಲ್ಲಿ ವಿಡಿಯೊ ಕಾಲ್ ಮಾಡುವ ಅವಕಾಶ ಕಲ್ಪಿಸಲಾಯಿತು. ಯಾರು ವ್ಯಾಟ್ಸ್ ‌ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳುತ್ತಾರೊ ಅವರಿಗೆಲ್ಲ ಈ ಸೌಲಭ್ಯ ಸುಲಭವಾಗಿ ಲಭ್ಯವಾಗುತ್ತದೆ. ಆದರೆ ಸಾಕಷ್ಟು ಜನ ‘ವ್ಯಾಟ್ಸ್ ‌ಆ್ಯಪ್ ವಿಡಿಯೊ ಕಾಲ್ ಅಪ್‌ಡೇಟ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ’ ಎಂಬ ಮೋಸದ ಮೆಸೇಜ್ ಫಾರ್ವರ್ಡ್ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ‘ಆಫ್‌ಲೈನ್ ವ್ಯಾಟ್ಸ್ ‌ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ’ ಎಂಬ ಮೆಸೇಜ್ ಓಡಾಡುತ್ತಿತ್ತು. ಇಂಟರ್ನೆಟ್ ಮೂಲಕವೇ ವ್ಯಾಟ್ಸ್ ‌ಆ್ಯಪ್ ನಡೆಯುವಾಗ, ಆಫ್‌ಲೈನ್ ವ್ಯಾಟ್ಸ್ ‌ಆ್ಯಪ್ ಕಲ್ಪನೆಯೇ ತಪ್ಪು ಎಂಬುದು ನಮಗೆ ಅರ್ಥವಾಗುವುದೇ ಇಲ್ಲ.

ನಾವೆಲ್ಲ ಚಿಕ್ಕವರಿರುವಾಗ ಮನೆಗೆ ಕಾರ್ಡ್‌ಗಳು ಬರುತ್ತಿದ್ದವು. ‘ಈ ಕಾರ್ಡನ್ನು 100 ಪ್ರತಿ ಮಾಡಿ ಪೋಸ್ಟ್ ಮಾಡಿದರೆ ಎರಡು ದಿನದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ’ ಎಂಬ ಒಕ್ಕಣೆ ಇರುತ್ತಿತ್ತು. ಕೇವಲ ಅಷ್ಟೇ ಹೇಳಿದರೆ ಯಾರೂ ಕಾರ್ಡ್ ಬರೆಯಲಿಕ್ಕಿಲ್ಲ ಎಂಬ ಕಾರಣಕ್ಕೆ ‘ಇದನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ ಎಂಬ ಬೆದರಿಕೆಯ ಒಕ್ಕಣೆಯೂ ಜತೆಗಿರುತ್ತಿತ್ತು. ಈಗ ಅದೇ ಒಕ್ಕಣೆ ಮೆಸೇಜ್ ರೂಪದಲ್ಲಿ ಬರುತ್ತಿದೆ. ಬದಲಾವಣೆಯೆಂದರೆ ‘ಈ ಮೆಸೇಜನ್ನು 100 ಜನರಿಗೆ ಫಾರ್ವರ್ಡ್ ಮಾಡಿದರೆ 50ರು. ಟಾಕ್‌ಟೈಂ ಸಿಗಲಿದೆ’ ಎಂಬ ಮೆಸೇಜುಗಳೂ ಬರುತ್ತಿವೆ. ಅದನ್ನು ನಂಬಿ ಫಾರ್ವರ್ಡ್ ಮಾಡುವವರೂ ಇದ್ದಾರೆ. ಆದರೆ ಟಾಕ್‌ಟೈಂ ಮಾತ್ರ ಯಾರಿಗೂ ಸಿಕ್ಕಿಲ್ಲ. ಹಾಗೆಲ್ಲ ಟಾಕ್‌ಟೈಂ ಸಿಗುವುದೂ ಇಲ್ಲ.
ನಿಮ್ಮ ಟೈಂ ಮಾತ್ರ ವೇಸ್ಟ್.

ಸುಳ್ಳು ಹರಡುವಲ್ಲಿ ನೀವು ಮಾತ್ರ ಭಾಗಿ ಅಂದುಕೊಳ್ಳಬೇಡಿ. ರಾಜಕೀಯ ಪಕ್ಷಗಳು, ರಾಜಕಾರಣಿಗಳು ಕೂಡ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 1000 ಹಾಗೂ 500 ರು. ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿತು. ಮೊದಲ ದಿನವೇ ಹೊಸ 2000 ನೋಟಿನಲ್ಲಿ ಜಿಪಿಎಸ್ ನ್ಯಾನೊ ಚಿಪ್ ಇದೆ ಎಂಬ ಸುದ್ದಿ ಭರ್ಜರಿ ಹರಿದಾಡಿತ್ತು. ಭೂಮಿಯಲ್ಲಿ 200 ಅಡಿ ಒಳಗೆ ಇಟ್ಟರೂ ನೋಟು ಪತ್ತೆ ಮಾಡಲು ಸಾಧ್ಯ ಎಂಬ ಸುದ್ದಿಗಳೆಲ್ಲ ಹರಡಿದ್ದವು. ಮರುದಿನ ಅರುಣ್ ಜೇಟ್ಲಿ ‘ಅಂಥದ್ದೇನೂ ಇಲ್ಲಪ್ಪ’ ಎಂದು ಹೇಳಿ ನಿಜವಾಗಿಯೂ ‘ಅರ್ಥ’ ಸಚಿವರಾಗಬೇಕಾಯಿತು.

ನೋಟು ನಿಷೇಧವನ್ನು ಕೆಲವರು ವಿರೋಧಿಸುತ್ತಿರುವುದು ಗೊತ್ತೇ ಇದೆ. ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ನೋಟು ನಿಷೇಧಕ್ಕೆ 55 ಮಂದಿ ಮೃತಪಟ್ಟಿದ್ದಾರೆ. ಅವರ ಲೆಕ್ಕ ಹೇಗಾದರೂ ಇರಲಿ. ಇತ್ತೀಚೆಗೆ ಅವರೊಂದು ಟ್ವೀಟ್ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬ್ಯಾಂಕ್‌ನಲ್ಲೇ ನೇಣಿಗೆ ಶರಣಾಗಿದ್ದ ಚಿತ್ರವದು. ‘ಮಧ್ಯಪ್ರದೇಶದಲ್ಲಿ ನಾಲ್ಕು ದಿನ ಕ್ಯೂ ನಿಂತರೂ ಹಣ ಸಿಗದ ಕಾರಣ ವ್ಯಕ್ತಿಯೊಬ್ಬ ಬ್ಯಾಂಕ್‌ನಲ್ಲೇ ನೇಣಿಗೆ ಶರಣಾಗಿದ್ದಾನೆ’ ಎಂದು ಹೇಳಿದ್ದರು.

ಅರೆ! ಬ್ಯಾಂಕಿನಲ್ಲಿ ಇಷ್ಟೆಲ್ಲ ಜನ ಇರುವಾಗ, ಹೇಗೆ ನೇಣುಹಾಕಿಕೊಂಡ? ಯಾರೂ ತಡೆಯಲಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಆಮೇಲೆ ಗೊತ್ತಾಗಿದ್ದೇನೆಂದರೆ, ನೇಣು ಹಾಕಿಕೊಂಡವ ಒಬ್ಬ ದರೋಡೆಕೋರ. ಆತ ಬ್ಯಾಂಕ್ ದರೋಡೆಗೆಂದು ಒಳಗೆ ಹೋಗಿದ್ದ. ಆದರೆ ಜನರಿಗೆ ಗೊತ್ತಾಗಿ ಅವರು ಶಟರ್ ಹಾಕಿದ್ದರು. ಇದರಿಂದ ಕಂಗಾಲಾದ ಆತ ನೇಣುಹಾಕಿಕೊಂಡಿದ್ದ. ಇದು ಮಧ್ಯಪ್ರದೇಶದ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಇದು ಗೊತ್ತಾದ ಮೇಲೂ ಕೇಜ್ರಿವಾಲ್ ಮಾತ್ರ ಸಾರಿ ಕೇಳಲಿಲ್ಲ, ಟ್ವೀಟ್ ಕೂಡ ಡಿಲಿಟ್ ಮಾಡಲಿಲ್ಲ.

ಇದೇ ಸಮಯದಲ್ಲಿ ‘ಬಿಜೆಪಿ ನಾಯಕರ ಮಗಳೊಬ್ಬಳು 2000 ರು. ನೋಟಿನ ಕಂತೆಯೊಂದಿಗೆ’ ಎಂಬ ಚಿತ್ರ ಬಂದಿತ್ತು. ನೀವು ಖಂಡಿತ ನೋಡಿರುತ್ತೀರಿ. ‘ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ ಮೌರ್ಯ ಅವರ ಪುತ್ರಿ ನಳಿನಿ ಮೌರ್ಯ ಅವರು 2000 ರು.ನ 10 ಲಕ್ಷದ ಕಂತೆಯೊಂದಿಗೆ ಬ್ಯಾಂಕ್‌ನಿಂದ ಹೊರಬರುತ್ತಿದ್ದಾರೆ. ಆದರೆ ಸಾಮಾನ್ಯ ಜನ ವಾರಕ್ಕೆ 10 ಸಾವಿರ ಮತ್ತು ದಿನಕ್ಕೆ ನಾಲ್ಕು ಸಾವಿರ ಮಾತ್ರ ಡ್ರಾ ಮಾಡಬಹುದು ಎಂಬ ಟ್ವೀಟ್ ಅದಾಗಿತ್ತು. ಸಾಕಷ್ಟು ಫಾರ್ವರ್ಡ್ ಕೂಡ ಆಗಿತ್ತು. ಆದರೆ ಆಮೇಲೆ ಗೊತ್ತಾಗಿದ್ದೇನೆಂದರೆ ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಕೇಶವ ಮೌರ್ಯ ಅವರಿಗೆ ಇಬ್ಬರು ಗಂಡು ಮಕ್ಕಳು. ಅವರಿಗೆ ಹೆಣ್ಣು ಮಕ್ಕಳೇ ಇಲ್ಲ! ಈಗಲೂ ಕೆಲವರು ಫಾರ್ವರ್ಡ್ ಮಾಡುತ್ತಲೇ ಇರಬಹುದು.

ಬ್ಯಾಂಕ್‌ಗಳಲ್ಲಿ ದೊಡ್ಡ ದೊಡ್ಡ ಕ್ಯೂ ಇದ್ದಾಗ ಕಾಂಗ್ರೆಸ್‌ನ ಸಂಜಯ್ ಝಾ ಒಂದು ಟ್ವೀಟ್ ಮಾಡಿದ್ದರು. ಮೈದಾನದಲ್ಲಿ ದೊಡ್ಡ ಕ್ಯೂ ಇರುವ ಚಿತ್ರವದು. ಆದರೆ ಆ ಚಿತ್ರ ವಿದೇಶವೊಂದರಲ್ಲಿ ಚುನಾವಣೆ ಸಂದರ್ಭ ತೆಗೆದ ಚಿತ್ರವೆಂದು ಆಮೇಲೆ ಬಹಿರಂಗವಾಯಿತು. ಇತ್ತೀಚೆಗೆ ನಮ್ಮ ಸಂಪಾದಕ ವಿಶ್ವೇಶ್ವರ ಭಟ್ಟರ ಮನೆಗೆ ಆದಾಯ ತೆರಿಗೆ ದಾಳಿ ನಡೆಯಿತು ಎಂಬ ಸುದ್ದಿಯೂ ವ್ಯಾಟ್ಸ್‌ಆ್ಯಪ್‌ನಲ್ಲಿ ಹಬ್ಬಿತ್ತು. ಕಿಡಿಗೇಡಿ ಪತ್ರಕರ್ತನೊಬ್ಬ ಅವರ ಮನೆಯ ಚಿತ್ರ, ಎದುರಿಗೆ ನಾಲ್ಕೈದು ಕಾರು ನಿಂತ ಚಿತ್ರ ಸೇರಿ, ಐಟಿ ದಾಳಿ ಖಚಿತ ಎಂಬಂತೆ ವ್ಯಾಟ್ಸ್ಆ್ಯಪ್‌ನಲ್ಲಿ ಹಾಕಿದ್ದ.

ನಾವು ತಂತ್ರಜ್ಞಾನದಲ್ಲಿ ಮುಂದುವರಿದಿರಬಹುದು. ಆದರೆ ಜ್ಞಾನದಲ್ಲಲ್ಲ! ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸುವ ಬದಲು ನಾವು ಕೆಟ್ಟದ್ದಕ್ಕೆ ಹೆಚ್ಚು ಬಳಸುತ್ತಿದ್ದೇವೆ. ಅಲ್ಲಿ ಯಾವುದೋ ಒಂದು ಮೆಸೇಜ್, ಚಿತ್ರ ಕಳುಹಿಸಿಬಿಡುವುದು. ಅದಕ್ಕೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅಲ್ಲಿ ಏನು ಹೇಳಿದರೂ ನಡೆಯುತ್ತದೆ ಎಂಬ ಅಸಡ್ಡೆ. ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್ ಎಲ್ಲವೂ ಒಳ್ಳೆಯದೇ. ಆದರೆ ನಮ್ಮ ನಮ್ಮ ತೆವಲಿಗೆ ಅದನ್ನೆಲ್ಲ ಕುಲಗೆಡಿಸುತ್ತಿದ್ದೇವೆ. ತುಂಬ ಒಳ್ಳೆಯದನ್ನೂ ಹೇಗೆ ಹಾಳು ಮಾಡಬೇಕು ಎಂಬುದನ್ನು ನಮ್ಮಿಂದಲೇ ಕಲಿಯಬಹುದು.

Leave a Reply

Your email address will not be published. Required fields are marked *

fifteen − eight =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top