ಕಳಲೆಯಿಂದ ಕೊಳಲವರೆಗೆ… ಕಾನನದ ಕಲ್ಪವೃಕ್ಷ

Posted In : ಅಂಕಣಗಳು

ಅಟ್ಟಕ್ಕೆ ಏಣ್ಯಾಸೆ ಬೆಟ್ಟಕ್ಕೆ ಬಿದಿರಾಸೆ ಏಗೀಣೇಗೀಣಿಯೇ… ಹೆಣ್ಣುಮಕ್ಕಳಿಗೆ ತೌರೂರಾಸೆ ಏಗೀಣೇಗೀಣಿಯೇ… – ಜನಪದ ಗೀತೆಯ ಸಾಲುಗಳು ನೆನಪಿವೆಯೇ? ಬಿ.ಕೆ.ಸುಮಿತ್ರಾ ಮತ್ತು ಸಂಗಡಿಗರು ಹಾಡಿ ಪ್ರಖ್ಯಾತವಾದ, ಕನ್ನಡದ ಜನಪದ ಗೀತೆಗಳ ಧ್ವನಿಸುರುಳಿಗಳಲ್ಲಿ ಆರಂಭಿಕದ್ದೆನ್ನಬಹುದಾದ, ಮಾಯದಂಥ ಮಳೆ ಬಂತಣ್ಣ, ಮುಂಜಾನೆದ್ದು ಕುಂಬಾರಣ್ಣ, ನಿಂಬಿಯ ಬನದ ಮ್ಯಾಗಳ, ಘಲ್ಲುಘಲ್ಲೆನುತ ಗೆಜ್ಜೆ ಮುಂತಾದ ಜನಪ್ರಿಯ ಹಾಡುಗಳಿದ್ದ ಕ್ಯಾಸೆಟ್‌ನಲ್ಲಿ ಕೊನೆಯ ‘ಊರ ಮೇಲೆ ಊರು ದೂರವೇನೋ ತಮ್ಮಯ್ಯಾ..’ ಹಾಡಿನಲ್ಲಿ ಬರುವ ಸಾಲುಗಳು. ಅಟ್ಟ ಹತ್ತಲಿಕ್ಕೆ ಏಣಿ ಬೇಕು.

ಏಣಿ ತಯಾರಿಸಲಿಕ್ಕೆ ಬಿದಿರು ಬೇಕು. ಅದನ್ನು ಬೆಟ್ಟದಿಂದ ತರಬೇಕು. ಆದರೆ ತಾನು ನೀರುಣಿಸಿ ಪೋಷಿಸಿದ ಬಿದಿರು ತನ್ನಲ್ಲೇ ಉಳಿಯಬೇಕು ಎಂಬ ಚಿಕ್ಕದೊಂದು ಆಸೆ ಬೆಟ್ಟಕ್ಕೂ ಇದೆ. ಹೀಗಿರಲು ಅಟ್ಟದ ಆಸೆಯೂ ಬೆಟ್ಟದ ಆಸೆಯೂ ಈಡೇರಬೇಕಿದ್ದರೆ ಹೆಚ್ಚು ಬಿದಿರು ಬೆಳೆಯಬೇಕು. ಪ್ರಕೃತಿ ಮತ್ತು ಹೆಣ್ಣಿನ ಸಮೀಕರಣದ, ಸಂಬಂಧಗಳಲ್ಲಿ ಇರುವ/ಇರಬೇಕಾದ ಸೂಕ್ಷ್ಮತೆ-ಸಮತೋಲನಗಳ ಮತ್ತೊಂದು ಸುಂದರ ನಿದರ್ಶನವಿದು.

ನಮ್ಮ ಜನಪದ ಗೀತೆಗಳಲ್ಲಿ, ಕಥಾನಕಗಳಲ್ಲಿ, ಗಾದೆ ಮಾತುಗಳಲ್ಲಿ, ನುಡಿಗಟ್ಟುಗಳಲ್ಲಿ ವೃಕ್ಷಸಿರಿಸಂಪತ್ತಿನ ಉಲ್ಲೇಖ ಮತ್ತು ಬಣ್ಣನೆಗಳಿಗೆ ಕೊರತೆಯಿಲ್ಲ. ನಮ್ಮ ಪೂರ್ವಜರು ಅಷ್ಟೆಲ್ಲ ಗಿಡಮರಗಳೊಟ್ಟಿಗೇ ಬಾಳಿ ಬದುಕಿದವರೆಂದ ಮೇಲೆ, ಅವುಗಳನ್ನು ಹತ್ತಿರದಿಂದ ನೋಡಿ ಬಲ್ಲವರೆಂದ ಮೇಲೆ, ಅದು ಸಹಜವೇ ತಾನೆ? ಅದರಲ್ಲೂ ಬಿದಿರಿನಂಥ ಬಹೂಪಯೋಗಿ ಸಸ್ಯದ ಬಗ್ಗೆಯಂತೂ ಒಂದು ಇಡೀ ಹಾಡೇ ಇದೆ. ‘ಬಿದಿರಮ್ಮ ತಾಯಿ ಕೇಳೆ’ ಎಂಬ ಈ ಜನಪದ ಗೀತೆಯಲ್ಲಿ ಬಿದಿರನ್ನು ಮಾತೃಸ್ವರೂಪದಲ್ಲಿ ಗೌರವಿಸಲಾಗಿದೆ. ಹುಲ್ಲಾಗಿ ಹುಟ್ಟಿ ಬಾನಿನೆತ್ತರಕ್ಕೆ ಬೆಳೆಯುವ ಬಿದಿರಿನ ಅಗಾಧತೆಯನ್ನು, ವಿವಿಧ ಉಪಯೋಗಗಳನ್ನು ಈ ಹಾಡು ಬಣ್ಣಿಸುತ್ತದೆ.

‘ರಂಗನಿಗೆ ಕೊಳಲಾದೆ ಕಂದನಿಗೆ ತೊಟ್ಟಿಲಾದೆ ಆಡುವ ಮಕ್ಕಳಿಗೆ ಓಡುವ ಕುದುರೆ ಆದೆ..’ಈ ರೀತಿ ಒಂದೊಂದು ಚರಣದಲ್ಲೂ ಬಿದಿರನ ಮಹತ್ವವನ್ನು ತಿಳಿಸುತ್ತದೆ. ಚಪ್ಪರದ ಕಂಬ, ಚಾವಣಿಯ ರೀಪು, ನಂದಿಕೋಲು, ಬೀಸಣಿಕೆ, ಬಾಗಿನಕ್ಕೆ ಮೊರ, ಧಾನ್ಯದ ಕಣಜ, ಏಣಿ, ಊರುಗೋಲು, ಹರಿಗೋಲು, ಕೊನೆಗೆ ಮಸಣಯಾತ್ರೆಗೆ ಮಾಡುವ ಚಟ್ಟದಲ್ಲೂ… ಹೀಗೆ ಹಳ್ಳಿ ಜೀವನದಲ್ಲಿ ಹುಟ್ಟಿನಿಂದ ಸಾವಿನ ತನಕ ಒಂದಿಲ್ಲೊಂದು ರೂಪದಲ್ಲಿ ಬಿದಿರು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವುದನ್ನು ಮನದಟ್ಟು ಮಾಡುತ್ತದೆ.

ರಾಮನಗರದ ಬಳಿ ಇರುವ, ಡಾ.ಎಚ್.ಎಲ್.ನಾಗೇಗೌಡರ ಕನಸಿನ ಕೂಸಾದ ‘ಜನಪದಲೋಕ’ದಲ್ಲಿ ಒಂದು ಬಿದಿರುಮೆಳೆಯ ಪಕ್ಕದಲ್ಲಿ ದೊಡ್ಡ ಫಲಕದಲ್ಲಿ ಈ ಹಾಡನ್ನು ಬರೆದಿಟ್ಟದ್ದಿದೆ.  ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಆ ಕುರಿತು ನನಗೆ ವಿಶೇಷ ಹೆಮ್ಮೆ ಇದೆ. ‘ಬಿದಿರಮ್ಮ ತಾಯಿ ಕೇಳೆ’ ಪದ್ಯದಲ್ಲಿ ಉಲ್ಲೇಖಗೊಳ್ಳದ ಬಿದಿರಿನ ಇನ್ನೂ ಕೆಲವು ಉಪಯೋಗಗಳನ್ನು ನಾನು ಬಲ್ಲೆ. ಮೊದಲನೆಯದಾಗಿ ಎಳೆ ಬಿದಿರು ಒಂದು ತರಕಾರಿಯ ರೂಪದಲ್ಲಿ ಅಮೋಘವಾದ ಖಾದ್ಯವಸ್ತು. ನಮ್ಮ ಕರಾವಳಿಯಲ್ಲಿ ತುಳು ಭಾಷೆಯಲ್ಲಿ ಅದನ್ನು ‘ಕಣಿಲೆ’ ಎನ್ನುತ್ತಾರೆ. ಕನ್ನಡದ ಪದ ‘ಕಳಲೆ’ ಎಂದು. ನಾವು ಅದರ ಪಲ್ಯ, ಹುಳಿ, ವಡೆ, ಖಾರ ದೋಸೆ, ಉಪ್ಪಿನಕಾಯಿ ಮುಂತಾಗಿ ವಿಧವಿಧದ ಅಡುಗೆಗಳನ್ನು ಮಾಡುತ್ತೇವೆ.

ಕಳಲೆಯ ಪರಿಮಳ ಎಷ್ಟು ಗಾಢವಾದದ್ದೆಂದರೆ ಊಟ ಮಾಡಿ ಕೈತೊಳೆದ ಮೇಲೂ ಅಂಗೈಗೆ ಘಮ ಬರುತ್ತಿರುತ್ತದೆ. ಇಲ್ಲಿ ಅಮೆರಿಕಕ್ಕೆ ಬಂದ ಹೊಸದರಲ್ಲಿ ಇಲ್ಲಿನ ಕೊರಿಯನ್ ಗ್ರೋಸರಿ ಸ್ಟೋರ್‌ಗಳಲ್ಲಿ ಕಳಲೆ ಸಿಗುತ್ತದೆ ಎಂದು ತಿಳಿದಾಗ ನನಗಾಗಿದ್ದ ಸಂತೋಷ ಅಷ್ಟಿಷ್ಟಲ್ಲ. ಯಾವುದೋ ದೇಶದಿಂದ ಇಲ್ಲಿಗೆ ಆಮದಾಗಿ ಬಂದದ್ದರಲ್ಲಿ ಬಹುತೇಕ ಬಾಡಿಹೋದದ್ದೇ ಇರುತ್ತದಾದರೂ ಅದೃಷ್ಟಕ್ಕೆ ಕೆಲವೊಮ್ಮೆ ಏಕ್‌ದಂ ತಾಜಾ ಕಳಲೆ ಸಿಗುವುದೂ ಇದೆ. ಅದನ್ನು ತಂದು ನಾವು ರುಚಿರುಚಿ ಅಡುಗೆ ಮಾಡಿ ಸವಿಯುವುದೂ ಇದೆ. ಇಲ್ಲಿ ನಮಗೆ ಕಳಲೆ ಸಿಗುತ್ತದೆ ಎಂದು ಸಂಭ್ರಮದಿಂದ ಹೇಳಿಕೊಳ್ಳುವುದೂ ಇದೆ. ಕಳಲೆ ಮಾತ್ರವಲ್ಲ, ಬಿದಿರಕ್ಕಿ ಸಹ ಬಿದಿರುತಾಯಿಯ ಪದ್ಯದಲ್ಲಿ ಉಲ್ಲೇಖಗೊಂಡಿಲ್ಲ. ನಿಮಗೆ ಗೊತ್ತಿದೆಯೋ ಇಲ್ಲವೋ ಬಿದಿರಕ್ಕಿ ಬಹಳ ಅಪರೂಪದ, ಅಮೂಲ್ಯವಾದ ಒಂದು ಉತ್ಪನ್ನ. ಬಿದಿರಕ್ಕಿ ಗೊತ್ತಿಲ್ಲದವರಿಗಾಗಿ ವಿವರಿಸುತ್ತೇನೆ-ಒಂದು ಸಸ್ಯವಾಗಿ ಬಿದಿರಿನ ವೈಶಿಷ್ಟ್ಯ ವೇನೆಂದರೆ ಅದು ಪ್ರತಿವರ್ಷ ಹೂ ಬಿಡುವುದಿಲ್ಲ. ಎರಡು ವರ್ಷಕ್ಕೊಮ್ಮೆಯೂ ಅಲ್ಲ. ಐದು-ಹತ್ತು ವರ್ಷಗಳಿಗೂ ಅಲ್ಲ.

ಸರಿಯಾಗಿ 60 ವರ್ಷಗಳಿಗೊಮ್ಮೆ ಹೂ ಬಿಡುತ್ತದೆ. ಅದೊಂದೇ ಸಲ. ಆಮೇಲೆ ಆ ಬಿದಿರುಮೆಳೆ ಸತ್ತುಹೋಗುತ್ತದೆ. ಅಂದರೆ ಸುದೀರ್ಘ ಜೀವನದಲ್ಲಿ ಬಿದಿರಿನ ಸಂತಾನೋತ್ಪತ್ತಿ ಒಂದೇ ಒಂದು ಸಲ. ಸಂತಾನೋತ್ಪತ್ತಿಯಾದ ಮೇಲೆ ಮರಣ. ಬಿದಿರಿನ ಹೂಗಳಿಂದ ಸಿಗುವ ಧಾನ್ಯವೇ ಬಿದಿರಕ್ಕಿ. ಹೂ ಬಿಟ್ಟ ಕೆಲ ದಿನಗಳಲ್ಲೇ ಬಿದಿರುಮೆಳೆಯ ಕೆಳಗೆ ಬತ್ತ ಚೆಲ್ಲಿದಂತೆ ಬಿದಿರಕ್ಕಿ ಉದುರಿರುತ್ತದೆ. ಬಿದಿರುಮೆಳೆಗಳ ಹತ್ತಿಿರ ವಾಸಿಸುವವರು ಈ ಧಾನ್ಯವನ್ನು ಆರಿಸಿ ತರುತ್ತಾರೆ. ಒಂದು ರೀತಿಯ ಹಿತಕರ ಪರಿಮಳವಿರುವ ಧಾನ್ಯ, ಅಕ್ಕಿಯಂತೆ ಉಪಯೋಗಕ್ಕೆ ಬರುತ್ತದೆ. ರೂಪ ಹೇಗೆಂದರೆ- ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಬೇಯಲಿಕ್ಕೆ ತುಂಬ ಹೊತ್ತು ಬೇಕು. ಕರಾವಳಿಯ ಜನರು ಬಿದಿರಕ್ಕಿಯಿಂದ ಗಂಜಿ, ಖಿಚಡಿ, ದೋಸೆ, ಅಪ್ಪ (ಗುಳಿಯಪ್ಪ, ಪಡ್ಡು, ಗುಂಡುಪೊಂಗ್ಲು ಅಂತೆಲ್ಲ ಪ್ರಾಾದೇಶಿಕವಾಗಿ ಬೇರೆಬೇರೆ ಹೆಸರುಳ್ಳದ್ದು) ಮುಂತಾದ ವಿಧವಿಧ ಖಾದ್ಯಗಳನ್ನು ತಯಾರಿಸುತ್ತೇವೆ. ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದ ರಾಘವಾಂಕ ಕವಿ ‘ಹರಿಶ್ಚಂದ್ರ– ಕಾವ್ಯ’ದಲ್ಲಿ ಬಿದಿರಕ್ಕಿಯನ್ನು ಬಳಸಿದ್ದಾನೆ.

ರಾಜಾ ಹರಿಶ್ಚಂದ್ರನು ಹಂದಿಯ ಬೇಟೆಯಾಡಲು ಕಾಡಿಗೆ ಹೋದಾಗ ಅಲ್ಲಿ ಬೇಡತಿಯರು ‘ಸುವ್ವಿ ನಲ್ಲನೆ ಸುವ್ವಿ ಸುವ್ವಿ ಕಾನನವಿಜಯ…ಸುವ್ವಿ ಬಲುಬಿಲುಗಯ್ಯ ಸುವ್ವಿ ಮೃಗಕುಲಮಥನ…’ ಎನ್ನುತ್ತ ಬಿದಿರಕ್ಕಿಯನ್ನು ಕುಟ್ಟಿ ಜರಡಿಯಾಡಿಸಿ ಅಡುಗೆಗೆ ಅಣಿಗೊಳಿಸುತ್ತಿದ್ದರಂತೆ. ‘ಬಿದಿರಕ್ಕಿಯಂ ಕುದಿಸಿ ಮದಮೃಗದ ಮಾಂಸಮಂ ಹದದೊಳಟ್ಟುಱೆ ತೊಳಸಿ ಸಂಭಾರಮನ್ನಿಕ್ಕಿ ತುದಿವೆರಲಿನಿಂದುಪ್ಪ…ಬೆರೆಸಿ ಬೇಯಿಸಿ ಬಡಿಸುತ್ತಿದ್ದರಂತೆ. ಬೇಡರ ತಂಡವು ‘ಓರಣಂಗಟ್ಟಿ ಕುಳಿತು ಸದಮದದೊಳುಂಡು ತಾಂಬೂಲಂ ಕೊಂಡು’ ಮೆಲ್ಲುತ್ತಿದ್ದರಂತೆ. ಈ ಆಸಾಮಿ ಬರೀ ತಿಂಡಿ ವಿಷಯ ಅಷ್ಟೇ ಬರೆಯುತ್ತಾನೆ ಮಹಾನ್ ತಿಂಡಿಪೋತ ಇರಬೇಕು ಅಂತ ನೀವಂದು– ಕೊಳ್ಳುವುದಕ್ಕೆ ಮೊದಲೇ ತಿಂಡಿ ವಿಷಯ ಅಲ್ಲಿಗೇ ಮುಗಿಸುತ್ತೇನೆ. ಬಿದಿರು ಪದ್ಯದಲ್ಲಿ ಮಿಸ್ಸಿಂಗ್ ಅಂತ ನನಗನಿಸಿದ ಇನ್ನೂ ಕೆಲ ಸಂಗತಿಗಳಿವೆ.

ಗೋಕುಲಾಷ್ಟಮಿಯ ಸೀಸನ್‌ನಲ್ಲಿ ನಾವು ಹಳ್ಳಿಯಲ್ಲಿ ‘ಪೆಟ್ಲು’ ಆಡುತ್ತಿದ್ದೆವು. ಬಿದಿರಿನ ನಳಿಗೆಯ ಒಂದು ತುದಿಯಲ್ಲಿ ಗೋಲಿಯಂಥ ಒಂದು ಚಿಕ್ಕ ಕಾಯಿಯನ್ನಿಟ್ಟು ಅಡಕೆ ಮರದ ದಬ್ಬೆಯಿಂದ ಅದಕ್ಕೆಂತಲೇ ಮಾಡಿದ ‘ಗಜ’ದಿಂದ ಆ ಕಾಯಿಯನ್ನು ದೂಡಿ ಕೋವಿಯಿಂದ ಗುಂಡು ಸಿಡಿಸಿದಂತೆ ಮಾಡುವ ಆಟ. ಬಿದಿರಿನ ನಳಿಗೆಯ ಇನ್ನೊಂದು ಉಪಯೋಗ ಹಸು/ಎಮ್ಮೆಯ ಕರುವಿಗೆ ಹಾಲು ಅಥವಾ ಏನಾದರೂ ಔಷಧ ಕುಡಿಸುವ ಪಾತ್ರೆಯಾಗಿ.  ಅದು ಒಂದು ತುದಿಯಲ್ಲಿ ಗೆಣ್ಣಿನಿಂದಾಗಿ ಮುಚ್ಚಿದ, ಇನ್ನೊಂದು ತುದಿ ಮಾತ್ರ ತೆರೆದಿರುವ ನಳಿಗೆ. ಎರಡೂ ತುದಿಗಳು ತೆರೆದಿರುವುದಾದರೆ ಅಡುಗೆಮನೆಯಲ್ಲಿ ಕಟ್ಟಿಗೆ ಒಲೆಯಲ್ಲಿ ಬೆಂಕಿ ಉರಿಯುವಂತೆ ಮಾಡಲು ಊದುಕೊಳವೆಯಾಗಿ ಬಳಕೆ. ಹೋಮಹವನಾದಿ ಪೂಜಾಕಾರ್ಯಗಳಲ್ಲೂ ಉಪಯೋಗವಾಗುತ್ತಿತ್ತು. ಆಗ ಅದಕ್ಕೆ ‘ವೇಣುಧಮನಿ’ ಎಂಬ ಸುಸಂಸ್ಕೃತ ಹೆಸರು.

‘ವೇಣುಧಮನ್ಯಾ ಅಗ್ನಿಂ ಪ್ರಜ್ವಾಲ್ಯ…’ ಎಂದು ನಮ್ಮೂರ ಪುರೋಹಿತರ ಮಂತ್ರ ನನ್ನ ಕಿವಿಗಳಲ್ಲಿ ಈಗಲೂ ಮಾರ್ದನಿಸುತ್ತದೆ. ಬಿದಿರಿನ ಮತ್ತೊಂದು ಬಳಕೆ ಏಣಿಯಂತೆಯೇ ಆದರೆ ಎರಡು ಕಂಬಗಳದ್ದಲ್ಲ, ಒಂದೇ ಕಂಬದ ರಚನೆ ಮರ ಹತ್ತಲಿಕ್ಕೆ, ಚಾವಣಿ ಇತ್ಯಾದಿ ಎತ್ತರದ ಸ್ಥಳವನ್ನೇರಲಿಕ್ಕೆ. ಬಿದಿರಿನ ಒಂದೊಂದು ಗೆಣ್ಣನ್ನೂ ಸುಮಾರು ನಾಲ್ಕೈದು ಇಂಚಿನಷ್ಟು ಉಳಿಸಿ ಅವುಗಳ ಮೇಲೆ ಪಾದವೂರಿ ಮೇಲೆ ಹತ್ತುವಂಥ ವ್ಯವಸ್ಥೆ. ತೋಟ-ಗದ್ದೆಗಳನ್ನು ಕಾವಲು ಕಾಯಲಿಕ್ಕೆ ಪುಟ್ಟ ಗುಡಿಸಲಿನ ರೀತಿಯದು ಕಂಬಗಳ ಮೇಲೆ ಎತ್ತರದಲ್ಲಿ ಇರುತ್ತದಾದ್ದರಿಂದ ಅದನ್ನು ಹತ್ತಲಿಕ್ಕೆ ಬಿದಿರಿನ ಈ ಏಕಸ್ತಂಭ ಏಣಿಯ ಬಳಕೆ. ಮಾವು, ಗೇರು, ಪೇರಳೆ ಮುಂತಾದ ಹಣ್ಣುಗಳನ್ನು ಕೊಯ್ಯಲಿಕ್ಕೆ ಕೊಕ್ಕೆ ಕಟ್ಟಿದ ಉದ್ದದ ಕೋಲು ಬಿದಿರಿನದೇ.

ನಮ್ಮ ಹಳ್ಳಿಯಲ್ಲಿ ಜೇನುಸಾಕಣೆ ಮಾಡುವವರು ‘ಮೊಜಾಂಟಿ’ ಎಂಬ ಪ್ರಭೇದದ ಜೇನುಹುಳಗಳನ್ನು ಬಿದಿರಿನ ದೊಡ್ಡದೊಂದು ಆಂಡೆಯಲ್ಲಿ ಸಾಕುತ್ತಿದ್ದರು. ಆ ಹುಳಗಳು ತಯಾರಿಸಿದ ಜೇನು ಮಾಮೂಲಿ ಜೇನಿಗಿಂತ ದಪ್ಪ ಮತ್ತು ತುಂಬಾ ಸಿಹಿ. ಅದರಲ್ಲಿ ಔಷಧೀಯ ಗುಣಗಳೂ ಹೆಚ್ಚು ಎನ್ನುತ್ತಿದ್ದರು. ಮನೆಯ ಹಜಾರದಲ್ಲಿ ಮಾಡಿನ ಒಳಭಾಗದಲ್ಲಿ ಅಂಚಿನ ಗುಂಟ ದೊಡ್ಡದೊಂದು ಬಿದಿರನ್ನು ಅಡ್ಡವಾಗಿ ಕಟ್ಟಿದ್ದಿರುತ್ತಿತ್ತು. ಬೇಸಗೆಯಲ್ಲಿ ಬೆಳೆದ ಬಣ್ಣದಸೌತೆ (ಮಂಗಳೂರುಸೌತೆ) ಕಾಯಿಗಳನ್ನು ಬಾಳೆಹಗ್ಗದಿಂದ ಅದಕ್ಕೆ ಸಾಲಾಗಿ ಕಟ್ಟಿಡುವುದು. ನೋಡಲಿಕ್ಕೂ ಚಂದ. ಅದು ಮಳೆಗಾಲದಲ್ಲಿ ತರಕಾರಿಯಾಗಿ ಉಪಯೋಗಕ್ಕೆ ದಾಸ್ತಾನು ಮಾಡಿಡುವ ಕ್ರಮ.

ಇನ್ನು, ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದಲೂ ಬಿದಿರು ಸುಮಾರಷ್ಟು ಸ್ವಾರಸ್ಯಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ ಎಂದು ನನ್ನ ಅಂಬೋಣ. ಹೇಗಂತೀರಾ? ಬಿದಿರಿಗೆ ಸಂಸ್ಕೃತದಲ್ಲಿ ವೇಣು ಎಂದಲ್ಲದೆ ‘ವಂಶ’ ಎಂಬ ಹೆಸರೂ ಇದೆ.  ಬಿದಿರು 60 ವರ್ಷಗಳಿಗೊಮ್ಮೆ ಹೂ ಬಿಡುವುದು, ಆಮೇಲೆ ಸತ್ತುಹೋಗುವುದು ಎಂದೆನಷ್ಟೆ? ಬಿದಿರು ಹೂ ಬಿಟ್ಟು ಬಿದಿರಕ್ಕಿ ಉದುರಿದ ಮೇಲೆ ಆ ಪ್ರದೇಶದಲ್ಲಿ ಒಮ್ಮೆ ಬರಗಾಲ ಬರುತ್ತದೆ. ಇಲಿ-ಹೆಗ್ಗಣಗಳು ಹೆಚ್ಚಾಗುತ್ತವೆ. ‘ಬಿದಿರು ಹೂ ಬಿಟ್ಟರೆ ಬರಗಾಲ’ ಎಂಬ ನಂಬಿಕೆಯೇ ಇದೆ. ನಮ್ಮಲ್ಲಿ ಕಾಲಗಣನೆ- ಪ್ರಭವ ವಿಭವ ಸಂವತ್ಸರಗಳ ಚಕ್ರವೂ 60 ವರ್ಷಗಳಿಗೊಮ್ಮೆ ಒಂದು ಆವರ್ತನ ಮುಗಿಸುವುದು. ಮನುಷ್ಯನ ಸರಾಸರಿ ಆಯುಷ್ಯ ಸುಮಾರು 60 ವರ್ಷ ಎಂದು ಆಗಿನ ಕಾಲದಲ್ಲಿ ಅಂದಾಜಿಸಿದ್ದರೋ ಏನೋ. ಹಾಗಾಗಿ ‘ವಂಶ’ ವೃಕ್ಷ ಬಿದಿರಿನ ಆಯುಷ್ಯದಂತೆಯೇ ಮನುಷ್ಯನ ಒಂದು ವಂಶ ಅಥವಾ ತಲೆಮಾರಿನ ಅವಧಿ ಎಂದು ಲೆಕ್ಕ ಹಾಕಿದ್ದಿರಬಹುದು.

ಸಂಸ್ಕೃತದಲ್ಲಿ ಬಿದಿರನ್ನು ವಂಶ ಎಂದು ಕರೆಯುವುದಕ್ಕೂ ಆ ಪದದ ಇತರ ಅರ್ಥಗಳಿಗೂ ಖಂಡಿತ ಸಂಬಂಧ ಇದೆ ಎನ್ನುವುದು ನನ್ನ ತರ್ಕ. ‘ವಂಶ’ದಿಂದ ಮಾಡಿದ ಕೊಳಲು ‘ವಂಶಿ’. ಅದನ್ನು ಹಿಡಿದವ ಶ್ರೀಕೃಷ್ಣ. ಅವನಿಗೆ ‘ವಂಶಿಧರ’ ಎಂದೂ ಹೆಸರಿದೆ. ವಂಶ ಮತ್ತು ವಂಶಿ ಪದಗಳು ಹಿಂದಿ/ ಬಂಗಾಲಿ ಮತ್ತಿತರ ಉತ್ತರ ಭಾರತೀಯ ಭಾಷೆಗಳಲ್ಲಿ ಕ್ರಮವಾಗಿ ಬಾನ್ಸ್ ಮತ್ತು ಬನ್ಸೀ ಎಂದಾಗಿವೆ. ‘ಸುರೀಲೀ ಬನ್ಸೀ’ಯೇ ಬಾನ್ಸುರಿ ಆದದ್ದಿರಬಹುದು. ‘ಶಾಮ್ ತೇರೀ ಬನ್ಸೀ ಪುಕಾರೇ ರಾಧಾ ನಾಮ್…’, ‘ರಾಧಿಕೆ ತೂನೇ ಬಾನ್ಸುರಿ ಚುರಾಯೀ…’ಮುಂತಾದ ಹಿಂದಿ ಹಾಡುಗಳಲ್ಲಿ ಬನ್ಸೀ-ಬಾನ್ಸುರಿಗಳನ್ನು ಕೇಳಿದಾಗೆಲ್ಲ ಅವುಗಳ ಮೂಲ ‘ವಂಶ’ ಅಂದರೆ ಬಿದಿರು ಎಂದು ನೆನಪಾಗುತ್ತದೆ. ಕೊಳಲು ಬಹುಶಃ ಮನುಷ್ಯನು ಕಂಡು ಹುಡುಕಿದ ಅತ್ಯಂತ ಪ್ರಾಾಚೀನ ವಾದ್ಯ.

ಉಸಿರನ್ನು ಅಂದರೆ ಪ್ರಾಣವನ್ನೇ ತುಂಬಿಸಿ ನುಡಿಸುವ ನೈಸರ್ಗಿಕ ವಾದ್ಯ. ಕೃಷ್ಣನ ಅಸ್ಮಿತೆಯಾಗಿ, ರಾಧೆಗೆ ಸವತಿಯೋ ಎಂಬಂತೆ ಸ್ಪರ್ಧಿಯಾಗಿ ಕೊಳಲಿನ ದೈವಿಕ ಭೂಮಿಕೆಯನ್ನು ನೆನೆಸಿಕೊಂಡರೆ ಯಾರಿಗೇ ಆದರೂ ಮೈಮನವೆಲ್ಲ ರೋಮಾಂಚನವಾಗುತ್ತದೆ. ಬಿದಿರಿಗೆ ತೂತು ಕೊರೆದು ಮಾಡಿದ ಕೊಳಲಿನ ಬಗ್ಗೆ ತೆಲುಗು ಹಾಡೊಂದರಲ್ಲಿ ಮಾರ್ಮಿಕವಾದ
ಸಾಲುಗಳಿವೆ. ‘ಪಿಲ್ಲನಗ್ರೋವಿಕಿ ನಿಲುವೆಲ್ಲ ಗಾಯಾಲು… ಅಲ್ಲನ ಮೋವಿಕಿ ತಾಕಿತೇ ಗೇಯಾಲು…’ ಅಂದರೆ, ಕೊಳಲಿಗೆ ಮೈಯೆಲ್ಲ ಗಾಯಗಳು, ಸುಮ್ಮನೆ ತುಟಿಗೆ ಸೋಕಿದರೆ ಚಂದದ ಗೀತೆಗಳು! ಇದೊಂಥರ ‘ತಾನೇ ಉರಿದರೂ ದೀಪವು ಮನೆಗೆ ಬೆಳಕ ತರುವುದು…’ ಎಂದಂತೆಯೇ.

ಮುಗಿಸುವ ಮುನ್ನ ಒಂದು ಆಲೋಚನೆ: ‘ಬಿದಿರಮ್ಮ ತಾಯಿ ಕೇಳೆ ಪದ್ಯ ಓದಿದಾಗ ‘ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ… ನೀನಾರಿಗಾದೆಯೋ ಎಲೈ ಮಾನವ ಹರಿ ಹರಿ ಗೋವು ನಾನು…’ ನೆನಪಾಗುತ್ತದೆ. ಹಾಗಾಗಿ ಇವತ್ತಿನ ಲೇಖನದ ಶೀರ್ಷಿಕೆ ‘ಕಳಲೆಯಿಂದ ಕೊಳಲವರೆಗೆ… ಕಾನನದ ಕಾಮಧೇನು’ ಅಂತಿಟ್ಟು, ಬಿದಿರನ್ನು ಕಾಮಧೇನುವಿಗೆ ಹೋಲಿಸಿದ್ದರೂ ಸಮಂಜಸವೇ ಆಗುತ್ತಿತ್ತು. ಅಲ್ಲವೇ?

-ಶ್ರೀವತ್ಸ ಜೋಶಿ

Leave a Reply

Your email address will not be published. Required fields are marked *

4 × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top