About Us Advertise with us Be a Reporter E-Paper

ಯಾತ್ರಾ panel 1

ಕಾಡು ಕಣಿವೆಯಲ್ಲೊಂದು ಕುರುಂಬಾ

ರಾಜು ಅಡಕಳ್ಳಿ

ರುಂಬಾ…ತುಂಬಾ ಅಪರೂಪದ ಹೆಸರು. ಅಷ್ಟೇ ಅಪರೂಪದ ರೆಸಾರ್ಟ್ ಕೂಡ ಹೌದು. ಸುತ್ತಲೂ ಕೋಟೆ ಕಟ್ಟಿಟ್ಟಂತಹದ ನೀಳ ವೃಕ್ಷಗಳ ನೀಲಗಿರಿ ಪರ್ವತ. ನಡುನಡುವೆ ಅಲ್ಲಲ್ಲಿ ಮೇಲಿನಿಂದ ಕೆಳಕ್ಕೆ ಬಾಗಿ ಬಳಕುತ್ತ ವಸುಂಧರೆಗೆ ಮುತ್ತಿಕ್ಕಲು ತವಕಿಸುವ ಹಾಲ್ನೊರೆಗಳ ಕಿರು ಜಲಪಾತಗಳ ವೈಭವ. ತಳದಲ್ಲಿ ಕನಸಿಗೆ ಕಾವು ಕೊಡುವಂಥ ರಂಗಸ್ಥಳದಂತೆ ಕಾಪಿಡುವ ಕುರುಂಬಾ ವಿಹಾರ ಧಾಮದ ವಿಲಾಸ. ಪಕೃತಿಯ ದಿವ್ಯದರ್ಶನ. ಮಂಜು ಮಾರುತಗಳ ನಿತ್ಯ ನಿರಂತರ ನರ್ತನ.

ಊಟಿ ಸಮೀಪದ ಕುನ್ನೂರು ಚಹಾ ತೋಟಗಳ ನೀಲಗಿರಿಯ ತಟದಲ್ಲಿ ಪ್ರವಾಸಿಗರಿಗೆ ಅದರಲ್ಲೂ ಮುಖ್ಯ ವಾಗಿ ನಿಸರ್ಗ ಪ್ರೇಮಿಗಳಿಗೆ ಆತಿಥ್ಯ, ಆನಂದಗಳ ತೊಟ್ಟಿಲಾ ಗಿರುವ ಕುರುಂಬಾ ತೀರಾ ವಿಭಿನ್ನ ರೆಸಾರ್ಟ್. ಕಾರಣ ಇಲ್ಲಿ ಯಾವತ್ತೂ ಸೆಖೆಯ ಸ್ಪರ್ಶವಿಲ್ಲ. ಸದಾ ತಂಪಿನ ಸಿಂಚನ. ಮಳೆಗಾಲದಲ್ಲಂತೂ ಇಲ್ಲಿಯ ಮೂವತ್ತು ಕಾಟೇಜುಗಳ ಒಳ ಹೊರಗೆಲ್ಲ ಮುಸುಕು ಮೋಡಗಳ ಚೆಲ್ಲಾಟ.

ದಟ್ಟ ಕಾಡಿನ ಇಳಿಜಾರಿನಲ್ಲಿ ಏಲಕ್ಕಿ, ಜಾಪತ್ರೆ, ಹಲಸಿನ ಗಿಡಮರಗಳ ಗೊಳಲಿನಲ್ಲೇ ಈ ಕಾಟೇಜುಗಳಿರುವುದರಿಂದ ಇವು ಅಪ್ಪಟ ಕಾಡು ಮನೆಗಳಂತೆ. ಹೀಗಾಗಿ ಮುಂಜಾನೆ ಸುಪ್ರಭಾತ ಹೇಳುತ್ತಾ ಎಚ್ಚರ ಗೊಳಿಸಲು ಇಲ್ಲಿಯ ತರಹೇವಾರಿ ಹಕ್ಕಿ ಪಕ್ಷಿಗಳ ಕಲರವವೇ ಸಾಕು. ಇಳಿಸಂಜೆಯಲ್ಲಿ ನೀರು ಕುಡಿ ಯಲು ಬರುವ ಆನೆ, ಕಾಡು ಕೋಣಗಳ ಸಾಕ್ಷಾತ್ ವೀಕ್ಷಣೆಯ ಭಾಗ್ಯವೂ ಈ ರೆಸಾರ್ಟ್‌ನ ಜಗುಲಿಯಿಂದಲೇ ಲಭ್ಯ!

ಹೀಗೆ ನೀಳಗಿರಿಯ ನೀಳ ನೈಸರ್ಗಿಕ ಉಮೇದು, ಉನ್ಮಾದಗಳ ಸಾಕ್ಷಾತ್ಕಾರವನ್ನು ಕಣ್ತುಂಬಿಕೊಳ್ಳಲು ರೆಸಾರ್ಟ್‌ನ ಹೊರಾವರಣ ದ ಬಂಡೆಗಲ್ಲುಗಳ ಮೇಲೆ ಅಟ್ಟಣಿಗೆಯಂತಿರುವ ನೇಚರ್ ರೆಸ್ಟೊರೆಂಟ್‌ಗಳಲ್ಲಿ ಕುಳಿತು ಇಣುಕಿದರೆ ಸಾಕು, ಛಂಗನೆ ಜಿಗಿಯುವ ಕೆಂದಳಿಲುಗಳು, ಮರಕೋತಿಯಾಡುವ ವಾನರ ಸೇವೆಗಳು… ಹೀಗೆ ನಿಗೂಢ ಅನಾವರಣ ಚುಮುಚುಮು ಚಳಿಯಲ್ಲಿ ಕುರುಂಬಾದ ಸಿಬ್ಬಂದಿ ನೀಡುವ ಬಿಸಿ ಬಿಸಿ ಚಿಕನ್ ತಂದೂರಿ, ಫಿಶ್ ಫ್ರೈ, ಕೊಟ್ಟೆ ಕಡಬುಗಳ ಬಟ್ಟಲನ್ನು ಎದುರಿಗಿಟ್ಟರೆ, ‘ಎಲ್ಲಾ ಮಾಯವೋ.. ಶಿವನೇ… ಎಂಬಂತೆ ಕೊನೆಯಲ್ಲಿ ಉಳಿಯುವುದು ಬಟ್ಟಲು ಮಾತ್ರ.

ಹ್ಹಾಂ! ಇಲ್ಲಿ ಮಧುಚಂದ್ರಕ್ಕಿಂತ ಹುಣ್ಣಿಮೆಯ ಚಂದ್ರನೇ ಹೆಚ್ಚು ರೋಮಾಂಚನಕಾರಿ. ಕಾರಣ ಇಲ್ಲಿ ಮರದ ಮೇಲೆ ನಿರ್ಮಿಸಲಾದ ‘ಟ್ರೀ ಟಾಪ್’ ರೆಸ್ಟೊ ರೆಂಟ್‌ನಲ್ಲಿ ಬಾರ್ಬಿಕ್ಯೂ ಜತೆಗೆ ಬಿಯರ್ ಹೀರುತ್ತಾ ಹುಣ್ಣಿಮೆಯ ಚಂದ್ರನೊಂದಿಗೆ ಲಲ್ಲೆಗೆರೆ ಯುವ ಕವಿ ಮನಸ್ಸೊಂದಿದ್ದರೆ, ಸದೃಶ್ಯ ಸುಖಾನಂದ!! ಚಾರಣ, ಪಕ್ಷಿ ವೀಕ್ಷಣೆ, ಪರ್ವತಾರೋಹಣ, ಸೈಕ್ಲಿಂಗ್, ಟೀ ಎಸ್ಟೇಟ್‌ನಲ್ಲಿ ಜೀಪ್ ಸಫಾರಿ, ಆಯು ರ್ವೇದ ಮಸಾಜ್… ಹೀಗೆ ಅತಿಥಿ ಗಳನ್ನು ಅನುಕ್ಷಣವೂ ಹೊಸತನಗಳಿಗೆ ಒಡ್ಡುವಂಥ ಹಲವು ಆಕರ್ಷಣೆಗಳ ಆಗರ ವಾಗಿದೆ ಈ ಕುರುಂಬಾ.

*ಕುರುಂಬಾ ಊಟಿಯಿಂದ ಅರ್ಧ ಗಂಟೆ ಪ್ರಯಾಣ.
*ಬೆಂಗಳೂರಿನಿಂದ ಕಾರಿನಲ್ಲಿ ಹೊರಟರೆ, ಆರು ತಾಸುಗಳ ಅವಧಿ
*ಮಳೆಗಾಲದಲ್ಲಿ ಅಧಿಕ ಮಳೆ, ಚಳಿಯೂ ಹೆಚ್ಚು.
*ಬೆಂಗಳೂರಿನಿಂದ ಹೊರಟರೆ, ಮಾರ್ಗ ‘ಬಂಡೀಪುರ ಅಭಯಾರಣ್ಯ’ದ  ಸಫಾರಿಯನ್ನೂ ಎಂಜಾಯ್ ಮಾಡಿ
ಮುಂದೆ ಸಾಗಬಹುದು.
*ಕುರುಂಬಾ ಬಹುಬೇಡಿಕೆಯ ರೆಸಾರ್ಟ್ ಆಗಿರುವುದರಿಂದ ಮುಂಗಡ ಬುಕ್ಕಿಂಗ್ ಅಗತ್ಯ.

Tags

Related Articles

Leave a Reply

Your email address will not be published. Required fields are marked *

Language
Close