About Us Advertise with us Be a Reporter E-Paper

ಅಂಕಣಗಳು

ಕಾರ್ಗಿಲ್ ಕದನ, ನಿನ್ನೆ ಕಾಲಿಯಾನ ಜನ್ಮದಿನ!

1999ರ ಹೊಸ ವರ್ಷಾಚರಣೆಗೆ ಎರಡು ದಿನ ಮೊದಲು. ಇಪ್ಪತ್ತೆರಡು ವರ್ಷದ ಸೌರಭ್ ಕಾಲಿಯಾ ನಾಲ್ಕನೇ ಜಾಟ್ ರೆಜಿಮೆಂಟ್ ಸೇರಲು ಹೊರಟಿದ್ದ. ಬೀಳ್ಕೊಡುವ ಸಲು ವಾಗಿ ಇಡೀ ಕುಟುಂಬವೇ ಅಮೃತಸರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು. ರೈಲು ಬಾಗಿಲ ಬಳಿ ನಿಂತ ಸೌರಭ್, ರೈಲು ಮರೆಯಾಗುವವರೆಗೂ ಅಮ್ಮನತ್ತ ಕೈಬೀಸುತ್ತಲೇ ಇದ್ದ. ಅದು ತನ್ನ ಅಂತಿಮ ವಿದಾಯ ಎಂದು ಬಹುಶಃ ಅವನಿಗೂ ಗೊತ್ತಿರಲಿಲ್ಲ. ಕರ್ತವ್ಯಕ್ಕೆ ಹಾಜರಾಗಿ 15 ದಿನಗಳಲ್ಲೇ, ಲೇಹ್‌ಗೆ ಪ್ರಯಾಣ ಬೆಳೆಸಬೇಕಾಗಿ ಬಂತು. ಅವನ ಮೊದಲ ಪೋಸ್ಟಿಂಗ್ ಜಮ್ಮು-ಕಾಶ್ಮೀರದ ಕಾರ್ಗಿಲ್ ಆಗಿತ್ತು.

ಆದರೆ ಸೌರಭ್‌ಗೆ ಡಾಕ್ಟರ್ ಆಗಬೇಕೆಂಬ ಉತ್ಕಟ ಇಚ್ಛೆಯಿತ್ತು. ವ್ಯಾಸಂಗ ಮಾಡುತ್ತಿರು ವಾಗ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಪರೀಕ್ಷೆಗೆ ಅರ್ಜಿ ಕರೆಯಲಾಗಿತ್ತು. ಸೌರಭ್‌ನ ಸ್ನೇಹಿತರು ಪರೀಕ್ಷೆಗೆ ಅರ್ಜಿ ಹಾಕಲು ನಿರ್ಧರಿಸಿದರು. ಪರೀಕ್ಷೆ ನೆಪದಲ್ಲಿ ಚಂಡೀಗಢಕ್ಕೆ ಹೋಗಿ ಒಂದು ದಿನ ಮಜಾ ಮಾಡ ಬಹುದೆಂಬ ಯೋಚನೆ-ಯೋಜನೆ ಅವರದ್ದು!

ಸೌರಭ್ ಕೂಡ ಅರ್ಜಿ ಹಾಕಿದ. ಪರೀಕ್ಷೆಯ ಹಿಂದಿನ ದಿನವೇ ಚಂಡೀಗಢಕ್ಕೆ ಬಸ್ ಹತ್ತಿದರು. ಮರುದಿನ ಎಲ್ಲರೂ ಪರೀಕ್ಷೆಗೆ ಚಕ್ಕರ್ ಹೊಡೆದು ಥಿಯೇಟರ್‌ಗೆ ಹೋದರೆ ಸೌರಭ್ ಮತ್ತು ಇನ್ನೊಬ್ಬ ಸಹಪಾಠಿ ಮಾತ್ರ ಪರೀಕ್ಷೆಗೆ ಹಾಜರಾದರು. ಒಂದು ವೇಳೆ ಪರೀಕ್ಷೆ ಬರೆಯದಿದ್ದರೆ ಮನೆಯಲ್ಲಿ ಯುದ್ಧವೇ ನಡೆಯುತ್ತದೆ ಎಂದು ಸೌರಭ್ ಸ್ನೇಹಿತರಿಗೆ ಕಾರಣ ಹೇಳಿದ್ದ. ರಿಸಲ್ಟ್ ಬಂದಾಗ ಪರೀಕ್ಷೆಗೆ ಹಾಜರಾಗಿದ್ದ ಸೌರಭ್ ಮತ್ತು ಅವನ ಸಹಪಾಠಿ ಇಬ್ಬರೂ ಪಾಸಾಗಿದ್ದರು. ಆದರೆ ಮೆಡಿಕಲ್ ಟೆಸ್ಟ್ ನಲ್ಲಿ ಸೌರಭ್ ಎರಡು ಬಾರಿ ತಿರಸ್ಕೃತನಾದ. ಮೊದಲ ಬಾರಿ, ಹೃದಯದಲ್ಲಿ ಗೊರ ಗೊರ ಶಬ್ದ ಬರುತ್ತದೆ ಎಂದು ಕಾರಣ ನೀಡಿದರು. ಎರಡನೇ ಬಾರಿ ಟಾನ್ಸಿಲ್ಸ್(ಶೀತಗಡ್ಡೆ) ಅಡ್ಡಿಯಾಯಿತು. ಆದರೆ ಆ ವೇಳೆಗಾಗಲೇ ಸೌರಭ್ ಡಾಕ್ಟರ್ ಆಗುವ ಇಚ್ಛೆಯನ್ನೇ ಮರೆತಿದ್ದ.

ಆರ್ಮಿ ಸೇರುವ ಆಸೆ ಮೊಳಕೆಯೊಡೆಯಲಾರಂಭಿಸಿತ್ತು. ಚಿಕಿತ್ಸೆಯ ಮೂಲಕ ದೈಹಿಕ ಸಮಸ್ಯೆಗಳನ್ನು ನಿವಾರಿಸಿಕೊಂಡ ಸೌರಭ್ ಕೊನೆಗೂ ಡೆಹ್ರಾಡೂನ್ ನಲ್ಲಿನ ‘ಇಂಡಿಯನ್ ಅಕಾಡೆಮಿ’ ಸೇರುವಲ್ಲಿ ಯಶಸ್ವಿಯಾದ. ಡೆಹ್ರಾಡೂನ್ ಮಿಲಿಟರಿ ಅಕಾಡೆಮಿ ಯಿಂದ ಪದವಿ ಪಡೆದು ಸೌರಭ್ ಹೊರಬರುವಾಗ, ಸೇನೆಗೆ ಸೇರಿದ ಕೂಡಲೇ ನಿನ್ನ ತಲೆಯಿಂದ ಮೆದುಳು ಹೊರ ತೆಗೆದು ಕೈಗೆ ಗನ್ ಕೊಡುತ್ತಾರೆ. ನೀನು ರಿಟೈರ್ಡ್ ಆದಾಗ ಗನ್ ಕಿತ್ತುಕೊಂಡು ಬ್ರೈನ್ ವಾಪಸ್ ಕೊಡುವುದನ್ನೇ ಮರೆಯುತ್ತಾರೆ’ ಎಂದು ವೈಭವ್ ಕೂಡ ಗೇಲಿ ಮಾಡಿದ್ದ. ಆದರೆ ಅರು ತಿಂಗಳ ನಂತರ ಅಂದರೆ 1999, ಜೂನ್ 6ರ ‘ಇಂಡಿಯನ್ ಎಕ್‌ಸ್ಪ್ರೆಸ್’ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ, ಸೈನಿಕನ ಜೀವನ ಗೇಲಿಯ ವಸ್ತುವಲ್ಲ ಎಂಬ ವಾಸ್ತವ ವೈಭವ್‌ನನ್ನು ದುರುಗುಟ್ಟಿ ನೋಡುತ್ತಿತ್ತು!

ಸೌರಭ್ ಮತ್ತು ಅವನ ಸಹ ಸೈನಿಕರು ಮೇ 1ರಿಂದ ಕಾಣೆಯಾಗಿದ್ದಾರೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ 1999, ಏಪ್ರಿಲ್ 30ರ ಮಧ್ಯಾಹ್ನವಷ್ಟೇ ಮನೆಗೆ ಕರೆ ಮಾಡಿದ್ದ ಸೌರಭ್, ವೈಭವನ 20ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದ. ಅಮ್ಮಾ, ಒಂದು ವೇಳೆ ನಾನು ಮತ್ತೆ ಕರೆ ಮಾಡದಿದ್ದರೆ ಗಾಬರಿಯಾಗಬೇಡ. ಮುಂದಿನ ಪೋಸ್ಟಿಂಗ್‌ಗಾಗಿ ದೂರ ತೆರಳಬೇಕಾಗಬಹುದು. ವಾಪಸ್ ಬಂದ ಕೂಡಲೇ ಫೋನ್ ಮಾಡುತ್ತೇನೆ ಎಂದಿದ್ದ. ಮೇ 10ರ ಹೊಂದಿದ್ದ ಸೌರಬ್‌ನ ಪತ್ರ ಮೇ 24ರಂದು ಬಂದಿತ್ತು. ಅಂದ ಮೇಲೆ, ಮೇ 1ರಿಂದ ಕಾಣೆಯಾಗಿರಲು ಹೇಗೆ ತಾನೇ ಸಾಧ್ಯ? ಅದೂ ಯಾರ ಗಮನಕ್ಕೂ ಬಾರದೆ 6 ಸೈನಿಕರು ಕಣ್ತಪ್ಪಿ ಹೋಗಲು ಹೇಗಾದೀತು? ಆದರೂ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅಮ್ಮನಿಗೆ ಹೇಳುವ ಸಂದರ್ಭ ಅದಾಗಿರಲಿಲ್ಲ.

ವಿಜಯಾ ಕಾಲಿಯಾಗೆ ಆರೋಗ್ಯ ಸರಿಯಿರಲಿಲ್ಲ. ಅಂದು ಕೆಲಸಕ್ಕೆ ತೆರಳಿರಲಿಲ್ಲ. ಯಾವುದೇ ಫೋನ್ ಬಂದರೂ ಉತ್ತರಿಸಬೇಡ. ರೆಸ್ಟ್ ತೆಗೆದುಕೊ ಎಂದು ಅಮ್ಮನಿಗೆ ತಿಳಿಸಿದ ವೈಭವ್, ನೇರವಾಗಿ ಅಪ್ಪನ ಆಫೀಸಿಗೆ ಹೋದ. ಮಧ್ಯಾಹ್ನವೇ ಡಾ.ಕಾಲಿಯಾ ಮನೆಗೆ ಬಂದರು. ‘ಏನಾಯಿತು?’ ಎಂದು ವಿಜಯಾ ಕೇಳಿದರು. ಅದು ಸೌರಭ್ ವಿಷಯ ಅನ್ನುತ್ತಾ ಪತ್ರಿಕೆಯನ್ನು ತೋರಿಸಿದರು. ಆದರೆ ಮೇ 12ರಂದು ಸೌರಭ್‌ಗೆ ರಜೆ ದೊರೆತಿದೆ. ಬರುವುದಕ್ಕಾಗುವುದಿಲ್ಲ. ಜೂನ್ 29ರಂದು ಮನೆಗೆ ಬಂದೇ ಬರುತ್ತೇನೆ. ಹೇಗೂ ನನ್ನ ಹುಟ್ಟುಹಬ್ಬವಿದೆಯಲ್ಲ ಎಂದು ಪ್ರಾಮಿಸ್ ಮಾಡಿದ್ದಾನೆ. ಹಾಗಿರುವಾಗ ಪತ್ರಿಕೆಯಲ್ಲಿ ಬಂದಿರುವ ಸುದ್ದಿಯಲ್ಲಿ ನಿಜಾಂಶವಿಲ್ಲ ಎಂದೇ ಆಕೆ ಪ್ರತಿಪಾದಿಸಿದರು. ಇಷ್ಟಕ್ಕೂ ಕಾಣೆಯಾಗಿದ್ದರೆ ಸೇನೆಯಿಂದ ಸಂದೇಶ ಬರುತ್ತಿತ್ತು ಎಂದರು.

ಆ ನಂಬಿಕೆಯನ್ನೇ ನಂಬಿ ಇತ್ತ ಚಿಂತಿತನಾದ ವೈಭವ್ ಚಂಡೀಗಢದಲ್ಲಿನ ‘ಇಂಡಿಯನ್ ಎಕ್‌ಸ್ಪ್ರೆಸ್’ ಕಚೇರಿಗೆ ಕರೆ ಮಾಡಿದಾಗ, ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಗೊಂಡಿರುವ ಸೈನಿಕನೊಬ್ಬ ಈ ವಿಷಯ ತಿಳಿಸಿದ ಎಂಬ ಉತ್ತರ ದೊರೆಯಿತು. ಹತಾಶೆಯಿಂದ ದಿಲ್ಲಿಯಲ್ಲಿರುವ ಮುಖ್ಯ ಕಚೇರಿಗೆ ಫೋನಾಯಿಸಿದರೆ ‘ಸೌರಭ್ ಮೇ 1ರಿಂದಲೇ ಕಾಣೆಯಾಗಿದ್ದಾನೆ’ ಎಂಬ ಪ್ರತಿಕ್ರಿಯೆ. ಆದರೆ ಮೇ 10ರ ದಿನಾಂಕ ಹೊಂದಿರುವ ಪತ್ರ ಬಂದಿರುವಾಗ, ಮೇ 1ರಂದು ಕಾಣೆಯಾಗಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ. ಹೇಗೋ ಮಾಡಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸಂಪರ್ಕಿಸಿದಾಗ ಭಯ ನಿಜವಾಗಿತ್ತು. ಸೌರಭ್ ಮೇ 15ರಿಂದ ಕಾಣೆಯಾಗಿದ್ದ.

ಸೌರಭ್‌ನನ್ನು ಹುಡುಕಲು ಹೋಗಿದ್ದ ಯುವ ಅಧಿಕಾರಿ ಲೆಫ್ಟಿನೆಂಟ್ ಅಮಿತ್ ಭಾರದ್ವಾಜ್ ಕೂಡ ಶತ್ರುಗಳ ಗುಂಡಿಗೆ ಆಹುತಿ ಯಾಗಿದ್ದ. ಹೌದು, ಮೇ 15ರಂದು ಗಸ್ತು ತಿರುಗಲು ಹೋಗಿದ್ದ ಕ್ಯಾಪ್ಟನ್ ಸೌರಭ್ ಕಾಲಿಯಾ, ಸಿಪಾಯಿಗಳಾದ ಅರ್ಜುನ್ ರಾಮ್, ಭನ್ವರ್ ಲಾಲ್ ಬಗಾರಿಯಾ, ಭಿಕಾರಾಮ್, ಮೂಲಾರಾಮ್ ಮತ್ತು ನರೇಶ್ ಸಿಂಗ್ ಅವರನ್ನು ಕರ್ಕ್ಸ ಸೆಕ್ಟರ್ ನ ಬಜ್ರಂಗ್ ಪೋಸ್ಟ್ ಬಳಿ ಪಾಕಿಸ್ತಾನಿ ಸೈನಿಕರು ಬಂಧಿಸಿದ್ದರು. ಮುಂದಿನದ್ದು ಕ್ರೂರ ಅಧ್ಯಾಯ. ಭಾರತೀಯ ಸೇನೆಗೆ ಶವಗಳನ್ನು ಹಸ್ತಾಂತರಿಸುವ ಮೊದಲು ಸತತ 22 ದಿನಗಳ ಕಾಲ ಅತ್ಯಂತ ಅಮಾನುಷವಾಗಿ ಹಿಂಸಿಸಲಾಗಿತ್ತು!

ಹಿಮಾಚಲ ಪ್ರದೇಶದ ಪಾಲಂಪುರಕ್ಕೆ ಶವ ಬಂದಾಗ ಅದು ಸೌರಭ್‌ನದ್ದೇ ಎಂದು ಗುರುತಿಸಲೂ ಸಾಧ್ಯವಾಗದಷ್ಟು ಹೀನಾಯ ರೂಪದಲ್ಲಿತ್ತು. ಅಂದು ತ್ರಿವರ್ಣ ಧ್ವಜದಲ್ಲಿ ಬಂದಿದ್ದು ಮಾಂಸದ ಮುದ್ದೆಯಾಗಿತ್ತು. ಸೌರಭ್‌ನ ಹುಬ್ಬುಗಳನ್ನು ಬಿಟ್ಟರೆ ಬೇರಾವುದೇ ಭಾಗಗಳನ್ನೂ ಗುರುತಿಸುವಂತಿರಲಿಲ್ಲ. ಕಣ್ಣು, ಕಿವಿ, ಮೂಗು, ದವಡೆ, ಗುಪ್ತಾಂಗ ಯಾವುವೂ ಇರಲಿಲ್ಲ, ಎಲ್ಲೆಡೆ ಯೂ ಸಿಗರೇಟಿನಿಂದ ಸುಟ್ಟ ಗುರುತುಗಳಿದ್ದವು. ಶತ್ರುವೇ ಆಗಿದ್ದರೂ ಅಂತಾರಾಷ್ಟ್ರೀಯ ನಿಯಮದಂತೆ ಬಂಧಿತ ಸೈನಿಕರಿಗೆ ನೀಡಬೇಕಾದ ಕನಿಷ್ಠ ಗೌರವ ಕೊಡುವುದು ಬಿಡಿ, ಪಾಕಿಸ್ತಾನ ಮಾನವೀಯತೆಯನ್ನೇ ಮರೆತಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ಮತ್ತಿತರು ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಸತ್ತಿರಬಹುದು ಎಂದರು ಪಾಕಿಸ್ತಾನದ ಮಾಜಿ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲ್ಲಿಕ್! ಆದರೆ ಮಾಂಸದ ಮುದ್ದೆಯಾಗಿ ಬಂದಿದ್ದ ಮಗನನ್ನು ಕಣ್ಣಾರೆ ಕಂಡಿದ್ದ ಡಾ.ಎನ್.ಕೆ. ಕಾಲಿಯಾ ಮಾತ್ರ ಅಂತಹ ಪೊಳ್ಳು ಮಾತುಗಳನ್ನು ನಂಬಲಿಲ್ಲ, ಸುಮ್ಮನಾಗಲೂ ಇಲ್ಲ.

ಪುತ್ರ ವಿಯೋಗದ ನೋವನ್ನೂ ನುಂಗಿಕೊಂಡು ಪಾಕಿಸ್ತಾನದ ಧೂರ್ತತನವನ್ನು, ಕ್ರೌರ್ಯವನ್ನು ಬಯಲಿಗೆಳೆಯಲು ಹೊರ ಟರು. ಪಾಕಿಸ್ತಾನವನ್ನು ಪ್ರಶ್ನಿಸಬೇಕೆಂದು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಬೇಕೆಂದು ಮನಮೋಹನ್ ಸಿಂಗ್ ಸರ್ಕಾರಕ್ಕೆ ಮನವಿ ಮಾಡಿದರು. ಡಾ.ಕಾಲಿಯಾ ಮನವಿಗೆ ಓಗೊಟ್ಟ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಸೌರಭ್ ಕಾಲಿಯಾಗೆ ನೀಡಿದ ಚಿತ್ರಹಿಂಸೆ ಹಾಗೂ ಬರ್ಬರ ಕೊಲೆಯ ವಿಚಾರವನ್ನು ವಿಶ್ವಸಂಸ್ಥೆ ಎದುರು ಪ್ರಸ್ತಾಪಿಸಿದರು. ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಮುಂದೆಯೂ ಅಹವಾಲು ಇಟ್ಟರು. ಏನೂ ಪ್ರಯೋಜನವಾಗಲಿಲ್ಲ. ಕಷ್ಟ ಪರಿಹಾರವಾದ ಮೇಲೆ ಜನ ದೇವರನ್ನು, ಯುದ್ಧ ಮುಗಿದ ಮೇಲೆ ಸರಕಾರ ಸೈನಿಕನನ್ನು ಮರೆಯುತ್ತದೆ ಎಂಬ ಮಾತಿ ನಂತೆಯೇ ಆಯಿತು. ನಮ್ಮನ್ನಾಳುವವರು ಸಂವೇದನೆಯನ್ನೇ ಕಳೆದುಕೊಂಡರು!

2004ರಲ್ಲಿ ವಾಜಪೇಯಿ ಸರ್ಕಾರ ಪತನಗೊಳ್ಳುವುದರೊಂದಿಗೆ ಕಾರ್ಗಿಲ್ ವಿಜಯಾಚರಣೆಯನ್ನೇ ಕೈಬಿಟ್ಟ ಕಾಂಗ್ರೆಸ್ಸಂತೂ ಅಧಿಕಾರ ಹಾಗೂ ಅಹಂಗಾಗಿ ತಾನು ಯಾವ ಮಟ್ಟಕ್ಕೂ ಇಳಿಯುವ ಪಕ್ಷವೆಂಬುದನ್ನು ಸಾಬೀತು ಮಾಡತೊಡಗಿತು. ಹಾಗಾಗಿ ಕ್ಯಾಪ್ಟನ್ ಸೌರಭ್ ಕಾಲಿಯಾ ಹಾಗೂ ನಮ್ಮ ಇನ್ನಿತರ ಐವರು ಸೈನಿಕರನ್ನು ಬರ್ಬರ ಹಿಂಸೆಗೆ ಗುರಿ ಮಾಡಿ ಕೊಲ್ಲಲಾಗಿರುವ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ಪ್ರಸ್ತಾಪಿಸಬೇಕೆಂದು ನಮ್ಮ ಭಾರತ ಸರಕಾರಕ್ಕೆ ನಿರ್ದೇಶನ ನೀಡಿ ಎಂದು ಸೌರಭ್ ಕಾಲಿಯಾ ತಂದೆ ಎನ್.ಕೆ.ಕಾಲಿಯಾ ಸುಪ್ರೀಂಕೋರ್ಟ್‌ನಲ್ಲಿ ಕೇಸು ಹಾಕಬೇಕಾಗಿ ಬಂತೆಂದರೆ, ನಮ್ಮ ದೇಶವನ್ನು ಈ ಹಿಂದೆ ಆಳಿದವರ ಮನಸ್ಥಿತಿ, ಧೋರಣೆ ಎಂಥದ್ದು ಎಂದು ಅರ್ಥವಾಗುವುದಿಲ್ಲವೆ? ಇದು ಭಾರತ-ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಚಾರ.

ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತೆಗೆದುಕೊಂಡು ಹೋಗುವುದಕ್ಕಾಗುವುದಿಲ್ಲ ಎಂದು ಆಗಿನ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು! ಇದನ್ನೆಲ್ಲ ಏಕೆ ಪ್ರಸ್ತಾಪಿಸಲಾಗುತ್ತಿದೆಯೆಂದರೆ ಜೂನ್ 29 ಕ್ಯಾಪ್ಟನ್ ಸೌರಭ್ ಕಾಲಿಯಾನ ಜನ್ಮ ದಿನ. ಪ್ರತಿ ವರ್ಷ ಜುಲೈ 26 ಬಂತೆಂದರೆ ದೇಶವಾಸಿಗಳಾದ ನಾವು ‘ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸುತ್ತೇವೆ, ನಮ್ಮ ಗಡಿ ರಕ್ಷಣೆಗಾಗಿ ಮಡಿದ 527 ಸೈನಿಕರನ್ನು ನೆನಪಿಸಿಕೊಳ್ಳುತ್ತೇವೆ. ಹಾಗೆ ನೆನಪಿಸಿಕೊಳ್ಳುವಾಗಲೆಲ್ಲ ಮನಸ್ಸು ಆರ್ದ್ರವಾಗುತ್ತದೆ.

ಪ್ರತಾಪ್ ಸಿಂಹ

ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದು ಪತ್ರಕರ್ತನಾಗಿ 15ವರ್ಷ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ಪತ್ರಿಕೋದ್ಯಮಕ್ಕಾಗಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಮತ್ತು ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಪತ್ರಕರ್ತ ಎಂಬ ಹೆಗ್ಗಳಿಕೆ. 2005ರಲ್ಲಿ ಶಿವಮೊಗ್ಗದ ಶ್ರೀಗಂಧ ಚಾರಿಟೆಬಲ್ ಟ್ರಸ್ಟ್‌ನ ಪ್ರತಿಭಾನ್ವಿತ ಯುವ ಪತ್ರಕರ್ತ ಪುರಸ್ಕಾರ ಹಾಗೂ ಪೇಜಾವರ ಶ್ರೀಗಳಿಂದ ಸನ್ಮಾನ ಮತ್ತು 2008ರಲ್ಲಿ ಅಂಕಣ ಬರಹಕ್ಕಾಗಿ (ಬೆತ್ತಲೆ ಜಗತ್ತು) ನೀಡಿದ ಮೊಟ್ಟಮೊದಲ ಆರ್ಯಭಟ ಪ್ರಶಸ್ತಿ. ಇವಿಷ್ಟು ಇವರ ಸಾಧನೆಗಳಗೆ ಸಿಕ್ಕ ಗೌರವವಾದರೆ, ‘ನರೇಂದ್ರ ಮೋದಿ; ಯಾರೂ ತುಳಿಯದ ಹಾದಿ‘, ‘ಟಿಪ್ಪುಸುಲ್ತಾನ: ಸ್ವಾತಂತ್ರವೀರನಾ?’, ‘ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?’ ಇವರ ಪುಸ್ತಕಗಳು. ಪ್ರಸ್ತುತ ಮೖಸೂರಿನ ಬಿಜೆಪಿ ಸಂಸದ. ರಾಜಕಾರಣಿಯಾದರೂ ಬರವಣಿಗೆ ನಿಂತಿಲ್ಲ. ಎಂದಿನಂತೆ ಈಗಲೂ ಇವರ ಬರವಣಿಗೆ ಭರ್ಜಿಗಿಂತ ನೇರ, ಮಿರ್ಚಿಗಿಂತ ಖಾರ, ಓದಿ ಪ್ರತೀ ಶನಿವಾರ, ಬೆತ್ತಲೆ ಜಗತ್ತು!

Related Articles

Leave a Reply

Your email address will not be published. Required fields are marked *

Language
Close