ಗಡಿಯಾರ ಪ್ರದಕ್ಷಿಣಾಕಾರದಲ್ಲೇ ಸುತ್ತುತ್ತದೇಕೆ?

Posted In : ಅಂಕಣಗಳು, ತಿಳಿರು ತೋರಣ

ಅಸಾಮಾನ್ಯ ಕುತೂಹಲಿಗಳ ತಲೆಯಲ್ಲಿ ಇಂತಹ ಪ್ರಶ್ನೆಗಳು ಆಗಾಗ ಮೂಡುವುದಿದೆ. ಹಾಗಂತ ಅವರೇನು ಪ್ರತಿಯೊಂದನ್ನೂ ಉಲ್ಟಾ ಯೋಚಿಸುತ್ತಾರೆ ಎಂದಾಗಲೀ ವಿತಂಡವಾದ ಮಾಡುತ್ತಾರೆ ಎಂದಾಗಲೀ ಅಲ್ಲ. ಗಡಿಯಾರದಲ್ಲಿ 1ರಿಂದ 12ರವರೆಗಿನ ಅಂಕಿಗಳು ಪ್ರದಕ್ಷಿಣಾಕಾರದಲ್ಲಿ ಏರಿಕೆ ಕ್ರಮದಲ್ಲಿ ಇರುವುದು ಮತ್ತು ಅದರಿಂದಾಗಿ ಗಂಟೆ, ನಿಮಿಷ, ಸೆಕೆಂಡಿನ ಮುಳ್ಳುಗಳು ಪ್ರದಕ್ಷಿಣಾಕಾರದಲ್ಲಿಯೇ ಸುತ್ತುವುದು- ಈ ಕ್ರಮ ಮೊದಲು ಯಾರಿಗೆ ಹೊಳೆಯಿತು? ಅದರ ಹಿಂದೆ ಏನು ತರ್ಕ ಇತ್ತು? ಈ ರೀತಿಯ ಸಹಜ ಕುತೂಹಲವಷ್ಟೇ ಪ್ರಶ್ನೆಗೆ ಕಾರಣ. ಪ್ರದಕ್ಷಿಣಾಕಾರ ಇದ್ದದ್ದನ್ನು ಏಕಾಏಕಿ ಬದಲಾಯಿಸಬೇಕು ಎಂಬ ಹುಚ್ಚು ವಾದವೇನಲ್ಲ. ಭೂಮಿಯು ತನ್ನದೇ ಅಕ್ಷದಲ್ಲಿ ಬುಗುರಿಯ ಹಾಗೆ, ಸೂರ್ಯನ ಸುತ್ತಲೂ ಗಾಣದೆತ್ತಿನ ಹಾಗೆ, ಅಪ್ರದಕ್ಷಿಣಾಕಾರದಲ್ಲಿ ಸುತ್ತುತ್ತದೆ.

ಶುಕ್ರ ಮತ್ತು ಯುರೇನಸ್ ಹೊರತುಪಡಿಸಿ ಮಿಕ್ಕೆಲ್ಲ ಗ್ರಹಗಳು ಸೂರ್ಯನ ಸುತ್ತ ಅಪ್ರದಕ್ಷಿಣಾಕಾರದಲ್ಲೇ ಸುತ್ತುತ್ತವೆ. ಚಂದ್ರನು ಭೂಮಿಯ ಸುತ್ತ ಸುತ್ತುವುದೂ ಅಪ್ರದಕ್ಷಿಣಾಕಾರದಲ್ಲೇ. ಓಟದ ಸ್ಪರ್ಧೆಗಳಲ್ಲಿ ಕ್ರೀಡಾಳುಗಳು ಅಪ್ರದಕ್ಷಿಣಾಕಾರವಾಗಿ ಓಡುತ್ತಾರೆ. ಅಂದಮೇಲೆ ಗಡಿಯಾರದ ಚಲನೆಯನ್ನೇಕೆ ನಾವು ಪ್ರದಕ್ಷಿಣಾಕಾರದಲ್ಲಿರಲಿ ಎಂದು ನಿರ್ಧರಿಸಿದೆವು? ಇಂಗ್ಲಿಷ್ ಭಾಷೆಯಲ್ಲಂತೂ clockwise  ಎಂಬ ಪದವೇ ಹುಟ್ಟಿಕೊಂಡಿದೆ, ಪ್ರದಕ್ಷಿಣಾಕಾರ ಎಂಬ ಅರ್ಥದಲ್ಲಿ. ಹೀಗೇಕೆ? ನೀವು ಈ ಕುರಿತು ಯಾವಾಗಾದ್ರೂ ಯೋಚಿಸಿದ್ದೀರಾ?

ಉತ್ತರ ಏನು ಗೊತ್ತೇ? ಉತ್ತರವೇ ಉತ್ತರ! ಮಾನವಕುಲದ ನಾಗರಿಕತೆ ಬೆಳೆದದ್ದು ಬಹುಪಾಲು ಭೂಮಿಯ ಉತ್ತರಾರ್ಧ ಗೋಲದಲ್ಲಿ. ಗಡಿಯಾರದ ಚಲನೆ ಪ್ರದಕ್ಷಿಣಾಕಾರವೆಂದು ನಿರ್ಧಾರವಾಗುವುದಕ್ಕೆ ಅದೇ ಕಾರಣ! ಬಾಹ್ಯಾಕಾಶದಿಂದ (ಭೂಮಿಯಿಂದ ಸುಮಾರು 220 ಮೈಲುಗಳಷ್ಟು ಎತ್ತರದಲ್ಲಿರುವ ಇಂಟರ್‌ನ್ಯಾಶನಲ್ ಸ್ಪೇಸ್ ಸ್ಟೇಶನ್‌ನಿಂದ ಅಂತಿಟ್ಕೊಳ್ಳೋಣ) ಭೂಗೋಲದ ಉತ್ತರಧ್ರುವವನ್ನು ನೋಡಿದರೆ ಭೂಮಿಯು ತನ್ನ ಅಕ್ಷದಲ್ಲಿ ಅಪ್ರದಕ್ಷಿಣಾಕಾರವಾಗಿ ತಿರುಗುವುದು ಗೊತ್ತಾಗುತ್ತದೆ. ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದು ನಮಗೆ ಭಾಸವಾಗುವುದು ಅದೇ ಕಾರಣಕ್ಕೆ. ಈಗ, ಸುಮಾರು 5000 ವರ್ಷಗಳಷ್ಟು ಹಿಂದಕ್ಕೆ ಹೋಗೋಣ. ಆಗಿನ್ನೂ ಗಡಿಯಾರಗಳು, ಕ್ಯಾಲೆಂಡರ್‌ಗಳೆಲ್ಲ ಇರಲಿಲ್ಲ. ಆದರೂ ಸೂರ್ಯ, ಭೂಮಿ, ಹಗಲು-ರಾತ್ರಿ ಎಲ್ಲ ಇದ್ದುವಷ್ಟೆ? ಕ್ರಿ.ಪೂ 3500ರ ಹೊತ್ತಿಗೆ ಪ್ರಾಚೀನ ಮೆಸಪೊಟೊಮಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಕಾಲಗಣನೆಯ ಕಲ್ಪನೆ ಇಟ್ಟುಕೊಂಡಿದ್ದರು. ಒಂದು ಥರದ ‘ನೆರಳು ಗಡಿಯಾರ’ಗಳ ಬಳಕೆ ಆರಂಭಿಸಿದ್ದರು.

ಅವು ಆಮೇಲಿನ ‘ಸನ್ ಡಯಲ್’ ಗಡಿಯಾರದಷ್ಟು ನಿಖರತೆಯುಳ್ಳವುಗಳಲ್ಲ. ಕ್ರಿ.ಪೂ 1500ರ ಸುಮಾರಿನಲ್ಲಿ ಸನ್ ಡಯಲ್ ಗಡಿಯಾರಗಳು ಹೆಚ್ಚುಹೆಚ್ಚು ಬಳಕೆಯಾಗತೊಡಗಿದವು. ಅವುಗಳ ನಿಖರತೆ ಹೆಚ್ಚು. ಮುಂದೆ ಕ್ರಿ.ಶ 14ನೆಯ ಶತಮಾನದಲ್ಲಿ ಯಾಂತ್ರಿಕ ಗಡಿಯಾರಗಳ ಆವಿಷ್ಕಾರವಾದಾಗ, ಆರಂಭದಲ್ಲಿ ಅಷ್ಟೊಂದು ನಿಖರತೆ ಸಾಧಿಸಲಾಗದಿದ್ದಾಗ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಅವುಗಳನ್ನು ಸನ್ ಡಯಲ್ ಗಡಿಯಾರ ತೋರಿಸುವ ಸಮಯಕ್ಕೆ ಸರಿಹೊಂದಿಸುವುದೂ ಇತ್ತಂತೆ.
ಸನ್ ಡಯಲ್ ಗಡಿಯಾರ- ಸರಳವಾಗಿ ಹೇಳುವುದಾದರೆ ನೆಲದಲ್ಲಿ ಲಂಬವಾಗಿ ನೆಟ್ಟ ಒಂದು ಕೋಲು. ಅದರ ಸುತ್ತ ನೆಲದ ಮೇಲೆ ಅಂಕಿಗಳು, ವಿಭಜಕ ರೇಖೆಗಳ ಗುರುತುಗಳು. ಕೋಲಿನ ನೆರಳು ಯಾವ ಅಂಕಿ/ವಿಭಜಕದ ಮೇಲೆ ಇದೆ ಎಂಬುದನ್ನವಲಂಬಿಸಿ ಸಮಯ ಎಷ್ಟಾಯ್ತೆಂದು ನಿರ್ಧಾರ. ನೆನಪಿಡಿ, ಈ ಪ್ರಯೋಗಗಳು ಕ್ರಿಸ್ತಪೂರ್ವದಲ್ಲಿ ಆರಂಭವಾದದ್ದು ಏಷ್ಯಾ ಮತ್ತು ಯುರೋಪ್ ಖಂಡಗಳ ಪ್ರದೇಶದಲ್ಲಿ. ಅಂದರೆ ಭೂಗೋಲದ ಉತ್ತರಾರ್ಧದಲ್ಲಿ ಸರಿಸುಮಾರು ಕರ್ಕಾಟಕವೃತ್ತದ ಆಸುಪಾಸಿನ ಪ್ರದೇಶದಲ್ಲಿ. ಅಲ್ಲಿ ಸನ್ ಡಯಲ್ ಗಡಿಯಾರದ ನೆರಳಿನ ಚಲನೆ ಹೇಗಿರುತ್ತದೆಂದು ಸೂಕ್ಷ್ಮವಾಗಿ ಗಮನಿಸಿ. ಬೆಳಗ್ಗೆ ಸೂರ್ಯ ಪೂರ್ವದಲ್ಲಿದ್ದಾಗ ಕೋಲಿನ ನೆರಳು ಪಶ್ಚಿಮದಲ್ಲಿರುತ್ತದೆ. ಹೊತ್ತು ಏರಿದಂತೆಲ್ಲ, ಅಂದರೆ ಮಧ್ಯಾಹ್ನವಾದಾಗ ಸೂರ್ಯ ನೆತ್ತಿಯ ಮೇಲಿದ್ದಾನೆ ಅಂತನಿಸಿದರೂ ವಾಸ್ತವವಾಗಿ ದಕ್ಷಿಣದಿಕ್ಕಿನ ಕಡೆಗಿರುತ್ತಾನೆ. ಹಾಗಾಗಿ ಕೋಲಿನ ನೆರಳು ಕಡಿಮೆ ಉದ್ದದ್ದಾದರೂ ಉತ್ತರ ದಿಕ್ಕಿಗೆ ಚಾಚಿದ್ದಿರುತ್ತದೆ.

ಸಂಜೆ ಹೊತ್ತು ಸೂರ್ಯ ಪಶ್ಚಿಮ ದಿಕ್ಕಿಗೆ ಬಂದಾಗ ಕೋಲಿನ ನೆರಳು ಪೂರ್ವದ ಕಡೆಗಿರುತ್ತದೆ. ಒಟ್ಟಿನಲ್ಲಿ ಮುಂಜಾನೆಯಿಂದ ಸಂಜೆವರೆಗಿನ ನೆರಳಿನ ಚಲನೆ ಪಶ್ಚಿಮದಿಂದ ಆರಂಭಗೊಂಡು ಉತ್ತರದ ಮೂಲಕ ಪೂರ್ವಕ್ಕೆ ಸಾಗಿರುತ್ತದೆ. ಅಂದರೆ, ಅರ್ಧವೃತ್ತವೇ ಹೌದಾದರೂ ಅದು ಪ್ರದಕ್ಷಿಣೆ ರೀತಿಯದೇ.  ಮಧ್ಯಪ್ರಾಚೀನ ಯುಗದಲ್ಲಿ ಕಾಲಗಣನೆ ಈ ರೀತಿಯ ಸನ್ ಡಯಲ್ ಗಡಿಯಾರಗಳಿಂದಲೇ ನಡೆಯುತ್ತಿತ್ತು. ಕೋಲಿನ ನೆರಳಿನ ಪ್ರದಕ್ಷಿಣಾಕಾರ ಚಲನೆ ಎಲ್ಲರ ಮನಸ್ಸಿನಲ್ಲಿ ಎರಕವಾಗಿ ಹೋಗಿತ್ತು. ಹಾಗಾಗಿ ಮುಂದೆ ಕ್ರಿ.ಶ 14ನೆಯ ಶತಮಾನದಲ್ಲಿ ಯಾಂತ್ರಿಕ ಗಡಿಯಾರಗಳ ಆವಿಷ್ಕಾರದ ವೇಳೆ ಅವುಗಳಲ್ಲಿ ಅಂಕಿಗಳನ್ನು ಬರೆಯುವ ಕ್ರಮ, ಮುಳ್ಳುಗಳ ಚಲನೆಯ ಕ್ರಮ ಸಹಜವಾಗಿಯೇ ಪ್ರದಕ್ಷಿಣಾಕಾರ ಪಡೆದುಕೊಂಡಿತು. ಚರ್ಚ್ ಗೋಪುರಗಳ ಮೇಲೆ, ಕ್ಯಾಥೀಡ್ರಲ್‌ಗಳ ಮೇಲೆ ದೊಡ್ಡ ಗಡಿಯಾರಗಳು ಸ್ಥಾಪನೆಯಾದವು. ಅವುಗಳಲ್ಲಿ ಅಂಕಿಗಳ ಕ್ರಮ, ಮುಳ್ಳುಗಳ ಚಲನೆ ಪ್ರದಕ್ಷಿಣಾಕಾರದಲ್ಲಿಯೇ ಇದ್ದುದರಿಂದ ಜನಸಾಮಾನ್ಯರಿಗೆ ‘ಗಡಿಯಾರ’ ಎಂದರೆ ಹೀಗೆಯೇ ಎಂದು ಮನಸ್ಸಿನಲ್ಲಿ ಅಚ್ಚೊತ್ತಿತು.

ಇಲ್ಲೊಂದು ಕುತೂಹಲದ ಸಂಗತಿ ಇದೆ- ಗಡಿಯಾರಗಳು ಪ್ರದಕ್ಷಿಣಾಕಾರ ಸುತ್ತುವ ಸಂಪ್ರದಾಯ ಹಳೇ ಕಾಲದಿಂದ ಬಂದಿದೆಯಾದರೂ clockwise ಎಂಬ ಪದಪ್ರಯೋಗ (ಪ್ರದಕ್ಷಿಣಾಕಾರ ಎಂಬ ಅರ್ಥದಲ್ಲಿ) ಇಂಗ್ಲಿಷ್ ಭಾಷೆಯಲ್ಲಿ ಕ್ರಿ.ಶ 1870ರವರೆಗೂ ಇರಲಿಲ್ಲವಂತೆ! Clock ಎಂಬ ಪದ ಇಂಗ್ಲಿಷ್ ಭಾಷೆಗೆ ಬಂದದ್ದು ಕ್ರಿ.ಶ 14ನೆಯ ಶತಮಾನದಲ್ಲಿ, ಯಾಂತ್ರಿಕ ಗಡಿಯಾರಗಳ ಆವಿಷ್ಕಾರದ ಸಂದರ್ಭದಲ್ಲಿ. ಆ ಪದದ ಮೂಲ ಡಚ್, ಫ್ರೆಂಚ್, ಅಥವಾ ಲ್ಯಾಟಿನ್ ಭಾಷೆಗಳಲ್ಲಿ ಹೆಚ್ಚೂಕಡಿಮೆ ಅದೇ ಉಚ್ಚಾರವಿರುವ ಪದ, ಗಂಟೆ ಬಡಿಯುವುದು ಎಂಬ ಅರ್ಥದ್ದು, ಇರಬಹುದೆಂದು ಭಾಷಾಶಾಸ್ತ್ರಜ್ಞರ ಅಭಿಪ್ರಾಯ. ಮೊದಮೊದಲು ಗಡಿಯಾರದ ಮುಖವಿನ್ಯಾಸಕ್ಕಿಂತ ಅದು ಸಮಯಕ್ಕೆ ಸರಿಯಾಗಿ ಗಂಟೆ ಬಡಿಯುವುದಕ್ಕೆ ಹೆಚ್ಚು ಪ್ರಾಮುಖ್ಯವಿದ್ದದ್ದು. 14ನೆಯ ಶತಮಾನದಲ್ಲಿ ತಯಾರಾದ ಒಂದು ಗಡಿಯಾರ ಇಂಗ್ಲೆಂಡ್‌ನ ಸೊಮರ್‌ಸೆಟ್ ವೆಲ್ಸ್ ಕ್ಯಾಥೀಡ್ರಲ್‌ನಲ್ಲಿ ಈಗಲೂ ಚಲನೆಯಲ್ಲಿದೆಯಂತೆ! 2010ರವರೆಗೂ ಅದನ್ನು ವಾರಕ್ಕೆ ಮೂರು ಸರ್ತಿ ಕೈಯಿಂದ ಚಾವಿ ಕೊಟ್ಟು (ಒಮ್ಮೆ ಕೊಡುವಾಗ 800 ಸುತ್ತು) ನಡೆಸುತ್ತಿದ್ದದ್ದು. 2010ರಲ್ಲಿ ಅದಕ್ಕೆ ಎಲೆಕ್ಟ್ರಾನಿಕ್ ಮೋಟರ್ ಅಳವಡಿಸಲಾಯ್ತಂತೆ.

ಗಡಿಯಾರದಲ್ಲಿ ಅಂಕಿಗಳ ಕ್ರಮ ಮತ್ತು ಮುಳ್ಳುಗಳ ತಿರುಗುವಿಕೆ ಪ್ರದಕ್ಷಿಣಾಕಾರದಲ್ಲಿರುವುದಕ್ಕೆ ಇನ್ನೊಂದು ಕಾರಣವನ್ನು ಕೆಲವರು ಕೊಡುವುದಿದೆ. ಅದೇನೆಂದರೆ ಪ್ರಪಂಚದ ಹೆಚ್ಚಿನೆಲ್ಲ ಲಿಪಿಗಳಲ್ಲಿ ಬರೆಯುವುದು ಮತ್ತು ಓದುವುದು ಎಡದಿಂದ ಬಲಕ್ಕೆ. ಹಾಗಾಗಿ ಪ್ರದಕ್ಷಿಣಾಕಾರ ಸಹಜವೇ ಆಗಿದೆ ಎಂದು. ಭಾರತೀಯರು ಕಾಲಗಣನೆಯಲ್ಲಿ ಆಗಲೇ ಸಾಕಷ್ಟು ಮುಂದುವರಿದಿದ್ದರಾದರೂ ಗಡಿಯಾರದ ಕಾನ್ಸೆಪ್ಟನ್ನು ಕಲ್ಪಿಸಿಕೊಂಡಿದ್ದರೋ ಇಲ್ಲವೋ ತಿಳಿಯದು. ಸಂಧ್ಯಾವಂದನೆಯಲ್ಲಿ ದಿಶಾಧಿಪತಿಗಳಿಗೆ ನಮಿಸುವಾಗ ಬೆಳಗ್ಗೆ ಪೂರ್ವ (ಇಂದ್ರ), ಮಧ್ಯಾಹ್ನ ಉತ್ತರ (ಕುಬೇರ), ಸಂಜೆ ಪಶ್ಚಿಮ (ವರುಣ)ನಿಂದ ಆರಂಭಿಸಿದರೂ ಪ್ರದಕ್ಷಿಣಾಕಾರ ಕ್ರಮದಲ್ಲೇ ಮುಂದುವರಿಯುವುದು. ಅಪ್ರದಕ್ಷಿಣಾಕಾರವಾಗಿ ಮಾಡುವುದೆಲ್ಲವೂ ಅಶುಭ, ಶ್ರಾದ್ಧಾದಿ ಅಪರಕರ್ಮಗಳಲ್ಲಿ ಮಾತ್ರ ಎಂಬ ನಂಬಿಕೆ ಭಾರತೀಯರಲ್ಲಿದೆ. ಅಂದಮೇಲೆ ಗಡಿಯಾರ ಅಪ್ರದಕ್ಷಿಣಾಕಾರವಾಗಿ ಸುತ್ತುವುದನ್ನು ಭಾರತೀಯರು ಕನಸುಮನಸಲ್ಲೂ ಒಪ್ಪಿಕೊಳ್ಳಲಾರರು.

ಪ್ರಾಚೀನ ಭಾರತೀಯರ ಕಾಲಗಣನೆಯ ಕೌಶಲವನ್ನು ನಾವು ರಾಜಸ್ಥಾನದ ಜೈಪುರದಲ್ಲಿರುವ ಜಂತರ್-ಮಂತರ್‌ನಲ್ಲಿ ಕಾಣಬಹುದು. ಬೃಹದ್ಗಾತ್ರದ ಹತ್ತೊಂಬತ್ತು ಬೇರೆಬೇರೆ ಉಪಕರಣಗಳು ಕಾಲಮಾಪನ ಮತ್ತು ಆಕಾಶವೀಕ್ಷಣೆಗೆ ಬಳಸುತ್ತಿದ್ದವಂಥವು ಅಲ್ಲಿವೆ. ಸುಮಾರು 27 ಮೀಟರ್ ಎತ್ತರದ ‘ಸಾಮ್ರಾಟ್ ಯಂತ್ರ’ ಶಿಲೆಯಿಂದ ರಚಿಸಿದ ಡಯಲ್ ಸಹ ಜಂತರ್-ಮಂತರ್‌ನ ಒಂದು ಪ್ರಮುಖ ಆಕರ್ಷಣೆ. ಆದರೆ ಪ್ರಪಂಚದ ಅತ್ಯಂತ ದೊಡ್ಡ ಡಯಲ್‌ನ ಗಡಿಯಾರ ಎಂಬ ಖ್ಯಾತಿ ಇರುವುದು ಮೆಕ್ಕಾದಲ್ಲಿರುವ ಅಬ್ರಜ್ ಆಲ್ ಬೈಟ್ ಗೋಪುರದ ಗಡಿಯಾರದ್ದು. ಅದರ ವ್ಯಾಸ ಬರೋಬ್ಬರಿ 43 ಮೀಟರ್‌ಗಳಷ್ಟಿದೆಯಂತೆ!

ಸನ್ ಡಯಲ್ ಮತ್ತು ಯಾಂತ್ರಿಕ ಗಡಿಯಾರಗಳ ಆವಿಷ್ಕಾರ ಭೂಗೋಲದ ಉತ್ತರಾರ್ಧದಲ್ಲಿ ಆಯ್ತು ಹಾಗಾಗಿ ಗಡಿಯಾರದ ಚಲನೆ ಪ್ರದಕ್ಷಿಣಾಕಾರದ್ದಾಯ್ತು ಎಂದು ಆರಂಭದಲ್ಲಿ ಹೇಳಿದೆನಷ್ಟೆ? ಒಂದುವೇಳೆ ಭೂಗೋಲದ ದಕ್ಷಿಣಾರ್ಧದಲ್ಲಿ, ಮಕರ ವೃತ್ತದ ಆಸುಪಾಸಿನ ಪ್ರದೇಶದಲ್ಲಿ ಆ ಆವಿಷ್ಕಾರವಾಗುತ್ತಿದ್ದರೆ ಗಡಿಯಾರದ ಚಲನೆ ಅಪ್ರದಕ್ಷಿಣಾಕಾರದಲ್ಲಿ ಇರುತ್ತಿತ್ತೋ ಏನೋ! ಏಕೆಂದರೆ, ಸನ್ ಡಯಲ್‌ನಲ್ಲಿ ಕೋಲಿನ ನೆರಳು ಅಲ್ಲಿ ಅಪ್ರದಕ್ಷಿಣಾಕಾರದಲ್ಲಿ- ಮುಂಜಾನೆ ಪಶ್ಚಿಮ, ಮಧ್ಯಾಹ್ನ ದಕ್ಷಿಣ, ಸಂಜೆ ಪೂರ್ವದಲ್ಲಿ ಇರುತ್ತದೆ. ಅದನ್ನು ಕಂಡವರು ಯಾಂತ್ರಿಕ ಗಡಿಯಾರಗಳನ್ನು ನಿರ್ಮಿಸುತ್ತಿದ್ದರೆ ಸಹಜವಾಗಿ ಅದೇ ಕ್ರಮವನ್ನು ಅನುಸರಿಸುತ್ತಿದ್ದರು. ಸದ್ಯ ಹಾಗೆ ಆಗಿಲ್ಲವಾದರೂ ದಕ್ಷಿಣಾರ್ಧದ ಕೆಲವು ದೇಶಗಳು ಉಲ್ಟಾ ತಿರುಗುವ ಗಡಿಯಾರದ ಯೋಚನೆ ಮಾಡಿದ್ದಿದೆ. ದಕ್ಷಿಣ ಅಮೆರಿಕ ಖಂಡದ ಪುಟ್ಟ ದೇಶ ಬೊಲಿವಿಯಾ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅಂತಹ ಗಡಿಯಾರಗಳನ್ನು ರಚಿಸಿದೆ. ಬೊಲಿವಿಯಾದ ಆಡಳಿತ-ರಾಜಧಾನಿ ಲಾ ಪೆಜ್ ನಗರದಲ್ಲಿರುವ ಅಲ್ಲಿನ ಸಂಸತ್ ಭವನದ ಗಡಿಯಾರ ಉಲ್ಟಾ ಚಲನೆಯದು. 1ರಿಂದ 12ರವರೆಗೆ ಅಂಕಿಗಳು ಮತ್ತು ಮುಳ್ಳುಗಳ ಚಲನೆ ಅಪ್ರದಕ್ಷಿಣಾಕಾರದಲ್ಲಿ ಇವೆ.

ಅದನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾವು ದಕ್ಷಿಣಾರ್ಧ ಗೋಲದವರು, ಇದು ನಮ್ಮ ದೇಶದ ಸ್ಪೆಷಾಲಿಟಿ ಎಂದು ಉಲ್ಟಾ ಗಡಿಯಾರದ ಮಾದರಿಗಳನ್ನು ಪ್ರವಾಸಿಗಳಿಗೆ ಸ್ಮರಣಿಕೆಯಾಗಿ ಮಾರುತ್ತಾರೆ. ವಿದೇಶಗಳ ಗಣ್ಯರು ಭೇಟಿಯಿತ್ತಾಗ ಅವರಿಗೆ ಉಡುಗೊರೆಯಾಗಿ ನೀಡುತ್ತಾರೆ. ನನಗೆ ಗಡಿಯಾರವೆಂದರೆ ಅಚ್ಚುಮೆಚ್ಚು. ಒಂಥರ ಹುಚ್ಚು ಎಂದರೂ ತಪ್ಪಲ್ಲ. ಹೊಸ ವಸ್ತು ಏನಾದರೂ ಕೊಂಡುಕೊಳ್ಳುವುದಿದ್ದರೆ, ಬೇರೆಯವರಿಗೆ ಉಡುಗೊರೆ ಕೊಡುವುದಿದ್ದರೆ, ಮೊದಲಿಗೆ ಹೊಳೆಯುವುದು ಗಡಿಯಾರ. ಹೊಸ ವಿನ್ಯಾಸದ್ದು ಹೊಸ ನಮೂನೆಯದು ಏನಾದರೂ ಬಂದಿದೆಯೇ ಎಂದು ನನ್ನ ಕಣ್ಣುಗಳು ಹುಡುಕುತ್ತಿರುತ್ತವೆ.

ಗಡಿಯಾರವನ್ನು ಗಿಫ್ಟ್ ಆಗಿ ಕೊಟ್ಟರೆ ನಾವು ಕೊಟ್ಟದ್ದು ಅವರಿಗೆ ಕ್ಷಣಕ್ಷಣಕ್ಕೂ ಕಣ್ಮುಂದೆ ಕಾಣುತ್ತಿದ್ದು ನೆನಪು ಉಳಿಯುತ್ತದೆ ಎಂಬ ಲಾಜಿಕ್ ಸಹ ಇದೆಯೆನ್ನಿ. ಇವತ್ತು ಹೊಸ ಕ್ಯಾಲೆಂಡರ್ ವರ್ಷ 2017ರ ಮೊದಲ ದಿನ. ಹೊಸ ವರ್ಷಾರಂಭದ ಸಂಭ್ರಮದ ಜತೆಜತೆಗೇ ಇವತ್ತಿನದು ‘ತಿಳಿರುತೋರಣ’ ಅಂಕಣದ 50ನೆಯ ಲೇಖನ. ಈ ಸಂತಸದ ಸಂದರ್ಭದಲ್ಲಿ ತಿಳಿಯುತ್ತ ಮುನ್ನಡೆಯುವ ಜೀವನಯಾತ್ರೆಯಲ್ಲಿ ಜೊತೆಗೂಡಿದ ನಿಮಗೆಲ್ಲರಿಗೂ ಏನು ಉಡುಗೊರೆ ಕೊಡಲಿ ಎಂದು ಯೋಚಿಸಿದಾಗ ಹೊಳೆದದ್ದು ಗಡಿಯಾರವೇ. ಆಫ್‌ಕೋರ್ಸ್, ವಸ್ತು ರೂಪದಲ್ಲಿ ಅಲ್ಲ, ಲೇಖನಕ್ಕೆ ವಸ್ತುವಾಗಿ ಅಷ್ಟೇ. ಈ ಹೊಸ ವರ್ಷವು ಎಲ್ಲರಿಗೂ ಎಲ್ಲ ದಿನಗಳಲ್ಲೂ ಒಳ್ಳೆಯದನ್ನೇ ಮಾಡಲಿ. ಇವತ್ತಷ್ಟೇ ಅಲ್ಲ, ವರ್ಷದ 365 ದಿನಗಳೂ ನಮ್ಮೆಲ್ಲರ ಮನಸ್ಸಿಗೆ ನೆಮ್ಮದಿ ಸಿಗುತ್ತಿರಲಿ. ನಮ್ಮ ಹಿತಕ್ಕೋಸ್ಕರ ಏನನ್ನೋ ಸಾಧಿಸಿ ತಂದುಕೊಂಡ ತೃಪ್ತಿಗಿಂತ, ಇನ್ನೊಬ್ಬರ ಒಳಿತಿಗಾಗಿಯೇ ನಾವು ಮಾಡುವ ಚಿಕ್ಕಪುಟ್ಟ ಕೆಲಸಗಳಿಂದ ಕಂಡುಕೊಂಡ ತೃಪ್ತಿ ನಮ್ಮದಾಗಲಿ. ವ್ಯಷ್ಟಿಗಿಂತ ಸಮಷ್ಠಿ ಮುಖ್ಯವಾಗಿ ಸೆಲ್ಫಿಗಿಂತ ಕುಲ್‌ಫಿ ಸಿಹಿಯಾಗಲಿ (ಕುಲ್ = ಎಲ್ಲ ಒಟ್ಟಿಗೆ ಎಂಬ ಹಿಂದಿ ಅರ್ಥದಿಂದ ಪದವಿನೋದ ಮಾಡಿದ್ದು). ಎಲ್ಲರಿಗೂ ಶುಭಾಶಯ.

Leave a Reply

Your email address will not be published. Required fields are marked *

nine + 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top