ಹಾಸನ: ಚನ್ನರಾಯಪಟ್ಟಣ ತಾಲೂಕಿನ ಕಲಸಿಂದ ಗ್ರಾಮದ ಮನೆಯೊಂದರಲ್ಲಿ ಅಡುಗೆಗೆ ಬಳಸುವ ಗ್ಯಾಸ್ ಸಿಲಿಂಡರ್ ಸಿಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಕಲಸಿಂದ ಗ್ರಾಮದ ಗಿರಿಗೌಡ ಎಂಬುವರ ಮನೆಯಲ್ಲಿ ಬೆಳಿಗ್ಗೆ ಅಡುಗೆ ಮಾಡಲು ಹೋದಾಗ ಸಿಲಿಂಡರ್ನಲ್ಲಿ ಬೆಂಕಿ ಕಂಡು ಬಂದಿದ್ದು, ತಕ್ಷಣ ಮನೆಯವರು ಅಪಾಯ ಅರಿತು ಹೊರಕ್ಕೆ ಓಡಿ ಬಂದರು. ಆದರೆ ಕೊಠಡಿಯೊಂದರಲ್ಲಿದ್ದ ಗಿರಿಗೌಡ ಅವರ ಪತ್ನಿ ತಾಯಮ್ಮ ಅವರಿಗೆ ಕೂಡಲೇ ಮನೆಯಿಂದ ಹೊರಬರಲಾಗದೆ ಗ್ಯಾಸ್ ಸಿಲಿಂಡರ್ ಸಿಡಿದು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಸಿಲಿಂಡರ್ ಸ್ಫೋಟಗೊಂಡ ರಭಸಕ್ಕೆ ಪಕ್ಕದ ಮನೆಗೂ ಬೆಂಕಿ ತಗುಲಿ 2 ಮನೆಗಳಲ್ಲಿದ್ದ 20 ಸಾವಿರ ಕೊಬ್ಬರಿ ಹಾಗೂ ಮನೆ ಪದಾರ್ಥಗಳು ನಾಶವಾಗಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.