‘ಚ’ಕಾರ ಚಮತ್ಕಾರ ಇದು ‘ಚ’ಹದ ಒಂದು ಗುಟುಕು

Posted In : ಅಂಕಣಗಳು, ತಿಳಿರು ತೋರಣ

ಅರ್ಜುನ ಕುರುಕ್ಷೇತ್ರದ ರಣಭೂಮಿಯಲ್ಲಿ ತಲೆಬಿಸಿ ಮಾಡಿಕೊಂಡು ನಿಂತಿದ್ದಾನೆ. ಏನು ಮಾಡುವುದೆಂದು ತೋಚದೆ ‘ಕಿಂಕರ್ತವ್ಯವಿಮೂಢ’ ಆಗಿದ್ದಾನೆ. ಸವ್ಯಸಾಚಿಯೇ ಸಂದಿಗ್ಧಕ್ಕೊಳಗಾದ ಆ ಸಂದರ್ಭದಲ್ಲಿ ಸಾರಥಿ ಶ್ರೀಕೃಷ್ಣ ಸಡನ್ನಾಗಿ ಸುದರ್ಶನ ಚಕ್ರವನ್ನು ಪಕ್ಕಕ್ಕಿರಿಸಿ ಈರೀತಿ ಹೇಳುತ್ತಾನೆ- ‘ಪಾರ್ಥ, ಗಾಬರಿ ಪಡಬೇಡ. ಇದೋ ನಾನು ಸ್ಟವ್ ಹಚ್ಚುತ್ತೇನೆ. ಚಾ ಮಾಡುತ್ತೇನೆ. ಬಿಸಿಬಿಸಿ ಖಡಕ್ ಚಾ ಕುಡಿದಾಗ ನೋಡು ನಿನಗೆ ಎಲ್ಲಿಲ್ಲದ ರಣೋತ್ಸಾಹ ಬಂದುಬಿಡುತ್ತದೆ!’

ಇದು ಯಾವುದೇ ಕೃಷ್ಣಸಂಧಾನ ನಗೆನಾಟಕದ ಡೈಲಾಗಲ್ಲ. ನಿಮಗೆ ಈ ಮಾತಿನಲ್ಲಿ ನಂಬಿಕೆ ಬರಲಿಕ್ಕಿಲ್ಲ. ಕೃಷ್ಣ ಪರಮಾತ್ಮ ನಿಜಕ್ಕೂ ಹಾಗೆ ಹೇಳಿದನೇ? ಭಗವದ್ಗೀತೆಯ 15ನೆಯ ಅಧ್ಯಾಯದ 15ನೆಯ ಶ್ಲೋಕವನ್ನು ಒಮ್ಮೆ ನೋಡಿ- ‘ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮತಿರ್ಜ್ಞಾನಮಪೋಹನಂ ಚ ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್‌॥’ ಬನ್ನಂಜೆ ಗೋವಿಂದಾಚಾರ್ಯರಂಥ ಪಂಡಿತೋತ್ತಮರು ಹೇಳುವುದಾದರೆ ಈ ಶ್ಲೋಕದ ಅರ್ಥ- ‘ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ. ನೆನಪು, ಅರಿವು, ಮರೆವು ಎಲ್ಲವೂ ನನ್ನದೇ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೇ. ವೇದಗಳ ಮತ್ತು ವೇದಾಂತ ಸೂತ್ರಗಳ ಮರ್ಮವನ್ನರಿತವನೂ ನಾನೇ’. ಶ್ರೀಕೃಷ್ಣನು ಅರ್ಜುನನನ್ನುದ್ದೇಶಿಸಿ ಹೇಳಿದ್ದಿದು. ಇಂತಹ ಘನಗಂಭೀರ ವಿಷಯವನ್ನು ಪಂಡಿತರು ಇಷ್ಟು ಚೆನ್ನಾಗಿ ಅರ್ಥೈಸಬಲ್ಲರು. ಆದರೆ ಪನ್ಡಿತರು ಹಾಗಲ್ಲ, ತುಸು ಭಿನ್ನ ರೀತಿಯಲ್ಲಿ ಆಲೋಚಿಸುತ್ತಾರೆ.

ಭಗವದ್ಗೀತೆಯ ಇದೇ ಶ್ಲೋಕವು ಪನ್ಡಿತರಿಗೆ ಹೊಸದೊಂದು ಹೊಳಹನ್ನು ಕೊಡುತ್ತದೆ. ಸ್ಟವ್ ಹಚ್ಚಿ ಚಾ ಮಾಡಲು ಪ್ರೇರೇಪಿಸುತ್ತದೆ. ಹೇಗೆ? ಸರ್ವಸ್ಯ ಚಾಹಂ- ಎಲ್ಲರಿಗೂ ಚಾ ಮಾಡಿಕೊಡುತ್ತೇನೆ. ಹೃದಿ ಸನ್ನಿವಿಷ್ಟೋ- ಹೃದಯದಲ್ಲಿರುವ ಪ್ರೀತಿಯೆಂಬ ಕಾವಿನಿಂದಲೇ ಷ್ಟೋವ್ ಹಚ್ಚುತ್ತೇನೆ. ವೇದವಿದೇವ ಚಾಹಮ್- ನಾನು ಮಾಡಿದ ಚಾ ಕುಡಿದರೆ ವೇದಗಳ ಸಾರವನ್ನೆಲ್ಲ ಹೀರಿಕೊಂಡಂತೆಯೇ. ಇದನ್ನೂ ಶ್ರೀಕೃಷ್ಣನೇ ಹೇಳಿದ್ದು, ಅರ್ಜುನನಿಗಲ್ಲ ನಮ್ಮಂಥ ಹುಲುಮಾನವರಿಗೆ. ಗರಂ ಚಾ ಮಾಡಿಕೊಟ್ಟಿದ್ದಕ್ಕಾಗಿ ನಾವು ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಚಾ ಗರಂ ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ॥

ಇನ್ನೊಂದು ಶ್ಲೋಕ ಇದೆ, ಗೋಕುಲಾಷ್ಟಮಿಯಂದು ರಾತ್ರಿ ಪೂಜೆಯಲ್ಲಿ ಅರ್ಘ್ಯ ಕೊಡುವಾಗ ಹೇಳುವಂಥದ್ದು. ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಮ್‌ ಯಶೋದಾಂ ನಂದಗೋಪಂ ಚ ಸುಭದ್ರಾಂ ತತ್ರ ಪೂಜಯೇತ್‌॥ ಶ್ಲೋಕದ ಅರ್ಥ- ಈ ಪೂಜೆ ಬರೀ ಕೃಷ್ಣನಿಗಷ್ಟೇ ಅಲ್ಲ. ಅವನ ಕುಟುಂಬದವರೆಲ್ಲರಿಗೂ ಸಲ್ಲುತ್ತದೆ. ಅಣ್ಣ ಬಲರಾಮ, ತಂದೆ ವಸುದೇವ, ತಾಯಿ ದೇವಕಿ, ಸಾಕುತಾಯಿ ಯಶೋದೆ, ಸಾಕುತಂದೆ ನಂದಗೋಪ ಮತ್ತು ತಂಗಿ ಸುಭದ್ರೆ- ಇವರೆಲ್ಲರಿಗೂ ಪೂಜೆಯಲ್ಲಿ ಪಾಲಿದೆ. ಫ್ಯಾಮಿಲಿಪಾಸ್ ಇದ್ದಂತೆ ಸಮಷ್ಟಿಪ್ರಜ್ಞೆಯುಳ್ಳ ಆರಾಧನೆ. ಆದರೆ ಪನ್‌ಡಿತರ ತಲೆಯಲ್ಲಾದರೋ ಈ ಶ್ಲೋಕವು ಬೇರೆಯದೇ ಒಂದು ತರ್ಕವನ್ನು ಹುಟ್ಟಿಸುತ್ತದೆ. ಇಲ್ಲೂ ಚಹದ್ದೇ ಕರಾ ಮತ್ತು. ಹೇಗೆಂದರೆ- ಇದರಲ್ಲಿ ಗಂಡಸರ ಹೆಸರು (ಕೃಷ್ಣ, ಬಲಭಧ್ರ, ವಸುದೇವ, ನಂದಗೋಪ) ಬಂದಾಗೆಲ್ಲ ಹೆಸರಿನ ನಂತರ ಚ ಎಂದು ಬರುತ್ತದೆ. ಹೆಂಗಸರ (ದೇವಕಿ, ಯಶೋದಾ, ಸುಭದ್ರಾ) ಹೆಸರಿನ ನಂತರ ಚ ಅಕ್ಷರವಿಲ್ಲ! ಅಂದರೆ, ಮಹಾಭಾರತ-ಭಾಗವತ ಪುರಾಣಗಳ ಕಾಲದಲ್ಲಿ ಗಂಡಸರು ಮಾತ್ರ ಚಾ ಕುಡಿಯುತ್ತಿದ್ದರು. ಹೆಂಗಸರು ಚಾ ಕುಡಿಯುತ್ತಿರಲಿಲ್ಲ. ಹೇಗಿದೆ ಲಾಜಿಕ್!?

ಮತ್ತೂ ಒಂದು ಶ್ಲೋಕವನ್ನು ಉಲ್ಲೇಖಿಸಿ ಮುಖ್ಯ ವಿಷಯಕ್ಕೆ ಬರುತ್ತೇನೆ. ಇದು ಕಾಫಿಯ ಶ್ಲೋಕ. ಚಹದ ಪ್ರಸ್ತಾವವೂ ಇದೆ. ‘ಕಾರ್ಕೋಟಕಂ ಚ ದೈತ್ಯಾನಾಂ ಪೀಯೂಷಂ ಚ ದಿವೌಕಸಾಃ ಏತಾದ್ವೈಕ್ಷರ ಸಂಭೂತಾ ಕಾಪೀ ಭೂಲೋಕವಾಸಿನಾಂ॥’ ಸಮುದ್ರಮಥನದ ವೇಳೆ ಮೊದಲು ಉದ್ಭವಿಸಿದ್ದು ಕಾರ್ಕೋಟಕವೆಂಬ ವಿಷ. ಕಾರ್ಕೋಟಕಂ ಚ ದೈತ್ಯಾನಾಂ- ಕಾರ್ಕೋಟಕವು ರಾಕ್ಷಸರ ಚಾ ಎಂದಾಯ್ತು. ಪೀಯೂಷಂ ಚ ದಿವೌಕಸಾಃ- ಪೀಯೂಷ ಎಂದರೆ ಅಮೃತ. ದೇವತೆಗಳು ಪೀಯೂಷವನ್ನು ಚಾ ಎಂದುಕೊಂಡರು. ಸರಿ, ಭೂಲೋಕವಾಸಿಗಳ ಗತಿ ಏನು? ಕಾರ್ಕೋಟಕ ಮತ್ತು ಪೀಯೂಷ- ಇವೆರಡರ ಮೊದಲಕ್ಷರಗಳಿಂದಾದ ‘ಕಾಪೀ’ ಪೇಯವನ್ನು ಭೂಲೋಕವಾಸಿಗಳು ಕುಡಿಯತಕ್ಕದ್ದೆಂದು ತ್ರಿಮೂರ್ತಿಗಳು ಕಟ್ಟಪ್ಪಣೆ ಹೊರಡಿಸಿದರು.

ಗಾಬರಿಯಾಗಬೇಡಿ. ಹೀಗೆ ಯಾವ ಶಾಸ್ತ್ರಪುರಾಣಗಳಲ್ಲೂ ಹೇಳಿಲ್ಲ. ಇವೆಲ್ಲ ಬರೀ ಕಟ್ಟುಕಥೆಗಳು. ಸಂಸ್ಕೃತ ಶ್ಲೋಕಗಳಲ್ಲಿ, ಸುಭಾಷಿತಗಳಲ್ಲಿ ದಟ್ಟವಾಗಿ ಕಾಣಿಸಿಕೊಳ್ಳುವ ‘ಚ’ ಅಕ್ಷರವನ್ನು ‘ಚ’ ಎಂದು ಉಚ್ಚಾರ/ಅರ್ಥ ಬರುವಂತೆ ಮಾಡಿ ಈ ರೀತಿಯ ಚಕಾರ ಚಮತ್ಕಾರಗಳನ್ನು ಲಾಟ್‌ಪೋಟ್ ಸಂಸ್ಕೃತ ಪನ್ಡಿತರು ಮಾಡುತ್ತಾರೆ ಅಷ್ಟೇ. ಅದನ್ನು ಕೇವಲ ಮನರಂಜನೆಯೆಂದಷ್ಟೇ ಪರಿಗಣಿಸಿದರೆ ಸಾಕು.

ಒಂದಂತೂ ನಿಜ, ಚ ಅಕ್ಷರ ಸಂಸ್ಕೃತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಾಗುವ ಅಕ್ಷರ. ಸಂಸ್ಕೃತ ಭಾಷೆಯಲ್ಲಿ ಚ ಬರೀ ಒಂದು ಅಕ್ಷರವಷ್ಟೇ ಅಲ್ಲ. ಅದೊಂದು ಸ್ವತಂತ್ರ ಪದ ಕೂಡ. ನಾನಾ ಅರ್ಥಗಳಿರುವ, ನಾನಾ ಸಂದರ್ಭಗಳಲ್ಲಿ ಸರ್ವವ್ಯಾಪಿಯಾಗಿ ಬಳಕೆಯಾಗುವ ಪದ. ನಾಮಪದವಾಗಿ ಅದಕ್ಕೆ ಶಿವ, ಚಂದ್ರ, ಆಮೆ, ಕಳ್ಳ ಮೊದಲಾದ ಅರ್ಥಗಳು.

ವಿಶೇಷಣವಾಗಿ ಚಲನಶೀಲ, ಶುದ್ಧ, ಚೇಷ್ಟೆಯ ಮುಂತಾದ ಅರ್ಥಗಳೂ ಇವೆ. ಆದರೆ ಸಂಸ್ಕೃತ ಶ್ಲೋಕಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವ ‘ಚ’ ಈ ಅರ್ಥಗಳಲ್ಲಿ ಇರುವುದಲ್ಲ. ಅದು ಪದಗಳನ್ನು ಅಥವಾ ವಾಕ್ಯಗಳನ್ನು ಬೆಸೆಯುವ ಕೊಂಡಿಯಾಗಿ ಇರುವುದು. ಇಂಗ್ಲಿಷ್‌ನಲ್ಲಿರುವ and, also, but, if, moreover, as well as ಮುಂತಾದ ಕೊಂಡಿ(ಕಂಜಂಕ್ಷನ್)ಗಳಿಗೆ, ಕನ್ನಡದಲ್ಲಾದರೆ ‘ಮತ್ತು’ ಅಥವಾ ‘ಹಾಗೂ’ಗಳಿಗೆ ಸಮಾನವಾದುದು ಸಂಸ್ಕೃತದ ‘ಚ’. ಅದೂ ಇದೂ ಎಂಬ ರೀತಿಯಲ್ಲಿ- ರಾಮನೂ ಲಕ್ಷ್ಮಣನೂ ಎಂದು ಬರೆಯುತ್ತೇವಲ್ಲ ಅಲ್ಲೆಲ್ಲ ಸಂಸ್ಕೃತದಲ್ಲಿ ಚ ಬಳಕೆಯಾಗುತ್ತದೆ. ರಾಮನೂ ಲಕ್ಷ್ಮಣನೂ = ರಾಮಲಕ್ಷ್ಮಣರು ದ್ವಂದ್ವಸಮಾಸ ಎಂದು ಶಾಲೆಯಲ್ಲಿ ವ್ಯಾಾಕರಣಪಾಠ ಕಲಿತದ್ದು ನೆನಪಿರಬಹುದು.

ಸಂಸ್ಕೃತದಲ್ಲಿಯೂ ಅದೇರೀತಿ- ರಾಮಶ್ಚ ಲಕ್ಷ್ಮಣಶ್ಚ ರಾಮಲಕ್ಷ್ಮಣೌ ದ್ವಂದ್ವಸಮಾಸ ಆಗುತ್ತದೆ. ಸಂಸ್ಕೃತದಲ್ಲಿ ವಾಕ್ಯದ ಕೊನೆಯಲ್ಲಿನ ಉದ್ದ ಗೀಟು ಬಿಟ್ಟರೆ ಬೇರೆ ಪಂಕ್ಚುವೇಶನ್ ಚಿಹ್ನೆಗಳಿಲ್ಲ. ಹಾಗಾಗಿ ಇಂಗ್ಲಿಷ್, ಕನ್ನಡ ಮತ್ತಿತರ ಭಾಷೆಗಳಲ್ಲಿನ ಕೊಮಾ(ಅಲ್ಪವಿರಾಮ) ಚಿಹ್ನೆಯ ಕೆಲಸವನ್ನೂ ಸಂಸ್ಕೃತದಲ್ಲಿ ಚ ನಿಭಾಯಿಸುತ್ತದೆ. ‘ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ… ‘ಶ್ಲೋಕ ಒಳ್ಳೆಯ ಉದಾಹರಣೆ. ರುದ್ರ ಪಠಣದಲ್ಲಿ ಒಂದು ಇಡೀ ಅಧ್ಯಾಯವೇ ‘ಚಮಕಂ’ ಅಂತ ಇದೆ. ಅದರಲ್ಲಿ ಪ್ರತಿಯೊಂದು ಕೋರಿಕೆಯ ನಂತರ ಚ ಬರುತ್ತದೆ. ‘ಏಕಾ ಚ ಮೇ ತಿಸ್ರಶ್ಚ ಮೇ ಪಂಚ ಚ ಮೇ ಸಪ್ತ ಚ ಮೇ ನವ ಚ ಮ ಏಕಾದಶ ಚ ಮೇ…’

ಸಂಸ್ಕೃತ ಎಷ್ಟು ಕಟ್ಟುನಿಟ್ಟಿನ ಭಾಷೆಯೋ ಅಷ್ಟೇ ಫ್ಲೆಕ್ಸಿಬಲ್ ಸಹ. ಆದ್ದರಿಂದ ‘ಚ’ವನ್ನು ಬೇಕಾಬಿಟ್ಟಿ ಬಳಸುವ ಸ್ವಾತಂತ್ರ್ಯವಿದೆ. ಛಂದಸ್ಸಿಗೆ ತಕ್ಕಂತೆ, ಪದ್ಯದಲ್ಲಿ ಮಾತ್ರೆಗಳ ಲೆಕ್ಕ ಟ್ಯಾಲಿ ಆಗುವಂತೆ ಬೇಕಾದರೆ ಚ ಬಳಸಬಹುದು, ಬೇಡವಾದರೆ ಬಿಟ್ಟುಬಿಡಬಹುದು. ಆದರೆ ಅಲ್ಲೂ ಕೆಲವು ನಿಯಮಗಳ ಪಾಲನೆ ಕಡ್ಡಾಯ. ಸಂಧಿ ಆಗುವಂತಿದ್ದರೆ ಸಂಧಿ ಮಾಡಿಯೇ ಬರೆಯಬೇಕು. ಉದಾಹರಣೆಗೆ, ರಾಮಃ ಚ ಎಂದು ಬರೆಯಬಾರದು, ರಾಮಶ್ಚ ಎಂದು ಸಂಧಿ ಮಾಡಿ ಬರೆಯಬೇಕು. ಚ ಅಹಂ ಎಂದು ಬರೆಯಬಾರದು. ಚಾಹಂ ಎಂದು ಸಂಧಿ ಮಾಡಿ ಬರೆಯಬೇಕು. (ಭಗವದ್ಗೀತೆಯಲ್ಲಿ ಚಾ ಎಲ್ಲಿಂದ ಬಂತು ಎಂದು ಈಗ ನಿಮಗೆ ಗೊತ್ತಾಗಿರಬಹುದು!) ಸಂಧಿ ಆಗದಿದ್ದರೆ ಚ ಎಂದು ಪ್ರತ್ಯೇಕ ಪದವಾಗಿ ಬರೆಯಬೇಕು. ಬೇರೆ ಪದಕ್ಕೆ ಚ ಅಕ್ಷರವನ್ನು ಸುಮ್ಮನೆ ಅಂಟಿಸಬಾರದು. ಚಿಕ್ಕಂದಿನಲ್ಲಿ ನಾವು ಸಂಜೆಹೊತ್ತು ಬಾಯಿಪಾಠದ ಭಾಗವಾಗಿ ಪ್ರಭವ, ವಿಭವ, ಶುಕ್ಲ…

ಸಂವತ್ಸರಗಳ ಹೆಸರು ಹೇಳುವುದಿತ್ತು. ಅದರಲ್ಲಿ ‘ಪ್ರಮಾಥೀಚ’ ಎಂದು ಒಂದು ಸಂವತ್ಸರದ ಹೆಸರನ್ನು ಹೇಳುತ್ತಿದ್ದೆವು. ಅದು ಪ್ರಮಾಥೀಚ ಎಂದೇ ಆಗ ನಮಗೆ ಗೊತ್ತಿದ್ದದ್ದು. ನಮ್ಮ ಮಗ್ಗಿ ಪುಸ್ತಕದಲ್ಲಿ ಹಾಗೇ ಮುದ್ರಿತವಾಗಿತ್ತು. ಆಮೇಲೆ ಹೈಸ್ಕೂಲ್‌ನಲ್ಲಿ ಸಂಸ್ಕೃತದ ಪರಿಚಯವಾದಾಗ ಚ ಅಕ್ಷರದ ಚಮತ್ಕಾರ ಗೊತ್ತಾಯ್ತು. ‘ಬಹುಧಾನ್ಯಃ ಪ್ರಮಾಥೀ ಚ ವಿಕ್ರಮೋ ವಿಶುವತ್ಸರಃ…’ ಎಂದು ಸಂವತ್ಸರಗಳ ಶ್ಲೋಕದಲ್ಲಿರುವುದು. ಪ್ರಮಾಥೀ ಆದ ಮೇಲೆ ಚ ಅಂತಿರುವುದನ್ನು ಯಾರೋ ‘ಪ್ರಮಾಥೀಚ’ ಎಂದು ಮಾಡಿರುವುದು ತಿಳಿಯಿತು. ಹಾಗೆಯೇ ನವನಾಗ ಸ್ತೋತ್ರವನ್ನು ನಾವು ‘ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚಕಂಬಲಂ…’ ಎಂದು ಬಾಯಿಪಾಠ ಹೇಳುತ್ತಿದ್ದೆವು. ಚಕಂಬಲಂ ಒಂದು ಸರ್ಪದ ಹೆಸರು ಎಂದು ಆಗ ನನ್ನ ಕಲ್ಪನೆ. ಆಮೇಲೆ ನೋಡಿದರೆ ಅದು ಕಂಬಲಂ ಅಷ್ಟೇ. ಕೊಮಾ ರೀತಿಯ ಚ ಸೇರಿ ಚಕಂಬಲಂ ಆಗಿತ್ತು! ಪದ್ಮನಾಭಂ ಚ ಕಂಬಲಂ- ಇದು ಸರಿಯಾಗಿ ಬರೆಯಬೇಕಾದ ಕ್ರಮ.

‘ಚ’ ಮಹಾತ್ಮೆಯು ‘ಚವೈತುಹಿ ಚವೈತುಹಿ’ ಶ್ಲೋಕದ ಉಲ್ಲೇಖವಿಲ್ಲದೆ ಪೂರ್ಣವೆನಿಸದು. ಛಂದಸ್ಸಿನ ಪಾಲನೆಗಾಗಿ ಚ ಅಕ್ಷರವನ್ನು ಬೇಕಾಬಿಟ್ಟಿ ಬಳಸಬಹುದು ಎಂದಿದ್ದೆನಷ್ಟೆ? ಚ ಅಕ್ಷರದಂತೆಯೇ ವೈ, ತು, ಹಿ, ಸ್ಮ, ಹ- ಈ ಐದು ಅಕ್ಷರಗಳನ್ನೂ ಸಂಸ್ಕೃತ ಶ್ಲೋಕಗಳಲ್ಲಿ ಬೇಕಾದಲ್ಲಿ ಬಳಸಬಹುದು. ಅಂಥ ಬೇಕಾಬಿಟ್ಟಿ ಬಳಕೆಯ ಒಂದು ಸ್ವಾರಸ್ಯಕರ ಕಥೆಯಿದು. ಹಿಂದಿನ ಕಾಲದಲ್ಲಿ ರಾಜರು ಕವಿಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಆಶುಶ್ಲೋಕ ರಚಿಸಿದರೆ ಶ್ಲೋಕದ ಒಂದೊಂದು ಅಕ್ಷರಕ್ಕೆ ಒಂದೊಂದು ಲಕ್ಷದಂತೆ ಹೊನ್ನಿನ ನಾಣ್ಯಗಳು ಕವಿಗೆ ಉಡುಗೊರೆಯಾಗಿ ಸಿಗುತ್ತಿದ್ದವು. ಹಾಗೆ ಉಡುಗೊರೆಯ ಆಸೆಯಿಂದ ಅರೆಪ್ರತಿಭಾವಂತ ಕವಿಯೊಬ್ಬ ಒಂದು ದಿನ ಬೆಳ್ಳಂಬೆಳಗ್ಗೆ ರಾಜನೆದುರು ಹಾಜರಾದ. ‘ನಾನು ಹೊಸದೊಂದು ಶ್ಲೋಕ ಕಟ್ಟಿ ತಮ್ಮೆದುರಿಗೆ ಹೇಳಲೇ?’ ಎಂದ. ರಾಜ ತಥಾಸ್ತು ಎನ್ನಲು ಕವಿವರೇಣ್ಯ ಶುರು ಮಾಡಿದ. ಸಂಸ್ಕೃತದಲ್ಲಿ ಅತಿಸುಲಭವಾದ ಅನುಷ್ಟುಪ್ ಛಂದಸ್ಸನ್ನೇ ಆಯ್ದುಕೊಂಡ. ತಲಾ ಎಂಟು ಅಕ್ಷರಗಳ ನಾಲ್ಕು ಪಾದಗಳಾದರೆ ಆಯ್ತು. ‘ಉತ್ತಿಷ್ಟೋತ್ತಿಷ್ಟ ರಾಜೇಂದ್ರ’ ಇದು ಮೊದಲ ಪಾದ. ಛಂದೋಬದ್ಧವಾಗಿಯೇ ಇದೆ. ಉತ್ತಿಷ್ಟೋತ್ತಿಷ್ಟ ಗೋವಿಂದ ಎಂದು ದಿನಾ ಸುಪ್ರಭಾತ ಹೇಳಿ ಗೊತ್ತಿತ್ತಲ್ಲ, ಗೋವಿಂದನ ಬದಲು ರಾಜೇಂದ್ರ ಎಂದು ಮಾಡಿದ್ದ. ಸರಿ ಹೋಯ್ತು.

‘ಮುಖಂ ಪ್ರಕ್ಷಾಲಯಸ್ವ’ (ಮುಖ ತೊಳೆದುಕೋ) ಎಂದು ಎರಡನೇ ಪಾದ ರಚಿಸಿದ. ಒಂದು ಅಕ್ಷರ ಕಮ್ಮಿ ಆಯ್ತಲ್ಲ, ಆಮೇಲೆ ನೋಡೋಣ ಎಂದುಕೊಂಡು ಮೂರನೇ ಪಾದಕ್ಕಿಳಿದ. ‘ಪ್ರಭಾತೇ ಕೂಜತೇ ಕುಕ್ಕುಟಃ’ (ಮುಂಜಾವಿನಲ್ಲಿ ಕೋಳಿ ಕೂಗುತ್ತಿದೆ). ಇದರಲ್ಲಿ ಒಂದು ಅಕ್ಷರ ಹೆಚ್ಚಾಯ್ತು! ಅದಕ್ಕೋಸ್ಕರ ಟಃ ವನ್ನು ಮೂರನೇ ಪಾದದಿಂದ ಎರಡನೇ ಪಾದಕ್ಕೆ ವರ್ಗಾಯಿಸಿದ. ಈಗ ತಲಾ ಎಂಟು ಅಕ್ಷರಗಳ ಮೂರು ಪಾದಗಳಾದವು. ಕೊನೆಯ ಪಾದ ಏನು ಬರೆಯುವುದಂತ ಎಷ್ಟು ಯೋಚಿಸಿದರೂ ಏನೂ ಹೊಳೆಯಲಿಲ್ಲ. ಆಗ ಚ, ವೈ, ತು, ಹಿ ಅಕ್ಷರಗಳನ್ನು ಶ್ಲೋಕದಲ್ಲಿ ಯಥೇಚ್ಛ ಬಳಸಬಹುದು ಎಂದು ಗುರುಗಳು ಹೇಳಿಕೊಟ್ಟಿದ್ದು ನೆನಪಾಯ್ತು. ನಾಲ್ಕನೇ ಪಾದವನ್ನು ‘ಚವೈತುಹಿ ಚವೈತುಹಿ’ ಎಂದು ಆ ನಾಲ್ಕು ಅಕ್ಷರಗಳನ್ನು ಜೋಡಿಸಿ ಎರಡು ಸಲ ಬರೆದು ಶ್ಲೋಕ ಪೂರ್ತಿಗೊಳಿಸಿದ. ಕವಿಪುಂಗವನಿಗೆ ರಾಜ ಅಕ್ಷರಲಕ್ಷ ಹೊನ್ನು ಕೊಡುವುದಿರಲಿ, ಬೆನ್ನಿಗೆ ಛಡಿಯೇಟು ಕೊಡುವಂತೆ ಅಲ್ಲಿದ್ದ ಭಟರಿಗೆ ಆಜ್ಞಾಪಿಸಿದನೋ ಏನೋ.

ಇಷ್ಟು ಓದಿದ ಮೇಲೆ ಇನ್ನುಮುಂದೆ ಸಂಸ್ಕೃತ ಶ್ಲೋಕ ಎದುರಾದಾಗೆಲ್ಲ ನಿಮ್ಮ ಮನಸ್ಸು ತನ್ನಿಂತಾನೇ ಅದರಲ್ಲಿ ‘ಚ’ಕಾರವನ್ನು ಹುಡುಕತೊಡಗುತ್ತದೆ. ‘ಭಗವದ್ಗೀತೆಯಲ್ಲಿ ಚಾ ಇದೆ, ದ್ವಾಪರಯುಗದಲ್ಲಿ ಗಂಡಸರು ಮಾತ್ರ ಚಾ ಕುಡಿಯುತ್ತಿದ್ದರು… ಅಂತೆಲ್ಲ ಯಾರಾದರೂ ಬೊಗಳೆ ಬಿಟ್ಟರೆ ಅದರ ಮಸಲತ್ತು ಏನು ಎಂದು ನಿಮಗೆ ತಿಳಿದಿರುತ್ತದೆ. ಆಮೇಲೆ ನಿಮ್ಮೆದುರಿಗೆ ಅವರು ಚಕಾರ ಎತ್ತುವುದಿಲ್ಲ!

Leave a Reply

Your email address will not be published. Required fields are marked *

5 × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top