ಜಲ್ಲಿಕಟ್ಟು ಮೀಮಾಂಸೆ, ಹಿಂದೂ ವಿರೋಧವೇ ಒತ್ತಾಸೆ!

Posted In : ಸಂಗಮ, ಸಂಪುಟ

ತಮಿಳುನಾಡಿನ ಜನಜೀವನದ ಅಂಗವಾಗಿರುವ, ಸಂಸ್ಕೃತಿಯ ಭಾಗವೇ ಆಗಿರುವ ಪೊಂಗಲ್ (ಸಂಕ್ರಾತಿ) ಬಂತೆಂದರೆ ರೈತರ, ಗೂಳಿಗಳ ಮಾಲೀಕರ ಎದೆ ಉಬ್ಬುತ್ತದೆ. ಮನಸ್ಸು ಜಲ್ಲಿಕಟ್ಟು ಅಥವಾ ಮಂಜು ವೀರಟ್ಟುನತ್ತ ವಾಲುತ್ತದೆ. ಇದಕ್ಕಾಗಿಯೇ ಒಂದು ವರ್ಷ ಕಾಯ್ದು ಹೋರಿಗಳೂ ಸನ್ನದ್ಧವಾಗುತ್ತವೆ. ಅವುಗಳ ಮೈ ಸಹ ಚುಟು ಚುಟು ಅನ್ನುತ್ತಿರುತ್ತದೆ. ರೋಮಾಂಚನಕಾರಿ ಕಾಳಗವೊಂದು ಏರ್ಪಡುವುದರ ಜತೆಗೆ ಸಂಪ್ರದಾಯವೊಂದು ಅನಾವರಣಗೊಳ್ಳುತ್ತದೆ. ಪ್ರತಿಪಕ್ಷದಲ್ಲಿದ್ದರೂ ಕರುಣಾನಿಧಿ ಸಹ ಜಲ್ಲಿಕಟ್ಟಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಒಪ್ಪಿಗೆ ಸೂಚಿಸಿತ್ತು. ಆದರೆ ಕೆಲವು ಹಿಂದೂ ವಿರೋಧಿಗಳ, ಪ್ರಾಣಿ ದಯಾ ಸಂಘದ ಹೆಸರಲ್ಲಿ ಹಿಂದೂ ಸಂಪ್ರದಾಯ ಭಂಗಗೊಳಿಸಲು, ಆಚರಣೆ, ನಂಬಿಕೆ ಮಣ್ಣುಪಾಲು ಮಾಡಲು ಹೊರಟಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉಪಟಳದಿಂದ ಇಂದು ತಮಿಳುನಾಡಿನ ಜನ ಜಲ್ಲಿಕಟ್ಟು ಆಚರಿಸಲು ಸಹ ಭಯಪಡುವಂತಾಗಿದೆ. ಈ ಬಾರಿಯ ಪೊಂಗಲ್ ಹೇಗೋ, ಏನೋ ಎಂಬ ದುಗುಡ ಅವರನ್ನು ಕಾಡುತ್ತಿದೆ.

ಇಷ್ಟಾದರೂ ಜನರ ದುಗುಡ ಅರಿತ ತಮಿಳುನಾಡು ಮುಖ್ಯಮಂತ್ರಿ ಪನ್ನಿರ್ ಸೆಲ್ವಂ ಜಲ್ಲಿಕಟ್ಟಿಗೆ ಬೆಂಬಲ ನೀಡಬೇಕು, ಜನಾಭಿಪ್ರಾಯ ಸಂಗ್ರಹಿಸಿಯೇ ಸರಕಾರ ನಿಮಗೆ ಮನವಿ ಮಾಡಿದ್ದು, ಅನುಮತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಖ್ಯಾತ ನಟ ಕಮಲ್ ಹಾಸನ್ ಸಹ ‘ಜಲ್ಲಿಕಟ್ಟಿನಿಂದ ಪ್ರಾಣಿಹಿಂಸೆಯಾಗುತ್ತದೆ ಎನ್ನುವುದಾದರೆ, ಬಿರಿಯಾನಿಯನ್ನೂ ನಿಷೇಧಿಸಿ’ ಎಂದು ಜಲ್ಲಿಕಟ್ಟಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಅಸಂಪ್ರದಾಯವಾದಿಗಳಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆದರೂ ಸುಪ್ರೀಂ ಕೋರ್ಟ್ ಜಲ್ಲಿಕಟ್ಟಿಗೆ ತಡೆ ನೀಡಿದ್ದು ಪ್ರಾಣಿದಯಾ ಸಂಘದವರಿಗೆ, ಎಡಬಿಡಂಗಿಗಳಿಗೆ ಇಂಬು ಬಂದಂತಾಗಿ ಪ್ರಾಣಿಯ ಮೇಲಿನ ಅವರ ದಯೆ ಮತ್ತಷ್ಟು ಜಾಗೃತವಾಗಿ ಧ್ವನಿ ಜೋರಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಒತ್ತಟ್ಟಿಗಿರಲಿ. ಆದರೆ ಈ ಪ್ರಾಣಿ ದಯಾ ಸಂಘದವರ, ರಾಜಕೀಯ ಪ್ರೇರಿತ ಬುದ್ಧಿಜೀವಿಗಳ, ಹೊಟ್ಟೆ ತುಂಬ ದನದ ಮಾಂಸ ತಿಂದು ಪ್ರಾಣಿಹಿಂಸೆ ಬಗ್ಗೆ ಲೋಕಾಭಿರಾಮ ಮಾತುಗಳನ್ನಾಡುವವರ ನಿಜವಾದ ಉದ್ದೇಶವೇನು? ಇವರ ಉದ್ದೇಶದ ಹಿಂದಿರುವ ಸತ್ಯಾಂಶವೇನು? ಇವರಿಗೆ ಹಿಂದೂ ಸಂಪ್ರದಾಯಗಳೇ ಏಕೆ ಕಾಣುತ್ತವೆ? ಅಷ್ಟಕ್ಕೂ ಈ ಜಲ್ಲಿಕಟ್ಟಿನ ವಿರುದ್ಧವೇ ಏಕೆ ಇವರ ಹೋರಾಟ? ಧರ್ಮದ ಹೆಸರಲ್ಲಿ ನಡೆಯುತ್ತಿರುವ ಪ್ರಾಣಿಹಿಂಸೆ ಬಗ್ಗೆ ಇವರೇಕೆ ಚಕಾರವೆತ್ತುವುದಿಲ್ಲ? ಇವರ ಮಾತನ್ನೇ ಒಪ್ಪುವುದಾದರೆ ಜಲ್ಲಿಕಟ್ಟಿನಿಂದ ಪ್ರಾಣಿಗಳಿಗಾಗುವ ಹಿಂಸೆಯೇನು? ಅಷ್ಟಕ್ಕೂ ಹಿಂದೂ ಧರ್ಮವನ್ನೇ ಏಕೆ ಯಾವಾಗಲೂ ಟಾರ್ಗೆಟ್ ಮಾಡುತ್ತಾರೆ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಹಲವು ಮುಖಗಳು ಢಾಳಾಗುತ್ತವೆ. ಅಲ್ಲ, ಬಕ್ರೀದ್ ಹೆಸರಲ್ಲಿ ಭಾರತದಲ್ಲಿ ಅದೆಷ್ಟು ಲಕ್ಷ ಹಸುಗಳನ್ನು ಕೊಲ್ಲುವುದಿಲ್ಲ? ವಯಸ್ಸಾಗದ ಹಸುಗಳನ್ನು ಕೊಲ್ಲುವಂತಿಲ್ಲ, ಸಾಗಿಸುವಂತಿಲ್ಲ ಎಂದು ಕೋರ್ಟೇ ಆದೇಶಿಸಿದ್ದರೂ ಮಂಗಳೂರಿನಿಂದ ಅದೆಷ್ಟು ಹಸುಗಳನ್ನು ಕೇರಳಕ್ಕೆ ಸಾಗಿಸುವುದಿಲ್ಲ? ಇಂದು ಕಾನ್ಪುರ ಲೆದರ್ ತಯಾರಿಕೆ ಹಾಗೂ ರಫ್ತಿನಲ್ಲಿ ವಿಶ್ವದಲ್ಲೇ ನಂ. ಒನ್ ಸ್ಥಾನಕ್ಕೇರಿದೆ ಎಂದರೆ ಅದರ ಹಿಂದೆ ಎಷ್ಟು ಹಸುಗಳ ಬಲಿಯಾಗಿರಬಹುದು? ಹಸುಗಳ ಮಾರಾಟಕ್ಕಾಗಿ ಇಂದು ಏಕೆ ಊರಿಗೊಬ್ಬ ಮುಲ್ಲಾ ಅಥವಾ ದಲ್ಲಾಳಿಗಳು ಸೃಷ್ಟಿಯಾಗಿದ್ದಾರೆ? ನೆನಪಿರಲಿ, ಹೀಗೆ ಲೋಡುಗಟ್ಟಲೆ ಹರೆಯದ ಹಸುಗಳನ್ನು ಸಾಗಿಸುವಾಗ ಅವು ಮೂತ್ರ ಮಾಡಲು ಸಹ ಜಾಗ ಅಥವಾ ಅವಕಾಶವಿರುವುದಿಲ್ಲ. ಸಾವಿರಾರು ಕಿ.ಮೀ.ವರೆಗೂ ಅವು ನಿಂತೇ ಹೋಗಬೇಕು. ಹೋದ ಮೇಲೆ ಕತ್ತಿಗೆ ತಲೆ ಕೊಡಬೇಕು.

ಹೇಳಿ, ಈ ಎಲ್ಲ ಪ್ರಾಣಿ ಹಿಂಸೆಯ ಬಗ್ಗೆ, ಹಸುಗಳ ವಧೆಯ ಬಗ್ಗೆ ಈ ಪ್ರಾಣಿದಯಾ ಸಂಘದವರು, ಪ್ರಾಣಿ ಪ್ರಿಯರು ಏಕೆ ಸೊಲ್ಲೆತ್ತುವುದಿಲ್ಲ? ಏಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಿಲ್ಲ? ಮುಸ್ಲಿಮರು ಬಂದು ಮನೆಯ ಗಾಜು ಒಡೆಯುತ್ತಾರೆ ಅಂತಲೇ? ಒಂದು ಧರ್ಮದ ವಿರೋಧ ಕಟ್ಟಿಕೊಳ್ಳುತ್ತೇವೆ ಅಂತಲೇ? ಅಥವಾ ಹಿಂದೂ ಸಂಪ್ರದಾಯಕ್ಕೆ ಏನು ಮಾಡಿದರೂ ಯಾರೂ ಕೇಳುವುದಿಲ್ಲ ಅಂತಲೇ?

ಹಾಗಾದರೆ ಹಿಂದೂಗಳು, ಹಿಂದೂ ಸಂಪ್ರದಾಯಗಳು ಏನು ಬಿಟ್ಟಿಗೆ ಬಿದ್ದಿವೆಯೇ? ಈ ಜಲ್ಲಿಕಟ್ಟು ನಿಷೇಧದ ಮಿಮಾಂಸೆ ಕುರಿತು ಹೇಳುವುದಾದರೆ, ಅಲ್ಲಾವ ಪ್ರಾಣಿಯ ಹಿಂಸೆಯೂ ಆಗುವುದಿಲ್ಲ. ರೈತ ವರ್ಷವಿಡೀ ಅವುಗಳಿಗೆ ಹಿಂಡಿ, ಬೂಸಾ ಹಾಕಿ ಮೇಯಿಸುತ್ತಾನೆ. ಗರಡಿಯಲ್ಲಿ ಕುಸ್ತಿಪಟುವೊಬ್ಬ ಪಳಗಿದಂತೆ ಹೋರಿಗಳಿಗೂ ತಾಲೀಮು ಮಾಡಿಸುತ್ತಾನೆ. ಜಲ್ಲಿಕಟ್ಟಿನಲ್ಲಿ ಪಾಲ್ಗೊಂಡಾಗ ಅವು ಮುನ್ನುಗ್ಗದಿದ್ದಾಗ ಎರಡೇಟು ಹಾಕುತ್ತಾನೆ. ಅಷ್ಟಕ್ಕೇ ಅದು ಪ್ರಾಣಿ ಹಿಂಸೆಯಾಗುತ್ತದೆಯೇ? ಅದು ತಮಿಳುನಾಡಿನ ಪೊಂಗಲ್ ಆದರೂ ಸರಿ, ದೇಶದ ಯಾವ ಭಾಗವಾದರೂ ಸರಿ, ಜಲ್ಲಿಕಟ್ಟಿಗೆ ಸಾವಿರಾರು ಜನ ಸೇರುತ್ತಾರೆ. ಅಲ್ಲಿ ಲಕ್ಷಾಂತರ ರು. ವ್ಯವಹಾರವಾಗುತ್ತದೆ. ಹಾವೇರಿ ಜಿಲ್ಲೆ ಕಡೆ ಹೋರಿಗಳ ಕಾಳಗದಲ್ಲಿ ಗೆದ್ದರೆ ಟ್ರ್ಯಾಕ್ಟರ್ ಸೇರಿ ಹಲವು ಬಹುಮಾನ ನೀಡಿ ಕೃಷಿಗೆ ಉತ್ತೇಜನ ನೀಡಲಾಗುತ್ತದೆ. ಅಷ್ಟರಮಟ್ಟಿಗೆ ಜಲ್ಲಿಕಟ್ಟು ಕೃಷಿ ಹಾಗೂ ರೈತನಿಗೆ ಪೂರಕ.

ಆದರೆ ಈ ಹಿಂದೂ ವಿರೋಧಿಗಳು ಮಾತ್ರ ಇದನ್ನೇ ಪ್ರಾಣಿ ಹಿಂಸೆ ಎಂದು ಬಿಂಬಿಸುತ್ತವೆ. ಬೊಬ್ಬೆ ಹೊಡೆಯುತ್ತವೆ. ಜಲ್ಲಿಕಟ್ಟು ಒಂದೇ ಅಲ್ಲ, ಎಲ್ಲೆಲ್ಲಿ ಹಿಂದೂ ಸಂಪ್ರದಾಯಗಳಿವೆಯೋ, ಅಲ್ಲೆಲ್ಲ ಪ್ರಾಣಿ ದಯಾ ಸಂಘ ಕೋರ್ಟ್ ಮೆಟ್ಟಿಲೇರಿದೆ. ಗುಜರಾತ್‌ನಲ್ಲಿ ಗಾಡಿಗೆ ಕುದುರೆ ಕಟ್ಟಿ ಓಡಿಸುವ ಟಾಂಗಾ ರೇಸ್ ವಿರುದ್ಧವೂ ಕೋರ್ಟ್ ಮೆಟ್ಟಿಲೇರಿತ್ತು. ಅದೃಷ್ಟವಶಾತ್ ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿ, ಟಾಂಗಾಗೆ ಅನುಮತಿ ನೀಡಿ ಸಂಘದವರಿಗೆ ಮಂಗಳಾರತಿ ಮಾಡಿತ್ತು.

ದೇಶದಲ್ಲಿರುವ ಧರ್ಮಾಂಧರಿಗೆ, ಹಿಂದೂ ವಿರೋಧಿ ಕಿಡಿಗೇಡಿಗಳಿಗೆ ಎಲ್ಲವನ್ನೂ ಏಕಾಭಿಮುಖವಾಗಿ ನೋಡುವ ರೋಗ ಅಂಟಿದೆ. ಇದೇ ಜಲ್ಲಿಕಟ್ಟನ್ನು ಸ್ಪೇನ್‌ನಲ್ಲಿ ಬುಲ್ ಫೈಟಿಂಗ್ ಎಂದು ಆಚರಿಸಲಾಗುತ್ತದೆ. ಟಾಂಗಾ ರೇಸ್ ಉತ್ತರ ಅಮೆರಿಕ, ಆಸ್ಟ್ರೇಲಿಯಾದಲ್ಲೂ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಇವುಗಳನ್ನು ಏರ್ಪಡಿಸುವಂತೆ ಕೋರ್ಟೇ ಅನುಮತಿ ನೀಡಿದೆ. ಅಲ್ಲೆಲ್ಲ ಪ್ರಾಣಿದಯಾ ಸಂಘದವರು ಇಲ್ಲ ಎಂಬುದಕ್ಕೆ ಅಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಾಣಿ ಹಿಂಸೆಯಲ್ಲೇ ಬರುವುದಾದರೂ ಕಮಲ್ ಹಾಸನ್ ಹೇಳಿದಂತೆ ಬಿರಿಯಾನಿಯನ್ನು ನಿಷೇಧಿಸಲು ಹೊರಟರೆ ಅದು ಆಹಾರ ಪದ್ಧತಿಯಾಗುತ್ತದೆ. ಅದೇ ಹಿಂದೂ ಧರ್ಮದ ಆಚರಣೆಯಾದ ಜಲ್ಲಿಕಟ್ಟು ಪ್ರಾಣಿಹಿಂಸೆಯಾಗುತ್ತದೆ. ಇಲ್ಲೇ ತಿಳಿಯುತ್ತದೆ ಇವರ ಇಬ್ಬಂದಿತನ. ನಮ್ಮ ನ್ಯಾಯಾಧೀಶರೂ ಅಷ್ಟೇ, ಬರೀ ಕಾನೂನಿನ ಪುಸ್ತಕ ಅಧ್ಯಯನ ನೋಡಿ ತೀರ್ಪು ನೀಡುವುದನ್ನು ಬಿಟ್ಟು, ಗುಜರಾತಿನಲ್ಲಿ ಟಾಂಗಾ ರೇಸ್‌ಗೆ ಅವಕಾಶ ಮಾಡಿಕೊಟ್ಟಂತೆ ಜನರ ಅಂತರಾಳ, ಜಲ್ಲಿಕಟ್ಟಿನ ವಾಸ್ತವ ಅರಿತು ತೀರ್ಪು ನೀಡಬೇಕು. ಆಗ ಮಾತ್ರ ಪ್ರಾಣಿದಯಾ ಸಂಘದವರು, ಹಿಂದೂ ವಿರೋಧಿಗಳು ಸುಮ್ಮನಾಗಲು ಸಾಧ್ಯ.

-ಬಿ. ಸೋಮಶೇಖರ್
ಪತ್ರಕರ್ತ

Leave a Reply

Your email address will not be published. Required fields are marked *

seven + 10 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top