ಡಿವೈಎಸ್ಪಿಗಿಂತ ಚಾಲಕನ ಮಾತಿಗೆ ಹೆಚ್ಚು ಬೆಲೆ!

Posted In : ಅಂಕಣಗಳು, ಪ್ರಥಮ ಪೂಜೆ

ಮಂಡ್ಯ ಜಿಲ್ಲೆ ಮದ್ದೂರಿನ ಕಾಡುಕೊತ್ತನಹಳ್ಳಿ ನಿವಾಸಿ ಕೆ.ಸಿ. ರಮೇಶ್ ಡಿ.7ರಂದು ಮದ್ದೂರಿನ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆತ ಪತ್ರವೊಂದನ್ನು ಬರೆದಿಟ್ಟಿದ್ದ. ಅದರ ಪ್ರಕಾರ, ಭೀಮಾ ನಾಯಕ್ ಎಂಬ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕೆಲಸ ಮಾಡಿದ ವ್ಯಕ್ತಿ ವಿವಿಧ ಮಾರ್ಗದಲ್ಲಿ ಜನಾರ್ದನ ರೆಡ್ಡಿಯ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದಾರೆ. ಆ ಸಂದರ್ಭ ಇಲಾಖೆಯಿಂದ ಭೀಮಾ ನಾಯಕ್ ಅವರ ಕಾರು ಚಾಲಕನಾಗಿ ಕೆ.ಸಿ. ರಮೇಶ್ ಕೆಲಸ ಮಾಡುತ್ತಿದ್ದ. ಆದ್ದರಿಂದ ಆ ಮಾಹಿತಿ ಅವನಿಗೆ ಗೊತ್ತಿತ್ತು. ಅದೇ ಕಾರಣಕ್ಕೆ ನಾನು ಯಾರಿಗೂ ಹೇಳದಂತೆ ಜೀವಬೆದರಿಕೆ ಹಾಕಲಾಗುತ್ತಿತ್ತಂತೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಪತ್ರದಲ್ಲಿ ಹೇಳಿದ್ದಾನೆ.

ಜನಾರ್ದನ ರೆಡ್ಡಿ ಹೆಸರು ಬರುತ್ತಿದ್ದಂತೆ ಈ ಪ್ರಕರಣ ಭಾರೀ ಪ್ರಚಾರ ಪಡೆದುಕೊಂಡಿದೆ. ಅದೇ ಕಾರಣಕ್ಕೆ ಅಧಿಕಾರಿ ಭೀಮಾ ನಾಯಕ್ ಬಂಧನಕ್ಕೊಳಗಾಗಿದ್ದಾರೆ. ಭೀಮಾ ನಾಯಕ್ ನಂತರ ರೆಡ್ಡಿಗಳನ್ನೂ ಬಂಧಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಇದೆ. ವಿಚಿತ್ರವೆಂದರೆ ಭೀಮಾ ನಾಯಕ್ ಬಂಧಿತರಾಗಿರುವುದು ಕಪ್ಪು ಹಣ ಬಿಳಿ ಮಾಡಿಕೊಟ್ಟಿದ್ದಕ್ಕಾಗಿ ಅಲ್ಲ. ರೆಡ್ಡಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬುದಕ್ಕೂ ಅಲ್ಲ. ಸರಕಾರಿ ಅಧಿಕಾರಿಯಾಗಿ ಕಪ್ಪು ಹಣ ಬಿಳಿ ಮಾಡಲು ಸಹಾಯ ಮಾಡಿದ್ದಾರೆ ಎಂಬ ಕಾರಣಕ್ಕೂ ಅಲ್ಲ. ಅಕ್ರಮ ಆಸ್ತಿ, ಹಣ ಸಂಪಾದನೆ, ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆ, ಊಹುಂ ಇದ್ಯಾವ ಕಾರಣಕ್ಕೂ ಅಲ್ಲ. ಅವರನ್ನು ಬಂಧಿಸಿದ್ದು, ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ!

ಭೀಮಾ ನಾಯಕ್ ಅವರನ್ನು ಬಂಧಿಸಿದ್ದರ ಬಗ್ಗೆ ಆಕ್ಷೇಪವಿಲ್ಲ. ಕಾನೂನು ಪ್ರಕಾರ ಏನಾಗಬೇಕೊ ಅದಾಗುತ್ತಿದೆ. ಅದರ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಭೀಮಾ ನಾಯಕ್ ಒಬ್ಬರೇ ಅಲ್ಲ, ಆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಿ. ಆದರೆ ಕೆಲವೇ ತಿಂಗಳ ಹಿಂದೆ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಪತ್ರ ಬರೆದಿಟ್ಟಿಲ್ಲ ಎಂದರು. ಆದರೆ ಅವರೇ ಸ್ವ ಇಚ್ಛೆಯಿಂದ ರೆಕಾರ್ಡ್ ಮಾಡಿದ ವಿಡಿಯೊ ಇತ್ತು. ಸಚಿವ ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಅವರು ಆರೋಪ ಮಾಡಿದ್ದರು. ಅದನ್ನು ಇಡೀ ರಾಜ್ಯವೇ ನೋಡಿದೆ. ಜಾರ್ಜ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಯಿತು. ಅವರ ವಿರುದ್ಧವೂ ಆತ್ಮಹತ್ಯೆಗೆ ಪ್ರೇರಣೆ ಪ್ರರಕಣ ದಾಖಲಿಸಬೇಕಿತ್ತು.

ಆದರೆ ದೊಡ್ಡವರು. ಆಡಳಿತ ಪಕ್ಷದವರು ಬೇರೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣವೇ ದಾಖಲಾಗಲಿಲ್ಲ!
ಭೀಮಾ ನಾಯಕ್ ಕಲಬುರಗಿಯಲ್ಲಿದ್ದರೂ ಮದ್ದೂರು ಪೊಲೀಸರು ಹೋಗಿ ಅವರನ್ನು ಬಂಧಿಸಿ ಕರೆತಂದಿದ್ದಾರೆ. ಕೆ.ಜೆ. ಜಾರ್ಜ್ ಬೆಂಗಳೂರಿನಲ್ಲೇ ಇದ್ದರೂ ಅವರ ಮನೆಯ ಬಳಿಯೂ ಪೊಲೀಸರು ಸುಳಿದ ಸುದ್ದಿ ಬರಲಿಲ್ಲ. ಅವರನ್ನು ಕರೆದು, ಗೌರವಯುತವಾಗಿ ವಿಚಾರಣೆ ನಡೆಸಲಾಯಿತು. ಭಾರೀ ವೇಗದಲ್ಲಿ ತನಿಖೆ ನಡೆಸಿದ ಸಿಐಡಿ, ಮೂರು ತಿಂಗಳಲ್ಲಿ ‘ಜಾರ್ಜ್‌ದೇನೂ ತಪ್ಪಿಲ್ಲ, ಈ ಪ್ರಕರಣದಲ್ಲಿ ಅವರೊಬ್ಬ ಅಮಾಯಕ’ ಎಂಬ ವರದಿಯನ್ನೂ ಸಲ್ಲಿಸಿತು. ಕೆ.ಜೆ. ಜಾರ್ಜ್ ಮರಳಿ ಸಚಿವರಾದರು. ಅದು ಮೊದಲೇ ಸರಕಾರಕ್ಕೆ ಗೊತ್ತಿದ್ದರಿಂದ ಆ ಸ್ಥಾನ ಅವರಿಗಾಗಿಯೇ ಖಾಲಿ ಬಿಡಲಾಗಿತ್ತು.

ಅದೇ ಸರಕಾರ, ಅದೇ ಪೊಲೀಸರು, ಅದೇ ಸಿಐಡಿ ಈಗ ಭೀಮಾ ನಾಯಕ್ ಅವರನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಬಂಧಿಸಿದೆ! ಒಬ್ಬ ಡಿವೈಎಸ್ಪಿ ಹೇಳಿದ್ದಕ್ಕಿಂತ ಹೆಚ್ಚು ಮಹತ್ವ ಕಾರು ಚಾಲಕನ ಮಾತಿಗೆ ಸಿಕ್ಕಿದೆ. ಕಾರು ಚಾಲಕನ ಮಾತಿಗೆ, ಮಾಹಿತಿಗೆ ಮಹತ್ವ ನೀಡಬಾರದು ಎಂದಲ್ಲ. ಡಿವೈಎಸ್ಪಿ ಮಾತಿಗೂ ನೀಡಬೇಕಿತ್ತು ಎಂಬುದಷ್ಟೇ ನನ್ನ ಕಳಕಳಿ. ಡಿವೈಎಸ್ಪಿ ಮಾನಸಿಕ ಖಿನ್ನತೆಗೆ ಒಳಗಾಗಬಹುದು ಎಂದಾದರೆ ಕಾರು ಚಾಲಕನೂ ಮಾನಸಿಕ ಖಿನ್ನತೆಗೆ ಒಳಗಾಗಬಹುದಲ್ಲವೇ?
ಅಕಸ್ಮಾತ್ ಆತ್ಮಹತ್ಯೆ ಮಾಡಿಕೊಂಡ ಕೆ.ಸಿ. ರಮೇಶ್ ಕಾಂಗ್ರೆಸ್ ನಾಯಕರ ವಿರುದ್ಧ ಪತ್ರ ಬರೆದಿಟ್ಟಿದ್ದರೆ ಇಷ್ಟೇ ವೇಗದ ತನಿಖೆ ನಡೆಯುತ್ತಿತ್ತೇ? ಒಂದೊಮ್ಮೆ ಭೀಮಾ ನಾಯಕ್ ಯಾವುದಾದರೂ ಕಾಂಗ್ರೆಸ್ ನಾಯಕರ ಕಪ್ಪು ಹಣ ಬಿಳಿ ಮಾಡಲು ಸಹಾಯ ಮಾಡಿದ್ದರೆ, ಆಗ ಸರಕಾರ, ಸಿಐಡಿ ಇಷ್ಟೇ ಚುರುಕಾಗಿ ಕೆಲಸ ಮಾಡುತ್ತಿತ್ತಾ? ಭೀಮಾ ನಾಯಕ್ ಕಾಂಗ್ರೆಸ್ ನಾಯಕರ ಚೇಲಾ ಆಗಿದ್ದರೆ ಅವರನ್ನು ಬಂಧಿಸಲು ಸಾಧ್ಯವಾಗುತ್ತಿತ್ತಾ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಸಾಮಾನ್ಯ ಜನ ಇದೆಲ್ಲ ಪ್ರಶ್ನೆಗೆ ಇಲ್ಲ ಎಂದೇ ಉತ್ತರಿಸುತ್ತಾರೆ! ಯಾಕೆಂದರೆ ಸರಕಾರ ಆ ರೀತಿ ವರ್ತಿಸಿದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವರ್ತಿಸಿದಂತೆಯೇ ಸರಕಾರ ಮೈಸೂರು ಜಿಲ್ಲಾಧಿಕಾರಿ ಶಿಖಾಗೆ ಬೆದರಿಕೆ ಹಾಕಿದ ಪ್ರಕರಣದಲ್ಲೂ ವರ್ತಿಸಲಾಗಿತ್ತು. ಆ ಪ್ರಕರಣದಲ್ಲಿ ಕೆ.ಮರಿಗೌಡ ಅವರನ್ನು ಒಂದೋವರೆ ತಿಂಗಳಾದರೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆಗ ಪೊಲೀಸರು ಮರಿಗೌಡನನ್ನು ಬಂಧಿಸುವ ನೆಪದಲ್ಲಿ ಕೇರಳ, ಊಟಿ ಪ್ರವಾಸ ಮಾಡಿದ್ದೇ ಬಂತು. ಮರಿಗೌಡ ಮಾತ್ರ ಮೈಸೂರು ಆಸುಪಾಸಿನಲ್ಲೇ ಇದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ನಿಧನರಾದ ಸಂದರ್ಭದಲ್ಲಿ ಅನಿವಾರ್ಯವಾಗಿ ಮರಿಗೌಡ ನ್ಯಾಯಾಲಯಕ್ಕೆ ಶರಣಾದರು. ಅಷ್ಟೊತ್ತಿಗೆ ಶಿಖಾ ವರ್ಗವಾಯಿತು.

ಕೆ.ಸಿ. ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ವಿಷಯ ಪ್ರಸ್ತಾಪವಾಗಿದೆ. ಅವರಿಬ್ಬರೂ ಬಿಜೆಪಿಗೆ ಸೇರಿದವರು. ಅದಕ್ಕೇ ಕಾಂಗ್ರೆಸ್ ಸರಕಾರಕ್ಕೆ ವಿಶೇಷ ಆಸಕ್ತಿ. ಹಾಗಾಗಿಯೇ ಪೊಲೀಸರು ಇಷ್ಟು ಚುರುಕು. ಇಲ್ಲವಾದಲ್ಲಿ ನಮ್ಮ ಪೊಲೀಸರು ಇಷ್ಟೆಲ್ಲ ಚುರುಕಾಗಿ ಕೆಲಸ ಮಾಡಲು ಸಾಧ್ಯವಿತ್ತೇ? ಇತ್ತೀಚೆಗೆ ಪೊಲೀಸರ ವರ್ತನೆಯಲ್ಲೇ ಸರಕಾರದ ಆಸಕ್ತಿ, ಹಿತಾಸಕ್ತಿ ಗೊತ್ತಾಗಿಬಿಡುತ್ತದೆ. ಒಂದೊಮ್ಮೆ ಜನಾರ್ದನ ರೆಡ್ಡಿ, ಶ್ರೀರಾಮುಲು ಕಪ್ಪು ಹಣ ಬಿಳಿ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಅವರ ಕೈವಾಡವೇನಾದರೂ ಪತ್ತೆಯಾದರೆ, ಅವರನ್ನು ಬಂಧಿಸಿ, ಆ ಮೂಲಕ ಒಂದಷ್ಟು ರಾಜಕೀಯದ ಲಾಭ ಪಡೆಯುವ, ಬಿಜೆಪಿಯನ್ನು ಹಣಿಯುವ ತವಕದಲ್ಲಿ ಸರಕಾರ ಇರುವಂತಿದೆ. ಅದಕ್ಕಾಗಿಯೇ ಈ ಪ್ರಕರಣದಲ್ಲಿ ಇಷ್ಟು ವೇಗ.

ಬೇಕಾದರೆ ನೋಡಿ ಕೆ.ಸಿ. ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಉಳಿದ ವಿಷಯಗಳನ್ನೂ ತನಿಖೆ ಮಾಡಲಾಗುತ್ತದೆ. ಉದಾಹರಣೆಗೆ ಭೀಮಾ ನಾಯಕ್ ಹಾಗೂ ರೆಡ್ಡಿ- ಶ್ರೀರಾಮುಲು ನಡುವೆ ಏನು ಸಂಬಂಧವಿತ್ತು? ಅವರು ಕಪ್ಪು ಹಣ ಬಿಳಿ ಮಾಡಲು ಸಹಕರಿಸಿದ್ದಾರಾ? ಎಷ್ಟು ಕಪ್ಪು ಹಣ ಬಿಳಿ ಮಾಡಿಕೊಟ್ಟಿದ್ದಾರೆ? ಅದು ರೆಡ್ಡಿಗಳಿಗೆ ಎಲ್ಲಿಂದ ಬಂತು? ಅದಕ್ಕೆ ನಾಯಕ್ ಎಷ್ಟು ಪಡೆದಿದ್ದಾರೆ? ಹೇಗೆ ಬಿಳಿ ಮಾಡಿಕೊಟ್ಟಿದ್ದಾರೆ? ರೆಡ್ಡಿ- ಶ್ರೀರಾಮುಲು ಅಲ್ಲದೇ ಮತ್ಯಾರಾದರೂ ಬಿಜೆಪಿ ನಾಯಕರ ಕಪ್ಪು ಹಣ ಬಿಳಿ ಮಾಡಲಾಗಿದೆಯೇ? ಅದರಲ್ಲಿ ರಮೇಶ್ ಪಾತ್ರವೇನು? ಅವನಿಗೆ ಜೀವಬೆದರಿಕೆ ಹಾಕಲು ಕಾರಣವೇನು? ಇಂತಹ ವಿಷಯಗಳನ್ನೆಲ್ಲ ತನಿಖೆ ಮಾಡಲಾಗುತ್ತದೆ.

ಆದರೆ ಗಣಪತಿ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳ ಪಾತ್ರವಿಲ್ಲ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಅಕಸ್ಮಾತ್ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದಾದರೆ ಗಣಪತಿಗೆ ಕಿರುಕುಳ ಕೊಟ್ಟವರಾರು? ಅವರು ಕೆ.ಜೆ. ಜಾರ್ಜ್ ಹೆಸರನ್ನು ಬಳಸಿದ್ದರಾ? ಅವರು ಹಾಗೆ ಮಾಡಿದ್ದೇಕೆ? ಗಣಪತಿ ಅವರ ‘ಮಾನಸಿಕ ಖಿನ್ನತೆಗೆ’ ಒಳಗಾಗಲು ಕಾರಣ ಯಾರು? ಯಾಕಾಗಿ ಆತ,ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂತು? ತೊಂದರೆ ಕೊಡದಿದ್ದರೂ ಇಷ್ಟೆಲ್ಲ ಪೊಲೀಸ್ ಅಧಿಕಾರಿಗಳು ಇರುವಾಗ ಕೇವಲ ಇಬ್ಬರು ಪೊಲೀಸ್ ಅಧಿಕಾರಿಗಳ ಹಾಗೂ ಕೆ.ಜೆ. ಜಾರ್ಜ್ ಹೆಸರು ಹೇಳಲು ಕಾರಣವೇನು? ಎಂಬ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

ಯಾಕೆಂದರೆ ಸರಕಾರಕ್ಕೆ ಜಾರ್ಜ್ ಬಚಾವಾಗುವುದು ಅಥವಾ ಬಚಾವ್ ಮಾಡುವುದಷ್ಟೇ ಮುಖ್ಯವಾಗಿತ್ತು.
ಇತ್ತೀಚೆಗೆ ಸಚಿವ ತನ್ವೀರ್ ಸೇಠ್ ಅವರು ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಶ್ಲೀಲ ಫೋಟೊ ನೋಡಿದ್ದು ದೊಡ್ಡ ಸುದ್ದಿಯಾಯಿತು. ವಿಧಾನಸಭೆಯಲ್ಲಿ ಬಿಜೆಪಿಯ ಮೂವರು ಆಶ್ಲೀಲ ವಿಡಿಯೊ ನೋಡಿದ ಸಂದರ್ಭ ಏನಾಯಿತೆಂಬುದು ಎಲ್ಲರಿಗೂ ಗೊತ್ತಿದೆ. ಸಚಿವರೆಲ್ಲ ರಾಜೀನಾಮೆ ನೀಡಿದ್ದರು. ಹಾಗಂತ ಸದನ ಸಮಿತಿ ವರದಿಯಲ್ಲಿ ಅವರು ತಪ್ಪು ಮಾಡಿಲ್ಲ ಎಂಬ ವರದಿಯೇ ಬಂತು ಬಿಡಿ. ಆಗ ಕಾಂಗ್ರೆಸ್ಸಿಗರು ಹೇಗೆ ವರ್ತಿಸಿದ್ದರು? ಏನೇನು ಮಾತನಾಡಿದ್ದರು ಎಂಬುದು ರಾಜ್ಯದ ಜನತೆಗೆ ನೆನಪಿದೆ. ಅದೇ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ನೋಡಿದಾಗ, ಅದರ ಪ್ರತಿಕ್ರಿಯೆ ಸಂಪೂರ್ಣ ಬದಲಾಗಿತ್ತು. ಅವರು ರಾಜೀನಾಮೆಯನ್ನೂ ನೀಡಲಿಲ್ಲ. ಈಗ ಯಥಾಪ್ರಕಾರ ಅವರನ್ನು ಬಚಾವ್ ಮಾಡುವ ಪ್ರಯತ್ನದಲ್ಲಿ ನಮ್ಮ ನಿಷ್ಠಾವಂತ ಸಿಐಡಿ ತನಿಖೆ ನಿರತವಾಗಿದೆ.

ಅಂದು ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿದ್ದು, ಇಂದು ಸಚಿವರು ಕಾರ್ಯಕ್ರಮದಲ್ಲಿ ಅಶ್ಲೀಲ ಚಿತ್ರ ನೋಡಿದ್ದು ಎರಡೂ ವಿಡಿಯೊ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆ. ಆದರೂ ಎರಡೂ ಪ್ರಕರಣ ಸುಳ್ಳು ಅಥವಾ ನಡೆದಿಲ್ಲ ಎಂಬರ್ಥದ ವರದಿ ಬರಲಿದೆ. ಹಾಗಾದರೆ ಚಾನೆಲ್‌ಗಳು ಪ್ರಸಾರ ಮಾಡಿದ ಆ ವಿಡಿಯೊ ಸುಳ್ಳೇ? ವಿಡಿಯೊವನ್ನು ಎಡಿಟ್ ಮಾಡಲಾಗಿದೆಯೇ? ಮಾಡಿದ್ದರೆ ಯಾಕೆ ಮತ್ತು ಯಾರು ಮಾಡಿದ್ದು? ಎಡಿಟ್ ಮಾಡಲಾಗಿಲ್ಲ ಎಂದಾದರೆ ಅಶ್ಲೀಲ ಚಿತ್ರ ನೋಡಿದ್ದು ಸುಳ್ಳಾಗುವುದು ಹೇಗೆ? ಇದ್ಯಾಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ. ಅಲ್ಲಿಗೆ ಅವರು ರಾಜೀನಾಮೆ ನೀಡಿದ್ದೇ ಶಿಕ್ಷೆ. ಕಾರ್ಯಕ್ರಮದಲ್ಲಿ ನೋಡಿದವರಿಗೆ ಆ ಶಿಕ್ಷೆಯೂ ಇಲ್ಲ!

ಈಗ ಸಚಿವ ಮೇಟಿ ಅವರ ಪ್ರಕರಣ. ಹಾಲಪ್ಪ, ರೇಣುಕಾಚಾರ್ಯ, ಮೈಸೂರಿನ ರಾಮದಾಸ್ ಅವರ ವಿರುದ್ಧ ಅನೈತಿಕ ಸಂಬಂಧ ಪ್ರಕರಣಗಳು ಬಂದಾಗ ಕಾಂಗ್ರೆಸ್ಸಿಗರು ವರ್ತಿಸಿದ ರೀತಿಯನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅದೇ ಈಗ ಎಚ್‌ವೈ ಮೇಟಿ ವಿರುದ್ಧ ಆರೋಪ ಬಂದಾಗ ಕಾಂಗ್ರೆಸ್ಸಿಗರ ನಿಲುವು ಬದಲಾಗಿದೆ. ಕಾಗೋಡು ತಿಮ್ಮಪ್ಪ ಅವರು, ‘ಮೇಟಿ ಅವರಿಗೆ 71 ವರ್ಷ, ಅದನ್ನು ನೋಡಿಯಾದರೂ ಅವರನ್ನು ಬಿಡಿ’ ಎಂಬರ್ಥದಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳಂತೂ ‘ಸಿಡಿ ಬಿಡುಗಡೆಯಾದರೆ ರಾಜೀನಾಮೆ’ಎಂದಿದ್ದಾರೆ. ಅದರರ್ಥ ಸಿಡಿ ಬಿಡುಗಡೆಯಾಗದೇ ಎಷ್ಟು ಅಕ್ರಮ ಮಾಡಿದರೂ ಪರವಾಗಿಲ್ಲ ಎಂದೇ? ಸಿಡಿ ಬಿಡುಗಡೆಯಾದರೆ ಮಾತ್ರ ಅಕ್ರಮ ಎಸಗಿದ್ದಾರೆ ಎಂದರ್ಥವೇ? ಇಷ್ಟಕ್ಕೂ ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಕೆಲವರಿಗೆ ‘ಮೇಟಿ ವಿದ್ಯೆ’ ಏನೆಂಬುದು ಗೊತ್ತು. ಆದರೂ ‘ಸಿಡಿ ಬಿಡುಗಡೆ’ಗಾಗಿ ಕಾಯುತ್ತಿದ್ದಾರೆ. ಅದೇ ಬೇರೆ ಪಕ್ಷದವರಾಗಿದ್ದರೆ ಇವರೇ ‘ಮೊದಲು ರಾಜೀನಾಮೆ ಕೊಡಿ’ ಎಂದು ಒತ್ತಾಯಿಸುತ್ತಿದ್ದರು.

ಇದೆಲ್ಲ ಪ್ರಕರಣವನ್ನು ನೋಡಿ. ಸರಕಾರ, ಪಕ್ಷ, ನಾಯಕರ ನಿಲುವುಗಳು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಿವೆ. ಪ್ರಕರಣಕ್ಕಿಂತ ಮುಖ್ಯವಾಗಿ ಅದರಲ್ಲಿ ಭಾಗಿಯಾಗಿರುವವರು ಯಾರು ಎಂಬುದರ ಮೇಲೆ ಸರಕಾರದ ಆಸಕ್ತಿ, ಪೊಲೀಸರ ಚುರುಕುತನ, ನಾಯಕರ ಹೇಳಿಕೆಗಳು, ತನಿಖೆಯ ವರದಿಗಳು ನಿರ್ಧಾರವಾಗುತ್ತವೆ. ಎಲ್ಲ ಸಂಸ್ಥೆಗಳ ಮೇಲೂ ಜನ ನಂಬಿಕೆ ಕಳೆದುಕೊಳ್ಳುವ ಸ್ಥಿತಿ. ಇದಕ್ಕೆ ನಮ್ಮನ್ನಾಳಿದ, ಆಳುತ್ತಿರುವ ಸರಕಾರಗಳೇ ಹೊಣೆಯಲ್ಲವೇ? ಜಾಸ್ತಿ ಮಾತನಾಡಿದರೆ ಇದರ ಬಗ್ಗೆಯೂ ಸಿಐಡಿ ತನಿಖೆ ಮಾಡಿಸುವುದಾಗಿ ಸರಕಾರ ಹೆದರಿಸುವ ಸಾಧ್ಯತೆಯಿದೆ!

Leave a Reply

Your email address will not be published. Required fields are marked *

three × 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top