ದಶರಥ ನಿರ್ಧಾರದಿಂದ ರಾಮಾಯಣ, ಮುಲಾಯಂರಿಂದಾಗದಿರಲಿ ಉತ್ತರಾಯಣ

Posted In : ಸಂಗಮ, ಸಂಪುಟ

ಮೊಬೈಲ್, ವಾಟ್ಸ್ಯಾಪ್, ಇ-ಮೇಲ್ ಮೂಲಕ ಚರ್ಚೆ ನಡೆಯುವ ದಿನಗಳು ಇವು. ಕ್ಷಣದಲ್ಲೇ ಜಗತ್ತಿನೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು. ಕ್ಷಣದಲ್ಲೇ ಏನು ಬೇಕಾದರು ಬದಲಾಗಬಹುದು. ಕುಟುಂಬ, ಸಮಾಜವಾದಿ ಪಕ್ಷ ಮತ್ತು ನೇತಾಜಿ (ಮುಲಾಯಂ ಸಿಂಗ್ ಯಾದವ್) ಮಧ್ಯೆ ಯಾರಾದರೂ ಬಂದರೆ, ಅಂತವರನ್ನು ದೂರ ಸರಿಸಲು ಎಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಕುಟುಂಬದಲ್ಲಿ ಜಗಳ ಶುರುವಾಗಿದ್ದು ನನ್ನಿಂದಲ್ಲ, ನಾನು ಕುಳಿತಿರುವ ಖುರ್ಚಿಗಾಗಿ…

ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಮೂರು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತು. ಈ ಮಾತು ಪ್ರಸ್ತುತ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಬಿಕ್ಕಟ್ಟಿನ ಕುರಿತು ಸಣ್ಣ ಸುಳಿವು ನೀಡುವ ಜತೆಗೆ ನಿಮ್ಮ ಸೈಕಲ್ ಯಾತ್ರೆ ಮುಗಿಯಿತು, ಇನ್ನೇನಿದ್ದರೂ ರಾಕೆಟ್ ವೇಗದ ಯುವಕರ ಆಟ ಎಂಬುದನ್ನು ಸೂಚ್ಯವಾಗಿ ಹೇಳಿದ್ದರು. ಈಗ ಅಖಿಲೇಶ್ ಆ ಮಾತನ್ನು ಸಾಬೀತುಪಡಿಸಿದ್ದಾರೆ.

ತಳ ಮಟ್ಟದಿಂದ ಸಮಾಜವಾದಿ ಪಕ್ಷ ಕಟ್ಟಿದ ಮುಲಾಯಂ ಸಿಂಗ್ ಸೇರಿ ಹಿರಿಯ ಮುಖಂಡರನ್ನು ಹಿಂದಕ್ಕೆ ತಳ್ಳಿ, ಐದು ವರ್ಷ ಅಧಿಕಾರ ಅನುಭವಿಸಿದ ಅಖಿಲೇಶ ಯಾದವ್ ಅತಿಯಾಸೆ ಪಡುತ್ತಿದ್ದಾರೆ ಎಂಬುದು ಎಸ್‌ಪಿಯ ಹಿರಿಯ ಮುಖಂಡರ ದೂರು. ಆದರೆ ಇನ್ನು ಎಷ್ಟು ವರ್ಷ ಹಿರಿಯರ ಕೈಯಲ್ಲಿ ಆಡಳಿತ ನೀಡಬೇಕು ಎಂಬ ಪ್ರಶ್ನೆ ಉತ್ತರ ಪ್ರದೇಶ ಯುವಕರಲ್ಲಿ ಮೂಡಿದೆ. ಅಖಿಲೇಶ್ ಯಾದವ್ ಪರ ಉತ್ತರ ಪ್ರದೇಶದ ಯುವಕರು ನಿಂತಿರುವುದು ಇದಕ್ಕೆ ಸಾಕ್ಷಿ.

2012ರಲ್ಲಿ ತಂದೆ ಕೃಪಾಕಟಾಕ್ಷ ಬಿಟ್ಟರೆ ಬೇರಾವುದರ ಬೆಂಬಲವಿಲ್ಲದಿದ್ದರೂ ದೇಶದ ಬೃಹತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ವ್, ಇಂದು ತಂದೆ ವಿರುದ್ಧ ಹೋಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಮತ್ತು ಮುಲಾಯಂ ಸಿಂಗ್ ಯಾದವ್ ಮಗನಿಗೆ ಅಧಿಕಾರ ನೀಡಿದ ಮೇಲೆ ಆಡಳಿತದಲ್ಲಿ ಹಸ್ತಕ್ಷೇಪ ವಹಿಸುವುದು ಸರಿಯಲ್ಲ ಎಂಬುದು ಚರ್ಚಾರ್ಹ.

ಶೇ.41ರಷ್ಟು ಯುವಕರನ್ನು ಹೊಂದಿದ ದೇಶ ಭಾರತ. ಯುವಕರ ಕೈಯಲ್ಲಿ ಅಧಿಕಾರ ಬರಬೇಕು ಎಂದು ಇಡೀ ದೇಶ ಬಯಸುತ್ತದೆ. ಎಲ್ಲ ರಾಜ್ಯಗಳಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯುವಕರು ನಿರ್ಣಾಯಕರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರದ ಗದ್ದುಗೆ ಏರಲು ದೇಶದ ಯುವಶಕ್ತಿ ವಹಿಸಿದ್ದ ಪಾತ್ರವೇ ಚುನಾವಣೆ ಇತಿಹಾಸವನ್ನೇ ಬದಲಾಯಿಸಿತು. ಬಿಜೆಪಿಯ 252 ಸಂಸದರು ಗೆದ್ದರು. ಇಂತಹ ಸ್ಥಿತಿಯಲ್ಲಿ ಮುಲಾಯಂ ಸಿಂಗ್‌ರಂಥಹ ಹಿರಿಯ ಮುತ್ಸದ್ದಿ ಮಗನಿಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಬಿಟ್ಟು, ಸಲಹೆಗಾರನ ಸ್ಥಾನದಲ್ಲಿ ಇರುವುದು ಅವರ ಕುಟುಂಬ, ಪಕ್ಷ ಎರಡಕ್ಕೂ ಒಳ್ಳೆಯದು ಎಂಬುದು ಯುವಕರ ಅಭಿಪ್ರಾಯ. ಅದರಲ್ಲಿ ಸಂತ್ಯಾಶವೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವದಲ್ಲಿ ಹಿರಿಯರು ಮತ್ತು ಕಿರಿಯರ ಮಧ್ಯೆ ಸಣ್ಣ ಯುದ್ಧ ನಡೆಯಿತು. ಲಾಲಕೃಷ್ಣ ಅಡ್ವಾಣಿ ಒಲ್ಲದ ಮನಸ್ಸಿನಿಂದಲೇ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಸೂಚಿಸಿದರು. ಮನೋಹರ ಜೋಶಿ ಸೇರಿ ಹಲವು ಹಿರಿಯರು ಮೂಲೆಗುಂಪು ಮಾಡದೇ ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಸುವ ನಿರ್ಧಾರಕ್ಕೆ ಬರಲಾಯಿತು. ಹಿರಿಯರು ತಳಮಟ್ಟದಿಂದ ಹಲವು ಸಂಕಷ್ಟ ಎದುರಿಸಿ ಪಕ್ಷವನ್ನು ಉನ್ನತ ಸ್ಥಾನಕ್ಕೆ ಏರಿಸಿರುತ್ತಾರೆ. ಅವರ ಮಾರ್ಗದರ್ಶನ ಮುಖ್ಯ ಎಂಬುದು ಮರೆಯದೇ ಕಿರಿಯರು ನಡೆದುಕೊಳ್ಳಬೇಕು. ಅದನ್ನೀಗ ಮೋದಿ ಆ್ಯಂಡ್ ಟೀಮ್ ಮಾಡುತ್ತಿದೆ.

ಅಖಿಲೇಶ್ ಯಾದವ್ ಮೂರು ನಾಲ್ಕು ತಿಂಗಳಿಂದ ಪಕ್ಷದಲ್ಲಿ ಉಂಟಾದ ಕಲಹ, ಪಕ್ಷದಿಂದ ಉಚ್ಚಾಟನೆಯಾಗಿರುವುದು ಸೇರಿ ಹಲವು ಅಪಸವ್ಯ ಎದುರಿಸಿದರೂ, ಇದುವರೆಗೆ ಒಂದು ಮಾತನ್ನು ಸಹ ಮುಲಾಯಂ ಸಿಂಗ್ ಮತ್ತು ಚಿಕ್ಕಪ್ಪನ ವಿರುದ್ಧ ಆಡಿಲ್ಲ. ಅಪ್ಪನನ್ನೇ ಪಕ್ಷದಿಂದ ಉಚ್ಚಾಟಿಸಿದರೂ ನೇತಾಜಿ ಎನ್ನುವ ತನಕ ಮಾತನಾಡುತ್ತಿಲ್ಲ. ಒಬ್ಬ ನಾಯಕನಾದವನಿಗೆ ಹಿರಿಯರ ಬಗ್ಗೆ ಇರಬೇಕಾದ ಗೌರವದ ಪ್ರತೀಕವಿದು.

ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ 2012ರಲ್ಲಿ ಹಿಡಿದ ಅಖಿಲೇಶ್ ಯಾದವ್ ಹೇಳಿಕೊಳ್ಳುವಂತಹ ಆಡಳಿತ ನೀಡದಿದ್ದರೂ, ಜನರಲ್ಲಿ ಮೂಡಿಸಿದ್ದ ಕೆಲವು ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಯಾದವ್ ಕುಟುಂಬ ಕಲಹ, ಮುಲಾಯಂ ಸಿಂಗ್ ಯಾದವ್, ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಕೆಲವು ಹಿರಿತಲೆಯಲ್ಲಿರುವ ಅಹಂಗೆ ಬಲಿಯಾಗುವ ಭೀತಿ ಎದುರಿಸುತ್ತಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಹಲವು ಮನ್ವಂತರಗಳಿಗೆ ಕಾರಣವಾದ, ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದ ಆಡಳಿತವನ್ನು ಐದು ವರ್ಷ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದವರು ಅಖಿಲೇಶ್. ಅಷ್ಟಕ್ಕೂ ಆ ಮಾಯಾವತಿ ಆಡಳಿತ ನಡೆಸುವಾಗ ಉತ್ತರ ಪ್ರದೇಶ ಹೇಗಿತ್ತು ಎಂಬುದು ದೇಶಕ್ಕೇ ಗೊತ್ತಿದೆ. ಬಡ ಮೇಷ್ಟ್ರಾಗಿದ್ದ ಆಕೆ ಕೋಟ್ಯಂತರ ರು. ತೆರಿಗೆ ಕಟ್ಟದೇ ಹಾಗೆ ಬೆಳೆದಿದ್ದು, ಪಕ್ಷದ ಚಿನ್ಹೆ ಆನೆಗಳ ಮೂರ್ತಿ ಪ್ರತಿಷ್ಠಾಪಿಸಲು ಕೋಟ್ಯಂತರ ರು. ಖರ್ಚು ಮಾಡಿದ್ದು, ಬದುಕಿರುವಾಗಲೇ ತನ್ನ ಮೂರ್ತಿಯನ್ನು ತಾನೇ ಕೆತ್ತಿಸಿ ಅವಲಕ್ಷಣ ಮೆರೆದಿದ್ದು ಅವರ ದೂರ್ತ ರಾಜಕಾರಣಕ್ಕೆ ಹಿಡಿದ ಕನ್ನಡಿ. ಆದರೆ ಅಖಿಲೇಶ್ ಬಂದಾಗಿನಿಂದ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಗಾಳಿ ಬೀಸುತ್ತಿದೆ. ಜನ ಸಮಾಜವಾದಿ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ಯುವಕರು ಸಹ ಇದರ ಭಾಗವಾಗಲು ಉಮೇದಿ ವ್ಯಕ್ತಪಡಿಸುತ್ತಿದ್ದಾರೆ. ಅದೇ ಕಾರಣಕ್ಕೆ ಅಲ್ಲವೇ ಇನ್ನೂರಕ್ಕೂ ಅಧಿಕ ಶಾಸಕರು ಅಖಿಲೇಶ್ ಪರ ನಿಂತಿರುವುದು.

ಅಧಿಕಾರ ನೀಡಿದ ಅಪ್ಪನನ್ನೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ಮೂಲಕ ದಾರ್ಷ್ಟ್ಯ ಮೆರೆದಿದ್ದಾರೆ ಎನ್ನಬಹುದು. ಕೇವಲ ಐದು ವರ್ಷ ಅಧಿಕಾರ ನಡೆಸಿದ ಅಖಿಲೇಶ ಅವರಲ್ಲಿ ಇಂತಹ ದಿಟ್ಟ ನಿರ್ಧಾರ ಕೈಗೊಳ್ಳುವ ಭಂಡ ಧೈರ್ಯ ಕಂಡು ಉತ್ತರ ಪ್ರದೇಶ ಸಮಾಜವಾದಿ ಪಕ್ಷದ 200ಕ್ಕಿಂತ ಹೆಚ್ಚು ಶಾಸಕರು ಅಖಿಲೇಶ ಬೆಂಬಲಕ್ಕೆ ನಿಂತಿದ್ದಾರೆ. ಅಪ್ಪ ಮಕ್ಕಳ ಜಗಳದ ಮಧ್ಯೆ ಉತ್ತರ ಪ್ರದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಅಖಿಲೇಶ ಯಾದವ್ ಜತೆ ಕೈಜೋಡಿಸಲು ಮುಂದಾಗಿದೆ. ಮುಲಾಯಂ ಸಿಂಗ್ ಯಾದವ್ ವಿರೋಧದ ನಡುವೆ ಅಖಿಲೇಶ ಇತ್ತೀಚೆಗೆ ಪ್ರಿಯಾಂಕ್ ಗಾಂಧಿಯನ್ನು ಭೇಟಿಯಾಗಿ ಒಂದು ಹಂತದಲ್ಲಿ ‘ಕೈ’ ಜೋಡಿಸುವ ಮಾತುಕತೆ ಆರಂಭಿಸಿರುವುದು ಅವರ ದೂರ ದೃಷ್ಟಿಗೆ ಸಾಕ್ಷಿ, ಯುವಕರಿಗೆ ಅಧಿಕಾರದ ಎಲ್ಲ ಪಟ್ಟು ಅರಿತುಕೊಳ್ಳಲು ಅವಕಾಶ ನೀಡಿ ಎಂಬುದನ್ನು ಹೇಳಿದ್ದಾರೆ. ಇಲ್ಲಿ ಮುಲಾಯಂ ಹಿಂದಿರುವ ಎರಡನೇ ಹೆಂಡತಿ, ಅವರ ಕುಟುಂಬಸ್ಥರ ಹಿನ್ನೆಲೆ ಕುರಿತು ಸಹ ಯೋಚನೆ ಮಾಡಬೇಕು.

ರಾಷ್ಟ್ರ ರಾಜಕಾರಣದಲ್ಲಿ ಕುಟುಂಬದ ಆಡಳಿತಕ್ಕೆ ಬೆನ್ನುಹತ್ತಿ ಮಕ್ಕಳಿಗೆ ಅಧಿಕಾರ ನೀಡಿ, ಕೈಸುಟ್ಟುಕೊಂಡ ಹಲವು ಉದಾಹರಣೆಗಳಿವೆ. ಆದರೆ ಭಾಗಶಃ ಎಲ್ಲ ಕಡೆ ಯುವಕರಿಗೆ ಗೆಲುವಾಗಿರುವುದು ಸ್ಮರಣಾರ್ಹ. ಹಾಗಂತ ಹಿರಿಯರು ಮೂಲೆಗುಂಪಾಗದೇ ರಾಜ್ಯಸಭೆಯಂತೆ ನಿರಂತರವಾಗಿ ಸಲಹೆ ನೀಡುತ್ತಾ, ಕಾಯಿದೆಗಳನ್ನು ಪಾಸ್ ಮಾಡುವಲ್ಲಿ ಕೆಲವೊಮ್ಮೆ ನಿರ್ಣಾಯಕವೆಂಬಂತೆ ತಮ್ಮ ಪ್ರಭಾವ ಬೀರುತ್ತಿದ್ದಾರೆ, ಹಿರಿಯರಿಗೆ ಸಲಹೆ ನೀಡುವ ಸ್ಥಾನವೇ ಸೂಕ್ತ.

ಉತ್ತರ ಪ್ರದೇಶದಂತೆ ಹಿರಿ, ಕಿರಿಯರ ಜಗಳ ಹಲವು ಪಕ್ಷಗಳನ್ನು ಮೂಲೆಗುಂಪು ಮಾಡಿದ್ದರೆ, ಇನ್ನು ಕೆಲವು ಪಕ್ಷಗಳು ಔನತ್ಯಕ್ಕೆ ಏರಿವೆ. ಕರ್ನಾಟಕದಲ್ಲಿ ಎಚ್.ಡಿ.ದೇವೆಗೌಡರು ಮಗ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿಸಿ, 2008ರಲ್ಲಿ ಬಿಜೆಪಿಗೆ ಅಧಿಕಾರ ನೀಡದೇ ವಂಚಿಸಿದ್ದರಿಂದ ಜೆಡಿಎಸ್ ಭವಿಷ್ಯವೇ ಡೋಲಾಯಮಾನ ಸ್ಥಿತಿಗೆ ತಲುಪಿದೆ.

ಶಿವಸೈನಿಕರ ಮೂಲಕ ಮಹಾರಾಷ್ಟ್ರದ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದ ಬಾಳಾ ಸಾಹೇಬ್ ಠಾಕ್ರೆ ಅವರು ಯುವಕ ರಾಜ್ ಠಾಕ್ರೆಯನ್ನು ನಿರ್ಲಕ್ಷಿಸುವ ಮೂಲಕ, ಕುಟುಂಬ ಕಲಹ ಸೃಷ್ಟಿಯಾಗಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಸ್ಥಾಪನೆಗೆ ಕಾರಣವಾಯಿತು. ಗೋಧಿ ಕಣಜ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅಳಿಯ ಮನಪ್ರಿತ್ ಸಿಂಗ್ ಬಾದಲ್ ಮಧ್ಯದ ಬಿಕ್ಕಟ್ಟು ಹಿರಿ ಕಿರಿಯರ ವಾಗ್ವಾದಕ್ಕೆ ಸಾಕ್ಷಿಯಾಯಿತು. ಯುವಕ ಮನಪ್ರಿತ್ ಸಿಂಗ್ ಬಾದಲ್ ಅವರನ್ನು ಮೂಲೆಗುಂಪು ಮಾಡಲಾಯಿತು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ, 92 ವರ್ಷದ ಯುವಕ(?) ಕರುಣಾನಿಧಿ ಮಗನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸದೇ ಚುನಾವಣೆ ಏದುರಿಸಲು ಹೋಗಿ ವಿಫಲರಾದರು.

ಕೈಕೇಯಿಯ ಮಾತು ಕೇಳಿ ದಶರಥ ರಾಮನನ್ನು ಕಾಡಿಗೆ ಅಟ್ಟಿದ್ದೇ ಮುಂದೆ ರಾಮಾಯಣಕ್ಕೆ ಕಾರಣವಾಯಿತು. ಅದೇ ರೀತಿ ಎರಡನೇ ಹೆಂಡತಿ ಮಾತು ಕೇಳಿ ಮುಲಾಯಂ ಅಖಿಲೇಶ್‌ರನ್ನು ಹಣಿಯಲು ಹೊರಟಿದ್ದಾರೆ. ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳಬಾರದು ಎಂಬ ಮಾತು ಎಷ್ಟು ಸತ್ಯವೋ, ಅದೇ ಆಲದ ಮರದಡಿ ಒಂದು ಸಣ್ಣ ಸಸಿ ಬೆಳೆಯಲ್ಲ ಎಂಬುದೂ ಅಷ್ಟೇ ದಿಟ. ಒಂದೋ ಆಲದ ಮರ ಬೀಳಬೇಕು, ಇಲ್ಲವೇ ಕತ್ತರಿಸಬೇಕು. ಅಖಿಲೇಶ್ ಮಾಡಿದ್ದೂ ಅದನ್ನೇ. ಒಂದೊಳ್ಳೆ ಉದ್ದೇಶಕ್ಕೆ ಆಗಿರುವುದರಿಂದ ಅದಕ್ಕೆ ನಮ್ಮ ಸಹಮತವೂ ಇರಬೇಕಾಗುತ್ತದೆ. ಏನಂತೀರಿ?

-ರಮೇಶ್ ಮೇಳಕುಂದ
ಪತ್ರಕರ್ತ್

Leave a Reply

Your email address will not be published. Required fields are marked *

1 + seventeen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top