ದೂರದಲ್ಲೆಲ್ಲೋ ಇರುವ ಭೂಮಿಗಿಂತ….

Posted In : ಸಂಗಮ, ಸಂಪುಟ

ಕಳೆದ ಅಕ್ಟೋಬರ್ 22ಕ್ಕೆ, ನಮ್ಮ ದೇಶದ ಹೆಮ್ಮೆಯ ಚಂದ್ರಯಾನ-1 ಉಡಾವಣೆಯಾಗಿ ಎಂಟು ವರ್ಷಗಳು ಸಂದವು. ಈ ತಿಂಗಳ ಐದಕ್ಕೆ ಮಂಗಳನನ್ನು ತಲುಪಿದ ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಸೋವಿಯತ್ ಸ್ಪೇಸ್ ಪ್ರೋಗ್ರಾಂಗಳ ಸಾಲಿಗೆ ನಮ್ಮ ಇಸ್ರೋವನ್ನು ತಂದು ನಿಲ್ಲಿಸಿದ Mars Orbiter Missionಗೆ ಮೂರು ವರ್ಷಗಳು ತುಂಬುತ್ತಾ ಬರುತ್ತದೆ. ಇವೆಲ್ಲಾ ಗಮನಿಸಿ ದೇಶದ ಸಾಧನೆಯ ಬಗ್ಗೆ ಹೆಮ್ಮೆ ಪಡುವಾಗಲೇ ಒಂದು ವಿಭಿನ್ನ ಯೋಚನೆ ಮನಸ್ಸನ್ನು ತಾಗಿತು. ಇದುವರೆಗೂ ಬೇರೆ ಗ್ರಹಗಳಲ್ಲಿ ಜೀವವಿದೆಯಾ?

ಜೀವಿಗಳು ವಾಸವಿರಲು ಯೋಗ್ಯವಾದ ವಾತಾವರಣವಿದೆಯಾ? ಎಂದು ನಾನಾ ರೀತಿಯಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಈ ಪ್ರಯತ್ನಗಳಲ್ಲಿ ಕೆಲವೊಮ್ಮೆ ಜೀವಿಗಳ ಉಗಮಕ್ಕೆ ಕಾರಣವಾಗಬಹುದಾದ ಅಂಶಗಳು ಬೇರೆ ಗ್ರಹಗಳಲ್ಲಿವೆ ಎಂದು ಪತ್ತೆ ಹಚ್ಚುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಆದರೆ ಅದು ನಿಜಕ್ಕೂ ನಮಗೆ ಉಪಯೋಗಕಾರಿಯೇ? ಒಂದು ವೇಳೆ ಭೂಮಿಯಲ್ಲಿ ಸಂಪನ್ಮೂಲಗಳು ಕಡಿಮೆಯಾಗಿ ಮನುಷ್ಯರು ಬೇರೆ ಗ್ರಹಗಳತ್ತ ಪಯಣ ಬೆಳೆಸಬಹುದೇ? ಅಲ್ಲಿನ ವಾತಾವರಣದ ಕುರಿತು ಅಧ್ಯಯನ ನಡೆಯುವುದು ಒಳ್ಳೆಯ ಸಂಗತಿಯಾದರೂ ಅದರ ಬಗ್ಗೆ ಒಂದು ಸಾರಿ ಯೋಚನೆ ಮಾಡಬೇಕಾಗುವದು ಅನಿವಾರ್ಯವೇ.

ಚಂದ್ರನಿಗೆ ನಮ್ಮಿಂದ ಮೂರು ಲಕ್ಷದ ಎಂಭತ್ತೈದು ಸಾವಿರ ಕಿಲೋಮಿಟರ್. ಸೂರ್ಯನಿಗೆ ಹದಿನೈದು ಕೋಟಿ ಕಿಲೋ ಮಿಟರ್. ಇನ್ನೂ ಮಂಗಳಕ್ಕೆ ಏಳು ಕೋಟಿ ಎಂಭತ್ಮೂರು ಲಕ್ಷ ಕಿಲೋಮಿಟರ್. ಬಾಹ್ಯಾಕಾಶದಲ್ಲಿ ದೂರವನ್ನು ಅಳೆಯಲು, ನಮ್ಮ ಊರುಗಳ ನಡುವಿನ ದೂರವನ್ನು ಅಳೆಯಲು ಬಳಸುವ ಕಿಲೋಮೀಟರ್‌ನ್ನು ಬಳಸುವದಿಲ್ಲವೆಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಬಳಸುವದು ‘ಜ್ಯೋತಿರ್ವರ್ಷ’ ಅರ್ಥಾತ್ ಬೆಳಕು ಒಂದು ವರ್ಷದಲ್ಲಿ ಎಷ್ಟು ದೂರ ಚಲಿಸಬಹುದೋ ಅಷ್ಟು ದೂರ. ಬೆಳಕು ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ದೂರ ಹೋಗುತ್ತದೆ. ಒಂದು ವರ್ಷದಲ್ಲಿ ಸುಮಾರು 31 ಲಕ್ಷ ಸೆಕಂಡುಗಳಿರುತ್ತವೆ ಎಂದು ಲೆಕ್ಕ ಬಲ್ಲ ಯಾರಾದರೂ ಹೇಳುತ್ತಾರೆ. ಅಂದರೆ ಬೆಳಕು ಒಂದು ವರ್ಷದಲ್ಲಿ
ಚಲಿಸುವ ಒಟ್ಟು ದೂರ ಒಂಬತ್ತು ಲಕ್ಷದ ನಲವತ್ತಾರು ಸಾವಿರದ ಎಂಭತ್ತು ಕೋಟಿ ಕಿಲೋಮಿಟರ್.

ಸೂರ್ಯನಿಗೂ ಭೂಮಿಗೂ ಇರುವ ದೂರವನ್ನು ಈ ಜ್ಯೋತಿವರ್ಷಗಳಲ್ಲಿ ಹೇಳುವದಾದರೆ 0.00000185 ಜೋತಿರ್ವರ್ಷಗಳಷ್ಟು ಮಾತ್ರ. ಆದರೆ ಭೂಮಿಗೆ ಸೂರ್ಯನ ನಂತರ ಹತ್ತಿರದ ತಾರೆಯೆಂದರೆ ಪ್ರಾಕ್ಸಿಮಾ ಸೆಂಟಾರಿ. ಅದರ ದೂರ ಜ್ಯೋತಿರ್ವರ್ಷಗಳಲ್ಲಿ 4.22 ಜ್ಯೋತಿರ್ವರ್ಷಗಳಷ್ಟು. ನೋಡಿ ಬರೀ ಪಾಯಿಂಟ್‌ಗಳಲ್ಲಿ ಇದ್ದ ದೂರ ಈಗ ಡಿಜಿಟ್‌ಗಳಲ್ಲಿ ಬಂದು ಬಿಟ್ಟಿತು. ಈಗ ಭೂಮಿಗೂ ಅಂಡ್ರೋಮಿಡಾ ಗ್ಯಾಲಾಕ್ಸಿಗೂ ಇರುವ ದೂರ ನೋಡಿದರೆ ತಲೆ ತಿರುಗುವುದಂತು ಗ್ಯಾರಂಟಿ. ಅದು 2.5 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು.

ನಮ್ಮಲ್ಲಿ ಸದ್ಯಕ್ಕೆ ರಾಕೆಟ್‌ಗಳ ಗರಿಷ್ಠ ವೇಗ ಪ್ರತಿ ತಾಸಿಗೆ ಸುಮಾರು 36000 ಮೈಲಿಗಳು. ಕಿಲೋಮೀಟರ್ ಲೆಕ್ಕದಲ್ಲಿ 57000. ಆಕಾಶಕಾಯಗಳನ್ನು ಸೆಕಂಡಲ್ಲಿ ಮೂರು ಲಕ್ಷ ಕಿಲೋಮೀಟರ್ ದೂರದಲ್ಲಿ ಅಳೆದರೆ ನಮ್ಮ ರಾಕೆಟ್‌ಗಳ ವೇಗ ಸೆಕರಂಡಿಗೆ ಬರೀ 16 ಕಿಲೋಮೀಟರ್. ಚಂದ್ರನನ್ನು ತಲುಪಲು ನಮಗೆ ಮೂರು ದಿನ ಬೇಕು, ಮಂಗಳನನ್ನು ತಲುಪಲು 210 ದಿನಗಳು ಬೇಕು. ನಮ್ಮದೇ ಸೌರಮಂಡಲದ ನೆಪ್ಚೂನನ್ನು ತಲುಪಲು 11.4 ವರ್ಷಗಳು ಬೇಕು. ಇನ್ನು ಬೇರೆ ಸೌರವ್ಯವಸ್ಥೆಗಳ, ನಕ್ಷತ್ರಪುಂಜಗಳ ಗ್ರಹಗಳನ್ನು ತಲುಪಲು ಬೇಕಾಗುವ ಅವಧಿ ಒಬ್ಬ ಮನುಷ್ಯನ ಜೀವಿತಾವಧಿಯನ್ನು ಮೀರುವುದರಲ್ಲಿ ಸಂದೇಹವೇ ಇಲ್ಲ.

ಸರಿ ಮುಂದೊಂದು ದಿನ ಏನೋ ಹೊಸ ಆವಿಷ್ಕಾರಗಳಾಗಿ ಅತಿ ವೇಗದ ರಾಕೆಟ್ ಗಳನ್ನು ಕಂಡುಹಿಡಿದರು ಎಂದಿಟ್ಟುಕೊಳ್ಳೋಣ. ರಾಕೆಟ್‌ನಲ್ಲಿ ಉಪಯುಕ್ತ ಅಂದರೆ ಬೇರೆ ಗ್ರಹಗಳಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಕ್ಯಾಮೆರಾ ಹಾಗೂ ಇತ್ಯಾದಿ ಸಲಕರಣೆಗಳ, ಮನುಷ್ಯನ ತೂಕವೆಲ್ಲವನ್ನೂ ಸೇರಿಸಿದರೆ ಅದನ್ನು ಪೇ ಲೋಡ್ ಸಾಮರ್ಥ್ಯ ಎನ್ನುವರು. ರಾಕೆಟ್‌ನ ಒಟ್ಟು ತೂಕದಲ್ಲಿ ಪೇಲೋಡ್ ತೂಕವು ಕೇವಲ ಹತ್ತು ಪ್ರತಿಶತ ಮಾತ್ರ. ಉಳಿದದ್ದು ರಾಕೆಟ್‌ನ ಚಲನೆಗೆ ಬೇಕಾಗುವ ಪ್ರೊಪೆಲ್ಲೆಂಟ್, ಅದರ ದೇಹ ತೂಕ ಇತ್ಯಾದಿ ಸೇರಿವೆ. ಅರ್ಥಾತ್ ನಮ್ಮ ಚಂದ್ರಯಾನದಲ್ಲಿ ಒಟ್ಟು ತೂಕವು 1380ಕೆಜಿ ಆದರೆ ಅದರಲ್ಲಿ ಚಂದ್ರನ ಕುರಿತ ಸಂಶೋಧನೆಗೆ ಬಳಸುವ ಸಲಕರಣೆಗಳ ತೂಕ ಕೇವಲ 90 ಕೆಜಿ. ಇನ್ನೂ ಬಹುದೂರದ ಗ್ರಹಗಳ ಯಾನಕ್ಕೆ ಬೇಕಾಗುವ ಇಂಧನ, ಖರ್ಚು ವೆಚ್ಚ ನಿಜಕ್ಕೂ ಆರ್ಥಿಕತೆಯ ದೃಷ್ಟಿಯಿಂದ ಸಾಧುವಲ್ಲ.

ವೇಗವು ಹೆಚ್ಚಾಗಿ ಗ್ರಹಗಳನ್ನು ತಲುಪುವ ಸಮಯವೂ ಕಮ್ಮಿಯಾಯಿತೆಂದಿಟ್ಟುಕೊಳ್ಳೋಣ. ಎಷ್ಟು ಜನರನ್ನು ಅಂತರಿಕ್ಷಕ್ಕೆ ಕರೆದೊಯ್ಯುವಿರಿ? ನಮ್ಮ ಭೂಮಿಯಲ್ಲಿ 750 ಕೋಟಿಗೂ ಅಧಿಕ ಜನರಿದ್ದಾರೆ, ಒಬ್ಬ ಮನುಷ್ಯನ ತೂಕವು ಸರಾಸರಿಯಾಗಿ 60ಕೆಜಿ ಎಂದರೂ ಅವನನ್ನು ಅಂತರಿಕ್ಷಕ್ಕೆ ಒಯ್ಯಲು ಕನಿಷ್ಟ 600ಕೆಜಿಯ ರಾಕೆಟ್ ಬೇಕು. ಬೋಯಿಂಗ್ ವಿಮಾನದ ಸಾಮರ್ಥ್ಯವೇ ಹೆಚ್ಚೆಂದರೆ 10000 ಜನ ಇನ್ನೂ 750 ಕೋಟಿ ಜನ ಅಂತರಿಕ್ಷಯಾನಕ್ಕೆ! ತಮಾಷೆಯೆನಿಸುತ್ತದಲ್ಲವೆ. ಹಾಗಾದರೆ ಈ ಥರದ ಯೋಜನೆಗಳಿಗೆ ಸರಕಾರವು ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು ಎಂದು ಅಂದುಕೊಳ್ಳುವಿರಾ? ಅದು ತಪ್ಪು ಕಲ್ಪನೆ. ಈಗ ಇದೇ ವಿಷಯವನ್ನು ಇನ್ನೊಂದು ಮಗ್ಗಲಿನಿಂದ ನೋಡೋಣ.

ಬೆರಳ ಗಾತ್ರದ ಸಾಧನದಲ್ಲಿ ಲಕ್ಷಾಂತರ ಪುಟಗಳಷ್ಟು ಮಾಹಿತಿಯನ್ನು ಶೇಖರಿಸಿಡಬಹುದು ಎಂದು 1950ರ ಸುಮಾರಿಗೆ ವಿಜ್ಞಾನಿಯೊಬ್ಬ ಊಹಿಸಿದಾಗ ಉಳಿದವರೆಲ್ಲಾ ಅವನನ್ನು ನೋಡಿ ನಕ್ಕಿದ್ದರು, ಆದರೆ ಈಗ ಅದು ಸಾಧ್ಯವಾಗಿದೆ. ಹಾಗೆಯೇ ಈಗ ನಮಗೆ ತಮಾಷೆಯಾಗಿ ಕಾಣುವ ಅಂತರಿಕ್ಷದ ವಿಷಯ ಮುಂದೊಂದು ದಿನ ಸತ್ಯವೂ ಆಗಬಹುದು.  ಕೆಲ ದಿನಗಳ ಹಿಂದೆ ಟ್ವಿಟ್ವರ್‌ನಲ್ಲಿ ಒಂದು ಪೋಸ್ಟ್ ಹರಿದಾಡುತ್ತಿತ್ತು. ಕೆಲ ದೇಶಗಳ ಧ್ವಜಗಳ ಮೇಲೆ ಚಂದ್ರವಿದೆ, ಇನ್ನು ಕೆಲ ದೇಶಗಳ ಧ್ವಜ ಚಂದ್ರನ ಮೇಲಿದೆ ಎಂದು. ಆ ದೇಶಗಳ ಸಾಲಿಗೆ ನಮ್ಮ ಭಾರತವೂ ಸೇರಿದ್ದು ಹೆಮ್ಮೆಯ ವಿಷಯವಲ್ಲವೇ.

ಮಂಗಳದ ಕಡೆಗೆ ಇಲ್ಲಿಯ ವರೆಗೆ 51 ಅಂತರಿಕ್ಷಯಾನಗಳು ನಡೆದರೆ ಅದರಲ್ಲಿ 27 ವಿಫಲತೆಯಲ್ಲಿ ಕೊನೆಗೊಂಡಿವೆ, ಅಂಥಾದ್ದರಲ್ಲಿ ನಮ್ಮ ದೇಶವು ಪ್ರಥಮ ಪ್ರಯತ್ನದಲ್ಲಿಯೇ ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನದಲ್ಲಿ ಯಶಸ್ಸು ಸಾಧಿಸಿದೆಯೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ
ಮತ್ತಷ್ಟು ಹೆಚ್ಚಿತಲ್ಲವೇ. ಇಂದು ನಮ್ಮ ದೇಶಕ್ಕೆ ಸ್ವಂತ GPS ಇದ್ದು, ಅಮೆರಿಕದ ಮುಂದೆ 1999ರ ಕಾರ್ಗಿಲ್ ಯುದ್ಧದ ಸಮಯದಂತೆ ಕೈಯೊಡ್ಡುವ ಅವಶ್ಯಕತೆ ಯಿಲ್ಲವೆಂದರೆ ಅದರ ಶ್ರೇಯ ಇಸ್ರೋಗೆ ಸಲ್ಲಬೇಕು.

ಭಾರತ ಸರಕಾರವು ಪ್ರತಿ ವರ್ಷ ಸುಮಾರು 5000 ಕೋಟಿಯನ್ನು ಇಸ್ರೋಗೆ ಮೀಸಲಿರಿಸುತ್ತದೆ ಹಾಗಂತ ಇಸ್ರೋ ಬರೀ ಸರಕಾರದ ಕಡೆಗಷ್ಟೇ ಕೈಯೊಡ್ಡಿಲ್ಲ. ಒಂದೇ ಉಡಾವಣೆಯಲ್ಲಿ 20 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ಬಾಹ್ಯಾಾಕಾಶ ಚರಿತ್ರೆಯಲ್ಲಿ ಇಸ್ರೋ ಹೊಸ ದಾಖಲೆ ಬರೆಯಿತು. ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋದ ಕಾರ್ಯಕ್ಷಮತೆಗೆ ಬೇರೆ ದೇಶಗಳು ತಲೆದೂಗಿ ತಮ್ಮ ತಮ್ಮ ದೇಶಗಳ ಸುಮಾರು 68 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋಗೆ ವಹಿಸಿವೆ, ಅವುಗಳಲ್ಲಿ 12 ಉಪಗ್ರಹಗಳು ಅಮೆರಿಕಕ್ಕೆ ಸೇರಿವೆ. ಇದು ಇಸ್ರೋದ ಮುಕುಟಕ್ಕೆ ತನ್ಮೂಲಕ ಭಾರತದ ಮುಕುಟಕ್ಕೆ ಸೇರಿದ ಹೊಸ ರತ್ನವೇ.

ಹೀಗೆ ಬೇರೆ ದೇಶಗಳ ಉಪಗ್ರಹಗಳನ್ನು ಉಡಾಯಿಸಿಯೇ ಸುಮಾರು 4500 ಕೋಟಿ ರೂಪಾಯಿಗೂ ಮಿಕ್ಕಿ ಗಳಿಸಿದೆ. ದೇಶಕ್ಕೆ ಹೆಮ್ಮೆ ತರುವದರ ಜತೆಗೆ ಆದಾಯದಲ್ಲೂ ಇಸ್ರೋ ದಾಪುಗಾಲಿಡುತ್ತಿದೆ. ಹೀಗೆ ಹೆಮ್ಮೆಪಡುತ್ತಲೇ ಇನ್ನೊಂದು ಮಗ್ಗುಲಿಗೆ ಹೊರಳೋಣ. ಅಮೆರಿಕ 70ರ ದಶಕದಲ್ಲೇ ಮಾನವನನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ನಾವು ಈಗ ಒಂದು ಮಾನವರಹಿತ ಉಪಗ್ರಹವನ್ನು ಹಾರಿಬಿಟ್ಟಿದ್ದೇವೆ. ಅಂದರೆ ನಾವು ಅಮೆರಿಕಕ್ಕಿಂತ ಕನಿಷ್ಟವೆಂದರೂ ಐವತ್ತು ವರ್ಷ ಹಿಂದಿದ್ದೇವೆ.

ತಂತ್ರಜ್ಞಾನದ ವಿಷಯದಲ್ಲಿ ನಾವು ಸಾಗಬೇಕಾದ ದೂರ ಬಹಳಷ್ಟು ಇದೆ.ಎಷ್ಟೋ ವರ್ಷಗಳ ನಂತರ ನಾವು ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಕಾಲಿಟ್ಟಿದ್ದೇವೆ. ಚಂದ್ರಯಾನಕ್ಕೆ ಖರ್ಚು ಮಾಡಿದ್ದು 380 ಕೋಟಿ ರುಪಾಯಿ, ಮಂಗಳಯಾನಕ್ಕೆ ಖರ್ಚು ಮಾಡಿದ್ದು 450 ಕೋಟಿ ರುಪಾಯಿ. ನಮ್ಮ ದೇಶವು ಒಂದು ಹಗರಣದಲ್ಲೇ ಸುಮಾರು ಒಂದು ಲಕ್ಷ ಎಪ್ಪತ್ತಾರು ಸಾವಿರ ಕೋಟಿ (176ರ ಮುಂದೆ ಹತ್ತು ಸೊನ್ನೆ) ರೂಪಾಯಿಗಳನ್ನು ಕಳೆದುಕೊಂಡಿತು. ಇನ್ನು ಇಸ್ರೋಗೆ ಕೊಡುವ ಐದು ಸಾವಿರ ಕೋಟಿ ಏನೂ ದೊಡ್ಡದಲ್ಲ.

ನಮ್ಮ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರದಲ್ಲಿ ಹಾರಿಸಲು ಸದಾ ಪ್ರಯತ್ನಿಸಿರುವ ಇಸ್ರೋಗೆ ಇನ್ನಷ್ಟು ಅನುದಾನ ನೀಡಿ ಬೆಳೆಸಬೇಕಿದೆ. ಇದು ಕೇವಲ ನಮ್ಮ ದೇಶದ ಕಥೆಯಾಯಿತು ಆದರೆ ಬೇರೆ ಗ್ರಹಗಳಲ್ಲಿ ಜೀವಿಗಳಿವೆಯೇ ಎಂದು ಅಮೆರಿಕ, ರಷ್ಯಾ ಇತ್ಯಾದಿ ರಾಷ್ಟ್ರಗಳು ತಲೆಕೆಡಿಸಿಕೊಂಡು ಸುಮಾರು ದಶಕಗಳೇ ಆಯಿತು. ಅದಕ್ಕಾಗಿ ಮಿಲಿಯನ್ ಗಟ್ಟಲೇ ಹಣವನ್ನು ಸುರಿದದ್ದೂ ಆಯಿತು. ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಅನ್ನುವಂತೆ ಇರುವ ಭೂಮಿಯನ್ನು ಸರಿಯಾಗಿ ನೋಡಿಕೊಳ್ಳದೇ, ಬೇರೆ ಕಡೆಗಳಲ್ಲಿ ಜೀವಿಸಲು ಯೋಗ್ಯ ಭೂಮಿಯಿದೆಯೇ ಎಂದು ಹುಡುಕುವುದು ಗಾಳಿಯನ್ನು ಬೆನ್ನಟ್ಟಿಿದಂತೆಯೇ ಸರಿ.

ಕಳೆದ ಐವತ್ತು ವರ್ಷಗಳಲ್ಲಿ ಜಾಗತಿಕ ಸರಾಸರಿ ತಾಪಮಾನ ಅತಿ ಹೆಚ್ಚು ಏರಿಕೆ ದಾಖಲಿಸಿದೆ. ಕುಡಿಯುವ ನೀರಿನ ಮೂಲಗಳು ದಿನೇ ದಿನೆ ಕಲುಷಿತವಾಗುತ್ತಿರುವದು, ಇಂಗಾಲದ ಹೊರಸೂಸುವಿಕೆ, ಜನಸಂಖ್ಯೆ, ಪ್ರಕೃತಿಯ ವೈಪರಿತ್ಯಗಳು ಭೀಕರ ಸವಾಲುಗಳನ್ನು ಮುಂದಿನ ದಿನಗಳಲ್ಲಿ ಒಡ್ಡುವುದು ಅತಿಶಯೋಕ್ತಿಯೇನಲ್ಲ. ಭೂಮಿಯಲ್ಲಿನ ಪೆಟ್ರೋಲಿಯಮ್ ಬಾವಿಗಳು ಅಕ್ಷಯ ಆಕರಗಳಲ್ಲ. 750 ಕೋಟಿಗೂ ಮಿಕ್ಕಿದ ಜನಕ್ಕೆ ಇರುವುದು ಒಂದೇ ಭೂಮಿ. ನಮ್ಮ ಬೆಂಗಳೂರಿನಲ್ಲೇ ಮೊದಲು ಹದಿನೈದು ಇಪ್ಪತ್ತು ಸೆಂಟಿಗ್ರೇಡ್ ಇರುತ್ತಿದ್ದ ಉಷ್ಣಾಂಶ ಇಂದು ಮೂವತ್ತೈದರ ಆಸುಪಾಸಿನಲ್ಲಿ ನಿಲ್ಲುತ್ತಿದೆ.

ಹತ್ತಿಪ್ಪತ್ತು ಅಡಿಗೆ ಹೇರಳವಾಗಿ ಸಿಗುತ್ತಿದ್ದ ಅಂತರ್ಜಲ ಇಂದು ಹದಿನೈದು ನೂರು ಅಡಿ ಕೊರೆದರೂ ಸಿಗದೇ ಇರುವುದು ಅಪಾಯದ ಸಂಕೇತವೇ ಆಗಿದೆ. ಇವು ನಮ್ಮ ಮುಂದಿರುವ ನಿಜವಾದ ಸವಾಲುಗಳೇ ವಿನಃ ಯಾವುದೋ ಕಾಣದ ಗ್ರಹದಲ್ಲಿ ಜೀವವನ್ನು ಹುಡುಕುವದಲ್ಲ . ಸಂಪರ್ಕ ಸಾಧನಗಳು, ರಕ್ಷಣಾ ತಂತ್ರಜ್ಞಾನ, ಹವಾಮಾನ ಮುನ್ಸೂಚನೆ, ಪ್ರಕೃತಿ ವಿಕೋಪ ಇತ್ಯಾದಿಗಳ ಅಗತ್ಯ ಮಾಹಿತಿಗೆ ಬಾಹ್ಯಾಕಾಶ ವಿಜ್ಞಾನ ತುಂಬಾ ಅಗತ್ಯವೇ. ಆದರೆ ಅದನ್ನು ಎಷ್ಟು ಬೇಕೋ ಅಷ್ಟರ ಮಟ್ಟಿಗೆ ಉಪಯೋಗಿಸಿಕೊಂಡು ಉಳಿದವುಗಳ ಬಗ್ಗೆ ಅಂದರೆ ಆ ಗ್ರಹದಲ್ಲಿ ಜೀವಿ ಇದೆಯಾ? ಈ ಗ್ರಹದಲ್ಲಿ ನೀರಿದೆಯಾ? ಅದು ವಾಸಕ್ಕೆ ಯೋಗ್ಯವಾ? ಎಂದು ತಲೆ ಕೆಡಿಸಿಕೊಂಡರೆ ನೀರನ್ನು ಮೂಟೆ ಕಟ್ಟಿದಂತೆ.

-ವಿಕ್ರಂ ಪತ್ತಾರ್

One thought on “ದೂರದಲ್ಲೆಲ್ಲೋ ಇರುವ ಭೂಮಿಗಿಂತ….

  1. 31 ಲಕ್ಷಕ್ಕೆ ೩ ಲಕ್ಷ ಗುಣಿಸಿದರೆ ೯೪ ಶತಸಹಸ್ರ ಕೋಟಿಯಗುತ್ತಲ್ಲವೇ?
    ೯,೪೬೦,೮೦೦,೦೦೦,೦೦೦ ಕಿ. ಮೀ. =light year

Leave a Reply

Your email address will not be published. Required fields are marked *

1 × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top