ದೋಷವೇ ಜಾಸ್ತಿಯಾದಾಗ ಸಹಿಸಲು ಆಗುವುದಿಲ್ಲ

Posted In : ಸಂಗಮ, ಸಂಪುಟ

ಮತ್ತೆ ಮತ್ತೆ ಸರಕಾರದ ವಿರುದ್ಧ ಸಾತ್ವಿಕ ಸಿಟ್ಟು ತೋರಿಸುತ್ತಿರುವ ಮಾಜಿ ಸಂಸದ ವಿಶ್ವನಾಥ್ ಅವರು ತಮ್ಮ ಮೊನಚು ಮಾತಿನಿಂದ ಸರಕಾರವನ್ನು ತಿವಿಯುವ ಕೆಲಸ ಮುಂದುವರಿಸಿದ್ದಾರೆ. ‘ವಿಶ್ವವಾಣಿ’ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ‘ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯತೆಯೇ ಇಲ್ಲ. ಸಮನ್ವಯದಿಂದ ಸಾಗಬೇಕು’ ಎಂದು ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ನೇರವಾಗಿ ತೀಡಿದ್ದಾರೆ. ಜತೆಗೆ ‘ಪಕ್ಷ ಇದ್ದರೆ ನಾವು. ಸರಕಾರದ ನಡವಳಿಕೆಯಿಂದ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನೇರವಾಗಿ ಹೇಳಬೇಕೆಂದರೆ ಪಕ್ಷಕ್ಕೆ ಪೆಟ್ಟು ಬೀಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಷ್ಟವೂ ಆಗುತ್ತದೆ’ ಎಂದು ಎಚ್ಚರಿಸಿದ್ದಾರೆ.

– ಎಚ್.ವಿಶ್ವನಾಥ್ ಕಂಡರೆ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಭಯವಂತೆ, ನಿಜವೇ?
ಹಾಗೇನು ಇಲ್ಲವಲ್ಲ, ಯಾರಿಗೂ ಭಯವಿಲ್ಲ. ನಾವೆಲ್ಲಾ ಸ್ನೇಹಿತರೇ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಲ್ಲರೂ ಗೆಳೆಯರೇ. ನಾವು ಹೇಳಬಾರದ್ದನ್ನೇನು ಹೇಳಿಲ್ಲವಲ್ಲ. ಪಕ್ಷ ಇದ್ದರೆ ನಾವು, ಪಕ್ಷದಿಂದಲೇ ಸರಕಾರ ಬರುವುದು.

– ಪದೇ ಪದೆ ಸರಕಾರದ ಮೇಲೆ ಎಗರಿಬೀಳುತ್ತಿದ್ದೀರಿ, ಏನಿದರ ಹಿನ್ನೆಲೆ?
ನಾನು ಮೊದಲೇ ಹೇಳಿದೆನಲ್ಲ ಪಕ್ಷ ಇದ್ದರೆ ನಾವು. ಸರಕಾರದ ನಡವಳಿಕೆಯಿಂದ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನೇರವಾಗಿ ಹೇಳಬೇಕೆಂದರೆ ಪಕ್ಷಕ್ಕೆ ಪೆಟ್ಟು ಬೀಳುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಷ್ಟವೂ ಆಗುತ್ತದೆ. ಅದು ಸರಿ ಮಾಡುವುದು ನನ್ನ ಕೆಲಸವಲ್ಲವೇ? ನಾನು ಹೇಳುತ್ತಿದ್ದೇನೆ, ಅವರು ಸರಿ ಮಾಡಿಕೊಂಡು ನಡೆಯುತ್ತಿಲ್ಲ.

– ನೀವು ಹೇಳುತ್ತಿದ್ದೀರಿ, ಆದರೆ ಅವರು ತಿದ್ದಿಕೊಳ್ಳುತ್ತಿದ್ದಾರೆ ಅನಿಸುತ್ತಿದೆಯೇ?
ತಿದ್ದಿಕೊಂಡಿದ್ದಾರೆ. ಆಗಾಗ ಹೇಳುತ್ತಿದ್ದರೆ ಎಚ್ಚರಿಕೆ ಇರುತ್ತದೆ. 10 ಬಾರಿ ಸರಿಪಡಿಸಿಕೊಳ್ಳಿ ಎಂದು ಹೇಳಿದಾಗ ಎರಡು ಬಾರಿಯಾದರೂ ಸರಿ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸ ನನ್ನದು.

– ಸರಕಾರದಿಂದ ತಪ್ಪುಗಳಾಗುತ್ತಿವೆ, ಪಕ್ಷಕ್ಕೆ ಹಾನಿ ಆಗುತ್ತಿದೆ ಎಂದಿರಿ, ಅಂಥದ್ದೇನು ಆಗಬಾರದ್ದು ಆಗಿದೆ?
ಸಾಮಾನ್ಯವಾಗಿ ಹೇಳುವುದಾದರೆ ಸಿದ್ದರಾಮಯ್ಯನವರು ಹಲವಾರು ವಿನೂತನ ಕಾರ್ಯಕ್ರಮವನ್ನು ರಾಜ್ಯಕ್ಕೆ ನೀಡಿದ್ದಾರೆ. ರಾಜ್ಯವನ್ನು ಚೆನ್ನಾಗಿಯೇ ಅಭಿವೃದ್ಧಿ ಮಾಡುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಸೇರಿ ಅನೇಕ ಪ್ರಯತ್ನ ನಡೆಸಿದ್ದಾರೆ. ಅದರೆ, ಜನ ಅಭಿವೃದ್ಧಿಯಷ್ಟೇ ನೋಡುವುದಿಲ್ಲ ನಡವಳಿಕೆಯನ್ನು ನೋಡುತ್ತಿರುತ್ತಾರೆ ಎಂಬುದು ಗಂಭೀರವಾಗಿ ಗಮನಿಸಬೇಕಾಗುತ್ತದೆ.
ಅಧಿಕಾರದಲ್ಲಿರುವವರು ನಡವಳಿಕೆ ತಿದ್ದಿಕೊಳ್ಳಬೇಕಾಗುತ್ತದೆ. ಯಾವುದೇ ಮುಖ್ಯಮಂತ್ರಿ ಕೆಲಸ ಮಾಡದೇ ಮುಂದಿನ ದಿನಗಳಲ್ಲಿ ಸೋಲಲಿಲ್ಲ, ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಲದ ಸದಸ್ಯರ ನಡವಳಿಕೆಯಿಂದ ಸರಕಾರ ಅವನತಿಯಾಗಿದ್ದಿದೆ. ಇದು ಆಗಬಾರೆಂದು ಎಚ್ಚರಿಸುತ್ತಿದ್ದೇನೆ ಅಷ್ಟೆ.

– ನಿಮ್ಮನ್ನು ಮತ್ತು ಜನಾರ್ದನ ಪೂಜಾರಿಯವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಇದೆಯೇ? ಬೇಸರವಿದೆಯೇ?
ನಮ್ಮನ್ನೇನು ಅವರು ಕಡೆಗಣಿಸುವುದು. ನಾವು ಕಾಂಗ್ರೆಸ್ಸಿಗರು. ನಲವತ್ತು ವರ್ಷದಿಂದ ಪಕ್ಷದಲ್ಲಿದ್ದೇವೆ. ನಾನು ಮತ್ತು ಪೂಜಾರಿಯವರು ರಾಮಾಯಣದಲ್ಲಿ ಬರುವ ಸೀತೆಯಂತೆ. ಎಂಥಾ ಸಂದರ್ಭದಲ್ಲೂ ನಾವು ಯಾವುದೇ ಪಕ್ಷವನ್ನು ನೆನೆಯಲಿಲ್ಲ. ನಾವು ಅಧಿಕಾರ ಕೊಡಿ ಎಂದು ಎಂದೂ ಸಹ ಕೇಳಲಿಲ್ಲ. ಸರಕಾರದ ಹಿತದೃಷ್ಟಿಯಿಂದ ಕೆಲವು ಸಲಹೆ ನೀಡುತ್ತೇವೆ. ಮೊದ ಮೊದಲು ಸ್ವೀಕರಿಸುತ್ತಿದ್ದರು. ಸರಕಾರ ರಚನೆಯಾದಾಗ ಹತ್ತಾರು ಕಾರ್ಯಕ್ರಮ ರೂಪಿಸಿದರು. ಅನ್ನಭಾಗ್ಯ, ಕ್ಷೀರ ಭಾಗ್ಯ, ಸಾಲ ಮನ್ನಾ ಯೋಜನೆ ಸೇರಿ ಬಡವರಿಗೆ ಅನುಕೂಲ ಮಾಡಿಕೊಡಲು ಹಲವಾರು ಕಾರ್ಯಕ್ರಮ ರೂಪಿಸಿದರು. ಆ ವೇಳೆ ಮುಖ್ಯಮಂತ್ರಿ ನನ್ನೊಂದಿಗೆ ಚರ್ಚಿಸಿದ್ದರು. ಆಮೇಲೆ ಏನಾಯಿತೋ ಗೊತ್ತಿಲ್ಲ. ಯಾವ ಮುಖ್ಯಮಂತ್ರಿ ಸುತ್ತ ಕೆಲವು ಮಂದಿ ಸುತ್ತುವರಿಯುತ್ತಾರಲ್ಲ, ಅದೇ ರೀತಿ ಆಯಿತು.

– ಅಂದರೆ, ಸಿಎಂ ಸುತ್ತ ಒಂದು ತಂಡ ಸುತ್ತುವರಿದಿದೆ ಎಂದಾಯ್ತು?
ನಮ್ಮನ್ನು ಕರೆದು ಮಾತನಾಡಿಸಬೇಕೆಂದು ಬಲವಂತವಿಲ್ಲ. ನಾವು ಸಹ ಅವರೆದುರು ಹೋಗಿ ನಿಲ್ಲುವವರೂ ಅಲ್ಲ. ಸಮಯ ಇದ್ದರೆ ನಮ್ಮನ್ನು ಕರೆದು ಚರ್ಚೆ ಮಾಡಬಹುದು. ನಾವೇನು ವರ್ಗಾವಣೆಗೆ ಹೋಗುವವರಲ್ಲ, ರಿಯಲ್ ಎಸ್ಟೇಟ್, ಮರಳು- ಗಣಿ ದಂಧೆಯವರಲ್ಲ. ನಮ್ಮ ಮಕ್ಕಳಿಗೆ ಟೆಂಡರ್ ಕೊಡಿಸಿ ಎಂದು ಕೇಳುವವರೂ ಅಲ್ಲ. ನಮಗೆ ಪಕ್ಷ ಮತ್ತು ಜನ ಹಿತ ಮುಖ್ಯ.

– ಸಿಎಂ ಸುತ್ತ ಸುತ್ತುವ ತಂಡದ ಬಗ್ಗೆ ಏನೂ ಹೇಳಲಿಲ್ಲವಲ್ಲ?
ಇದೆ, ಒಂದು ತಂಡ ಇದೆ. ಅದು ಎಲ್ಲರಿಗೂ ಗೊತ್ತಿದೆ. ಅವರು ಏನು ಮಾಡುತ್ತಾರೋ ಅದೇ ಸರಿ, ನಾವು ಮಾಡಿದ್ದೇ ಸರಿ ಎಂದುಕೊಂಡಿದ್ದಾರೆ. ಅವರು ಮಾಡಿದ್ದು ಸಾರ್ವಜನಿಕರಿಗೆ, ಜನಾಭಿಪ್ರಾಯ ಮುಖ್ಯವಾಗುತ್ತದೆ. ನಾವು ಮಾತ್ರ ಸರಿ ಎಂದು ಕೊಂಡರೆ ಹೇಗಾಗುತ್ತದೆ ಹೇಳಿ. ನಾವು ಮಾಡಿದ್ದೆಲ್ಲ ಹೈ ಕ್ಲಾಸ್ ಎಂದುಕೊಂಡರೆ ನಮ್ಮದು ಯಾವ ಕ್ಲಾಸ್ ಎಂದು ಜನ ಮತದಾನದಂದು ನಿರ್ಧರಿಸುತ್ತಾರೆ. ಸರಿ ಯಾವುದು ತಪ್ಪು ಯಾವುದೆಂದು ಅವರು ತಮ್ಮ ಮತದಾನದ ಮೂಲಕ ಹೇಳುತ್ತಾರೆ. ಜನ ನಮ್ಮ ನಡವಳಿಕೆ ನೋಡುತ್ತಿರುತ್ತಾರೆ ಎಂಬುದನ್ನು ಅರಿತಿರಬೇಕಾಗುತ್ತದೆ.

– ಪಕ್ಷದ ಬಗ್ಗೆ ಇಷ್ಟೊಂದು ಕಾಳಜಿ ಇಟ್ಟುಕೊಂಡಿರುವ ನಿಮಗೆ ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳಲು ಅವಕಾಶ ಸಿಗಲಿಲ್ಲವೇ?
ಪಕ್ಷದ ಅಧ್ಯಕ್ಷರು ನಮ್ಮನ್ನು ಪಕ್ಷದ ವೇದಿಕೆಯಲ್ಲಿ ಆಹ್ವಾನ ಮಾಡುತ್ತಿಲ್ಲ, ಜತೆಗೆ ಪಕ್ಷದ ವೇದಿಕೆಯಲ್ಲಿ ಇಂಥ ವಿಚಾರ ಚರ್ಚೆಯೂ ಆಗುತ್ತಿಲ್ಲ. ಮುಂದಿನ ಚುನಾವಣೆಗೆ ಏನು ಸ್ಟ್ರ್ಯೊಟಜಿ ಮಾಡಬೇಕೆಂದು ಚರ್ಚಿಸುತ್ತಿಲ್ಲ. ಏಕೆಂದರೆ, ಈ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಪಕ್ಷದಿಂದಲೇ ಆಗಬೇಕು. ಪಕ್ಷದ ಹಿರಿಯರನ್ನು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ಏನಾಗುತ್ತದೆ ಎಂದರೆ, ಪಕ್ಷ ಅಧಿಕಾರಕ್ಕೆ ಬರಬೇಕೆಂದು ಹಗಲಿರುಳು ಬೆವರು ಸುರಿಸಿದವರ ಮನಸಿಗೆ ಆಘಾತವಾಗುತ್ತದೆ.

– ನಿಮ್ಮ ಬೇಸರವನ್ನು ಕರ್ನಾಟಕದಲ್ಲಿ ಮಾತ್ರ ಹೇಳಿಕೊಂಡಿರುತ್ತೀರಾ ಅಥವಾ ದೆಹಲಿಗೆ ಕೊಂಡೊಯ್ಯುವ ಆಲೋಚನೆ ಇದೆಯೇ?
ಖಂಡಿತ ವರಿಷ್ಠರ ಗಮನಕ್ಕೆ ತರುತ್ತೇವೆ. ದಿಗ್ವಿಜಯ್ ಸಿಂಗ್ ಎಂಬ ಒಬ್ಬ ರಾಜ್ಯ ಉಸ್ತುವಾರಿ ಇದ್ದಾರೆ. ಅವರಿಗೆ ಸುಮಾರು ಬಾರಿ ಹೇಳಿದೆವು. ಕೊನೆಗೆ ನಿಮಗೆ ಎಷ್ಟು ಹೇಳಿದರೂ ಪ್ರಯೋಜನವಾಗಿಲ್ಲ. 15 ವರ್ಷದ ಹಿಂದೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮೊಳೆ ಹೊಡೆದು ಬಂದವರಲ್ಲವೇ, ಇಲ್ಲೂ ಅದೇ ಕೆಲಸ ಮಾಡಬೇಡಿ. ಕಾಂಗ್ರೆಸ್ ಬದುಕಬೇಕು, ಉಳಿಯಬೇಕು ಎಂಬ ಮಾತನ್ನು ಅವರಿಗೆ ಹೇಳಿಬಂದಿದ್ದೇವೆ.

– ದಿಗ್ವಿಜಯ್ ಹೊರತಾಗಿ, ಸೋನಿಯಾಗಾಂಧಿ, ರಾಹುಲ್ ಗಾಂಧಿಯವರವರೆಗೆ ವಿಷಯ ಮುಟ್ಟಿಸಲು ಹಿಂದೇಟೇಕೆ?
ಇನ್ನು ಮುಂದೆ ಅವರಿಗೂ ಇರುವ ವಿಚಾರ ಹೇಳಲೇ ಬೇಕಾಗಿದೆ. ಇನ್ನೂ ಗಂಭೀರವಾಗಿ ವಿಷಯ ತಿಳಿಸುತ್ತೇವೆ. ಒಬ್ಬೊಬ್ಬರಾಗಿ ಹೋಗುವುದಿಲ್ಲ, ಬಹಳಷ್ಟು ಜನ ಇದ್ದಾರೆ.

– ಬಹಳಷ್ಟು ಎಂದು ಪದ ಪ್ರಯೋಗ ಮಾಡಿದ್ದೀರಿ, ಹಾಗಿದ್ದರೆ ಅಸಮಾಧಾನಿತರ ಸಂಖ್ಯೆ ದೊಡ್ಡದಿದೆ ಎಂದಾಯ್ತು?
ಹೌದು, ಇದ್ದಾರೆ. ಆದರೆ ನಾವು ಅಸಮಾಧಾನಿತರು ಎಂದು ಹೇಳುವುದಿಲ್ಲ. ಪಕ್ಷಕ್ಕೆ ಒಳಿತಾಗಬೇಕೆಂದು ಬಯಸುವವರು. ಸಮಾಧಾನ, ಅಸಮಾಧಾನ ಇದ್ದಿದ್ದೇ. ಪಕ್ಷ ಎಂದ ಮೇಲೆ ಸಣ್ಣಪುಟ್ಟ ದೋಷ ಇದ್ದೇ ಇರುತ್ತದೆ. ದೋಷವೇ ಜಾಸ್ತಿಯಾದಾಗ ಸಹಿಸಲು ಆಗುವುದಿಲ್ಲ. ಅದು ಸರಿ ಆಗುವವರೆಗೆ ಪ್ರಯತ್ನ ಬಿಡುವುದಿಲ್ಲ.

– ಶ್ರೀನಿವಾಸ್ ಪ್ರಸಾದ್ ಪ್ರಕರಣದಲ್ಲಿ ಸಿಎಂ ಎಡವಿದರು ಅನಿಸುತ್ತದೆಯೇ?
ನಾನು ಶ್ರೀನಿವಾಸ ಪ್ರಸಾದ್ ಸಮಕಾಲೀನರು, ಸಮಾನ ಮನಸ್ಕರು. ಅದಕ್ಕಿಂತ ಮುಖ್ಯವಾಗಿ ಒಂದೇ ಕೇರಿಯಲ್ಲಿ ಬೆಳೆದವರು. ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಶ್ರೀನಿವಾಸ ಪ್ರಸಾದ್ ಅಪಾರ ಸಹಾಯ ಮಾಡಿದ್ದಾರೆ. ಹಾಗೆಯೇ ಸಂಪುಟ ಪುನಾರಚನೆ ಸಂದರ್ಭದಲ್ಲಿ ಗೊಂದಲಗಳಾಗುವುದು ಸಹಜ. ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ಇಂಥದ್ದು ಆಗಿವೆ. ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು, ಮತ್ತೆ ಕೆಲವರನ್ನು ಕೈಬಿಟ್ಟು ಪಕ್ಷದ ಕೆಲಸಕ್ಕೆ ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ.
ಆದರೆ, ಶ್ರೀನಿವಾಸ ಪ್ರಸಾದ್ ವಿಚಾರದಲ್ಲಿ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರವಾದರೂ ಸೂಕ್ತ ರೀತಿಯಲ್ಲಿ ಹೆಜ್ಜೆ ಇಡಲಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಲು ಸಹಕರಿಸುವಂತೆ ಕೋರಬಹುದಿತ್ತು. ಸಂಘಟನೆಗೆ ಒತ್ತು ಕೊಡಬೇಕು ಎಂದು ವಿಶ್ವಾಸದಲ್ಲಿ ಕೇಳಿದ್ದರೆ ಇಷ್ಟೊಂದು ಗೋಜಲಗಳಾಗುತ್ತಿರಲಿಲ್ಲ.

– ನಂಜನಗೂಡು ಚುನಾವಣೆ ಎದುರಿಗಿದೆ. ಪಕ್ಷದ ತಯಾರಿ ಹೇಗಿದೆ?
ನಂಜನಗೂಡು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕೆಂದು ಬಯಸುವವನು ನಾನು. ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಅದೇ ರೀತಿ ಸ್ನೇಹಿತ ಮಹದೇವ ಪ್ರಸಾದ್ ಅಕಾಲಿಕ ನಿಧನ ಸಾಕಷ್ಟು ಬೇಸರ ತರಿಸಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಎರಡೂ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಲೇಬೇಕು. ಜಿಲ್ಲಾ ಮಂತ್ರಿ ಮಹದೇವಪ್ಪ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ, ಅದರಲ್ಲವರು ಯಶ ಕಾಣುತ್ತಾರೆಂಬ ನಂಬಿಕೆ ಇದೆ.

– ಸರಕಾರಕ್ಕೆ ಇನ್ನೊಂದೂವರೆ ವರ್ಷ ಅವಕಾಶವಿದೆ, ಅಷ್ಟರಲ್ಲಿ ಏನಾಗಬೇಕೆಂದು ಬಯಸುತ್ತೀರಿ?
ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯತೆಯೇ ಇಲ್ಲ. ಸಮನ್ವಯದಿಂದ ಸಾಗಬೇಕು.  ಪ್ರತಿ ಇಲಾಖಾ ಮುಖ್ಯಸ್ಥರನ್ನು ಚುರುಕುಗೊಳಿಸಬೇಕು, ಯೋಜನೆ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದು, ಚಾಟಿ ಬೀಸುವುದು ಅನಿವಾರ್ಯ. ಹಾಗೆಯೇ ಮುಖ್ಯಮಂತ್ರಿ ಮತ್ತು ಜಿಲ್ಲಾ ಮಂತ್ರಿಗಳಿಂದ ಮಿಂಚಿನ ಸಂಚಾರವಾಗಬೇಕು. ಜನರನ್ನು ನಿರಂತರವಾಗಿ ಭೇಟಿ ಮಾಡಬೇಕು, ನಾವೇನು ಮಾಡುತ್ತಿದ್ದೇವೆಂದು ಹೇಳಬೇಕು. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು, ಯುದ್ಧೋಪಾದಿಯಲ್ಲಿ ಕೆಲಸಗಳಾಗಬೇಕಾಗಿದೆ, ಕೊರತೆಗಳನ್ನು ನೀಗಿಸಿಕೊಳ್ಳಬೇಕು. ಇವೆಲ್ಲದರ ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ.

– ವಿಶ್ವನಾಥ್ ಅವರಿಗೆ ಪಕ್ಷದಲ್ಲಿ ವಿಶೇಷ ಹೊಣೆಗಾರಿಕೆ ಹೊರಬೇಕೆಂದು ಬಯಕೆ ಇದೆಯೇ?
ಖಂಡಿತಾ ಇಲ್ಲ. ನಾವು ಯಾವ ಅಧಿಕಾರವನ್ನೂ ನಿರೀಕ್ಷೆ ಮಾಡಲ್ಲ. ಕಾಂಗ್ರೆಸ್ ಪಕ್ಷ ಎಲ್ಲ ಕೊಟ್ಟಿದೆ. ಶಾಸಕ, ಸಂಸದನನ್ನಾಗಿ ಮಾಡಿ ಅಧಿಕಾರ ಕೊಟ್ಟಿದೆ. ಇನ್ನೇನಿದ್ದರೂ ನಾವು ಕಾಂಗ್ರೆಸ್‌ಗೆ ಕೊಡುವ ಕಾಲ.

– ಸರಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇಲ್ಲ ಎನ್ನುತ್ತೀರಿ, ಎಲ್ಲಿ ಹಳಿ ತಪ್ಪಿದೆ? ಇದನ್ನು ಸರಿಪಡಿಸುವ ಹೊಣೆಗಾರಿಕೆ ಯಾರದ್ದು?
ಇದು ಮುಖ್ಯಮಂತ್ರಿ ಅಥವಾ ಪಕ್ಷದ ಅಧ್ಯಕ್ಷರದ್ದಷ್ಟೇ ಹೊಣೆಗಾರಿಕೆಯಲ್ಲ. ಬೇರೆಯವರೂ ಹೊಣೆ ಹೊರಬೇಕು, ಜವಾಬ್ದಾರಿ ಕೊಡಬೇಕು. ನಿರಂತರ ಸಭೆ ನಡೆಸಬೇಕು, ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಕೆಲಸ ಹಚ್ಚಬೇಕು. ಅದೇ ರೀತಿ ಕಾಂಗ್ರೆಸ್ ಒಳತೆಕ್ಕೆಗೆ ತೆಗೆದುಕೊಂಡು ಅತಿ ಪ್ರತಿಷ್ಠೆಯ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯನವರಿಗೆ ನೀಡಿದೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ತರುವ ವಿಶೇಷವಾಗಿ ಕಷ್ಟಪಡಬೇಕಾದವರು ಅವರೇ. ಕಾಂಗ್ರೆಸ್ ಮೇಲೆ ಅವರಿಗೆ ಋಣವಿದೆ. ಬೇರೆ ಪಕ್ಷದಲ್ಲಿ ಇದ್ದವರನ್ನು ಕೈ ಬೀಸಿ ಕರೆದು ದೊಡ್ಡ ಅಧಿಕಾರ ಕೊಟ್ಟಿದೆ. ಸಿಎಂ ಆದೆ, ಮುಗಿದು ಹೋಯಿತು ಎಂದು ಸುಮ್ಮನಿರುವುದಲ್ಲ, ಮತ್ತೆ ಅಧಿಕಾರಕ್ಕೆ ತರಲು ಪಣತೊಡಬೇಕು. ಇನ್ನೊಂದು ಕಡೆ ಪಕ್ಷದ ಅಧ್ಯಕ್ಷನಾದೆ ಮುಗಿದು ಹೋಯಿತೆಂದು ಪರಮೇಶ್ವರ್ ಸಹ ಸುಮ್ಮನಾಗಬಾರದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೂ ಕೆಲಸ ಹಚ್ಚಿ ಪಕ್ಷ ಬಲಗೊಳಿಸಬೇಕು.

– ಮಹಿಳಾ ದೌರ್ಜನ್ಯದ ಹೆಸರಲ್ಲಿ ಬೆಂಗಳೂರಿನ ಮೇಲೆ ಕಳಂಕ ಹೊರಿಸುವ ಪ್ರಯತ್ನ ನಡೆದಿದೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಹಿಳಾ ದೌರ್ಜನ್ಯವಾಗಲಿ ಅಥವಾ ಬೇರೆ ಯಾವುದೇ ದೌರ್ಜನ್ಯವಿರಲಿ, ಪ್ರಜೆಗಳಿಗೆ ತೊಂದರೆಯಾಗದಂತೆ ಕಾಪಾಡುವುದು ಸರಕಾರದ ಕರ್ತವ್ಯ. ಬೆಂಗಳೂರಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಬೇಕಾಗುತ್ತದೆ, ಅಗತ್ಯ ಕಾನೂನು ತಿದ್ದುಪಡಿ ಆಗಬೇಕು. ಪೊಲೀಸರಿಗೆ ಹೊಣೆಗಾರಿಕೆ ಫಿಕ್ಸ್ ಮಾಡಬೇಕಾಗುತ್ತದೆ. ಇದು ರಾಜ್ಯದ ರಾಜಧಾನಿ. ಇಲ್ಲಿನ ಪರಿಣಾಮ ಸಹಜವಾಗಿ ಎಲ್ಲೆಡೆ ಪ್ರತಿಫಲವಾಗುತ್ತದೆ. ಹೀಗಾಗಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

– ಶ್ರೀಕಾಂತ ಶೇಷಾದ್ರಿ

One thought on “ದೋಷವೇ ಜಾಸ್ತಿಯಾದಾಗ ಸಹಿಸಲು ಆಗುವುದಿಲ್ಲ

Leave a Reply

Your email address will not be published. Required fields are marked *

sixteen − 8 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top