ನಾನು ಜೀವನದಲ್ಲಿ ಮರೆಯಲಾರದ ಕ್ಷಣಗಳಲ್ಲೊಂದು

Posted In : ಅಂಕಣಗಳು, ಬಾಳ ಬಂಗಾರ

ಮಕ್ಕಳಿಗೆ ಅವರ ಬಾಲ್ಯವನ್ನು ದೊರಕಿಸಿಕೊಡುವುದೇ ಹೆತ್ತವರು ಅವರಿಗೆ ನೀಡಬಹುದಾದ ದೊಡ್ಡ ಉಡುಗೊರೆ. ಈಗೆಲ್ಲಾ ಮಕ್ಕಳು ಕೇಳಿದ್ದೆಲ್ಲವನ್ನೂ, ಎಷ್ಟೋ ಸಲ ಅವರು ಕೇಳದಿದ್ದರೂ ಹೆತ್ತವರೇ ಕೊಡಿಸಿಬಿಡುತ್ತಾರೆ. ತಮ್ಮಿಷ್ಟದ ಕೋರ್ಸುಗಳಿಗೆ ಈಗಲೇ ಮಕ್ಕಳನ್ನು ದಾಖಲು ಮಾಡಿ ನಿಶ್ಚಿಂತರಾಗುತ್ತಾರೆ. ಮಕ್ಕಳು ಇತರೆ ಮಕ್ಕಳೊಡನೆ ಆಡಲು ಮುಂದಾದರೆ ಅಂತಸ್ತಿನ ಕಾರಣವೊಡ್ಡಿ ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಬರುತ್ತಾರೆ. ಅದಿರಲಿ ಮಕ್ಕಳನ್ನು ಆಡಲೇ ಬಿಡುತ್ತಿಲ್ಲ, ಬೇಸಗೆ ಬಂದಾಗ ಒಂದೆರಡು ವಾರ ಮಕ್ಕಳನ್ನು ಯಾವುದಾದರೂ ಕ್ಯಾಂಪ್ ಗೆ ಸೇರಿಸುವ ಪರಿಪಾಠವನ್ನವರು ಮೈಗೂಡಿಸಿಕೊಂಡಿರುತ್ತಾರೆ.

ಮೊನ್ನೆ ಒಂದಿನ ಏನಾಯ್ತು ಅಂದರೆ ಗೆಳತಿಯೊಬ್ಬರು ಸಿಕ್ಕಿದ್ದರು. ಹೀಗೇ ಮಾತನಾಡುತ್ತಾ ಅವರು ಒಂದು ಘಟನೆಯನ್ನು ಹೇಳಿಕೊಂಡರು. ಪರಿಚಯಸ್ಥರ ಮದುವೆ ಸಮಾರಂಭ ಸಾಂಗವಾಗಿ ನೆರವೇರುತ್ತಿತ್ತು. ಮದುವೆಗೆ ನೆಂಟರು, ಅತಿಥಿಗಳು, ಗಣ್ಯರೆಲ್ಲಾ ಆಗಮಿಸಿದ್ದಾರೆ. ಬಂದವರೆಲ್ಲರೂ ವಧೂವರರನ್ನು ಆಶೀರ್ವದಿಸಿ ಮಧ್ಯಾಹ್ನ ಭೋಜನವನ್ನು ಸ್ವೀಕರಿಸಿ ಸಂತೃಪ್ತರಾಗಿದ್ದಾರೆ. ಮದುವೆಗಳಲ್ಲಿ ಊಟದ ನಂತರ ಎಲೆ ಎತ್ತಿಡಲು ಕೆಲಸಗಾರರನ್ನು ನಿಯೋಜಿಸಿರುತ್ತಾರೆ. ಸಾಮಾನ್ಯವಾಗಿ ಅವರು ಅಲ್ಲಿಗೆ ತಮ್ಮ ಮಕ್ಕಳೊಡನೆ ಬಂದಿರುತ್ತಾರೆ. ಭೋಜನ ಮುಗಿದ ನಂತರ ಕೊನೆಯಲ್ಲಿ ಊಟ ಮಾಡುತ್ತಾರೆ, ಜತೆಗೆ ಏನಾದರೂ ಹೆಚ್ಚಿಗೆ ಉಳಿದಿದ್ದರೆ ತೆಗೆದುಕೊಂಡು, ಕೂಲಿ ಪಡೆದುಕೊಂಡು ಹೋಗುತ್ತಾರೆ. ಆವತ್ತು ಕೂಡ ಅತಿಥಿಗಳೆಲ್ಲಾ ನಿರ್ಗಮಿಸಿದ ನಂತರ ಕೆಲಸಗಾರರ ಮಕ್ಕಳು ಒಂದಷ್ಟು ಮಂದಿ ಊಟಕ್ಕೆ ಕುಳಿತುಕೊಂಡಿದ್ದರು. ಅವರೆಲ್ಲರೂ ಕೊಳೆಯಾದ ಹರಿದಂಗಿಯನ್ನು ತೊಟ್ಟಿದ್ದರು. ಅಮ್ಮಂದಿರು ಎಲೆ ಬಡಿಸಿ ಹೋದರು. ಇನ್ನೇನು ಊಟ ಬಡಿಸಬೇಕು ಎನ್ನುವಷ್ಟರಲ್ಲಿ ಗೆಳತಿಯ ನೆಂಟರ ಮಗನೊಬ್ಬ ಅಲ್ಲಿಗೆ ಬಂದನಂತೆ. ಊಟಕ್ಕೆ ಕುಳಿತಿದ್ದ ಮಕ್ಕಳನ್ನು ಕಂಡು ಅಲ್ಲಿಂದ ಹೋಗುವಂತೆ ಜೋರು ಮಾಡಿದನಂತೆ. ಅವರು ಹೋಗದಾಗ ಅವರ ಮುಂದಿದ್ದ ಎಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಎಸೆದನಂತೆ.

ಮಕ್ಕಳಿಗೆ ಏನು ಮಾಡಬೇಕೆಂದು ತೋಚದೆ ಅವರಿಗೆ ಬಡಿಸಲೆಂದು ಅನ್ನ ಸಾಂಬಾರಿನ ಬಕೆಟ್ ಹಿಡಿದು ಬರುತ್ತಿದ್ದ ಅಮ್ಮಂದಿರ ಹಿಂದುಗಡೆ ಮುಜುಗರ ಮತ್ತು ಭಯದಿಂದ ಅವಿತುಕೊಂಡರಂತೆ. ಇದನ್ನು ಕೇಳಿ ನನ್ನ ಕರುಳು ಚುರುಕ್ಕೆಂದಿತು. ಆ ಘಟನೆಯನ್ನು ನೋಡುತ್ತಿದ್ದ ನನ್ನ ಗೆಳತಿ ಆಮೇಲೆ ಅಮ್ಮಂದಿರ ಬಳಿಗೆ ತೆರಳಿ ಐದು ನೂರರ ನೋಟು ನೀಡಿ ಉಳಿದ ಆಹಾರವನ್ನು ಪ್ಯಾಕ್ ಮಾಡಿಕೊಂಡು ಮನೆಗೆ ಹೋಗಿ ಊಟ ಮಾಡಿ ಅಂದರಂತೆ. ಇದನ್ನು ಕೇಳಿ ನನ್ನ ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಆದರೂ ಆ ಪುಟ್ಟ ಹುಡುಗ ಆ ರೀತಿಯ ವರ್ತನೆ ತೋರಿದ್ದು ನನಗೆ ಆಘಾತವಾಗಿತ್ತು. ಏಕೆಂದರೆ ಮಕ್ಕಳದು ಮುಗ್ದ ಮನಸ್ಸು ಎನ್ನುತ್ತಾರೆ. ಆ ಮನಸ್ಸೇ ಈ ರೀತಿ ಬದಲಾಗಿದ್ದು ನನ್ನ ಆಘಾತಕ್ಕೆ ಕಾರಣ. ಆ ಹುಡುಗನ ತಂದೆ ತಾಯಿ ತುಂಬಾ ಶ್ರೀಮಂತರಂತೆ.

ಸಂಬಂಧಿಕರ ಜತೆ ಬೆರೆಯುವುದು ತುಂಬಾ ಕಡಿಮೆಯಂತೆ. ಇನ್ನೂ ಪಟ್ಟಿ ಯುದ್ದದ ದೂರನ್ನು ಹೇಳಿದಳು ನನ್ನ ಗೆಳತಿ. ಅದನ್ನು ಕೇಳಿ ನನಗನ್ನಿಸಿದ್ದು ಬರಿ ಹಣದಿಂದಲೇ ಬದುಕನ್ನು ಅಳೆಯುವ ತಂದೆ ತಾಯಿಯರಿದ್ದರೆ ಅವರ ಮಕ್ಕಳಿಂದ ಇದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಲು ಆಗುವುದಿಲ್ಲ. ಮಕ್ಕಳನ್ನು ಮಕ್ಕಳಂತೆಯೇ ಬೆಳೆಯಲು ಬಿಡಬೇಕು. ಮಕ್ಕಳು ತಾವು ಬೆಳೆಯುವ ಪರಿಸರವನ್ನು ಗಮನಿಸುತ್ತಲೇ ಅದಕ್ಕೆ ತಕ್ಕನಾಗಿ ತನ್ನ ಚಿಂತನೆಗಳನ್ನು ರೂಢಿಸಿಕೊಳ್ಳುತ್ತಿರುತ್ತಾರೆ. ಹೀಗಾಗಿ ಅವರಿಗೆ ಸೂಕ್ತವಾದ ಪರಿಸರವನ್ನು ನಿರ್ಮಿಸಿಕೊಡಬೇಕಾದ ದೊಡ್ಡ ಜವಾಬ್ದಾರಿ ಹೆತ್ತವರ ಮೇಲಿನದು. ಅವರಿಗೆ ಬರಿ ಸೌಲಭ್ಯಗಳನ್ನು ಒದಗಿಸಿದರೆ ಅಷ್ಟಕ್ಕೇ ಮುಗಿದುಬಿಡುವುದಿಲ್ಲ ಜವಾಬ್ದಾರಿ.

ಈ ಘಟನೆಯನ್ನು ಏಕೆ ಹೇಳಿದೆನೆಂದರೆ ಕಳೆದ ವಾರ ಮಗಳಂದಿರಾದ ಚಂದನಾ ಮತ್ತು ಕೀರ್ತಿಯವರನ್ನು ನಾನೂ ನಮ್ಮೆಜಮಾನರು ಬೆಳೆಸಿದ ರೀತಿಯ ಕುರಿತು ಬರೆದಿದ್ದೆ. ಬರೆಯುವಾಗ ಗೆಳತಿ ಹೇಳಿದ ಈ ಘಟನೆ ಯಾಕೋ ತುಂಬಾ ಕಾಡಿತು. ನಮ್ಮ ಮಕ್ಕಳು ಹೋಗುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕೆಲ ಶಿಕ್ಷಕರನ್ನು ಹೊರತುಪಡಿಸಿದರೆ ಅವರು ನಮ್ಮ ಮಕ್ಕಳೆಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಶಾಲಾ ಮಂಡಳಿ ಕೂಡ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ನಾವು ಸಿನಿಮಾರಂಗದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯುತ್ತಿದ್ದರೋ ಆ ವಾತಾವರಣವನ್ನು ಅವರಿಗೆ ಒದಗಿಸಿಕೊಡಲು ನಾನು, ವಿಷ್ಣುವರ್ಧನ್ ಇಬ್ಬರೂ ಶ್ರಮಿಸಿದೆವು. ಆ ವಿಚಾರದಲ್ಲಿ ಯಶಸ್ವಿಯೂ ಆದೆವು. ಬಣ್ಣದ ಜಗತ್ತಿನ ಖ್ಯಾತಿ ಮಕ್ಕಳ ಮುಗ್ಧ ಮನಸ್ಸನ್ನು ಯಾವ ರೀತಿ ರೂಪಿಸಬಹುದು ಎಂದು ಗೊತ್ತಿಲ್ಲದ ಕಾರಣಕ್ಕೆ ನಾವು ಎಚ್ಚರಿಕೆ ವಹಿಸಿದ್ದೆವು.

ಮಕ್ಕಳಿಬ್ಬರೂ ಬೆಂಗಳೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಓದುತ್ತಿದ್ದ ಸಂಗತಿಯನ್ನು ಕಳೆದ ವಾರವೇ ಹೇಳಿದ್ದೆ. ಒಂದು ದಿನ ನಾವೇ ತಂದೆ ತಾಯಿಯೆಂಬ ವಿಚಾರ ಶಾಲೆಯಲ್ಲಿ ಬಯಲಾದ ದಿನವೂ ಬಂದಿತು ಎಂದೂ ಕಳೆದ ವಾರವೇ ಹೇಳಿದ್ದೆ. ಅದು ಹೇಗಾಯ್ತೆಂದು ಹೇಳುತ್ತೇನೆ. ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದುದು ಕ್ರಿಶ್ಚಿಯನ್ ಶಾಲೆಯಲ್ಲಿ. ಅಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬಹಳ ಜೋರಾಗಿ ಆಚರಿಸುತ್ತಾರೆ. ನನಗೂ ಕ್ರಿಸ್‌ಮಸ್ ಹಬ್ಬವೆಂದರೆ ಅಚ್ಚುಮೆಚ್ಚು. ಯಾಕೆ ಅಚ್ಚುಮೆಚ್ಚು ಅಂತ ನಿಮಗೇನಾದರೂ ತಿಳಿದರೆ ಆಶ್ಚರ್ಯವಾಗಬಹುದು. ಅದು ಕೇಕ್ ದೆಸೆಯಿಂದ.

ಹೌದು, ನನಗೆ ಕೇಕ್ ಎಂದರೆ ತುಂಬಾ ಇಷ್ಟ. ಎಷ್ಟು ಇಷ್ಟ ಅಂದರೆ ಎಲ್ಲರೂ ಕ್ರಿಸ್‌ಮಸ್ ಹಬ್ಬ ಬಂತು ಅಂದರೆ ನಾನು ಮಾತ್ರ ಕೇಕ್ ಹಬ್ಬ ಬಂತು ಎನ್ನುತ್ತಿದ್ದೆ. ಶಾಲೆಯಲ್ಲಿ ಕ್ರಿಸ್ ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರು. ಆ ದಿನದಂದು ಕೇಕ್‌ಮೇಳವೇ ಅಲ್ಲಿ ಏರ್ಪಡುತ್ತಿತ್ತು. ಬಗೆಬಗೆಯ ಬಣ್ಣದ, ಬಗೆ ಬಗೆಯ ಸ್ವಾದದ ಕೇಕುಗಳನ್ನು ಅಲ್ಲಿ ಸವಿಯಬಹುದಾಗಿತ್ತು. ನಾನು ಅಲ್ಲಿಗೆ ಹಿಂದೆಂದೂ ಭೇಟಿ ನೀಡಿರಲಿಲ್ಲ. ಆದರೆ ಫೋಟೋಗಳನ್ನು ನೋಡಿ ಸಂತಸಪಟ್ಟಿದ್ದೆ. ಒಂದು ಸಲವಂತೂ ಏನಾದರಾಗಲಿ ಮಕ್ಕಳ ಶಾಲೆಗೆ ತೆರಳಿ ಕ್ರಿಸ್‌ಮಸ್ ಆಚರಣೆಯನ್ನು ಕಣ್ಣಾರೆ ಕಾಣಬೇಕೆಂಬ ಹಂಬಲ ತುಂಬಾ ಹೆಚ್ಚಾಯಿತು. ಅಲ್ಲಿಗೆ ಹೋಗಬೇಕೆನ್ನುವುದಕ್ಕೆ ಎಲ್ಲಕ್ಕಿಂತ ಬಲವಾದ ಕಾರಣ ನಿಮಗೀಗಾಗಲೇ ತಿಳಿದಿರುತ್ತದೆ. ಹೌದು ಕೇಕುಗಳ ರುಚಿ ನೋಡಬೇಕೆಂಬ ಮಹದಾಸೆ. ಮನೆಯಲ್ಲಿ ಕ್ರಿಸ್‌ಮಸ್ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂಬ ನನ್ನ ಆಸೆಯನ್ನು ಹೇಳಿಕೊಂಡೆ. ಒಮ್ಮೆಯೂ ತಮ್ಮ ಜತೆ ಕಾಣಿಸಿಕೊಳ್ಳದ ಅಮ್ಮ, ಶಾಲೆಗೆ ಬರುತ್ತಾರೆ ಎನ್ನುವುದನ್ನು ಕೇಳಿಯೇ ಮಕ್ಕಳಿಬ್ಬರೂ ಸಂತಸದಿಂದ ಕುಣಿದಾಡಿದರು.

ಇಷ್ಟು ದಿನದ ನಂತರವಾದರೂ ತಮ್ಮ ಸ್ನೇಹಿತೆಯರ ಮುಂದೆ ಅಮ್ಮನನ್ನು ತೋರಿಸಿ ಬೀಗಬಹುದಲ್ಲಾ ಅಂತ ಅವರಿಗೆ ಖುಷಿ. ವಿಷ್ಣು ಅವರು ನನ್ನ ಕೋರಿಕೆ ಕೇಳಿ ಯಾಕೋ ಒಲ್ಲದ ಮುಖ ಮಾಡಿದರು. ನನಗೆ ನಿರಾಸೆಯಾಯಿತು. ಆದರೆ ಕಡೆಗೂ ಅವರು ನನ್ನ ಒತ್ತಾಯಕ್ಕೆ ಮಣಿದರು. ಅಷ್ಟು ಮಾತ್ರವಲ್ಲ ಅವರೂ ಬರುವುದಕ್ಕೆ ಒಪ್ಪಿಕೊಂಡರು. ಈ ಮನಃಪರಿವರ್ತನೆಗೆ ಕಾರಣ ಏನೋ ಗೊತ್ತಿಲ್ಲ. ಅವರಿಗೂ ತಮ್ಮ ಮಕ್ಕಳ ಜತೆ ಶಾಲೆಯಲ್ಲಿ ಬೆರೆತು ಅವರ ಖುಷಿಯಲ್ಲಿ ಪಾಲ್ಗೊಳ್ಳಬೇಕೆಂಬ ಆಶೆಯಾಯಿತೋ ಏನೋ. ಅದರಂತೆ ಆವತ್ತಿನ ದಿನ ನಾನೂ, ವಿಷ್ಣು, ಮಕ್ಕಳು ಕಾರಿನಲ್ಲಿ ಅವರ ಶಾಲೆಗೆ ಹೊರಟೆವು. ಅಲ್ಲಿ ಗೇಟಿನ ಬಳಿ ಕಾರು ಪಾರ್ಕ್ ಮಾಡಿ ನಾವು ನಾಲ್ವರೂ ನಡೆದುಬರುತ್ತಿದ್ದರೆ ಅಲ್ಲಿದ್ದವರ ಕಣ್ಣುಗಳೆಲ್ಲಾ ನಮ್ಮ ಮೇಲೆಯೇ. ಅದರಲ್ಲೂ ಅವರ ಆಶ್ಚರ್ಯಕ್ಕೆ ಕಾರಣವಾಗಿದ್ದೇನೆಂದರೆ ತಮ್ಮ ಶಾಲೆಯ ವಿದ್ಯಾರ್ಥಿಗಳಾದ ಚಂದನಾ ಮತ್ತು ಕೀರ್ತಿ ಇಬ್ಬರೂ ವಿಷ್ಣುವರ್ಧನ್ ಮತ್ತು ಭಾರತಿ ಅವರ ಜತೆ ಏಕೆ ಹೆಜ್ಜೆ ಹಾಕುತ್ತಿದ್ದಾರೆ ಎಂಬುದು. ಅವರಿಬ್ಬರೂ ನಮ್ಮ ಕೈ ಹಿಡಿದುಕೊಂಡು ಸಂತಸದಿಂದಲೇ ನಮ್ಮೊಡನೆ ಹೆಜ್ಜೆ ಹಾಕುತ್ತಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ಬಂದರು. ಅಲ್ಲಿ ಸ್ವಲ್ಪ ಹೊತ್ತು ಆಸೀನರಾಗಿ ನಂತರ ಕೇಕ್ ಮೇಳದತ್ತ ನಡೆದೆವು.

ನನಗೆ ಆ ದಿನ ನೆನಪಿರುವ ಕಾರಣವೆಂದರೆ ಕೇಕುಗಳನ್ನು ಸವಿದಿದ್ದಲ್ಲ. ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಖುಷಿ ನನ್ನ ಮಕ್ಕಳನ್ನು ಕಂಡು ಆಗಿತ್ತು. ತಮ್ಮ ತಂದೆ ತಾಯಿಯರನ್ನು ಸ್ನೇಹಿತರಿಗೆ ಪರಿಚಯಿಸಲಾಗದೆ ಅದೆಷ್ಟು ಸಂಕಟ ಪಟ್ಟಿದ್ದವೋ ಏನೋ ಅವು. ಆ ದಿನ ಅವಕ್ಕೆಲ್ಲವೂ ಉತ್ತರವೆಂಬಂತೆ ನಮ್ಮ ಜತೆ ನಲಿದು ಸಂತಸಪಟ್ಟಿದ್ದವು ಅವೆರಡೂ ಮಕ್ಕಳು. ಮಕ್ಕಳ ಸಂತಸದಲ್ಲಿ ನಾನೂ ವಿಷ್ಣುವೂ ಭಾಗಿಯಾದೆವು. ಅದು ನಾನು ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲೊಂದು.

* ಭಾರತೀ ವಿಷ್ಣುವರ್ಧನ್

Leave a Reply

Your email address will not be published. Required fields are marked *

19 − seventeen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top