ನಾನು ಮತ್ತು ವಿಷ್ಣು ಜಗಳ ಆಡಿದ್ದೇ ಇಲ್ಲ

Posted In : ಅಂಕಣಗಳು, ಬಾಳ ಬಂಗಾರ

ಅಂಕಣದಲ್ಲಿ ಪ್ರಕಟಿಸುವ ಹಳೆ ಬ್ಲ್ಯಾಕ್ ಅ್ಯಂಡ್ ವೈಟ್ ಫೋಟೋಗಳು ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ನನಗೆ ಸಂತಸ ತಂದಿದೆ. ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ತಲುಪುತ್ತಿವೆ ಎಂದು ಹೇಳಲು ಬಯಸುತ್ತೇನೆ. ಫೋಟೋಗಳು ಕಾಲವನ್ನು ಸ್ತಬ್ಧವಾಗಿಸಿ ಸೆರೆ ಹಿಡಿಯುವ ದೃಶ್ಯಗಳು ಯಾವ ಕಾಲಕ್ಕೂ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ. ಹೇಳಬೇಕೆಂದರೆ ಕಾಲ ಮುಂದೋಡುತ್ತಿದ್ದಂತೆಯೇ ಅದರ ಘನತೆ, ಹಿರಿಮೆ ಹೆಚ್ಚುತ್ತಲೇ ಹೋಗುತ್ತದೆ. ನಮ್ಮದು ಫೋಟೋ ಕುಟುಂಬವಲ್ಲ. ನಮ್ಮ ಬಳಿ ನಮ್ಮದೇ ಫೋಟೋಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿವೆ. ಅದೇನೋ ಮುಂಚಿನಿಂದಲೂ ನಾನಾಗಲಿ, ವಿಷ್ಣು ಅವರಾಗಲಿ ಕ್ಯಾಂಡಿಡ್ ಆಗಿ ಫೋಟೋ ಹೊಡೆಸಿಕೊಳ್ಳುವ ಸಂಪ್ರದಾಯದಿಂದ ದೂರವೇ ಇರುತ್ತಿದ್ದೆವು.

ನಮ್ಮ ಫೋಟೋಗಳನ್ನು ಹೊರಗಿನವರು ಕ್ಲಿಕ್ಕಿಸಿದ್ದೇ ಹೆಚ್ಚು. ಎಷ್ಟೋ ಫೋಟೋಗಳನ್ನು ಪತ್ರಿಕೆಗಳಲ್ಲಿ, ಇಂಟರ್‌ನೆಟ್ಟಿನಲ್ಲಿ ನೋಡಿದಾಗಲೇ ನನಗೆ ಆಶ್ಚರ್ಯವಾಗುತ್ತದೆ. ಆ ಫೋಟೋ ಒಂದಿರುವುದೇ ನನಗೆ ಗೊತ್ತಿರುವುದಿಲ್ಲ. ಎಲ್ಲೋ ಸಮಾರಂಭದಲ್ಲೋ ಇಲ್ಲಾ ಮನೆಯಲ್ಲೋ ತುಂಬಾ ಜನರು ಬಂದಿದ್ದಾಗ ಫೋಟೊಗ್ರಫರ್ ಕೂಡ ಅಲ್ಲಿಯೇ ಓಡಾಡಿಕೊಂಡಿರುತ್ತಾನೆ. ಯಾವ ಕ್ಷಣದಲ್ಲಿ ಆತ ಯಾರ ಫೋಟೋ ತೆಗೆಯುತ್ತಾನೆಂದು ನೋಡುತ್ತಾ ಕುಳಿತಿರುವುದಿಲ್ಲವಾದ್ದರಿಂದ ನಮಗೆ ಗೊತ್ತಾಗುವುದಿಲ್ಲ.

ಹಾಗೆ ಸೆರೆಯಾದಂತಹ ಫೋಟೋಗಳೇ ತುಂಬಾ ಇವೆ. ಅವ್ಯಾವುವೂ ನಮ್ಮ ಬಳಿ ಇಲ್ಲ ಅನ್ನೋದು ವಿಪರ್ಯಾಸ. ಫೋಟೋ ತೆಗೆದವರು ಪರಿಚಿತರು ಅಥವಾ ಸ್ನೇಹಿತರಾಗಿದ್ದರೆ ಫೋಟೋಅನ್ನು ಪ್ರಿಂಟ್ ಮಾಡಿಸಿ ಮನಗೆ ಬಂದು ಕೊಟ್ಟು ಹೋಗುತ್ತಾರೆ. ಹೀಗೆ ನಮ್ಮ ಫೋಟೋಗಳು ನಮಗೆ ಸಿಗುತ್ತವೆಯೆ ಹೊರತು ನಾವೇ ಫೋಟೋಶೂಟ್ ಮಾಡಿಸಿಕೊಂಡಿದ್ದು ತುಂಬಾ ಅಪರೂಪ. ಕೆಲವೊಂದು ಸಲ ನೆನಪುಗಳು ಕಾಡತೊಡಗಿದಾಗ ಮನೆಯ ಕಪಾಟಿನೊಳಗಿಟ್ಟಿರುವ ಫ್ಯಾಮಿಲಿ ಆಲ್ಬಂ ಅನ್ನು ತೆರೆದು ನೋಡುತ್ತೇನೆ. ಆ ಹಳೆಯ ಕ್ಷಣಗಳನ್ನು ಜ್ಞಾಪಿಸಿಕೊಂಡು ಸಂತಸ ಪಡುತ್ತೇನೆ. ಒಂದು ಬಗೆಯ ಸಮಾಧಾನ ಇದರಿಂದ ನನಗೆ ದೊರಕುತ್ತದೆ. ಈಗ ಅದೇ ಫ್ಯಾಮಿಲಿ ಆಲ್ಬಂ ಅನ್ನು ತೆರೆದು ನೋಡಿದರೆ ಅವುಗಳ ಅನೇಕ ಪುಟಗಳಲ್ಲಿ ಫೋಟೋಗಳು ಮಾಯವಾಗಿರುವುದು ಕಾಣುತ್ತದೆ. ಇದರ ಹಿಂದೆ ಒಂದು ಸ್ವಾರಸ್ಯಕರ ಕಾರಣವಿದೆ. ಮನೆಗೆ ಬಂದ ಅತಿಥಿಗಳು, ನೆಂಟರಿಷ್ಟರು ಫೋಟೋ ಆಲ್ಬಂ ಅನ್ನು ನೋಡುವ ಪದ್ಧತಿ ಇರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಹೀಗೆ ನಮ್ಮ ಮನೆಗೆ ಬಂದವರು ನಮ್ಮ ಫೋಟೋ ಆಲ್ಬಂ ಅನ್ನು ನೋಡಿ ಕೊಡುತ್ತೇವೆ ಅಂತ ತೆಗೆದುಕೊಂಡು ಹೋದವರು ಕೆಲ ಫೋಟೋಗಳ ಆಕರ್ಷಣೆಗೆ ಬಿದ್ದು ಎತ್ತಿಟ್ಟುಕೊಂಡಿದ್ದಾರೆ.

ಕೇಳಿದರೆ ಆ ಫೋಟೋ ತುಂಬಾ ತುಂಬಾ ಚೆನ್ನಾಗಿದೆ, ದಯವಿಟ್ಟು ನಮ್ಮ ಬಳಿಯೂ ಒಂದಿರಲಿ ನಿಮ್ಮ ಫೋಟೋ ಎಂದು ಹೇಳಿ ಅದು ಹೇಗೋ ನಮ್ಮನ್ನು ಒಪ್ಪಿಸಿಬಿಡುತ್ತಾರೆ. ಹೀಗಾಗಿ ನಮ್ಮನೆ ಆಲ್ಬಂನಲ್ಲಿ ಫೋಟೋಗಳ ಸಂಖ್ಯೆ ಕುಸಿತವಾಗುತ್ತಲೇ ಇದೆ. ಈಗೆಲ್ಲಾ ಫೋಟೋಗಳು ಆಲ್ಬಂನಲ್ಲಿ ಬದಲಾಗಿ ಮೊಬೈಲುಗಳಲ್ಲಿ ಸೇವ್ ಮಾಡುತ್ತಿರುವುದರಿಂದ ಫೋಟೋ ಆಲ್ಬಂಗಳು ಉಳಿದುಕೊಳ್ಳಬಹುದು. ಇರಲಿ, ಏಕಾಂತದಲ್ಲಿ ಒಬ್ಬಳೇ ಇದ್ದಾಗ ಫೋಟೋಗಳನ್ನು ನೋಡಿ ಮೌನವಾಗಿದ್ದುಕೊಂಡೇ ಖುಷಿಪಡುತ್ತೇನೆ ಎಂದೆನಲ್ಲ ವಿಷ್ಣು ಅವರಿದ್ದಾಗಲೂ ಮೌನವಾಗಿದ್ದುಕೊಂಡೇ ಖುಷಿಪಡುತ್ತಿದ್ದೆವು. ಅವರು ನಾನು ಹತ್ತಿರ ಹತ್ತಿರ ಕುಳಿತುಕೊಂಡುಬಿಟ್ಟರಾಯಿತು. ಮಾತುಗಳಿರುತ್ತಿರಲಿಲ್ಲ.

ಮಾತಿನ ಅವಶ್ಯಕತೆಯೆ ನಮಗೆ ಕಡಿಮೆ ಇರುತ್ತಿತ್ತು. ಮಾತು ಎಲ್ಲಿ ಬರುತ್ತದೆ ಎಂದರೆ ಒಬ್ಬರು ಇನ್ನೊಬ್ಬರ ಅಭಿಪ್ರಾಯವನ್ನು ಒಪ್ಪದೇ ಇದ್ದಾಗಲೋ, ಸಹಮತವಿಲ್ಲ ದಾಗಲೋ ಬರುತ್ತದೆ. ತಮ್ಮ ಅಸಹನೆಯನ್ನು ವ್ಯಕ್ತಪಡಿಸಲು ಮಾತು ಬೇಕಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಪ್ರೀತಿಯನ್ನು ಹಂಚಿಕೊಳ್ಳಲು ಮಾತು ಬೇಕಾಗುವುದಿಲ್ಲವೆ ಎಂದು ನೀವು ಕೇಳಬಹುದು. ನಿಜ ಬೇಕಾಗುತ್ತದೆ, ಆದರೆ ಮಾತುಗಳಿಲ್ಲದೆಯೂ ಪ್ರೀತಿಯನ್ನು ಹಂಚಿಕೊಳ್ಳಬಹುದಲ್ಲ ಎಂಬುದು ನನ್ನ ತರ್ಕ. ಅದನ್ನೇ ನಾನು ವಿಷ್ಣು ಅವರು ಮಾಡುತ್ತಿದ್ದುದು. ಮಾತಿಗಿಂತ ಮೌನಕ್ಕೆ ಶಕ್ತಿ ಜಾಸ್ತಿ. ಎಲ್ಲೋ ಓದಿದ್ದ ಒಂದು ಆಂಗ್ಲ ಉಕ್ತಿ ನೆನಪಿಗೆ ಬರುತ್ತಿದೆ. ಅದರ ಸಾರಾಂಶ ಇದ್ದಿದ್ದಿಷ್ಟೆ. ನನ್ನ ಮೌನವನ್ನು ನಿನಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದಾದರೆ ನನ್ನ ಮಾತುಗಳನ್ನೂ ನೀನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು. ಎಷ್ಟು ಸುಂದರವಾದ ಹೇಳಿಕೆಯಲ್ಲವೆ. ಅದನ್ನು ಓದಿದ ತಕ್ಷಣ ಒಂದು ಕ್ಷಣ ಕಣ್ಣುಮುಚ್ಚಿಕೊಂಡು ಹಳೆಯ ದಿನಗಳಿಗೆ ಜಾರಿದೆ.

ಆ ಹೇಳಿಕೆಯನ್ನು ಓದದೇ ಇದ್ದ ದಿನಗಳಲ್ಲಿಯೂ ನಾನೂ ವಿಷ್ಣುವೂ ಅದೇ ನೀತಿಯನ್ನು ಪಾಲಿಸಿಕೊಂಡು ಬಂದಿದ್ದೆವಲ್ಲ. ನಮಗೆ ಇದನ್ನು ಹೇಳಿಕೊಟ್ಟವರಾರೆಂದು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದೆ. ನಿಜ ಹೇಳಬೇಕೆಂದರೆ ನಂಗೆ ಅದನ್ನು ಯಾರೂ ಹೇಳಿಕೊಟ್ಟಿರಲಿಲ್ಲ. ತಾನಾಗಿಯೇ ರೂಢಿಯಲ್ಲಿ ಬಂದುಬಿಟ್ಟಿತ್ತು. ಸಂಬಂಧಗಳು ಪರಿಪೂರ್ಣವಾಗಿದ್ದರೆ, ಅರ್ಥಪೂರ್ಣವಾಗಿದ್ದರೆ ಯಾವ ಬಿರುಕುಗಳೂ ದಾಂಪತ್ಯದಲ್ಲಿ ಬರುವುದಿಲ್ಲ. ತುಂಬಾ ಚೆನ್ನಾದ ಹೊಂದಾಣಿಕೆ ಇರುತ್ತದೆ. ನಮ್ಮ ನಡುವೆ ಯಾರೇನೇ ಅಂದರೂ ಇನ್ನೊಬ್ಬರು ಅದಕ್ಕೆ ಸಹಮತ ಸೂಚಿಸುತ್ತಿದ್ದೆವು. ಹೀಗಾಗಿ ನಾನು ಮತ್ತು ವಿಷ್ಣು ಜಗಳ ಆಡಿದ್ದೇ ಇಲ್ಲ. ಎಲ್ಲೋ ಒಮ್ಮೆ ಆಡಿದ್ದರೂ ಅದು ನಮ್ಮಿಬ್ಬರ ವಿಷಯಕ್ಕೆ ಅಲ್ಲ, ಯಾರೋ ಬೇರೆಯವರಿಗೆ ಸಂಬಂಧಿಸಿದ ವಿಷಯವಾಗಿ ಆಡಿದ್ದಿರಬಹುದಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಅನ್ಯೋನ್ಯವಾದ ದಾಂಪತ್ಯವೆ ಇದ್ದಿತ್ತು. ಈಗ ಅನ್ನಿಸುತ್ತಿದೆ ವಿಷ್ಣು ಅವರು ನನಗಿಂತ ಹೆಚ್ಚು ಸ್ಥಿತಪ್ರಜ್ಞರಾಗಿದ್ದರು ಎಂದು. ಎಂತಹ ಸಂದರ್ಭ, ಸನ್ನಿವೇಶ ಬಂದರೂ ಉದ್ವೇಗಗೊಳ್ಳದೆ ಸಮಾಧಾನದಿಂದಲೇ ಪ್ರತಿಕ್ರಿಯಿಸುತ್ತಿದ್ದರು. ಇದು ಹೇಗೆ ಸಾಧ್ಯವಾಯಿತು ಅಂದರೆ ಅವರು ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುತ್ತಿದ್ದರಲ್ಲ ಪ್ರತಿನಿತ್ಯ. ಅದರಿಂದಲೇ ಅವರಿಗೆ ಆ ಧ್ಯಾನಸ್ಥ ಸ್ಥಿತಿ ಪ್ರಾಪ್ತವಾಗಿತ್ತು.

ಪ್ರತಿನಿತ್ಯ ಈ ಅಭ್ಯಾಸವನ್ನು ಅವರು ತಪ್ಪಿಸುತ್ತಿರಲಿಲ್ಲ. ತುಂಬಾ ಅಪರೂಪಕ್ಕೆ ಶೂಟಿಂಗ್ ಇದ್ದ ದಿನ ಮಾತ್ರ ತಪ್ಪಿ ಹೋಗುತ್ತಿದ್ದುದು ಬಿಟ್ಟರೆ ಮಿಕ್ಕ ದಿನಗಳಲ್ಲಿ ತಾವೆಲ್ಲಿಗೆ ಹೋದರೂ ಅಭ್ಯಾಸವನ್ನು ಮಾಡುತ್ತಿದ್ದರು. ಅವರು ಮೌನವನ್ನು ಕೂಡಾ ಒಂದು ಆಚರಣೆಯಂತೆ ಆಚರಿಸುತ್ತಿದ್ದರು. ಗಂಟೆಗಟ್ಟಲೆ ಮಾತನಾಡದೆ ಸುಮ್ಮನೆ ಕೂತುಬಿಡುವುದು. ಅದನ್ನು ಮೊದ ಮೊದಲು ನೋಡಿದಾಗ ಏನಪ್ಪಾ ಇದು ವಿಚಿತ್ರ ಅಂತ ಅಂದುಕೊಂಡಿದ್ದೇನೋ ನಿಜ. ಆದರೆ ಬರಬರುತ್ತಾ ನಮ್ಮೆಜಮಾನರ ಸಹವಾಸದಿಂದ ಅವರ ಆ ಮೌನ ವ್ರತ ನನಗೂ ಹಬ್ಬಿತು. ನಾನು ಈಗಲೂ ಅದನ್ನು ಪಾಲಿಸುತ್ತಲೇ ಬಂದಿದ್ದೇನೆ. ಹಳೆಯ ನೆನಪುಗಳು ಮರುಕಳಿಸಲು ತೊಡಗಿದಾಗ ನಾನು ಮೌನಕ್ಕೆ ಶರಣಾಗುತ್ತೇನೆ. ಇದರಿಂದ ನೆನಪುಗಳು ಬಹಳ ಸ್ಪಷ್ಟವಾಗಿ ಮನಃಪಟಲದಲ್ಲಿ ಮೂಡಿ ಇನ್ನಷ್ಟು ಛಾಪನ್ನು ಮೂಡಿಸ್ತುವೆ. ನಾನು ಮೌನವಾಗಿದ್ದಷ್ಟೂ ನನ್ನ ಬದುಕು ಸುಂದರವಾಗುವುದನ್ನು ನಾನು ಮನಗಂಡಿದ್ದೇನೆ.

ಮನಸ್ಸು ನಾನಾ ಚಿಂತೆಗಳಿಂದ ಅಸ್ತವ್ಯಸ್ತಗೊಂಡಿದ್ದರೆ ಅಂತಹ ಸಮಯದಲ್ಲಿ ನೀವು ಹೆಚ್ಚು ಮಾತನಾಡದೆ ಮೌನವನ್ನು ಆಚರಿಸಲು ಪ್ರಯತ್ನಿಸಿ ನೋಡಿ. ನಿಮಗೆ ಗೊತ್ತಾಗುತ್ತದೆ, ನಿಮ್ಮ ಮನಸ್ಸು ಎಷ್ಟು ಉಲ್ಲಸಿತಗೊಳ್ಳುತ್ತದೆಂದು. ವಿಷ್ಣು ಕಡೆಯವರೆಗೂ ಉತ್ಸಾಹಿ ತರುಣನಂತೆಯೇ ಇದ್ದವರು. ಅವರಲ್ಲಿನ ಹಾಸ್ಯಪ್ರಜ್ಞೆ ನನಗೆ ದಂಗುಬಡಿಸುತ್ತಿತ್ತು. ಅವರು ಯಾವತ್ತೂ ವ್ಯಗ್ರಗೊಂಡು ಮುಖ ಗಂಟು ಹಾಕಿಕೊಂಡಿದ್ದನ್ನು ನಾನು ನೋಡಿಯೇ ಇಲ್ಲ. ಆಗಲೇ ಸ್ಥಿತಪ್ರಜ್ಞರೆಂದು ಹೇಳಿದ್ದೆನಲ್ಲ. ಅದೇ ಅವರ ಸ್ನೇಹ ವ್ಯಕ್ತಿತ್ವಕ್ಕೆ ಕಾರಣವಾಗಿತ್ತು ಅಂತ ಕಾಣಿಸುತ್ತೆ. ವಿಷ್ಣು ಅವರು ಬುದ್ಧಿವಂತರೂ ಆಗಿದ್ದರು. ಬಹಳಷ್ಟು ಸಲ ಅವರು ತಮ್ಮ ಬುದ್ಧಿವಂತಿಕೆಯನ್ನು ತೋರಿಸಿಕೊಳ್ಳುತ್ತಿರಲಿಲ್ಲ ಅಷ್ಟೆ.

ತಮ್ಮ ಹಾಸ್ಯಚತುರತೆಯಿಂದ ಜಾರಿಕೊಳ್ಳುತ್ತಿದ್ದರು. ಆದರೆ ನನ್ನಿಂದ ಅವರು ಏನನ್ನೂ ಮುಚ್ಚಿಡಸು ಸಾಧ್ಯವಿರಲಿಲ್ಲ. ಅದು ಅವರಿಗೂ ಗೊತ್ತಿತ್ತು. ಅದಕ್ಕೇ ನನ್ನಲ್ಲಿ ಅವರು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಏನಾದರೂ ನಿರ್ಣಯ ತೆಗೆದುಕೊಳ್ಳಬೇಕಾದ ಸನ್ನಿವೇಶಗಳಲ್ಲಿ ನನಗೆ ಹೇಳುತ್ತಿದ್ದರು ಹೀಗೆ ಹೀಗೆ ನಿರ್ಧಾರಗಳನ್ನು ಮಾಡಬೇಕೆಂದುಕೊಂಡಿದ್ದೇನೆ ಅಂತ. ನಾನು ಅವರ ನಿರ್ಧಾರಕ್ಕೆ ಪ್ರತಿನುಡಿಯುತ್ತಿರಲಿಲ್ಲ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿರತ್ತಾರೆಂದು ನನಗೆ ನಂಬಿಕೆ ಇರುತ್ತಿತ್ತು. ದಂಪತಿಗಳ ನಡುವೆ ಈ ಸಾಮರಸ್ಯ ಇದ್ದುಬಿಟ್ಟರೆ ಎಂತಹ ಗಂಡಾಂತರಗಳು ಬಂದರೂ ಸಂಸಾರ ನೌಕೆಗೆ ಯಾವ ಆಪತ್ತೂ ಬಾರದು.

Leave a Reply

Your email address will not be published. Required fields are marked *

four × five =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top