ನಾಯಿ ಕಚ್ಚಿದರೆ ಸುದ್ದಿಯಲ್ಲ, ವಿಡಿಯೊ ಇದ್ದರೆ ಸುದ್ದಿ

Posted In : ಅಂಕಣಗಳು, ಪ್ರಥಮ ಪೂಜೆ

ಭಾರತದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹೆಚ್ಚಾಗಿ ನಕಾರಾತ್ಮಕ ಮಾಹಿತಿಗಳಿರುವುದರಿಂದ ಅಂತಹ ಮಾಧ್ಯಮಗಳನ್ನು ನೋಡಬೇಡಿ, ಓದಬೇಡಿ! ಸಾಮಾನ್ಯವಾಗಿ ಅವುಗಳಲ್ಲಿ ನಕಾರಾತ್ಮಕ ಸಂಗತಿಗಳೇ ಹೆಚ್ಚಿರುತ್ತವೆ. ಇದರಿಂದಾಗಿ ವಸ್ತುನಿಷ್ಠ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಅವಲಂಬಿಸುವುದು ಒಳ್ಳೆಯದು!! ಅನಿವಾಸಿ ಭಾರತೀಯ ದಿವಸ ಕಾರ್ಯಕ್ರಮದಲ್ಲಿ ಐಟಿ ತಜ್ಞೆ ದೀಪಾ ಅವರು ಹೇಳಿದ ಮಾತಿದು.

ಸಾಕಷ್ಟು ಜನ ಅದೇ ಭಾವನೆ ಹೊಂದಿದ್ದಾರೆ. ಅವರು ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಮಾಡಿದ್ದಾರೆ. ಸಾಮಾನ್ಯವಾಗಿ ಮಾಧ್ಯಮಗಳ ಬಗ್ಗೆ ಏನೇ ಅಭಿಪ್ರಾಯವಿದ್ದರೂ ಬಹಿರಂಗವಾಗಿ ಹೇಳಲು ಹೋಗುವುದಿಲ್ಲ. ಆದರೆ ಸಾಮಾಜಿಕ ತಾಣಗಳು ಮಾಧ್ಯಮಗಳ ಬಣ್ಣ ಬಯಲು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಮೊದಲಿನಂತೆ ಮಾಧ್ಯಮಗಳೊಂದೇ ಮಾಹಿತಿಯ ಮೂಲವಾಗಿ ಉಳಿದಿಲ್ಲ ಎಂಬುದನ್ನು ಸಾಕಷ್ಟು ಮಾಧ್ಯಮಗಳು ಅಥವಾ ಮಾಧ್ಯಮದಲ್ಲಿರುವವರು ಅರ್ಥಮಾಡಿಕೊಂಡಿಲ್ಲ.
ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡುತ್ತಿರುವ ರೀತಿಗೂ ದೀಪಾ ಅವರು ಹೇಳಿದ ಮಾತಿಗೂ ಹೋಲಿಕೆಯಾಗುತ್ತಿದೆ. ಇತ್ತೀಚೆಗೆ ಹೊಸ ವರ್ಷಾಚರಣೆ ಸಂದರ್ಭ ಎಂ.ಜಿ. ರೋಡ್ ಹಾಗೂ ಕಮ್ಮನಹಳ್ಳಿಯಲ್ಲಿ ಕೆಲವರು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನೇ ಉದಾಹರಣೆಯಾಗಿ ನೋಡಿ. ಅದನ್ನು ಕೆಲವು ರಾಷ್ಟ್ರೀಯ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು. ಇದು ಯಾವ ಪ್ರಮಾಣದಲ್ಲಿ ಸುದ್ದಿಯಾಯಿತೆಂದರೆ ಬೆಂಗಳೂರಿನಲ್ಲಿ ಮಹಿಳೆಯರಿಗೆ ಕಿಂಚಿತ್ತೂ ಸುರಕ್ಷೆಯಿಲ್ಲ. ಬೆಂಗಳೂರು ಎಂಬುದು ಕಾಮುಕರ, ವಿಕೃತ ಕಾಮಿಗಳ ನಗರ ಎಂಬಂತೆ ಬಿಂಬಿಸಲಾಯಿತು. ಅದರ ಬಗ್ಗೆ ಚರ್ಚೆ ಮಾಡಲಾಯಿತು.

ವಿಚಿತ್ರವೆಂದರೆ ಎಂ.ಜಿ. ರೋಡ್‌ನಲ್ಲಿ ನಡೆಯಿತು ಎನ್ನಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಒಂದೇ ಒಂದು ದೂರು ದಾಖಲಾಗಿಲ್ಲ. ದೂರು ದಾಖಲಾಗದೇ ಪೊಲೀಸರು ಏನು ಮಾಡಬೇಕು? ಇಂಥ ಅನ್ಯಾಯದ ವಿರುದ್ಧ ಸಾಮಾಜಿಕ ತಾಣದಲ್ಲಿ ಬರೆಯುವವರು ದೂರು ಕೊಡುವ ಧೈರ್ಯವನ್ನೂ ತೋರಬೇಕು. ದೂರು ಕೊಡದಿರಲು ಕೆಲವು ಕಾರಣಗಳನ್ನು ಅವರು ಕೊಡಬಹುದು. ಆದರೆ ಅದ್ಯಾವುದೂ ಸಮರ್ಥನೆಯಾಗದೆ ಕೇವಲ ನೆಪಗಳಂತೆ ತೋರುತ್ತವೆ. ಇದಕ್ಕೆ ಬಾರೀ ಪ್ರಚಾರ ನೀಡಿದ ಮಾಧ್ಯಮಗಳು ಮಾತ್ರ ದೂರ ದಾಖಲಾಗದೇ ಇರುವುದನ್ನು ಕಡೆಗಣಿಸಿದವು.

ಅದರ ಜತೆಗೆ ನಡೆದ ಒಂದಷ್ಟು ಬೇರೆ ಪ್ರಕರಣಗಳನ್ನೂ ‘ಲೈಂಗಿಕ ಕಿರುಕುಳ’ಕ್ಕೆ ಸಂಬಂಧ ಕಲ್ಪಿಸಲಾಯಿತು. ವರದಿ ಮಾಡಿದ ರೀತಿ ಹೇಗಿತ್ತೆಂದರೆ ಬೆಂಗಳೂರಿನಲ್ಲಿ ದಿನವೂ ಇಂಥದ್ದೇ ಕೃತ್ಯಗಳು ನಡೆಯುತ್ತವೆ ಎನ್ನುವಂತಿತ್ತು. ತೋರಿಸಿದ ವಿಡಿಯೊವನ್ನೇ ಮತ್ತೆ ಮತ್ತೆ ತೋರಿಸಿ, ವರದಿ ಮಾಡಲಾಯಿತು. ನಗರದಲ್ಲಿ ಕೋಟ್ಯಂತರ ಜನ ವಾಸ ಮಾಡುತ್ತಾರೆ. ಅಲ್ಲಿ ಈ ರೀತಿಯ ಒಂದೆರಡು ಘಟನೆಗಳು ನಡೆಯುವುದು ಸಾಮಾನ್ಯ. ಹಾಗಂತ ಉಳಿದವರೆಲ್ಲ ನೆಮ್ಮದಿಯಿಂದ ಜೀವನ ಮಾಡುತ್ತಿಲ್ಲವೇ? ಹಾಗೆ ನೋಡಿದರೆ ದೇಶದಲ್ಲಿ ಬೆಂಗಳೂರು ಹಾಗೂ ನಮ್ಮ ರಾಜ್ಯ ಹೆಣ್ಣು ಮಕ್ಕಳಿಗೆ ಎಷ್ಟೋ ನೆಮ್ಮದಿಯ ಸ್ಥಳ. ಉತ್ತರ ಭಾರತದಲ್ಲಿ ನಡೆಯುವ ಅತ್ಯಾಚಾರ, ಕೊಲೆ, ಮರ್ಯಾದಾ ಹತ್ಯೆಗಳನ್ನು ಗಮನಿಸಿದರೆ ನಮ್ಮ ರಾಜ್ಯ ಎಷ್ಟೋ ಪಾಲು ಮೇಲು.

ಮಾಧ್ಯಮಗಳು ಈ ರೀತಿಯ ಸುದ್ದಿಗೆ ಮಹತ್ವ ನೀಡುತ್ತಿರುವುದನ್ನು ಗಮನಿಸಿದ ಇರ್ಷಾದ್ ಅದನ್ನು ಹೇಗೆ ದುರ್ಬಳಕೆ ಮಾಡಿಕೊಂಡ ಎಂಬುದನ್ನು ಗಮನಿಸಬೇಕು. ಆತ ತನ್ನ ನಾದಿನಿಯನ್ನೇ ಮದುವೆಯಾಗಲು ಬಯಸಿದ್ದ. ನಾದಿನಿಯೂ ಅದಕ್ಕೆ ಸಿದ್ಧವಿದ್ದಳು. ಆದರೆ ಮನೆಯವರು ಒಪ್ಪುವುದು ಕಷ್ಟ. ಅದಕ್ಕೆ ಹೊಸ ವರ್ಷಾಚರಣೆಯ ರಾತ್ರಿ ನಡೆದ ಲೈಂಗಿಕ ಕಿರುಕುಳ ಘಟನೆ ಹಾಗೂ ಅದಕ್ಕೆ ದೊರೆಯುವ ಪ್ರಚಾರವನ್ನು ಆತ ಗಮನಿಸಿದ. ಸಿಸಿ ಕ್ಯಾಮೆರಾ ಇರುವ ಮನೆ ಹುಡುಕಿ, ಅದರ ಎದುರೇ ಆಕೆಗೆ ತಾನೇ ಲೈಂಗಿಕ ಕಿರುಕುಳ ನೀಡಿ, ಅದರ ವಿಡಿಯೊ ತೆಗೆಸಿ, ಯಾರೋ ಲೈಂಗಿಕ ಕಿರುಕುಳ ನೀಡಿದರು ಎಂದು ವಿಡಿಯೊವನ್ನು ತಾನೇ ಮಾಧ್ಯಮಗಳಿಗೆ ನೀಡಿದ್ದ. ಆತನ ನಿರೀಕ್ಷೆಯಂತೆ ಮಾಧ್ಯಮಗಳು ಅದನ್ನು ಹೆಚ್ಚು ಮಹತ್ವ ಕೊಟ್ಟು ಪ್ರಕಟಿಸಿದವು. ಇರ್ಷಾದ್ ಸಿಕ್ಕಿಹಾಕಿಕೊಳ್ಳದಿದ್ದರೆ ಅದೂ ಬೆಂಗಳೂರಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪಟ್ಟಿ ಸೇರುತ್ತಿತ್ತು. ಮಾಧ್ಯಮಗಳ ಆತುರದ ಸುದ್ದಿ ಹಸಿವನ್ನು ಇರ್ಷಾದ್ ಬಳಸಿಕೊಂಡ!

ಪ್ರತಿ ಘಟನೆಗಳಲ್ಲಿ ಹೀಗೇ ಆಗುತ್ತದೆ. ಒಂದು ಘಟನೆಗೆ ಮಾಧ್ಯಮಗಳು ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದಂತೆ ಅದೇ ರೀತಿಯ ಪ್ರಕರಣಗಳು ಹೆಚ್ಚೆಚ್ಚು ನಡೆಯಲಾರಂಭಿಸುತ್ತವೆ. ಅದು ಹೇಗೆ? ಸತ್ಯ ಏನೆಂದರೆ ಅಂತಹ ಘಟನೆಗಳು ಬೇರೆ ಸಂದರ್ಭದಲ್ಲೂ ನಡೆಯುತ್ತವೆ. ಆಗ ಅದನ್ನು ಪ್ರಕಟಿಸದ ಅಥವಾ ಚಿಕ್ಕದಾಗಿ ಪ್ರಕಟಿಸುವ ಮಾಧ್ಯಮಗಳು ಆಗ ಅವುಗಳಿಗೆ ಹೆಚ್ಚು ಮಹತ್ವ ಕೊಟ್ಟು ಪ್ರಕಟಿಸುತ್ತವೆ.

ಉದಾಹರಣೆಗೆ ನೋಟ್ಯಂತರ ಘೋಷಣೆಯಾದ ನಂತರ ಅದರಿಂದಾಗಿ ದೇಶದಲ್ಲಿ ಸಾವುಗಳಾದವು ಎಂದು ಮಾಧ್ಯಮಗಳು ಬಿತ್ತರಿಸಿದ್ದವು. ಉದಾಹರಣೆಗೆ ಎಟಿಎಂನಲ್ಲಿ ಸಾಲಾಗಿ ನಿಂತಿದ್ದ ಸಮಯದಲ್ಲಿ ಹೃದಯಾಘಾತವಾಗಿ ಮೃತಪಟ್ಟವರನ್ನೂ ನೋಟ್ಯಂತರದ ಸಾವಿನ ಪಟ್ಟಿಗೇ ಸೇರಿಸಿದವು. ಅಷ್ಟು ಮಾಡಿಯೂ ಪಟ್ಟಿ 59ರ ಅಂಕಿ ದಾಟಲಿಲ್ಲ. ಎಂತೆಂಥ ಸಾವುಗಳನ್ನು ನೋಟ್ಯಂತರಕ್ಕೆ ಸಂಬಂಧ ಕಲ್ಪಿಸಲಾಯಿತು ಎಂಬುದನ್ನು ನೀವೇ ನೋಡಿದ್ದೀರಿ. ನೋಟ್ಯಂತರದಿಂದ ಎಲ್ಲೆಡೆ ಹಾಹಾಕಾರ ಎದ್ದಿದೆ ಎಂಬಂತೆ ಕೆಲವರು ವರದಿ ಮಾಡಿದರು. ಕಷ್ಟವಾಗಿದ್ದು ನಿಜವಾದರೂ, ಕೆಲವರು ಪ್ರಕಟಿಸಿದಷ್ಟು ಕಷ್ಟವಂತೂ ಆಗಿರಲಿಲ್ಲ. ಆದರೆ ಅದೇ ಸಮಯದಲ್ಲಿ ಸಾಕಷ್ಟು ಮಂದಿ ಡಿಜಿಟಲ್ ಮನಿ ಬಳಸಲಾರಂಭಿಸಿದರು. ತಮ್ಮ ಹಣದ ವ್ಯವಹಾರದ ರೀತಿ ಬದಲಾಯಿಸಿಕೊಂಡರು. ದೊಡ್ಡ ಮೊತ್ತದ ಹಣ ವಶಪಡಿಸಿಕೊಳ್ಳಲಾಯಿತು. ಅದನ್ನು ಎಷ್ಟು ಪ್ರಕಟಿಸಿದರು ಎಂಬುದು ನಿಮಗೆ ಗೊತ್ತೇ ಇದೆ. ನಮ್ಮದೇ ಮಾಧ್ಯಮಗಳು ನಮ್ಮ ದೇಶದ ಬಗ್ಗೆ ಬೇಸರ ಹುಟ್ಟುವ ರೀತಿಯಲ್ಲಿ, ಮಾನ ಕಳೆಯುವ ರೀತಿಯಲ್ಲಿ ವರದಿ ಪ್ರಕಟಿಸುತ್ತಿವೆ.

ಬೆಂಗಳೂರಿನಲ್ಲಿ ನಡೆದ ಲೈಂಗಿಕ ಹಗರಣದ ಬಗ್ಗೆ ಸುದ್ದಿ ಪ್ರಕಟಿಸುವ ಮೂಲಕ ಸಮಾಜದ ಉದ್ಧಾರಕ್ಕೆ ಸಹಕರಿಸಿದಂತೆ, ಮಹಿಳೆಯರ ರಕ್ಷಣೆಗೆ ಕೊಡುಗೆ ನೀಡಿದವರಂತೆ ವರ್ತಿಸುವ ಮಾಧ್ಯಮಗಳನ್ನು ಅದೇ ಪ್ರಕರಣದ ತನಿಖೆಯ ವೇಗವನ್ನು ಕಡಿಮೆ ಮಾಡಿದವು ಅಂದರೆ ನಂಬುತ್ತೀರಾ? ಈ ಘಟನೆ ವರದಿಯಾಗುತ್ತಿದ್ದಂತೆ ಪೊಲೀಸರು ಇದರ ತನಿಖೆ ಕೈಗೆತ್ತಿಕೊಂಡಿದ್ದರು. ಚುರುಕಾಗಿ ತನಿಖೆ ನಡೆಸಲೆಂದು ಕ್ರಿಮಿನಾಲಜಿ ಕಲಿಯುತ್ತಿರುವ ಇಬ್ಬರು ಹುಡುಗರನ್ನು ಕೆಲವು ತಾಂತ್ರಿಕ ಕೆಲಸಗಳಿಗೆ ಪೊಲೀಸರು ಕರೆಸಿಕೊಂಡಿದ್ದರು. ರಾತ್ರಿಯಿಡೀ ಕೆಲಸ ಮಾಡಿದ ಆ ಹುಡುಗರು, ಬೆಳಗ್ಗೆ ಮನೆಗೆ ಹೋಗಿ, ಪೊಲೀಸ್ ಠಾಣೆಗೆ ಮರಳುತ್ತಿರುವಾಗ ಕೆಲವು ಚಾನೆಲ್‌ಗಳು ಅವರನ್ನೇ ವಿಡಿಯೊ ಚಿತ್ರಿಸಿ, ಆರೋಪಿಗಳೆಂದು ತೋರಿಸಿದವು. ಪರಿಣಾಮ ಅವರು ಬೇಸರಗೊಂಡು ಪೊಲೀಸರಿಗೆ ಸಹಾಯ ಮಾಡುವುದನ್ನೇ ನಿಲ್ಲಿಸಿದರು. ಇದನ್ನು ಯಾರೂ ನಿಮಗೆ ಹೇಳುವುದಿಲ್ಲ ಬಿಡಿ!

ಒಮ್ಮೆ ಆ ಹುಡುಗರು ಆರೋಪಿಗಳಲ್ಲ, ಅವರೆಲ್ಲ ಕ್ರಿಮಿನಾಲಜಿ ಅಧ್ಯಯನ ಮಾಡುತ್ತಿರುವವರು ಎಂದು ಅಕಸ್ಮಾತ್ ಹೇಳಿದರೂ ತೊಂದರೆಯೇ ಏಕೆಂದರೆ, ಪೊಲೀಸರಲ್ಲಿ ಸಿಬ್ಬಂದಿ ಕೊರತೆ ಅಥವಾ ಪೊಲೀಸರ ಅಸಾಮರ್ಥ್ಯ, ವಿದ್ಯಾರ್ಥಿಗಳಿಂದ ಸಹಾಯಕ್ಕೆ ಅಂಗಲಾಚಿದ ಪೊಲೀಸರು ಎಂದು ವರದಿ ಮಾಡಿ ಮಾಧ್ಯಮಗಳು ಹಬ್ಬ ಮಾಡಿಬಿಡುತ್ತವೆ. ಮಾಧ್ಯಮಗಳ ಇಂದಿನ ದೌರ್ಭಾಗ್ಯ ಹೇಗಿದೆಯೆನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ಕೇಳಿ, ಒಂದು ಕೊಲೆಯಾಗಿರುತ್ತೆ. ಹೆಣ ಅಲ್ಲೇ ಬಿದ್ದಿರುತ್ತೆ. ಅಪರಾಧ ನಡೆದ ಸ್ಥಳಕ್ಕೆ ಬೇರೆ ಬೇರೆ ಮಾಧ್ಯಮಗಳ ವರದಿಗಾರರೂ ಬಂದಿರುತ್ತಾರೆ. ಎಲ್ಲರಿಗೂ ಸಿಗುವುದು ಒಂದೇ ಸುದ್ದಿ, ಅದೇ ಹೆಣ. ಜನಗಳು ಯಾವ ಟಿವಿ ಹಾಕಿದರೂ ಅದೇ ಹೆಣ ಎಂದು ಮಾಧ್ಯಮದವರಿಗೂ ಗೊತ್ತು. ಹಾಗಾದರೆ ಬೇರೆಯವರಿಗಿಂತ ನಾವು ವಿಭಿನ್ನ ಎಂದು ತೋರಿಸಿಕೊಳ್ಳಬೇಕಲ್ಲ. ಅದಕ್ಕೆ ಹೆಣದ ಪ್ಯಾಂಟ್ ಜೇಬನ್ನು ಝೂಮ್ ಮಾಡಿ, ‘ಈಗಷ್ಟೇ ಸಿಕ್ಕ ಮಾಹಿತಿ. ಹೆಣದ ಪ್ಯಾಂಟ ಜೇಬಿನಲ್ಲಿ ಒಂದು ಲೆಟರ್ ಇದೆ. ಅದರಲ್ಲೇನಿದೆ ಎನ್ನುವುದೇ ಕುತೂಹಲ’ ಎಂದು ಬ್ರೇಕಿಂಗ್ ಹೊಡೆಯುತ್ತಾರೆ. ಕೊನೆಗೆ ಪೊಲೀಸ್ ಉನ್ನತಾಧಿಕಾರಿಗಳು ಅದನ್ನು ನೋಡಿ ಸ್ಥಳದಲ್ಲಿರುವ ಪೊಲೀಸರಿಗೆ ಫೋನ್ ಮಾಡಿ ಆ ಹೆಣದ ಪ್ಯಾಂಟ್ ಜೇಬಿನಲ್ಲೇನಿದೆ ಎಂದು ತೆಗೆಸಿ ನೋಡಿದರೆ, ಅದು ಟಿಶ್ಯೂ ಪೇಪರ್ ಆಗಿರುತ್ತದೆ. ಅಷ್ಟರಲ್ಲಾಗಲೇ ಲೆಟರ ಇತ್ತು ಎಂದು ಹೇಳಿದ ಮಾಧ್ಯಮ ಬೇರೆ ಏನೋ ಹುಡುಕಿರುತ್ತದೆ. ಒಂದರ್ಧ ಗಂಟೆ ಪೊಲೀಸರು ಮತ್ತು ಜನರನ್ನು ಗೊಂದಲಕ್ಕೀಡು ಮಾಡಿ ಟಿಆರ್‌ಪಿ ಬಂದಿದ್ದೇ ಲಾಭ.

ನಾನು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೂ ಒಮ್ಮೆ ಹೀಗಾಗಿತ್ತು – ಚಾನೆಲ್ ವರದಿಗಾರನೊಬ್ಬ ವೇಶ್ಯಾವಾಟಿಕೆ ಕುರಿತ ವರದಿಯಲ್ಲಿ, ಮಾಲ್ ಮುಂದೆ ಯಾರೋ ಹುಡುಗಿಯನ್ನು ಕೂರಿಸಿಕೊಂಡು ಹೋಗುವ ವಿಡಿಯೊ ಚಿತ್ರೀಕರಿಸಿ ಕಳುಹಿಸಿದ್ದ. ಆದರೆ ವಿಡಿಯೊದಲ್ಲಿ ಆತ ಕರೆದುಕೊಂಡಿದ್ದು ಹೋಗಿದ್ದು ಹೆಂಡತಿಯನ್ನು. ನಾವು ಮಾಧ್ಯಮದವರು ಇಂತಹ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಬಹುತೇಕ ಸಂದರ್ಭಗಳಲ್ಲಿ ಅಂತಹ ತಪ್ಪಾಗಿದೆ ಎಂಬುದನ್ನೂ ನಾವು ಹೇಳುವ ಮನಸ್ಸನ್ನೂ ಮಾಡುವುದಿಲ್ಲ. ಜಗತ್ತಿನ ತಪ್ಪು ತೋರಿಸುವ ನಾವು, ನಮ್ಮದೇ ತಪ್ಪುಗಳನ್ನು ಮುಚ್ಚಿಡುತ್ತೇವೆ! ವಿಚಿತ್ರವೆಂದರೆ ಬೆಂಗಳೂರಿನಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ದಿನವೂ ಇಂತಹ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತವೆ. ನಮ್ಮ ದೇಶದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಮನಿಸಿದರೆ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಒಡಿಶಾ, ದೆಹಲಿ ಆದ ನಂತರದ ಸ್ಥಾನದಲ್ಲಿ ನಮ್ಮ ರಾಜ್ಯವಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ವರ್ಷಕ್ಕೆ 5,367 ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತವೆ. ಎಷ್ಟನ್ನು ಮಾಧ್ಯಮಗಳು ತೋರಿಸುತ್ತವೆ?

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭ ನಡೆದ ಮಾತುಕತೆಗಳನ್ನು ನೀವೇ ಕೇಳಿಲ್ಲವೇ? ಈಗ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಕೆಲವು ಹುಡುಗಿಯರೊಂದಿಗೆ ಹೀಗೇ ವರ್ತಿಸಿದ್ದರು. ಕೆಲವರಂತೂ ನೇರವಾಗಿ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದಿದ್ದಾರೆ. ತುಂಬ ಮುಂದುವರಿದ, ಅತ್ಯಂತ ಸುರಕ್ಷಿತ ದೇಶ ಎಂದು ಹೇಳುವ ಅಮೆರಿಕದಲ್ಲೂ ಇದು ನಡೆಯುತ್ತಿದೆ. ಹೀಗಿರುವಾಗ ನಮ್ಮ ಎಂ.ಜಿ. ರೋಡ್‌ನಲ್ಲಿ ಹೊಸ ವರ್ಷ ಆಚರಣೆಯ ಮಧ್ಯರಾತ್ರಿಯ ಸಂದರ್ಭ ನಡೆಯುವುದು ದೊಡ್ಡ ವಿಷಯವೇ? ಅಲ್ಲಿ ಹಾಗೆ ಮಾಡಿದ್ದು ಸರಿಯಲ್ಲ. ಆದರೆ ಆ ರೀತಿಯ ಘಟನೆಗಳು ಹಲವೆಡೆ ನಡೆಯುತ್ತವೆ. ಅದನ್ನು ತಡೆಯುವುದು ಅಸಾಧ್ಯ. ಅದಕ್ಕೆ ನಮ್ಮೆಲ್ಲರ ಮನಸ್ಥಿತಿ ಬದಲಾಗಬೇಕೆ ಹೊರತು, ಕಾನೂನು, ಪೊಲೀಸರು, ಕ್ಯಾಮೆರಾಗಳಿಂದ ತಡೆಯುವುದು ಸಾಧ್ಯವಿಲ್ಲ.

ಯಾರೇ ಪತ್ರಿಕೋದ್ಯಮ ತರಗತಿಗೆ ಹೋದರೆ ಮೊದಲು ‘ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ’ ಎಂದು ಸುದ್ದಿಯ ವ್ಯಾಖ್ಯಾನ ಹೇಳಿಕೊಡುತ್ತಾರೆ. ಆದರೆ ಬೆಂಗಳೂರಿನಲ್ಲಿ ನಾಯಿ ಜನರಿಗೆ ಕಚ್ಚಿದ್ದು ಕೂಡ ದೊಡ್ಡ ಸುದ್ದಿಯಾಯಿತು. ಅಲ್ಲಿಗೆ ನಾಯಿ ಮನುಷ್ಯನಿಗೆ ಕಚ್ಚಿದರೂ ಸುದ್ದಿಯಾಗುತ್ತದೆ ಎಂದಾಯಿತು. ಸುದ್ದಿಯ ವ್ಯಾಖ್ಯೆ ಈಗ ಇನ್ನಷ್ಟು ಬದಲಾಗಿದೆ. ಅದೇನೆಂದರೆ ಈಗ ವಿಡಿಯೊ ಇದ್ದರೆ ಯಾವುದು ಬೇಕಾದರೂ ಸುದ್ದಿಯಾಗುತ್ತದೆ. ವಿಡಿಯೊ ಇಲ್ಲವೆಂದಾದರೆ ತುಂಬ ಪ್ರಮುಖವಾದ ವಿಷಯ ಕೂಡ ಸುದ್ದಿಯಾಗದೇ ಹೋಗಬಹುದು. ಇದೇ ಇಂದಿನ ಮಾಧ್ಯಮಗಳ ಕಥೆ.
ಸುದ್ದಿಯ ಹೊಸ ವ್ಯಾಖ್ಯಾನವೇನೆಂದರೆ ವೀಡಿಯೊ ಇದ್ದರೆ ಎಲ್ಲವೂ ಸುದ್ದಿ!

Leave a Reply

Your email address will not be published. Required fields are marked *

five × one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top