– ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ನಮ್ಮೂರಿಗೆ ವಿಶ್ವವಾಣಿ ಸರಿಯಾಗಿ ಬರುತ್ತಿಲ್ಲ. ಅಂಗಡಿಯವರನ್ನು ಕೇಳಿದರೆ ‘ವಾರದಲ್ಲಿ ನಾಲ್ಕು ದಿನ ಬರುತ್ತೆ, ಬಂದಮೇಲೇ ಗ್ಯಾರಂಟಿ ಎನ್ನುತ್ತಾರೆ’, ಹೀಗೇಕೆ?
ವಿಶ್ವವಾಣಿಯ ಮೇಲಿನ ನಿಮ್ಮ ಪ್ರೀತಿಗೆ ಧನ್ಯವಾದ. ಪ್ರತಿದಿನವೂ ನಿಮ್ಮ ಮುಂಜಾನೆಯ ಕಾಫಿ ಜತೆಗೆ ಅಂದಚೆಂದದ‘ವಿಶ್ವವಾಣಿ’ಯನ್ನು ನಿಮ್ಮ ಕೈಗಿಡಬೇಕು ಎಂಬುದು ನನ್ನ ಬಯಕೆ. ಅದಕ್ಕಾಗಿ ನಾನು, ನನ್ನ ಸಹದ್ಯೋಗಿಗಳು ಶ್ರಮ ಪಡುತ್ತೇವೆ. ಇಷ್ಟೆಲ್ಲ ಆದ ಮೇಲೆ ನಿಮಗೆ ಪತ್ರಿಕೆ ಸಿಗಲಿಲ್ಲ ಮೇಲೆ ಅದು ನಮಗೆ ಬೇಸರದ ಸಂಗತಿಯೇ. ಈ ಕುರಿತು ನಮ್ಮ ಪ್ರಸರಣ ಪ್ರತಿನಿಧಿ ಜತೆ ಮಾತನಾಡಿದ್ದೇನೆ. ‘ವಿಶ್ವವಾಣಿ’ ವಾರದ ಏಳೂ ದಿನಗಳು ನಿಮ್ಮ ಕೈಸೇರುವಂತೆ ಖಂಡಿತ ವ್ಯವಸ್ಥೆ ಮಾಡುತ್ತೇವೆ. ನಮ್ಮ ಶ್ರಮಕ್ಕೆ ನಿಮ್ಮ ಪ್ರೀತಿಯೇ ಶಕ್ತಿವರ್ಧಕ .
– ಪವಿತ್ರಾ ರಾಜಶೇಖರ, ಹೊಸಕೋಟೆ
ಬೇರೆ ಪತ್ರಿಕೆಗಳಲ್ಲಿ ನಿಮ್ಮನ್ನು ಟೀಕಿಸಿದರೆ, ನೀವೇಕೆ ನಿಮ್ಮ ಪತ್ರಿಕೆಯಲ್ಲಿ ಅವರನ್ನು ಟೀಕಿಸುವುದಿಲ್ಲ?
ಪತ್ರಿಕೆಗಳು ಇರುವುದೇ ಒಳ್ಳೆಯದಕ್ಕೆ ಶಹಭಾಸ್ ಎನ್ನಲು, ಕೆಟ್ಟದ್ದನ್ನು ಕಂಡರೆ ಬೀಸಲು. ಹೀಗಾಗಿ ಬೇರೆ ಪತ್ರಿಕೆಯಲ್ಲಿ ನನ್ನನ್ನು ಟೀಕಿಸಿದಾಕ್ಷಣ ನಮ್ಮ ಪತ್ರಿಕೆಯಲ್ಲಿ ಅವರನ್ನು ಟೀಕಿಸಿ ಬರೆದರೆ ಆಗುವ ಪ್ರಯೋಜನವಾದರೂ ಏನು? ಬೇರೆಯವರು ನಮ್ಮನ್ನು ಟೀಕಿಸಿದರೆ, ನಾವೂ ಅವರನ್ನು ಟೀಕಿಸಲೇಬೇಕು ಎಂದೇನೂ ಇಲ್ಲ ತಾನೆ? ಹಾಗೆಯೇ ನಾನೇನು ಟೀಕಾತೀತನಲ್ಲ; ನನ್ನನ್ನು ಯಾರೂ ಟೀಕಿಸಬಾರದು ಎಂದು ನಾನು ಭಾವಿಸಿಕೊಂಡಿಲ್ಲ. ಒಂದೊಮ್ಮೆ ಟೀಕೆಗಳು, ಸಲಹೆಗಳು ಸರಿ ಇದ್ದರೆ ನನ್ನ ತಪ್ಪನ್ನು ಖಂಡಿತ ತಿದ್ದಿಕೊಂಡಿದ್ದೇನೆ. ಬೇಕೆಂತಲೇ ಕೊಂಕು ಮಾಡುವವರನ್ನು ನಿರ್ಲಕ್ಷ್ಯ ಮಾಡಿದ್ದೇನೆ. ಒಟ್ಟಿನಲ್ಲಿ ಟೀಕೆಗಳು ಸದಾ ಹಾಗೂ ಗೌರವಪೂರ್ವಕವಾಗಿ ಇರಬೇಕೆಂಬುದಷ್ಟೇ ನನ್ನ ಅಭಿಪ್ರಾಯ. ಟೀಕೆಗಳು ಅಥವಾ ಕಟುನುಡಿಗಳು ಆ ಸಂದರ್ಭಕ್ಕೆ ಸೀಮಿತವಾಗಿರಬೇಕೇ ವ್ಯಕ್ತಿಗಳಿಗಳನ್ನು ಗುರಿಯಾಗಿಸಿಕೊಂಡಲ್ಲ.
– ಜಯರುದ್ರಪ್ಪ. ಕೆ. ಹಾಸನ
ನಿಮ್ಮ ಅಂಕಣಗಳಲ್ಲಿ ವಿಶ್ವದ ಮೂಲೆಮೂಲೆಯ ವಿಷಯ ಪ್ರಸ್ತಾಪಿಸುತ್ತೀರಿ, ಹಾಗೆಯೇ ನಿಮ್ಮ ವಿಶ್ವವಾಣಿ ಸುದ್ದಿಮನೆ ಕಾರ್ಯದ ಬಗ್ಗೆಯೂ ಒಂದಷ್ಟು ತಿಳಿಸಬಾರದೇಕೆ?
ಸುದ್ದಿಮನೆಯ ಬಗ್ಗೆಯೂ ತಿಳಿದುಕೊಳ್ಳುವ ನಿಮ್ಮ ಆಸಕ್ತಿ ನನಗೆ ತುಂಬಾ ಇಷ್ಟವಾಯಿತು. ಈ ಕುರಿತು ನಾನಾಗಲೇ ಒಂದೆರಡು ಪುಸ್ತಕ ಬರೆದಿದ್ದೇನೆ. ಎಲ್ಲಾದರೂ ಪುಸ್ತಕದಂಗಡಿಯಲ್ಲಿ ಸಿಗಬಹುದು ಆದರೂ ಇಲ್ಲಿ ಒಂದಷ್ಟು ಚುಟುಕು ಹೂರಣ ನೀಡುವೆ. ನಮ್ಮ ಸುದ್ದಿಮನೆ ವರದಿಗಾರರು, ಉಪ ಸಂಪಾದಕರು ಮತ್ತು ಪೇಜ್ ಡಿಸೈನರ್ಗಳ ಒಂದು ಕೂಡು ಕುಟುಂಬ. ಇಲ್ಲಿ ಯಾರೊಬ್ಬರ ಕೆಲಸ ಹೆಚ್ಚು ಕಡಿಮೆಯಾದರೂ ಪತ್ರಿಕೆಯ ಅಂದವೇ ಕೆಡುತ್ತದೆ. ಹಾಗಾಗಿ ಎಲ್ಲರದ್ದೂ ಸಿಬಿ‘ಐ’ನಂಥ ಕೆಲಸ. ಪ್ರತಿದಿನ ಸರಿಸುಮಾರು 800 ಸುದ್ದಿಗಳಲ್ಲಿ ನಾವು ಪತ್ರಿಕೆಯಲ್ಲಿ ಮುಖ್ಯ ಎನಿಸುವವನ್ನು, ಅಗತ್ಯ ಎನಿಸಿದಷ್ಟೇ ವಿಸ್ತಾರವಾಗಿ ನೀಡುತ್ತೇವೆ. ಸುದ್ದಿಮನೆಯಲ್ಲಿ ಪತ್ರಿಕೆ ಪ್ರಿಂಟ್ಗೆ ಹೋಗಲು ಡೆಡ್ಲೈನ್ ಎಂಬ ತೂಗುಕತ್ತಿ ಸದಾ ಈ ನಡುವೆ ಒಂದಷ್ಟು ತಮಾಷೆ, ತರಲೆ ಮಾತುಗಳು, ಚೆಂದದ ಹೆಡ್ಲೈನ್ಗಾಗಿ ತಡಕಾಟ, ಉತ್ತಮ ಡಿಸೈನ್ ನೀಡಲು ಮಾಡುವ ಕಸರತ್ತು, ಇವೆಲ್ಲವೂ ಸುದ್ದಿಮನೆಯನ್ನು ಸದಾ ಗಿಜಿಗುಡುವಂತೆ ಮಾಡಿ ಒಂದು ಕ್ರಿಯೇಟಿವ್ ಪರಿಸರ ಸೃಷ್ಟಿಸುತ್ತದೆ. ನಾನಿದನ್ನು ಸದಾ ಎಂಜಾಯ್ ಮಾಡುತ್ತೇನೆ. ಹೀಗಾಗಿ ಸುದ್ದಿಮನೆ ನನಗೆ ಎರಡನೇ ಮನೆಯಂತೆ ಭಾಸವಾಗುತ್ತದೆ!
– ರಮೇಶ, ಕುಶಾಲನಗರ
ಟ್ವಿಟರ್ನಲ್ಲೇ ಈಗೀಗ ಹೆಚ್ಚು ಕಾಣಿಸಿಕೊಳ್ಳುತ್ತೀರಿ, ಫಾಲೋಯರ್ಸ್ಗಳೂ ಹೆಚ್ಚಾಗಿದ್ದಾರಲ್ಲ?
ನಿಮ್ಮ ಮಾತನ್ನು ಹೊಗಳಿಕೆ ಎಂದು ಭಾವಿಸಬೇಕೋ, ತಿಳಿಯಬೇಕೋ, ಪ್ರಶ್ನೆಯೆಂದು ಭಾವಿಸಬೇಕೋ ಗೊತ್ತಾಗುತ್ತಿಲ್ಲ. ಆದರೂ ನಿಮ್ಮ ಮಾತು ಸರಿ. ಶಕ್ತಿಶಾಲಿ ಮಾಧ್ಯಮವಾಗಿರುವ ಟ್ವಿಟರ್ ಸದಾ ಕ್ರಿಯಾಶೀಲವಾಗಿರಲು ಪ್ರೇರಣೆ. ಬೆಳಗ್ಗೆ ಎದ್ದ ನಂತರ ನಿರಂತರವಾಗಿ ನಾವು ಒಂದೋ ಟ್ವೀಟ್ಗಳನ್ನು ಮಾಡುತ್ತಿರುತ್ತೇವೆ, ಇಲ್ಲವೇ ನೋಡುತ್ತಿರುತ್ತೇವೆ. ಜಗತ್ತಿನ ಬಹುತೇಕ ಒಳ್ಳೆಯ, ಕೆಲವೊಮ್ಮೆ ಕೆಟ್ಟ ವಿಚಾರಗಳೂ ಇಲ್ಲಿ ಓಡಾಡುತ್ತಿರುತ್ತವೆ. ಒಬ್ಬ ಪತ್ರಕರ್ತನಾಗಿ ಹಾಗೂ ಜಗತ್ತಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ಹೊಂದಿರುವವನಾಗಿ ಟ್ವಿಟರ್ ನನಗಂತೂ ಬಲಗೈ ಬಂಟನಾಗಿಬಿಟ್ಟಿದೆ. ಹೀಗಾಗಿ ಟ್ವಿಟರ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೇನೆ. ಎಂದಿನಂತೆ ಮಿತ್ರರು, ಅಭಿಮಾನಿಗಳು ನನ್ನನ್ನು ಫಾಲೋ ಮಾಡುತ್ತಾರೆ. ಅಷ್ಟೇಅಲ್ಲ, ದಿನನಿತ್ಯ ಸುದ್ದಿ ಭೋಜನ ಉಣಬಡಿಸಬೇಕೆಂದರೆ ಪತ್ರಕರ್ತರಿಗೆ ಟ್ವಿಟರ್ ಒಂದು ಅನಿವಾರ್ಯ ಎನಿಸಿದೆ.
-. ಶ್ರೀಕಾಂತ ಭಟ್, ಯಲ್ಲಾಪುರ
ಭಾನುವಾರದ ಪತ್ರಿಕೆಯಲ್ಲಿ ಸಂಪಾದಕೀಯ ಪುಟದ ಸ್ವರೂಪ ಬೇರೆಯೇ ಇರುವುದೇಕೆ? ಏನಾದರೂ ವಿಶೇಷ ಕಾರಣಗಳಿವೆಯೇ?
ಭಾನುವಾರ ನಮಗೆಲ್ಲ ವಿಶೇಷ ಅಲ್ಲವೇ? ವಾರ ಪೂರ್ತಿ ದುಡಿದು ಒಂದು ದಿನ ಆರಾಮವಾಗಿ ಕಾಲ ಕಳೆಯೋಣ ಎಂದು ನೀವು ಅಂದುಕೊಳ್ಳುತ್ತೀರಲ್ಲವೇ? ಅದಕ್ಕಾಗಿ ಭಾನುವಾರದಂದು ನಾವೂ ಎಡಿಟ್ ಪೇಜನ್ನು ಕೊಂಚ ಫ್ರೀ ಬಿಡುತ್ತೇವೆ. ಅಂದರೆ, ಅಂದು ಸಂಪಾದಕೀಯಗಳಿಗೆ, ಸೀರಿಯಸ್ ಅಂಕಣಗಳಿಗೆಲ್ಲ ಒಂದಷ್ಟು ಬ್ರೇಕ್. ವಾರದ ಆರೂ ದಿನವೂ ಒಂದೇ ರೀತಿ ಕಾಣುವ ಪುಟಗಳು ಭಾನುವಾರ ಕೊಂಚ ಬದಲಾದಂತೆ ಕಾಣುತ್ತವೆ. ಅದರಿಂದ ನಿಮಗೂ ಏಕತಾನತೆ ಕಾಡದು. ನಿಮ್ಮ ಆರಾಮದ ಓದಿಗಾಗಿ ಅಂದು ಸಂಗ್ರಹಯೋಗ್ಯ ವಿರಾಮ ಸಂಚಿಕೆಯನ್ನೂ ನೀಡುತ್ತಿದ್ದೇವೆ.