ನೀವಿಲ್ಲದೆ ಅವರಿಲ್ಲ, ಅವರಿಲ್ಲದೆ ನಾವಿಲ್ಲ

Posted In : ಅಂಕಣಗಳು, ಬಾಳ ಬಂಗಾರ

ಹೊಸ ವರ್ಷ ಬಂದಿದೆ. ವಿಶ್ವವಾಣಿಯ ಓದುಗ ಪ್ರಭುಗಳಿಗೆ ಹೊಸ ವರ್ಷದ ಶುಭಾಶಯ. ನಿಮ್ಮ ಪ್ರೀತಿ, ಅಭಿಮಾನ ನನ್ನ ಮೇಲೆ ಹೀಗೆಯೆ ಇರಲಿ ಎಂದು ಆಶಿಸುತ್ತೇನೆ. ಹೊಸ ವರ್ಷ ಪ್ರತಿ ವರ್ಷ ಬರುತ್ತದೆ, ಅದು ಎಂದಿಗೂ ಹಳತಾಗುವುದೇ ಇಲ್ಲ, ಅದು ಹೊಸ ವರ್ಷವೇ. ಕಳೆದ ವಾರ ಡಿಸೆಂಬರ್ 30 ವಿಷ್ಣುವರ್ಧನ್ ಪುಣ್ಯಸ್ಮರಣೆ. ಆವತ್ತಿಗೆ ವಿಷ್ಣು ಭೌತಿಕವಾಗಿ ನಮ್ಮನ್ನಗಲಿ ಏಳು ವರ್ಷಗಳು ತುಂಬಿದವು. ಇಲ್ಲಿ ಭೌತಿಕವಾಗಿ ಎಂದು ನಾನು ಬರೆದಿರುವುದನ್ನು ಓದುಗರು ಗಮನಿಸಬೇಕು. ಹಿಂದೊಮ್ಮೆ ಇದೇ ಅಂಕಣದಲ್ಲಿ ಈ ವಿಷಯವಾಗಿ ಪ್ರಸ್ತಾಪಿಸಿದ್ದೆ.

ವಿಷ್ಣು ಅವರು ನಮ್ಮಿಂದ ಭೌತಿಕವಾಗಿ ದೂರವಾಗಿರಬಹುದು ಆದರೆ ಮಾನಸಿಕವಾಗಿ ಹಿಂದೆಂದಿಗಿಂತಲೂ ಹತ್ತಿರವಾಗಿದ್ದಾರೆ ಎಂದು. ಈ ವಿಚಾರವನ್ನು ಮತ್ತೊಮ್ಮೆ ಅಭಿಮಾನಿಗಳಿಗೆ ನೆನಪಿಸಲು ನಾನು ಇಚ್ಛಿಸುತ್ತೇನೆ. ರಾಜ್ಯಾದ್ಯಂತ ವಿಷ್ಣು ಅಭಿಮಾನಿಗಳು, ಅವರ ಹೆಸರಿನ ಸಂಘ ಸಂಸ್ಥೆಗಳು, ಆಟೋ ಚಾಲಕ ಅಭಿಮಾನಿಗಳು ಎಲ್ಲರೂ ಡಿಸೆಂಬರ್ 30ರಂದು ವಿಷ್ಣು ಪುಣ್ಯಸ್ಮರಣೆ ಆಚರಿಸಿದ್ದರು. ಪತ್ರಿಕೆಗಳಲ್ಲಿ ಈ ಕುರಿತ ವರದಿಗಳನ್ನು ಓದಿದಾಗ ಯಾವತ್ತಿನಂತೆ ಹೃದಯ ತುಂಬಿ ಬಂತು. ಅದರಲ್ಲೂ ಆಟೋ ಚಾಲಕ ಅಭಿಮಾನಿಗಳ ಸಂಘಗಳು ಹೆಚ್ಚಿನ ಮುತುವರ್ಜಿಯಿಂದ ರಕ್ತದಾನ ಶಿಬಿರ ಸೇರಿದಂತೆ ಇತರೆ ಸಮಾಜ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಕಂಡಾಗ ಏನು ಹೇಳಬೇಕೆಂದು ತೋಚುವುದಿಲ್ಲ. ಬಾಯಿ ಮೂಕವಾಗಿಬಿಡುತ್ತದೆ. ಮನಸ್ಸು ಭಾವುಕಗೊಳ್ಳುತ್ತದೆ.

ಆರ್ದ್ರತೆ ಯಿಂದ ನಾನು ವಿಷ್ಣು ಅಭಿಮಾನಿಗಳೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನೀವಿಲ್ಲದೆ ಅವರಿಲ್ಲ, ಅವರಿಲ್ಲದೆ ನಾವಿಲ್ಲ. ಅದರಲ್ಲೂ ಆಟೋ ಚಾಲಕ ಅಭಿಮಾನಿಗಳಿಗೂ ವಿಷ್ಣುವಿಗೂ ಇರುವ ನಂಟಿನ ಕುರಿತು ಏನು ಹೇಳಬೇಕೆಂದೇ ತಿಳಿಯುವುದಿಲ್ಲ. ತಮ್ಮ ಆಟೋದಲ್ಲಿ ವಿಷ್ಣುವಿನ ಭಾವಚಿತ್ರ, ಪೋಸ್ಟರ್ ಮತ್ತು ಅವರ ಸಿನಿಮಾದ ಹಾಡುಗಳನ್ನು ಹಾಕಿ ಆರಾಧಿಸುತ್ತಾರಲ್ಲ ಅವರ ಪ್ರೀತಿಗೆ ನಾನು ಸದಾ ಋಣಿ ಎಂದಷ್ಟೇ ಹೇಳಬಲ್ಲೆ. ಕಳೆದ ಶುಕ್ರವಾರ 30ರಂದು ಮತ್ತೊಂದು ವಿಶೇಷವೂ ಇತ್ತು. ಅಂದು ಸಂಜೆ ಖ್ಯಾತ ಸಿನಿಮಾ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣುವರ್ಧನ್ ಕುರಿತು ಬರೆದ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಏರ್ಪಾಡಾಗಿತ್ತು. ಪುಸ್ತಕದ ಶೀರ್ಷಿಕೆ ‘ನೆನಪಿನ ಮುತ್ತಿನಹಾರ. ಆ ಸಮಾರಂಭದಲ್ಲಿ ಪಾಲ್ಗೊಂಡು ನನಗೆ ತುಂಬಾ ಖುಶಿಯಾಯಿತು. ಅಂಬರೀಶ್, ಸುಮಲತಾ ಅವರೂ ಅಂದು ಸಮಾರಂಭದಲ್ಲಿ ಭಾಗವಹಿಸಿದ್ದರು. ಅಂಬರೀಶ್ ವಿಷ್ಣುವಿನ ತುಂಬಾ ಹಳೆಯ ಗೆಳೆಯರು. ಅವರು ತಮ್ಮಿಬ್ಬರ ಒಡನಾಟವನ್ನು ನೆನಪಿಸಿಕೊಳ್ಳುತ್ತಾ ತಮ್ಮ ಮಾತುಗಳಿಂದ ಅಲ್ಲಿ ಬಂದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.

ಅವರು ಹೇಳಿದಂತೆ ವಿಷ್ಣು ತಮ್ಮ ಹಾಸ್ಯಪ್ರಜ್ಞೆಯನ್ನು ಬರಿ ಪರಿಚಿತರ ಮುಂದಷ್ಟೇ ಪ್ರಕಟಗೊಳಿಸುತ್ತಿದ್ದರು. ಜತೆಗೇ ಅಂಬರೀಶ್ ಅವರು ‘ ಡಾ. ರಾಜ್ ಮತ್ತು ವಿಷ್ಣು ಇಬ್ಬರೂ ಯೋಗದ ಹಾದಿ ಹಿಡಿದರು . ನಾನು ಮಾತ್ರ ಭೋಗದ ಹಾದಿ ಹಿಡಿದೆ’ ಎಂದು ಸಭೆಯಲ್ಲಿ ನೆರೆದಿದ್ದವರನ್ನು ಮತ್ತೊಮ್ಮೆ ನಗಿಸಿದರು. ಅವರಿದ್ದಲ್ಲಿ ನಗುವಿಗೆ ಕೊರತೆ ಇರುವುದಿಲ್ಲ ಎನ್ನುವುದನ್ನು ಆಗಾಗ ಜ್ಞಾಪಕ ಮಾಡುತ್ತಲೇ ಇರುತ್ತಾರೆ ಅವರು. ಕಳೆದ ವರ್ಷ ಅನೇಕ ಸಂಗತಿಗಳು ಆಗಿಹೋದವು. ನಾಗರಹಾವು ಸಿನಿಮಾ ಬಂತು, ಆಮೇಲೆ ಮಕ್ಕಳಿಗಾಗಿ ಕತೆ ಪುಸ್ತಕವೂ ಹೊರಬಂತು. ಅವಕ್ಕೂ ಮುಖ್ಯವಾಗಿ ವಿಶ್ವವಾಣಿ ಪತ್ರಿಕೆ ಪ್ರಾರಂಭ ಗೊಂಡು ನಾನು ಅದರಲ್ಲಿ ಅಂಕಣ ಬರೆಯುವ ಹಾಗೂ ಆಯಿತು. ನಮ್ಮವರಿದ್ದಿದ್ದರೆ ಅವರ ಸಿನಿಮಾಗಳು ಆಗಾಗ್ಗೆ ಬಿಡುಗಡೆ ಕಾಣುತ್ತಿದ್ದವು. ಅದಕ್ಕೆಂದೇ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಹೊಸ ನಾಗರಹಾವು ಸಿನಿಮಾದಲ್ಲಿ ವಿಷ್ಣುವನ್ನು ಪುನರ್‌ಸೃಷ್ಟಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ನನ್ನದೊಂದು ಸಲಾಂ. ಸ್ಮಾರ್ಟ್‌ಫೋನು, ಆ್ಯಪ್ ಮುಂತಾದ ಆಧುನಿಕ ಜಗತ್ತಿನ ಸಾಮಗ್ರಿಗಳು, ಅದರ ರೀತಿ ನೀತಿಗಳು ನನ್ನ ಅರಿವಿಗೆ, ತಿಳಿವಿಗೆ ದೊರಕಿದ್ದು ಕಡಿಮೆ. ನನ್ನ ಮಗಳು ಕೀರ್ತಿ ಹೊಸ ಪೀಳಿಗೆಯವಳು. ಅವಳಿಗೆ ಇವೆಲ್ಲದರ ಕುರಿತ ಪರಿಚಯದ ಜತೆಗೆ ಜಾಣತನವೂ ಇದೆ. ಅಳಿಯ ಅನಿರುದ್ಧ ಅವರ ಪರಿಕಲ್ಪನೆ ಮತ್ತು ಮಗಳ ಒತ್ತಾಸೆಯಿಂದಲೆ ವಿಷ್ಣುವರ್ಧನ್ ಅವರ ಹೆಸರಲ್ಲಿ ಕಾಮಿಕ್‌ಪುಸ್ತಕವನ್ನು ಹೊರತರಬೇಕೆಂಬ ಐಡಿಯಾ ಕಾರ್ಯರೂಪಕ್ಕೆ ಬಂದಿದ್ದು. ಕಥಾಪುಸ್ತಕ ಪ್ರಪಂಚದಲ್ಲಿ ಅಮರಚಿತ್ರಕತೆಯ ಹೆಸರು ಅತ್ಯಂತ ಚಿರಪರಿಚಿತ. ಅವರೇ ನಮ್ಮೆಜಮಾನರ ಕಾಮಿಕ್ ಪುಸ್ತಕವನ್ನು ಪ್ರಕಟಿಸಲು ಮುಂದಾದರು.

ಇವರೆಲ್ಲರ ಸಹಯೋಗ ಮತ್ತು ದೇವರ ಆಶೀರ್ವಾದದಿಂದಾಗಿ ಸಾಹಸಸಿಂಹ ಕಾಮಿಕ್ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಮಕ್ಕಳಿಗೆ ಮನರಂಜನೆಯ ಜತೆ ಜತೆಗೇ ನೀತಿಯನ್ನೂ ನೀಡುವ ಆಶಯವೇ ಈ ಕೆಲಸಕ್ಕೆ ಪ್ರೇರಣೆ ಯಾಗಿದ್ದು. ಈ ಮೂಲಕ ವಿಷ್ಣುವನ್ನು ಈಗಿನ ಪೀಳಿಗೆಯವರಿಗೆ ಪರಿಚಯಿಸಿದ ಹಾಗೂ ಆಯಿತು. ಆ ತೃಪ್ತಿಯೂ ನಮಗೆ ಸಿಕ್ಕಿದೆ. ವಿಷ್ಣುವರ್ಧನ್ ಅವರು ಅವರ ಅಭಿಮಾನಿಗಳಿಗೆ ಸೇರಬೇಕು. ಇದಕ್ಕಾಗಿ ನಾನಾ ರೂಪಗಳಲ್ಲಿ, ವಿಧಗಳಲ್ಲಿ ಅವರನ್ನು ಮರಳಿಸುವ ಕೆಲಸ ನಮ್ಮಿಂದ ಆಗುತ್ತಿರಬೇಕು ಎನ್ನುವುದಷ್ಟೇ ನಮ್ಮ ಕಾಳಜಿ. ಆ ಪ್ರಯತ್ನವಂತೂ ನಮ್ಮಿಂದ ಆಗುತ್ತಲೇ ಇರುತ್ತದೆ. ಇಷ್ಟು ಹೇಳಿದ ಮೇಲೆ ಕಳೆದ ವಾರದ ಘಟನೆಯೊಂದನ್ನು ನಿಮ್ಮಲ್ಲಿ ಹೇಳಿಕೊಂಡುಬಿಡುತ್ತೇನೆ. ಕಳೆದ ಭಾನುವಾರ ವಿರಾಮ ಪುರವಣಿಯಲ್ಲಿ ‘ಗಿಣಿಬಾಗಿಲು’ ಅಂಕಣ ಓದುತ್ತಿದ್ದೆ. ಅದರಲ್ಲಿ ಬಾಲಿವುಡ್‌ನ ಹೆಸರಾಂತ ನಟರೊಬ್ಬರ ಸಂದರ್ಶನದ ಅನುವಾದ ನೀಡಿದ್ದರು. ಆ ನಟರು ತಾವು ನಟಿಸುವ ಚಿತ್ರಗಳ ಸ್ಕ್ರಿಪ್ಟ್ ವಿಚಾರ ವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಸಿನಿಮಾವೊಂದಕ್ಕೆ ಸ್ಕ್ರಿಪ್ಟ್ ಎನ್ನುವುದು ಬಹಳ ಮುಖ್ಯವೆನ್ನುವುದು ಅವರ ಮಾತಿನ ತಾತ್ಪರ್ಯವಾಗಿತ್ತು. ಈ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ನಾನೂ ಸ್ಕ್ರಿಪ್ಟ್‌ಗೆ ಹೆಚ್ಚಿನ ಪ್ರಾಧಾನ್ಯ ಕೊಡುವವಳು. ಹೀಗಾಗಿ ಆ ಲೇಖನವನ್ನು ಓದುತ್ತಿದ್ದಂತೆ ನನ್ನ ಅನೇಕ ನೆನಪುಗಳು ಮರುಕಳಿಸಿದವು. ಪರೀಕ್ಷೆಯೇ ಆಗಿರಲಿ, ಕಾದಂಬರಿಗಳ ಓದೇ ಆಗಲಿ ಪ್ರಶಾಂತವಾದ, ಓದುಗರಿಗೆ ಅನುಕೂಲವೆನಿಸುವ ವಾತಾವರಣದಲ್ಲಿ ಓದಿದಾಗಲೇ ಆ ಪುಸ್ತಕಕ್ಕೂ, ಮನಸ್ಸಿಗೂ ಬಾಂಧವ್ಯ ಏರ್ಪಡುವುದು. ಅದಕ್ಕೇ ಅಲ್ಲವೇ ಹಿರಿಯರು ಧ್ಯಾನ ಮಾಡುವಾಗ ನೆಮ್ಮದಿಯ ಜಾಗವನ್ನು ಅರಸುತ್ತಿದ್ದುದು. ಧ್ಯಾನವೂ ಒಂದು ರೀತಿಯಾದ ಓದೇ ಅಲ್ಲವೆ. ಧ್ಯಾನವೆಂದರೆ ನಮ್ಮ ಮನಸ್ಸನ್ನು ಓದುವುದು. ನಾನು ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವ ವಿಚಾರ ಬಂದಾಗಲೂ ಪ್ರಶಾಂತವಾದ ಸ್ಥಳಗಳನ್ನು ಆಯ್ದುಕೊಳ್ಳುತ್ತೇನೆ. ಭಾರತದ ಪ್ರವಾಸಿ ತಾಣಗಳಾದ ಕುಲು ಮನಾಲಿ, ಶಿಮ್ಲಾ, ಮಸ್ಸೂರಿ, ಊಟಿ, ಪಾಂಡಿಚೆರಿ ಕೊಡೈಕನಾಲ್ ಮುಂತಾದ ಪ್ರದೇಶಗಳು ನಾನು ಸ್ಕ್ರಿಪ್ಟ್ ಓದಲು ಆರಿಸಿಕೊಳ್ಳುತ್ತಿದ್ದ ತಾಣಗಳಾಗಿದ್ದವು.

ಇನ್ನು ಕೇರಳದ ಹಿನ್ನೀರಿನ ದೋಣಿಪ್ರಯಾಣ ವಂತೂ ಎಷ್ಟು ಬಾರಿ ಹೋದರೂ ಮನಸ್ಸಿಗೆ ಆಯಾಸವೇ ಆಗದು, ಬೋರು ಕೂಡಾ ಹೊಡೆಯದು. ಇಂಥ ಪ್ರಶಾಂತ ವಾತಾವರಣವಿದ್ದಾಗ ಮನಸ್ಸು ಶುದ್ಧವಿರುತ್ತದೆ. ಮನಸ್ಸು ಗೊಂದಲದಲ್ಲಿದ್ದಾಗ, ಕೋಪಗೊಂಡಿದ್ದಾಗ ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು ಎನ್ನುತ್ತಾರೆ. ಹಾಗೇಕೆ ಹೇಳುತ್ತಾರೆಂದರೆ ಅಂತಹ ಸಂದರ್ಭದಲ್ಲಿ ಕೈಗೊಂಡ ನಿರ್ಧಾರಗಳು ವಿಫಲಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದೇ ನಾನು ಮೇಲೆ ಹೇಳಿದಂಥ ಪ್ರಶಾಂತ ಸ್ಥಳಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಸುಲಭ ಮತ್ತು ಒಳ್ಳೆಯ ಉಪಾಯ. ಗಿಜಿಗುಡುವ ಜಗತ್ತಿನ ಮಧ್ಯ ನಮ್ಮ ಎಲ್ಲಾ ಯೋಚನೆ ಮತ್ತು ಯೋಜನೆಗಳಿಗೂ ಅನುಕೂಲವಾಗುವಂತೆ ಸಹಾಯ ಒದಗುವುದು ನಾ ಕಾಣೆ ಎನ್ನುವುದು ನನ್ನ ಅನುಭವದ ಮಾತು. ಅದಕ್ಕೇ ನಾನು ಸ್ಕ್ರಿಪ್ಟ್ ಓದಲು ಪ್ರಶಾಂತ ಸ್ಥಳಗಳಿಗೆ ಹೋಗುತ್ತಿದ್ದೆ.

Leave a Reply

Your email address will not be published. Required fields are marked *

nineteen + nine =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top