About Us Advertise with us Be a Reporter E-Paper

ಅಂಕಣಗಳು

ನೊಬೆಲ್ ಬಹುಮಾನ ಮತ್ತು ಚಿಲ್ಲರೆ ಕಾಸು!

- ಎಸ್‌ ಷಡಕ್ಷರಿ

ಚಿಲ್ಲರೆ ಕಾಸಿಗೂ, ನೊಬೆಲ್ ಬಹುಮಾನಕ್ಕೂ ಎಲ್ಲೆಗೆಲ್ಲಿಯ ಸಂಬಂಧ ಅನಿಸುತ್ತದಲ್ಲವೇ? ಅದನ್ನು ವಿವರಿಸುವ ನಿಜಜೀವನದ ಕತೆಯೊಂದು ಇಲ್ಲಿದೆ. ನಾವೆಲ್ಲ ಆಲ್ಬರ್ಟ್ ಐನ್‌ಸ್ಟೈನ್ ರ ಹೆಸರು ಕೇಳಿದ್ದೇವೆ. ಅವರು ಪ್ರಶಸ್ತಿ ವಿಜೇತ ವಿಜ್ಞಾನಿ. ಅವರ ಬುದ್ಧಿವಂತಿಕೆಯ ಪ್ರಖರತೆಯ ಬಗ್ಗೆ ಅನೇಕ ದಂತಕತೆಗಳಿವೆ.

ಒಮ್ಮೆ ಆಲ್ಬರ್ಟ್ ಐನ್‌ಸ್ಟೈನ್‌ರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರಂತೆ. ಬಸ್ ಕಂಡಕ್ಟರಿಗೆ ಟಿಕೇಟು ಖರೀದಿಗಾಗಿ ಹಣ ಸಲ್ಲಿಸಿದರಂತೆ. ಕಂಡಕ್ಟರ್ ಟಿಕೇಟು ಕೊಟ್ಟು ಚಿಲ್ಲರೆ ಹಣವನ್ನು ಹಿಂತಿರುಗಿಸಿದನಂತೆ. ಅದನ್ನು ಎಣಿಸಿದ ಐನ್‌ಸ್ಟೈನ್‌ರು ನೀವು ಸರಿಯಾಗಿ ಚಿಲ್ಲರೆ ಕೊಟ್ಟಿಲ್ಲವೆಂದು ಕಂಡಕ್ಟರಿಗೆ ಹೇಳಿದರಂತೆ. ಕಂಡಕ್ಟರು ಮತ್ತೊಮ್ಮೆ ಟಿಕೇಟನ್ನೂ, ಚಿಲ್ಲರೆ ಹಣವನ್ನೂ ಎಣಿಸಿ ನೋಡಿದರು. ಚಿಲ್ಲರೆ ಸರಿಯಾಗಿಯೇ ಇತ್ತು. ಕಂಡಕ್ಟರು ಚಿಲ್ಲರೆ ಸರಿಯಾಗಿದೆಯೆಂದು ಅವರಿಗೆ ಅದನ್ನು ಹಿಂತಿರುಗಿಸಿ ಕೊಟ್ಟ. ಐನ್‌ಸ್ಟೈನ್‌ರು ಎಣಿಸಿ ನೋಡಿದರು. ಏಕೋ ಏನೋ ಅವರಿಗೆ ಅದು ಸರಿಯಿದ್ದಂತೆ ಕಾಣಲಿಲ್ಲ. ಅವರು ಸ್ವಲ್ಪ ತಾಳ್ಮೆ ಕಳೆದುಕೊಂಡು ಕಂಡಕ್ಟರ್ ಮೇಲೆ ರೇಗಿದರು. ಆತನಿಗೆ ಇವರು ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಎಂದು ಗೊತ್ತಿತ್ತು. ಆದರೆ ಚಿಲ್ಲರೆ ಹಣವನ್ನು ಸರಿಯಾಗಿ ಲೆಕ್ಕ ಹಾಕದೆ ತನ್ನ ಮೇಲೆ ಸಿಡುಕುತ್ತಿರುವ ಅವರ ಬಗ್ಗೆ ಆತನಿಗೂ ಸಿಟ್ಟು ಬಂತು. ಆತ ಐನ್‌ಸ್ಟೈನ್‌ರಿಗೆ ಮತ್ತೊಮ್ಮೆ ಟಿಕೇಟು ಮತ್ತು ಚಿಲ್ಲರೆ ಹಣದ ವಿವರಿಸಿದರು.

ಆನಂತರ ಇಂತಹ ಸಂದರ್ಭಗಳಲ್ಲಿ ಸಹಜವಾಗಿ ಹೇಳುವ ಮಾತನ್ನು ಆತನೂ ಹೇಳಿದ. ಚಿಲ್ಲರೆ ಹಣವನ್ನು ಸರಿಯಾಗಿ ಎಣಿಸಲಾಗದ ನಿಮಗೆ ನೊಬೆಲ್ ಪ್ರಶಸ್ತಿ ಅದು ಹೇಗೆ ಕೊಟ್ಟರೋ ಎಂದು ಗಟ್ಟಿಯಾಗಿ ಹೇಳಿಬಿಟ್ಟರು. ಅವನ ಮಾತುಗಳು ಬಸ್ಸಿನಲ್ಲಿದ್ದವರಿಗೆಲ್ಲ ಕೇಳಿಸಿತು. ಒಮ್ಮೆಲೇ ಎಲ್ಲರೂ ಗೊಳ್ಳೆಂದು ನಕ್ಕರು. ಐನ್‌ಸ್ಟೈನ್‌ರಿಗೆ ಸ್ವಲ್ಪ ಇರುಸುಮುರುಸು ಉಂಟಾಯಿತು. ಆದರೂ ತಾಳ್ಮೆಯಿಂದ ಇದ್ದರು. ತಾವು ಇಳಿಯುವ ಸ್ಟಾಪ್ ಬಂದಾಗ ಬಸ್ ಇಳಿದು ಕಾಲೇಜಿಗೆ ಹೊರಟು ಹೋದರು. ಅಲ್ಲಿ ಎಂದಿನಂತೆ ಕಾರ್ಯಮಗ್ನರಾದರು. ಅವರಿಗೆ ಬಸ್ಸಿನಲ್ಲಿ ನಡೆದ ಪ್ರಸಂಗ ಮರೆಯಲು ಸಾಧ್ಯವಾಗಲಿಲ್ಲ. ದಿನವಿಡೀ ಯಾವುದರ ಮೇಲೂ ಏಕಾಗ್ರತೆ ಬರಲಿಲ್ಲ.

ಸಂಜೆ ಐನ್‌ಸ್ಟೈನ್‌ರು ಮನೆಗೆ ಹಿಂತಿರುಗಿದರು. ಅಂದು ಮನೆಯಲ್ಲಿ ಅವರ ಪತ್ನಿ ಮತ್ತು ಅನೇಕ ಕುಟುಂಬದ ಗೆಳೆಯರು ಸೇರಿದ್ದರು. ಆಕೆ ಐನ್‌ಸ್ಟೈನ್‌ರಂತಹ ಬುದ್ಧಿವಂತ ವಿಜ್ಞಾನಿಯ ಪತ್ನಿಯಲ್ಲವೇ? ಆಕೆಯೂ ಬುದ್ಧಿವಂತರು. ಸುಳಿವು ಸೂಕ್ಷ್ಮಗಳನ್ನು ಅರಿಯಬಲ್ಲವರು. ಅಂದು ಏನೋ ಅಹಿತಕರ ಘಟನೆ ನಡೆದಿರಬಹುದೆಂದು ಆಕೆಗೆ ಅರ್ಥವಾಯಿತು. ಆಕೆ ಮೆಲುದನಿಯಲ್ಲಿ ಏಕೆಂದು ಕೇಳಿದಾಗ, ಐನ್‌ಸ್ಟೈನ್‌ರು ಬಸ್ಸಿನಲ್ಲಿ ನಡೆದ ಘಟನೆಯನ್ನು ಆಕೆ ಮತ್ತು ಅಲ್ಲಿದ್ದವರೆಲ್ಲ ಅವರ ಮಾತುಗಳನ್ನು ಗಮನವಿಟ್ಟು ಕೇಳಿದರು. ಕೊನೆಯಲ್ಲಿ ಐನ್‌ಸ್ಟೈನ್‌ರು ನಾನು ಚಿಲ್ಲರೆ ಕಾಸಿಗೆ ಗಮನ ಕೊಡಲಿಲ್ಲವಲ್ಲ ಎಂದು ನನಗೆ ಖೇದವುಂಟಾಗುತ್ತಿದೆ ಎಂದರು.

ತಕ್ಷಣ ಆಕೆ ನೀವು ಚಿಲ್ಲರೆ ಕಾಸಿಗೆ ಗಮನ ಕೊಟ್ಟಿದ್ದರೆ, ನೀವು ನೊಬೆಲ್ ಬಹುಮಾನ ಗಳಿಸುತ್ತಿರಲಿಲ್ಲ ಎಂದಾಗ, ಆಕೆಯ ಮಾತನ್ನು ಅರ್ಥ ಮಾಡಿಕೊಂಡು ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿದರು. ಅವರೆಲ್ಲರ ಮುಖ ಅರಳಿತ್ತು. ಈ ಮಾತುಗಳನ್ನು ಕೇಳಿ ಐನ್‌ಸ್ಟೈನ್‌ರ ಮುಖವೂ ಅರಳಿತು.

ಚಿಲ್ಲರೆ ಕಾಸಿನ ಬೆನ್ನು ನೊಬೆಲ್ ಬಹುಮಾನ ಬರುತ್ತಿರಲಿಲ್ಲ ಎಂಬ ಮಾತು ನಡೆದು ದಶಕಗಳೇ ಕಳೆದಿವೆ. ಆದರೆ ಆ ಮಾತಿನಲ್ಲಿ ಬಹಳ ಸತ್ವ ಅಡಗಿದೆ. ನಾವು ಐನ್‌ಸ್ಟೈನ್‌ರಂತೆ ವಿಜ್ಞಾನ ಕ್ಷೇತ್ರದಲ್ಲಿ ಇಲ್ಲದಿರಬಹುದು. ನಾವು ಬೇರೆ ಕ್ಷೇತ್ರದಲ್ಲಿ ಇರಬಹುದು. ನಾವು ಡಾಕ್ಟರೋ, ವಕೀಲರೋ, ಎಂಜಿನಿಯರೋ, ಉಪಾಧ್ಯಾಯರೋ ಆಗಿರಬಹುದು. ಆದರೆ ಚಿಲ್ಲರೆ ಕಾಸಿನ ಬೆನ್ನು ಹತ್ತಿದರೆ ನಾವು ಒಳ್ಳೆಯ ಪೊಲೀಸರಾಗುವುದಿಲ್ಲ. ಡಾಕ್ಟರಾಗುವುದಿಲ್ಲ. ವಕೀಲರೂ ಆಗುವುದಿಲ್ಲ. ಎಂಜಿನಿಯರಾಗುವುದಿಲ್ಲ! ಅಲ್ಲವೇ?

Related Articles

Leave a Reply

Your email address will not be published. Required fields are marked *

Language
Close