ನೋಟ್ಯಂತರ ತರಾತುರಿಯ ನಿರ್ಧಾರವಲ್ಲ!

Posted In : ಸಂಗಮ, ಸಂಪುಟ

ನೋಟು ಅಮಾನ್ಯಗೊಂಡು 50 ದಿನಗಳ ನಂತರ (ಡಿ.31ರಂದು) ನಮ್ಮ ಸಮರ್ಥ ಮತ್ತು ಕ್ರಿಯಾಶೀಲ ಪ್ರಧಾನಿ ಮೋದಿ ಅವರು 125 ಕೋಟಿ ಜನರನ್ನುದ್ದೇಶಿಸಿ ಮಾತನಾಡಿ, ನೋಟ್ ಬ್ಯಾನ್‌ಗೆ ಸಹಕರಿಸಿದ ಪ್ರಜೆಗಳಿಗೆ ಅಭಿನಂದನೆ ಸಲ್ಲಿಸಿದರು. ಮೋದಿ ತಮ್ಮ ಭಾಷಣದಲ್ಲಿ ನೋಟು ಅಮಾನ್ಯದಿಂದ ಅರ್ಥ ವ್ಯವಸ್ಥೆಗೆ ಉಂಟಾದ ಉಪಯೋಗ, ಪ್ರಯೋಜನ ಮತ್ತು ಅಂಕಿಅಂಶಗಳ ಸಮೇತ ವಿವರಣೆ ನೀಡುತ್ತಾರೆಂದು ಪ್ರತಿಪಕ್ಷಗಳು, ನಕಾರಾತ್ಮಕ ಟೀಕೆಗಳಿಗೆ ಹೆಸರಾಗಿರುವ ಆರ್ಥಿಕ ತಜ್ಞರು, ಮಾಧ್ಯಮದವರು ನಿರೀಕ್ಷಿಸಿದ್ದರು. ಆದರೆ ಆಕಾಶಕ್ಕೆ ಚಿಮ್ಮಿದ ಚೆಂಡೊಂದು ಗುರುತ್ವಾಕರ್ಷಣೆಗೊಳಗಾಗಿ ಭೂಮಿಗೆ ಬಿದ್ದಂತೆ ಎಲ್ಲರ ನಿರೀಕ್ಷೆಗಳೂ ದೊಪ್ಪೆಂದು ನೆಲಕಚ್ಚಿದವು.

ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುವಂತೆ ತಮ್ಮ ಭಾಷಣದಲ್ಲಿ ಹತ್ತು ಹಲವಾರು ಕೊಡುಗೆಗಳನ್ನು ನೀಡಿ ಅರ್ಥವ್ಯವಸ್ಥೆಯ ವೇಗವರ್ಧನೆಗೆ ಪ್ರಧಾನಿ ಹಸಿರು ನಿಶಾನೆ ನೀಡಿದ್ದಾರೆ. ಈ ಲೇಖನದ ಉದ್ದೇಶ ಮೋದಿ ಅವರು ಡಿ.31ರಂದು ಕೊಟ್ಟಿರುವ ಕೊಡುಗೆಗಳ ಬಗ್ಗೆಯಲ್ಲ. ಬದಲಾಗಿ ಕಳೆದ 32 ತಿಂಗಳುಗಳಲ್ಲಿ ಕಪ್ಪು ಹಣದ ವಿರುದ್ಧ ಕೇಂದ್ರ ಸರಕಾರ ತೆಗೆದುಕೊಂಡಿರುವ ಮುಖ್ಯಾತಿಮುಖ್ಯ ನಿರ್ಧಾರಗಳನ್ನು ತಿಳಿಸುವ ಬಗ್ಗೆ. ಬಹುಶಃ ನೋಟು ಬ್ಯಾನ್ ವಿಷಯದ ಕುರಿತು ನಡೆದಷ್ಟು ಚರ್ಚೆಗಳು, ವಿಶ್ಲೇಷಣೆಗಳು ಬೇರ್ಯಾವ ವಿಷಯದ ಕುರಿತೂ ನಡೆದಿಲ್ಲವೆಂಬುದು ಗಮನಾರ್ಹ. ಒಂದು ಚಾಣಾಕ್ಷ ಸಮೀಕರಣದಿಂದ ಕಪ್ಪುಹಣ, ಖೋಟಾ ನೋಟು, ಭಯೋತ್ಪಾದನೆ, ಹವಾಲಾ, ಚುನಾವಣಾ ಪ್ರಚಾರಕ್ಕೆ ಅನೈತಿಕವಾಗಿ ಹಣ ಒದಗಿಸುವಿಕೆಗೆ ಕಡಿವಾಣ ಹಾಕಿದ್ದಾರೆ. ದೀರ್ಘಾವಧಿಯಲ್ಲಿ ಭ್ರಷ್ಟಾಚಾರ ತಡೆಯುವಲ್ಲಿ ಇದು ಎಷ್ಟರಮಟ್ಟಿಗೆ ಕಾರ್ಯಸಾಧುವಾಗುತ್ತದೆ ಎಂಬುದು ಕುತೂಹಲದ ಸಂಗತಿ. ಮಾಜಿ ಪ್ರಧಾನಿಗಳು, ಮಾಜಿ ವಿತ್ತ ಮಂತ್ರಿಗಳು, ರಾಜ ಕಾರಣಿಗಳು, ಆರ್ಥಿಕ ತಜ್ಞರು ‘ಯಾವ ಮುನ್ಸೂಚನೆಯೂ ಇಲ್ಲದೆ ಗರಿಷ್ಠ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿರುವುದು ಸಾಮಾನ್ಯರನ್ನು ತೊಂದರೆಗೀಡು ಮಾಡಿದೆ’ ಎಂದು ದೂರಿದರು.

ಎಲ್ಲ ಪ್ರತಿರೋಧ, ವಿರೋ ಧಗಳ ನಡುವೆ ಜನಸಾಮಾನ್ಯರಂತೂ ಪ್ರಧಾನಿಯವರ ಅತಿವಿಲಕ್ಷಣ ಆರ್ಥಿಕನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿಗಳು ‘ಡಿಮಾನಿಟೈಸೇಶನ್ ಒಂದು ಚಿರಸ್ಮರ ಣೀಯ ಅವ್ಯವಸ್ಥೆಯಾಗಲಿದೆ’ ಎಂದರೆ, ಗುರುಮೂರ್ತಿ ಯವರು ಅದನ್ನು ಆರ್ಥಿಕ ಪೋಖ್ರಾನ್‌ಗೆ ಹೋಲಿಸಿದ್ದಾರೆ, ಬಂಗಾಳದ ದೀದಿಗೆ ಇದೊಂದು ಆರ್ಥಿಕ ಭಯೋತ್ಪಾದನೆ ಯಾದರೆ, ಆರ್‌ಬಿಐ ಮಾಜಿ ಗವರ್ನರ್ ಸುಬ್ಬಾರಾವ್ ಪ್ರಕಾರ 1991ರ ನಂತರದ ಕ್ರಾಂತಿಕಾರಿ ಆರ್ಥಿಕ ನೀತಿ ಇದಂತೆ. ಇದರ ಮಧ್ಯೆ ಕಾಂಗ್ರೆಸ್ ಉಪಾಧ್ಯಕ್ಷರು ನೋಟು ಬ್ಯಾನ್ ಬಗ್ಗೆ ಪ್ರಧಾನಿಯವರಿಗೆ ಪಂಚ ಪ್ರಶ್ನೆಗಳ ಪುಷ್ಪಮಾಲೆ ತೊಡಿಸಿ ಸದ್ಯಕ್ಕೆ ಕಾಣೆಯಾಗಿದ್ದಾರೆ.

ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ಕೇಂದ್ರ ಸರಕಾರದ ನಡೆಯನ್ನು ಸೂಕ್ಷ್ಮ ವಾಗಿ ಗಮನಿಸಿದರೆ ಸುಳಿವು ಸೂಚನೆ ಇಲ್ಲದೆ ಆಕಾಶದಿಂದ ವಜ್ರಾಯುಧದಂತೆ ಬೀಳಲಿಲ್ಲ ಡಿಮಾನಿಟೈಸೇಶನ್ ನಿರ್ಧಾರ. ಸತತ 2 ವರ್ಷಗಳ ಸಿದ್ಧತೆಯಿಂದ ತೆಗೆದುಕೊಂಡ ನಿರ್ಧಾರವೆಂಬುದು ಎಲ್ಲರ ಊಹೆ. ಅದಕ್ಕೆ ಪೂರಕವೆಂಬಂತೆ ಆಡಳಿತ ಸುಧಾರಣೆಗಳು, ಹೊಸ ವಿಧೇಯಕಗಳು, ಕಾಯ್ದೆ ಮತ್ತು ಕಾನೂನು ತಿದ್ದುಪಡಿಗಳನ್ನು ಜಾರಿಗೆ ತಂದಿದ್ದರು. ಮೋದಿ ಸರಕಾರದ ಪ್ರಮುಖ ನಿರ್ಧಾರಗಳನ್ನು ಬಿಡಿಸಿ ನೋಡಿದರೆ ನೋಟ್ ಬ್ಯಾನ್‌ನತ್ತ ರಹದಾರಿ ಎಳೆಯುವ ಪ್ರಾಮಾಣಿಕ ಪ್ರಯತ್ನ ಕಾಣಬಹುದು. ಹಾಗಾದರೆ ಕಪ್ಪುಹಣ ಮಟ್ಟಹಾಕಲು ತೆಗೆದುಕೊಂಡಿರುವ ಇತರ ನಿರ್ಧಾರಗಳನ್ನು ಒಂದೊಂದಾಗಿ ತೆರೆದು ನೋಡೋಣ:

1. ವಿಶೇಷ ತನಿಖಾ ತಂಡ ( Special Investigation Team): ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ ಪುನಾರಚನೆಯಾಯಿತು. ಶೀಘ್ರವಾಗಿ ಕಪ್ಪುಹಣವನ್ನು ಬದಲಾಯಿಸುವ ಮಾರ್ಗ ಗಳಿಗೆ ತಡೆಯೊಡ್ಡುವುದಕ್ಕೆ ಈ ತಂಡವು ಮುಖ್ಯವಾದ ಶಿಫಾರಸುಗಳನ್ನು ಕೊಟ್ಟಿತು. ದೀರ್ಘಕಾಲದ ಬಂಡವಾಳ ಲಾಭದ (ಲಾಂಗ್ ಟರ್ಮ ಕ್ಯಾಪಿಟಲ್ ಗ್ಯೇನ್) ತೆರಿಗೆ ಪಾವತಿ ದುರುಪಯೋಗ ತಡೆಗಟ್ಟುವಿಕೆ, ಟೊಳ್ಳು ಕಂಪನಿಗಳನ್ನು ಸೃಷ್ಟಿಸುವುದನ್ನು ತಡೆಗಟ್ಟು ವುದು, ದೊಡ್ಡ ಮೊತ್ತದ ನಗದು ವ್ಯವಹಾರಗಳಿಗೆ ಕಡಿವಾಣ, ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ದಾನ/ದೇಣಿಗೆಗಳ ರೂಪದಲ್ಲಿ ಕಪ್ಪು ಹಣದ ಉತ್ಪತ್ತಿಗೆ ತಡೆ, ಮತ್ತಷ್ಟು ಹೆಚ್ಚು ನ್ಯಾಯಲಯಗಳ ಸ್ಥಾಪನೆ, ಕ್ರಿಕೆಟ್ ಬೆಟ್ಟಿಂಗ್ ತಪ್ಪಿಸಲು ವಿಶೇಷ ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದೆ.
2. ಬಹಿರಂಗ ಪಡಿಸದ ವಿದೇಶಿ ಆದಾಯ (Undisclosed Foreign Income): ಹಿಂದಿನ ಸರಕಾರಗಳು ಕರ ಕ್ಷಮಾದಾನ ಯೋಜನೆಗಳಲ್ಲಿ ಕಾಳಧನಿಕರಿಗೆ ಕಪ್ಪುಹಣವನ್ನು ಘೋಷಿಸಿ ತೆರಿಗೆ ಮತ್ತು ಜುಲ್ಮಾನೆ ಕಟ್ಟಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ. ಆದರೆ ಪ್ರಥಮ ಬಾರಿಗೆ ಮೋದಿ ಸರಕಾರ ಕಪ್ಪು ಹಣ ಮತ್ತು ತೆರಿಗೆ ಹೇರುವಿಕೆ (ಬಹಿರಂಗ ಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ)ಕಾಯಿದೆ 2015ರ (Black Money and Imposition of Tax Undisclosed Foreign Income and Assets Act 2015) ಅನ್ವಯ ಪ್ರಾಥಮಿಕ ಕ್ರಮವಾಗಿ ಭಾರತದ ನಿವಾಸಿಗಳ ಬಹಿರಂಗ ಪಡಿಸದ ವಿದೇಶಿ ಆಸ್ತಿ, ಆದಾಯ, ಋಣ ಮತ್ತು ಸಾಲಸೋಲಗಳ ವಿವರಗಳನ್ನು ಘೋಷಿಸಿಕೊಂಡು 60% ತೆರಿಗೆ ಕಟ್ಟಲು ಒಂದು ಸುವರ್ಣಾವಕಾಶ ಕಲ್ಪಿಸಿತು. ಇತರ ದೇಶಗಳೊ ಡನೆ ವಿದೇಶಿ ಆದಾಯದ ಮಾಹಿತಿ ವಿನಿಮಯ ಒಡಂಬಡಿಕೆಗೂ ಮುನ್ನ ಫ್ರಾಥಮಿಕ ಕ್ರಮವಾಗಿ ಈ ಕಾಯಿದೆಯನ್ನು 1ನೇ ಜುಲೈ 2015ರಿಂದ ಜಾರಿಗೆ ತಂದರು. ಈ ಕಾಯಿದೆಯನ್ವಯ ಏಕಮುಖ ಅನುಮತಿ ಗವಾಕ್ಷದಲ್ಲಿ ಯಾವುದೇ ರೀತಿಯ ವಿದೇಶಿ ಆಸ್ತಿ, ಆದಾಯ, ಋಣ ಮತ್ತಿತರ ವಿವರಗಳನ್ನು ಬಹಿರಂಗಪಡಿಸದಿದ್ದಲ್ಲಿ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ.

3. ಅಮೆರಿಕದ ಹೊಸ ಕಾಯ್ದೆ – ಫಾಟ್ಕಾ (Foreign Account Tax Compliance Act): ಈ ಕಾಯ್ದೆಯು ಭಾರತ ಮತ್ತು ಅಮೆರಿಕದ ಆರ್ಥಿಕ ಸಂಸ್ಥೆಗಳು ತಂತಮ್ಮ ನಾಗರಿಕರ ಪರಸ್ಪರ ಆರ್ಥಿಕ ವ್ಯವಹಾರದ ವಿವರ, ಬ್ಯಾಂಕ್ ಖಾತೆ, ಲೆಕ್ಕಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳುವ ಒಂದು ಮಹತ್ವದ ಕಾಯ್ದೆ. ಉಭಯ ದೇಶಗಳು 2015ರ ಆ.7ರಂದು ಪರಸ್ಪರ ಸರಕಾರಗಳ ಒಡಂಬಡಿಕೆಗೆ ಅಂಕಿತ ಹಾಕಿದವು. ಈ ಒಡಂಬಡಿಕೆಯ ಉಪಯೋಗವೇನೆಂದರೆ, ಎರಡೂ ದೇಶಗಳ ನಾಗರಿಕ/ಕಂಪನಿಯ ಎಲ್ಲ ವ್ಯವಹಾರಗಳು, ಅವರ ಹೆಸರು, ಪ್ಯಾನ್, ವಿಳಾಸ ಎಲ್ಲವೂ ಭಾರತ ಮತ್ತು ಅಮೆರಿಕ ಸರಕಾರಕ್ಕೆ ಆಯಾ ಆರ್ಥಿಕ ಸಂಸ್ಥೆಗಳು ನಿಯಮಿತವಾಗಿ, ಕ್ರಮಬದ್ಧವಾಗಿ ಸಲ್ಲಿಸಲು ಸೂಚಿಸಲಾಯಿತು. ಈ ಕ್ರಮದಿಂದ ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ಮೇಲೆ ನೇರವಾಗಿ ಸರಕಾರ ನಿಗಾವಹಿಸಬಹುದು.

4. ಸ್ವಿಟ್ಜರ್ಲ್ಯಾಂಡ್ ಮತ್ತು ಸೈಪ್ರಸ್ ಜತೆಗಿನ ಪರಸ್ಪರ ಬ್ಯಾಂಕ್ ಮಾಹಿತಿ ಸಂಗ್ರಹಣೆ: ಸ್ವಿಸ್ ಬ್ಯಾಂಕ್‌ನ್ನು ಭಾರತೀಯರ ಕಪ್ಪುಹಣದ ತಿಜೋರಿ ಅಂದರೆ ತಪ್ಪಿಲ್ಲ. ಮೋದಿ ಸರಕಾರ ಮತ್ತು ಸ್ವಿಟ್ಜರ್ಲ್ಯಾಂಡ್ ಜಂಟಿ ಘೋಷಣೆ ಒಡಂಬಡಿಕೆಯೊಂದಕ್ಕೆ ಅಂಕಿತ ಹಾಕಿದೆ. ಈ ಘೋಷಣೆಯ ಪ್ರಕಾರ 2018ರಿಂದ ಸಿಟ್ಜರ್ಲ್ಯಾಂಡ್ ಸರಕಾರ ನಮ್ಮ ನಾಗರಿಕರು ಅವರ ಬ್ಯಾಂಕ್‌ಗಳಲ್ಲಿ ಹೂಡಿಸಿಟ್ಟಿರುವ ಎಲ್ಲ ಹಣದ ವಿವರಗಳನ್ನು ಭಾರತ ದೊಂದಿಗೆ ಹಂಚಿಕೊಳ್ಳುತ್ತದೆ. ಸೈಪ್ರಸ್‌ನೊಂದಿಗೂ ಇದೇ ರೀತಿಯ ಒಡಂಬಡಿಕೆಯಾಗಿದೆ. ಈ ವಿವರಗಳಿಂದ ಕಾಳಧನಿಕರ ಕುಲ ಗೋತ್ರಗಳ ಸಮೇತ ಎಷ್ಟು ಮೊತ್ತದ ಕಪ್ಪುಹಣ ವಿದೇಶದಲ್ಲಿದೆ ಎಂದು ಬಯಲಾಗಲಿದೆ.

5. ಜನ್ ಧನ್ ಯೋಜನೆ: 2014ರ ಆ. 28ರಂದು ಮಹತ್ತರವಾದ ಈ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ಪ್ರತಿ ವರ್ಗದ ಜನರಿಗೆ ಬ್ಯಾಂಕ್ ಖಾತೆ ಸೌಲಭ್ಯ, ಠೇವಣಿ ಸೌಲಭ್ಯ, ಹಣ ರವಾನಿಸಲು ಮತ್ತು ಪಡೆದುಕೊಳ್ಳಲು, ಸಾಲ ಸೌಲಭ್ಯ, ವಿಮೆ ಸೌಲಭ್ಯ, ಪಿಂಚಣಿ ಮತ್ತಿತರ ಸೇವೆಗಳನ್ನು ನೀಡಲು ತೆಗೆದು ಕೊಂಡ ಪ್ರಮುಖ ಯೋಜನೆಯಿದು. ಇದರ ಇನ್ನೊಂದು ಮುಖವೆಂದರೆ ಬ್ಯಾಂಕ್ ಖಾತೆ ಇರುವುದ ರಿಂದ ನಗದು ವ್ಯವಹಾರಗಳಿಗೆ ಕಡಿವಾಣ ಹಾಕುವುದು ಮತ್ತು ದೀರ್ಘಾವಧಿಯಲ್ಲಿ ಕಪ್ಪುಹಣ ಉತ್ಪತ್ತಿ ತಡೆಯುವುದು. 21ನೇ ಡಿಸೆಂಬರ್ 2016ರ ತನಕ 26 ಕೋಟಿ ಜನ ಬ್ಯಾಂಕ್ ಖಾತೆ ತೆರೆದಿದ್ದಾರೆ.

6. ನೇರ ಪ್ರಯೋಜನ ವರ್ಗಾವಣೆ(Direct Benefit Transfer): ಫಲಾನುಭವಿಗಳಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ತಲುಪಿಸಲೆಂದು ಈ ಯೋಜನೆಯನ್ನು ಯುಪಿಎ ಸರಕಾರ ಜಾರಿಮಾಡಿತ್ತು. ಸಹಾಯಧನದ ಸೋರಿಕೆ, ಸಹಾಯಧನ ಬಿಡುಗಡೆಯ ವಿಳಂಬ ತಡೆ, ಪಾರದರ್ಶಕ ಪಾವತಿಯು ಯೋಜನೆಯ ಉದ್ದೇಶಗಳಾಗಿದ್ದವು. ಆದರೆ 2013ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ 52% ಜನರಲ್ಲಿ ಬ್ಯಾಂಕ್ ಖಾತೆಯಿತ್ತು ಮತ್ತು ಸಹಾಯಧನ ಬಿಡುಗಡೆ ಮಾಡುವುದೇ ಸವಾಲಿನ ವಿಷಯವಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮಾರ್ಪಾಡಾದ ನೇರ ಪ್ರಯೋಜನ ವರ್ಗಾವಣೆಯ (Modified  Direct Benefit Transfer) ಯೋಜನೆಯಲ್ಲಿ 78ಕ್ಕು ಹೆಚ್ಚಿನ ಕಾರ್ಯಯೋಜನೆಗಳಿಗೆ ಮತ್ತು 17 ಮಂತ್ರಿಮಂಡಲದ ಇಲಾಖೆಗಳ ಯೋಜನೆಗಳಲ್ಲಿ ಜನರು ಉಪಯೋಗ ಪಡೆಯುತ್ತಿದ್ದಾರೆ.

7. ಆದಾಯ ಘೋಷಣೆ ಯೋಜನೆ 2016 (Income Declaration Scheme, 2016): ಕಪ್ಪುಹಣ ಹತ್ತಿಕ್ಕಲು ಮತ್ತು ಕಾಳಧನಿಕರಿಗೆ ಇನ್ನೊಂದು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ 2016ರ ಜೂನ್ 1ರಂದು  ಜಾರಿಗೆ ತಂದಿತು. ಬಹಿರಂಗಪಡಿಸದ ಆದಾಯಕ್ಕೆ 45% ತೆರಿಗೆ ಪಾವತಿಸಿ ಯುಕ್ತಸಮ್ಮತವಾದ ಆದಾಯವನ್ನಾಗಿ ಸಲು ಇದೊಂದು ಪ್ರಾಮಾಣಿಕ ಪ್ರಯತ್ನವಾಗಿತ್ತು. ಒಟ್ಟು 68 ಸಾವಿರ ಕೋಟಿ ರು. ಆದಾಯವನ್ನು ಬಹಿರಂಗಪಡಿಸಿ ಸುಮಾರು 31 ಸಾವಿರ ಕೋಟಿ ರು. ತೆರಿಗೆ ಸಂಗ್ರಹವಾಗಿದೆ.

8. ಬೇನಾಮಿ ಶಾಸನದ ತಿದ್ದುಪಡಿ: 2016ರ ನ.1ರಿಂದ ಬೇನಾಮಿ ಕಾಯಿದೆಯಲ್ಲಿ ಕ್ರಾಂತಿಕಾರಿ ತಿದ್ದುಪಡಿ ಜಾರಿಯಾಗಿದೆ. ಈ ತಿದ್ದುಪಡಿಯ ಮಹತ್ವ ಒಂದೆರಡು ವರ್ಷಗಳಲ್ಲಿ ತಿಳಿಯುತ್ತದೆ. ಹಿಂದಿನ ಬೇನಾಮಿ ಕಾಯ್ದೆಗೆ ಹೋಲಿಸಿದರೆ ಕಪ್ಪುಹಣದ ವಿರುದ್ಧ ಶಿಕ್ಷೆಯ ತೀವ್ರತೆ ಮತ್ತು ಶಿಕ್ಷೆಯ ಪ್ರಮಾಣ ಹೆಚ್ಚಿದೆ. ಅಪರಾಧ ಸಾಬೀತಾದರೆ 7 ವರ್ಷಗಳ ಕಾರಾಗೃಹ ವಾಸ ಮತ್ತು ದಂಡ ವಿಧಿಸಬಹುದು. ಬೇನಾಮಿ ಆಸ್ತಿಯನ್ನು ಯಾವುದೇ ಪರಿಹಾರ ಕೊಡುವ ಬಾಧ್ಯತೆಯಿಲ್ಲದೆ ಸರಕಾರ ಸಂಪೂರ್ಣವಾಗಿ ಜಪ್ತಿಗೆ ತೆಗೆದುಕೊಳ್ಳಬಹುದು.

9. ಸರಕು ಮತ್ತು ಸೇವಾ ತೆರಿಗೆ ವಿಧೇಯಕ (Goods and Service Tax Act): ಎಲ್ಲ ರೀತಿಯ ಪರೋಕ್ಷ ತೆರಿಗೆಗಳನ್ನು (Indirect tax) ಬದಿಗೊತ್ತಿ ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸುವ ಈ ವಿಧೇಯಕಕ್ಕೆ ಭಾರಿ ವಿರೋಧದ ನಡುವೆಯೂ ಮಾನ್ಯತೆ ದೊರಕಿದೆ. ನೋಟ್ ಬ್ಯಾನ್ ಗೂ ಈ ತೆರಿಗೆ ವಿಧೇಯಕಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರೆ ಅದುವೇ ಹಣದುಬ್ಬರ. 15% ದರಕ್ಕಿಂತ ಮತ್ತು ಒಂದಕ್ಕಿಂತ ಹೆಚ್ಚಿನ ದರದಲ್ಲಿ (ಟ್ಯಾಕ್ಟ್‌ ರೇಟ್) ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ವಸೂಲು ಮಾಡಿದಲ್ಲಿ ಅಲ್ಪಾವಧಿಯಲ್ಲಿ ಹಣದುಬ್ಬರದ ಭೂತ ಕಾಡುತ್ತದೆ (ಇದನ್ನು ಇನ್ನಿತರ ರಾಷ್ಟ್ರಗಳು ಎದುರಿಸಿರುವುದು ವಾಸ್ತವ ಸಂಗತಿ). ಆದರೆ, ಡಿಮಾನಿಟೈಸೇಶನ್ ನಿಂದಾಗಿ ಅಲ್ಪಾವಧಿಯಲ್ಲಿ ನಗದು ಸರಬರಾಜು ಕಡಿತ ಮಾಡುವುದರಿಂದ ಹಣದುಬ್ಬರಕ್ಕೆ ಸ್ವಲ್ಪ ಕಡಿವಾಣ ಹಾಕಬಹುದೆಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ. ಈಗಿರುವ ಪ್ರಸ್ತಾವನೆಯ ಪ್ರಕಾರ ಎಪ್ರಿಲ್ 2017ರಿಂದ ಈ ವಿಧೇಯಕ ಕಾರ್ಯರೂಪವಾಗುವುದರಿಂದ ಹಣದುಬ್ಬರದವನ್ನು ಕುಗ್ಗಿಸಲೂ ನೋಟು ಅಮಾನ್ಯ ಜಾರಿಯಾಗಿರಬಹುದೆಂಬುದು ಊಹೆ.

10. ಇತರೆ: ಇನ್ನು ಆಧಾರ್‌ಗೆ ಸಂಬಂಧಿಸಿದ ಕಾಯ್ದೆ ಜಾರಿಗೊಳಿಸಿದ್ದು, ಸಾಲಗೇಡಿ ಮತ್ತು ದಿವಾಳಿತನ ಮಸೂದೆ (Insolvency  Bankruptcy Code, 2016) ಮತ್ತು ಮಾರಿಷ್ಸ್ ಸೈಪ್ರಸ್ ಮತ್ತು ಸಿಂಗಪುರ್‌ಗಳ ಜತೆಗಿನ ದ್ವಿಪಕ್ಷೀಯ ತೆರಿಗೆ ಒಪ್ಪಂದಗಳನ್ನು (Double Tax Avoidance Agreements)ಮಾರ್ಪಾಟು ಮಾಡಿರುವುದು. ಈ ಎಲ್ಲ ಕ್ರಮಗಳ ಮುಖ್ಯ ಉದ್ದೇಶ ಕಪ್ಪುಹಣದ ನಿಯಂತ್ರಣ, ಕಪ್ಪು ಹಣವನ್ನು ತೆರಿಗೆ ವ್ಯಾಪ್ತಿಗೆ ತರುವುದು ಮತ್ತು ಕಪ್ಪು ಹಣದ ಉತ್ಪತ್ತಿಗೆ ತಡೆ ಒಡ್ಡುವುದು. ಡಿಮಾನಿಟೈಸೇಶನ್‌ನಂಥ ಆರ್ಥಿಕ ನೀತಿಯನ್ನು ಕಾರ್ಯರೂಪಕ್ಕೆ ತರುವುದು ಸುಲಭದ ಮಾತಲ್ಲ. ದಾರ್ಶನಿಕ ನಾಯಕನೊಬ್ಬ ತನ್ನ ದೇಶವನ್ನು ಜಾಗತಿಕವಾಗಿ ಅತ್ಯುನ್ನತ ಸ್ಥಾನಕ್ಕೆ ಮತ್ತು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಶಕ್ತವನ್ನಾಗಿಸಲು ಬೃಹತ್ ಕನಸೊಂದನ್ನು ಕಟ್ಟಿ ಅದರೆಡೆಗೆ ನಾಗರಿಕರನ್ನು ಪ್ರೇರೇಪಿಸುತ್ತಿರುವಾಗ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಶಕ್ತ್ಯಾನುಸಾರ ಸಹಕರಿಸಿದರೆ ನಮ್ಮ ಭಾರತ ವಿಶ್ವಗುರು ಪಟ್ಟ ಅಲಂಕರಿಸುವುದರಲ್ಲಿ ಸಂದೇಹವೇ ಇಲ್ಲ.

-ಸುರೇಶ್ ಬಾಲಚಂದ್ರನ್

ಚಾರ್ಟೆರ್ಡ್ ಅಕೌಂಟಂಟ್ 

Leave a Reply

Your email address will not be published. Required fields are marked *

one + 19 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top