ಪಾರ್ಕ್‌ವೇಯಲ್ಲಿ ಡ್ರೈವಿಂಗೂ, ಡ್ರೈವ್‌ವೇಯಲ್ಲಿ ಪಾರ್ಕಿಂಗೂ…

Posted In : ಅಂಕಣಗಳು, ತಿಳಿರು ತೋರಣ

ಅವೆನ್ಯೂ ರೋಡ್ ಅಂತ ಇದೆಯಲ್ಲ ಬೆಂಗಳೂರಿನಲ್ಲಿ, ಅದರ ಹೆಸರು ಬಂದೇ ಬರುತ್ತದೆ ವಿಚಿತ್ರ ಹೆಸರುಗಳ ಬಗ್ಗೆ ಚರ್ಚೆಯಾದಾಗೆಲ್ಲ. ಸಾಮಾನ್ಯ ಬೆಂಗಳೂರಿಗರೊಬ್ಬರಿಗೆ ಅದು ವಿಚಿತ್ರ ಅನಿಸಲಿಕ್ಕಿಲ್ಲ, ಅನಿಸುವುದಿಲ್ಲ. ಆದರೆ Avenue ಎಂಬ ಪದಕ್ಕೆ ಇಂಗ್ಲಿಷ್‌ನಲ್ಲಿ ‘a broad road in a town or city, typically having trees at regular intervals along its sides’ಎಂಬ ಅರ್ಥ ಇರುವಾಗ, ಅವೆನ್ಯೂ ಅಂದರೇನೇ ರಸ್ತೆ ಅಥವಾ ಮಾರ್ಗ ಅಂತಿರುವಾಗ, ಮತ್ತೆ ಅದನ್ನು ಅವೆನ್ಯೂ ರೋಡ್ ಎನ್ನುವುದೇಕೆ ಎಂಬುದೇ ತರ್ಕ. ಅಂತಹ ವೈಚಿತ್ರ್ಯಗಳು ಇನ್ನೂ ಬೇಕಷ್ಟು ಇವೆಯೆನ್ನಿ. ಉದಾಹರಣೆಗೆ, ‘ಸಿರ್ಸಿ ಸರ್ಕಲ್’ ಬೆಂಗಳೂರಿನಲ್ಲಿದೆ.

‘ಚನ್ನಪಟ್ಟಣ ಬಜಾರ್ ರಸ್ತೆ’ ಸಿರ್ಸಿಯಲ್ಲಿದೆ! ಒಂದಕ್ಕೊಂದು ಸಂಬಂಧವಿಲ್ಲ ಏನಿಲ್ಲ. ನಿಜ, ಹಾಗಿದ್ದರೇನೇ ಚೆನ್ನ. ತೀರಾ ಎಲ್ಲವೂ ಪರ್ಫೆಕ್ಟ್ ಅಂತಾದ್ರೆ, ಎಲ್ಲದಕ್ಕೂ ಇದಮಿತ್ಥಂ ವಿವರಣೆ ಇದ್ದರೆ, ಈ ರೀತಿಯ ಸ್ವಾರಸ್ಯಗಳಿಲ್ಲದೆ ಪ್ರಪಂಚ ಮಹಾ ಬೋರಿಂಗ್ ಅನಿಸುತ್ತದೆ. ಇಂಥ ಒಂದು ಸ್ವಾರಸ್ಯ, ಅಮೆರಿಕದಲ್ಲಿ ಜನಜನಿತವಾಗಿರುವಂಥದು, ಇವತ್ತಿನ ಅಂಕಣದ ವಿಷಯ. ಅದೇ, ಈ ದೇಶದಲ್ಲಿ ನಾವು ‘ಪಾರ್ಕ್‌ವೇ’ ಗಳ ಮೇಲೆ ವಾಹನವನ್ನು ಡ್ರೈವ್ ಮಾಡುತ್ತೇವೆ.

‘ಡ್ರೈವ್‌ವೇ’ ಮೇಲೆ ವಾಹನವನ್ನು ಪಾರ್ಕ್ ಮಾಡುತ್ತೇವೆ! ಇಲ್ಲೂ ಅಷ್ಟೇ, ಜನಸಾಮಾನ್ಯರಿಗೆ ರೂಢಿಗತವಾಗಿರುವುದರಿಂದ ಇದರಲ್ಲೇನೂ ವಿಚಿತ್ರ ಅನಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ- ಯಾರಾದರೂ ಸ್ಟಾಂಡ್‌ ಅಪ್ ಕಾಮಿಡಿಯನ್‌ಗಳೋ ಅಥವಾ ಅವರಂಥ ಮಾತಿನ ಮಲ್ಲರೋ ಹಾಸ್ಯವನ್ನು ಬೆಟ್ಟು ಮಾಡಿ ತೋರಿಸಿದರೆ- ಶಬ್ದಾರ್ಥಗಳ ವಿರೋಧಾಭಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಂಗ್ಲೆಂಡ್‌ನಲ್ಲಿ ಅಂಚೆ ಇಲಾಖೆಗೆ ‘ರಾಯಲ್ ಮೈಲ್ ಸರ್ವೀಸ್’ ಎನ್ನುತ್ತಾರೆ. ಅಲ್ಲಿ ಅದು ‘ಪೋಸ್ಟ್’ಅನ್ನು ವಿತರಿಸುತ್ತದೆ.

ಅಮೆರಿಕದಲ್ಲಿ ಅಂಚೆ ಇಲಾಖೆಗೆ ‘ಯುಎಸ್ ಪೋಸ್ಟಲ್ ಸರ್ವಿಸ್’ ಎನ್ನುತ್ತಾರೆ. ಇಲ್ಲಿ ಅದು ‘ಮೈಲ್’ಅನ್ನು ವಿತರಿಸುತ್ತದೆ! ಶಿಪ್‌ನಲ್ಲಿ (ಹಡಗಿನಲ್ಲಿ) ಪಾರ್ಸೆಲ್ ಕಳಿಸುವುದಕ್ಕೆ ಕಾರ್‌ಗೊ ಎನ್ನುತ್ತೇವೆ. ಕಾರಲ್ಲಿ ತಗೊಂಡು ಹೋಗಬಹುದಾದಷ್ಟು ಚಿಕ್ಕ ಪಾರ್ಸೆಲ್‌ಗೆ ಶಿಪ್‌ಮೆಂಟ್ ಎನ್ನುತ್ತೇವೆ! ಹಾಗೆಯೇ ಈ ಪಾರ್ಕ್‌ವೇ-ಡ್ರೈವ್‌ವೇಗಳ ವಿರೋಧಾಭಾಸ. ಹೌದು, ವಿರೋಧಾಭಾಸ ಅನಿಸುವುದು ನಿಜ. ಆದರೆ ಇದು ಸಂಪೂರ್ಣವಾಗಿ ಲಾಜಿಕ್ ಇರುವಂಥದ್ದೇ ಆಗಿದೆ. ಆ ಲಾಜಿಕ್ ಅನ್ನು ತಿಳಿದುಕೊಳ್ಳುವ ಮುನ್ನ, ಅಮೆರಿಕದಲ್ಲಿ ರಸ್ತೆ ನಾಮಕರಣದ ಕೆಲವು ರಿವಾಜುಗಳ ಬಗ್ಗೆ ಸ್ಥೂಲವಾಗಿ ಹೇಳುತ್ತೇನೆ. ರಸ್ತೆಗಳಿಗೆ ವ್ಯಕ್ತಿಗಳ ಹೆಸರು (ಮುಖ್ಯವಾಗಿ ಮಾಜಿ ರಾಷ್ಟ್ರಾಧ್ಯಕ್ಷರ ಹೆಸರು), ಯಾವ ಊರಿಗೆ ಆ ರಸ್ತೆ ಹೋಗುತ್ತದೋ ಆ ಊರಿನ ಹೆಸರು, ಪ್ರಾಕೃತಿಕ ಗುರುತುಗಳ ಹೆಸರು- ಇವೆಲ್ಲ ಇಲ್ಲಿಯೂ ಧಾರಾಳ ಇವೆ.

ನ್ಯೂಯಾರ್ಕ್ ನಂಥ ದೊಡ್ಡ ನಗರಗಳಲ್ಲಿ ಬೀದಿಗಳಿಗೆ ಸಂಖ್ಯಾನುಕ್ರಮಣಿಕೆಯ ಹೆಸರಿರುವುದೂ ಸಾಮಾನ್ಯ. ರಾಜಧಾನಿ ವಾಷಿಂಗ್ಟನ್ ಡಿಸಿ ನಗರದಲ್ಲಂತೂ ಬೀದಿಗಳ ನಾಮಕರಣ ಎಷ್ಟು ಅಚ್ಚುಕಟ್ಟಾಗಿ ಇದೆಯೆಂದರೆ ನಕ್ಷೆಯಲ್ಲಿ ಉತ್ತರದಿಂದ ದಕ್ಷಿಣಕ್ಕಿರುವ ನೇರ ಬೀದಿಗಳಿಗೆ 1, 2, 3… ಆರೋಹಣ ಸಂಖ್ಯಾಕ್ರಮದಲ್ಲಿ ಹಾಗೂ ಪೂರ್ವದಿಂದ ಪಶ್ಚಿಮಕ್ಕಿರುವ ನೇರ ಬೀದಿಗಳಿಗೆ ಇಂಗ್ಲಿಷ್ ವರ್ಣಮಾಲೆಯ ಎ, ಬಿ, ಸಿ, ಡಿ ಅಕ್ಷರಗಳ ಕ್ರಮದಲ್ಲಿ ಹೆಸರಿಡಲಾಗಿದೆ (ಐ ಮತ್ತು ಜೆ ಅಕ್ಷರಗಳು ಒಂದನ್ನೊಂದು ಹೋಲುವುದರಿಂದ ಜೆ ಹೆಸರಿನ ಬೀದಿಯಿಲ್ಲ). ರಸ್ತೆ ಎನ್ನದೆ ಬೀದಿ ಎಂದಿದ್ದೇಕೆಂದರೆ ಇಂಗ್ಲಿಷ್‌ನಲ್ಲಿ ಇವೆಲ್ಲ ‘ಸ್ಟ್ರೀಟ್’ ಗಳು. ನಾವು ಚಿಕ್ಕವರಿದ್ದಾಗ ಸ್ಲೇಟಿನಲ್ಲಿ 1ರಿಂದ 100ರವರೆಗೆ ಅಂಕಿಗಳನ್ನು ಬರೆಯಲು ಅಡ್ಡಕ್ಕೆ 10 ಉದ್ದಕ್ಕೆ 10 ಗೆರೆಗಳನ್ನೆಳೆದು ಕೋಣೆಗಳನ್ನು ಮಾಡಿಕೊಳ್ಳುತ್ತಿದ್ದೆವು.

ನಕ್ಷೆಯಲ್ಲಿ ಹಾಗೆ ಕಾಣಿಸುವ ಈ ವ್ಯವಸ್ಥೆಯನ್ನು ಸ್ಟ್ರೀಟ್‌ಗ್ರಿಡ್ ಎನ್ನುತ್ತಾರೆ. ಈ ಉದ್ದ-ಅಡ್ಡ ಬೀದಿಗಳಲ್ಲದೆ ಡಯಾಗನಲ್ ಆಗಿ ಇರುವ ರಸ್ತೆಗಳಿಗೆ ಅಮೆರಿಕದ 50 ಸಂಸ್ಥಾನಗಳ ಒಂದೊಂದು ಹೆಸರನ್ನಿಡಲಾಗಿದೆ. ಇವೆಲ್ಲ ‘ಅವೆನ್ಯೂಗಳು. ಕನೆಕ್ಟಿಕಟ್ ಅವೆನ್ಯೂ, ಜಾರ್ಜಿಯಾ ಅವೆನ್ಯೂ, ನ್ಯೂಯಾರ್ಕ್ ಅವೆನ್ಯೂ ಇತ್ಯಾದಿ. ಇಲ್ಲಿನ ಜಗದ್ವಿಖ್ಯಾತ ಲ್ಯಾಂಡ್‌ಮಾರ್ಕ್ ಎನಿಸಿದ ಶ್ವೇತಭವನದ ವಿಳಾಸ ನಂ.1600 ಪೆನ್ಸಿಲ್ವೇನಿಯಾ ಅವೆನ್ಯೂ, ವಾಷಿಂಗ್ಟನ್ ಡಿಸಿ. ಅಮೆರಿಕದಲ್ಲಿ ರಸ್ತೆಗೆ ಒಂದು ಹೆಸರಷ್ಟೇ ಅಲ್ಲ, ಆ ರಸ್ತೆ ‘ಸ್ಟ್ರೀಟ್’ ಆಗಿದೆಯೋ, ‘ಅವೆನ್ಯೂ’ ಆಗಿದೆಯೋ ಎನ್ನುವುದೂ ಅದರ ಹೆಸರಿನೊಂದಿಗೇ ಸೇರಿಕೊಳ್ಳುತ್ತದೆ. ಅವೆರಡೇ ಪ್ರಕಾರಗಳಲ್ಲ, ಇನ್ನೂ ಇವೆ. ಒಂದು ಊರಿನಿಂದ ಇನ್ನೊಂದು ಊರಿಗೆ ಇರುವ ಮುಖ್ಯ ಸಂಪರ್ಕರಸ್ತೆ ‘ರೋಡ್’ ಆಗಿರುತ್ತದೆ.

ಅದು ಬಹುಪಥಗಳ ಹೆದ್ದಾರಿಯಾಗಿದ್ದರೆ ‘ಹೈವೇ’ ಆಗುತ್ತದೆ. ಸಿಗ್ನಲ್‌ಗಳಿಲ್ಲದೆ, ತಡೆರಹಿತವಾಗಿ ಸಾಗಬಹುದಾಗಿದ್ದರೆ ಎಕ್ಸ್ ಪ್ರೆಸ್‌ವೇ’ ಆಗುತ್ತದೆ. ಅಂತಾರಾಜ್ಯ ಹೆದ್ದಾರಿಗಳೆಲ್ಲ ಈ ಪ್ರಕಾರದವೇ. ಇನ್ನು, ಉಪನಗರಗಳಲ್ಲಿ ಜನವಸತಿ ಪ್ರದೇಶಗಳಲ್ಲಿನ ರಸ್ತೆಗಳೂ ಬೇರೆಬೇರೆ ಪ್ರಕಾರದವು ಇರುತ್ತವೆ. ಮಧ್ಯೆ ವಿಭಜಕವಿದ್ದು ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ನಡೆದು ಕೊಂಡು ಹೋಗಲು ಕಾಲ್ದಾರಿಗಳಿದ್ದರೆ ಆ ರಸ್ತೆ ‘ಬುಲೆವಾರ್ಡ್’ ಆಗುತ್ತದೆ. ಅಷ್ಟೇನೂ ಅಗಲವಿಲ್ಲದೆ, ಇಕ್ಕೆಲಗಳಲ್ಲಿ ಕಾಲ್ನಡಿಗೆಗೆ ಅವಕಾಶವಿಲ್ಲದಿದ್ದರೆ ‘ಲೇನ್’ ಎನಿಸಿಕೊಳ್ಳುತ್ತದೆ. ವಸತಿ ಸಮುಚ್ಚಯಗಳಲ್ಲಿ ಅಂಕುಡೊಂಕಾಗಿ ಸಾಗುವ ಮುಖ್ಯರಸ್ತೆಯನ್ನು ‘ಡ್ರೈವ್’ ಎನ್ನಲಾಗುತ್ತದೆ.

ಅದರ ಚಿಕ್ಕಪುಟ್ಟ ಟೊಂಗೆ- ಟಿಸಿಲುಗಳು ‘ವೇ’, ‘ಪಾತ್’, ‘ಪ್ಲೇಸ್’, ‘ಕೋರ್ಟ್’, ‘ಟೆರಾಸ್’, ‘ಟ್ರೈಲ್’ ಮುಂತಾದ ಪ್ರಕಾರದ್ದಿರುತ್ತವೆ. ಅಂಚೆ ವಿಳಾಸದಲ್ಲಿ ಮನೆಸಂಖ್ಯೆ, ರಸ್ತೆಯ ಹೆಸರು, ಪ್ರಕಾರ ಇವಿಷ್ಟೂ ಮುಖ್ಯವಾಗುತ್ತವೆ. ಇಷ್ಟು ಪ್ರಾಥಮಿಕ ವಿವರಗಳ ನಂತರ ಈಗ ಪಾರ್ಕ್ ವೇ-ಡ್ರೈವ್‌ವೇಗಳ ವಿಚಾರಕ್ಕೆ ಬರೋಣ. ಮೇಲಿನ ವಿವರಣೆಯಂತೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಮುಖ್ಯ ರಸ್ತೆ ಹೈವೇ ಅಥವಾ ರೋಡ್ ಆಗಿರುತ್ತದಾದರೂ ಅದರಲ್ಲಿ ಕೆಲವನ್ನು ಅಥವಾ ಕೆಲವು ರಸ್ತೆಗಳ ಒಂದಿಷ್ಟು ಭಾಗವನ್ನು ‘ಪಾರ್ಕ್‌ವೇ’ ಎಂದು ಕರೆಯುವುದಿದೆ.

ನ್ಯೂಜೆರ್ಸಿ ರಾಜ್ಯದ ‘ಗಾರ್ಡನ್ ಸ್ಟೇಟ್ ಪಾರ್ಕ್‌ವೇ’ ಅತ್ಯಂತ ಟ್ರಾಫಿಕ್ ದಟ್ಟಣೆಗೆ ಪ್ರಖ್ಯಾತವಾದರೆ ರಾಜಧಾನಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ‘ಜಾರ್ಜ್ ವಾಷಿಂಗ್ಟನ್ ಪಾರ್ಕ್‌ವೇ’ ನಗರದೊಳಗೇ ಗೊಂಡಾರಣ್ಯವನ್ನು ಪ್ರವೇಶಿಸಿದೆವೋ ಅಂತನಿಸುವುದಕ್ಕೆ ಪ್ರಖ್ಯಾತ. ವರ್ಜೀನಿಯಾ ರಾಜ್ಯದ ಶೆನಾಂಡೋ ಕಣಿವೆಯಿಂದ ನಾರ್ತ್ ಕೆರೊಲಿನಾ ರಾಜ್ಯದ ಸ್ಮೋಕಿ ಮೌಂಟೈನ್‌ವರೆಗೆ ಬಹುತೇಕ ಅರಣ್ಯಪ್ರದೇಶದಲ್ಲೇ ಸಾಗುವ ಸುಮಾರು 450 ಮೈಲುದ್ದದ ‘ಬ್ಲೂ ರಿಡ್ಜ್ ಪಾರ್ಕ್ ವೇ’ಯಂತೂ ಪ್ರಕೃತಿಯ ರಮ್ಯದೃಶ್ಯಾವಳಿಗೆ ಪ್ರಖ್ಯಾತ.

ಅಂತಹ ಪಾರ್ಕ್‌ವೇಗಳಲ್ಲಿ ಡ್ರೈವ್ ಮಾಡಿಕೊಂಡು ಹೋಗುವಾಗಿನ ರೋಮಾಂಚನ ವಿಶೇಷವಾದುದು. ಅನುಭವಕ್ಕಷ್ಟೇ ದಕ್ಕುವಂಥದ್ದು. ಸರಿ, ಪಾರ್ಕ್‌ವೇ ಎಂಬ ಪದ ಹೇಗೆ ಬಂತು? ಸ್ವಾರಸ್ಯವೇನೆಂದರೆ ಮೋಟಾರುವಾಹನಗಳ ಸಂಶೋಧನೆಯಾಗಿ ಅವುಗಳ ಬಳಕೆ ಆರಂಭವಾಗುವುದಕ್ಕೆ ತುಂಬಾ ಹಿಂದೆಯೇ ‘ಪಾರ್ಕ್‌ವೇ’ ಪದ ಇಂಗ್ಲಿಷ್ ಭಾಷೆಯಲ್ಲಿತ್ತು. ಅದಕ್ಕೂ ಕಾರುಗಳು ಹೋಗುವ ರಸ್ತೆಗೂ ಏನೂ ಸಂಬಂಧವಿರಲಿಲ್ಲ!

19ನೇ ಶತಮಾನದವರೆಗೂ ‘ಪಾರ್ಕಿಂಗ್’ ಎಂದರೆ ಹೂಬಳ್ಳಿಗಳನ್ನು ನೆಡುವುದು, ಸೌಂದರ್ಯಕ್ಕಾಗಿ ಗಿಡಮರಗಳನ್ನು ಬೆಳೆಸುವುದು ಎಂಬ ಅರ್ಥವಿದ್ದದ್ದು. ಒಟ್ಟಾರೆಯಾಗಿ, ಕೃಷಿಯೇತರ ಸಸ್ಯಸಂವರ್ಧನೆಯನ್ನು ಪಾರ್ಕಿಂಗ್ ಎನ್ನಲಾಗುತ್ತಿತ್ತು. ಆಗಿನ ನಗರಪ್ರದೇಶಗಳಲ್ಲಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲೆಲ್ಲ ಹಸುರಿನ ವನಸಿರಿಯ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಉದ್ಯಾನಗಳನ್ನು ನಿರ್ಮಿಸಿದರು. ಅವುಗಳು ‘ಪಾರ್ಕ್’ ಎಂದು ಕರೆಯಲ್ಪಟ್ಟವು. ಶ್ರೀಮಂತರ ಬಂಗ್ಲೆಗಳ ಸುತ್ತ, ದೊಡ್ಡದೊಡ್ಡ ಎಸ್ಟೇಟ್‌ಗಳ ಅಕ್ಕಪಕ್ಕದಲ್ಲಿ ಪಾರ್ಕ್‌ಗಳ ನಿರ್ಮಾಣವಾಯ್ತು. ಮುಂಜಾನೆ ಮತ್ತು ಸಂಜೆಹೊತ್ತು ವಾಯುವಿಹಾರಕ್ಕೆ, ಕೈಕಾಲು ಸಡಿಲಗೊಳ್ಳಲು ಅಡ್ಡಾಡಿ ಬರುವುದಕ್ಕೆ ಅವು ಪ್ರಶಸ್ತ ತಾಣಗಳಾದವು. ಕುದುರೆಗಾಡಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿಕ್ಕೆ (ಅಂದರೆ ಈಗಿನ ಅರ್ಥದಲ್ಲಿ ‘ಪಾರ್ಕ್’ ಮಾಡಲಿಕ್ಕೆ) ಸಹ ಅವು ಬಳಕೆಯಾಗುತ್ತಿತ್ತಾದರೂ, ವನರಾಜಿ ಎಂಬ ಅರ್ಥವಷ್ಟೇ ಅದಕ್ಕಿದ್ದದ್ದು. ಕುದುರೆಗಾಡಿಗಳ ನಂತರ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕಾರುಗಳು ಕಾಣಿಸಿಕೊಂಡವು.

ಅವುಗಳನ್ನು ಉದ್ಯಾನದ ಪಕ್ಕದಲ್ಲಿ ನಿಲ್ಲಿಸುತ್ತಿದ್ದುದರಿಂದ ಅದು ‘ಪಾರ್ಕಿಂಗ್ ಪ್ಲೇಸ್’ ಆಯ್ತು. 19ನೇ ಶತಮಾನದ ಕೊನೆಯಲ್ಲಿ ಬಾಳಿದ್ದ, ನ್ಯೂಯಾರ್ಕ್ ನಗರದ ಪ್ರಖ್ಯಾತ ‘ಸೆಂಟ್ರಲ್ ಪಾರ್ಕ್’ ಅನ್ನು ವಿನ್ಯಾಸಗೊಳಿಸಿದ ಫ್ರೆಡರಿಕ್ ಆಲ್ಮ್ ಸ್ಟೆಡ್ ಎಂಬಾತ ಅಪಾರವಾಗಿ ಹಸುರಿನ ಕಾಳಜಿ ಉಳ್ಳವನಾಗಿದ್ದ. ಪ್ರತಿಯೊಂದು ಮನೆಯ/ಕಟ್ಟಡದ ಸುತ್ತಲೂ ಸ್ವಲ್ಪವಾದರೂ ಹಸುರು ಉದ್ಯಾನವಿರಬೇಕು ಎಂದು ಅವನ ಧೋರಣೆ. ನಗರಪ್ರದೇಶದಲ್ಲಿನ ಪಾರ್ಕ್‌ಗಳು ಮತ್ತು ಜನವಸತಿಯ ಉಪನಗರಗಳಲ್ಲಿರುವ ಪಾರ್ಕ್‌ಗಳನ್ನು ಪರಸ್ಪರ ಜೋಡಿಸುವ ದಾರಿಗಳಿರಬೇಕು.

ಕಾಲ್ನಡಿಗೆಯಿರಲಿ, ಬೈಸಿಕಲ್ ಮೇಲಿರಲಿ, ಕುದುರೆಸವಾರಿಯಿರಲಿ, ಕುದುರೆಗಾಡಿಯಲ್ಲಿರಲಿ ಅಂತೂ ಆಹ್ಲಾದಕರ ಪ್ರಯಾಣಕ್ಕೆ ಅವು ಅನುಕೂಲಕರವಾಗಿರಬೇಕು. ಅದಕ್ಕೋಸ್ಕರ ಇಕ್ಕೆಲಗಳಲ್ಲಿ ಗಿಡಮರಗಳನ್ನು ನೆಟ್ಟು ಅದೆಲ್ಲವನ್ನೂ ಪಾರ್ಕ್ ಸಮುಚ್ಚಯ ಎನಿಸುವಂತೆ ಮಾಡಬೇಕು ಎಂದು ಅವನ ಶಿಫಾರಸು. ಸರಕಾರದ ಒಪ್ಪಿಗೆಯಿಂದ ಸಾಧ್ಯವಿದ್ದಲ್ಲೆಲ್ಲ ಅದು ಕಾರ್ಯರೂಪಕ್ಕೂ ಬಂತು. ಅಂತಹ ದಾರಿಗಳು ‘ಪಾರ್ಕ್‌ವೇ’ ಎಂದು ಹೆಸರು ಪಡೆದವು. ಮೋಟಾರುವಾಹನಗಳ ಸಂಖ್ಯೆ ಹೆಚ್ಚಿದಂತೆಲ್ಲ ಅದೇ ಪಾರ್ಕ್‌ವೇಗಳನ್ನು ವಾಹನ ಸಂಚಾರಕ್ಕೆ ಬಳಸಲಾಯಿತು.

ಸುತ್ತಮುತ್ತಲ ಗಿಡಮರಗಳನ್ನು ಕಡಿದು ರಸ್ತೆ ಅಗಲಗೊಳಿಸಿ ಮತ್ತಷ್ಟು ವೇಗವಾಗಿ ಸಾಗುವುದಕ್ಕೆ ಅನುಕೂಲ ಮಾಡಲಾಯ್ತು. ಆಲ್ಮ್ ‌ಸ್ಟೆಡ್‌ನ ಆಶಯ-ಉದ್ದೇಶಗಳನ್ನು ಕ್ರಮೇಣ ಗಾಳಿಗೆ ತೂರಲಾಯ್ತು. ಪಾರ್ಕ್‌ವೇ ಎಂಬ ಹೆಸರು ಮಾತ್ರ ಉಳಿದುಕೊಂಡಿತು. ಇನ್ನು, ಡ್ರೈವ್‌ವೇಯ ವಿಚಾರಕ್ಕೆ ಬರುವುದಾದರೆ, ಆ ಪದ ಸರಿಸುಮಾರಾಗಿ ಮೋಟಾರು ವಾಹನಗಳ ಆವಿಷ್ಕಾರದ ಸಮಯದಲ್ಲೇ ಇಂಗ್ಲಿಷ್ ಭಾಷೆಗೆ ಸೇರ್ಪಡೆಯಾದದ್ದು. 1870ರಲ್ಲಿ ಅದನ್ನು ಮೊತ್ತಮೊದಲ ಬಾರಿಗೆ ಬಳಸಲಾಯ್ತಂತೆ. ಡ್ರೈವ್‌ವೇ ಎಂದರೆ ಊರಿನ ಮುಖ್ಯರಸ್ತೆಯಿಂದ ಒಬ್ಬೊಬ್ಬರ ಮನೆ ಅಥವಾ ಜಮೀನಿಗೆ ಹೋಗುವ ಕವಲುದಾರಿ. ಮುಖ್ಯರಸ್ತೆಯು ಸಾರ್ವಜನಿಕ ಆಸ್ತಿಯಾದರೆ, ಡ್ರೈವ್‌ವೇಯು ಆಯಾಯ ವ್ಯಕ್ತಿಯ ಒಡೆತನಕ್ಕೆ ಸೇರಿದ್ದು.

ಅದರ ನಿರ್ವಹಣೆಯೂ ಅವನದೇ ಜವಾಬ್ದಾರಿ. ನಮ್ಮ ಹಳ್ಳಿಯಲ್ಲಾದರೆ ಕಾರ್ಕಳ-ಕುದುರೆಮುಖ ಮುಖ್ಯರಸ್ತೆಯಿಂದ ನಮ್ಮ ನಮ್ಮ ಮನೆಯಂಗಳಕ್ಕೆ ಹೋಗುವ ಕಚ್ಚಾರಸ್ತೆಗಳು ಡ್ರೈವ್ ವೇಗಳು. ಅಮೆರಿಕದಲ್ಲಿ ಡ್ರೈವ್‌ವೇಯ ಅರ್ಥವ್ಯಾಪ್ತಿ ಆಗಿನಿಂದ ಈಗಿನವರೆಗೂ ಹಾಗೇ ಉಳಿದಿದೆ. ಬದಲಾಗಿರುವುದೇನೆಂದರೆ ಡ್ರೈವ್‌ವೇಯ ಉದ್ದ ಅಷ್ಟೇ. ಹಿಂದೆಲ್ಲ ಅರ್ಧ ಮೈಲು ಒಂದು  ಮೈಲು ಉದ್ದದ ಡ್ರೈವ್‌ವೇಗಳಿರುತ್ತಿದ್ದವು. ಕಾಲ್ನಡಿಗೆಗೆ ಅಥವಾ ಕುದುರೆಗಾಡಿಯ ಸಂಚಾರಕ್ಕೆ ಬಳಕೆಯಾಗುತ್ತಿದ್ದವು. ಕಾರು ಉಳ್ಳವರು ಕಾರನ್ನು ಮನೆವರೆಗೆ ತರಲು ಬಳಸುತ್ತಿದ್ದರು.

ಒಟ್ಟಿನಲ್ಲಿ ಅದು ಸಂಚಾರಕ್ಕೆ ಉಪಯೋಗವಾಗುತ್ತಿತ್ತೇ ವಿನಾ ಕಾರು ನಿಲ್ಲಿಸಲಿಕ್ಕೆ ಅಲ್ಲ. ಆದರೆ ಜನಸಂಖ್ಯೆ ಹೆಚ್ಚಾದಂತೆಲ್ಲ, ನಗರೀಕರಣ ಅಧಿಕವಾದಂತೆಲ್ಲ, ಒತ್ತೊತ್ತಾಗಿ ಮನೆಗಳ ನಿರ್ಮಾಣವಾದಂತೆಲ್ಲ, ಡ್ರೈವ್‌ವೇಗಳ ಉದ್ದ ಗಣನೀಯವಾಗಿ ಕಡಿಮೆಯಾಯಿತು. ಈಗ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲೇ ಮನೆಗಳಿರುವಾಗ ರಸ್ತೆಯಿಂದ ಮನೆಬಾಗಿಲವರೆಗಿನ ದಾರಿಯು ಹೆಚ್ಚೆಂದರೆ ಒಂದು ಕಾರು ನಿಲ್ಲಿಸುವಷ್ಟು ಮಾತ್ರ ಉದ್ದದ್ದಿರುವಾಗ ಅದು ಈಗಿನ ಅರ್ಥದಲ್ಲಿ ‘ಪಾರ್ಕಿಂಗ್ಗೆ ಸ್ಥಳವಾಯ್ತು. ಹಾಗಾಗಿ ಡ್ರೈವ್‌ವೇಯಲ್ಲಿ ಪಾರ್ಕ್ ಮಾಡುವುದು ಎಂಬುದು ರೂಢಿಯಾಯ್ತು.

ಭಾಷೆ ಮತ್ತು ಮನುಷ್ಯನ ಜೀವನವಿಧಾನ ಎಷ್ಟು ಅನ್ಯೋನ್ಯವಾಗಿರುತ್ತವೆ, ಕಾಲಕ್ರಮೇಣ ಬದಲಾವಣೆ ಹೇಗೆ ಎರಡನ್ನೂ ಬೆಸೆಯುತ್ತ ಬೆಳೆಸುತ್ತದೆ ಎನ್ನುವುದಕ್ಕೆ ಪಾರ್ಕ್‌ವೇ- ಡ್ರೈವ್‌ವೇಗಳು ಒಳ್ಳೆಯ ಉದಾಹರಣೆ. ಅಂದ ಹಾಗೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಈಗ ನೋ ಪಾರ್ಕಿಂಗ್ ಬೋರ್ಡ್ ಇದ್ದರೆ ಅದರರ್ಥ ರಸ್ತೆಯ ಇಕ್ಕೆಲಗಳಲ್ಲಿ ಗಿಡಮರಗಳ ಪಾರ್ಕಿಂಗ್ ಸ್ವಲ್ಪವೂ ಉಳಿದಿಲ್ಲ ಎಂದು ಕೂಡ ಇರಬಹುದು.

-ಶ್ರೀವತ್ಸ ಜೋಶಿ

Leave a Reply

Your email address will not be published. Required fields are marked *

six − one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top