About Us Advertise with us Be a Reporter E-Paper

ವಿ +

ಪುಷ್ಕಿನ್ ಎಂಬ ಅಕ್ಷರ-ಸಾಂಸ್ಕೃತಿಕ ಲೋಕದ ಮಾಂತ್ರಿಕ

ವಿದೇಶ ಕಾಲ: ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು

ನಮ್ಮಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಒಂದು ನಗರಕ್ಕಿ ಡುವ ಸಂಪ್ರದಾಯ ವಿರಳ. ಒಂದು ನಗರದಲ್ಲಿರುವ ಪ್ರದೇಶಕ್ಕೆ, ಬೀದಿಗೆ, ರಸ್ತೆಗೆ ಇಡುತ್ತೇವೆ. ಆದರೆ ಇಡೀ ನಗರಕ್ಕೆ ಇಡುವುದು ಕಡಿಮೆಯೇ. ಇದಕ್ಕೆ ತಮಿಳು ನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅಪವಾದ ಗಳಿವೆ. ಅದರಲ್ಲೂ ಒಬ್ಬ ವ್ಯಕ್ತಿಯ ಹೆಸರನ್ನು ಒಂದಕ್ಕಿಂತ ಹೆಚ್ಚು ನಗರ ಗಳಿಗೂ ಇಡುವುದಿಲ್ಲ. ನಮ್ಮಲ್ಲಿ ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಹೆಸರುಗಳಲ್ಲಿ ನೂರಾರು ಸಂಸ್ಥೆ, ವಿಮಾನ ನಿಲ್ದಾಣ, ರಸ್ತೆಗಳಿವೆ. ಅವರೆಲ್ಲ ಈ ದೇಶದ ಪ್ರಧಾನ ಮಂತ್ರಿ ಗಳಾಗಿದ್ದವರು.

ಆದರೆ ನಮ್ಮ ದೇಶದಲ್ಲಿ ಒಬ್ಬ ಕವಿ, ಸಾಹಿತಿ, ಕಾದಂಬರಿಕಾರರ ಹೆಸರುಗಳನ್ನೆಲ್ಲ ನಗರ ಕ್ಕೊ, ಊರಿಗೋ ಇತ್ತ ನಿದರ್ಶನಗಳು ಕಡಿಮೆ. ವರಕವಿ ದ.ರಾ.ಬೇಂದ್ರೆ ಅವರ ಹೆಸರನ್ನು ಬಸ್ಸಿನ ಬೋರ್ಡಿನಲ್ಲಿ ಮಾತ್ರ ಬೇಂದ್ರೆನಗರ (ಧಾರವಾಡ) ಎಂದು ನಾಮಕರಣ ಮಾಡಿದ್ದೇವೆ. ಮೈಸೂರಿನಲ್ಲಿ ಕುವೆಂಪುನಗರ ಎಂಬ ಬಡಾವಣೆ ಇದೆ. ಆದರೆ ಇಡೀ ನಗರವನ್ನು ಯಾವ ಕವಿ ಅಥವಾ ಸಾಹಿತಿ ಹೆಸರಿಗೆ ಮುಡಿಪಾಗಿಟ್ಟಿಲ್ಲ.

ಕೆಲವು ವರ್ಷಗಳ ಹಿಂದೆ ನಾನು ರಷ್ಯಾಕ್ಕೆ ಹೋದಾಗ ಸ್ನೇಹಿತ ರೊಬ್ಬರು ನನ್ನನ್ನು ಪುಷ್ಕಿನ್ ಸ್ಮಾರಕಕ್ಕೆ ಕರೆದುಕೊಂಡು ಹೋಗಿ ದ್ದರು. ರಷ್ಯಾದ ಪ್ರಮುಖ ಪ್ರದೇಶದಲ್ಲಿ ನಿಲ್ಲಿಸಿರುವ ವಿಗ್ರಹವನ್ನು ನೋಡಲು ಪ್ರತಿದಿನ ಸಾವಿರಾರು ಜನ ಬರುತ್ತಾರೆ. ಆ ಭವ್ಯ ವಿಗ್ರಹ ಮತ್ತು ಸುತ್ತಲಿನ ಪ್ರದೇಶ ಗಮನಿಸಿದರೆ, ಅವರು ಮಹಾನ್ ವ್ಯಕ್ತಿಯಾಗಿರಬಹುದು ಎಂದು ತಟ್ಟನೆ ತೀರ್ಮಾನಿಸಬಹುದು. ರಷ್ಯನ್ ರ ಪಾಲಿಗೆ ಅವರು ಮಹಾನ್ ವ್ಯಕ್ತಿಯೇ. ಅಂಥ ನಮ್ಮಲ್ಲಿ ಇದ್ದಿದ್ದರೆ ನಾವು ಅವರಿಗೆ ಅದೇ ರೀತಿಯ ಮರ್ಯಾದೆ, ಮಹತ್ವ ಕೊಡುತ್ತಿದ್ದೆವಾ ಎಂಬುದು ಪ್ರಶ್ನೆ.

ಅನಂತರ ನಾನು ರಷ್ಯಾದ ಅನೇಕ ಊರುಗಳಿಗೆ ಹೋದಾಗ, ಸಾಮಾನ್ಯವಾಗಿ ಎಲ್ಲೆಡೆ ಅಲ್ಲಿನ ಕವಿಗಳ ಮತ್ತು ಸಾಹಿತಿಗಳ ಹೆಸರಿ ನಲ್ಲಿರುವ ಊರುಗಳನ್ನು ನೋಡಿ ಅಲ್ಲಿನ ಜನರಿಗೆ ಸಾರಸ್ವತ ಲೋಕದ ಅಕ್ಷರ ಜೀವಿಗಳ ಬಗೆಗಿರುವ ಗೌರವ ಮತ್ತು ಪ್ರೀತಿ ಕಂಡು ಅಭಿಮಾನವೆನಿಸಿತು. ಪುಷ್ಕಿನ್, ದಾಸ್ತೋವಸ್ಕಿ, ಚೆಕೋವ್, ಮಾರ್ಕ್ಸಿಮ್ ಗಾರ್ಕಿ, ತೋಲ್ ಸ್ತಾಯ್ ಮುಂತಾದವರ ಹೆಸರಿನಲ್ಲಿ ಹತ್ತಾರು ನೋಡಿ ಅಚ್ಚರಿಯೆನಿಸಿತು. ರಷ್ಯನ್ ರಿಗೆ ತಮ್ಮ ಸಾಹಿತಿ, ಕವಿ, ಲೇಖಕರನ್ನು ಕಂಡರೆ ಅಂಥ ಅಭಿಮಾನ !

ರಷ್ಯಾದಲ್ಲಿ ಅಲೆಕ್ಸಾಂಡರ್ ಸೆರ್ಗೆಯೆವಿಚ್ ಪುಷ್ಕಿನ್ ಬಗ್ಗೆ ವಿಶೇಷ ಮಮತೆ, ಪ್ರೀತಿ, ಮರ್ಯಾದೆ. ಕೇವಲ ಮೂವತ್ತೆಂಟು ವರ್ಷಗಳ ಕಾಲ ಬದುಕಿದ್ದ (1799 – 1837 ) ಪುಷ್ಕಿನ್ ರಷ್ಯಾ ಜನಮಾನಸ ವನ್ನು ಆವರಿಸಿದ ಪರಿ ಮಾತ್ರ ಇಂದಿಗೂ ವಿಸ್ಮಯ ಹುಟ್ಟಿಸು ವಂಥ ದ್ದು. ಕವಿ, ಕಾದಂಬರಿಕಾರ, ನಾಟಕಕಾರನಾಗಿದ್ದ ಪುಷ್ಕಿನ್, ಹೊಸ ಅಲೆಯ ಸಾಹಿತ್ಯವನ್ನೇ ಸೃಷ್ಟಿಸಿದ ಸಾಹಿತಿ. ಆತ ಸತ್ತು 181 ವರ್ಷಗಳಾದರೂ, ಇಂದಿಗೂ ಪುಷ್ಕಿನ್ ನ ಬರಹ ಶೈಲಿ ಯನ್ನು ಅನುಸರಿಸುವವರಿದ್ದಾರೆ. ರಷ್ಯಾದಲ್ಲಿ ರೊಮ್ಯಾಂಟಿಸಿಸಂ ಮತ್ತು ರಿಯಲಿಸಂ ಸಾಹಿತ್ಯ ಚಳವಳಿಯನ್ನೇ ಹುಟ್ಟು ಹಾಕಿದ ಅಪ್ರತಿಮ ಬರಹಗಾರನಾದ ಪುಷ್ಕಿನ್, ಇಂದಿಗೂ ಅಲ್ಲಿನ ಸಾಂಸ್ಕೃತಿಕ ಲೋಕದ ಮಹಾ ಚೇತನ.

ತನ್ನ ಹದಿನೈದನೇ ವಯಸ್ಸಿನಲ್ಲಿ ಕವಿ ಎಂದು ಕರೆಯಿಸಿಕೊಂಡ ಪುಷ್ಕಿನ್, Eugene Onegin, The Captain Daughter, Boris Godunov ಮುಂತಾದ ಕೃತಿಗಳಿಂದ ರಷ್ಯನ್ ಸಾಹಿತ್ಯ ದಲ್ಲಿ ಚಿರಸ್ಥಾಯಿಯಾಗಿದ್ದಾನೆ. ಮರಣ ಹೊಂದಿ ಒಂದು ನೂರು ವರ್ಷಗಳಾದ ಸಂದರ್ಭದಲ್ಲಿ ಅವನ ಹೆಸರನ್ನು ತಮ್ಮ ನಗರಕ್ಕಿಡಬೇಕೆಂದು ಹದಿನೆಂಟಕ್ಕಿಂತ ಹೆಚ್ಚು ನಗರಗಳ ಆಡಳಿತ ವ್ಯವಸ್ಥೆ ನಿರ್ಧರಿಸಿತ್ತು. ಆದರೆ ಒಂದೇ ಹೆಸರಿನ ಎರಡಕ್ಕಿಂತ ಹೆಚ್ಚು ನಗರಗಳಿದ್ದರೆ ಗೊಂದಲವಾಗುವುದೆಂಬ ಕಾರಣಕ್ಕೆ ಆ ಪ್ರಸ್ತಾಪ ಕೈಬಿಡ ಲಾಯಿತು. ಇದು ಒಬ್ಬ ಕವಿಗೆ ಸಿಗನಹುದಾದ ದೊಡ್ಡ ಗೌರವ.

ಆನಂತರ ತ್ಸಾರ್ಸ್ಕೊಯೆ ಸೆಲೋ ಎಂಬ ನಗರಕ್ಕೆ ಪುಷ್ಕಿನ್ ಎಂದು ಹೆಸರಿಡಲಾಯಿತು. ರಷ್ಯಾದಲ್ಲಿ ತಯಾರಿಸಲಾದ ವಿಶೇಷ ಮಾದರಿಯ ಯುದ್ಧ ವಿಮಾನಕ್ಕೆ ಪುಷ್ಕಿನ್ ಎಂದೇ ಅಲ್ಲದೆ ಅಲ್ಲಿನ ಯುದ್ಧ ನೌಕೆಗೂ ಈ ಮಹಾಕವಿಯ ಹೆಸರಿಡಲಾ ಗಿದೆ. ರಷ್ಯಾದಲ್ಲಿ ನೂರಕ್ಕೂ ಹೆಚ್ಚು ಮ್ಯೂಸಿಯಂ, ಕಲಾ ಗ್ಯಾಲರಿ, ಸಂಘ-ಸಂಸ್ಥೆಗಳಿಗೆ ಆತನ ಹೆಸರಿಡಲಾಗಿದೆ. ಪುಷ್ಕಿನ್ ಸಾಹಿತ್ಯ ಕುರಿತಾಗಿ ಎರಡು ಸಾವಿರಕ್ಕಿಂತ ಅಧಿಕ ಪುಸ್ತಕಗಳು ಪ್ರಕಟವಾಗಿವೆ. ಇನ್ನು ಸಿನಿಮಾ ಮತ್ತು ಜೀವನ ಕತೆಗಳಿಗಂತೂ ಲೆಕ್ಕವೇ ಇಲ್ಲ.

1977ರಲ್ಲಿ ಸೋವಿಯತ್ ಗಗನಯಾನಿ ಸಣ್ಣ ಉಪಗ್ರಹವನ್ನು ಕಂಡುಹಿಡಿದ. ಆ ಉಪಗ್ರಹಕ್ಕೆ ಪುಷ್ಕಿನ್ ಅಂತ ಹೆಸರಿಡಲಾಯಿತು. ಮಂಗಳ ಗ್ರಹದಲ್ಲಿ ಶೋಧಿಸಿದ ಮಹಾಕಂದಕಕ್ಕೂ ಪುಷ್ಕಿನ್ ! ಹಳೆಯ ಸೋವಿಯತ್ ರಷ್ಯಾ ಭಾಗವೇ ಆಗಿದ್ದ, ಈಗ ಉಜಬೆಕಿ ಸ್ತಾನದ ರಾಜಧಾನಿಯಾಗಿರುವ ತಾಷ್ಕೆಂಟ್ ನಗರ ದಲ್ಲಿರುವ ಮೆಟ್ರೋ ಸ್ಟೇಷನ್ ಗೂ ಆ ಕವಿಪುಂಗವನ ಹೆಸರು ! ರಷ್ಯಾದಲ್ಲಿ ಗುಡ್ಡ, ಬೆಟ್ಟ, ಸರೋವರಗಳಿಗೆಲ್ಲ ಪುಷ್ಕಿನ್ ಹೆಸರಿಟ್ಟು ಪ್ರೀತಿ ಮೆರೆದಿದ್ದಾರೆ. ಪುಷ್ಕಿನ್ ನ ಜನ್ಮದಿನದಂದೇ ರಷ್ಯನ್ ಭಾಷಾ ದಿನ ಎಂದು ವಿಶ್ವ ಸಂಸ್ಥೆ ಘೋಷಿಸಿದೆ.

ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ ಬೃಹದಾಕಾರದ ವಜ್ರ ಪತ್ತೆಯಾಯಿತು. ಅದು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಎಂದು ತೀರ್ಮಾನಿಸಲಾಯಿತು. ಆ ವಜ್ರ ಪುಷ್ಕಿನ್ ವಜ್ರ ವಾಯಿತು ! ರಷ್ಯಾದ ಒಂದು ಗಡಿ ಭಾಗಕ್ಕೂ ಆತನ ಹೆಸರನ್ನಿಡ ಲಾಗಿದೆ. ಪುಷ್ಕಿನ್ ಹೆಸರಿನಲ್ಲಿ ಗಾರ್ಡನ್ ವರ್ತುಲ, ಶಾಪಿಂಗ್ ಮಾಲ್, ಸಿನಿಮಾ ಮಂದಿರ, ರಂಗ ಮಂದಿರಗಳು ಎಷ್ಟಿವೆಯೋ ?

ಇಂದಿಗೂ ಪುಷ್ಕಿನ್ ಕವನ ವಾಚನವಿದೆ ಅಂದ್ರೆ ಅದನ್ನು ಕೇಳಲು ಸಾವಿರಾರು ಮಂದಿ ಸೇರುತ್ತಾರೆ. ಅವನ್ನು ಯಾರೇ ವಾಚಿಸಲಿ, ಆದರೆ ಅವನ್ನು ಬರೆದವ ಪುಷ್ಕಿನ್ ತಾನೇ ? ಪುಷ್ಕಿನ್ ನ ಪುತ್ಥಲಿ ಇಂದಿಗೂ ಹೂವಿಟ್ಟು, ವಂದಿಸಿ ಹೋಗುವುದನ್ನು ಮಾಸ್ಕೋ ನಗರದಲ್ಲಿ ಕಾಣಬಹುದು. ಪುಷ್ಕಿನ್ ಬರೆದ ಕೃತಿಗಳು, ಅವರ ಫೋಟೋ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಕಾಣಬಹುದು. ಕಾರಣ ಇಂದಿಗೂ ಪುಷ್ಕಿನ್ ನ್ನು ರಷ್ಯಾದ cult figure ಎಂದೇ ಭಾವಿಸುತ್ತಾರೆ. ದೊಡ್ಡ ದೊಡ್ಡ ಲೇಖಕರು, ಬುದ್ಧಿಜೀವಿಗಳು ಒಂದಿಗೂ ಅವನ ಸಾಹಿತ್ಯ ಕೃತಿಗಳ ಬಗ್ಗೆ ಸಂವಾದ ನಡೆಸುತ್ತಾರೆ. ಪ್ರೀತಿ ಇರುವ ತನಕ ಪುಷ್ಕಿನ್ ನ ಪ್ರೇಮ ಕವನಗಳೂ ಇರುತ್ತವೆ ಎಂಬ ಸಾಲುಗಳು ಮಾಸ್ಕೋ ದಲ್ಲಿರುವ ಪುಷ್ಕಿನ್ ಸ್ಮಾರಕದ ಫಲಕದಲ್ಲಿ ಕೆತ್ತಿಡಲಾಗಿದೆ. ರಷ್ಯನ್ ಭಾಷೆಯಲ್ಲಿ ಎಂಥ ಕಸುವು, ಸೊಗಸುಗಾರಿಕೆ ಇದೆ ಎಂಬುದನ್ನು ಪುಷ್ಕಿನ್ ತೋರಿಸಿಕೊಟ್ಟ ಎಂದು ಇಂದಿಗೂ ಅಚ್ಚರಿ ಪಡುತ್ತಾರೆ.

ಒಬ್ಬ ಕವಿ ಹಾಗೂ ಸಾಹಿತಿ ಈ ರೀತಿ ಜನಮಾನಸ ಆವರಿಸಿ ಕೊಂಡು, ಇಂದಿಗೂ ಅಕ್ಷರ ಹಾಗೂ ಸಾಂಸ್ಕೃತಿಕ ಲೋಕದ ಮಾಂತ್ರಿಕ ನಂತೆ ಮೆರೆಯುತ್ತಿರುವುದು ಸೋಜಿಗವೇ. ಪುಷ್ಕಿನ್ ಬಗ್ಗೆ ಮಾತಾಡುವುದು, ಅವನ ಕೃತಿಗಳನ್ನು ಓದುವುದು ಇಂದಿಗೂ ಹೆಮ್ಮೆಯ ಸಂಗತಿ. ಒಬ್ಬ ಕವಿಯನ್ನು ಇಂದಿಗೂ ಅಲ್ಲಿನ ಜನ ತಲೆ ಮೇಲೆ ಮೆರೆಸುತ್ತಾರೆ.

ಆತ ಅದೆಂಥ ಪವಾಡ ಮಾಡಿರಬಹುದು ?

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close