‘ಫಣ್ಯಾಕ್ಳು ಮಾತೆರ್ಲಾ ಬತ್ತೇರ್ಡಾ ನೂದು ಜನ ಆವು’

Posted In : ಅಂಕಣಗಳು, ತಿಳಿರು ತೋರಣ

 ಅಜಮಾಸು ಎಷ್ಟು ಜನ ಸೇರಬಹುದು ಮದುವೆ ಸಮಾರಂಭಕ್ಕೆ? ಎಂದು ಕೇಳಿದ್ದಕ್ಕೆ ನಮ್ಮನೆಯ ಕೆಲಸದ ಆಳು ಕೋಟಿ ಗೌಡ ಉತ್ತರಿಸಿದ್ದು ಹಾಗೆ. ಆಮಂತ್ರಿತರು ಎಲ್ಲರೂ ಬಂದರೆ ನೂರು ಜನ ಆಗಬಹುದು ಎಂದು ತುಳು ಭಾಷೆಯಲ್ಲಿ ಅದರ ಅರ್ಥ. ಅವನ ಆ ಉತ್ತರದಲ್ಲಿ ಒಂದು ರೀತಿಯ ಸಂಭ್ರಮ ಇತ್ತು. ತಾನು ಆಮಂತ್ರಿಸಿರುವ ಬಂಧುಬಾಂಧವರೆಲ್ಲರ ಆಗಮನದ ನಿರೀಕ್ಷೆಯಿತ್ತು. ಅವರೆಲ್ಲರ ಉಪಸ್ಥಿತಿಯಲ್ಲಿ ತನ್ನ ಮಗಳ ಮದುವೆ ಸಮಾರಂಭ ಚೆನ್ನಾಗಿ ನಡೆಯಲಿ ಎಂಬ ಹರಕೆ-ಹಾರೈಕೆಗಳೂ ಇದ್ದವು.

ಇದು ಸುಮಾರು 35-40 ವರ್ಷಗಳ ಹಿಂದಿನ ಸಂಗತಿ. ಅಷ್ಟು ಹಿಂದಿನದು ಎಂದು ಹೇಳಿದರಷ್ಟೇ ಸಾಲದು, ನಮ್ಮೂರಿನ ಭೌಗೋಳಿಕ ವಿವರಗಳನ್ನು, ಆ ಕಾಲದಲ್ಲಿ ನಮ್ಮೂರ ಜನಜೀವನ ವಿಧಾನದ ಚಿತ್ರಣವನ್ನೂ ಒಂದಿಷ್ಟು ಹೇಳಬೇಕಾಗುತ್ತದೆ. ಪಶ್ಚಿಮಘಟ್ಟಗಳ ತಪ್ಪಲಲ್ಲಿ, ಕಾರ್ಕಳ ತಾಲೂಕಿನ ಒಂದು ಮೂಲೆಯಲ್ಲಿ ಮಾಳ ಎಂಬ ಹೆಸರಿನ ಹಳ್ಳಿ ನಮ್ಮೂರು. ಕಾರ್ಕಳದಿಂದ ದಿನಕ್ಕೆ ಮೂರ್ನಾಲ್ಕು ಸಲ ಬಂದು ಹೋಗುವ ಬಸ್ಸಿನ ಕೊನೇ ಸ್ಟಾಪು ಮಲ್ಲಾರು. ಅದು ಊರಿನ ಕೇಂದ್ರಸ್ಥಳ. ಪಂಚಾಯತಿ ಕಚೇರಿ, ಪೋಸ್ಟಾಫೀಸು, ಪ್ರಾಥಮಿಕ ಶಾಲೆ, ಒಂದೆರಡು ಅಂಗಡಿಗಳು, ಕಾಫಿ-ತಿಂಡಿ ಹೊಟೇಲು, ಸಲೂನು ಮುಂತಾದುವೆಲ್ಲ ಅಲ್ಲಿರೋದು. ಮಲ್ಲಾರಿನಿಂದ ಒಂದೆರಡು ಮೈಲುಗಳಷ್ಟು ತ್ರಿಜ್ಯದ ವರ್ತುಲಾಕಾರದಲ್ಲಿ ಊರಿನ ವಿಸ್ತಾರ. ತುಸು ಬಯಲಿನಂಥ ಪ್ರದೇಶವಿದ್ದರೆ ಬತ್ತದ ಗದ್ದೆ, ಬೆಟ್ಟಗುಡ್ಡ ಪ್ರದೇಶವಾದರೆ ಅಡಿಕೆ ತೋಟ. ನಡುವೆ ಆಯಾಯ ಜಮೀನಿನವರ ವಾಸ್ತವ್ಯದ ಮನೆಗಳು. ಕೃಷಿ ಪ್ರಧಾನ ಬದುಕು. ವಿದ್ಯುತ್ ಸಂಪರ್ಕ ಇಲ್ಲ. ಫೋನು (ಲ್ಯಾಂಡ್‌ಲೈನ್) ಪೋಸ್ಟಾಫೀಸಿನಲ್ಲಿ ಮಾತ್ರ. ರೇಡಿಯೊ ಮತ್ತು ಉದಯವಾಣಿ ಪತ್ರಿಕೆ ನಮ್ಮೂರ ಪ್ರಜೆಗಳಿಗೆ ಹೊರಜಗತ್ತಿನ ಆಗುಹೋಗುಗಳ ಅರಿವನ್ನೊದಗಿಸುವ ಕಿಂಡಿಗಳು. ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ… ಕುವೆಂಪು ಪದ್ಯದಲ್ಲಿನ ಬಣ್ಣನೆಗೂ ನಮ್ಮೂರಿನ ಚಿತ್ರಣಕ್ಕೂ ಅಷ್ಟೇನೂ ಫರಕು ಇರಲಿಲ್ಲ.

ನಮ್ಮ ಮನೆ, ಮಲ್ಲಾರಿನಿಂದ ಸುಮಾರು ಒಂದೂವರೆ ಮೈಲು ದೂರ. ಮತ್ತಷ್ಟು ಪಶ್ಚಿಮಘಟ್ಟಗಳ ಕಡೆಗೇ. ಕಾರ್ಕಳ ತಾಲೂಕಿಗೇ ನಮ್ಮೂರು ಒಂದು ಮೂಲೆಯಾದರೆ, ಅದರ ಒಂದು ಮೂಲೆಯಲ್ಲಿ ನಮ್ಮ ಮನೆ. ಮಲ್ಲಾರಿನಿಂದ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಹೋಗಬೇಕು. ಅರ್ಧದಾರಿಯಲ್ಲಿ ನಮ್ಮೂರಿನ ಪರಶುರಾಮ ದೇವಸ್ಥಾನ ಸಿಗುತ್ತದೆ. ಅದು ನಮ್ಮ ಚಿತ್ಪಾವನ ಸಮುದಾಯದ ದೇವಾಲಯ. (ಕಾರ್ತಿಕ ಮಾಸದ ಹುಣ್ಣಿಮೆಯಂದು- ಈ ವರ್ಷ ನಾಳೆ ಸೋಮವಾರ ಅಲ್ಲಿ ಲಕ್ಷ ದೀಪೋತ್ಸವ. ಈ ವಾರದ ಅಂಕಣದಲ್ಲಿ ನಮ್ಮೂರಿನ ಚಿತ್ರಣದ ಲಹರಿಯನ್ನು ಹರಿಯಬಿಡೋಣವೆಂಬ ಆಲೋಚನೆ ಬಂದದ್ದು ಲಕ್ಷದೀಪೋತ್ಸವದ ನೆನಪಿನಿಂದಲೇ). ಲೇಖನದ ಆರಂಭದಲ್ಲಿ ನಮ್ಮನೆ ಕೆಲಸದಾಳು ಕೋಟಿ ಗೌಡನ ಉಲ್ಲೇಖ ಮಾಡಿದೆನಷ್ಟೆ? ಮಲೆಕುಡಿಯ ಸಮುದಾಯದ ಆತನ ಮನೆ ಇದ್ದದ್ದು ಅಕ್ಷರಶಃ ಮಲೆಯಲ್ಲೇ. ನಮ್ಮ ಮನೆಯಿಂದ ಸುಮಾರು ಒಂದೂವರೆ ಮೈಲು ದೂರ ದಟ್ಟ ಅಡವಿಯೊಳಗೆ. ಆ ಜಾಗಕ್ಕೆ ಬೆಜ್ಜಾಲೆ ಎಂದು ಹೆಸರು. ಕಚ್ಚಾ ರಸ್ತೆಯೂ ಇಲ್ಲ, ಕಾಡಿನಲ್ಲಿ ಕಲ್ಲುಮುಳ್ಳಿನ ಹಾದಿಯಲ್ಲಿ ಹೋಗಬೇಕು. ಅಲ್ಲಿ ಕೋಟಿ ಗೌಡ, ಅವನ ಭಾವಂದಿರು ಮೂರು ಜನ ಮತ್ತವರ ತಂದೆ ಜಿನ್ನಪ್ಪ ಎಂಬ ಹಣ್ಣುಹಣ್ಣು ಮುದುಕ- ಇವರೆಲ್ಲ ಪುಟ್ಟದೊಂದು ಗುಡಿಸಲಿನಲ್ಲಿ ಕೂಡು ಕುಟುಂಬವಾಗಿ ಜೀವನ ನಡೆಸುತ್ತಿದ್ದರು. ಹಸು-ಕರು ಸಾಕಿದ್ದರು, ಹಣ್ಣು-ತರಕಾರಿ ಬೆಳೆಸಿದ್ದರು. ರಾಮಪತ್ರೆ, ಏಲಕ್ಕಿ, ಜೇನು ಮುಂತಾಗಿ ಕಾಡುತ್ಪತ್ತಿಗಳನ್ನು ಸಂಗ್ರಹಿಸುತ್ತಿದ್ದರು. ಬೆತ್ತದಬುಟ್ಟಿ ತಯಾರಿಸಿ ಮಾರುತ್ತಿದ್ದರು. ಊರಿನಲ್ಲಿ ಅಡಿಕೆ ತೋಟಗಳಲ್ಲಿ ಕೂಲಿಕೆಲಸ ಮಾಡಿಕೊಂಡಿರುತ್ತಿದ್ದರು. ಶ್ರಮಭರಿತ, ಸ್ವಾಭಿಮಾನದ ಬದುಕು ಅವರದು.

ಅಂಥ ಬೆಜ್ಜಾಲೆಯಲ್ಲಿ ಕೋಟಿ ಗೌಡನ ಮಗಳ ಮದುವೆಯ ಸಡಗರ. ಅದ್ಧೂರಿ ಎಂದೇ ಹೇಳಬಹುದಾದ ಸಮಾರಂಭದ ಯೋಜನೆ ಕೋಟಿ ಗೌಡನದು. ದೊಡ್ಡದೊಡ್ಡ ಹಂಡೆ, ತಪ್ಪಲೆ, ಸಟ್ಟುಗ ಮುಂತಾದ ಪಾತ್ರೆಪರಡಿಗಳನ್ನು, ಚಾಪೆ, ಜಮಖಾನ, ಪೆಟ್ರೊಮ್ಯಾಕ್ಸ್ ಇತ್ಯಾದಿ ಸರಂಜಾಮುಗಳನ್ನು ನಮ್ಮನೆಯಿಂದ ತೆಗೆದುಕೊಂಡು ಹೋಗಿದ್ದ. ಹಾಗೆ ಮದುವೆಯ ಆಟ್ಟಣೆ(ತಯಾರಿ)ಯಲ್ಲಿ ಅವನು ವ್ಯಸ್ತನಾಗಿದ್ದಾಗಲೇ ನಾವು ಪ್ರಶ್ನೆ ಕೇಳಿದ್ದು ಮತ್ತು ಫಣ್ಯಾಕ್ಳು ಮಾತೆರ್ಲಾ ಬತ್ತೇರ್ಡಾಾ… ಎಂದು ಆತ ಉತ್ತರಿಸಿದ್ದು. ಸ್ವಾರಸ್ಯವೆಂದರೆ ಅವನ ಎಸ್ಟಿಮೇಟಿನ ಆ 100 ಜನರಲ್ಲಿ ನಾವೂ ಸೇರಿದ್ದೆವು! ನಮ್ಮೆಲ್ಲರಿಗೂ ಪ್ರೀತ್ಯಾದರದ ಆಮಂತ್ರಣ ಇತ್ತು. ಬೆಜ್ಜಾಲೆಗೆ ಹೋಗುವುದೇ ಒಂದು ವಿಶೇಷ ಸಂಭ್ರಮ ಎಂದುಕೊಳ್ಳುತ್ತಿದ್ದ ನಾನು, ನನ್ನ ಅಕ್ಕಂದಿರು ನಮ್ಮ ತಂದೆಯವರೊಟ್ಟಿಗೆ ಆ ಮದುವೆ ಸಮಾರಂಭಕ್ಕೆ ಹೋಗಿದ್ದೆವು. ಬಾಳೆಹಣ್ಣು, ಬೆಲ್ಲ ಹಾಕಿದ ಅವಲಕ್ಕಿ, ಸಿಯಾಳ ಮುಂತಾದ ವಿಶೇಷ ಆತಿಥ್ಯ ಸವಿದಿದ್ದೆವು. ವಧೂವರರನ್ನು ಹರಸಿ ಬಂದಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಅಂಥ ಗೊಂಡಾರಣ್ಯದಲ್ಲಿ ಚಂದದ ಸಮಾರಂಭವೊಂದನ್ನು ಆಸ್ಥೆಯಿಂದ, ಅಚ್ಚುಕಟ್ಟುತನದಿಂದ ನಿರ್ವಹಿಸಿದ ಕೋಟಿ ಗೌಡ ಮತ್ತವನ ಬಳಗದ ಕಾರ್ಯಕ್ಷಮತೆ ಕಂಡು ಖುಷಿ ಪಟ್ಟಿದ್ದೆವು.

ಸಂಪರ್ಕ ಸಾಧನಗಳ ಬಳಕೆ ಇರಲಿ ಅವುಗಳ ಹೆಸರು ಕೇಳಿಯೂ ಗೊತ್ತಿಲ್ಲ. ಪತ್ರವ್ಯವಹಾರ ಮಾಡುವುದಕ್ಕೆ ಅಕ್ಷರಜ್ಞಾನವೂ ಇಲ್ಲ. ಎಲ್ಲವೂ ಮೌಖಿಕವಾಗಿಯೇ ಆಗಬೇಕು. ಅಂಥಾದ್ರಲ್ಲಿ ಆಮಂತ್ರಿತರೆಲ್ಲರೂ ಬಂದರೆ ನೂರು ಜನ ಆಗಬಹುದು ಎಂಬ ಕೋಟಿ ಗೌಡನ ಎಸ್ಟಿಮೇಟ್ ಮತ್ತು ಅದು ಬಹಳಮಟ್ಟಿಗೆ ಕರಾರುವಾಕ್ಕಾಗಿ ತಾಳೆಯಾದದ್ದನ್ನು ಇವತ್ತು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ! ಈಗ ವಾಟ್ಸ್ಯಾಪು, ಫೇಸ್‌ಬುಕ್ಕು, ಇಮೇಲು… ಎಲ್ಲವೂ ಅಂಗೈಯಲ್ಲೇ ಜಗಜ್ಜಾಲ ಇರುವ ದಿನಗಳಲ್ಲಿ ನಮಗೆ ಸಮಾರಂಭವೊಂದಕ್ಕೆ ಎಷ್ಟು ಜನ ಸೇರಬಹುದು ಎಂದು ನಿಖರವಾಗಿ ಅಂದಾಜು ಹಾಕಲಿಕ್ಕಾಗುವುದಿಲ್ಲ. ಒಂದೋ ನಾವೆಣಿಸಿದಷ್ಟು ಜನರು ಬರುವುದಿಲ್ಲ ಅಥವಾ ನಮ್ಮೆಣಿಕೆಗಿಂತ ಹೆಚ್ಚು ಜನ ಬಂದು ನಾವು ಮಾಡಿದ ವ್ಯವಸ್ಥೆಗಳೆಲ್ಲ ಏರುಪೇರಾಗಿ ಮುಜುಗರ ಪಡುವಂಥ ಪರಿಸ್ಥಿತಿ.

ಮತ್ತೆ ನಾಲ್ಕೈದು ದಶಕಗಳ ಹಿಂದಿನ ನಮ್ಮೂರಿನ ವಿಶಿಷ್ಟ ಪದ್ಧತಿಯೊಂದನ್ನು ತಿಳಿಸುತ್ತೇನೆ. ನಮ್ಮೂರಿನ ಎಂದು ಜನರಲೈಸ್ ಮಾಡುವುದಕ್ಕಿಂತ ನಮ್ಮ ಚಿತ್ಪಾವನ ಸಮುದಾಯದ ಎಂದು ನಿರ್ದಿಷ್ಟವಾಗಿ ಹೇಳುವುದು ಒಳ್ಳೆಯದು. ಆಗೆಲ್ಲ ಕೂಡು ಕುಟುಂಬಗಳ ದೊಡ್ಡ ಸಂಸಾರಗಳು. ಮನೆಗಳೂ ದೊಡ್ಡವು, ಮನೆ ತುಂಬ ಜನರು. ಮದುವೆ-ಮುಂಜಿ ಮುಂತಾದ ಸಮಾರಂಭಗಳು, ಚಂಡಿಕಾಹೋಮ, ದುರ್ಗಾನಮಸ್ಕಾರ, ಸತ್ಯನಾರಾಯಣಪೂಜೆ ಮುಂತಾದ ದೇವತಾಕಾರ್ಯಗಳು ಎಲ್ಲರ ಮನೆಗಳಲ್ಲೂ ತಕ್ಕಮಟ್ಟಿಗೆ ವೈಭವದಿಂದಲೇ ನಡೆಯುತ್ತಿದ್ದವು. ಊರಲ್ಲಿ ಎಲ್ಲ ಮನೆಗಳವರನ್ನೂ ಆಮಂತ್ರಿಸಿ ಅದ್ಧೂರಿ ಸಮಾರಂಭಗಳು ಕೆಲವಾದರೆ ಅಕ್ಕಪಕ್ಕದ ಮನೆಗಳವರನ್ನು ಮಾತ್ರ ಆಹ್ವಾನಿಸಿ ಆತ್ಮೀಯ ಸಮಾರಂಭಗಳು ಇನ್ನು ಕೆಲವು. ಇದಲ್ಲದೇ, ವಿಶಿಷ್ಟ ರೀತಿಯ ಆಹ್ವಾನ ಕ್ರಮವೂ ಒಂದಿತ್ತು. ಅದೇನೆಂದರೆ, ನಮ್ಮನೇಲಿ ಇಂಥ ದಿನ ಇಂಥ ಸಮಾರಂಭ ಇದೆ. ನಿಮ್ಮಲ್ಲಿಂದ ಒಬ್ಬರು ಮಧ್ಯಾಹ್ನ ಊಟಕ್ಕೆ ಅಗತ್ಯವಾಗಿ ಬರಬೇಕು ಎಂಬ ರೀತಿಯ ಆಮಂತ್ರಣ! ಅಂದರೆ, ಆ ಮನೆಯವರೆಲ್ಲರನ್ನೂ ಆಹ್ವಾನಿಸುವುದಲ್ಲ, ಯಾರಾದರೂ ಒಬ್ಬರು ಬನ್ನಿ ಎಂದು ಕರೆಯುವುದು. ಅದನ್ನು ಯಾರೂ ತಪ್ಪಾಗಿ ತಿಳಿದುಕೊಳ್ಳುತ್ತಿರಲಿಲ್ಲ. ಏಕೆಂದರೆ ಅವರ ಮನೆಯ ಸಮಾರಂಭಕ್ಕೆ ಅವರೂ ಹಾಗೆಯೇ ಆಮಂತ್ರಿಸುತ್ತಿದ್ದರು. ಅದೊಂಥರ ಸ್ವೀಕೃತ ವಾಡಿಕೆಯೇ ಆಗಿತ್ತು.

ಬಹುಶಃ ನಿಮಗನಿಸಿರಬಹುದು ಹೀಗೂ ಉಂಟೇ? ಎಂದು. ಈಗ ಆ ಪದ್ಧತಿ ಇಲ್ಲ ಬಿಡಿ. ಈಗ ಪ್ರತಿಯೊಂದು ಮನೆಯಲ್ಲಿ ಇರೋದೇ ಇಬ್ಬರು ಅಥವಾ ಹೆಚ್ಚೆಂದರೆ ಮೂರು ಮಂದಿ. ಹಾಗಾಗಿ ಒಬ್ಬರು ಬನ್ನಿ ಎಂದರೂ, ಎಲ್ಲರೂ ಬನ್ನಿ ಎಂದರೂ ವ್ಯತ್ಯಾಸವಿಲ್ಲ. ಎಷ್ಟೋ ಸಲ ಸಮಾರಂಭಕ್ಕೆ ಹೋಗಲು ಒಬ್ಬರಿಗೂ ಪುರುಸೊತ್ತೇ ಇಲ್ಲವಾಗುವುದೂ ಇದೆ. ಆದರೆ ಹಿಂದಿನ ಕಾಲದ ಆ ಪದ್ಧತಿಯಲ್ಲಿ ಒಂದು ಒಳ್ಳೆಯ ಅರ್ಥ ಮತ್ತು ಉದ್ದೇಶ ಇತ್ತೆಂದು ನನಗೆ ಈಗ ತೋಚುತ್ತಿದೆ. ಒಂದನೆಯದಾಗಿ ದೊಡ್ಡ ಸಂಸಾರಗಳ ಮನೆಗಳವರನ್ನು ಎಲ್ಲರೂ ಬನ್ನಿ ಎಂದು ಕರೆದರೆ ಒಟ್ಟಾರೆಯಾಗಿ ಸಮಾರಂಭಕ್ಕೆ ಎಷ್ಟು ಜನ ಸೇರಬಹುದು ಎಂದು ಅಂದಾಜಿಸುವುದಕ್ಕೆ, ಆ ಪ್ರಕಾರ ಅಡುಗೆ ಮತ್ತಿತರ ತಯಾರಿಗೆ ಕಷ್ಟವಾಗುವುದೇನೋ ಹೌದು. ಎಲ್ಲ ಮನೆಗಳವರನ್ನು ಎಲ್ಲರೂ ಬನ್ನಿ ಎಂದು ಆಹ್ವಾನಿಸಿ ಅಷ್ಟು ದೊಡ್ಡ ಸಮಾರಂಭ ಏರ್ಪಡಿಸುವ ಶಕ್ತಿ ಸಾಮರ್ಥ್ಯ ಎಲ್ಲರಿಗೂ ಇರುತ್ತಿರಲಿಲ್ಲ ಎನ್ನುವುದೂ ನಿಜವೇ. ಆದರೆ ಮುಖ್ಯ ಕಾರಣ ಅದಲ್ಲ. ಎಂಟು-ಹತ್ತು ಮನೆಗಳವರನ್ನು ಎಲ್ಲರೂ ಬನ್ನಿ ಎಂದು ಆಹ್ವಾನಿಸಿ ಸಮಾರಂಭ ಮಾಡುವುದಕ್ಕಿಂತ ಐವತ್ತು ಮನೆಗಳವರನ್ನು ನಿಮ್ಮಲ್ಲಿಂದ ಒಬ್ಬರು ಬನ್ನಿ ಎಂದು ಆಹ್ವಾನಿಸಿ ಸಮಾರಂಭ ಏರ್ಪಡಿಸುವುದರಲ್ಲಿ ಉದಾತ್ತತೆಯ ಉದ್ದೇಶವಿರುತ್ತಿತ್ತು. ದೇವತಾ ಕಾರ್ಯಗಳ ಸಮಾರಂಭಗಳಿಗೆ ಹೆಚ್ಚಾಗಿ ಆ ರೀತಿ ಆಹ್ವಾನಿಸುವ ಕ್ರಮ ಇತ್ತು. ನಮ್ಮೂರಿನ ದೇವಸ್ಥಾನದಲ್ಲಿ ದೀಪೋತ್ಸವದ ದಿನಗಳಲ್ಲಿ ಮತ್ತು ವರ್ಷದಲ್ಲಿ ಬೇರೆಬೇರೆ ಪರ್ವದಿನಗಳಲ್ಲಿ ಮಧ್ಯಾಹ್ನ ಭೋಜನ ಸಮಾರಾಧನೆ ನಡೆಸುವವರೂ ಊರವರು ಮನೆಗೊಬ್ಬರಂತೆ ಬಂದು ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ ಎಂದು ಆಮಂತ್ರಿಸುತ್ತಿದ್ದರು. ಉದ್ದೇಶ ಇಷ್ಟೇ- ಮನೆಗೊಬ್ಬ ಪ್ರತಿನಿಧಿಯಂತೆ ಸಮುದಾಯದ ಎಲ್ಲ ಮನೆಗಳವರೂ ಬಂದು ಭಾಗವಹಿಸಲಿ. ದೇವರ ಪ್ರಸಾದ ಎಲ್ಲ ಮನೆಗಳನ್ನೂ ತಲುಪಲಿ ಎಂದು. ಅದು ಎಲ್ಲರೂ ಅರ್ಥ ಮಾಡಿಕೊಂಡಿದ್ದ ಕ್ರಮವೇ ಆದ್ದರಿಂದ ಅನ್ಯಥಾ ಭಾವಿಸುವ ಸಾಧ್ಯತೆ ಇಲ್ಲ. ಇಂತಿಷ್ಟು ಜನರು ಬರಬಹುದು ಎಂದು ಕರಾರುವಾಕ್ಕಾಗಿ ಅಂದಾಜಿಸುವುದಕ್ಕೂ ಅನುಕೂಲ.

ಸಮಾರಂಭಗಳ ಆಹ್ವಾನಪತ್ರಿಕೆಗಳಲ್ಲಿ R.S.V.P. ಎಂದು ನಮೂದಿಸಿರುವುದನ್ನು ನೀವು ನೋಡಿರಬಹುದು. ಅದು ಫ್ರೆಂಚ್ ಮೂಲದ Repondez  s’il vous plait ಎಂಬ ವಾಕ್ಯದ ಹ್ರಸ್ವರೂಪ. ನೀವು ಸಂಪ್ರೀತರಾದರೆ ದಯವಿಟ್ಟು ಉತ್ತರಿಸಿ ಎಂದು ಅರ್ಥ. ಆಹ್ವಾನ ಪತ್ರಿಕೆ ಸ್ವೀಕರಿಸಿದ ಮೇಲೆ ಆ ಸಮಾರಂಭಕ್ಕೆ ಹೋಗುತ್ತಿದ್ದೇವೋ ಹೋಗಲಾಗುತ್ತಿಲ್ಲವೋ ಎಂದು ಆತಿಥೇಯರಿಗೆ ತಿಳಿಸುವ ಏರ್ಪಾಡು. ಎಷ್ಟು ಜನ ಸೇರಬಹುದು ಎಂದು ಆತಿಥೇಯರಿಗೆ ಅಂದಾಜು ಮಾಡಲಿಕ್ಕೆ ಅನುಕೂಲವಾಗುವಂತೆ ಕಲ್ಪಿಸಿದ ವ್ಯವಸ್ಥೆ. ಇನ್ನೊಂದು ರೂಪ regrets only ಅಂತಲೂ ಇದೆ. ಆಮಂತ್ರಣ ತಲುಪಿದವರು ಸಮಾರಂಭಕ್ಕೆ ಬಂದೇ ಬರುತ್ತಾರೆ ಎಂದು ಆತಿಥೇಯರು ತಿಳಿದುಕೊಳ್ಳುತ್ತಾರೆ, ಬರಲಿಕ್ಕಾಗದಿದ್ದರೆ ಮಾತ್ರ ತಿಳಿಸಬೇಕು. ಅಲ್ಲೂ ಅದೇ ಉದ್ದೇಶ- ಎಷ್ಟು ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು ಎಂದು ಅಂದಾಜಿಸಲಿಕ್ಕೆ ಅನುಕೂಲ. ಆದರೆ ನಾವು ಭಾರತೀಯರು ಗೊತ್ತಲ್ಲ, ಉದಾಸೀನ ಉಡಾಫೆ ಮನೋಭಾವದವರು. ಸಮಾರಂಭಕ್ಕೆ ಹೋಗ್ತಿನೋ ಇಲ್ಲವೋ ಈಗಲೇ ಹೇಳಲಿಕ್ಕಾಗದು. ಆವತ್ತಿನ ದಿನ ಎಲ್ಲ ಒದಗಿ ಬಂದರೆ ಊಟದ ಹೊತ್ತಿಗೆ ಪ್ರತ್ಯಕ್ಷನಾಗುತ್ತೇನೆ ಎಂದುಕೊಳ್ಳುವವರು. ಅದರಿಂದ ಆತಿಥೇಯರಿಗೆ ಎಷ್ಟು ತೊಂದರೆ ಆಗುತ್ತದೆ ಎನ್ನುವ ಬಗ್ಗೆಯೆಲ್ಲ ನಾವು ಡೋಂಟ್ ಕೇರ್. ಇಲ್ಲಿ ಕನ್ನಡ ಕೂಟಗಳ ಸಮಾರಂಭಗಳಲ್ಲಿ ಇದೊಂದು ದೊಡ್ಡ ಪಿಡುಗು. ಆರೆಸ್ವಿಪಿ ಮಾಡಿ ಎಂದು ಎಷ್ಟು ಬೇಡಿಕೊಂಡರೂ ಜನರು ಸ್ಪಂದಿಸುವುದಿಲ್ಲ. ಸಮಾರಂಭ ಸಂಜೆ ಐದಕ್ಕೆ ಆರಂಭ ಅಂತಿದ್ದರೆ ಸುಮಾರು ಆರೂವರೆ-ಏಳರವರೆಗೆ ಪದಾಧಿಕಾರಿಗಳು ಮತ್ತು ಹತ್ತಿಪ್ಪತ್ತು ಜನರು ಮಾತ್ರ. ಏಳೂವರೆಗೆ ಸಭಾಂಗಣ ಫುಲ್. ಊಟದ ವೇಳೆಗೆ ಎಲ್ಲರೂ ಹಾಜರ್! ಅನಕ್ಷರಸ್ಥ ಕೋಟಿ ಗೌಡನ ನಿಖರತೆ ನನಗೆ ಮೆಚ್ಚುಗೆಯಾಗುವುದು ಅದೇ ಕಾರಣಕ್ಕೆ. ಈಗ ಅವನಿಲ್ಲ. ತೀರಿಹೋದ ಎಂದು ಕಳೆದ ಸರ್ತಿ ಊರಿಗೆ ಹೋಗಿದ್ದಾಗ ಅಣ್ಣ ಹೇಳಿದರು. ಆದರೆ ಅವನ ಫಣ್ಯಾಕ್ಳು ಮಾತೆರ್ಲಾ… ಮಾತ್ರ ಈಗಲೂ ನಮ್ಮ ಮನೆಯಲ್ಲಿ/ಮನದಲ್ಲಿ ಕೇಳಿಸುತ್ತದೆ. ಯಾವುದೇ ಸಮಾರಂಭದ ತಯಾರಿಯಲ್ಲಿ ಅಭ್ಯಾಗತರ ಸಂಖ್ಯೆಯ ಅಂದಾಜನ್ನು ನಿಖರವಾಗಿ ತಿಳಿಸುತ್ತದೆ.

One thought on “‘ಫಣ್ಯಾಕ್ಳು ಮಾತೆರ್ಲಾ ಬತ್ತೇರ್ಡಾ ನೂದು ಜನ ಆವು’

Leave a Reply

Your email address will not be published. Required fields are marked *

12 + 9 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top