About Us Advertise with us Be a Reporter E-Paper

ಯಾತ್ರಾ panel 1

ಫುಲ್ ಪೈಸಾ ವಸೂಲ್ ಟ್ರಿಪ್ ದಾಂಡೇಲಿ

ವಿ.ಎನ್.ವೆಂಕಟಲಕ್ಷ್ಮೀ

ಪಶ್ಚಿಮ ಘಟ್ಟದ ಕಾಳಿ ನದಿ ದಂಡೆಯ ಮೇಲೆ ಹಬ್ಬಿದೆ ಪಚ್ಚೆ ಹಸುರಿನ ಪ್ರವಾಸಿ ತಾಣ ದಾಂಡೇಲಿ. ದಂಡ ಕಾರಣ್ಯ ಎಂಬ ಪುರಾಣ ಪ್ರಸಿದ್ಧ ಹೆಸರೂ ಇದಕ್ಕಿದೆ. ದಂಡಕ ಅಂದರೆ ಬಿದಿರು ಹೇರಳವಾಗಿ ಈ ಕಾಡಿನಲ್ಲಿ ಸಿಗುವುದರಿಂದಲೂ ಈ ಹೆಸರು ಬಂದಿದೆ ಎನ್ನುತ್ತಾರೆ. ವಾಯು ಮಾಲಿನ್ಯದಿಂದ ಹೈರಾಣಾದವರಿಗೆ ಸ್ವಚ್ಛ ತಂಪು ಹವೆ. ಕಣ್ಣು ಹಾಯಿಸುದಷ್ಟೂ ಅಭೇದ್ಯವಾಗಿ ಹರಡಿರುವ ಕಾಡು ನಿರ್ಮಿ ಸುವ ನಿಸ್ಪಂದ ವಾತಾ ವರಣ, ಕಪ್ಪಗೆ ಹೊಳೆಯುತ್ತ ಹರಿವ ‘ಕಾಳಿ’ ಬೋಟಿಂಗ್, ತೆರೆದ ಜೀಪಿನಲ್ಲಿ ಚುಮು ಚುಮು ನಸುಕು ಕಾಡುಪ್ರಾಣಿಗಳನ್ನು ನೋಡಲು ‘ಸಫಾರಿ’ ಹೋಗು ವುದು…ಹೀಗೆ ಹಲವು ಚಟುವಟಿಕೆಗಳು ಮೇಳೈಸಿರುವ ‘ಫುಲ್ ಪೈಸಾ ವಸೂಲ್’ ಟ್ರಿಪ್ ಅದು.

ಹೋಗಿ, ಅಲ್ಲಿ ಸ್ಥಾಪಿತರಾಗಿ, ನಿಸರ್ಗ ನೋಡಬೇಕೆಂದರೆ ಶಿರೋಲಿ ಗುಡ್ಡ, ಮೌಲಂಗಿ ಜಲಪಾತ, ಕವಳ ಗುಹೆ, ಶಿವಾಜಿ ಕೋಟೆ ಇತ್ಯಾದಿ ನೋಡಲು ತೆರಳಬಹುದು. ಧಾರ್ಮಿಕ ಮನೋ ಭಾವದವರಿಗೆ ಉಳವಿ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇಗುಲ, ಸ್ಥಳೀಯ ದೈವ ದಾಂಡೇಲಪ್ಪನ ಗುಡಿ ಪ್ರಶಾಂತ ಪರಿಸರದಲ್ಲಿ ಮುಳು ಗೇಳಿಸುತ್ತದೆ. ಐತಿಹಾಸಿಕ ಮಹತ್ವದ ಪ್ರಾಚೀನ ದೇಗುಲಗಳು.

ಹಲವು ಸಸ್ಯ-ಪ್ರಾಣಿ ಪ್ರಭೇದಗಳನ್ನು ಹೊಂದಿರುವ ಖ್ಯಾತಿ ದಾಂಡೇಲಿಯ ಕಾಡಿಗಿದೆ. ಹಾಗಾಗಿ ವನ್ಯಜೀವಿ ವೀಕ್ಷಣೆಯಲ್ಲಿ ಉತ್ಸಾಹ ಇರುವವರು ಕಡ್ಡಾಯವಾಗಿ ಒಮ್ಮೆ ಅಲ್ಲಿಗೆ ಹೋಗಬೇಕು. ಬಸ್‌ನಿಲ್ದಾಣದಿಂದ ಸುಮಾರು 13 ಕಿ.ಮೀ. ದೂರ ದಲ್ಲಿರುವ ಅರಣ್ಯದಲ್ಲಿ ಸಫಾರಿ ಹೋದರೆ ಕಪ್ಪು ಚಿರತೆ, ಕಾಡುಕೋಣ, ಆನೆ, ಹಾರ್ನ್‌ಬಿಲ್ ಪಕ್ಷಿ, ಮರಕುಟಿಗ ಹಕ್ಕಿ ದೂರ ದಿಂದಲೇ ದರ್ಶನ ದಯಪಾಲಿಸುತ್ತವೆ. ಸ್ವಲ್ಪ ವ್ಯವಧಾನ ಇಟ್ಟುಕೊಂಡು 2-3 ದಿನ ಪ್ರಯತ್ನಿಸಿದರಂತೂ ಪಕ್ಷಿ ಸುಗ್ಗಿ. ಕಾಡಿನೊಳಗೇ ನಿರ್ಮಿಸಲಾಗಿ ರುವ ರೆಸಾರ್ಟ್‌ಗಳು ಹಲವು ಇರುವುದು ಇದಕ್ಕೆ ಅನುಕೂಲಕರ.

ಹಸಿರು ತಾಣಗಳನ್ನು ಸುತ್ತಿ, ಬಳಸಿ, ಭೋರ್ಗರೆಯುತ್ತ ಹರಿವ ಕಾಳಿ ಒಂದು ಜಬರ್ದಸ್ತ್ ನದಿ ಎಂಬ ಭಾವನೆ ದೂರನೋಟದಲ್ಲೇ ಮೂಡುತ್ತದೆ. ಬಸ್ ನಿಲ್ದಾಣದಿಂದ 2.9 ಕಿ.ಮೀ. ದೂರವಿರು ವುದರಿಂದ ಹತ್ತು ನಿಮಿಷ ನಡೆದರೆ ಸಾಕು. ಜಾಕೆಟ್, ದುರ್ಬೀನು ವಗೈರೆಗಳಿಂದ ಭೂಷಿತರಾಗಿ ವಿಶಾಲವಾಗಿರುವ ದೋಣಿಗಳಲ್ಲಿ ಕುಳಿತು ಬೋಟಿಂಗ್ ಹೊರಟರೆ ದೇಹ, ಮನಸ್ಸು ಎರಡೂ ತಂಪು, ತಂಪು.

ಕವಳ ಗುಹೆಗಳು
ಪೂರ್ವದಲ್ಲಿ ಅಗ್ನಿಪರ್ವತಗಳಿಂದ ನಿರ್ಮಿತವಾದವು ಎನ್ನಲಾ ಗುವ ಈ ಗುಹೆಗಳು ದಾಂಡೇಲಿಯ ಸಂರಕ್ಷಿತ ಅರಣ್ಯ ಪ್ರದೇಶ ದಲ್ಲಿವೆ. ಸುಮಾರು 375 ಮೆಟ್ಟಿಲು ಕೆಳಗಿಳಿದ ಮೇಲೆ ಸುಣ್ಣದ ಕಲ್ಲಿನ ಗುಹೆಗಳು ಕಾಣಿಸುತ್ತವೆ. ತಳದಿಂದೆದ್ದು ಶೇಖರವಾಗಿರುವ ಕಲ್ಲು ಗಳನ್ನು ‘ಸ್ಟಾಲಗಮೈಟ್’ ಎಂದು ಕರೆಯುತ್ತಾರೆ. ಸುಣ್ಣದ ಕಲ್ಲಿನ ಗುಹೆ ಗಳಲ್ಲಿ ಮಾತ್ರ ಕಾಣಸಿಗುವ ಇವು ಮುಖ್ಯವಾಗಿ ಕ್ಯಾಲ್ಷಿಯಂ ಕಾರ್ಬೊನೇಟ್ ರಾಸಾಯನಿಕವನ್ನು ಹೊಂದಿರುತ್ತವೆ. ಇಲ್ಲೂ ಸುತ್ತಲೂ ಹಸಿರಿನ ಕವಚ.

ಕಿರಿದಾದ ದಾರಿಗಳಲ್ಲಿ ಮೆಟ್ಟಿಲುಗಳನ್ನು ಹತ್ತುತ್ತ, ಇಳಿಯುತ್ತ ಸಾಗುವುದು ಧಾರಾಳವಾಗಿ ಒಂದು ‘ವರ್ಕ್‌ ಔಟ್’ ಒದಗಿಸುತ್ತದೆ. ಪ್ರವೇಶದಲ್ಲಿ ಇರುವ ಒಂದು ದೇವಸ್ಥಾನದಲ್ಲಿ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಶಿವಲಿಂಗ ನೋಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕವಳದ (ಎಲೆಅಡಕೆ)ಅಡಕೆಯಂತೆ ಅದರ ರಚನೆ ಇರುವುದರಿಂದ ಗುಹೆಗಳಿಗೆ ಈ ಹೆಸರು. ಅಕ್ಟೋಬರ್‌ನಿಂದ ಮಾರ್ಚ್- ಗುಹೆಗಳ ವೀಕ್ಷಣೆಗೆ ಪ್ರಶಸ್ತ.

ಸಿಂಥೆರಿಕ್ ರಾಕ್ಸ್
ಒಬ್ಬ ಆಂಗ್ಲ ಮಹಿಳೆ ಈ ಶಿಲೆಗಳನ್ನು ಅನ್ವೇಷಿಸಿದ್ದಾಗಿ ಪ್ರತೀತಿ. ಸಿಂಥಾರಾ ಹೆಸರಿನ ಆಕೆಯ ಗೌರವಾರ್ಥ ಅವು ಗಳನ್ನು ಸಿಂಥೆರಿಕ್ ಎಂದು ಕರೆಯಲಾಗಿದೆ. ಇದು ಸಹ ಅರಣ್ಯಪ್ರದೇಶದ ಒಂದು ಭಾಗವೇ. ಅಗ್ನಿಪರ್ವತದಿಂದ ನಿರ್ಮಾಣಗೊಂಡ ಶಿಲೆಗಳ ಬದಿಯಲ್ಲಿ ಕನೇರಿ ನದಿ ಹರಿಯುತ್ತದೆ. ಛಾಯಾಗ್ರಾಹಕರಿಗೆ ಎಷ್ಟು ಫೋಟೊ ಕ್ಲಿಕ್ಕಿಸಿದರೂ ಸಾಲದು ಎನಿಸುವಂತಹ ಟೋಪೊ ಗ್ರಫಿ ಭಂಡಾರ. ಭೇಟಿಗೆ ಮುನ್ನ ಪ್ರವಾಸಿಗರು ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು ಎಂಬ ನಿಬಂಧನೆ ಇದೆ.

ಶಿರೋಲಿ ಗುಡ್ಡ
ಉತ್ತರ ಕನ್ನಡ ಭೂ ಭಾಗದ ಅತ್ಯಂತ ಎತ್ತರವಾದ ಪಾಯಿಂಟ್ ಎಂಬ ಖ್ಯಾತಿ ಇರುವ ಶಿರೋಲಿ ಗುಡ್ಡ ಚಾರಣಿ ಗರಿಗೆ ಒಂದು ಸವಾಲು. ಅರಣ್ಯ ಪೂರ್ವಾನುಮತಿ ಪಡೆದು ಚಾರಣ ಮಾಡಬಹುದು. ಭೂಮಿಯ ಮೇಲೆಯೇ ಇದ್ದೇವೆಯೋ ಅಥವಾ ಬೇರೆಲ್ಲಾದರೂ ಬಂದೆವೋ ಎಂದು ಅನಿಸುವಷ್ಟು ಮಂತ್ರಮುಗ್ಧರಾಗಿಸುವ ಪರಿಸರ.

ಸೈಕ್ಸ್ ವ್ಯೂಪಾಯಿಂಟ್
ಇದನ್ನು ಕಂಡು ಹಿಡಿದ ಬ್ರಿಟಿಷ್ ಎಂಜಿನಿಯರ್ ಹೆಸರನ್ನೇ ‘ಪಾಯಿಂಟ್’ಗೆ ಇಡ ಲಾಗಿದೆ. ಅನಾಚ್ಛಾದಿತ ನಿತ್ಯ ಹರಿದ್ವರ್ಣ ಕಾಡಿನ ಒಂದು ವಿಹಂಗಮ ನೋಟವನ್ನು ಇಲ್ಲಿ ನಿಂತು ಕಣ್ತುಂಬಿಕೊಂಡು, ಮನ ದಲ್ಲಿ ದಾಖಲಿಸಿಕೊಂಡರೆ ವಿದಾಯ ಹೇಳುವುದು ಸುಲಭ. ನಗಸಾರಿ ಹಾಗೂ ಕಾಳಿ ನದಿ ಸಂಗಮದ ನೋಟವೂ ಈ ಲಭ್ಯ. ಸಹ್ಯಾದ್ರಿ ಮೇಘ ಮಾಲೆಗೆ ತೋರಣ ದಂತಿರುವ ದೈತ್ಯ ಹಾರ್ನ್‌ಬಿಲ್‌ಗಳ ಹಾರಾಟ, ಹಸಿರಿನ ಹಿನ್ನೆಲೆ ಯಲ್ಲಿ ಹೊಳೆವ ಸೂರ್ಯಾಸ್ತದ ರಂಗಿನೋಕುಳಿ ಸಂಜೆಗೆ ಬೋನಸ್.

Tags

Related Articles

Leave a Reply

Your email address will not be published. Required fields are marked *

Language
Close