ಬದುಕೆಂಬ ಬಟ್ಟೆಯ ಸುಕ್ಕು ತೋರಿದ ಇಸ್ತ್ರಿಪೆಟ್ಟಿಗೆ

Posted In : ಅಂಕಣಗಳು, ಪ್ರಾಣೇಶ್ ಪ್ರಪಂಚ್

ನನಗೆ ಸುಕ್ಕುಗಳೆಂದರೆ ಆಗದು. ಯಾವ ವಸ್ತು ಎಲ್ಲಿರಬೇಕೋ ಅಲ್ಲೇ ಇರಬೇಕು. ಅಲ್ಲೇ ಇದ್ದರೆ ಮಾತ್ರ ಸಮಾಧಾನ. ಇದು ಆ ದೇವರು ನನ್ನ ಸ್ವಭಾವ, ರಾಶಿ, ನಕ್ಷತ್ರಗಳಲ್ಲೇ ಬರೆದುಬಿಟ್ಟಿದ್ದಾನೆ. ಇದು ವಸ್ತುಗಳಿಗೆ ಮಾತ್ರ ಸೀಮಿತ, ವ್ಯಕ್ತಿಗಳ ಬಗ್ಗೆ ಇಲ್ಲ. ಕಂಡವರನ್ನೆಲ್ಲ ಹಚ್ಚಿಕೊಂಡು, ತಲೆಗೇರಿಸಿಕೊಂಡು, ಸಲಿಗೆ ಕೊಟ್ಟು ಪಡಬಾರದ ಪಾಡು ಪಟ್ಟಿದ್ದೇನೆ, ಪಡಿತ್ತಿದ್ದೇನೆ ಕೂಡಾ. ಆದರೆ, ನಿರ್ಜೀವ ವಸ್ತುಗಳು ನನಗೆ ಶಿಸ್ತುಗಾರ, ನೀಟ್ ಮನುಷ್ಯ ಎಂಬ ಬಿರುದು ತಂದುಕೊಟ್ಟವುಗಳಾಗಿದ್ದರೆ, ಈ ಸಜೀವ ವ್ಯಕ್ತಿಗಳು ತಿಳಿವಳಿಕೆ ಇಲ್ಲ, Distance maintain ಮಾಡುವುದಿಲ್ಲ, ಗಾಂಭೀರ್ಯವಿಲ್ಲ, ಚೆಲ್ಲು ಚೆಲ್ಲಾಗಿ ಆಡುತ್ತಾನೆ, ತನ್ನ ಯೋಗ್ಯತೆಯೇ ತನಗೆ ಗೊತ್ತಿಲ್ಲ ಎಂಬ ಆಕ್ಷೇಪಣೆಗಳಿಗೆ ನನ್ನನ್ನು ಈಡು ಮಾಡಿದ್ದಾರೆ.

ಸುಕ್ಕುಗಳು ಬರೀ ಬಟ್ಟೆಯ ಮೇಲೆ ಮಾತ್ರ ಇರುವುದಿಲ್ಲ, ಬಾಳಿನಲ್ಲೂ ಇರುತ್ತವೆ. ನಾನು ಜಾಣ, ನಾನು ಸುಂದರ, ನಾನು ಹಠವಾದಿ, ನಾನು ಮಂದಿ ಮುಂದೆ ಕೈಯೊಡ್ಡುವುದಿಲ್ಲ, ನಾನು ಮುಖಕ್ಕೆ ಹೊಡೆದಂತೆ ಹೇಳುತ್ತೇನೆ, ಅಲ್ಲಿಂದ ನಾನು ಎದ್ದು ಬಂದೆ, ನಾನು ಅಂಥಲ್ಲಿಗೆಲ್ಲ ಹೋಗಾತ ಅಲ್ಲ ಇತ್ಯಾದಿ ಇತ್ಯಾದಿ ಇವೆಲ್ಲ ಸುಕ್ಕುಗಳೇ. ಬಟ್ಟೆ ಸುಕ್ಕನ್ನು ಇಸ್ತ್ರಿ ಪೆಟ್ಟಿಗೆ ಕಳೆಯುವಂತೆ ಬಾಳಿನ ಈ ಸುಕ್ಕುಗಳನ್ನು ಕಾಲವೆಂಬ ಇಸ್ತ್ರಿ ಪೆಟ್ಟಿಗೆ ತನ್ನ ಬಿಸಿಯಿಂದ, ಕೆಲವು ಸಲ ಖಡಕ್ ಇಸ್ತ್ರಿಯಿಂದ ಬಿಸಿ ಮುಟ್ಟಿಸಿ ಸರಿ ಮಾಡುತ್ತದೆ. ನಿಮ್ಮ ಸ್ವಭಾವದ ಸುಕ್ಕು ಕಾಟನ್, ಜೀನ್ಸ್ ಬಟ್ಟೆಗಳಂತೆ ಜಾಸ್ತಿಯೇ ಇದ್ದರೆ ಬಹಳ ಹೊತ್ತು ಶಾಖ ಅನುಭವಿಸಬೇಕಾಗುತ್ತದೆಬಟ್ಟೆಯೇ ಸುಟ್ಟು ಯಾರೂ ಧರಿಸಲಾರದ, ಭರಿಸಲಾರದ ಸ್ಥಿತಿ ಸೇರಿ ಮೂಲೆ ಗುಂಪಾಗುತ್ತೀರಿ. ಇಸ್ತ್ರಿ ಪೆಟ್ಟಿಗೆಯಂಥ ಒಂದು ಸಾಮಾನ್ಯ ವಸ್ತು ನನ್ನ ಜೀವನದಲ್ಲಿ ನನಗೆ ತುಂಬಾ ಪಾಠ ಕಲಿಸಿದೆ.

ರಾಜಕುಮಾರ್ ಸಿನಿಮಾ ಹುಚ್ಚಿಗೆ ಹಣ ಹೊಂದಿಸಿಕೊಳ್ಳಲು ನಾನು ಮನೆಮಂದಿಯ ಬಟ್ಟೆಗಳನ್ನು ಹತ್ತುಪೈಸೆಗೊಂದರಂತೆ ಇಸ್ತ್ರಿ ತಿಕ್ಕುತ್ತಿದ್ದೆ. ಶಿಕ್ಷಕರಾಗಿದ್ದ ನಮ್ಮ ತಂದೆ ಭಾನುವಾರದ ದಿನ ತಮ್ಮ ಅಂಗಿಗಳನ್ನೆಲ್ಲ ಸೇರಿಸಿಕೊಂಡು ಮನೆಯಲ್ಲಿಯೇ ಇಸ್ತ್ರಿ ಮಾಡುತ್ತಿದ್ದರು. ಆಗಿನ ಕಾಲಕ್ಕೇ ಎಂಟು ರುಪಾಯಿ ಬೆಲೆ ಬಾಳುತ್ತಿದ್ದ, ಕಬ್ಬಿಣದ ಒಂದು ಇಸ್ತ್ರಿ ಪೆಟ್ಟಿಗೆ ತಂದಿದ್ದರು. ಅದನ್ನು ಇಡಲು ಪೆಟ್ಟಿಗೆ ಕೆಳಗೊಂದು ಕಬ್ಬಿಣದ್ದೇ ರಿಂಗು. 15-20 ದಿನಗಳಿಗೊಮ್ಮೆ ಅದಕ್ಕೆ ಉಸುಗಿನ ಕಾಗದ ( Sand paper)ದಿಂದ ಅದರ ಸುತ್ತಲಿನ ಜಂಗನ್ನು ತಿಕ್ಕಲು ನನಗೆ ಹೇಳುತ್ತಿದ್ದರು. ಅವರು ಇಸ್ತ್ರಿ ಮಾಡಿಕೊಳ್ಳುವಾಗ ಮುಂದೆ ಕೂತು ಅದನ್ನು ನೋಡುತ್ತಿದ್ದೆ. ಮೊದಲು ಕಾಲರ್, ಆಮೇಲೆ ಶರ್ಟಿನ ಹಿಂಭಾಗದ ಅರ್ಧ ಭುಜದ ಪೊಸಿಶನ್, ತೋಳುಗಳು ನಂತರ ಮುರುಟಿಕೊಂಡ ಜೇಬುಗಳ ಒಳಭಾಗ. ಆಮೇಲೆ ಫುಲ್ ಹರಡಿ ಎದೆ, ಹೊಟ್ಟೆಭಾಗ ತಿಕ್ಕಿ, ಶರ್ಟನ್ನು ಸರಕ್ಕನೆ ಪಲ್ಟಾಯಿಸಿ ಎರಡೂ ಬದಿ ಮಡಚಿ, ಕಾಲರ್ ಮೇಲ್ತುದಿ ಹಿಡಿದು ಮತ್ತೊಮ್ಮೆ ಇಡೀ ಅಂಗಿಯನ್ನು ಬಿಸ್ಕಿಟ್ ಆಕಾರ ಮಾಡಿ ಮಡಿಸಿ ಮೇಲೊಮ್ಮೆ ತಿಕ್ಕಿದರೆ ಅಂಗಿ ರೆಡಿ. ಇವೆಲ್ಲ 4ರಿಂದ 5 ನಿಮಿಷದಲ್ಲಿ ಮುಗಿಯುತ್ತಿತ್ತು.

ಒಂದು ಅಂಗಿಯನ್ನು ಅವರು ತಿಕ್ಕುವಾಗ ಇನ್ನೊಂದು ಅಂಗಿಗೆ ನಾನು ನೀರು ಚಿಮುಕಿಸಿ, ಸುತ್ತಿ ರೆಡಿಯಿಟ್ಟಿರುತ್ತಿದ್ದೆ. ಇಸ್ತ್ರಿ ಪೆಟ್ಟಿಗೆ ಬಿಸಿ ಕಮ್ಮಿಯಾತು ಅನಿಸಿದರೆ ಅದನ್ನು ಹೊರತಂದು ಅದರ ಬಾಯಿ ತೆಗೆದು ಗಾಳಿ ಬೀಸಲು ನನಗೆ ಹೇಳುತ್ತಿದ್ದರು. ಬೀಸಣಿಕೆಯಿಂದ ಗಾಳಿ ಹಾಕಿ ಇನ್ನಷ್ಟು ಇದ್ದಿಲು ಹಾಕುತ್ತಾ ಅದನ್ನು ನಿಗಿ ನಿಗಿ ಮಾಡುತ್ತಿದ್ದೆ. ಒಮ್ಮೊಮ್ಮೆ ಬಾಯಿಂದಲೇ ಕೆಂಡಗಳಿಗೆ ಊದುತ್ತಿದ್ದರೆ ‘ಬೀಸಣಿಗೆಯಲ್ಲೇ ಗಾಳಿ ಹಾಕು. ಬಾಯಿಂದ ಊದಿದರೆ ತಲಿಸೂಲಿ ಬರ್ತದೆ’ ಎಂದು ಅಮ್ಮ ಎಚ್ಚರಿಸುತ್ತಿದ್ದಳು. ನಾನು ಮತ್ತೆ ಇಸ್ತ್ರಿ ಪೆಟ್ಟಿಗೆ ಬಿಸಿ ಮಾಡುವ ವೇಳೆ, ಅಪ್ಪನಿಗೆ ಅದು ಒಂದು ಬ್ರೇಕ್ ಟೈಮ್. ಅಪ್ಪ ಆಗ ಒಂದು ‘ಹಂಚ್‌ರಾಜ್’ ಬೀಡಿ ಸೇದುತ್ತಿದ್ದ. ‘ನಾನೂ ಒಂದು ಅಂಗಿ ತಿಕ್ಕುತ್ತೇನಿ’ ಅಂದರೆ ಅಪ್ಪ ಬಿಡುತ್ತಿರಲಿಲ್ಲ.

‘ಎಲ್ಲಿ, ಎಷ್ಟು ಹೊತ್ತು ಪೆಟ್ಟಿಗೆ ನಿಲ್ಲಿಸಬೇಕು ಎಂದು ನಿಂಗೆ ತಿಳಿಯುವುದಿಲ್ಲ ಅಂಗಿ ಸುಡುತ್ತಿ’ ಎಂದು ಬೈಯುತ್ತಿದ್ದ. ಆತ ತಿಕ್ಕುವುದನ್ನೇ ನೋಡುತ್ತ, ಕಾದ ಇಸ್ತ್ರಿ ಪೆಟ್ಟಿಗೆಗೆ ಆಗಾಗ ಬೆರಳಿನಿಂದ ನೀರು ಚಿಮುಕಿಸಿ ಅದು ‘ಚೊಂಯ್’ ಎಂದು ಶಬ್ದ ಕೇಳುತ್ತಿದ್ದೆ. ‘ನೀರು ಸಿಡಿಸಿದರ ಪೆಟ್ಟಿಗೆಗೆ ಜಂಗು ಹಿಡಿತದೆ ಸುಮ್ನಿರು’ ಎಂದು ಅಪ್ಪ ಬೈದರೂ ಕುತೂಹಲ ತಡೀತಿರಲಿಲ್ಲ. ಒಂದು ವಾರ ಅಪ್ಪ ವಾರದ ಬಟ್ಟೆಗಳನ್ನು ಇಸ್ತ್ರಿ ಮಾಡಿಟ್ಟುಕೊಂಡರೆ, ಒಂದು ವಾರ ಇಡೀ ಸೈಕಲ್ ಬಿಚ್ಚಿ ಮನೇಲೇ ಓವರ್ ಆಯಿಲಿಂಗ್ ಮಾಡಿಕೊಳ್ಳುತ್ತಿದ್ದ. ಸೈಕಲನ್ನು ತಲೆಕೆಳಗಾಗಿ ಕಟ್ಟಿ ಜಂತಿಯ ತೊಲೆಗೆ ಇಳಿಬಿಟ್ಟು, ಪಟ್ಟಾಪಟ್ಟಿ ಡ್ರಾಯರ್ ಮೇಲೆ ಕುಳಿತು ರಿಪೇರಿ ಮಾಡಿಕೊಳ್ಳುತ್ತಿದ್ದ. ಆಗ ನಾನು ಆ ಸೀಮೆಎಣ್ಣೆ, ಗ್ರೀಸು, ಆಯಿಲ್‌ಗಳನ್ನು ಮುಟ್ಟುತ್ತಲೂ ಇರಲಿಲ್ಲ. ‘ಮೈ ಕೈ ಸದಾ ಸ್ವಚ್ಛ ಇರಬೇಕು ಪ್ರಾಣಿಗೆ. ಇಂಥಾವು ಕಲಿಯಂಗಿಲ್ಲ’ ಎಂದು ಅಮ್ಮ ನನ್ನ ಪರ ವಾದಿಸುತ್ತಿದ್ದಳು.

ಇಸ್ತ್ರಿ ತಿಕ್ಕೋದನ್ನ ಗಮನಿಸಿದ್ದ ನಾನು ಒಮ್ಮೆ ತದೇಕಚಿತ್ತನಾಗಿ ಕುಳಿತು ಅಪ್ಪನ ಐದು ಕಾಟನ್ ಜುಬ್ಬಾಗಳನ್ನು ನೀಟಾಗಿ ತಿಕ್ಕಿ ಇಟ್ಟೆ. ಮೆಚ್ಚಿದ ಅಪ್ಪ ಎಂಟಾಣೆ ಕೊಟ್ಟ. ಅಲ್ಲಿಂದ ಒಂದು ದಿನ ಕೂತು, ಮನೆಯವರೆಲ್ಲರ ಬಟ್ಟೆಗಳನ್ನೂ ತಿಕ್ಕುವುದು ಕಲಿತೆ. ‘ಕೂತು ಏನ್ ಮಾಡ್ತಿ?’ ಎಂದು ಅಣ್ಣ, ತಮ್ಮ, ತಂಗಿ, ತಾಯಿ ಎಲ್ಲರೂ ತಮ್ಮ ಡ್ರಾಯರ್, ಬನೀನ್, ಲಂಗ, ಕುಪ್ಪಸಗಳನ್ನೂ ಕೊಡಲಾರಂಭಿಸಿದರು. ಅದೇ ತಾನೆ ಗಂಗಾವತಿಗೆ ‘ಎಲೆಕ್ಟ್ರಿಕಲ್ ಲಾಂಡ್ರಿ’ ಬಂದಿತ್ತು. ಅವರು ಒಗೆದು, ಇಸ್ತ್ರಿ ಮಾಡಿಕೊಡುತ್ತಿದ್ದರು. ‘ರಾಜಹಂಸ ಲಾಂಡ್ರಿ’ ಎಂದು ಅದಕ್ಕೆ ಹೆಸರು. ನನ್ನ ತಾಯಿಗೆ ಇಬ್ಬರು ತಮ್ಮಂದಿರು. ಗುರಪ್ಪ ಎಂಬ ಸೋದರಮಾವ ನನ್ನನ್ನು ಆ ಲಾಂಡ್ರಿಗೆ ಕರೆದೊಯ್ದು ಬಟ್ಟೆ ಒಗೆಯುವ ಆ ಬೃಹತ್ ಮಶೀನ್ ತೋರಿಸಿದ್ದ. ಗಡಗಡ ಶಬ್ದ ಮಾಡುತ್ತಾ, ಬಟ್ಟೆಗಳನ್ನು ದುಂಡುದುಂಡಾಗಿ ಸುತ್ತಿಸುತ್ತಾ, ತಿರುಗಿಸುತ್ತಾ ಇದ್ದ ಆ ದೈತ್ಯ ಯಂತ್ರದ ಕಣ್ಣಿನಂತೆ ಇದ್ದ ಆ ಗ್ಲಾಸ್ ವಿಂಡೋದಲ್ಲಿ ತನ್ನದೇ ಅಂಗಿ, ಪ್ಯಾಂಟುಗಳು ಸುತ್ತುವುದನ್ನು ತೋರಿಸಿದ್ದ.

ಆ ಸೋಪಿನ ವಾಸನೆ, ಆ ಶಬ್ದ ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ಕರೆಂಟಿನ ಇಸ್ತ್ರಿಪೆಟ್ಟಿಗೆಯನ್ನೂ ಅಂದೇ ನೋಡಿದೆ. ಚಿಮಣಿ ಎಣ್ಣೆ, ಇದ್ದಿಲು, ಗಾಳಿ ಹಾಕೋದು, ಏನೂ ಬೇಡದೇ ಸ್ವಿಚ್ ಹಾಕಿ ಸರಸರ ಇಸ್ತ್ರಿ ಮಾಡುತ್ತಿದ್ದ ಒಬ್ಬಾತನನ್ನು ವಿಜ್ಞಾನಿಯನ್ನು ನೋಡುವಂತೆ ನೋಡಿದ್ದೆ. ಬಟ್ಟೆಗೆ ನೀರು ಹೊಡೆಯುತ್ತಲೇ ಇರಲಿಲ್ಲ. ಆತನಿಗೆ ತಿಂಗಳಿಗೆ 150 ರು. ಸಂಬಳ ಎಂದು ಕೇಳಿ ‘ಅಬ್ಬಾ! ಆತನ ಪುಣ್ಯವೆ’ ಎನಿಸಿತ್ತು. ಇಬ್ಬರೂ ಸೋದರಮಾವನಿಗೆ ವಿನಂತಿಸಿಕೊಂಡು ಅವರ ಬಟ್ಟೆಗಳನ್ನು ನನೇ ಇಸ್ತ್ರಿ ಮಾಡುವೆನೆಂದು ಒಪ್ಪಿಸಿದೆ. ಹತ್ತುಪೈಸೆಗೆ ಒಂದು ಅಂಗಿಯಂತೆ ದಿನಕ್ಕೆ 20-30 ಅಂಗಿ, ಪ್ಯಾಂಟು ಇಸ್ತ್ರಿ
ಮಾಡುತ್ತ ಸಿನಿಮಾ ನೋಡಲು ಹಣ ಸಂಪಾದಿಸಲಾರಂಭಿಸಿದೆ.

ಗುರಪ್ಪ ಮಾವನದು ಬರೀ ಖಾದಿ, ಕಾಟನ್ ಬಟ್ಟೆಗಳು. ಆತ ಸಿನಿಮಾ ಟಾಕೀಸಿನಲ್ಲಿ Projector operator  ಆಗಿದ್ದು, ತನ್ನ ಬಟ್ಟೆ ಇಸ್ತ್ರಿ ತಿಕ್ಕಿದ ಬಾಬತ್ತಿಗೆ ಕೈಯಲ್ಲಿ ಹಣ ಕೊಡದೇ ಸಿನಿಮಾಗೆ ಕರೆದೊಯ್ದು ನನ್ನ ‘ಬೆಂಚ್’ ಗೇಟಿಗೆ ಬಿಡಿಸಿ ತಾನು ಆಪರೇಟರ್ ರೂಮ್‌ಗೆ ಹೋಗುತ್ತಿದ್ದ. ಹಾಗೆ ನಾನು ನನ್ನ ಇಸ್ತ್ರಿ ತಿಕ್ಕಿದ ಶ್ರಮದ ಹಣದಿಂದ ನೋಡಿದ ರಾಜಕುಮಾರರ ‘ಕಾಸಿದ್ರೆ ಕೈಲಾಸ’, ‘ಪರೋಪಕಾರಿ’, ‘ಭಲೇಜೋಡಿ’, ಹಿಂದಿಯ ‘ರಫೂ ಚಕ್ಕರ್’, ‘ಯಾದೋಂ ಕಿ ಬಾತ್’ ಚಿತ್ರಗಳು ಇನ್ನೂ ನೆನಪಿನಲ್ಲಿವೆ. ಇನ್ನೊಬ್ಬ ಸೋದರಮಾವ ವಾಸಪ್ಪ (ವಸಂತ್) ಶುಗರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನದು, ನಾನು ಫ್ಯಾಕ್ಟರಿ ಅಕೌಂಟಂಟ್ ಎಂಬ ಗತ್ತು, ಗಾಂಭೀರ್ಯ. ತನಗೆ ಟೈಪಿಂಗ್ ಬರುತ್ತದೆ ಎಂಬ ವಿಶೇಷ ‘ಸಿದ್ಧಿ ಪುರುಷ’ ಮನೋಭಾವ. ಆತ ನೌಕರಿ ಮಾಡುವಾತ ಎಂದು ಮನೆಯಲ್ಲಿ ವಿಶೇಷ ಗೌರವ, ನೋಡಲು ಚೆಲುವ ಬೇರೆ. ತೆಲುಗಿನ ಅಕ್ಕಿನೇನಿ ನಾಗೇಶ್ವರ ರಾವ್ ರನ್ನು ಹೋಲುತ್ತಿದ್ದ. ಈತನ ಬಟ್ಟೆಗಳನ್ನು ಖುದ್ದು ನಮ್ಮ ತಾಯಿ, ಚಿಕ್ಕಮ್ಮ ಒಗೆಯುತ್ತಿದ್ದರು. ನಾನು ಇಸ್ತ್ರಿ ಮಾಡಿಸಿಕೊಂಡು ಬರುತ್ತಿದ್ದೆ. ಆದರೆ, ನಾನೇ ಇಸ್ತ್ರಿ ತಿಕ್ಕುವುದನ್ನು ಕಲಿತ ಮೇಲೆ ನಾನೇ ಇಸ್ತ್ರಿ ತಿಕ್ಕಲಾರಂಭಿಸಿದೆ. ಭಾನುವಾರ ನಮ್ಮೂರಿನ ಸಂತೆ. ಅಲ್ಲಿ ಮಣ್ಣಿನ ಒಂದು ಕುಳ್ಳಿ ( ಹಣ ಹಾಕುವ, ಕೂಡಿಡುವ ಸೇವಿಂಗ್ ಬಾಕ್ಸ್) ತಂದು ಇಸ್ತ್ರಿ ಹಣವನ್ನು ಅದರಲ್ಲಿ ಹಾಕಲಾರಂಭಿಸಿದೆ. ನನ್ನ ಈ ದುಡಿದು ಖರ್ಚು ಮಾಡುವ ಗುಣವನ್ನು ಎಲ್ಲರೂ ಕೊಂಡಾಡುವವರೇ.

ಈ ಹಣವನ್ನು ಸಿನಿಮಾ, ಮಸಾಲೆದೋಸೆ, ರ್ಯಾಾಪಿಡೆಕ್ಸ್ ಇಂಗ್ಲಿಷ್ ಸ್ಪೀಕಿಂಗ್ ಪುಸ್ತಕ ಕೊಳ್ಳಲು ಬಳಸಿದೆ. ಇಸ್ತ್ರಿ ತಿಕ್ಕುವುದು ಕರಗತವಾಗಿ ಹೋಯಿತು. ತಾತ, ಅಪ್ಪ, ಗುರಪ್ಪ ಮಾವ, ಅಣ್ಣ, ತಮ್ಮ, ನನ್ನ ಬಟ್ಟೆಗಳೆಲ್ಲ ಕಾಟನ್ ಆಗಿದ್ದು ಸರಾಗವಾಗಿ ನೀರು ಚಿಮುಕಿಸಿ, ಸಲೀಸಾಗಿ ತಿಕ್ಕುತ್ತಿದ್ದೆ. ಆದರೆ, ಫ್ಯಾಕ್ಟರಿ ಮಾವನ ಬಟ್ಟೆಗಳು ಟೆರಿಲಿನ್, ಪಾಲಿಸ್ಟರ್‌ಗಳು. ಅದೊಂದು ದಿನ ಭರ್ತಿ ಕಾದಿದ್ದ ಇಸ್ತ್ರಿ ಪೆಟ್ಟಿಗೆಯಿಂದ ಮೊದಲು ಕಾಟನ್ ತಿಕ್ಕುವ ಬದಲು, ನೀರು ಹೊಡೆದುಕೊಂಡು ಸುರುಳಿ ಸುತ್ತಿ ಬಿದ್ದಿದ್ದ ಬಟ್ಟೆಗಳಲ್ಲಿ ಒಂದನ್ನು ಬಿಚ್ಚಿ ಕಾಲರ್‌ಗೆ ತಿಕ್ಕಿದ್ದೇ ತಡ, ಟೆರಿಲಿನ್ ಶರ್ಟಿನ ಕಾಲರ್‌ನ ಮೇಲ್ಪದರದ ಬಟ್ಟೆ ಭರ್ತಿ ಕಾದಿದ್ದ ಇಸ್ತ್ರಿ ಪೆಟ್ಟಿಗೆಗೆ ಒರೆದುಕೊಂಡು, ಸುಟ್ಟ ಕಾಲರ್‌ನ ಕ್ಯಾನ್‌ವ್ಯಾಸ್‌ನ ಬಿಳಿಬಟ್ಟೆ ಕಂಡಿತು. ಅದು ಗತ್ತಿನ, ಬಾರಿ ಬಾರಿ ಎಚ್ಚರಿಸಿಕೊಡುತ್ತಿದ್ದ ಫ್ಯಾಕ್ಟರಿ ಮಾವನ ಅಂಗಿಯೇ ಆಗಿತ್ತು. ನನ್ನ ಜಂಘಾಬಲವೇ ಉಡುಗಿತು. ಸಿಟ್ಟಿನ ಮಾವ ತನಗೆ ಹೊಸ ಅಂಗಿಯೇ ಬೇಕೆಂದು ಹಠ ಹಿಡಿದ. ಯಾರು ಎಷ್ಟು ಹೇಳಿದರೂ ದಯೆ, ಕನಿಕರ ತೋರದೆ, ತಾನು ದುಡಿಯುವಾತ ಎಂಬ ಅಹಮಿಕೆಯಿಂದ ಮಾವ ಕೂಗಾಡುವುದನ್ನು ಕೇಳಿ ಎಲ್ಲರಿಗೂ ಬಹಳ ಬೇಸರವಾಯಿತು. ನಾನು ‘ಕುಳ್ಳಿ’ ಒಡೆದೆ.

ಕೂಡಿಟ್ಟ ಹಣ ಹದಿನೆಂಟು ರುಪಾಯಿ ಆಗಿತ್ತು. ತಮಗೆ ಬರುವ 250 ರುಪಾಯಿ ಸಂಬಳದಲ್ಲಿ ಅಪ್ಪ 22 ರುಪಾಯಿ ಕೊಟ್ಟರು. ನಮ್ಮ ಮಾವ ‘ಆ ಬಟ್ಟೆಯನ್ನು ನಾನು ಬಳ್ಳಾರಿಯಿಂದ ತಂದಿದ್ದೆ, ಅದಕ್ಕೆ 40 ರುಪಾಯಿ ಕೊಟ್ಟಿದ್ದೆ’ ಎಂದಿದ್ದರಿಂದ, ಬಟ್ಟೆ ಬಾಬತ್ತು ನಲವತ್ತು ರುಪಾಯಿ, ಬಳ್ಳಾರಿಗೆ ಹೋಗಿ ಬರುವ ಹತ್ತು ರುಪಾಯಿ ಖರ್ಚು ಸೇರಿಸಿ ಐವತ್ತು ರುಪಾಯಿಗೆ ಅಂಗಿ ತಂದು ಮಾವನಿಗೆ ಕೊಟ್ಟು ಕ್ಷಮೆ ಕೇಳಿದರು ನಮ್ಮ ತಂದೆ. ಇಸ್ತ್ರಿಪೆಟ್ಟಿಗೆಯನ್ನು ಮೇಲೆ ತೆಗೆದಿಟ್ಟುಬಿಟ್ಟರು. ಒಂದು ವಾರ ಕುರುಕ್ಷೇತ್ರವಾಗಿದ್ದ ಮನೆ, ಶಾಂತವಾಯಿತು. ಈ ಲೇಖನದ ಜತೆಗಿರುವ ನಲವತ್ತು ವರ್ಷಗಳ ಹಿಂದಿನ ಇಸ್ತ್ರಿಪೆಟ್ಟಿಗೆ ನೋಡಿ ಇವೆಲ್ಲ ನೆನಪಾಯಿತು. ಹುಡುಕಿ, ಬೆದಕಿ ನೋಡಿದರೆ ನಿರ್ಜೀವ ವಸ್ತುಗಳ ಹಿಂದೆಯೂ ಜೀವಂತ ಕತೆಗಳಿರುತ್ತವೆಂಬುದು ನಿಜ ಎನಿಸಿತು. ಜೀವನದಲ್ಲಿ ಪಾಠ ಕಲಿಯಬೇಕೆನ್ನುವವನಿಗೆ ನಿರ್ಜೀವ ವಸ್ತುಗಳೂ ಶಿಕ್ಷಕನಾಗಬಲ್ಲವು ಎನಿಸಿತು.

Leave a Reply

Your email address will not be published. Required fields are marked *

16 − 13 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top