About Us Advertise with us Be a Reporter E-Paper

ಯಾತ್ರಾ panel2

ಬಿಸಿನೀರಿನ ಬುಗ್ಗೆಗಳ ಖ್ಯಾತಿ: ಮಣಿಕರಣ್

ಶಶಿಧರ ಹಾಲಾಡಿ

ಇಲ್ಲಿರುವ ಬಿಸಿನೀರಿನ ಬುಗ್ಗೆಗಳಲ್ಲಿ ಸ್ನಾನ ಬಹುದು, ಅಡುಗೆ ಅಟ್ಟಲೂ ಬಹುದು! ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ರುವ ಈ ಸುಂದರ ತಾಣವು ಮುಂದುವರಿದ ದೇಶಗಳಲ್ಲಿ ಇದ್ದಿದ್ದರೆ, ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆಯು ತ್ತಿತ್ತು.  ನಮ್ಮವರು ಪ್ರವಾಸಿ ತಾಣಗಳ ಮಾರ್ಕೆಟಿಂಗ್‌ ನಲ್ಲಿ ದುರ್ಬಲರು ಎಂಬುದಕ್ಕೆ ಮಣಿಕರಣ್ ಉತ್ತಮ ಉದಾಹರಣೆ.

ಕ್ರಿ.ಶ.1905ರಲ್ಲಿ ನಡೆದ ಭೂಕಂಪನದ ನಂತರ, ಈ ಬಿಸಿ ನೀರಿನ ಬುಗ್ಗೆಗಳು ಮೇಲಕ್ಕೆ ಚಿಮ್ಮುತ್ತಿಲ್ಲ. ಮುಂಚೆ ಹತ್ತಾರು ಅಡಿ ಎತ್ತರ ನೀರು ಚಿಮ್ಮುತ್ತಿತ್ತು ಇಂಥದ್ದೊಂದು ವಿಚಾರವನ್ನು ಮಣಿಕರಣ್ ಬಿಸಿ ಬುಗ್ಗೆಗಳ ಕುರಿತು ಅಲ್ಲಿನವರು ಹೇಳುತ್ತಾರೆ. ಈ ರೀತಿ ಬರೆದಿರುವ ಒಂದು ಫಲಕವೂ ಅಲ್ಲುಂಟು! 1905ಕ್ಕಿಂತ ಮುಂಚೆ ನೀರು ಚಿಮ್ಮುತ್ತಿತ್ತೋ ಇಲ್ಲವೊ, ಆದರೆ ಈಗಲೂ ಅಲ್ಲಿರುವ ಬಿಸಿ ನೀರಿನ ಬುಗ್ಗೆಗಳು ನೋಡುಗರಲ್ಲಿ ವಿಸ್ಮಯವ ನ್ನುಂಟು ಮಾಡು ತ್ತವೆ.

ಗಂಧಕದ ನೀರು
ಅಲ್ಲಿನ ಬಿಸಿ ನೀರಿನ ಬುಗ್ಗೆಗಳಿಗೆ ಚರ್ಮ ರೋಗವನ್ನು ವಾಸಿ ಮಾಡುವ ಶಕ್ತಿ ಇದೆ. ಭೂಗರ್ಭದಲ್ಲಿ ನಡೆಯುವ ಗಂಧಕದ ಚಟುವಟಿಕೆಯಿಂದಾಗಿ, ನೀರು ಬಿಸಿಯಾಗಿ, ಚಿಮ್ಮಿ ಬರುತ್ತದೆ. ಆದ್ದರಿಂದ, ಹಿಮಾಚಲ ಪ್ರದೇಶದ ಜನರು ಚರ್ಮ ರೋಗ ವಾಸಿಮಾಡಿಕೊಳ್ಳಲು ಇಲ್ಲಿಗೆ ಬಂದು ಒಂದೆರಡು ವಾರ ಠಿಕಾಣಿ ಹೂಡುವುದುಂಟು. ಹಿಮಾಚಲದ ಚಳಿಯ ವಾತಾವರಣ ದಲ್ಲಿ ಅಲ್ಲಿನ ಬಿಸಿ ನೀರಿನ ಕುಂಡಗಳಲ್ಲಿ ಸ್ನಾನ ಮಾಡುವ ಅನು ಭವವೇ ವಿಶಿಷ್ಟ. ಆ ಸ್ನಾನಕುಂಡಗಳಲ್ಲಿ ಹೆಚ್ಚು ಹೊತ್ತು ಕುಳಿತರೆ ಗಂಧಕದ ವಾಸನೆಯಿಂದಾಗಿ, ತಲೆ ಸುತ್ತು ಬರುವ ಸಾಧ್ಯತೆ ಇದೆ.

ಸಮುದ್ರ ಮಟ್ಟದಿಂದ ಸುಮಾರು 5770 ಅಡಿ ಎತ್ತರ ದಲ್ಲಿರುವ ಮಣಿಕರಣ್ ಸುಂದರ ತಾಣ. ಪರ್ವತ ಕಮರಿ ಗಳ ನಡುವೆ ಇರುವ ಈ ಜಾಗಕ್ಕೆ ದಾರಿಯೂ ಸುಂದರ, ಅಲ್ಲಿನ ನೋಟವೂ ಸುಂದರ. ಪಾರ್ವತಿ ನದಿಯ ದಡದಲ್ಲಿ ಬೆಳೆದಿರುವ ಈ ಪುಟ್ಟ ಪಟ್ಟಣಕ್ಕೆ ಸಾವಿರಾರು ವರ್ಷಗಳ ಇತಿಹಾಸ. ಅಲ್ಲಿರುವ ರಾಮ ಮಂದಿರ, ಸಿಖ್ ಗುರುದ್ವಾರ, ಶಿವ ಮಂದಿರ, ನೈನಾ ಭಗವತಿ ದೇಗುಲ ಎಲ್ಲವೂ ಆಸ್ತಿಕರ ಆಶಯಗಳನ್ನು ಪೂರೈಸಲು ಶ್ರಮಿಸುತ್ತಿವೆ. ಚರ್ಮರೋಗ ವಾಸಿಮಾಡಿಕೊಳ್ಳಲು ಬಂದು ಕೆಲವು ವಾರ ತಂಗುವ ಯಾತ್ರಿಗಳಿಗೆ ಆಶ್ರಯ ನೀಡುತ್ತವೆ. ಸಿಖ್ ಗುರುದ್ವಾರದಲ್ಲಿ ಪ್ರವಾಸಿಗರಿಗೆ, ಯಾತ್ರಿಗಳಿಗೆ ಉಚಿತ ಊಟವೂ ಉಂಟು. ಕೇವಲ ಪ್ರವಾಸದ ಈ ಜಾಗದ ಬಿಸಿನೀರಿನ ಕುಂಡಗಳು ವಿಸ್ಮಯ ಹುಟ್ಟಿಸುತ್ತವೆ, ಸುತ್ತಲೂ ಎತ್ತರಕ್ಕೆ ಏರಿರುವ ಪರ್ವತ ಶ್ರೇಣಿ ಮುದ ನೀಡುತ್ತದೆ.

ಬಿಸಿನೀರಿನಲ್ಲಿ ಅನ್ನ ತಯಾರಿ
ಇಲ್ಲಿರುವ ಬಿಸಿನೀರಿನ ಕುಂಡದಲ್ಲಿ ಅನ್ನ, ಆಲೂಗಡ್ಡೆ ಬೇಯಿಸ ಬಹುದು! ದೊಡ್ಡ ಬಟ್ಟೆಯಲ್ಲಿ ಆಲೂಗಡ್ಡೆ ಯನ್ನು ಕಟ್ಟಿ, ಬಿಸಿ ನೀರಿನ ಕುಂಡದಲ್ಲಿ ಮುಳುಗಿಸಿದರೆ ಆಯಿತು, ಅರ್ಧ ಗಂಟೆಯಲ್ಲಿ ಬೇಯಿಸಿದ ಆಲೂಗಡ್ಡೆ ರೆಡಿ. ಅಕ್ಕಿ ಮತ್ತು ನೀರನ್ನು ದೊಡ್ಡ ಅಲ್ಯುಮಿನಿಯಂ ಪಾತ್ರೆಯಲ್ಲಿಟ್ಟು, ಬಿಸಿನೀರಿನ ಕುಂಡದಲ್ಲೇ ಬೇಯಿಸುತ್ತಾರೆ ಇಲ್ಲಿನ ಗುರುದ್ವಾರದವರು. ಸ್ನಾನ ಮಾಡಲು ಅಲ್ಲಲ್ಲಿ ಪ್ರತ್ಯೇಕ ಬಿಸಿನೀರಿನ ಕುಂಡಗಳ ವ್ಯವಸ್ಥೆಯೂ ಈ ಊರಿ ನಲ್ಲಿದೆ. ರಭಸದಿಂದ ಹರಿಯುವ ಹಿಮಶೀತಲ ಪಾರ್ವತಿ ನದಿಯ ದಡದಲ್ಲೂ ಕೆಲವು ಬಿಸಿನೀರಿನ ಬುಗ್ಗೆಗಳಿವೆ.

‘ಚರಸ್’ ಸಂಸ್ಕೃತಿ
ಸುಂದರ ಹಿಮಾಚಲ ಪ್ರದೇಶ ರಾಜ್ಯದ ಹಲವು ಹಳ್ಳಿಗಳಿಗೆ ಅಂಟಿರುವ ಚಾಳಿ ಎಂದರೆ ಚರಸ್ ಮತ್ತು ಅಪೀ ಮು ಮಾರಾಟ. ಮಣಿಕರಣ್ ಸುತ್ತಲೂ ಇರುವ ಬೆಟ್ಟದ ಇಳಿಜಾರಿನ ವಾತಾವರಣವು ಚರಸ್ ಬೆಳೆ ಬೆಳಯಲು ಪ್ರಶಸ್ತ ಸ್ಥಳ. ಅದ್ದರಿಂದ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾರುವುದು ಸ್ಥಳೀಯರ ಉಪಕಸುಬಾಗಿದೆ. ಮಣಿ ಕರಣ್‌ಗೆ ಭೇಟಿ ನೀಡುವ ಯಾತ್ರಿಗಳು ಮತ್ತು ಪ್ರವಾಸಿಗಳ ಮಧ್ಯೆ, ವಿದೇಶಗಳಿಂದ ಬಂದ ಮಾದಕ ಕಣ್ಣುಗಳ ಯುವಜನಾಂಗವನ್ನೂ ಕಾಣಬಹುದು. ಕಡಿಮೆ ದರದಲ್ಲಿ ದೊರೆಯುವ ಚರಸ್, ಅಪೀಮು ಮತ್ತು ‘ಮಲಾನಾ ಕ್ರೀಂ’ (ಮಾದಕವಸ್ತು) ಆಕರ್ಷಣೆಯು ಅವರನ್ನು ಖಂಡಾಂತರಗಳಿಂದ ಇಲ್ಲಿಗೆ ಕರೆತರುತ್ತಿದೆ. ಹಿಮಾಚಲ ಪ್ರದೇಶದ ಕಾನೂನಿನ ಪ್ರಕಾರ ಚರಸ್ ಮತ್ತಿತರ ಮಾದಕ ವಸ್ತುಗಳ ತಯಾರಿಕೆ, ಮಾರಾಟ ಕಾನೂನು ಬಾಹಿರ ಎನಿಸಿದ್ದರೂ, ಇದೊಂದು ಚಟುವಟಿಕೆ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದಂತೂ ಸತ್ಯ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆ
ದಾರಿ: ದೆಹಲಿ ಮತ್ತು ಚಂಡೀಗಡದಿಂದ ಕುಲುಗೆ ಬಸ್ ಸೌಕರ್ಯ; ಅಲ್ಲಿಂದ ಬಸ್ ಅಥವಾ ಖಾಸಗಿ ವಾಹನ
ಸಮಯ: ಎಪ್ರಿಲ್‌ನಿಂದ ಅಕ್ಟೋಬರ್ ತನಕ ಉತ್ತಮ ಹವಾ. ನಂತರ ತೀವ್ರ ಚಳಿ.
ತಂಗಲು ವ್ಯವಸ್ಥೆ: ಮಣಿಕರಣ್ ನಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಕಸೋಲ್‌ನಲ್ಲಿ ವಿವಿಧ ಬಜೆಟ್‌ನ ವಸತಿಗೃಹ, ಹೋಂಸ್ಟೇ ಲಭ್ಯ. ಮಣಿಕರಣ್‌ನಲ್ಲೂ ಬಜೆಟ್ ಹೋಟೆಲ್ ಮತ್ತು ಛತ್ರಗಳಿವೆ.

Related Articles

Leave a Reply

Your email address will not be published. Required fields are marked *

Language
Close