ಭ್ರಷ್ಟಾಚಾರದ ಬೇರುಗಳು ಬ್ಯಾಂಕುಗಳನ್ನೂ ಬಿಟ್ಟಿಲ್ಲ

Posted In : ಅಂಕಣಗಳು, ಪ್ರಥಮ ಪೂಜೆ

ಡಿ.5ರಂದು ದೆಹಲಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್‌ನ ಇಬ್ಬರು ಮ್ಯಾನೇಜರ್‌ಗಳನ್ನು ಬಂಧಿಸಲಾಯಿತು. ಅವರ ಹೆಸರು ಶೋಬಿತ್ ಸಿನ್ಹ ಹಾಗೂ ವಿನೀತ್ ಗುಪ್ತಾ. ಅವರಿಂದ ಒಟ್ಟು 5 ಕೆಜಿ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಯಿತು. ಆ್ಯಕ್ಸಿಸ್ ಬ್ಯಾಂಕ್‌ನಲ್ಲಿದ್ದ 11 ಖಾತೆಗಳನ್ನುಜಪ್ತಿ ಮಾಡಲಾಗಿದೆ. ಈ ಖಾತೆಗಳಲ್ಲಿ ನ.10ರಿಂದ 22ರ ಅವಧಿಯಲ್ಲಿ 39 ಕೋಟಿ ರು.ಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಲಾಗಿದೆ. ಈ ಖಾತೆಗಳು ಬೇರೆ ಬೇರೆ ಕಂಪನಿಗಳ ಹೆಸರಿನಲ್ಲಿದ್ದು, ಅದರಲ್ಲಿ ಒಂದು ಕಂಪನಿಯ ನಿರ್ದೇಶಕ ದಿನಗೂಲಿ ನೌಕರ!
ಈ ಹಣ ವರ್ಗಾವಣೆಗೆ ಬ್ಯಾಂಕ್ ಮ್ಯಾನೇಜರ್‌ಗಳು ಶೇ.2ರಷ್ಟು ಕಮಿಷನ್ ಪಡೆದಿದ್ದಾರೆ. ಕಮಿಷನ್‌ಗಳನ್ನು ಚಿನ್ನದ ಗಟ್ಟಿ ರೂಪದಲ್ಲಿ ನೀಡಲಾಗಿದೆ.

ಪಂಜಾಬ್‌ನಲ್ಲಿ ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಮ್ಯಾನೇಜರ್ ಮೌನೀಶ್ ಭಾರತಿ ಹಾಗೂ ಕ್ಯಾಶಿಯರ್ ಗೌರವ್ ಕುಮಾರ್‌ನನ್ನು ಬಂಧಿಸಲಾಗಿದೆ. ಇವರು ಬ್ಯಾಂಕ್ ಅವಧಿಯ ನಂತರ ಹಳೆಯ 500-1000 ನೋಟುಗಳನ್ನು ಕಮಿಷನ್ ಆಧಾರದಲ್ಲಿ ಬದಲು ಮಾಡುತ್ತಿದ್ದರು. 1 ಲಕ್ಷ ರು. ಮೌಲ್ಯದ ಹಳೆ ನೋಟು ನೀಡಿದರೆ, 80,000 ಹೊಸ ನೋಟು ನೀಡುತ್ತಿದ್ದರು.

ತಮಿಳುನಾಡಿನಲ್ಲಿ ಎಸ್‌ಬಿಎಂನ ಇಬ್ಬರು ಅಧಿಕಾರಿಗಳನ್ನು ಸೇರಿಸಿ ಒಟ್ಟು ಆರು ಜನರನ್ನು ಹಣ ಅಕ್ರಮ ಬದಲಾವಣೆ ವ್ಯವಹಾರದಲ್ಲಿ ಬಂಧಿಸಲಾಗಿದೆ.  ನ.8ರಂದು ಕೇಂದ್ರ ಸರಕಾರ 1000 ಹಾಗೂ 500 ರು. ನೋಟುಗಳನ್ನು ನಿಷೇಧಿಸಿದ ನಂತರ ಈವರೆಗೆ ದೇಶಾದ್ಯಂತ 27 ಬ್ಯಾಂಕ್ ಮ್ಯಾನೇಜರ್‌ಗಳನ್ನು ಅಮಾನತು ಮಾಡಲಾಗಿದೆ. ಆರು ಜನರನ್ನು ಹಣದ ವ್ಯವಹಾರ ಇಲ್ಲದ ಹುದ್ದೆಗೆ ವರ್ಗ ಮಾಡಲಾಗಿದೆ. 30ಕ್ಕೂ ಹೆಚ್ಚು ಬ್ಯಾಂಕ್ ಮ್ಯಾನೇಜರ್‌ಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಸಹಕಾರಿ ಬ್ಯಾಂಕುಗಳಲ್ಲಿ ನ.9ರಿಂದ 12ರ ಅವಧಿಯಲ್ಲಿ ಹಿಂದೆಂದೂ ಆಗದಷ್ಟು ವ್ಯವಹಾರವಾಗಿದೆ. ಕೆಲವಕ್ಕೆ ಈಗಾಗಲೇ ಬೀಗ ಜಡಿದಿದ್ದರೆ, ಇನ್ನು ಕೆಲವು ಸಹಕಾರಿ ಬ್ಯಾಂಕ್‌ಗಳ ವ್ಯವಹಾರವನ್ನು ಹಣಕಾಸು ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಸಹಕಾರಿ ಬ್ಯಾಂಕ್‌ಗಳಲ್ಲೂ ದೊಡ್ಡ ಮಟ್ಟಿನ ಅವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ. ಅಕ್ರಮದ ಸಾಧ್ಯತೆ ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿದೆ ಎಂಬ ಕಾರಣಕ್ಕೆ ಅವುಗಳ ವ್ಯವಹಾರಕ್ಕೆ ಸಾಕಷ್ಟು ನಿಬಂಧನೆಗಳನ್ನು ವಿಧಿಸಲಾಗಿದೆ. ಅಂಚೆ ಇಲಾಖೆಯಲ್ಲೂ ಹಳೆ ನೋಟು ಬದಲಾವಣೆ ಸಂದರ್ಭ 36 ಲಕ್ಷ ರು. ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅದಕ್ಕಾಗಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಸರಕಾರಿ ಎಂಜಿನಿಯರ್‌ಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 4.7 ಕೋಟಿ ರು. ಮೊತ್ತದ ಹೊಸ 2000 ರು. ನೋಟುಗಳು ಪತ್ತೆಯಾಗಿವೆ. ಚಿಕ್ಕಮಗಳೂರಿನಲ್ಲಿ 46 ಲಕ್ಷ ರು. ಹಾಗೂ ಕಾರ್ಕಳದಲ್ಲಿ 71 ಲಕ್ಷ ರು. ಮೌಲ್ಯದ ಹೊಸ ನೋಟುಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಾಮಾನ್ಯ ಜನ 2000 ರು.ಗಾಗಿ ಎಟಿಎಂ ಮುಂದೆ, ಬ್ಯಾಂಕ್‌ಗಳ ಮುಂದೆ ಸಾಲಾಗಿ ನಿಂತು ಕಾಯುತ್ತಿದ್ದಾರೆ. ದೇಶದ ಒಳಿತಿಗಾಗಿ ಇಷ್ಟೂ ಮಾಡಲು ಸಾಧ್ಯವಿಲ್ಲವೇ ನಮಗೆ ಅಂದುಕೊಳ್ಳುತ್ತಿದ್ದಾರೆ. ಆದರೆ ಕಳ್ಳರ ಕೈಲಿ ಕಂತೆ ಕಂತೆ ಹೊಸ ನೋಟುಗಳು!

ಬ್ಯಾಂಕ್‌ನವರ ಸಹಾಯವಿಲ್ಲದೆ ಇಷ್ಟೆಲ್ಲಾ ನಡೆಯಲು ಸಾಧ್ಯವಿದೆಯಾ? ಬ್ಯಾಂಕ್‌ನವರು ಕಳ್ಳರ ಜತೆ ಕೈಜೋಡಿಸದೇ ಇಷ್ಟು ದೊಡ್ಡ ಪ್ರಮಾಣದ ಹಣ ಹೇಗೆ ಹೊರಬರಲು ಸಾಧ್ಯ? ಹಣ ಬೇರೆಡೆ ಹರಿಯದೇ ಬ್ಯಾಂಕುಗಳಲ್ಲೇ ಹಣದ ಕೊರತೆಯಾಗಲು ಸಾಧ್ಯವೇ? ಕಪ್ಪು ಹಣ ಬಿಳಿ ಮಾಡಲಾಗುತ್ತಿದೆ, ಕಮಿಷನ್ ದಂಧೆ ನಡೆಯುತ್ತಿದೆ, ಇದರಲ್ಲಿ ಬ್ಯಾಂಕ್ ಮ್ಯಾನೇಜರ್‌ಗಳೇ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಹೆಚ್ಚಿನವರು ಅದನ್ನು ನಂಬಿರಲಿಲ್ಲ. ಕಾರಣ ಬ್ಯಾಂಕ್‌ಗಳಲ್ಲಿ ಹಾಗೆಲ್ಲ ಹಣ ಆಚೀಚೆ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ. ಅಲ್ಲಿನ ವ್ಯವಸ್ಥೆ ಅಷ್ಟು ಕಠಿಣವಾಗಿದೆ ಎಂಬ ಭ್ರಮೆ ಇತ್ತು.

ಆದರೆ ನೋಟು ಅಮಾನ್ಯದ ನಂತರ ಬ್ಯಾಂಕ್‌ಗಳ ಮೇಲಿನ ನಂಬಿಕೆಯೇ ಅಪಮೌಲ್ಯಗೊಂಡಿದೆ! ಸರಕಾರಿ ಕಚೇರಿಗಳಲ್ಲಿ, ರಾಜಕೀಯದಲ್ಲಿ, ಸ್ವಲ್ಪ ಮಟ್ಟಿಗೆ ಸಾರ್ವಜನಿಕರಲ್ಲೂ ಭ್ರಷ್ಟಾಚಾರ ರೂಢಿಗತವಾಗಿರುವುದು ಗೊತ್ತಿರುವ ಸಂಗತಿ. ಆದರೆ ಬ್ಯಾಂಕುಗಳಲ್ಲಿ ಈ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಮತ್ತು ನಡೆಯಲು ಸಾಧ್ಯವಿದೆ ಎಂದು ಯಾರೂ ಊಹಿಸಿರಲಿಲ್ಲ. ಬ್ಯಾಂಕುಗಳಲ್ಲಿ ಕೆಲಸ ಮಾಡುವವರೇ ಹೇಳುವ ಪ್ರಕಾರ ಅಲ್ಲಿ ಒಂದು ರುಪಾಯಿ ವ್ಯತ್ಯಾಸವಾಗುವುದೂ ತುಂಬ ಗಂಭೀರ ವಿಷಯ. ಪೈಸಾ ಪೈಸಾ ಲೆಕ್ಕ ಹೊಂದಾಣಿಕೆಯಾಗಬೇಕು. ಆದರೆ ಈಗಿನ ಸ್ಥಿತಿ ನೋಡಿದರೆ ಪೈಸಾ ಪೈಸಾ ಲೆಕ್ಕ ಹೊಂದಿಸುವುದು ಕಷ್ಟ ಆದರೆ ಕೋಟಿ ಕೋಟಿ ಲೆಕ್ಕ ಸುಲಭವಾಗಿ ಹೊಂದಿಬಿಡುತ್ತವೆ ಎಂಬಂತಿದೆ.

ಎಲ್ಲ ವ್ಯವಹಾರ ಬ್ಯಾಂಕುಗಳ ಮೂಲಕ ನಡೆಯಲಿ ಎನ್ನುತ್ತಿದೆ ಕೇಂದ್ರ ಸರಕಾರ. ಡಿಜಿಟಲ್ ಅಥವಾ ಪ್ಲಾಸ್ಟಿಕ್ ಮನಿಯಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎನ್ನುತ್ತಿದೆ. ಆದರೆ ಬ್ಯಾಂಕ್ ಮ್ಯಾನೇಜರ್‌ಗಳ ಸಹಾಯದಿಂದ ನಡೆಯುತ್ತಿರುವ ಅವ್ಯವಹಾರ ನೋಡಿದರೆ ಜನರು ಬ್ಯಾಂಕುಗಳ ಮೇಲೆ ಹೇಗೆ ನಂಬಿಕೆ ಇಡಬೇಕು?

ಹಳೆ ನೋಟುಗಳನ್ನು ಬದಲಾವಣೆ ಮಾಡಿಸಿಕೊಳ್ಳಲು ಹೋದ ಹಲವರಿಗೆ ಆಘಾತ ಕಾದಿತ್ತು. ಯಾಕೆಂದರೆ ಅವರು ಮೊದಲ ಬಾರಿಗೆ ಹಣ ಬದಲಾಯಿಸಿಕೊಳ್ಳಲು ಬ್ಯಾಂಕ್‌ಗೆ ಹೋಗಿದ್ದರೂ, ಈಗಾಗಲೇ ಹಣ ಬದಲಾಯಿಸಿಕೊಂಡಿದ್ದೀರಲ್ಲ ಎಂಬ ಉತ್ತರ ಬ್ಯಾಂಕ್ ಸಿಬ್ಬಂದಿಯಿಂದ ದೊರೆತಿದೆ. ಅದರರ್ಥ ಇವರ ದಾಖಲೆಗಳನ್ನು ಬಳಸಿ ಹಣ ಬದಲಾಯಿಸಿಕೊಂಡಿದ್ದಾರೆ. ಈ ಕೆಲಸ ಮಾಡಿದ್ದು ಬೇರೆ ಯಾರೋ ಅಲ್ಲ. ಬ್ಯಾಂಕಿನವರೇ. ಯಾಕೆಂದರೆ ಬ್ಯಾಂಕ್ ಖಾತೆಗಳಲ್ಲಿ ಕೆಲವು ದಾಖಲೆಗಳು ಲಭ್ಯವಿರುತ್ತವೆ. ಇನ್ನು ಕೆಲವರು ಬ್ಯಾಂಕ್‌ಗೆ ಸಲ್ಲಿಸಿದ ದಾಖಲೆಗಳು ಅವರಿಗೆ ಲಭ್ಯವಿರುತ್ತವೆ. ಅದನ್ನೇ ಬಳಸಿಕೊಂಡು, ಅವರ ಹೆಸರಿನಲ್ಲಿ ಹಣ ಬದಲಾಯಿಸಿದಂತೆ ದಾಖಲೆ ಸೃಷ್ಟಿಸಿ, ಹಣವನ್ನು ಯಾರಿಗೋ ನೀಡಲಾಗಿದೆ. ಹೀಗೆ ಮಾಡಿದವರು ನಾಳೆ ನಮ್ಮ- ನಿಮ್ಮ ಖಾತೆಯ ಕೆಲವು ವಿವರಗಳನ್ನು ಕಳ್ಳರಿಗೆ ನೀಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ನಂಬುವುದಾದರೂ ಹೇಗೆ?

ಸಾಮಾನ್ಯ ವ್ಯಕ್ತಿ ತನ್ನದೇ ಹಣ ಪಡೆಯಲು ಕಷ್ಟಪಡಬೇಕು. ಆದರೆ ಕಳ್ಳರ ಕೈಗೆ ಸುಲಭವಾಗಿ ಹಣ ಸಿಗುತ್ತಿದೆ!
1969ರಲ್ಲಿ 14 ಹಾಗೂ 1980ರಲ್ಲಿ ಆರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದೇ ಅವು ಜನರಿಗೆ ಹತ್ತಿರವಾಗಬೇಕು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು, ಜನಸಾಮಾನ್ಯರು ಬ್ಯಾಂಕ್‌ಗಳ ಮೂಲಕ ವ್ಯವಹಾರ ನಡೆಸುವಂತಾಗಬೇಕು ಎಂದು. ಆದರೆ ಆಗಿದ್ದೇನು? ಇಂದಿಗೂ ಸಾಮಾನ್ಯ ಜನರಿಗೆ ಬ್ಯಾಂಕುಗಳು ಹತ್ತಿರವಾಗಿಲ್ಲ. ಬದಲಾಗಿ ಉದ್ಯಮಿಗಳ, ದೊಡ್ಡ ದೊಡ್ಡ ವ್ಯಕ್ತಿಗಳ ಪಾಲಿಗಷ್ಟೇ ಅನುಕೂಲವಾಗಿದೆ. ಕೆಲವು ವರ್ಷಗಳ ಹಿಂದಿನವರೆಗೂ ಸಾಮಾನ್ಯ ಜನ ಬ್ಯಾಂಕಿಗೆ ಹೋದರೆ ಬ್ಯಾಂಕ್ ಸಿಬ್ಬಂದಿ ಒಂದು ರೀತಿ ಅಸಹನೆಯಿಂದಲೇ ವರ್ತಿಸುತ್ತಿದ್ದರು. ದೊಡ್ಡ ದೊಡ್ಡ ಉದ್ಯಮದಲ್ಲಿ ತೊಡಗುವವರಿಗೆ ಸಾಲ ಕೊಟ್ಟಾಗ ಕೆಲವೊಮ್ಮೆ ಉದ್ಯಮದಲ್ಲಾದ ನಷ್ಟದಿಂದ, ಅವರು ಹಣ ಕಟ್ಟದೇ ಇರಬಹುದು. ಆದರೆ ಎಷ್ಟೋ ಬಾರಿ ಉದ್ಯಮ ನಷ್ಟದ ನೆಪದಿಂದ ಬ್ಯಾಂಕಿಗೆ ಹಣ ವಂಚನೆ ಮಾಡುವವರಿದ್ದಾರೆ. ಇದರಿಂದಾಗಿಯೇ ಇಂದು ಬ್ಯಾಂಕುಗಳು 3 ವರ್ಷಗಳಲ್ಲಿ 22,743 ಕೋಟಿ ರು. ನಷ್ಟ ಅನುಭವಿಸಿವೆ.

ಒಬ್ಬ ಸಾಮಾನ್ಯ ಪ್ರಜೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಹೋದರೆ ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪುರಾವೆ, ಸರಕಾರದಿಂದ ನೀಡಲಾದ ಯಾವುದಾದರೂ ಗುರುತಿನ ಪತ್ರ ಹೀಗೆ ಹಲವು ದಾಖಲೆಗಳನ್ನು ಕೇಳುತ್ತಾರೆ. ಅಲ್ಲಿ ನಮ್ಮದೇ ದುಡ್ಡು ಇಡುವುದಕ್ಕೆ ಇಷ್ಟು ಕಷ್ಟ. ಇನ್ನು ನೀವು ಎಟಿಎಂ ಕಾರ್ಡ್ ಇಲ್ಲದೆ, ಏನೋ ಅರ್ಜೆಂಟಿದೆ ಎಂದು ಪಾಸ್‌ಬುಕ್ ಇಲ್ಲದೆ ನಿಮ್ಮದೇ ಅಕೌಂಟ್‌ನಿಂದ ದುಡ್ಡು ತೆಗೆಯಲು ಹೋದರೆ, ಹಾಗೆ ದುಡ್ಡು ಕೊಡಲು ಸಾಧ್ಯವೇ ಇಲ್ಲ ಎಂದು ನಿಮ್ಮನ್ನು ವಾಪಸ್ ಕಳುಹಿಸಿದರೂ ಆಶ್ಚರ್ಯವಿಲ್ಲ. ಇನ್ನು ಸಾಲ ಕೇಳಲು ಹೋದರಂತೂ ಮುಗಿದೇ ಹೋಯಿತು. ನಿಮ್ಮಲ್ಲಿರುವ ಅಷ್ಟೂ ದಾಖಲೆಗಳನ್ನು ನೀಡಿದರೂ, ಮತ್ತೇನನ್ನೋ ಕೇಳದೇ ಬಿಡುವುದಿಲ್ಲ. ಸಾಲ ಕೊಡುವುದಕ್ಕಿಂತ ಕೊಡದಿರಲೇ ಅವರು ಪ್ರಯತ್ನಿಸುತ್ತಿದ್ದಾರೇನೊ ಎಂದು ನಿಮಗೆ ಅನುಮಾನ ಬರುವಂತಿರುತ್ತದೆ. ಅವುಗಳನ್ನೆಲ್ಲ ನೋಡಿದರೆ, ಇಷ್ಟೆಲ್ಲ ಮುಂಜಾಗ್ರತೆ ತೆಗೆದುಕೊಳ್ಳುತ್ತಾರೆ ಹಣದ ಬಗ್ಗೆ ಎಂಬ ಭಾವನೆ ಬರುತ್ತದೆ.

ಆದರೆ ಆ ನಂಬಿಕೆಗಳೆಲ್ಲ ಈಗ ನುಚ್ಚು ನೂರಾಗಿದೆ. ಪ್ರಾಮಾಣಿಕರಿಗಿಂತ ಮೋಸ ಮಾಡುವವರಿಗೆ ಹೆಚ್ಚು ಸುಲಭವಾಗಿ ಸಾಲ ಸಿಕ್ಕಿಬಿಡುತ್ತದೇನೊ ಎಂಬ ಅನುಮಾನ ಈಗೀಗ ಮೂಡುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ನಿಯಮಗಳ ಮೂಲಕ ಬಿಗಿಗೊಳಿಸಿದ್ದರಿಂದ ಹಣಕಾಸು ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಆಗಿರುವ ಕಡಿಮೆ ಪ್ರಕರಣಗಳಲ್ಲೇ ಮೊತ್ತ ಹೆಚ್ಚಿರುವುದು ಗಮನಾರ್ಹ.
ದೇಶದಲ್ಲಿ 12 ಲಕ್ಷ ಬ್ಯಾಂಕ್ ಉದ್ಯೋಗಿಗಳಿದ್ದಾರೆ. ಅವರಲ್ಲಿ ಇಂತಹ ಅವ್ಯವಹಾರದಲ್ಲಿ ಭಾಗಿಯಾಗಿರುವುದು 100 ಜನ ಇರಬಹುದು. ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ದೊಡ್ಡದಿದೆ. ಆದರೆ ಅವ್ಯವಹಾರದ ಪ್ರಕರಣಗಳು ಜನರ ನಂಬಿಕೆಗೆ ಘಾಸಿ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಕಪ್ಪು ಹಣ ಬಿಳಿ ಮಾಡುವಲ್ಲಿ ತೊಡಗಿರುವ ಬ್ಯಾಂಕ್ ಮ್ಯಾನೇಜರ್‌ಗಳನ್ನು ಗಮನಿಸಿದರೆ ನಮ್ಮ ಭ್ರಷ್ಟ ವ್ಯವಸ್ಥೆ ಬೇರುಗಳು ಎಷ್ಟು ಆಳವಾಗಿವೆ ಎಂಬುದು ಗೊತ್ತಾಗುತ್ತದೆ. ನಾವೆಷ್ಟು ಭ್ರಷ್ಟರಾಗಿದ್ದೇವೆ? ಹಣಕ್ಕಾಗಿ ಏನು ಮಾಡಲೂ ನಾವು ಯಾಕೆ ಹೇಸುವುದಿಲ್ಲ? ದೇಶದ ಒಳಿತಿಗಾಗಿ ಒಂದು ಯೋಜನೆ ಜಾರಿ ಮಾಡಿದರೆ ಅದನ್ನು ಹಾಳು ಮಾಡಲು ಹೇಗೆ ಎಲ್ಲ ಭ್ರಷ್ಟರು ಒಂದಾಗುತ್ತಾರೆ ಅಥವಾ ಅದೇ ಅವಕಾಶ ಬಳಸಿಕೊಂಡು ನಾವು ಹೇಗೆ ಹಣ ಮಾಡಬಹುದು ಎಂಬುದನ್ನು ಹುಡುಕುತ್ತಾರೆ ಎಂಬುದಕ್ಕೆ ನೋಟು ಅಮಾನ್ಯ ಒಳ್ಳೆಯ ಉದಾಹರಣೆ. ಸರಕಾರ ಏನೇ ಪ್ರಯತ್ನ ಮಾಡಲಿ, ಅದನ್ನು ಹಾಳು ಮಾಡಲು ನಮ್ಮಲ್ಲೇ, ವ್ಯವಸ್ಥೆಯಲ್ಲೇ ಒಂದಷ್ಟು ಮಂದಿ ಸಿದ್ಧರಾಗಿರುತ್ತಾರೆ. ಮೊದಲು ಯೋಜನೆಯನ್ನು ವಿಫಲಗೊಳಿಸುತ್ತಾರೆ. ಆಮೇಲೆ ‘ಮೊದಲೇ ಹೇಳಲಿಲ್ಲವೇ ಇದೆಲ್ಲ ಪ್ರಯೋಜನಕ್ಕೆ ಬರುವುದಿಲ್ಲ ಎಂದು’ ಹಳಿಯುತ್ತಾರೆ. ಭ್ರಷ್ಟಾಚಾರದ ಬೇರುಗಳು ತುಂಬ ಆಳಕ್ಕಿಳಿದುಬಿಟ್ಟಿವೆ. ಅದನ್ನು ಬುಡಸಹಿತ ಕೀಳುವುದು ಅಷ್ಟು ಸುಲಭದ ಕೆಲಸವಲ್ಲ.

Leave a Reply

Your email address will not be published. Required fields are marked *

six + 10 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top