‘ಮತ’ದ ಮೇಲಿನ ಮಮಕಾರ ತೊರೆಯುವವನೇ ಮತದಾರ?

Posted In : ಸಂಗಮ, ಸಂಪುಟ

ವಿದೇಶದಲ್ಲಿ ನಮ್ಮ ದೇಶದವರು ಸಿಕ್ಕೊಡನೆ ಆಗುವ ಸಂತಸಕ್ಕೆ ಪಾರವೇ ಇರಲ್ಲ. ಅವರು ನಮ್ಮೂರಿನವರೇ ಆದರಂತೂ ಮನಸ್ಸಿನ ಮೂಲೆಯೊಳಗೆ ಆತ್ಮೀಯತೆ ಪುಟಿದೇಳುತ್ತದೆ. ಅದರಲ್ಲೂ ಹಲವರಿಗೆ ತಮ್ಮದೇ ಜಾತಿ ಎಂದರಂತೂ ಅರಿವಿಲ್ಲದೆಯೇ ಮನೆ ಸದಸ್ಯರಂತೆ ಭಾವಿಸಲಾರಂಭಿಸುತ್ತಾರೆ. ಅಷ್ಟೇ ಯಾಕೆ ಫೇಸ್‌ಬುಕ್‌ನಲ್ಲಿ ಹೊಸ ಪರಿಚಯವಾಗುವಾಗಲೂ ಹೆಸರಿನಲ್ಲೇ ಜಾತಿ ಹುಡುಕುವವರು ಕೆಲವರಿದ್ದಾರೆ. ಅಷ್ಟು ಭಾವಾನಾತ್ಮಕ ಶಕ್ತಿ ನಮ್ಮ ಧರ್ಮ, ಜಾತಿಯಲ್ಲಿ ಬೆಸೆದುಕೊಂಡಿರುವಾಗ ಚುನಾವಣೆಯಲ್ಲಿ ಜಾತಿ ಒಲವು ತೊರೆದು ಕಡಿಮೆ ಭ್ರಷ್ಟಾಚಾರಿ, ಯೋಗ್ಯ ಅಭ್ಯರ್ಥಿ ಆಯ್ಕೆಮಾಡಲು ಮತದಾರ ಮನಸ್ಸು ಮಾಡುವನೇ ಎಂಬುದು ಇಂದಿಗೂ ಪ್ರಶ್ನಾರ್ಹ.

ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಾತಿ, ಮತ, ಭಾಷೆ ಆಧಾರದ ಮೇಲೆ ಮತ ಯಾಚಿಸುವಂತಿಲ್ಲ. ಇದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123(3) ಅನ್ವಯ ಸಂವಿಧಾನ ಬಾಹಿರ ಎನಿಸಿಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಸಾಂವಿಧಾನಿಕ ಪೀಠ 4:3 ಬಹುಮತದ ತೀರ್ಪು ನೀಡಿದೆ. ನೀವು ನನ್ನ ಜಾತಿಯವರು, ನನಗೆ ಮತ ಹಾಕಿದರೆ ಸಮುದಾಯದವರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಗಂಟೆಗಟ್ಟಲೇ ಉದ್ದುದ್ದ ಭಾಷಣ ಬಿಗಿಯುವ ರಾಜಕಾರಣಿಗೆ ತಕ್ಕ ಪಾಠ ಕಲಿಸುವ ಮೂಲಕ ಮತ ಬ್ಯಾಂಕ್ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸುಪ್ರೀಂ ತೀರ್ಪು ಅಭಿನಂದನಾರ್ಹ. ಆದರೆ ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದೇ ಎಂಬುದೇ ಸದ್ಯದ ಕಗ್ಗಂಟು, ಬಗೆಹರಿಸಲು ಅಸಾಧ್ಯವೇನೋ ಎಂಬಂತಹ ಪ್ರಶ್ನೆ, ಅನುಮಾನ, ದುಗುಡ…

ಚುನಾವಣೆ ಎಂಬುದು ಸರ್ವ ಸ್ವತಂತ್ರ ಪ್ರಕ್ರಿಯೆ. ಇದು ಜಾತಿ-ಧರ್ಮಗಳ ಆಧಾರದಲ್ಲಿ ನಡೆಯಬಾರದು. ಜಾತ್ಯತೀತವಾಗಿ ನಡೆಯಬೇಕು. ನೀನು ನನ್ನ ಜಾತಿ, ನನಗೆ ಮತ ನೀಡಬೇಕು ಎಂದು ಅಭ್ಯರ್ಥಿ ವಿನಂತಿ ಅಥವಾ ಒತ್ತಡ ಹೇರುವಂತಿಲ್ಲ ಒಂದು ವೇಳೆ ಒತ್ತಾಯಿಸಿದರೆ ಅಭ್ಯರ್ಥಿಯನ್ನು ಅನೂರ್ಜಿತಗೊಳಿಸಲಾಗುವುದು, ಬೆಂಬಲಿತರಿಗೂ ಇದು ಅನ್ವಯ ಎಂಬ ಮಹತ್ವದ ತೀರ್ಪು ಯಥಾವತ್ತಾಗಿ ಅನುಷ್ಠಾನಗೊಂಡರೆ ರಾಜಕೀಯ ಕ್ಷೇತ್ರದಲ್ಲಿ ಪರಿವರ್ತನೆ ಬೆಳಕು ಹರಿಯುವುದು ಖಚಿತ. ಆದರೆ ತೀರ್ಪಿನ ಸಮರ್ಪಕ ಅನುಷ್ಠಾನ ಮತದಾರನ ಮುಷ್ಠಿಯಲ್ಲಿರುವುದು ಅಷ್ಟೇ ಸತ್ಯ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‌ಪಿ ಯಾವುದೇ ಪಕ್ಷವಾಗಿರಲಿ ಅವರಿಗೆ ಬೇಕಿರುವುದು ಸಮುದಾಯದ ಅಭಿವೃದ್ಧಿಯಲ್ಲ.

ಪಕ್ಷ ಹಾಗೂ ವೈಯಕ್ತಿಕ ಏಳಿಗೆ ಮಾತ್ರ. ಹಾಗಾಗಿಯೇ ಯಾವ ಕ್ಷೇತ್ರದಲ್ಲಿ ಯಾವ ಜಾತಿ ಮತದಾರರು ಹೆಚ್ಚಿದ್ದಾರೋ ಅದೇ ಜಾತಿಯ ಅಭ್ಯರ್ಥಿಗೆ ಟಿಕೆಟ್ ನೀಡಲು ಎಲ್ಲ ಪಕ್ಷದವರೂ ಮುಗಿಬೀಳುತ್ತಾರೆ. ಇದನ್ನರಿತೋ ಅರಿಯದೆಯೋ ಮತದಾರ ರಾಜಕಾರಣಿಗಳ ಒಳಸುಳಿವಿಗೆ ಸಿಲುಕಿ ಅವರ ಬಣ್ಣದ ಮಾತುಗಳಿಗೆ ಮರುಳಾಗಿ, ನಮ್ಮ ಜಾತಿಯವ, ನಮ್ಮ ನಾಯಕ, ಇವನಿಂದಲೇ ನಮ್ಮ ಅಭಿವೃದ್ಧಿ ಎಂಬ ಅಂಧಾಭಿಮಾನದಿಂದ ಅವರ ರಾಜಕೀಯ ಪಗಡೆಯಾಟಕ್ಕೆ ದಾಳವಾಗುತ್ತಾನೆ. ನಿಜ ಬಣ್ಣ ಬಯಲಾಗುವಷ್ಟರಲ್ಲೇ ಕಾಲ ಮೀರಿರುತ್ತದೆ. ಬಳಿಕ ಅರೆಗಳಿಗೆ ಶಪಿಸಿ ಮೌನಕ್ಕೆ ಜಾರುತ್ತಾನೆ. ಇದು ನಿರಂತರ ಪ್ರಕ್ರಿಯೆಯಾಗಿಬಿಡುತ್ತದೆ. ಹೀಗಾದರೆ ಸುಪ್ರೀಂ ಆಶಯ ಈಡೇರುವುದೇ? ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ರಾಜಕೀಯದಲ್ಲಿ ಜಾತಿ-ಧರ್ಮದ ಆಧಾರದ ಮೇಲೆ ಮೀಸಲು ಕಲ್ಪಿಸಲಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಬಹಿರಂಗವಾಗಿಯೇ ಜಾತಿ ಆಧಾರದ ಮತಬ್ಯಾಂಕ್‌ಗಳ ಮೇಲೆ ಅಧಿಪತ್ಯ ಸಾಧಿಸಿವೆ.

ಉತ್ತರಪ್ರದೇಶದಲ್ಲಿ ಬಿಎಸ್‌ಪಿಯ ಮಾಯಾವತಿ ಅವರು ಮುಸ್ಲಿಮರಿಗೆ 97, ದಲಿತರಿಗೆ 87, ಹಿಂದುಳಿದವರಿಗೆ 106, ಬ್ರಾಹ್ಮಣರಿಗೆ 66, ರಜಪೂತರಿಗೆ 36, ವೈಶ್ಯ ಪಂಜಾಬಿಯರಿಗೆ 11 ಟಿಕೆಟ್ ಹಂಚಿದ್ದಾರೆ. ಇಲ್ಲಿ ದಲಿತರು, ಮುಸ್ಲಿಮರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆಯನ್ನೇರುವ ರಾಜಕೀಯ ಕಾರ್ಯತಂತ್ರ ಎಂಬುದು ಜಗಜ್ಜಾಹೀರು. ಆದರೆ ಹಿಂದುಳಿದವರಿಗೆ ರಾಜಕೀಯ ಮೀಸಲು ಕಲ್ಪಿಸಲು ಸಂವಿಧಾನದಲ್ಲೇ ಅವಕಾಶವಿರುವುದರಿಂದ ಇದನ್ನು ಕಾನೂನಾತ್ಮಕವಾಗಿ ಯಾರೂ ಪ್ರಶ್ನಿಸುವಂತಿಲ್ಲ. ಸುಪ್ರೀಂ ಆದೇಶವಿದ್ದರೂ ‘ಮುಸ್ಲಿಂ ಸಮುದಾಯವರೆಲ್ಲ ಒಂದಾಗಿ ನಮಗೆ ಮೋಸ ಮಾಡಿರುವ ಮುಲಾಯಂ ಸಿಂಗ್ ಯಾದವ್ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್, ಸೈಯ್ಯದ್ ಇಮಾಮ್ ಬುಕಾರಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಆದರೂ ಅವರ ವಿರುದ್ಧ ಯಾವ ಕ್ರಮವನ್ನೂ ಜರುಗಿಸಿಲ್ಲ. ಹೀಗಾದರೆ ಜಾತ್ಯತೀತ ರಾಜಕಾರಣ ಜಾರಿಯಾಗುವುದಾದರೂ ಹೇಗೆ? ವಸಾಹತು ಕಾಲದ ಕೆಲವು ತಿಳಿವಳಿಕೆ ಆಧರಿಸಿ ಬೆಳೆದಿರುವ ರಾಷ್ಟ್ರೀಯ ರಾಜಕೀಯದಲ್ಲಿ ಜಾತಿ, ಧರ್ಮ ಪ್ರಮುಖ ಪಾತ್ರವಹಿಸಿದೆ. ಚುನಾವಣೆ ಎಂದರೆ ಜಾತಿಗಳ ನಡುವಣ ಸ್ಪರ್ಧೆ ಎಂತಲೇ ಬಿಂಬಿತವಾಗಿವೆ.

ಮತದಾರರು ಇದಕ್ಕೇ ಪ್ರೇರಕರಂತೆ ತಮ್ಮ ಜಾತಿಯವರಿಗೆ ಮತ ಚಲಾಯಿಸುವ ಮೂಲಕ ಮತ ಬ್ಯಾಂಕ್‌ಗೆ ನೆಲೆಯಾಗುತ್ತಾರೆ. ಅಲ್ಲದೇ ಮತ ಬ್ಯಾಂಕ್ ರಾಜಕಾರಣಕ್ಕಾಗಿ ರಾಜಕೀಯ ಪಕ್ಷಗಳು ಕೆಲ ಮತಾಂಧ ಸಂಘಟನೆಗಳನ್ನು ದಾಳವಾಗಿ ಬಳಸಿಕೊಂಡು ಆ ಜಯಂತಿ, ಈ ಜಯಂತಿ ಎಂದು ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಪಸಂಖ್ಯಾತರ, ಅಹಿಂದ ಹೀಗೆ ಧರ್ಮ, ಜಾತಿವಾರು ಮತದಾರರ ತುಷ್ಟೀಕರಣಕ್ಕೆ ರಾಜಕೀಯ ಪಕ್ಷಗಳು ಅಣಿಯಾಗುತ್ತವೆ. ನಿಮಗೆ ರಾಮಮಂದಿರ ಕಟ್ಟಿಸುತ್ತೇವೆ, ಮಸೀದಿ ಕಟ್ಟಿಸುತ್ತೇವೆ, ಸಮುದಾಯದ ಅಭಿವೃದ್ಧಿಗೆ ನೂರಾರು ಭಾಗ್ಯ ಯೋಜನೆ ಸೇರಿ ಪುಂಖಾನುಪುಂಖವಾಗಿ ಭರವಸೆಗಳ ಸರಮಾಲೆಯನ್ನು ಜೋಡಿಸುತ್ತಾರೆ. ಇದಕ್ಕೆ ಮತದಾರನಲ್ಲಿ ನಿದ್ರಾವಸ್ಥೆಯಲ್ಲಿದ್ದ ಜಾತಿ ಒಲವು ತಟ್ಟನೇ ಎದ್ದು ಜನನಾಯಕರ ವೈಯಕ್ತಿಕ ಏಳಿಗೆಗೆ ಮೆಟ್ಟಿಲುಗಳನ್ನು ನಿರ್ಮಿಸುತ್ತದೆ.

ಅದರಲ್ಲೂ ಚುನಾವಣೆಗೆ ಮುನ್ನ ಜಾತಿ ಸಮಾವೇಶಗಳನ್ನು ನಡೆಸುವ ಮೂಲಕ ಮತದಾರರಲ್ಲಿ ನೆಲೆಸಿರುವ ಜಾತಿ ಎಂಬ ಪೆಡಂಭೂತಕ್ಕೆ ಭಕ್ಷ್ಯ ಭೋಜನವನ್ನು ಉಣಬಡಿಸುವ ಕೆಲಸವನ್ನು ರಾಜಕಾರಣಿಗಳು ಅಚ್ಚುಕಟ್ಟಾಗಿ ಮಾಡುತ್ತಾರೆ. ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆಯ ಹಿತಾಸಕ್ತಿ ಬಗ್ಗೆ ಒಲವು ತೋರಿದರೆ, ಕಾಂಗ್ರೆಸ್ ಮುಖಂಡರು ನಿಮ್ಮ ಅವನತಿಗೆ ಬಿಜೆಪಿ ಮಸಲತ್ತು ಮಾಡುತ್ತಿದೆ ಎಂದು ಅಲ್ಪಸಂಖ್ಯಾತರನ್ನು ಎತ್ತಿಕಟ್ಟುತ್ತಾರೆ. ಅದರಂತೆ ಕಾಂಗ್ರೆೆಸ್ ಅಲ್ಪಸಂಖ್ಯಾತರ ಹಿತಾಸಕ್ತಿ ನೆಪದಲ್ಲಿ ಶಾದಿ ಭಾಗ್ಯದಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದಾಗ ಪ್ರಚಾರದ ವೇಳೆ ಮುಸ್ಲಿಮರಿಗೆ ಮಣೆ ಹಾಕಿ ಹಿಂದೂಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಬಿಜೆಪಿಯವರು ಮತದಾರರ ಕಿವಿಯನ್ನೂದುತ್ತಾರೆ. ಇದು ಕೋಮುಗಲಭೆ, ಹತ್ಯಾಕಾಂಡಗಳಿಗೆ ನಾಂದಿಯಾಗುತ್ತದೆ. ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಓಟು ಪಡೆಯಲು ರಾಜಕೀಯ ಪಕ್ಷಗಳು ಮಾಡುವ ಗಿಮಿಕ್‌ಗೆ ಮತದಾರ ಬಲಿಪಶುವಾಗುತ್ತಾನೆ.

ಇಂತಹ ಪ್ರಕರಣಗಳು ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ನಡೆಯುತ್ತಲೇ ಇವೆ. 1952ರಲ್ಲಿ ಕಾಂಗ್ರೆಸ್ 100 ರಷ್ಟು ಮುಸ್ಲಿಂ ಅಲ್ಪಸಂಖ್ಯಾತರ ಮತ ಗಳಿಸುವಲ್ಲಿ ಯಶಸ್ವಿಯಾಯಿತು. 1961ರಲ್ಲಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದ ಕೋಮುಗಲಭೆ ಜಾತ್ಯತೀತದ ಸ್ವರೂಪವನ್ನೇ ಬದಲಾಯಿಸಿತು. 1985ರಲ್ಲಿ ಶಾ ಬಾನು ಪ್ರಕರಣದಲ್ಲಿ ಆಗಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮುಸ್ಲಿಂ ಮೂಲಭೂತವಾದಿಗಳ ಪರವಾಗಿ ವರ್ತಿಸುವ ಮೂಲಕ ಬಿಜೆಪಿಗೆ ವಿಶಾಲ ರಾಜಕೀಯ ವೇದಿಕೆಯನ್ನು ಕಲ್ಪಿಸಿಕೊಟ್ಟರು. ಇದರಿಂದ 1980-1989ರ ಕಾಲಘಟ್ಟದಲ್ಲಿ ಧರ್ಮಗಳ ಧೃವೀಕರಣ ಮತ್ತು ಜಾತಿಗಳ ಧೃವೀಕರಣ ಉಂಟಾಗಿ ಪ್ರತಿ 10 ಮಿಲಿಯನ್‌ಗೆ ಸರಾಸರಿಯಾಗಿ 13 ಮಂದಿ ಮೃತಪಟ್ಟರು. ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಮತದಾರ ಜಾತಿ, ಧರ್ಮಕ್ಕೆ ಮಣೆ ಹಾಕದೆ ಅಭ್ಯರ್ಥಿಗಳ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ.

ರಾಜಕಾರಣದಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕ ವಿಷಯಗಳನ್ನು ಬೆರೆಸಬಾರದು ಎಂಬುದು ಮಹಾತ್ಮ ಗಾಂಧೀಜಿ ಆಶಯ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಜಾತಿಯೇ ಟ್ರಂಪ್‌ಕಾರ್ಡ್ ಆಗಿಬಿಟ್ಟಿದೆ. ಜಾತಿ ಜಾತಿಗಳು, ಧರ್ಮ ಧರ್ಮಗಳ ನಡುವಿನ ವೈಷಮ್ಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವ ವಿಷಜಂತುಗಳಿಗೆ ನಾವಾಗಿಯೇ ಆಹಾರವಾಗುತ್ತಿರುವುದು ಮೂರ್ಖತನದ ಪರಮಾಧಿಯನ್ನು ಬಿಂಬಿಸುತ್ತದೆ. ಅಭ್ಯರ್ಥಿಗಳ ಸಾಮಾರ್ಥ್ಯಕ್ಕಿಂತ ಜಾತಿ ಬಲವೇ ಹೆಚ್ಚಾದರೆ ನಮ್ಮ ಅವನತಿಗೆ ನಾವೇ ರಹದಾರಿ ಸೃಷ್ಟಿಸಿದಂತೆ. ಒಂದು ವೇಳೆ ಮತದಾರನೇ ಸ್ವಪ್ರೇರಿತನಾಗಿ ರಾಜಕೀಯ ಪಕ್ಷಗಳ ಜಾತಿ, ಧರ್ಮದ ಹೆಸರಿನ ಬಲೆಗೆ ಬೀಳದೆ ಉತ್ತಮ ಜನನಾಯಕನ ಆಯ್ಕೆಗೆ ಮುಂದಾದರೆ ಸುಪ್ರೀಂ ಆದೇಶ ಸಮರ್ಪಕ ಅನುಷ್ಠಾನಕ್ಕೆ ಸಹಕರಿಸಿದಂತಾಗುತ್ತದೆ. ಅಲ್ಲದೇ ಜಾತಿ, ಸ್ವಪ್ರತಿಷ್ಠೆ, ಸ್ವಜನಪಕ್ಷಪಾತದ ರಾಜಕಾರಣದಿಂದ ಅಮಾಯಕರು ಬಲಿಯಾಗುವುದು ನಿಲ್ಲುತ್ತದೆ. ಇನ್ನೇನಿದ್ದರೂ ಜಾತಿ ರಾಜಕಾರಣದಿಂದ ಜನಪರ ರಾಜಕಾರಣದತ್ತ ಚಿತ್ತ ಹರಿಸುವ ನಾಯಕನ ಆಯ್ಕೆ ಮತದಾರನ ವಿವೇಚನೆಗೆ ಬಿಟ್ಟಿದ್ದು.

ನಮ್ಮನ್ನು ಇನ್ಯಾರೋ ಬಂದು ಎಚ್ಚರಿಸಬೇಕು, ತಿದ್ದಬೇಕು, ತೀಡಬೇಕು ಎಂಬ ಮನೋಭಾವನೆ ನಮ್ಮಲ್ಲಿದೆ. ಆದರೆ ಮತದಾನ ಮಾಡಲು ಸಾಲಿನಲ್ಲಿ ನಿಂತಾಗ ಜಾತಿ, ಧರ್ಮ ಬಿಟ್ಟು ದೇಶದ ಬಗ್ಗೆ, ಅಭಿವೃದ್ಧಿಯ ಬಗ್ಗೆ ಒಮ್ಮೆ ಯೋಚಿಸಿದರೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು. ಅದಕ್ಕೆ ಸುಪ್ರೀಂ ಕೋರ್ಟೇ ಬಂದು ನಮ್ಮನ್ನು ಎಚ್ಚರಿಸಬೇಕಿಲ್ಲ. ಇದೀಗ ಎಚ್ಚರಿಸಿದ್ದು ಸಹ ಒಳ್ಳೆಯ ಕಾರಣಕ್ಕೆ ಆಗಿರುವುದರಿಂದ ಮತಗಟ್ಟೆಯ ಸಾಲಿನಲ್ಲಿ ನಿಂತಾಗ ಒಮ್ಮೆ ದೇಶದ ಬಗ್ಗೆ ಯೋಚಿಸಿ.

-ಶ್ವೇತಾ. ಕೆ.ಪಿ
ಪತ್ರಕರ್ತೆ

Leave a Reply

Your email address will not be published. Required fields are marked *

four − 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top