ಮನೆ ಪ್ಲ್ಯಾನು ಮಾಡಿ ಹೋಗಿದ್ದಾರೆ ನಮ್ಮವರು, ಅವರ ಕನಸನ್ನು ಕಟ್ಟಬೇಕು ನಾನು!

Posted In : ಅಂಕಣಗಳು, ಬಾಳ ಬಂಗಾರ

‘ಮನೆಯೇ ಮಂತ್ರಾಲಯ ಮನಸೇ ದೇವಾಲಯ’. ಎಷ್ಟೊಂದು ಅರ್ಥಪೂರ್ಣ ಸಾಲಿದು. ಆ ಸಾಲಿನಲ್ಲಿರುವ ಅರ್ಥದಂತೆಯೇ ಮನೆ ಮತ್ತು ಮನಸ್ಸು ಎರಡೂ ಒಂದೇ ಅಂತ ಅಂದುಕೊಳ್ಳುತ್ತೇನೆ ನಾನು. ಮನೆಯನ್ನು ಹೇಗೆ ಕಸಪೊರಕೆ ಹಿಡಿದು ಗುಡಿಸಿ ಶುಚಿಗೊಳಿಸುತ್ತೇವೋ ಹಾಗೆಯೇ ಮನಸ್ಸಿನಲ್ಲಿರುವ ಕೆಟ್ಟ ವಿಚಾರಗಳನ್ನು ಹೊರ ಹಾಕಿ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಗ ಬದುಕು ಹಸನಾಗುತ್ತದೆ, ‘ಬಾಳು ಬಂಗಾರ’ವಾಗುತ್ತದೆ. ಇಂಗ್ಲೀಷಿನಲ್ಲಿ ಒಂದು ಮಾತಿದೆThere is no place like home ಅಂತ. ಅಂದರೆ ನೀವು ಜಗತ್ತಿನ ಯಾವ ಮೂಲೆಗಾದರೂ ಹೋಗಿ, ಆ ಜಾಗ ಅದೆಷ್ಟೇ ಚೆಂದವಿರಲಿ, ನಿಮ್ಮ ಹೃದಯವನ್ನು ಆನಂದದಿಂದ ತುಂಬಿಸಿ ನಿಮ್ಮ ಕಣ್ಮನಗಳಿಗೆ ತೃಪ್ತಿಯನ್ನೇ ನೀಡಲಿ, ಇಲ್ಲವೇ ನಿಮ್ಮನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಲಿ, ಕಡೆಗೂ ನಮಗೆ ಮುಖ್ಯವಾಗಿ ಬೇಕಾಗುವುದು ಮತ್ತು ನಾವು ಹಿಂದಿರುಗಬೇಕಾಗಿರುವುದು ಮನೆಗೆ. ಹೀಗಾಗಿ ಮನೆ ಎನ್ನುವ ವಸ್ತು ಬರಿಯ ವಾಸಕ್ಕೆ ಬೇಕಾಗಿರುವುದು ಮಾತ್ರವಲ್ಲ. ಅದು ನಮ್ಮೆಲ್ಲರ ಸ್ವಸ್ಥಾನ, ಬೇರು.

ನಾವು ಈಗ ಇರುವ ಜಯನಗರದ ಮನೆಗೆ ಬಂದು ನಲವತ್ತು ವರ್ಷಗಳ ಮೇಲಾದವು. ತುಂಬಾ ಹಿಂದೆ ವಿಷ್ಣು ಕಟ್ಟಿಸಿದ ಮನೆಯಿದು. ಅದೇಕೋ ಏನೋ ಸ್ವಲ್ಪ ಸಮಯದ ನಂತರ ನಮಗೆ ಈ ಮನೆ ಸರಿಬರಲಿಲ್ಲ. ಏನನ್ನೋ ಬದಲಾಯಿಸಬೇಕೆಂದು ಅನ್ನಿಸಿತು. ಮನೆಯಲ್ಲಿ ವಾಸಿಸುವಾಗ ಕೆಲವೊಮ್ಮೆ ಈ ಅನುಭವ ಆಗುವುದಿದೆ. ನಾವು ಈ ಮನೆಗೆ ಸಲ್ಲುತ್ತೇವಾ ಎನ್ನುವ ಪ್ರಶ್ನೆ, ಇದು ನಾವು ವಾಸ್ತುಪ್ರಕಾರವನ್ನು ನಂಬುವ ಅಥವಾ ನಂಬದೇ ಇರುವ ಪ್ರಶ್ನೆಯಲ್ಲ. ಮೊದ ಮೊದಲು ಎಲ್ಲವೂ ಸರಿಯಾಗಿಯೇ ಇತ್ತು. ಅದು ಶುರುವಾದಿನಲ್ಲಿ ವಿಷ್ಣು ತುರ್ತಿನಿಂದ ಕಟ್ಟಿದ ಮನೆಯಾಗಿತ್ತು. ಆವಾಗೇನೋ ಕಟ್ಟಿಸಿದೆವು, ಈಗ ಬದಲಾವಣೆ ಬೇಕಿದೆ ಎಂದಿದ್ದರು ವಿಷ್ಣು. ಎಷ್ಟೋ ಸಲ ನಾನು ಯೋಚಿಸುತ್ತೇನೆ ನಮಗೆ ನಿಮಗೆ ಆಯಸ್ಸು ಅಂತ ಇರುವ ಹಾಗೆಯೇ ಮನೆಗೂ ಒಂದು ಕಾಲ ಅಂತ ಇದ್ದಿರಬಹುದೇನೋ ಅಂತ. ಅಥವಾ ಇದು ನನ್ನ ವಯಕ್ತಿಕ ಅಭಿಪ್ರಾಯವೂ ಆಗಿರಬಹುದು. ನಾವೀಗ ಇರುವ ಮನೆ ಶಿಥಿಲವಾಗುತ್ತಿದೆಯೇನೋ ಅಂತ ಅನ್ನಿಸುತ್ತಿದೆ. ಇದು ಬರಿಯ ನನ್ನ ಕಲ್ಪನೆ ಮಾತ್ರವೇ ಅಲ್ಲ. ಏಕೆಂದರೆ ವಿಷ್ಣು ಅನೇಕ ವರ್ಷಗಳ ಕೆಳಗೆ ಬಹಳಷ್ಟು ಸಲ ಬೇರೆ ಮನೆ ಮಾಡುವ ಬಗ್ಗೆ ಮಾತನಾಡಿದ್ದಿದೆ. ಈಗ ಅವರಿದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಬೇರೆ ಮನೆಯಲ್ಲಿರುತ್ತಿದ್ದೆವು. ಅದರ ಏರ್ಪಾಡನ್ನು ಅವರು ಖಂಡಿತವಾಗಿ ಮಾಡಿರುತ್ತಿದ್ದರು.

ನಾವು ಶಕುನಗಳನ್ನು ನಂಬುವ ವ್ಯಕ್ತಿಗಳಲ್ಲ. ವಿಷ್ಣುವಿನ ಕಡಗದ ವಿಚಾರದಲ್ಲೂ ಈ ಪ್ರಶ್ನೆಗಳು ಎದ್ದಿದ್ದವು. ಅದು ಅವರ ಅದೃಷ್ಟದ ಸಂಕೇತವಾಗಿತ್ತಾ? ಅದಕ್ಕೇ ಅವರು ಅದನ್ನು ಕಡೆಯವರೆಗೂ ತೊಟ್ಟುಕೊಂಡೇ ಬಂದರಾ? ಎಂದೆಲ್ಲಾ. ಆದರೆ ಅಂತಹ ಯಾವುದೇ ಅದೃಷ್ಟದ ಕಾರಣದಿಂದಾಗಿ ಅವರು ಹಾಗೆ ಮಾಡಿರಲಿಲ್ಲ. ಅದು ಅವರಿಗೆ ಭಕ್ತಿಯ ಹಾಗೂ ನಂಬಿಕೆಯ ಪ್ರತೀಕವಾಗಿತ್ತು. ನನ್ನ ಪ್ರಕಾರ ಅದೃಷ್ಟ ಮತ್ತು ಭಕ್ತಿಯ ಪ್ರತೀಕದ ನಡುವೆ ಅಗಾಧ ವ್ಯತ್ಯಾಸವಿದೆ. ವಿಷ್ಣು ನಮ್ಮ ನಿಮ್ಮೆಲ್ಲರ ಹಾಗೆಯೇ ಸರಳವಾಗಿದ್ದರು. ವಿಶೇಷ ಸಿದ್ಧಾಂತಗಳಾಗಲಿ, ನಂಬುಗೆಯಾಗಲಿ ಅವರಿಗಿರಲಿಲ್ಲ. ಅವರ ಆಧ್ಯಾತ್ಮಿಕ ವಿಚಾರಧಾರೆಗಳು ಸ್ಪಷ್ಟವಾಗಿದ್ದವು. ಒಂದು ವಸ್ತುವಿನಿಂದಾಗಿ ನಮ್ಮ ಬದುಕುಗಳು ಬದಲಾಗುತ್ತವೆ ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ. ಬದುಕು ಬದಲಾಗುವುದಕ್ಕೆ ನಮ್ಮ ಮನಸ್ಸು ಕಾರಣವೇ ಹೊರತು ವಸ್ತುಗಳು ಕಾರಣವಾಗಲು ಸಾಧ್ಯವೇ ಇಲ್ಲ ಎಂದು ನಂಬಿದ್ದರು ಅವರು. ಹಾಗೆ ನಮ್ಮ ನಂಬಿಕೆಯನ್ನು ಇನ್ನೊಂದು ವಸ್ತುವಿನ ಮೇಲೆ ಊರಲೇಬೇಕೆಂದಿದ್ದರೆ ಅದಕ್ಕೆ ನಮ್ಮದೇ ಮನಸ್ಸಿಗಿಂತ ಸೂಕ್ತವಾದ ವಸ್ತು ಸಿಗುವುದಿಲ್ಲ. ನಮ್ಮನ್ನು ನಾವು ನಂಬಿದರೆ ಸಾಕಲ್ಲವೆ, ಭಗವಂತನನ್ನು ನಂಬಿದರೆ ಸಾಕಲ್ಲವೆ. ಈ ಆಲೋಚನೆ ಮಾತ್ರದಿಂದ ಸಮಷ್ಠಿ ಪ್ರಜ್ಞೆ ಬೆಳೆಯುತ್ತದೆ.

ಮನೆ ಎನ್ನುವುದು ಒಂದು ಸ್ಥಳವಲ್ಲ ಅದೊಂದು ಭಾವನೆ, ಅನುಭವ ಎನ್ನುತ್ತಾರೆ ತಿಳಿದವರು. ಅವರು ಸುಮ್ಮನೆಯೇ ಹೇಳುವುದಲ್ಲ ಆ ಮಾತು. ಅಕ್ಷರಶಃ ಸತ್ಯವಾದ ಮಾತು ಅದು. ನೆಮ್ಮದಿಯ ಗೂಡು ಮನೆ. ನಾವು ಆಡು ಮಾತಿನಲ್ಲಿ ವಾಕ್ಯವೊಂದನ್ನು ಬಳಸುವುದಿದೆ. ಪರಿಚಿತರ ಮನೆಗೆ ಹೋದಾಗ ಅವರು ಮನೆಯವರಂತೆಯೇ ಕಂಡರು ಎಂದು. ಒಂದು ವಿಷಯವನ್ನು ಗಮನಿಸಬಹುದಾದರೆ ನೆಂಟರಿಷ್ಟರು ನಮ್ಮನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ, ಅವರು ನಮ್ಮ ಮನೆಯವರಂತೆಯೇ ಭಾಸವಾದರೂ ಅವರ ಮನೆ ಮಾತ್ರ ಎಂದಿಗೂ ನಮ್ಮದಾಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮದೂ ಅಂತ ಒಂದು ಮನೆ ಇರಲೇಬೇಕು. ಸ್ವಂತದ್ದಾದರೂ ಸರಿಯೆ, ಬಾಡಿಗೆಯದ್ದಾದರೂ ಸರಿಯೆ.

ಈಗಿನ ಮನೆಯಲ್ಲಿದ್ದಾಗಲೂ ಅಷ್ಟೆ ಮನೆಯೊಳಗಡೆ ಯಾವತ್ತೂ ಪೂಜೆ ಪುನಸ್ಕಾರಗಳು ನಡೆಯುತ್ತಿರುವಂತೆ ನೋಡಿಕೊಳ್ಳುತ್ತಿದ್ದೆವು. ಹಬ್ಬದ ಸಂದರ್ಭಗಳಲ್ಲಿ ಮಾತ್ರವೇ ಅಲ್ಲ, ವರ್ಷ ಪೂರ್ತಿ ಹೋಮ ಹವನಗಳನ್ನು ನಮ ಮಮನೆಯಲ್ಲಿ ನಡೆಸಿಕೊಂಡು ಬಂದಿದ್ದೇವೆ. ಅದು ಈಗಲೂ ಮುಂದುವರಿದಿದೆ. ಅಂದರೆ ನಾವು ಹೇಗೆ ನಮ್ಮ ಮನಸ್ಸನ್ನು ಒಳ್ಳೆಯ ವಿಚಾರಗಳಿಂದ, ಸದಾಚಾರಗಳಿಂದ ತುಂಬಿಸಿ ಬದುಕನ್ನು ಪಾವನವನ್ನಾಗಿಸಿಕೊಳ್ಳುತ್ತೇವೋ ಅದೇ ರೀತಿ ನಮ್ಮ ಮನೆಯನ್ನು ಕೂಡ ಆಧ್ಯಾತ್ಮಿಕ ಮತ್ತು ದೈವಿಕ ಆಚರಣೆಗಳ ಮೂಲಕ ನಂದನವನವನ್ನಾಗಿಸುತ್ತಿದ್ದೆವು. ಈ ಆಚರಣೆಗಳನ್ನು ಗೊಡ್ಡು ಸಂಪ್ರದಾಯವೆಂದು ಹೀಗಳೆದು ನಿರ್ಲಕ್ಷಿಸಬಾರದು. ಎಲ್ಲವೂ ಅವರವರ ಭಾವಕೆ ಅವರವರ ಭಕುತಿಗೆ ಅಂತ ಹಿರಿಯರು ಹೇಳಿಲ್ಲವೆ. ಅಲ್ಲದೆ ಅವೆಲ್ಲವನ್ನೂ ಹಿಂದಿನವರು ಸುಮ್ಮನೆಯೇ ಪಾಲಿಸಿಕೊಂಡು ಬಂದಿಲ್ಲ. ಈ ಸಂಪ್ರದಾಯ, ಆಚರಣೆಗಳಿಂದ ಕುಟುಂಬದಲ್ಲೂ ಶಾಂತಿ ನೆಲೆಸುತ್ತದೆ ಎನ್ನುವುದು ನನ್ನ ಅನುಭವಕ್ಕೆ ಬಂದ ವಿಚಾರ.

ವಿಷ್ಣು ಬೇರೆಯ ಮನೆ ಕಟ್ಟುವ ಬಗ್ಗೆ ಮಾತನಾಡುತ್ತಿದ್ದರು ಎಂದೆನಲ್ಲ. ಅವರು ಆ ಕುರಿತು ಗಂಭೀರವಾಗಿದ್ದರು. ಎಂಜಿನಿಯರರನ್ನು ಭೇಟಿ ಮಾಡಿ ಆ ಕುರಿತು ಮಾತುಕತೆ ನಡೆಸಿದ್ದರು. ಮನೆಯ ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದರು. ಅದೊಂದು ಅವರ ಕನಸು ಅಪೂರ್ಣವಾಗಿಯೇ ಉಳಿಯಿತು ಎಂದು ಕೆಲವರು ತಿಳಿಯಬಹುದು. ಆದರೆ ನಾನು ಎಂದಿಗೂ ಸಹ ಅಪ್ಪಿತಪ್ಪಿ ಹಾಗೆ ತಿಳಿದುಕೊಳ್ಳುವುದಿಲ್ಲ. ಮನೆಯೊಂದನ್ನು ಕಟ್ಟುವುದು, ನನಗೆಂದು ವಿಷ್ಣು ಉಳಿಸಿಹೋದ ಜವಾಬ್ದಾರಿ ಎಂದು ನಾನು ಅಂದುಕೊಳ್ಳುತ್ತೇನೆ. ಅವರಿದ್ದಾಗಲೇ ಈ ಕೆಲಸವಾಗಿಬಿಟ್ಟಿದ್ದಿದ್ದರೆ ಅವರೆಷ್ಟು ಖುಷಿಪಡುತ್ತಿದ್ದರು ಎನ್ನುವುದನ್ನು ನಾನು ಕಲ್ಪಿಸಿಕೊಳ್ಳಬಲ್ಲೆ. ಆದರೆ ನಮ್ಮದೇನಿದೆ ಈ ಜಗತ್ತಿನಲ್ಲಿ, ಎಲ್ಲವೂ ದೇವರ ಆಟ. ನಾವು ಬೊಂಬೆಗಳು ಮಾತ್ರ. ಎದುರಾಗುವ ಪ್ರತಿಯೊಂದು ಸವಾಲುಗಳನ್ನೂ, ಬದುಕಿನಲ್ಲಿ ಜರುಗುವ ಘಟನೆಗಳನ್ನೂ ಪಾಲಿಗೆ ಬಂದದ್ದು ಪಂಚಾಮೃತ ಎಂದು ನುಡಿಯುವಂತೆ ಸುಖ- ದುಃಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸುತ್ತಾ ಹೋಗಬೇಕು. ಹೀಗಾಗಿ ಗೃಹ ನಿರ್ಮಾಣದ ನನ್ನವರ ಕನಸು ಈಗ ನನ್ನ ಕನಸಾಗಿದೆ. ನಾನು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿದ್ದೇನೆ. ಭಗವಂತನಲ್ಲಿ ಅದೊಂದು ಕನಸನ್ನು ನೆರವೇರಿಸಿಕೊಡಲು ಶಕ್ತಿ ನಾಡುವಂತೆ ಕೋರಿಕೊಂಡಿದ್ದೇನೆ. ನೋಡೋಣ ಆ ಭಗವಂತನ ಇಚ್ಚೆ ಏನಿದೆಯೋ ಏನೋ ಅಂತ.

Leave a Reply

Your email address will not be published. Required fields are marked *

3 × 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top