‘ಮುಗಿದ ಅಧ್ಯಾಯ’ ಎಂದ ಮೇಲೆ ನ್ಯಾಯಾಂಗ ತನಿಖೆ ಏಕೆ ಬೇಕು?

Posted In : ಸಂಗಮ, ಸಂಪುಟ

ಸರಕಾರಕ್ಕೆ ಇಚ್ಛೆ ಇದ್ದರೆ ಎಲ್ಲವೂ ಸಾಧ್ಯ, ಇಚ್ಛೆ ಇಲ್ಲವೆಂದಾದರೆ ಎಲ್ಲವೂ ಅಸಾಧ್ಯ. ಅದರಲ್ಲೂ ಇತ್ತೀಚಿನ ಬೆಳವಣಿಗೆಗಳು ಸಿಐಡಿ ಮೇಲಿನ ರಾಜಕೀಯ ಹಸ್ತಕ್ಷೇಪ ಹಾಗೂ ತನಿಖಾ ವ್ಯವಸ್ಥೆ ಬಗ್ಗೆ ಸಾಕಷ್ಟು ಅನುಮಾನಗಳನ್ನು ಮೂಡಿಸುತ್ತಿವೆ. ಕೆಲವು ಪ್ರಕರಣದಲ್ಲಿ ತೋರುವ ಅತಿಯಾದ ಕಾಳಜಿ, ಮತ್ತೆ ಕೆಲವು ಪ್ರಕರಣದಲ್ಲಿ ತೋರುವ ಉದ್ದೇಶ ಪೂರ್ವಕ ನಿರಾಸಕ್ತಿಯ ಹಿಂದಿರುವ ರಾಜಕೀಯ ಹಕೀಕತ್ತು ಪದೇ ಪದೆ ಜಾಹೀರಾಗುತ್ತಲೇ ಇದೆ. ರಾಜಕೀಯ ಒತ್ತಾಸೆಗಳು ಯಾವ ಪರಿ ಕೆಲಸ ಮಾಡುತ್ತವೆಂಬುದಕ್ಕೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯೇ ಸಾಕ್ಷಿ.

ಈ ಪ್ರಕರಣದಲ್ಲಿ ಪ್ರಧಾನವಾಗಿ ಹೆಸರು ಕೇಳಿಬಂದ ಅಂದಿನ ಗೃಹ ಸಚಿವರನ್ನೇ ಗುರಿಯಾಗಿಸಿಕೊಂಡು ಸಿಐಡಿ ತರಾತುರಿಯಲ್ಲಿ ನಿರ್ದಯಿ ತನಿಖೆ ನಡೆಸುತ್ತದೆ, ಪ್ರಕರಣ ದಾಖಲಿಸಿಕೊಂಡಷ್ಟೇ ವೇಗದಲ್ಲಿ ಕ್ಲೀನ್‌ಚಿಟ್ ಕೂಡ ಕೊಡುತ್ತದೆ. ಅವರಿಗೆ ಪುನಃ ಮಂತ್ರಿ ಸ್ಥಾನ ಪ್ರಾಪ್ತಿಯಾಗುತ್ತದೆ. ಅಂದರೆ, ಮಂತ್ರಿ ಸ್ಥಾನವೆಂಬ ತುರಂಗದ ಮೇಲೆ ಅವರನ್ನು ಪುನರ್ ಪ್ರತಿಷ್ಠೆ ಮಾಡುವ ಉದ್ದೇಶ, ಅತ್ಯಾಸಕ್ತಿ ಇದ್ದರೆ ಎಷ್ಟು ಬೇಗ ಪ್ರಕರಣದ ತನಿಖೆ ನಡೆದು ತೀರ್ಪು ಬರುತ್ತದೆಂಬುದಕ್ಕೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಿಲ್ಲ. ಇನ್ನೊಂದೆಡೆ ಇದೇ ಪ್ರಕರಣದಲ್ಲಿ ರಚನೆಗೊಂಡ ನ್ಯಾಯಾಂಗ ತನಿಖಾ ಸಮಿತಿಯ ಕೆಲಸ ಆರಂಭಕ್ಕೆ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತದೆ.

ಅಂದ ಹಾಗೆ ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಸಿಐಡಿ ನೀಡಿದ ಜರೂರು ತೀರ್ಪಿಗೆ ಅಸಮಾಧಾನಗೊಂಡಿರುವ ಗಣಪತಿ ಕುಟುಂಬ ದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಏಕೆಂದರೆ ಅವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಇನ್ನೊಂದು ತನಿಖೆಯ ಬಗ್ಗೆ ಸ್ಪಷ್ಟವಾಗಿ ವಿಶ್ವಾಸವೇ ಉಳಿದಿಲ್ಲ ಎಂದಾಯಿತು. ಈಗ ಮುಖ್ಯಮಂತ್ರಿಯವರು ನೀಡಿರುವ ಹೇಳಿಕೆ ಇಡೀ ಪ್ರಕರಣ ಯಾವ ಮಟ್ಟಿಗೆ ಹಳ್ಳ ಹಿಡಿದಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಡಿವೈಎಸ್‌ಪಿ ಗಣಪತಿ ಪ್ರಕರಣವನ್ನು ಸಿಬಿಐಗೆ ಯಾಕೆ ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರವನ್ನು ಕೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಕರಣದ ಕುರಿತು ಕಾನೂನು ಇಲಾಖೆ ಪರೀಶೀಲಿಸಿ ಕ್ರಮ ಕೈಗೊಳ್ಳಲಿದೆ. ಕುಟುಂಬದ ಒತ್ತಾಸೆಯಿಂದ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು. ಪ್ರಕರಣದಲ್ಲಿ ಕೆ. ಜೆ.ಜಾರ್ಜ್ ಅಥವಾ ಯಾವುದೇ ಅಧಿಕಾರಿಗಳ ಪಾತ್ರವಿಲ್ಲ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇದು ಮುಗಿದ ಅಧ್ಯಾಯ.

ಸರಕಾರ ಇದಕ್ಕೆ ತಕ್ಕ ಉತ್ತರ ನೀಡಲಿದೆ ಹಾಗೂ ಸಿಬಿಐ ತನಿಖೆ ಕುರಿತು ಕಾನೂನು ಇಲಾಖೆ ಪರಿಶೀಲನೆ ನಡೆಸಲಿದೆ’ ಎಂದು ಹೇಳುವ ಮೂಲಕ ಇನ್ನೇನೂ ಉಳಿದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇಷ್ಟಾದ ಮೇಲೆ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಯ ಹಕೀಕತ್ತು ಏನು ಉಳಿದಿದೆ ಎಂಬ ಪ್ರಶ್ನೆ ಎತ್ತಲೇಬೇಕಾಗುತ್ತದೆ.  ‘ಇದು ಮುಗಿದ ಅಧ್ಯಾಯ’ ಎಂದ ಮೇಲೆ ನ್ಯಾಯಾಂಗ ತನಿಖೆಯಲ್ಲಿ ಯಾವ ರೀತಿ ಉತ್ತರ ಬರುತ್ತದೆಂಬುದನ್ನು ನಾಲ್ಕನೆ ತರಗತಿ ಮಕ್ಕಳೂ ಊಹಿಸಬಹುದೇನೋ? ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಉದ್ದೇಶ, ನ್ಯಾಯಾಂಗ ತನಿಖೆಯ ಹಿನ್ನೆಲೆ ಈಗಾಗಲೇ ಅರ್ಥವಾಗಿರಲಿಕ್ಕೆ ಸಾಕು.

2016ರ ಜುಲೈ 16ರಂದು ಸರಕಾರ ಈ ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿತು. ಈ ಸಂಬಂಧ ಅಧಿಸೂಚನೆ ಹೊರಟಿತು. ನ್ಯಾ. ಕೇಶವನಾರಾಯಣ ಅವರ ಹೆಸರನ್ನು ಆಯೋಗಕ್ಕೆ ನೇಮಕ ಮಾಡಲು ಅವರಿಂದ ಅನುಮತಿ ಪಡೆದು, ಅಂದೇ ರಾತ್ರಿ 11 ಗಂಟೆಗೆ ಅವರ ಮನೆಗೆ ತೆರಳಿ ಸರಕಾರ ಹೊರಡಿಸಿದ ಅಧಿಸೂಚನೆ ಪ್ರತಿಯನ್ನು ಅಧಿಕಾರಿಗಳು ನೀಡಿ ಬಂದರು. ಅದು ಅಂದಿನ ಸಂದರ್ಭಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಷ್ಟೆ. ಇದಾದ ಮೇಲೆ ನಡೆದ ಬೆಳವಣಿಗೆಯಲ್ಲಿ ತನಿಖಾ ಆಯೋಗಕ್ಕೆ ಕಚೇರಿ, ಸಿಬ್ಬಂದಿ, ವಾಹನ ವ್ಯವಸ್ಥೆ ಮಾಡಲು ಸರಕಾರ ಆಸಕ್ತಿ ತೋರಿಸಲೇ ಇಲ್ಲ.

ನ್ಯಾಯಮೂರ್ತಿಯವರಿಗೆ ಕೊಠಡಿ, ಕೋರ್ಟ್ ಹಾಲ್ ಮತ್ತು ಸಿಬ್ಬಂದಿ, ಕಚೇರಿ ಕಾರ್ಯ ನಿರ್ವಹಣೆಗೆ ಅಗತ್ಯ ಮತ್ತು ಅನುಕೂಲಕರ ಸ್ಥಳಾವಕಾಶವನ್ನು ಬಾಲಬ್ರೂಯಿ ಅತಿಥಿ ಗೃಹದಲ್ಲಿ ಬಾಡಿಗೆ ರಹಿತವಾಗಿ ವ್ಯವಸ್ಥೆ ಮಾಡುವ ಬಗ್ಗೆ ಆಡಳಿತ ಸುಧಾರಣಾ ಇಲಾಖೆಗೆ ಸೂಚನೆಯನ್ನೂ ನೀಡಿತು. ಈ ಸಂಬಂಧ ಜುಲೈ 20ರಂದು ಆದೇಶ ಹೊರಡಿಸಿತು. ಆದರೆ, ಅವೆಲ್ಲ ಜಾರಿಯಾಗುವಾಗ ಒಂದು ತಿಂಗಳೇ ಕಳೆದಿತ್ತು. ನಂತರ ನ್ಯಾಯಾಂಗ ಸಮಿತಿ ತನ್ನ ಕಾರ್ಯವನ್ನು ಕೈಗೆತ್ತಿಕೊಂಡಿತು. ಇಷ್ಟರಲ್ಲಾಗಲೇ ಸಿಐಡಿ ತನಿಖೆ ನಡೆಸಿಯಾಗಿದೆ. ಪ್ರಕರಣದಲ್ಲಿ ಜಾರ್ಜ್ ಅವರ ಪಾತ್ರ ಇಲ್ಲ ಎಂದು ಹೇಳುವ ಮೂಲಕ ಇಡೀ ತನಿಖೆಯ ಹುರುಳು ಹೇಗಿರಬೇಕೆಂಬುದನ್ನು ಸ್ಪಷ್ಟಪಡಿಸಿದೆ.

ಇಷ್ಟಾದ ಮೇಲೆ ಪುನಃ ನ್ಯಾಯಾಂಗ ತನಿಖೆ ಯಾವ ದಿಕ್ಕಿನಲ್ಲಿ ಹೋಗಲು ಸಾಧ್ಯ ಎಂದು ಜನ ಊಹಿಸಿರಲಿಕ್ಕೂ ಸಾಕು. ಇನ್ನೊಂದು ಮುಖ್ಯ ಸಂಗತಿ ಎಂದರೆ ಡಿವೈಎಸ್‌ಪಿ ಗಣಪತಿಯವರು ಆತ್ಮಹತ್ಯೆಗೆ ಮುನ್ನ ಅಂದಿನ ಗೃಹ ಸಚಿವರ ಹೆಸರು ಪ್ರಸ್ತಾಪಿಸಿದ್ದರು. ಅಂದ ಮೇಲೆ ನ್ಯಾಯಯುತವಾಗಿ ತನಿಖೆ ನಡೆಯುತ್ತಿದೆ ಎಂದಾದರೆ ಸಮಿತಿಯು ಅವರನ್ನೂ ತನಿಖಾ ವ್ಯಾಪ್ತಿಗೆ ತರಲೇಬೇಕು, ಅವರನ್ನು ವಿಚಾರಣೆಗೆ ಕರೆಸಿಕೊಂಡಿರಲೇಬೇಕು. ಅಂಥ ಸಾಧ್ಯತೆ ಸದ್ಯಕ್ಕಂತೂ ಕಂಡುಬಂದಿಲ್ಲ. ತನಿಖೆ ಆರಂಭವಾಗಿ ಆರು ತಿಂಗಳಾಗಿವೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ತನ್ನ ಆತ್ಮಹತ್ಯೆಗೆ ಕಾರಣರು ಇವರೇ ಎಂದು ಪ್ರಸ್ತಾಪಿಸಿದ ವ್ಯಕ್ತಿ ಇಷ್ಟು ದಿನದಲ್ಲಿ ವಿಚಾರಣೆಗೊಳಪಟ್ಟಿಲ್ಲ ಅಥವಾ ಒಳಪಡುವುದಿಲ್ಲ ಎಂದಾದ ಮೇಲೆ ನಿಸ್ತೇಜ ನ್ಯಾಯಾಂಗ ತನಿಖೆಯ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲವೆನಿಸುತ್ತದೆ. ಮುಖ್ಯಮಂತ್ರಿಯವರೇ ಇದು ಮುಗಿದ ಅಧ್ಯಾಯ ಎಂದ ಮೇಲೆ ಇನ್ನೊಂದು ತನಿಖೆ ಮುಂದುವರಿಯುವ ಅಗತ್ಯವಾದರೂ ಏನಿದೆ? ಎಲ್ಲವನ್ನೂ ಸಿಐಡಿ ತೀರ್ಮಾನಿಸಿ ಷರಾ ಬರೆದ ಮೇಲೆ ನ್ಯಾಯಾಂಗ ತನಿಖೆಯ ಸಮಯ, ಹಣದ ವ್ಯರ್ಥವಾದರೂ ಏಕೆ ಎಂಬ ಪ್ರಶ್ನೆ ಏಳುತ್ತದೆ.

ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಹಾರಾಡಿದ್ದ ಪ್ರತಿಪಕ್ಷ ಬಿಜೆಪಿ ಸಹ ಈಗ ಮೌನಕ್ಕೆ ಜಾರಿದೆ. ಒಬ್ಬ ಸಚಿವರನ್ನು ಚಿತ್ ಮಾಡಲಾಯಿತು, ನಂತರ ಅವರು ಪುನಃ ಸಚಿವರಾದರೆ ನಾವೇನು ಮಾಡುವುದು? ನಮ್ಮ ಹೋರಾಟದಿಂದಲೇ ಅವರು ರಾಜೀನಾಮೆ ಕೊಟ್ಟಿದ್ದು, ನಮ್ಮ ಹೋರಾಟಕ್ಕೆ ಯಶ ಸಿಕ್ಕಿತಲ್ಲ ಎಂದು ಹೇಳುತ್ತಾ ಆ ಪಕ್ಷದ ನಾಯಕರು ಪೆದ್ದುಪೆದ್ದಾಗಿ ಬೀಗಿ ಹೊದ್ದು ಮಲಗಿದರು. ಮಡಿಕೇರಿಯಿಂದ ಪಾದಯಾತ್ರೆ, ಬೈಕ್ ರ್ಯಾಲಿ, ಹತ್ತಾರು ಕಡೆ ಸಮಾವೇಶ ಮಾಡುತ್ತೇವೆಂದು ಭೋಂಕರಿಸಿದ್ದ ನಾಯಕರು ನಂತರ ತಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ‘ಕಣ್ಣಾಮುಚ್ಚಾಲೆ’ ಆಟ ಮುಗಿಸಿದಂತೆ ನಡೆದು ಕೊಂಡರು. ಒಟ್ಟಿನಲ್ಲಿ ತಮ್ಮ ಸಾವಿಗೆ ಯಾರು ಕಾರಣ ಎಂದು ಗಣಪತಿ ಕೊನೆ ಕ್ಷಣದಲ್ಲಿ ಹೇಳಿ ಹೋದರೋ ಆ ವ್ಯಕ್ತಿ ಇನ್ನೂ ನಿಶ್ಚಿಂತೆಯಿಂದಿದ್ದಾರೆ, ಸಾವಿಗೆ ನೂಕಿದವರಿಗೆ ಶಿಕ್ಷೆಯಾಗಲಿಲ್ಲ ಎಂದು ಗಣಪತಿ ಕುಟುಂಬ ಮಾತ್ರ ಪರಿತಪಿಸುತ್ತಿದೆ. ಇಷ್ಟಾದ ಮೇಲೆ ನಿರ್ವಾಣ ತನಿಖೆ ಮಾತ್ರ ಮುಂದುವರಿದೇ ಇದೆ. ಅದರಿಂದ ಬರುವ ಫಲಿತಾಂಶವೇನೆಂಬುದು ಆ ದೇವರಿಗೇ ಗೊತ್ತು.

-ಶ್ರೀಕಾಂತ್ ಶೇಷಾದ್ರಿ

Leave a Reply

Your email address will not be published. Required fields are marked *

five + 20 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top