ವಿಷ್ಣು ಮಾತಿಗೆ ಎದುರಾಡಿದರೆ ಊಟ ಸಿಗುತ್ತಿರಲಿಲ್ಲ!

Posted In : ಅಂಕಣಗಳು, ಬಾಳ ಬಂಗಾರ

ಕೆಲವರ ಬಳಿ ಮಾತಾಡೋವಾಗ ಏನೋ ಒಂದು ರೀತಿಯ ಸಂತಸ, ಖುಷಿ ನಮ್ಮ ಮನಸ್ಸಿನಲ್ಲೂ ಮನೆ ಮಾಡುತ್ತದೆ. ಅದನ್ನು ಬರಿಯ ಪದಗಳಲ್ಲಿ ಹಿಡಿದಿಡಲಾಗುವುದಿಲ್ಲ. ಏಕೆಂದರೆ ಅದೊಂದು ಅಪರೂಪದ ಅನುಭೂತಿ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತಾಗುವಂಥದ್ದು. ನಾನು ಅಂಥವರ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ, ತಿಳಿದವರು ಹೇಳುವುದನ್ನು ಪಾಠ ಪ್ರವಚನಗಳಲ್ಲಿ ಕೇಳಿದ್ದೆ. ಆಮೇಲೆ ಅದರ ಪ್ರತ್ಯಕ್ಷ ಅನುಭವವಾಗಿದ್ದು ವಿಷ್ಣುವನ್ನು ನೋಡಿದ ಮೇಲೆ. ವಿಷ್ಣು ಕೂಡ ಅಂಥವರಲ್ಲಿ ಒಬ್ಬರಾಗಿದ್ದರು. ಅವರು ಆಧ್ಯಾತ್ಮವನ್ನು ತುಂಬಾ ನೆಚ್ಚಿಕೊಂಡಿದ್ದರು. ಅವರಿಗೆ ಈ ಪಾಸಿಟಿವ್ ಎನರ್ಜಿ, ನೆಗೆಟಿವ್ ಎನರ್ಜಿಗಳ ಬಗ್ಗೆ ತುಂಬಾ ನಂಬಿಕೆಯಿತ್ತು. ಪ್ರತಿಯೊಬ್ಬ ಮನುಷ್ಯರಲ್ಲೂ ಒಳ್ಳೆತನ ಹಾಗೂ ಕೆಟ್ಟತನಗಳಿರುವಂತೆ ಅವರವರ ಕರ್ಮಕ್ಕೆ ಅನುಸಾರವಾಗಿ ಪ್ರಭಾವಳಿಯೊಂದು ಏರ್ಪಟ್ಟಿರುತ್ತದೆ. ಇದು ಅವರವರ ಗುಣ ಅವಗುಣಗಳ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಪ್ರತಿಯೊಬ್ಬರಲ್ಲೂ ಇರುವ ಈ ಪ್ರಭಾವಳಿಯನ್ನು ಅವರು ಗುರುತಿಸಬಲ್ಲವರಾಗಿದ್ದರು.

ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೆ ಹೇಳಿಬಿಡುತ್ತಿದ್ದರು. ಈ ವ್ಯಕ್ತಿ ಇಂತಹವನು ಎಂದು. ಅದು ಹೇಗೆ ಹಾಗೆ ಹೇಳುತ್ತಿದ್ದರೋ ನನಗಂತೂ ಗೊತ್ತಿಲ್ಲ. ಅದು ಇಂದಿನವರೆಗೂ ನನಗೆ ಆಶ್ಚರ್ಯವೇ. ಅವರ ಆಲೋಚನಾ ವಿಧಾನವೇ ವಿಭಿನ್ನವಾಗಿತ್ತು. ಎಲ್ಲರಿಗೂ ಕಾಣದಂಥದ್ದೇನನ್ನೋ ಅವರು ಕಾಣುತ್ತಿತ್ತು. ಅವರಿಗೆ ನೆಗೆಟಿವ್ ಎನರ್ಜಿ ತುಂಬಿರುವ ವ್ಯಕ್ತಿಗಳೆಂದರೆ ಆಗುತ್ತಿರಲಿಲ್ಲ. ಅದನ್ನವರು ಅವರ ಮುಂದೆಯೇ ರಪ್ಪಂತ ಹೇಳಿಬಿಡೋರು. ಅವರೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದವರಿಗೆ ಇದರ ಅನುಭವವಿರುತ್ತದೆ. ಅದರ ಕುರಿತು ಕೆಲ ಸಿನಿಮಾ ಮಂದಿ ಮಾತಾಡಿರುವುದನ್ನೂ ನಾನು ಗಮನಿಸಿದ್ದೇನೆ. ನಾವು ನಮ್ಮ ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಅದಕ್ಕಿಂತಲೂ ಹೆಚ್ಚಿನ ಮುತುವರ್ಜಿ ವಹಿಸಿ ಮನಸ್ಸೆಂಬ ಕೋಣೆಯನ್ನು ಕೂಡ ಶುಚಿಗೊಳಿಸಬೇಕು. ಯಾವುದೇ ದುರಾಲೋಚನೆಗಳು, ನಕಾರಾತ್ಮಕ ಶಕ್ತಿಗಳಿಗೆ ನಮ್ಮ ಮನಸ್ಸನ್ನು ಬಾಡಿಗೆ ಕೊಡಬಾರದು. ಮನಸ್ಸನ್ನು ಶುದ್ಧವಾಗಿಟ್ಟುಕೊಂಡಂತೆಯೇ ವಿಷ್ಣು ತಮ್ಮ ಬಳಗವನ್ನು ಶುದ್ಧವಾಗಿಟ್ಟುಕೊಂಡರು. ಅಂದರೆ ಸಕಾರಾತ್ಮಕ ವ್ಯಕ್ತಿಗಳ ಜತೆ ಮಾತ್ರವೆ ಚೆನ್ನಾಗಿ ಬೆರೆಯುತ್ತಿದ್ದರು. ಅವರ ಕುರಿತು ನಾನು ಇನ್ನೊಂದು ವಿಚಾರವನ್ನು ಗಮನಿಸಿದ್ದೇನೆ.

ಅದೇನೆಂದರೆ ವಿಷ್ಣುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡೋಕೆ ತುಂಬಾ ಕಷ್ಟವಾಗುತ್ತಿತ್ತು. ಏನೋ ಒಂದು ತೇಜಸ್ಸು, ಕಾಂತಿ ಅವರ ಕಂಗಳಲ್ಲಿ ತುಂಬಿರುತ್ತಿತ್ತು. ಅವರೊಡನೆ ಯಾರಾದರೂ ಮಾತಾಡುವಾಗ ಒಂದು ಶರತ್ತು ವಿಧಿಸುತ್ತಿದ್ದರು. ಏನಪ್ಪಾ ಅಂದರೆ, ಎದುರಿಗಿರುವ ವ್ಯಕ್ತಿ ತಾನು ಮಾತಾಡುವಾಗ ನಮ್ಮವರ ಕಣ್ಣುಗಳನ್ನೆ ದಿಟ್ಟಿಸಿ ಮಾತಾಡಬೇಕಿತ್ತು. ಯಾರಾದರೂ ಎತ್ತಲೋ ನೋಡುತ್ತಾ ಮಾತಾಡಿದರೆ ಅವರು ಮತ್ತೆ ನಿಷ್ಠುರವಾಗಿ ನನ್ನನ್ನೇ ನೋಡಿ ಮಾತಾಡಿ ಇಲ್ಲಾಂದರೆ ಮಾತಾಬೇಡಿ ಅನ್ನುತ್ತಿದ್ದರು. ಯಾಕೆ ಅಂತಂದರೆ ಕಣ್ಣನ್ನು ನೋಡುತ್ತಾ ಮಾತಾಡಿದಾಗ ಸತ್ಯ ಹೊರಗೆ ಬರುತ್ತದೆ. ಸುಳ್ಳು ಹೇಳುವವರು ಮಾತ್ರವೆ ಕಣ್ಣನ್ನು ನೋಡದೆ ಎತ್ತಲೋ ನೋಡುತ್ತಾ ಮಾತಾಡುವರು ಎನ್ನುವುದು ಅವರ ಅಭಿಪ್ರಾಯ. ಹಾಗೆ ಎದುರಿದ್ದವರು ಕಣ್ಣಲಿ ಕಣ್ಣಟ್ಟು ಮಾತಾಡಿದಾಗ ಆ ವ್ಯಕ್ತಿಯ  ಅಂತರಂಗವನ್ನೇ ಅರ್ಥ ಮಾಡಿಕೊಳ್ಳುತ್ತಿದ್ದರು. ಈ ರೀತಿಯಾಗಿ ಜಾತಕವನ್ನು ಅವರು ತಿಳಿದುಕೊಂಡುಬಿಡುತ್ತಿದ್ದರು. ಅವರ ಇನ್‌ಟ್ಯೂಷನ್(ಒಳಗಿನ ಅರಿವು) ಬಹಳ ಚೆನ್ನಾಗಿತ್ತು. ಅವರು ಹೇಳುತ್ತಿದ್ದುದು ನಡೆಯುತ್ತಿತ್ತು. ಹೀಗೆ ಆಗುತ್ತೆ ಅಂತ ಒಮ್ಮೆ ಹೇಳಿಬಿಟ್ಟರೆ ಹಾಗೆಯೇ ಆಗುತ್ತಿತ್ತು. ಮನೆಯವರು ಯಾರಾದರೂ ಹೊರಗಡೆ ಕೆಲಸದ ಕಾರಣವಾಗಿ ಹೋಗಬೇಕಾಗಿ ಬಂದರೆ ಕೆಲವೊಂದು ಸಾರಿ ಹೋಗಬೇಡ ಎನ್ನುತ್ತಿದ್ದರು. ಹೋಗಬೇಡ ಅಂದರೆ ಹೋಗಬೇಡ ಅಷ್ಟೆ. ನಾನು ಹೇಳಿದಮೇಲೆಯೂ ಹೋದರೆ ನೀವು ಹೋಗುತ್ತಿರುವ ಕೆಲಸ ಆಗುವುದಿಲ್ಲ ಎನ್ನುತ್ತಿದ್ದರು.

ಆತ್ಯಾಶ್ಚರ್ಯವೆಂದರೆ ಅವರು ಹೇಳಿದಂತೆಯೇ ನಡೆಯುತ್ತಿತ್ತು. ನಮ್ಮ ಮನೆಗೆ ಯಾರಾದರೂ ನೆಂಟರಿಷ್ಟರೋ, ಸ್ನೇಹಿತರೋ ಬಂದಿದ್ದರೆ ಅವರನ್ನು ಊಟ ಮಾಡಿಸದೆ ಕಳಿಸುತ್ತಲೇ ಇರಲಿಲ್ಲ ನಮ್ಮವರು. ಬಂದವರೂ ಊಟ ಮಾಡಿಯೇ ಮನೆಯಿಂದ ಹೊರಬೀಳಬೇಕು. ಒಂದು ವೇಳೆ ಬಂದವರು ನಮ್ಮವರ ಮಾತಿಗೆ ವಿರುದ್ಧವಾಗಿ ಊಟ ಮಾಡದೆ ಮನೆ ಬಿಟ್ಟರೆ ಆವತ್ತಿನ ದಿನ ಅವರಿಗೆ ಹಸಿವಾದಾಗ ಊಟ ಸಿಗುತ್ತಿರಲಿಲ್ಲ. ಇದರ ಹಿಂದೆ ಬೇರೇನೂ ಇರುತ್ತಿರಲಿಲ್ಲ, ಪ್ರೀತಿ ಪಾತ್ರರ ಕುರಿತು ಅದಮ್ಯವಾದ ಪ್ರೀತಿ ಮಮತೆ ಅಷ್ಟೆ. ಅವರ ಸ್ನೇಹಿತರು ಮನೆಗೆ ಬಂದಾಗ ವಿಷ್ಣು ಅವರನ್ನು ಸತ್ಕರಿಸುತ್ತಿದ್ದ ರೀತಿಯನ್ನು ನೋಡಬೇಕು. ಅವರಿಗೆ ತಮಗಿಷ್ಟವಾದವರು ಮನೆಗೆ ಬಂದರೆ ಕುಣಿದಾಡಿಬಿಡುತ್ತಿದ್ದರು. ಅವರಿಗೆ ಊಟ ಹಾಕಿಸದೆ ಯಾವತ್ತೂ ಮನೆಯಿಂದ ಕಳಿಸಿದ್ದೇ ಇಲ್ಲ. ಒತ್ತಾಯ ಮಾಡಿಯಾದರೂ ತಮ್ಮ ಹಠವನ್ನು ಸಾಧಿಸಿಬಿಡುತ್ತಿದ್ದರು. ಈ ಸಮಯದಲ್ಲಿ ಅವರು ಹೇಳುತ್ತಿದ್ದ ಮಾತೊಂದು ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ.

ಮನೆಗೆ ಬಂದ ಸ್ನೇಹಿತರು ಊಟ ಮಾಡದೆ ಹೊರಟು ನಿಂತು ನಂತರ ವಿಷ್ಣುವಿನ ಹಠಕ್ಕೆ ಮಣಿದು ಊಟ ಮಾಡಿ ಎದ್ದಾಗ ವಿಷ್ಣು ಹೇಳುತ್ತಿದ್ದರು ಬರೋದು ನಿನ್ನಿಷ್ಟ ಕಳಿಸೋದು ನನ್ನಿಷ್ಟ. ಇಂದರಿಂದ ನನಗೆ ಅರ್ಥವಾದ ವಿಚಾರ ಏನು ಅಂದರೆ ನಮ್ಮವರು ತಮ್ಮ ಸ್ನೇಹಿತರನ್ನು, ಪ್ರೀತಿ ಪಾತ್ರರನ್ನು ಅಷ್ಟು ಸುಲಭದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಅವರಿಗೆ ಆಪ್ತರು ಅಂತ ತುಂಬಾ ಹೆಚ್ಚಿನ ಮಂದಿಯಿರಲಿಲ್ಲ. ಆದರೆ ಇದ್ದ ಕೆಲವರು ಅವರಿಗೆ ಸರ್ವಸ್ವವಾಗಿದ್ದರು. ಅವರಿಗೂ ವಿಷ್ಣು ಅಂದರೆ ಪ್ರಾಣ, ಇವರಿಗೂ ಅಷ್ಟೇ. ಸ್ನೇಹಿತರಿಗ್ಯಾರಿಗಾದರೂ ಕಷ್ಟ ಬಂದರೆ ಅದು ಹೇಗೋ ತಿಳಿದುಕೊಂಡು ಅವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು.

ಅವರ ಸ್ನೇಹಿತರು ವಿಷ್ಣುವಿಗೆ ತಮ್ಮ ಕಷ್ಟದ ಕುರಿತು ತಿಳಿಯಿತಲ್ಲ ಎಂದು ಬೇಜಾರು ಪಟ್ಟುಕೊಂಡಿದ್ದೂ ಇದೆ. ನಮ್ಮವರ ಈ ಗುಣ ನನಗೆ ಅಚ್ಚುಮೆಚ್ಚು. ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡುವುದು ಮಾನವೀಯತೆಯ ಲಕ್ಷಣ ಎನ್ನುತ್ತಾರೆ. ಆದರೆ ನಮ್ಮವರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಆಪ್ತರ ಕಷ್ಟಗಳನ್ನು ಬೇರೆಯವರ ಮೂಲಕ ತಿಳಿದುಕೊಂಡು ಸಹಾಯಹಸ್ತ ಚಾಚುತ್ತಿದ್ದರು. ಸಹಾಯ ಮಾಡಿದ್ದನ್ನು ಅಲ್ಲಿಗೇ ಮರೆತುಬಿಡುತ್ತಿದ್ದರು, ಮತ್ತಿನ್ಯಾವತ್ತೂ ನೆನಪಿಸಿಕೊಳ್ಳುತ್ತಿರಲಿಲ್ಲ. ಈ ಗುಣವೂ ನನಗೆ ಬಹಳ ಇಷ್ಟ. ಒಂದು ಚಿಕ್ಕ ಸಹಾಯ ಮಾಡಿ ಸಾಯುವವರೆಗೂ ತಾವು ಮಾಡಿದ ಸಹಾಯವನ್ನು ನೆನಪಿಸಿಕೊಂಡೇ ಕೆಲವರು ಜೀವನ ಕಳೆದುಬಿಡುತ್ತಾರೆ. ಅಂಥವರ ಮಧ್ಯ ವಿಷ್ಣು ನನಗೆ ಅನರ್ಘ್ಯ ರತ್ನದಂತೆ ಕಾಣುತ್ತಾರೆ.

ಶೂಟಿಂಗ್ ಇಲ್ಲದ ದಿನ ಅವರು ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಹರಟೆ ಹೊಡೆಯುತ್ತಾ, ತಮಾಷೆ ಮಾಡುತ್ತಾ ಗಲಾಟೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಆಧ್ಯಾತ್ಮ, ದೇವರು ಅಂತೆಲ್ಲಾ ಪೂಜೆ ಪುನಸ್ಕಾರಗಳಲ್ಲಿ ಮುಳುಗಿರುವವರಲ್ಲಿ ಸಾಕಷ್ಟು ಜನ ಬದುಕುವುದನ್ನು ಮರೆತುಬಿಡುವುದೇ ಹೆಚ್ಚು. ಆದರೆ ವಿಷ್ಣು ಆಧ್ಯಾತ್ಮವನ್ನು ಅಪ್ಪಿಕೊಂಡಂತೆಯೇ, ಸೃಷ್ಟಿಯ ಅಗೋಚರ ಶಕ್ತಿಯನ್ನು ನಂಬಿದಂತೆಯೇ ಬದುಕನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ. ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸುತ್ತಿದ್ದರು. ಜೀವನವನ್ನು ಅವರಷ್ಟು ಚೆನ್ನಾಗಿ, ಸಾರ್ಥಕವಾಗಿ ಬದುಕಿದವರನ್ನು ನಾನು ನೋಡಿಲ್ಲ. ಅವರ ಹಾಗೆ ಬದುಕಿದರೆ ಸಾಕು ಅಂತ ಅನಿಸುತ್ತೆ ಎಷ್ಟೋ ಬಾರಿ.

-ಭಾರತಿ ವಿಷ್ಣುವರ್ಧನ್

Leave a Reply

Your email address will not be published. Required fields are marked *

2 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top