‘ಸಂಘಜೀವಿ’ಗೆ ಸಂದ ಅರ್ಥಪೂರ್ಣ ಅಭಿನಂದನೆ

Posted In : ಅಂಕಣಗಳು, ತಿಳಿರು ತೋರಣ

ಅಜಾತಶತ್ರು, ಅಪ್ಪಟ ರಾಷ್ಟ್ರವಾದಿ, ಅಪ್ರತಿಮ ಸಂಘಟಕ, ಅನವರತ ಕ್ರಿಯಾಶೀಲ, ದಣಿವರಿಯದ ಸ್ವಯಂಸೇವಕ, ಸದಾಚಾರ ಸಂಪನ್ನ, ಸ್ಫೂರ್ತಿಯ ಚಿಲುಮೆ, ಜನಾನುರಾಗಿ, ಪರೋಪಕಾರಿ, ದೈವಭಕ್ತ, ಸ್ವಾಭಿಮಾನಿ… ಹೀಗೆ ಎಂತೆಂಥ ವಿಶೇಷಣಗಳನ್ನು ಬಳಸಿದರೂ ಗುಣಶ್ರೇಷ್ಠತೆಯ ಬಣ್ಣನೆಗೆ ನಿಲುಕದ ವ್ಯಕ್ತಿತ್ವ ಇವರದು. ಗೃಹಸ್ಥ, ಕೃಷಿಕ, ಹೈನುಗಾರಿಕೆ ತಜ್ಞ, ಪರಿಸರಪ್ರೇಮಿ, ಪಶು-ಪಕ್ಷಿ-ಸಸ್ಯಸಂಕುಲಕ್ಕೆಲ್ಲ ಸ್ನೇಹಿತ, ಚಾರಣಪ್ರಿಯ, ಸಾಹಸಿಗ, ಕಲಾಸಕ್ತ… ಹೀಗೆ ವೃತ್ತಿ-ಪ್ರವೃತ್ತಿಗಳ ಮೂಲಕ ವಿವರಿಸಹೊರಟರೆ ಊಹುಂ ಅಲ್ಲೂ ಇವರನ್ನು ಪೂರ್ಣವಾಗಿ ಪರಿಚಯಿಸಿದಂತಾಗದು. ಮತ್ತೆ ಇವರ ಬಗ್ಗೆ ಎಲ್ಲೂ ಓದಿ/ಕೇಳಿ/ತಿಳಿದೇ ಇಲ್ಲವಲ್ಲ ಎಂದುಕೊಂಡಿರಾದರೆ ಅದಕ್ಕೂ ಕಾರಣವಿದೆ. ಇಷ್ಟೆಲ್ಲ ಸಾಧನೆಗಳ ಸರದಾರನಾದರೂ ಇವರು ಪ್ರಚಾರಪ್ರಿಯರಲ್ಲ. ಬಿರುದು, ಪ್ರಶಸ್ತಿಗಳಿಗೆ ಹಾತೊರೆದವರಲ್ಲ. ಹಾರ-ತುರಾಯಿಗಳಿಗೆ ಕೊರಳೊಡ್ಡುವ ಹಪಹಪಿಯವರಲ್ಲ.

ಭಾಷಣಗಳಲ್ಲಿ ಬಡಾಯಿ ಕೊಚ್ಚಿದವರಲ್ಲ. ಪುಢಾರಿಯ ಮುಖವಾಡ ಧರಿಸಿದವರಲ್ಲ. ಮಾತಿಗಿಂತ ಕೃತಿ ಲೇಸು ಎಂದು ಜವಾಬ್ದಾರಿಗಳಿಗೆ ಸ್ವಇಚ್ಛೆಯಿಂದ ಹೆಗಲುಕೊಟ್ಟು ಅದರಲ್ಲಿ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡು ಛಲ ಬಿಡದ ತ್ರಿವಿಕ್ರಮನಂತೆ ಗುರಿ ಮುಟ್ಟಿಸುವ ಧೀರರಿವರು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದೆಂಬುದನ್ನು ಅಕ್ಷರಶಃ ಪಾಲಿಸಿದವರು. ಶ್ರೀಸಾಮಾನ್ಯ ಆಗಿಯೇ ಉಳಿಯಬಯಸಿ ಬಹುಮುಖ ಕರ್ತೃತ್ವದ ಅಸಾಮಾನ್ಯತೆ ತೋರಿದವರು. ತಾನೊಂದು ಕಂಪನ್ನು ಸೂಸುವ, ಅಂದವಾಗಿ ಕಂಗೊಳಿಸುವ ಪುಷ್ಪವಾಗಿ ಮೆರೆಯುವ ಬದಲು ಅಂಥ ಹತ್ತಾರು ಕುಸುಮಗಳನ್ನು ಜೋಡಿಸುವ ದಾರವಾಗಿ, ಎಲೆಮರೆಯ ಕಾಯಿಯಾಗಿ ಬದುಕುವುದರಲ್ಲೇ ಸಾರ್ಥಕ್ಯ ಕಂಡವರು.

ಇವರು ನಮ್ಮ ಊರಿನ ಹೆಮ್ಮೆಯ ವ್ಯಕ್ತಿ. ಬರಿ ವ್ಯಕ್ತಿಯಲ್ಲ ಒಂದು ಧೀಮಂತ ಶಕ್ತಿ. ಶಂಕರ ಜೋಶಿ! ಎಂಬತ್ತರ ಹರೆಯದ ಉತ್ಸಾಹಿ ತರುಣ. ಜೀವನಾನುಭವದಿಂದ ಮಾಗುತ್ತಿರುವಾಗಲೂ ಮಗುವಿನಂತೆ ನಿಷ್ಕಲ್ಮಷ ಮನಸ್ಸುಳ್ಳವರು. ಇವರ ಹೆಸರೇ ಇಡಿಯ ಒಂದು ಸಮುದಾಯದಲ್ಲಿ ಆತ್ಮೀಯತೆಯನ್ನು, ಪ್ರೀತ್ಯಾದರಗಳನ್ನು ಮೂಡಿಸುವ ಶಬ್ದ. ವೈಯಕ್ತಿಕವಾಗಿ ನನಗಿವರು ದಾಯಾದಿ (ದೊಡ್ಡಪ್ಪನ ಮಗ). ಆದರೆ ನಾನಿವತ್ತು ಇಲ್ಲಿ ಈ ಅಂಕಣಬರಹದಲ್ಲಿ ಶಂಕರಣ್ಣನನ್ನು ಪರಿಚಯಿಸುತ್ತಿರುವುದು ಅಂಥ ಸ್ವಕೀಯ ನೆಲೆಯಲ್ಲಿ ಅಲ್ಲವೇಅಲ್ಲ. ಏಕೆಂದರೆ ಮೇಲೆ ಹೇಳಿದ ಗುಣಗಾನದ ಮಾತುಗಳೆಲ್ಲ ನನ್ನವಷ್ಟೇ ಅಲ್ಲ.

ಶಂಕರಣ್ಣನನ್ನು ಹತ್ತಿರದಿಂದ ಬಲ್ಲ ಯಾರೇ ಆದರೂ ಅವರ ಬಗ್ಗೆ ಇಷ್ಟು ಅಥವಾ ಇದಕ್ಕಿಂತ ತುಸು ಹೆಚ್ಚೇ ಅಭಿಮಾನವುಳ್ಳವರಾಗಿರುತ್ತಾರೆ. ಅದನ್ನೂ ನಾನೇನು ಊಹಿಸಿ ಹೇಳುತ್ತಿರುವುದಲ್ಲ. ಶಂಕರಣ್ಣನ ಅಭಿಮಾನಿಗಳು, ಹಿತೈಷಿಗಳು, ಇಷ್ಟಮಿತ್ರ ಬಂಧುಬಾಂಧವರು ಸೇರಿ ಇದೀಗ ಅರ್ಪಿಸಿರುವ ಅಭಿನಂದನ ಗ್ರಂಥ ‘ಸಂಘಜೀವಿ’ಯ ಪ್ರತಿಯೊಂದು ಪುಟದಲ್ಲೂ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿರುವ ಸತ್ಯವಿದು.

ಅನುಭವ ಮತ್ತು ಅರಿವು(ಜ್ಞಾನ) ಅಮೃತಧಾರೆಯಿದ್ದಂತೆ. ಡಿವಿಜಿಯವರು ಕಗ್ಗದಲ್ಲಿ ಹೇಳಿದ್ದಾರೆ: ‘ತಲೆಯಿಂದ ತಲೆಗೆ ಪೀಳಿಗೆಯಿಂದ ಪೀಳಿಗೆಗೆ ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ಇಳಿಯುತಿದೆ ಯುಗದಿಂದ ಯುಗಕೆ ಮಾನವ ಧರ್ಮ ನಿಲದಮೃತಧಾರೆಯದು ಮಂಕುತಿಮ್ಮ ಒಂದು ಅಲೆಯು ಮತ್ತೊಂದು ಅಲೆಗೆ ಶಕ್ತಿಯನ್ನು ವರ್ಗಾಯಿಸುವಂತೆ, ಅಂಚೆಯವನು ತನ್ನ ಕೈಯಲ್ಲಿರುವ ಅಂಚೆಯನ್ನು ಹಲವಾರು ಮನೆಗಳಿಗೆ ತಲುಪಿಸುವಂತೆ, ಪ್ರಕೃತಿಯಲ್ಲಿ ಅರಳಿದ ಮನುಷ್ಯ ತಾನು ರೂಢಿಸಿಕೊಂಡ ಆಚಾರ-ವಿಚಾರ, ಧರ್ಮ, ವಿಜ್ಞಾನ, ಕಲೆ ಮುಂತಾದವನ್ನು ತಲೆಮಾರಿನಿಂದ ತಲೆಮಾರಿಗೆ, ಪೀಳಿಗೆಯಿಂದ ಪೀಳಿಗೆಗೆ ಹಂಚುತ್ತ ಅರಿವಿನ ಮತ್ತು ಅನುಭವದ ಅಮೃತಧಾರೆಯು ಮುಂದಿನ ಪೀಳಿಗೆಯ ವಿಚಾರಶಕ್ತಿಗೆ ನೆರವಾಗುವಂತೆ ಮಾಡುತ್ತಾನೆ. ಆತ ಹಾಗೆ ಮಾಡಲೇಬೇಕು. ಶಂಕರಣ್ಣನ ವ್ಯಕ್ತಿತ್ವ, ಅವರ ಅನುಭವಗಳ ನೈಜ ದಾಖಲೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಲೆಂಬ ಉದ್ದೇಶದಿಂದ ಹೊರಬಂದಿರುವ ಈ ಅಭಿನಂದನಗ್ರಂಥ- ಇವೆರಡೂ ಕಗ್ಗದ ಭಾವಾರ್ಥಕ್ಕೆ ಹದಿನಾರಾಣೆ ಹೊಂದುವಂಥವು. ವಿಶೇಷವೆಂದರೆ ಈ ಪುಸ್ತಕವು ‘ಉಳಿದವರು ಕಂಡಂತೆ’ ಶಂಕರಣ್ಣನ ವ್ಯಕ್ತಿಚಿತ್ರಣ ಅಷ್ಟೇ ಅಲ್ಲ.

ಅದು ಪುಸ್ತಕದ ಒಂದು ಭಾಗ ಮಾತ್ರ. ‘ನಾ ಕಂಡ ನನ್ನ ಬದುಕು’ ಎಂಬ ಮೊದಲ ಭಾಗದಲ್ಲಿ ಸ್ವತಃ ಶಂಕರಣ್ಣನೇ ತನ್ನ ಜೀವನಾನುಭವಗಳನ್ನು ದಾಖಲಿಸಿದ್ದಾರೆ. ಆ ದೃಷ್ಟಿಯಿಂದ ಇದು ಆತ್ಮಕಥನ ಕೂಡ ಹೌದು. ಆದರೂ ‘ಇವು ನನ್ನ ಸಾಧನೆಗಳು ಖಂಡಿತ ಅಲ್ಲ. ಅನುಭವಗಳು ಮಾತ್ರ’ ಎಂಬ ಅತ್ಯಂತ ಪ್ರಾಮಾಣಿಕ ಧ್ವನಿಯ ನಿವೇದನೆ. ಇಂಥದೊಂದು ಅಮೂಲ್ಯವಾದ ಪುಸ್ತಕ ಬೆಳಕು ಕಾಣುವುದಕ್ಕೆ ಶ್ರಮಿಸಿರುವ ಮೂವರು ವ್ಯಕ್ತಿಗಳು ಇಲ್ಲಿ ಉಲ್ಲೇಖಾರ್ಹರು. ಪುಸ್ತಕದ ಯೋಜನೆಯನ್ನು ಹೊತ್ತು-ಹೆತ್ತು ಪೋಷಿಸಿ ಪ್ರಸ್ತುತಪಡಿಸಿದ ನಿತ್ಯಾನಂದ ಭಿಡೆ ಎಂಬ ಕ್ರಿಯಾಶೀಲ ತರುಣ. ಶಂಕರಣ್ಣನ ಸೋದರಳಿಯ. ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ಉದ್ಯೋಗಿ. ಅಭಿಮಾನಿಗಳಿಂದ ಲೇಖನಗಳನ್ನು ಬರೆಸಿ ಸಂಗ್ರಹಿಸಿದ್ದು ಈತ. ಎರಡನೆಯವರು ನಮ್ಮೂರಿನ ನಿವೃತ್ತ ಅಧ್ಯಾಪಕ ಶ್ರೀರಂಗ ಜೋಶಿ. ಶಂಕರಣ್ಣ ಮೌಖಿಕವಾಗಿ ಹೇಳಿದ ಅನುಭವಗಳನ್ನು ಅಕ್ಷರರೂಪದಲ್ಲಿ ಅಚ್ಚುಕಟ್ಟಾಗಿ ನಿರೂಪಿಸಿದವರು. ಪುಸ್ತಕದ ಸಂಪಾದಕತ್ವ ಜವಾಬ್ದಾರಿಯನ್ನೂ ನಿರ್ವಹಿಸಿದವರು. ಮೂರನೆಯವರೂ ಮೂಲತಃ ನಮ್ಮೂರಿನವರೇ, ಈಗ ಬೆಂಗಳೂರಿನಲ್ಲಿರುತ್ತಾರೆ. ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮ, ಪುಸ್ತಕ ಪ್ರಕಟಣೆ ಹೀಗೆ ಅಕ್ಷರಕೃಷಿ ಮಾಡುತ್ತ ಬಹುಮುಖ ಪ್ರತಿಭೆಯ ದಿವಾಕರ ಡೋಂಗ್ರೆ. ವಾಕ್ಯದೋಷಗಳನ್ನು ಸರಿಪಡಿಸಿ ನಿರೂಪಣೆಗಳನ್ನು ಒಪ್ಪಗೊಳಿಸಿದ ಕುಸುರಿ ಕೆಲಸ ಅವರದು.

ಸಾಂಪ್ರದಾಯಿಕ ಶಿಕ್ಷಣ ಪಡೆದದ್ದು ಆಗಿನ ಎಂಟನೇ ತರಗತಿವರೆಗೆ ಮಾತ್ರ. ಉಳಿದಂತೆ ಜೀವನವನ್ನೇ ವಿಶ್ವವಿದ್ಯಾಲಯ ಎಂದು ಪರಿಗಣಿಸಿದವರು ನಮ್ಮ ಶಂಕರಣ್ಣ. ಎಳವೆಯಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾವಕ್ಕೊಳಗಾದವರು. ‘ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್…’ ಎಂದು ಕೆಚ್ಚೆದೆಯ ಕಡುಗಲಿತನವನ್ನು ರಕ್ತದ ಕಣಕಣದಲ್ಲೂ ಬೆಳೆಸಿಕೊಂಡವರು. ದೇಶಹಿತ ಧರ್ಮಹಿತ ಸರ್ವಜನಹಿತಕಾಗಿ ದಣಿವರಿಯದೆ ದುಡಿದವರು. ನಮ್ಮೂರಿನಲ್ಲಿ 45 ವರ್ಷಗಳ ಹಿಂದೆಯೇ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ ಕೀರ್ತಿ ಶಂಕರಣ್ಣನದು. ನಮ್ಮೂರಿನ ಪರಶುರಾಮ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ರೂವಾರಿಯಾಗಿ ಮುಂದಾಳುತ್ವ ವಹಿಸಿ ನಡೆಸಿದವರು. ಹೊಸಹೊಸ ತಳಿಗಳ ಹಸುಗಳನ್ನು ತಂದು ಸಾಕಿ ಬೇರೆಯವರಿಗೂ ಉತ್ತೇಜಿಸಿ ನಮ್ಮೂರಿನಲ್ಲಿ ಕ್ಷೀರಕ್ರಾಂತಿ ನಡೆಸಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪನೆಗೆ ಕಾರಣಕರ್ತರಾದವರು. ವಿಶ್ವ ಹಿಂದೂ ಪರಿಷದ್ ಆಯೋಜಿಸಿದ ಗೋಹತ್ಯಾ ನಿಷೇಧ ಚಳವಳಿ, ಶ್ರೀರಾಮ ಜಾನಕಿ ರಥಯಾತ್ರೆಗಳ ಮಹತ್ವವನ್ನು ಮಾಳ ಗ್ರಾಮದ ಜನತೆಗೆ ಪರಿಚಯಿಸಿ ಇಡೀ ಊರೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದವರು. ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ನಡೆಸಿದ ಪಶ್ಚಿಮಘಟ್ಟ ಜೀವವೈವಿಧ್ಯ ಸಮೀಕ್ಷೆಯ ಸಂದರ್ಭದಲ್ಲಿ ನಮ್ಮೂರಿನಿಂದ ಸಂಪನ್ಮೂಲ ವ್ಯಕ್ತಿಯಾಗಿ ಜತೆಗೂಡಿದವರು. ಮೊದಲ ಬಾರಿಗೆ ಬುಲ್ಡೋಜರ್ ತರಿಸಿ ಬರಡು ಜಮೀನನ್ನು ಕೃಷಿಭೂಮಿಯಾಗಿಸಿ ನಮ್ಮೂರಿನ ‘ಬಂಗಾರದ ಮನುಷ್ಯ ರಾಜೀವ’ ಎನಿಸಿಕೊಂಡವರು. ಊರಿನಲ್ಲಿ ಪ್ರಥಮವಾಗಿ ತುಂತುರು ನೀರಾವರಿ ವ್ಯವಸ್ಥೆ ಮಾಡಿಕೊಂಡವರು. ವೈವಿಧ್ಯಮಯ ಹೂಗಿಡ ಬಳ್ಳಿಗಳನ್ನು, ಗಿಳಿ-ಪಾರಿವಾಳ ಮುಂತಾದ ಜೀವಿಗಳನ್ನು ನಮ್ಮೂರಿಗೆ ಪರಿಚಯಿಸಿದವರು. ಮಾಳ ಗ್ರಾಮದಲ್ಲಿ ಪ್ರಪ್ರಥಮ ಶೌಚಾಲಯ ನಿರ್ಮಾಣ ಮಾಡಿ ದಶಕಗಳಷ್ಟು ಹಿಂದೆಯೇ ‘ಸ್ವಚ್ಛ ಭಾರತ’ ಪರಿಕಲ್ಪನೆ ಮೂಡಿಸಿದವರು.

ಹರಿಜನ ಕಾಲೊನಿಯಲ್ಲಿ ಅಂಗನವಾಡಿ ಸ್ಥಾಪನೆಗೆ ನೆರವಾಗಿ ಅಲ್ಲಿನ ಶಿಕ್ಷಕರಿಗೆ ತನ್ನ ಮನೆಯಲ್ಲಿ ವಸತಿ ಸೌಕರ್ಯ ಕಲ್ಪಿಸಿದವರು. ದಕ್ಷಿಣಕನ್ನಡ- ಚಿಕ್ಕಮಗಳೂರು ಗಡಿ ಪ್ರದೇಶದ ಶೀರ್ಲು ಗ್ರಾಮದ ಮಲೆಕುಡಿಯ ಸಮುದಾಯಕ್ಕೆ ನಾಗರಿಕ ಸಂಪರ್ಕ ಸಿಗಬೇಕೆನ್ನುವ ಉದ್ದೇಶದಿಂದ ಎತ್ತಿನಗಾಡಿ ಸಂಚಾರ ವ್ಯವಸ್ಥೆ ಏರ್ಪಡಿಸಿದವರು. ತುಂಗಾ ಮತ್ತು ಭದ್ರಾ ನದಿಗಳ ಉಗಮಸ್ಥಾನಗಳಾದ ನಾಗತೀರ್ಥ ಮತ್ತು ವರಾಹತೀರ್ಥಗಳ (ಈ ಪ್ರದೇಶವನ್ನು ಗಂಗಾಮೂಲ ಎಂದು ಕರೆಯಲಾಗುತ್ತದೆ) ಪ್ರಾಕೃತಿಕ-ಧಾರ್ಮಿಕ ಮಹತ್ವವನ್ನು ಪೋಷಿಸಿದವರು. ಗಂಗಾಮೂಲದಲ್ಲಿ ಗುರುಕುಲ ಸ್ಥಾಪನೆಯ ಅನಂತಶಾಸ್ತ್ರೀ ಡೋಂಗ್ರೆ (ಪಂಡಿತಾ ರಮಾಬಾಯಿಯ ತಂದೆ)ಯವರ ಕನಸು ನನಸಾಗಲು ಯತ್ನಿಸಿದವರು…. ಬರೆಯುತ್ತ ಹೋದರೆ ಶಂಕರಣ್ಣನ ಸಾಧನೆಗಳ ಪಟ್ಟಿ ಈ ಅಂಕಣದಲ್ಲಿ ಹಿಡಿಸದು. ‘ಸಂಘಜೀವಿ’ ಪುಸ್ತಕದಲ್ಲಿ ಇವೆಲ್ಲವೂ ದಾಖಲಾಗಿವೆ. ಮುನ್ನುಡಿಯಲ್ಲಿ ಚಂದ್ರಶೇಖರ ಭಂಡಾರಿಯವರು ಬರೆದಿರುವಂತೆ ‘ಸಮಗ್ರ ಸಮಾಜಹಿತದ ದೃಷ್ಟಿಯುಳ್ಳ ಓರ್ವ ಕ್ರಿಯಾಶೀಲ ವ್ಯಕ್ತಿ ಲೋಕಹಿತಂ ಮಮ ಕರಣೀಯಂ ಎಂಬ ಉಕ್ತಿಗನುಗುಣವಾಗಿ ತಾನಿರುವ ಪ್ರದೇಶವನ್ನು ಯಾವ ರೀತಿ ಸಚೇತನಗೊಳಿಸಬಲ್ಲ ಎಂಬುದಕ್ಕೆ ಒಂದಲ್ಲ, ಎರಡಲ್ಲ, ವಿಪುಲವಾದ ಮಾಹಿತಿಗಳು ಈ ಪುಸ್ತಕದ ಪುಟಪುಟಗಳಲ್ಲೂ ತುಂಬಿವೆ’ ಎನ್ನುವುದು ಅಕ್ಷರಶಃ ನಿಜ. ಅಷ್ಟಾಗಿಯೂ ಇದು ಶಂಕರಣ್ಣನ ಅನುಭವಸಾಗರದ ಒಂದು ‘ನೀರ್ಗಲ್ಲಿನ ಮೇಲ್ತುದಿ’ (ಟಿಪ್ ಆಫ್ ದಿ ಐಸ್‌ಬರ್ಗ್) ಮಾತ್ರ ಆಗಿದೆ ಎನ್ನುವುದೂ ಅಷ್ಟೇ ನಿಜ.

ಸ್ವಾರಸ್ಯಕರ, ಕುತೂಹಲಕಾರಿ ಅಂಶಗಳಿಗೂ ಪುಸ್ತಕದಲ್ಲಿ ಕೊರತೆಯೇನಿಲ್ಲ. ಏಕೆಂದರೆ ಶಂಕರಣ್ಣನ ವ್ಯಕ್ತಿತ್ವವೇ ಅಂಥದು. ಅವರು ಹೈಸ್ಕೂಲ್‌ನಲ್ಲಿದ್ದಾಗ ಒಮ್ಮೆ ಕಾರ್ಕಳ ಪೇಟೆಯಲ್ಲಿ ಮದವೇರಿದ ಆನೆಯ ದಾಂಧಲೆ ವಿವರಗಳು ರೋಚಕವಾಗಿವೆ. ಕೊನೆಗೂ ಆ ಆನೆ ಸಾವನ್ನಪ್ಪಿತ್ತು ಎಂದು ಓದುವಾಗ ಹೃದಯ ಭಾರವಾಗುತ್ತದೆ. ಅಂತೆಯೇ ಆಗ ಪ್ರಚಲಿತವಿದ್ದ ಭೂತ- ಪ್ರೇತ- ಪಿಶಾಚಿಗಳ ಘಟನೆಗಳ, ಅಂತೆಕಂತೆಗಳ ಬಣ್ಣನೆ, ಹುಲಿ ಕಾಡುಕೋಣ ಕಾಳಿಂಗಸರ್ಪ ಮುಂತಾದ ಭಯಾನಕ ಜೀವಿಗಳೊಂದಿಗೆ ಮುಖಾಮುಖಿ, ಸ್ವಾಮಿಭಕ್ತ ನಾಯಿ ‘ಪಗ್ಡು’ವಿನ ಪ್ರಸಂಗಗಳು, ಸಾಹಸಿಗರ ತಂಡವೊಂದು ರಾತ್ರಿ ಹೊತ್ತು ಹೆಜ್ಜೇನಿನ ಗೂಡಿನಿಂದ ಜೇನು ಸಂಗ್ರಹಿಸಿದ್ದು, ಅಲ್ಲಿ ಬ್ರಹ್ಮರಾಕ್ಷಸನ ಕಾಟಕ್ಕೊಳಗಾದದ್ದು, ಯಕ್ಷಗಾನ ಬಯಲಾಟದಲ್ಲಿ ರಾಕ್ಷಸ ವೇಷಧಾರಿಯ ಅವಾಂತರ, ಊರ ಜನರು ಮೊತ್ತಮೊದಲ ಬಾರಿಗೆ ಆಕಾಶದಲ್ಲಿ ವಿಮಾನ ಹಾರಾಟ ಗಮನಿಸಿದಾಗಿನ ಘಟನಾವಳಿ, ಕ್ಷಾಮಡಾಮರ ಅತಿವೃಷ್ಟಿಗಳ ವಿವರ, ಮಹಾರಾಷ್ಟ್ರದ ಪೇಶ್ವೆ ವೀರನೊಬ್ಬ ಅಲೆಮಾರಿಯಾಗಿ ನಮ್ಮೂರಿಗೆ ಬಂದು ಒಂದು ದಿನ ಉಳಿದು ಮುಂದುವರಿದದ್ದು ಮುಂತಾದ ಭಾಗಗಳು ಉಸಿರು ಬಿಗಿಹಿಡಿದು ಓದಿಸಿಕೊಳ್ಳುವಂಥವು. ಸಮಾರಂಭಗಳಲ್ಲಿ ಪಂಥ ಕಟ್ಟಿ ಸಿಹಿ ಭಕ್ಷ್ಯಗಳನ್ನು ತಿನ್ನುತ್ತಿದ್ದದ್ದು, ಒಮ್ಮೆ 22 ಲಾಡು ತಿಂದು ಮಾರನೆ ದಿನ ದವಾಖಾನೆಗೆ ಓಡಿದ್ದು, ಕಾರ್ಕಳದ ದ್ವಾರಕಾ ರೆಸ್ಟೊರೆಂಟ್‌ನಲ್ಲಿ ಬಾಂಬೇ ಫುಲ್ ಮೀಲ್ಸ್ ಎಂದು ಆರ್ಡರ್ ಮಾಡಿ 32 ಪೂರಿ ತಿಂದು ಮುಗಿಸಿದ್ದು- ಇವೆಲ್ಲ ಕಚಗುಳಿಯಿಡುತ್ತ ರಂಜನೆಯೊದಗಿಸಿ ನಕ್ಕುನಗಿಸುವಂಥವು.

ಇಂಥ ಸಮೃದ್ಧ ಓದಿನ ಸುಂದರ ಪುಸ್ತಕ ಸಂಘಜೀವಿಯು ನಿನ್ನೆ (ಶನಿವಾರ ಡಿಸೆಂಬರ್ 24) ಸಂಜೆ ನಮ್ಮ ಮಾಳ ಗ್ರಾಮದ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ, ಆತ್ಮೀಯವಾದ ಸಮಾರಂಭವೊಂದರಲ್ಲಿ ಅನಾವರಣಗೊಂಡಿತು. ಸಂಘಜೀವಿ ಸ್ನೇಹಜೀವಿ ಶಂಕರ ಜೋಶಿಯವರನ್ನು ಊರವರೆಲ್ಲರೂ ಸೇರಿ ಹೃದಯಪೂರ್ವಕವಾಗಿ ಸನ್ಮಾನ ಮಾಡಿ ಅಭಿನಂದಿಸಿದರು. ಪುಸ್ತಕಕ್ಕೆ ಮುನ್ನುಡಿ ಬರೆದ ಚಂದ್ರಶೇಖರ ಭಂಡಾರಿಯವರೇ ಬೆಂಗಳೂರಿನಿಂದ ಬಂದು ಈ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಅವರಾರು ಎಂದು ನಿಮಗೆ ಗೊತ್ತಿಲ್ಲವಾದರೆ ನೀವು ‘ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು….’ ದೇಶಭಕ್ತಿಗೀತೆಯನ್ನು ನೆನಪಿಸಿಕೊಳ್ಳಬೇಕು. ಭಂಡಾರಿಯವರು ಆ ಪದ್ಯದ ರಚನೆಕಾರರು. ಅದರದೇ ಒಂದು ಸಾಲನ್ನು ಎರವಲು ಪಡೆದು ಹೇಳುವುದಾದರೆ ಸಂಘಜೀವಿಯ ಜೀವನಗಾಥೆ ಮತ್ತು ಅದೇ ಹೆಸರಿನ ಪುಸ್ತಕದ ‘ಸೊಬಗಿನ ಮಹಿಮೆಯು ವರ್ಣಿಸಲಸದಳವು’. ಆ ಸೊಬಗನ್ನು ಮೊಗೆಮೊಗೆದು ಆಸ್ವಾದಿಸುವ ಆಸೆಯಾಗಿದೆಯಾದರೆ, ಪುಸ್ತಕವನ್ನು ಕೊಂಡು ಓದಬೇಕೆಂಬ ಉತ್ಕಟ ಇಚ್ಛೆ ನಿಮಗಿದ್ದರೆ ಸಂಪರ್ಕ ವಿವರ: ಶುಭೋದಯ ಪ್ರಕಾಶನ ಬೆಂಗಳೂರು (ದೂರವಾಣಿ: 9448945441).

Leave a Reply

Your email address will not be published. Required fields are marked *

17 + eleven =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top