ಸನಾನತೆ ವಸ್ತ್ರದಲ್ಲೊಂದೇ ಅಲ್ಲ, ಸಿಇಒ ಆಗುವವರೆಗೂ ಇರಲಿ

Posted In : ಸಂಗಮ, ಸಂಪುಟ

ಯಾವುದೋ ಮ್ಯಾನೇಜ್‌ಮೆಂಟ್ ವಿಷಯಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರ ಸಂದರ್ಶನವನ್ನು ಓದುತ್ತಿದ್ದೆ. ಅವರೇನು ಯಾವುದೇ ಶ್ರೀಮಂತ ಬ್ಯುಸಿನೆಸ್ ಮನೆತನದವರಲ್ಲ, ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ ಅಥವಾ ಹೊರದೇಶಗಳಲ್ಲಿ ಓದಿ ಬಂದವರಲ್ಲ. ನಮ್ಮ, ನಿಮ್ಮಂತೆ ಇಲ್ಲೇ ಹುಟ್ಟಿ ಬೆಳೆದು ಬಂದವರು. ನಲವತ್ತು ವರ್ಷಗಳ ಹಿಂದೆ ಒಂದು ಸಾಧಾರಣ ಹುದ್ದೆಯಲ್ಲಿ ಬ್ಯಾಂಕ್ ಸೇರಿ ಕೆಲಸ ಶುರು ಮಾಡಿದವರು ಇಂದು ಜಗತ್ತಿನ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆ.

ಇವರು ಅಧ್ಯಕ್ಷೆ ಆಗಿರುವ ಬ್ಯಾಂಕ್‌ನಲ್ಲಿ ಸುಮಾರು ಮೂರು ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ, ಎರಡು ಶತಮಾನದ ಇತಿಹಾಸ ಇದೆ, ಮೂವತ್ತು ಟ್ರಿಲಿಯನ್ ರುಪಾಯಿಗಳ ಆಸ್ತಿ ಇದೆ. ಇಷ್ಟು ದೊಡ್ಡ ಬ್ಯಾಂಕಿನ ಟಾಪ್ ಲೀಡರ್ ಒಬ್ಬ ಮಹಿಳೆ. ಬ್ಯಾಂಕಿನ ಚೇರ್‌ಮನ್ ಆಗಿರುವ ಅವರು ಓದಿದ್ದು ಸಿಎ ಅಲ್ಲ ಅಥವಾ ಎಂಬಿಎ ಅಲ್ಲ, ಅವರು ಓದಿದ್ದು ಸಾಹಿತ್ಯವನ್ನು. ಆಗುವುದಿಲ್ಲ ಅಂತ ಕುಳಿತಿದ್ದರೆ ಅವರ ಹತ್ತಿರ ಎಷ್ಟು ಕಾರಣಗಳಿದ್ದವು ನೋಡಿ. ಸಾಹಿತ್ಯ ಓದಿದ್ದು, ಮಹಿಳಾವಾದಿ ಆಗುತ್ತೇನೆ ಅನ್ನಬಹುದಿತ್ತು. ಮಹಿಳೆ ತಾನು, ಮನೆ, ಮಕ್ಕಳು ಎನ್ನುತ್ತಾ ಒಬ್ಬ ಮ್ಯಾನೇಜರ್ ಆಗಿ ಅವರು ನಿವೃತ್ತಿ ಹೊಂದಬಹುದಿತ್ತು. ಆದರೆ ಅವರು ಇಂದು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹಾಗೆಯೇ ಇನ್ನೊಂದು ಉದಾಹರಣೆ, ಚಂದಾ ಕೊಚ್ಚರ್. ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್. ಅವರೂ ಒಬ್ಬ ಮಹಿಳೆ. ನೀವು ಮಹಿಳೆ, ನಿಮ್ಮ ಮಾತುಗಳನ್ನು ಬೋರ್ಡ್ ಆಫ್ ಡೈರೆಕ್ಟರ್ ಕೇಳುತ್ತಾರಾ ಎಂದು ಒಂದು ಮಹಿಳಾವಾದಿ ಪತ್ರಕರ್ತೆ ಕೇಳಿದಾಗ, ಚಂದಾ ಅವರು, ‘ವ್ಯವಹಾರದಲ್ಲಿ ಗಂಡು, ಹೆಣ್ಣು ಎಂದು ಇರುವುದಿಲ್ಲ. ನಾನು ನೋಡಿದ ಎಷ್ಟೋ ಬೋರ್ಡ್ ಮೀಟಿಂಗ್‌ನಲ್ಲಿ ನಾನೊಬ್ಬಳೇ ಮಹಿಳೆ. ಆದರೆ ಅಲ್ಲಿ ಕೆಲಸ ಮಾತನಾಡುತ್ತದೆ. ನಿಮ್ಮ ಸಾಮರ್ಥ್ಯ ಇನ್ನೊಬ್ಬರನ್ನು ನಿಯಂತ್ರಿಸುತ್ತದೆ’ ಎನ್ನುತ್ತಾರೆ. ಎಷ್ಟು ನಿಜ ಅಲ್ವಾ? ಸಮಾನತೆ, ನಿಯಂತ್ರಣ ಎಲ್ಲವೂ ಸಾಮರ್ಥ್ಯದಿಂದ ಬರಬೇಕೆ ಹೊರತು ವಾದ ವಿವಾದ ಹಾಗೂ ಬಯಕೆಗಳಿಂದಲ್ಲ!

ಇನ್ನೊಂದು ಉದಾಹರಣೆ – ಜನರಲ್ ಮೋಟಾರ್ಸ್ ಕಂಪನಿಯ ಸಿಇಒ ಮೇರಿ ಬಾರಾ. ಒಂದು ಕಾಲದಲ್ಲಿ ಜಗತ್ತಿನ ಎಕಾನಮಿ ಹೇಗಿದೆ ಎಂಬುದು ಆಟೊಮೊಬೈಲ್ ಇಂಡಸ್ಟ್ರೀಸ್ ಹೇಗೆ ನಡೀತಾ ಇದೆ ಅನ್ನುವುದರ ಮೇಲೆ ನಿರ್ಧಾರವಾಗಿತ್ತು. ಗಂಡಸರೇ ಆಳುತ್ತಿದ್ದ ಅಂಥ ಸಾಮ್ರಾಜ್ಯಕ್ಕೆ ಒಡತಿಯೊಬ್ಬಳು ಬಂದಾಗ ಜಗತ್ತೇ ಅಚ್ಚರಿ ಪಟ್ಟಿತ್ತು. ಮೇರಿ ಬಾರಾ ಯಾವುದೇ ಶ್ರೀಮಂತ ಮನೆತನದಿಂದ ಬಂದವರಲ್ಲ ಅಥವಾ ಹಾರ್ವರ್ಡ್, ಆಕ್ಸ್ಫರ್ಡ್ ಕಾಲೇಜಿನಿಂದ ನೇರವಾಗಿ ಕಂಪನಿಯ ಬೋರ್ಡ್ ರೂಮಿಗೆ ಬಂದವರಲ್ಲ. ಅವರ ತಂದೆ ಜನರಲ್ ಮೋಟಾರ್ಸ್ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿ ನಿವೃತ್ತರಾದವರು. ಇವರು ಟೆಕ್ನಿಕಲ್ ಟ್ರೇನಿಂಗ್ ಮುಗಿಸಿ, ಒಬ್ಬ ಕ್ವಾಲಿಟಿ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದವರು. ಒಂದೊಂದೇ ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲು ಹತ್ತಿದವರು. ಪ್ರೊಡಕ್ಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಲ್ಲವೇ? ಕ್ವಾಲಿಟಿಯಲ್ಲಿ ಕೆಲಸ ಮಾಡಿಲ್ಲವೇ? ಮಾನವ ಸಂಪನ್ಮೂಲ, ಸಪ್ಲೈ ಚೈನ್, ಪ್ರಾಡಕ್ಟ್‌ ಡೆವಲಪ್ಮೆಂಟ್, ಜಾಗತಿಕ ಮಾರುಕಟ್ಟೆ ಎಲ್ಲ ರಂಗದಲ್ಲೂ ಗಂಡಸರೊಡನೆ ಕೆಲಸ ಮಾಡಿ ಬಂದವರು. ಒಂದು ಕಾರನ್ನು ಖರೀದಿಸುವಾಗ ಅದರ ನಿರ್ಧಾರದಲ್ಲಿ ಮಹಿಳೆಯ ಪಾತ್ರ ಎಷ್ಟಿದೆ ಎನ್ನುವುದು ಅವರಿಗೆ ಗೊತ್ತಿದೆ. ಅದಕ್ಕಾಗಿ ಅವರು ಮಹಿಳೆಯರು ಹೆಚ್ಚಾಗಿ ತಂತ್ರಜ್ಞಾನ ಹಾಗೂ ಮೆಕ್ಯಾನಿಕಲ್ ಕಂಪನಿಗಳಿಗೆ ಭರ್ತಿಯಾಗಬೇಕು ಎನ್ನುತ್ತಾರೆ.

ಅವರು ಕಂಪನಿಯ ಉನ್ನತ ಹುದ್ದೆ ಅಲಂಕರಿಸಿದಾಗ ಕಂಪನಿ ಲಾಭದ ಶ್ರೇಣಿಯಲ್ಲಿ ಇರಲಿಲ್ಲ, ದಿವಾಳಿ ಸ್ಥಿತಿಯಿಂದ ಆಗತಾನೆ ಹೊರಗೆ ಬಂದಿತ್ತು. ಟೊಯೋಟಾ, ಹೋಂಡಾ, ಹುಂಡೈನಂಥ ಕಂಪನಿಗಳೆದುರು ಪೈಪೋಟಿ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಅವರನ್ನೆಲ್ಲ ಎದುರಿಸಿ ಷೇರು ಮಾರುಕಟ್ಟೆಯ ಮಾತುಗಳನ್ನೆಲ್ಲ ಸುಳ್ಳಾಗಿಸಿದ್ದಾರೆ ಇವರು. ಇದು ಸಮಾನತೆ. ಇವರ ಎದುರಿಗೆ ಯಾವ ಗಂಡಸೂ ಮಾತನಾಡಲಾರ, ಯಾಕೆ ಅಂದರೆ ಅವರ ಸಾಮರ್ಥ್ಯ ಹಾಗೆ ಮಾಡಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಇವರಿಗಿಂತ ಇನ್ನೊಂದು ಪ್ರೇರಣೆ ಬೇಕೆ? ಕೆಲಸ ಮಾತನಾಡಬೇಕು, ಬಟ್ಟೆಯಲ್ಲ!

ಬಟ್ಟೆಯ ಬಗ್ಗೆ ಮಾತೆತ್ತಿದ ಮೇಲೆ ಈ ಸಂಗತಿಯನ್ನು ಹೇಳದೆ ಬಿಡಲಾಗದು. ಇಂದ್ರಾ ನೂಯಿ ಹೆಸರನ್ನು ಯಾರು ಕೇಳಿಲ್ಲ? ಪೆಪ್ಸಿ ಕಂಪನಿಯ ಅಧ್ಯಕ್ಷೆ. ಅವರೂ ಕೂಡಾ ನಮ್ಮಂತೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು, ಭಾರತದಲ್ಲಿ ಕಲಿತು ಅಮೆರಿಕಕ್ಕೆ ಹೋದವರು. ಅವರು ವಿದ್ಯಾಭ್ಯಾಸ ಮಾಡುತ್ತಿರುವಾಗ ತಮಗೆ ಆರ್ಥಿಕ ನೆರವು ಬೇಕು ಅಂತ ಬೆಳಗ್ಗೆ ಕಾಲೇಜು ಮುಗಿಸಿ ನಂತರ ರಾತ್ರಿ ಹೋಟೆಲ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರಂತೆ. ಮುಂದೊಂದು ದಿನ ಇಂಟರ್‌ವ್ಯೂಗೆ ಬೇಕು ಅಂತ, ತಾವು ಖರ್ಚು ಮಾಡಿ ಉಳಿದ ಹಣದಲ್ಲಿ ಪಾಶ್ಚಾತ್ಯ ಶೈಲಿಯ ಉಡುಪೊಂದನ್ನು ಖರೀದಿಸಿ ಇಟ್ಟುಕೊಂಡಿದ್ದರಂತೆ. ಮೊದಲ ಇಂಟರ್‌ವ್ಯೂಗೆ ಹೋಗುವಾಗ ಅದೇ ಉಡುಪು ತೊಟ್ಟಿದ್ದರಂತೆ. ಅವರ ದೃಷ್ಟಿಯಲ್ಲಿ ಪಾಶ್ಚಾತ್ಯ ಉಡುಪು ಧರಿಸಿದರೆ ಮಾತ್ರ ಇಂಟರ್‌ವ್ಯೂನಲ್ಲಿ ಸೆಲೆಕ್ಟ್ ಆಗಬಹುದು ಅಂತಿತ್ತು. ಆದರೆ ಆ ಇಂಟರ್‌ವ್ಯೂನಲ್ಲಿ ಫೇಲಾಗಿಬಿಟ್ಟರಂತೆ. ಅವರಿಗೆ ದುಃಖ ತಾಳಲಾಗದೆ ತಾಯಿಗೆ ಕರೆ ಮಾಡಿದರಂತೆ.

ಅಮ್ಮ ಯಾಕೆ ಅಂತ ಕೇಳಿದರೆ, ತಾವು ಇಂಟರ್‌ವ್ಯೂನಲ್ಲಿ ಕಂಫರ್ಟ್ ಆಗಿರದೇ ಇದ್ದುದು ಅದಕ್ಕೆ ಕಾರಣ ಅಂದರಂತೆ. ಅದಕ್ಕೆ ಅಮ್ಮ, ನಿನಗೆ ಯಾವುದು ಕಂಫರ್ಟ್ ಅನಿಸುತ್ತದೆಯೋ ಅದೇ ಉಡುಪು ತೊಟ್ಟು ಹೋಗು ಎಂದರಂತೆ. ಮುಂದಿನ ಇಂಟರ್‌ವ್ಯೂಗೆ ಭಾರತದಿಂದ ಒಯ್ದ ಸೀರೆಯನ್ನು ಉಟ್ಟು ಹೋದರಂತೆ. ಇಂಟರ್‌ವ್ಯೂ ಪಾಸ್ ಆದರು, ಅವರಿಗೆ ಕೆಲಸ ಸಿಕ್ಕೇ ಬಿಟ್ಟಿತು. ಬಟ್ಟೆ ಮುಖ್ಯ ಅಲ್ಲ, ಕಂಫರ್ಟ್ ಮುಖ್ಯ. ಅವರೇ ಹೇಳಿದಂತೆ, ಇದಾದನಂತರ ನಾನು ಬದುಕಿನಲ್ಲಿ ಒಂದು ತತ್ತ್ವವನ್ನು ಅಳವಡಿಸಿಕೊಂಡಿದ್ದೇನೆ. ಅದೇನೆಂದರೆ ‘ನಾನು ನಾನಾಗಿರಬೇಕು’. ನಾವು ನಾವಾಗಿದ್ದರೆ ಅದಕ್ಕಿಂತ ಇನ್ನೊಂದು ಹಿತ ಇನ್ನಾವುದಿದೆ. ಇನ್ನೊಬ್ಬರನ್ನು ಇಮಿಟೇಟ್ ಮಾಡಲು ಹೋದಾಗಲೇ ಅವಾಂತರ. ಇಂದ್ರಾ ನೂಯಿ ಇನ್ನೊಬ್ಬರನ್ನು ನಕಲು ಮಾಡದೆ ತಾನು ತಾನಾಗಿಯೇ ಇದ್ದುದ್ದಕ್ಕೆ ಇಂದು 63 ಬಿಲಿಯನ್ ಡಾಲರ್ ಕಂಪನಿಯ ಚೇರ್ಮನ್ ಹಾಗೂ ಸಿಇಒ.

ಇವನ್ನೆಲ್ಲ ಯಾಕೆ ಹೇಳಬೇಕಾಗಿ ಬಂತು ಅಂದರೆ ಕಳೆದ ಒಂದು ವಾರದಿಂದ ಬರೀ ಒಂದೇ ಸುದ್ದಿ. ಮಹಿಳೆಯರ ಮೇಲೆ ಬೆಂಗಳೂರಿನಲ್ಲಿ ದೌರ್ಜನ್ಯ. ಬೆಂಗಳೂರು ಸೇಫ್ ಅಲ್ಲ ಎನ್ನುವ ವದಂತಿ. ಇದನ್ನೇ ಬಳಸಿಕೊಂಡು ಕೆಲ ಸಮಯಸಾಧಕರು ಸ್ತ್ರೀ ಸಮಾನತೆಯ ಹೆಸರಿನಲ್ಲಿ ಎಲ್ಲೆಲ್ಲೂ ನಾವು ಮಹಿಳಾವಾದಿಗಳು ನಮಗೆ ಅದು ಬೇಕು, ಇದು ಬೇಕು, ಸ್ವಾತಂತ್ರ್ಯ ಬೇಕು ಹಾಗೆ ಹೀಗೆ ಎನ್ನುತ್ತಾ ಬ್ಯಾನರ್ ಹಿಡಿದು ಟಿವಿಯ ಮುಂದೆ ಬರುವುದನ್ನು ಕಾಣುತ್ತಿದ್ದೇವೆ. ಇಷ್ಟು ನೆಗೆಟಿವ್ ಆಗಿದೆಯಾ ನಮ್ಮ ಸಮಾಜ? ನಾವು ನಾವಾಗಿರುವುದು ಸ್ವಾತಂತ್ರ್ಯ ಅಲ್ಲವೆ? ಯಾತಕ್ಕಾಗಿ ಬೇರೆಯವರ ಸಂಸ್ಕೃತಿ, ಬೇರೆಯವರ ಉಡುಪು, ಆಹಾರ, ವರ್ತನೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಮಾನತೆ ಬೇಕೆಂದರೆ ಅದನ್ನು ಕೆಲಸದಲ್ಲಿ ಬೆಳೆಸಬೇಕು, ಸಂಶೋಧನೆಯಲ್ಲಿ ತೋರಿಸಬೇಕು, ಉದ್ಯೋಗ ಸೃಷ್ಟಿ ಮಾಡಬೇಕು, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಬೆಳೆಸಬೇಕು. ನಾಳೆ ಬರುವ ಪೀಳಿಗೆಗೆ ಶ್ರೀಮಂತ ಸಂಸ್ಕಾರವನ್ನು ಉಡುಗೊರೆಯಾಗಿ ಕೊಡಬೇಕು ಅದು ಸ್ವಾತಂತ್ರ್ಯ, ಅದು ಸಮಾನತೆ, ಅದು ಗೌರವ. ಗಂಡು ಹಾಗೂ ಹೆಣ್ಣಿನ ನಡುವೆ ಏನು ವ್ಯತ್ಯಾಸ ಇರಬೇಕೋ ಅದು ಪ್ರಕೃತಿಗೆ ಗೊತ್ತಿದೆ, ಅದಕ್ಕೆ ತಕ್ಕಂತೆ ಆಯಾ ದೇಶದ ಸಂಸ್ಕೃತಿಯು ಬೆಳೆದು ಬಂದಿದೆ. ಸಂಸ್ಕೃತಿ ತಪ್ಪು, ಪ್ರಕೃತಿ ತಪ್ಪು ಎನ್ನುತ್ತಾ ವಿಕೃತವಾಗಿ ಎಲ್ಲದಕ್ಕೂ ಎದುರಾಗಿ ಹೋಗಬಾರದು.

ಜಗತ್ತಿನ ಅತೀ ಪ್ರಬಲ ಕಂಪನಿಗಳನ್ನು ಇನ್ನೂ ಗಂಡಸರೇ ನಡೆಸಿಕೊಂಡು ಹೋಗುತ್ತಿದ್ದಾರೆ.  Fortune 500 ಕಂಪನಿಗಳ ಪಟ್ಟಿಯಲ್ಲಿ ಕೇವಲ 26 ಮಹಿಳಾ ಸಿಇಓಗಳು ಇದ್ದಾರೆ. ಅಲ್ಲಿ ಸಮಾನತೆ ಬರಬೇಕಿದೆ. ಇಂದು ಬಟ್ಟೆ, ಸೌಂದರ್ಯ ವರ್ಧಕ, ಚಪ್ಪಲಿ, ಕಾರು, ಮನೆ, ಸ್ಕೂಟರ್ ಎಲ್ಲ ಕಂಪನಿಯ ಮಾಲೀಕರು ಹೆಚ್ಚಾಗಿ ಗಂಡಸರೇ. ಮಹಿಳೆಯರು ತುಂಬಿರುವ ಬೋರ್ಡ್ ಮೀಟಿಂಗ್ ಆಗುವುದು ಯಾವಾಗ? ಮಹಿಳೆಯರು ಬಳಸುವ ಎಲ್ಲ ವಸ್ತುಗಳ ವಿನ್ಯಾಸಕರು ಗಂಡಸರು, ಅಲ್ಲಿ ನಿಮಗೆ ಸಮಾನತೆ ಬೇಡವೇ? ಹಿಂದಿನ ವರ್ಷದ ತನಕ ಸಿನಿಮಾದಲ್ಲಿ ಹೆಂಗಸರು ಮೇಕಪ್ ವೃತ್ತಿ ನಿರ್ವಹಿಸಲು ಆಸ್ಪದವೇ ಇರಲಿಲ್ಲ. ಇದರ ಸಲುವಾಗಿ ಎಷ್ಟು ಮಹಿಳಾವಾದಿಗಳು ಹೋರಾಡಿದರು, ಎಷ್ಟು ಮಂದಿ ಸಮಾಜಸೇವಕರು ಬೀದಿಗೆ ಬಂದರು? ಚಾರು ಖುರಾನಾ ಎನ್ನುವವರು ಕಾನೂನಿನ ಮೂಲಕ ಹೋರಾಡಿ ದಕ್ಕಿಸಿಕೊಂಡಿರು, ಶಭಾಷ್! ಹೀಗೆ ಪ್ರತಿ ರಂಗದಲ್ಲೂ ಸಮಾನತೆ ಬರಬೇಕು, ಆದರೆ ಸಮಾನತೆಯ ಹೆಸರಲ್ಲಿ ನಮ್ಮ ಸಂಸ್ಕೃತಿ ಸರ್ವನಾಶ ಆಗಬಾರದು. ಇಲ್ಲ ನಾವು ಹೀಗೆಯೆ ಇರುತ್ತೇವೆ ಅಂದರೆ ಇನ್ನು ಹತ್ತು ವರ್ಷದ ಮೇಲೂ ಅದೇ ಸುದ್ದಿ, ಅದೇ ಪೋಟೊ, ಅದೇ ವಿರೋಧ, ಇವೇ ಮುಂದುವರಿಯುತ್ತದೆ ಹೊರತು ಸಮಾಜ ಮುಂದುವರಿಯುವುದಿಲ್ಲ.

-ವಿಕ್ರಂ ಜೋಶಿ
 ಸಾಫ್ಟ್‌ವೇರ್ ಉದ್ಯೋಗಿ

Leave a Reply

Your email address will not be published. Required fields are marked *

1 × two =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top