About Us Advertise with us Be a Reporter E-Paper

Uncategorized

‘ಸಾವಿರ ಶಿಖರಗಳ ದೇಶ’ ರವಾಂಡಾದಲ್ಲಿ ಮೋದಿ ಜತೆ ಪ್ರವಾಸ!

ಇದೇ ಅಂತರಂಗ ಸುದ್ದಿ

ಐದು ವರ್ಷಗಳ ಹಿಂದೆ ನಾನು ಆಫ್ರಿಕಾದ ರವಾಂಡಾಕ್ಕೆ ಗೊರಿಲ್ಲಾ ನಾಮಕರಣಕ್ಕೆ ಹೋಗಿದ್ದೆ. ಇದೇನು ನೀವು ನಮ್ಮ ಮಗನ ನಾಮಕರಣಕ್ಕೆ ಬರಲಿಲ್ಲ, ಹೋಗಿ ಹೋಗಿ ಗೊರಿಲ್ಲಾಗಳ ನಾಮಕರಣಕ್ಕೆ ಹೋಗಿದ್ದಿರಿ ಎಂದು ಅನೇಕ ಸ್ನೇಹಿತರು, ಬಂಧುಗಳು ನನ್ನನ್ನು ವಿಚಾರಿಸಿಕೊಂಡಿದ್ದರು. ನಾಮಕರಣ ಮುಗಿಸಿ ಬಂದ ನಂತರ, ನೀವು ಗೊರಿಲ್ಲಾ ನಾಮಕರಣಕ್ಕೇ ರವಾಂಡಾಕ್ಕೆ ಹೋಗಿಬಂದಿದ್ದೀರಿ, ನಮ್ಮ ಮಗನ ನಾಮಕರಣಕ್ಕೆ ಬರದಿದ್ದರೆ ಬೇಸರವಾಗುತ್ತದೆ’ ಎಂದು ಆಮಂತ್ರಿಸುತ್ತಿದ್ದರು.

ನಮ್ಮ ಕುಟುಂಬದಲ್ಲೂ ಈ ರೀತಿಯ ಸಂಕಷ್ಟವನ್ನು ಎದುರಿಸಿದ್ದೇನೆ. ಕೆಲವರು ನನ್ನ ಪತ್ನಿ ಮತ್ತು ತಾಯಿಯ ಬಳಿ ಈ ಬಗ್ಗೆ ದೂರಿದ್ದುಂಟು. ಭಟ್ರು ಮನುಷ್ಯರ ನಾಮಕರಣಕ್ಕೆ ಬರೊಲ್ಲ, ಅವರು ಗೊರಿಲ್ಲಾ, ಕರಡಿ, ಚಿಂಪಾಂಜಿ ನಾಮಕರಣಕ್ಕೆ ಹೋಗ್ತಾರೆ’ ಎಂದು ಕಿಚಾಯಿಸುತ್ತಿದ್ದರು.

ನಾನು ಹತ್ತಾರು ದಿನ ರವಾಂಡಾದಲ್ಲಿ ತಿರುಗಾಡಿ ಬಂದು ನಾಮಕರಣ ಪ್ರಸಂಗ’ ಎಂಬ ಪುಸ್ತಕ ಬರೆದೆ. ಕಾಡಿನಲ್ಲಿ ಗೊರಿಲ್ಲಾಗಳ ಜತೆಗೆ ಇಡೀ ದಿನ ಇದ್ದು ಬಂದೆ. ಅದೊಂದು ಮರೆಯಲಾಗದ ಅನುಭವ. ಇಂದು ಮೌಂಟನ್ ಗೊರಿಲ್ಲಾಗಳು ಇರುವುದು ರವಾಂಡ ಮತ್ತು ಉಗಾಂಡದಲ್ಲಿ ಮಾತ್ರ. ಅವುಗಳ ಸಂಖ್ಯೆ ಆರು ನೂರನ್ನು ಮೀರಲಾರದೇನೋ ?
ಆ ಎರಡು ದೇಶಗಳು ಸೇರುವ ವಿರುಂಗ ಎಂಬ ರಕ್ಷಿತ ಅರಣ್ಯ ಪ್ರದೇಶದಲ್ಲಿ ಈ ಅಳಿವಿನ ಅಂಚಿನಲ್ಲಿರುವ, ಶೇಕಡಾ ತೊಂಬತ್ತೈದರಷ್ಟು ವಾನರ ಪ್ರತಿರೂಪದಂತಿರುವ ಗೊರಿಲ್ಲಾಗಳು ಬದುಕಿ ಉಳಿದಿವೆ. ರವಾಂಡ ಬಹಳ ಕಷ್ಟಪಟ್ಟು, ಅಂತಾರಾಷ್ಟ್ರೀಯ ನೆರವು ಪಡೆದು ಈ ಗೊರಿಲ್ಲಾಗಳನ್ನು ಸಾಕುತ್ತಿದೆ. ಪ್ರತಿವರ್ಷ ನೂರಾರು ಕೋಟಿ ರುಪಾಯಿ ಹಣ ಇವುಗಳ ಸಂರಕ್ಷಣೆ, ಅಭಿವೃದ್ಧಿಗಾಗಿ ಹರಿದು ಬರುತ್ತದೆ. ಇಂದು ಮೌಂಟನ್ ಗೊರಿಲ್ಲಾ ಅಂದ್ರೆ ರವಾಂಡದ ಚಿತ್ರಣ ಕಣ್ಣ ಮುಂದೆ ಬರುತ್ತದೆ.

ಅದಿರಿಲಿ. ನಾನು ಎಪ್ಪತ್ತಕ್ಕಿಂತ ಹೆಚ್ಚು ದೇಶಗಳಿಗೆ ಹೋಗಿದ್ದರೂ, ಅದೇಕೋ ಗೊತ್ತಿಲ್ಲ, ರವಾಂಡ ಮಾತ್ರ ನನ್ನ ಮನಸ್ಸಿನ ಪದರದ ಮೇಲೆ ತೇಲುತ್ತಿರುವ ದೇಶ. ಈ ದೇಶ ಇಂದು ಅಸ್ತಿತ್ವದಲ್ಲಿರುವುದೇ ಒಂದು ವಿಸ್ಮಯ. ರಲ್ಲಿ ಹುಟು ಮತ್ತು ಟುಟ್ಸಿ ಎಂಬ ಎರಡು ಕೋಮುಗಳು ಹೊಡೆದಾಡಿಕೊಂಡರು. ಈ ಹೊಡೆದಾಟ ನೂರು ದಿನ ನಡೆಯಿತು. ಇದೇನು ಅಂತಿಂಥ ಹೊಡೆದಾಟವಲ್ಲ. ಅದನ್ನು ಜನಾಂಗೀಯ ನರಮೇಧ (ಜೆನೊಸೈಡ್) ಅಂತ ಕರೆಯುತ್ತಾರೆ. ನೂರು ದಿನಗಳಲ್ಲಿ ಸುಮಾರು ಹತ್ತು ಲಕ್ಷ ಜನರ ಮಾರಣಹೋಮವಾಯಿತು. ಅಂದರೆ ಒಂದು ದಿನಕ್ಕೆ ತಲಾ ಹತ್ತು ಸಾವಿರ ಮಂದಿಯ ಹತ್ಯೆ!

ಅದು ಯಾವ ಪ್ರಮಾಣದ ಭಯಾನಕ, ಘೋರ ಮತ್ತು ಬೀಭತ್ಸ ನರಮೇಧವಾಗಿರಬಹುದೆಂದು ಯೋಚಿಸಲೂ ಅಸಾಧ್ಯ. ರವಾಂಡಾದ ರಾಜಧಾನಿ ಆ ದಿನಗಳಲ್ಲಿ ಹೆಣಗಳಿಗೆ ಅಂತ್ಯ ಸಂಸ್ಕಾರ ಮಾಡಲಾಗದೇ ನದಿಯಲ್ಲಿ ಎಸೆಯುತ್ತಿದ್ದರಂತೆ. ಹಾಗೆ ಮಾಡಿದ ಪರಿಣಾಮ, ನದಿ ನೀರು ಅಕ್ಷರಶಃ ಕೆಂಪಾಗಿತ್ತಂತೆ. ಇಡೀ ದೇಶಕ್ಕೆ ದೇಶವೇ ಕೊಳೆತ ಹೆಣಗಳಿಂದ ನಾರುತ್ತಿತ್ತಂತೆ.
ಈ ಘಟನೆ ನಡೆದ 24 ವರ್ಷಗಳ ನಂತರ ಆ ದೇಶದಲ್ಲಿ ಹೋಗಿ ನಿಂತರೆ ಅದರ ಕುರುಹೇ ಇಲ್ಲದಂತೆ ಆ ದೇಶ ಹೊಸ ಹುರುಪಿನೊಂದಿಗೆ ಎದ್ದು ನಿಂತಿದೆ. ಆಫ್ರಿಕಾದ ಸಿಂಗಾಪುರ ಎಂದು ಕರೆಯಿಸಿಕೊಳ್ಳುವ ರವಾಂಡ ಇಂದು ಆ ಖಂಡದ ಹೊಸ ಶಕ್ತಿಯಾಗಿ ಎದ್ದುನಿಂತಿದೆ. ತನ್ನೆಲ್ಲ ವೈರುಧ್ಯಗಳನ್ನು ಕೊಡವಿ ಹೊಸ ಭರವಸೆ, ವಿಶ್ವಾಸದಿಂದ ಆ ದೇಶ ಇಂದು ಬಂಡವಾಳ ಹೂಡಿಕೆದಾರರ ಸ್ವರ್ಗವಾಗಿ ಪರಿವರ್ತಿತವಾಗಿದೆ. ಹುಟು ಮತ್ತು ಟುಟ್ಸಿಗಳು ತಮ್ಮ ವೈಷಮ್ಯ ಮರೆತು ಒಂದಾಗಿ ಬಾಳುತ್ತಿದ್ದಾರೆ.

ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಆ ಕರುಳು ಹಿಂಡುವ ಕರಾಳ ಘಟನೆಯನ್ನು ಮರೆತು ಪ್ರೀತಿಯಿಂದ ಬದುಕುತ್ತಿದ್ದಾರೆ. ತಮ್ಮ ದೇಶದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಅಧ್ಯಕ್ಷ ಪಾಲ್ ಕಗಾಮೆ ಈ ದೇಶವನ್ನು ಮುನ್ನಡೆಸುತ್ತಿರುವ ರೀತಿ ನಿಜಕ್ಕೂ ಶ್ಲಾಘನೀಯ. ಕನ್ನಡಿಗರೇ ಮೋಹನ್ ಸುರೇಶ ಅವರು ಗೌರವ ರಾಯಭಾರಿಯಾಗಿ ರವಾಂಡಾದ ಮತ್ತು ಕರ್ನಾಟಕದ ನಡುವೆ ಸೇತುವೆಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

ಈ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರು ಮೊಟ್ಟ ಮೊದಲ ಬಾರಿಗೆ ಭೇಟಿ ನೀಡುತ್ತಿರುವುದು ವಿಶೇಷ. ಮೋದಿ ಅವರು ರವಾಂಡಾದ ಜತೆ ಉಗಾಂಡಾಕ್ಕೂ ಭೇಟಿ ನೀಡುತ್ತಿದ್ದಾರೆ. ನಾಲ್ಕು ದಿನಗಳ ಕಾಲ ಈ ಎರಡು ದೇಶಗಳ ಪ್ರವಾಸ ಭಾರತದ ದೃಷ್ಟಿಯಿಂದ ಮಹತ್ವದ್ದು.

ನಾನು ಮತ್ತೊಮ್ಮೆ ‘ಸಾವಿರ ಶಿಖರಗಳ ದೇಶ’ ಎಂದು ಕರೆಯಿಸಿಕೊಳ್ಳುವ ರವಾಂಡಾದಲ್ಲಿ. ನೆನಪಿನ ಮತ್ತಷ್ಟು ಹೆಜ್ಜೆ ಮೂಡಿಸುವ ಸಂದರ್ಭ. ನನಗೆ ಕಂಡಿದ್ದನ್ನು ನಿಮ್ಮೊಂದಿಗೆ ದಂಡಿಯಾಗಿ ಹಂಚಿಕೊಳ್ಳಲಿದ್ದೇನೆ.

ನಾಯಕರಿಗೇ ಮೇಲ್ಪಂಕ್ತಿ ಹಾಕಿದವರು!

ಕರ್ನಾಟಕ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮತ್ತು ಆತ್ಮೀಯ ಸ್ನೇಹಿತರಾದ ಮೈಸೂರಿನ ಎಂ. ರಾಜೇಂದ್ರ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಬಿಜೆಪಿ ಸೇರಿದಾಗ, ಪಕ್ಷಕ್ಕಾಗಿ ಮೈಸೂರಿನಲ್ಲಿ ಒಂದು ಸುಸಜ್ಜಿತ ಕಚೇರಿಯನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ.
ಪ್ರಾಯಶಃ, ಕರ್ನಾಟಕದಲ್ಲೇನು, ಭಾರತದ ಯಾವ ಜಿಲ್ಲಾ ಕೇಂದ್ರದಲ್ಲೂ ಇಂಥ ಕಚೇರಿ ಇರಲಿಕ್ಕಿಲ್ಲ. ಅಷ್ಟು ಚೆಂದದ ಕಚೇರಿಯನ್ನು ಕಟ್ಟಿಸಿಕೊಟ್ಟಿದ್ದಾರೆ. ನನಗೆ ತಿಳಿದಂತೆ ಯಾವ ಬಿಜೆಪಿ ನಾಯಕನೂ ತನ್ನ ಸ್ವಂತ ಹಣದಲ್ಲಿ ಏಕಾಂಗಿಯಾಗಿ ಪಕ್ಷದ ಕಚೇರಿಯನ್ನು ಕಟ್ಟಿಸಿಕೊಟ್ಟ ನಿದರ್ಶನಗಳಿಲ್ಲ. ಎಲ್ಲರೂ ಪಕ್ಷದಿಂದ ತಮ್ಮ ತಮ್ಮ ಕಟ್ಟಡ, ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಯಾರೂ ಪಕ್ಷಕ್ಕಾಗಿ ಕಟ್ಟಡ ಕಟ್ಟಿಸಿಕೊಟ್ಟಿಲ್ಲ. ಪಕ್ಷದಿಂದ ತಮಗೆ ಬೇಕಾದುದೆಲ್ಲವನ್ನೂ ಮಾಡಿಕೊಂಡಿದ್ದಾರೆ. ಪಕ್ಷ ತಮಗೆ ಕೊಟ್ಟ ಪಾಲಿನಲ್ಲಿ ಒಂದು ಹಿಡಿಯಷ್ಟನ್ನೂ ಪಕ್ಷಕ್ಕೆ ವಾಪಸ್ ಕೊಟ್ಟಿಲ್ಲ. ಪಕ್ಷದಿಂದ ಎಲ್ಲವನ್ನೂ ಗೆಬರಿಕೊಂಡವರೇ ಅನೇಕರು.

ಬಹಳ ಮೈಸೂರಿನಲ್ಲಿ ಪಕ್ಷದ ಶಾಸಕರಿದ್ದರು, ಸಂಸದರಿದ್ದರು, ಜಿಲ್ಲಾ ಮಂತ್ರಿಯಿದ್ದರು. ಆದರೆ ಪಕ್ಷದ ಜಿಲ್ಲಾ ಘಟಕದ ಕಚೇರಿ ಸರಿಯಾಗಿರಲಿಲ್ಲ. ಅದಕ್ಕೊಂದು ಆಕಾರ, ಲಕ್ಷಣಗಳಿರಲಿಲ್ಲ. ಆ ಕಚೇರಿಯಲ್ಲೇ ಸಭೆಗಳನ್ನು ಮಾಡುತ್ತಿದ್ದರು. ಇಪ್ಪತ್ತು ಜನ ಬಂದರೆ ನಾಲ್ಕು ಜನ ಹೊರಗೆ ನಿಂತುಕೊಳ್ಳಬೇಕು, ಅಷ್ಟು ದೊಡ್ಡದಿತ್ತು. ಆದರೂ ಆ ಕಚೇರಿಯಲ್ಲೇ ಪಕ್ಷವನ್ನು ಕಟ್ಟಿಕೊಂಡು ಬಂದರು. ಒಬ್ಬರಿಗೂ ಒಳ್ಳೆಯ, ಸುವ್ಯವಸ್ಥಿತ ಕಚೇರಿ ಮಾಡಬೇಕು ಎಂದು ಅನಿಸಲಿಲ್ಲ. ಕೆಲವರು ಮಾಲ್‌ನಂಥ ಮನೆ ಕಟ್ಟಿಕೊಂಡರೇ ಹೊರತು ಕಚೇರಿಯನ್ನು ಕಟ್ಟಬೇಕೆಂದು ಯಾರಿಗೂ
ಆದರೆ ರಾಜೇಂದ್ರ ಅವರು ತಾವೇ ಮುತುವರ್ಜಿವಹಿಸಿ, ಅದಕ್ಕಾಗಿ ಒಳ್ಳೆಯ ಬಡಾವಣೆಯಲ್ಲಿ ನಿವೇಶನ ಖರೀದಿಸಿ, ತಾವೇ ಮುಂದೆ ನಿಂತು ಸುಂದರವಾದ ಕಚೇರಿಯನ್ನು ನಿರ್ಮಿಸಿ, ಪಕ್ಷಕ್ಕೆ ಹಸ್ತಾಂತರಿಸಿದ್ದಾರೆ. ಪಕ್ಷ ಕಟ್ಟುವುದೆಂದರೆ ತಮ್ಮ ತಮ್ಮ ಮನೆಗಳನ್ನು ಬೃಹತ್ ಆಗಿ ಕಟ್ಟಿಕೊಳ್ಳುವುದಲ್ಲ ಎಂಬುದನ್ನು ಪಕ್ಷದ ಎಲ್ಲ ನಾಯಕರಿಗೂ ಸೂಚ್ಯವಾಗಿ ಹೇಳುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಏರ್‌ಲೈನ್ಸ್, ಏರ್‌ಪೋರ್ಟ್‌ಸ್ ಕೋಡ್!

ಪದೇಪದೆ ವಿಮಾನದಲ್ಲಿ ಪ್ರಯಾಣ ಮಾಡುವವರು ಬೇರೆಯದೇ ಆದ ಭಾಷೆಯಲ್ಲಿ ಮಾತಾಡುತ್ತಾರೆ. ಅದು ಅವರಿಗೆ ಅನುಕೂಲ. ಬೇಗ ಹೇಳಬಹುದು. ಉದಾಹರಣೆಗೆ, ಎಐ505 ಅಂದ್ರೆ ಏರ್‌ಲೈನ್‌ಸ್, ಅದು ಪ್ರಯಾಣಿಸುವ ಎರಡು ನಗರಗಳು ಹಾಗೂ ಸಮಯವನ್ನು ಅದು ಒಳಗೊಂಡಿದೆ. ಅಂದರೆ ಬೆಂಗಳೂರು ಹಾಗೂ ದಿಲ್ಲಿ ನಡುವೆ ಬೆಳಗ್ಗೆ ಹತ್ತು ಗಂಟೆಗೆ ಪ್ರಯಾಣಿಸುವ ಏರ್ ಇಂಡಿಯಾ ವಿಮಾನ ಎಂದರ್ಥ. ‘ನಾನು ಎಐ505ಕ್ಕೆ ಬರ್ತೇನೆ’ ಅಂದರೆ ಚಿಕ್ಕದಾಗಿ ಆ ಎಲ್ಲ ವಿವರಗಳನ್ನು ಹೇಳಿದಂತೆ.

ಏರ್‌ಲೈನ್‌ಸ್ಗೆ ಕೋಡ್‌ಗಳಿರುವಂತೆ, ಏರ್‌ಪೋರ್ಟ್‌ಗಳಿಗೂ ಕೋಡ್‌ಗಳಿರುತ್ತವೆ. ಬೆಂಗಳೂರಿಗೆ BLR, ಮುಂಬೈಗೆ BOM, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ LHR.. ಕೋಡ್‌ಗಳನ್ನು ನೀಡಲಾಗಿದೆ. ವಿಮಾನದಲ್ಲಿ ಹೆಚ್ಚಾಗಿ ಪ್ರಯಾಣಿಸುವವರು ಈ ಕೋಡ್‌ಗಳನ್ನು ಬಳಸಿ ಮಾತಾಡುತ್ತಾರೆ. ಉದಾಹರಣೆಗೆ, ‘ನಾನು SFO ದಿಂದ MEM ಬಂದು ನಂತರ LGAಗೆ ಬರುತ್ತೇನೆ’ ಅಂತ ಹೇಳಿದರೆ, ‘ನಾನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಮೆಂಫಿಸ್ ಮಾರ್ಗವಾಗಿ ನಂತರ ನ್ಯೂಯಾರ್ಕಿನ ಲಗ್ವಾರ್ಡಿಯಾ ವಿಮಾನ ನಿಲ್ದಾಣಕ್ಕೆ ಬರುತ್ತೇನೆ’ ಎಂದರ್ಥ. ಈ ಕೋಡ್‌ಗಳನ್ನು Frequent flyer ಜತೆಗೆ ಬಳಸಬೇಕು. ಇಲ್ಲದಿದ್ದರೆ ಬೇರೆಯವರಿಗೆ ಅರ್ಥವಾಗುವುದಿಲ್ಲ.

ವಿಚಿತ್ರ ಅಂದ್ರೆ CAT, DOG, FUN, WOW ಎಂಬ ಕೋಡ್‌ಗಳಿರುವ ಏರ್‌ಪೋರ್ಟ್‌ಗಳಿವೆ. ಆದರೆ ಯಾರೂ CAT ಕೋಡ್‌ನ್ನು ಕ್ಯಾಟ್ ಎಂದು ಹೇಳುವುದಿಲ್ಲ. ಅದರ ಬದಲು ಸಿಎಟಿ ಎಂದೇ ಉಚ್ಚರಿಸುತ್ತಾರೆ. ಅದು ಸಂಪ್ರದಾಯ. ಕೆಲದಿನಗಳ ಹಿಂದೆ, ಸ್ನೇಹಿತರೊಬ್ಬರು, ‘Iam in CAT’ ಎಂದು ಸ್ಟೈಲಾಗಿ ಫೋನಿನಲ್ಲಿ ಹೇಳಿದರು. ‘ಓಹೋ ನೀವು ಪೋರ್ಚುಗಲ್‌ನಲ್ಲಿ ಇದ್ದೀರಾ?’ ಎಂದು ಕೇಳಿದೆ. ಪೋರ್ಚುಗಲ್‌ನಲ್ಲಿರುವ ಕಾಸ್ಕಾಯಿಸ್ ಏರ್‌ಪೋರ್ಟ್ ಇಅ ಕೋಡ್‌ನಿಂದಲೇ ಪ್ರಸಿದ್ಧ. ಸ್ಪೇನ್‌ನ ಮೆಡ್ರಿಡ್ ಏರ್‌ಪೋರ್ಟ್ ಕೋಡ್ MAD. ಅಮೆರಿಕದ ವಿಲ್ಲೋವ್ ಏರ್‌ಪೋರ್ಟ್ ಕೋಡ್ WOW.

ತುವಾಲು ಎಂಬ ದ್ವೀಪರಾಷ್ಟ್ರದಲ್ಲಿ ಫುನಾಫುಟಿ ಎಂಬ ನಗರದಲ್ಲೊಂದು ವಿಮಾನ ನಿಲ್ದಾಣವಿದೆ. ಆ ದೇಶದ ಜನಸಂಖ್ಯೆಯೇ ಆರೇಳು ಸಾವಿರ ಇದ್ದಿರಬಹುದು. ಅಲ್ಲಿಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ವಿಮಾನ ನಿಲ್ದಾಣದ ಕೋಡ್ FUN. ಇದು ಕೋಡ್‌ಗೆ ತಕ್ಕ ಹಾಗಿದೆ.

ಮೂತ್ರ ವಿಸರ್ಜನೆ ಮಾಡುವುದಕ್ಕೆ ಇಂಗ್ಲಿಷಿನಲ್ಲಿ Pee(ಪೀ) ಎಂದು ಹೇಳುತ್ತಾರೆ. ನಾಯಿಮರಿ ಕಾರ್ಪೆಟ್ ಮೇಲೆ ಉಚ್ಚೆ ಹೊಯ್ದರೆ The Puppy was peeing on carpet ಎಂದು ಹೇಳುವುದನ್ನು ಕೇಳಿರಬಹುದು. ಅಂದ್ರೆ PEE ಎಂಬ ಕೋಡ್‌ನ್ನು ರಷ್ಯಾದ ಪೆರ್ಮ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ಗೆ ನೀಡಲಾಗಿದೆ. ಬ್ರೆಜಿಲ್‌ನ ಪೊಕೊಸ್ ಡೆ ಕಾಲ್ಡಾಸ್ ಏರ್‌ಪೋರ್ಟ್ ಕೋಡ್ POO . ಸುಡಾನ್‌ನ ಡೊಂಗೊಲಾ ಏರ್‌ಪೋರ್ಟ್ ಕೋಡ್ DOG. ನಾರ್ವೆಯ ಬೋಡೋ ಏರ್‌ಪೋರ್ಟ್ ಕೋಡ್ BOO.

ನನಗೆ ಇವೆಲ್ಲಕ್ಕಿಂತ ವಿಚಿತ್ರ ಅನಿಸಿದ್ದು DIE ಎಂಬ ಕೋಡ್ ನೀಡಿರುವುದು. ಮಡಗಾಸ್ಕರ್‌ನ ಅಂಟಿಸಿರಾನಾನ ಏರ್‌ಪೋರ್ಟ್‌ಗೆ ಈ ಕೋಡ್ ನೀಡಲಾಗಿದ್ದರೂ ಅಲ್ಲಿ ಅಪಘಾತದಲ್ಲಿ ಯಾರೂ ಸತ್ತಿಲ್ಲ ಎಂಬುದೂ ವಿಶೇಷ.
ವಿಚಿತ್ರ ಅಂದ್ರೆ ಜಗತ್ತಿನ ವ್ಯವಸ್ಥೆ ನಿಂತಿರುವುದೇ ಈ ಕೋಡ್‌ಗಳಿಂದ. ಸ್ವಲ್ಪ ವ್ಯತ್ಯಾಸವಾದರೆ ಎಲ್ಲಿಗೋ ಹೋಗಬೇಕಾದ ಲಗೇಜ್ ಮತ್ತೆಲ್ಲಿಗೋ ಹೋಗಿ ಅಧ್ವಾನವಾಗಬಹುದು.

ಗಂಡಸರ ಬುದ್ಧಿ

ಗಂಡಸನ್ನು ಸರಿಯಾಗಿ ಮತ್ತೊಬ್ಬ ಗಂಡಸು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಗಂಡಸಿನ ಮೆಂಟಾಲಿಟಿಯೇನು ಎಂಬುದು ಗಂಡಸಿಗೆ ಪರಿಣಾಮಕಾರಿಯಾಗಿ ಗೊತ್ತಾಗುವಷ್ಟು ಬೇರೆಯವರಿಗೆ ಅರ್ಥವಾಗುವುದು ಸಾಧ್ಯವೇ ಇಲ್ಲ. ಹೇಗೆ ಅಂತೀರಾ? ಹಾಗಾದರೆ ಗಿರಾಕಿ ಹಾಗೂ ಅಂಗಡಿಯವನ ನಡುವಿನ ಸಂಭಾಷಣೆ ಕೇಳಿ,

ಗಿರಾಕಿ: ನನಗೊಂದು ಲೇಡೀಸ್ ವಾಚ್ ಬೇಕಾಗಿತ್ತು.
ಅಂಗಡಿಯಾತ: ಹೆಂಡತಿಗಾದರೆ ಈ ವಾಚನ್ನು ನೋಡಿ, ಬೇರೆಯವರಿಗಾದರೆ ಒಳ್ಳೆಯ ಕ್ವಾಲಿಟಿಯ ಬ್ರ್ಯಾಂಡೆಡ್ ವಾಚ್ ತೋರಿಸಲಾ?

ನೀನ್ಯಾಕೆ ಹೇಳು!

‘ಪೋಲಿ ಜೋಕುಗಳನ್ನು ಬರೀತೀನಿ ಅಂತ ಹೇಳಿದಿರಿ. ಎರಡು ವಾರ ಬರೆದಿರಿ. ಆನಂತರ ಸುಮ್ಮನಾಗಿಬಿಟ್ಟಿರಿ. ಯಾರಾದರೂ ತಗಾದೆ ತೆಗೆದರಾ? ಏನಪ್ಪಾ ಸಂಪಾದಕರಾದವರು ಹೀಗೆಲ್ಲ ಬರೀತಾರಲ್ಲ ಅಂತ ನಿಮ್ಮನ್ನು ತಿವಿದರಾ? ಒಂದು ಸಂಗತಿ ತಿಳಿದುಕೊಳ್ಳಿ, ಪೋಲಿ ಜೋಕುಗಳನ್ನು ನಾಲ್ಕು ಮಂದಿ ಮುಂದೆ ಹೇಳಲು ಹಿಂಜರಿಯುವವರು ಸಹ ಅದನ್ನು ಓದುತ್ತಾರೆ. ಆಗಾಗ ‘ಡೀಸೆಂಟ್’ ಆದ ‘ಪೋಲಿ’ ಜೋಕುಗಳನ್ನು ಬರೆದರೆ ತಪ್ಪೇನಿಲ್ಲ. ಅಷ್ಟಕ್ಕೇ ಬೇಸರ ಮಾಡಿಕೊಂಡರೆ ಮಾಡಿಕೊಳ್ಳಲಿ ಬಿಡಿ. ಅವರೇನಂತಾರೋ ಅಂತ ನಾವ್ಯಾಕೆ ಅಂಥ ಜೋಕುಗಳನ್ನು ತಪ್ಪಿಸಿಕೊಳ್ಳಬೇಕು?’

ಹೀಗೆಂದು ಪತ್ರಿಕೆಯ ಖಾಯಂ ಓದುಗಳಾದ ಕಲಾ ಗೋಪಿನಾಥ ಪತ್ರ ಬರೆದಿದ್ದಾರೆ. ಇವರ ವಾದವನ್ನು ಒಪ್ಪಬಹುದು. ಅವರು ಆ ಪತ್ರದಲ್ಲಿ ತಮ್ಮ ವಿಳಾಸ ಕೊಟ್ಟಿದ್ದರೆ ಅವರ ಎದೆಗಾರಿಕೆಯನ್ನು ಮೆಚ್ಚಬಹುದಿತ್ತು. ಇರಲಿ, ಅವರ ಅಭಿಪ್ರಾಯವನ್ನು ಗೌರವಿಸೋಣ.

ಓಶೋ ರಜನೀಶ್ ಹೇಳಿದ ಒಂದು ಪೋಲಿ ಜೋಕನ್ನು ಹೇಳುತ್ತೇನೆ.

ಗಂಡ ಮನೆಗೆ ಬಂದವ ಹೆಂಡತಿ ಮುಂದೆ ಉಮ್ಮೇದಿಯಿಂದ ಹೇಳಿದ- ‘ಮಾರ್ಕೆಟ್‌ನಲ್ಲಿ ಒಳ್ಳೆ ಕ್ವಾಲಿಟಿಯ ರೇಡಿಯಲ್ ಟಯರ್ ಕಣ್ಣಿಗೆ ಬಿತ್ತು. ಹೆವಿ ಡ್ಯೂಟಿ, ವೈಡ್ ಬೇಸ್ ಇರುವ ನಾಲ್ಕು ರೇಡಿಯಲ್ ಟಯರ್‌ಗಳನ್ನು ಖರೀದಿಸಿದೆ.’
ಅದಕ್ಕೆ ಹೆಂಡತಿ ‘ಅಯ್ಯೋ ರಾಮಾ, ನಿಮ್ಮಂಥ ಬುದ್ಧಿಗೇಡಿ ಗಂಡಸನ್ನೇ ನೋಡಿಲ್ಲ. ಆ ಟಯರ್‌ಗಳನ್ನು ತಗೊಂಡು ಏನ್ ಮಾಡ್ತೀರಾ? ನಮ್ಮ ಬಳಿ ಕಾರೇ ಇಲ್ಲವಲ್ಲ!’ ಎಂದು ಗದರಿದಳು. ಹೆಂಡತಿಯ ಮಾತಿಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಗಂಡ ಮೆಲ್ಲಗೆ ಹೇಳಿದ,- ‘ಹಾಗಾದರೆ ನಿನ್ಯಾಕೆ ಆಗಾಗ ಬ್ರೇಸಿಯರ್ ಖರೀದಿಸ್ತೀಯಾ ಹೇಳು?’

ನಿಮ್ಮನ್ನು ಗಮನಿಸುವವರು

ಅದೊಂದು ರಾತ್ರಿ ಅಮೆರಿಕದ ಫಿಲಿಡೆಲ್ಫಿಯಾ ನಗರದಲ್ಲಿ ನಡೆದ ಪುಟ್ಟ ಘಟನೆಯಿದು. ಸುಮಾರು ಅರವತ್ತೈದು-ಎಪ್ಪತ್ತು ವರ್ಷದ ವೃದ್ಧ ತನ್ನ ಹೆಂಡತಿಯೊಂದಿಗೆ ಹೋಟೇಲ್‌ಗೆ ಬಂದ. ‘ನಾನು ಈ ರಾತ್ರಿ ಈ ಹೋಟೆಲ್‌ನಲ್ಲಿ ತಂಗಬೇಕೆಂದಿದ್ದೇನೆ, ರೂಮ್ ಇದೆಯಾ?’ ಎಂದು ಕೇಳಿದ. ರಿಸೆಪ್ಷನ್‌ನಲ್ಲಿ ಇದ್ದವ, ‘ಇಲ್ಲ, ಎಲ್ಲ ರೂಮುಗಳು ಭರ್ತಿಯಾಗಿವೆ. ನಗರದಲ್ಲಿ ಮೂರು ಸಮಾವೇಶಗಳು ನಡೆಯುತ್ತಿವೆ. ಯಾವ ಹೋಟೆಲ್‌ಗಳಲ್ಲೂ ರೂಮುಗಳಿರುವ ಸಾಧ್ಯತೆಯಿಲ್ಲ’ ಎಂದ.

ಅಷ್ಟೊತ್ತಿಗೆ ಮಧ್ಯರಾತ್ರಿ ಹನ್ನೆರಡೂವರೆ. ಆ ವೃದ್ಧ ದಂಪತಿಗೆ ಏನು ಮಾಡಬೇಕೆಂಬುದೇ ಅಲ್ಲಿಗೆ ಬರುವ ಮುನ್ನ ಏಳೆಂಟು ಹೋಟೆಲ್‌ಗಳಿಗೆ ಹೋಗಿಬಂದಿದ್ದರು. ಕೊನೆ ಪ್ರಯತ್ನವಾಗಿ ಆ ಹೋಟೆಲ್‌ಗೆ ಬಂದಿದ್ದರು.

ಬೇರೆ ದಾರಿ ಕಾಣದೇ ಆ ದಂಪತಿ ಆ ಹೋಟೆಲ್‌ನಿಂದ ಖಿನ್ನಮನಸ್ಕರಾಗಿ ಹೊರಡುವ ಮುನ್ನ, ರಿಸೆಪ್ಷನ್‌ನಲ್ಲಿ ಇದ್ದವ, ‘ಸಾರ್, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ಒಂದು ಮಾತನ್ನು ಹೇಳ್ತೇನೆ. ಈ ನಡುರಾತ್ರಿಯಲ್ಲಿ ನೀವು ಎಲ್ಲಿಗೆ ಹೋಗುತ್ತೀರಾ? ದಯವಿಟ್ಟು ಹೋಟೆಲ್ ಬೇಸ್‌ಮೆಂಟ್‌ನಲ್ಲಿ ನನ್ನ ಪುಟ್ಟ ರೂಮಿದೆ. ಅಲ್ಲಿ ನೀವಿಬ್ಬರೂ ಮಲಗಬಹುದು. ಬೇರೆ ದಾರಿಯಿರಲಿಲ್ಲ. ಆ ದಂಪತಿ ಕೋಣೆಯಲ್ಲೇ ಮಲಗಿದರು.

ಮರುದಿನ ಆ ಹೋಟೆಲ್‌ನಿಂದ ಹೊರಡುವ ಮುನ್ನ, ಆ ವೃದ್ಧ ಹೇಳಿದ- ‘ನನ್ನ ಜೀವನದಲ್ಲಿ ನಾನು ಅವೆಷ್ಟೋ ಹೋಟೆಲ್‌ಗಳಿಗೆ ಹೋಗಿದ್ದೇನೆ. ಆದರೆ ಯಾರೂ ನಿನ್ನ ಹಾಗೆ ಅತಿಥಿ ಸತ್ಕಾರ ಮಾಡಿದ್ದನ್ನು ನೋಡಿಲ್ಲ. ನನ್ನ ಹೋಟೆಲ್‌ಗೆ ನಿನ್ನಂಥ ಮ್ಯಾನೇಜರ್‌ನೇ ಬೇಕು. ನೋಡೋಣ, ಮುಂದೊಂದು ದಿನ ನಾನೇನಾದರೂ ಪಂಚತಾರಾ ಹೋಟೆಲ್‌ನ್ನು ಕಟ್ಟಿದರೆ, ನಿನ್ನನ್ನೇ ಮ್ಯಾನೇಜರ್‌ನನ್ನಾಗಿ ನೇಮಿಸುತ್ತೇನೆ’

ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ವೃದ್ಧ ದಂಪತಿಯನ್ನು ಪಾದದಿಂದ ನೆತ್ತಿಯವರೆಗೊಮ್ಮೆ ನೋಡಿ ಸುಮ್ಮನೆ ನಕ್ಕ.
ಈ ನಡೆದು ಎರಡು-ಮೂರು ವರ್ಷಗಳಾಗಿರಬಹುದು. ರಿಸೆಪ್ಷನ್‌ನಲ್ಲಿದ್ದ ವ್ಯಕ್ತಿ ಇದನ್ನು ಸಂಪೂರ್ಣ ಮರೆತುಬಿಟ್ಟಿದ್ದ.
ಒಂದು ದಿನ ಅವನಿಗೊಂದು ಪತ್ರ ಬಂತು. ಅದು ಆ ವೃದ್ಧ ಬರೆದುದಾಗಿತ್ತು. ನಡುರಾತ್ರಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದ. ಜತೆಯಲ್ಲಿ ನ್ಯೂಯಾರ್ಕ್‌ಗೆ ರೌಂಡ್‌ಟ್ರಿಪ್ ವಿಮಾನ ಟಿಕೆಟ್‌ನ್ನು ಇರಿಸಿದ್ದ. ನ್ಯೂಯಾರ್ಕಿಗೊಮ್ಮೆ ಬರುವಂತೆ ವಿನಂತಿಸಿಕೊಂಡಿದ್ದ.

ವೃದ್ಧನ ಕೋರಿಕೆಯಂತೆ ಈತ ನ್ಯೂಯಾರ್ಕ್‌ಗೆ ಹೋದ. ಅಲ್ಲಿನ 34ನೇ ಸ್ಟ್ರೀಟ್‌ನಲ್ಲಿರುವ ಫಿಫ್‌ತ್ ಅವೆನ್ಯೂನ ಒಂದು ಮೂಲೆಯಲ್ಲಿ ವಿಸ್ತರಿಸಿಕೊಂಡ ಹೊಸ, ಭವ್ಯ ಪಂಚತಾರಾ ಹೋಟೆಲ್‌ನತ್ತ ಕರೆದುಕೊಂಡ ಹೋದ.
ನಾನು ಕಟ್ಟಿಸಿರುವ ಹೋಟೆಲ್. ಈ ಹೋಟೆಲ್‌ನ ಮ್ಯಾನೇಜರ್ ನೀನೇ ಆಗಬೇಕೆಂಬ ಕಾರಣಕ್ಕೆ ಇದನ್ನು ನಿರ್ಮಿಸಿದ್ದೇನೆ’ ಎಂದ ಆ ವೃದ್ಧ.

ಈತನಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅದು ನಿಜವೆಂದು ಅರಿವಾಗುವ ಹೊತ್ತಿಗೆ ಬಹಳ ಸಮಯ ಹಿಡಿದಿತ್ತು. ಆ ಹೋಟೆಲ್‌ನ್ನು ನಿರ್ಮಿಸಿದ ಆ ವೃದ್ಧನ ಹೆಸರು ವಿಲಿಯಮ್ ವಾಲ್ಡಾರ್ಫ್ ಎಸ್ಟೋರ್. ಹೋಟೆಲ್ ಹೆಸರು ವಾಲ್ಡಾರ್ಫ್ ಎಸ್ಟೋರಿಯ ಹಾಗೂ ಆ ಹೋಟೆಲ್‌ನ ಮ್ಯಾನೇಜರ್ ಹೆಸರು ಜಾರ್ಜ್ ಸಿ. ಬೋಲ್ಟ್.

ನಮ್ಮ ನಡತೆ, ಹಾವಭಾವ, ಒಬ್ಬರಲ್ಲ ಒಬ್ಬರು ಗಮನಿಸುತ್ತಲೇ ಇರುತ್ತಾರೆಂಬುದಕ್ಕೆ ಇದೇ ನಿದರ್ಶನ.

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close