About Us Advertise with us Be a Reporter E-Paper

ಯಾತ್ರಾ panel2

ಸುಂದರಿ, ವಯ್ಯಾರಿ, ಗಂಭೀರೆ ಲಂಡನ್

ಯುರೋಪ್ ನನಗೆ ದಕ್ಕಿದಷ್ಟು: ನೀತಾ ರಾವ್

ಕಳೆದ ವಾರದಿಂದ

ನಾನು ಲಂಡನ್ನಿನ ನೆಲದ ಮೇಲೆ ಕಾಲಿಟ್ಟಿದ್ದೇನೆ, ಅದರ ಒಳಹೊರ ಗನ್ನೆಲ್ಲ ಶೋಧಿಸಲಿದ್ದೇನೆ ಎನ್ನುವ ಕಲ್ಪನೆಯೇ ಭಾರತೀಯರಾದ ನಮ್ಮನ್ನು ಒಂದು ಬಗೆಯ ರೋಮಾಂಚನಕ್ಕೆ, ಒಂದು ರೀತಿಯ ಹಕ್ಕೊತ್ತಾಯ ಕ್ಕೆ, ಒಂದಿಷ್ಟು ಸಿಟ್ಟು-ದ್ವೇಷ ಭರಿತ ಮೆಚ್ಚುಗೆಗೆ ಒಳಗಾಗಿಸಿ, ರೆಕ್ಕೆ ಫಡಫಡಿಸುತ್ತದೆ. ಆದರೆ ನೋಡಿ ಅರಿಯದ ಅನುಭವವೊಂದಕ್ಕೆ ತೆರೆದುಕೊಳ್ಳಲು ಮೈಮನಗಳು ಚಡಪಡಿಸು ತ್ತವೆ.

ಆದರೆ ಲಂಡನ್ ಕೂಡ ಬಲು ವಯ್ಯಾರಿ, ಅವಳು ಅತಿ ಸುಂದರಿ, ಅವಳು ಘನಗಾಂಭೀರ‌್ಯವನ್ನು ಶ್ರೇಷ್ಠ ಉಡುಗೆೆಯಂತೆ ಹೊದ್ದು ಕೊಂಡಿದ್ದಾಳೆ. ಅವಳ ಒಳಹೊರಗನ್ನೆಲ್ಲ ಶೋಧಿಸುತ್ತೇವೆಂದು ಹೊರಡುವ ಮೂರ್ಖರಿಗೆ ಅವಳೆಂದೂ ಸುಲಭವಾಗಿ ಬಿಟ್ಟುಕೊಡಲಾರಳು. ಅದೆಷ್ಟು ರಹಸ್ಯಗಳನ್ನು ಥೇಮ್‌ಸ್ ನದಿಯ ಒಡ ಲಾಳದಲ್ಲಿ ಬಚ್ಚಿಟ್ಟಿ ದ್ದಾಳೋ! ಅದೆಷ್ಟು ಇತಿಹಾಸದ ಕರಾಳ ಪುಟಗಳನ್ನು ಅರಮನೆ ಗಳ ವಾಟರ್‌ ಗೇಟ್‌ಗಳ ಹರಿಯುವ ನೀರಿನಲ್ಲಿ ರಹಸ್ಯವಾಗಿ ತೇಲಿಬಿಟ್ಟು ಅಳಸಿ ಹಾಕಿದ್ದಾಳೋ! ನಮ್ಮ ಎಷ್ಟು ದಕ್ಕುವಳೋ ಅಷ್ಟಕ್ಕೇ ಧನ್ಯರಾಗುವುದು ನಮ್ಮ ಸೌಭಾಗ್ಯವೋ ದೌರ್ಭಾಗ್ಯವೋ ಗೊತ್ತಿಲ್ಲ. ದುಃಖಿಸದೇ ಕಂಡಷ್ಟಕ್ಕೇ ಖುಷಿಯಾಗ ಬೇಕಾದ್ದು ಸದ್ಯದ ನಮ್ಮ ಹಣೆಬರಹವಾಗಿತ್ತು.

ನಸುಕಿನಲ್ಲಿಯೇ ಎದ್ದು ತಯಾರಾಗಿ ಹೀತ್ರೂ ವಿಮಾನ ನಿಲ್ದಾಣದ ಹತ್ತಿರವೇ ಇದ್ದ ಹಿಲ್ಟನ್ ಹೊಟೇಲ್ಲಿನ ಕಾಂಪ್ಲಿ ಮೆಂಟರಿ ಬ್ರೇಕ್‌ಫಾಸ್ಟ್ ತಿಂದೆವು. ನಮಗೆ ಬೇಕಿರಲಿ, ಬೇಡವಿರಲಿ ನಾವು ಉಳಿದುಕೊಂಡಿರುವ ಹೊಟೇಲಿ ನಲ್ಲಿಯೇ ಬ್ರೇಕ್‌ಫಾಸ್ಟ್ ಮಾಡಿಸುತ್ತಾರೆ ನಮ್ಮ ಟ್ರ್ಯಾವೆಲ್ ಏಜೆನ್ಸಿಯವರು. ಅದಕ್ಕೆ ಪ್ರಥಮ ಕಾರಣ ಅದು ಕಾಂಪ್ಲಿಮೆಂಟರಿಯಾಗಿ ರುತ್ತದೆ ಎನ್ನುವುದು. ಎರಡನೇ ದಿನ ಬೇಗ ತಿಂಡಿ ತಿಂದು ಸೈಟ್‌ಸೀಯಿಂಗ್‌ಗೆ ಹೊರಡಲು ಅನುಕೂಲವಾಗುತ್ತದೆ. ಆದರೆ ನಮ್ಮ ಶಾಖಾಹಾರಿ ಅಥವಾ ಮಾಂಸಾ ಹಾರಿ ಭಾರತೀಯರೆಲ್ಲರೂ ಇಲ್ಲಿನ ಬ್ರೇಕ್‌ಫಾಸ್ಟ್ ತಿನ್ನಲಾರದೇ ತಿಂದು ಒದ್ದಾಡು ತ್ತಾರೆ.

ಅದನ್ನು ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಅಂತ ಕರೆದು, ನಮ್ಮ ಏಜೆನ್ಸಿಯವರು ಎಷ್ಟೇ ಬಡಾಯಿ ಕೊಚ್ಚಿ ಕೊಂಡರೂ ಕಾಂಟಿನೆಂಟಲ್ ಅನ್ನುವಂಥ ವಿವಿಧತೆ ಯೇನೂ ಅಲ್ಲಿರಲಿಲ್ಲ. ಇರುವುದೆಲ್ಲ ಬ್ರೆಡ್ಡು, ಬೆಣ್ಣೆ, ಜಾಮು, ತುಸುವೂ ಖಾರವೇ ಇಲ್ಲದ ಬರಿ ಟೊಮ್ಯಾಟೊ ಹಾಕಿದ ಸಾಸು, ಒಂದೆರಡೇ ಥರದ ಕೇಕುಗಳು, ಹಣ್ಣಿನ ಜ್ಯೂಸ್‌ಗಳು, ಥರದ ಹಣ್ಣಿನ ಹೋಳುಗಳು. ಇನ್ನು ಎಲ್ಲ ಹದಿನೇಳು ದಿನಗಳೂ ಇದೇ ನಮ್ಮ ಹೊಟ್ಟೆ ತುಂಬಿಸುವ ಬೆಳಗಿನ ಆಹಾರ ಎನ್ನುವುದು ನಮಗೆಲ್ಲ ಖಾತ್ರಿ ಯಾಯ್ತು.

ಬೇಗ ತಿಂಡಿ ತಿಂದು ಮುಗಿಸಿದರೆ ಸುಂದರವಾದ ಹೊಟೇಲ್ಲಿನ ಹೊರನೋಟ ವನ್ನಾದರೂ ಸವಿಯಬಹುದು ಎಂದು ಹೊರ ಬಂದರೆ ಒಂದರ ಹಿಂದೊಂದು ವಿಮಾನಗಳು ನಮ್ಮ ತಲೆಯ ಮೇಲೆ ಹಾರಾಟ ನಡೆಸಿದಷ್ಟು ಹತ್ತಿರದಿಂದ ಹೊರಟಿ ದ್ದವು. ಒಮ್ಮೆಯಂತೂ ಅದೆಷ್ಟು ಕೆಳಗೆ ಮತ್ತು ಅದೆಷ್ಟು ಹತ್ತಿರವೆಂದರೆ ಹೆದರಿಕೆ ಯಿಂದ ನಾನು ಕುಳಿತುಕೊಳ್ಳುವಷ್ಟೇ ಬಗ್ಗಿಬಿಟ್ಟೆ. ಅಪ ರೂಪದ ಅಪೂರ್ವ ಅನುಭವವೇ ಸರಿ.

ಹೊರಗೆ ನಮ್ಮನ್ನು ಸಿಟಿ-ಟೂರಿಗೆ ಕರೆದೊಯ್ಯುವ ಬಸ್ಸು ಮತ್ತು ಕೋಚ್ ಕ್ಯಾಪ್ಟನ್ ರೆಡಿಯಾಗಿ ನಿಂತಿದ್ದರು. (ಯುರೋಪಿನಲ್ಲಿ ಬಸ್ ಡ್ರೈವರ್ ಎನ್ನುವುದಿಲ್ಲ, ಕೋಚ್ ಕ್ಯಾಪ್ಟನ್ ಎನ್ನುತ್ತಾರೆ) ಮೂರು ದಿನಗಳ ಹಿಂದಷ್ಟೇ ರೋಡಿಗಿಳಿದ ಹೊಚ್ಚ ಹೊಸ ಬಸ್ಸು ಅಬೆ(Abbey) ತುಂಬ ಆಧುನಿಕವಾಗಿತ್ತು, ತುಂಬ ಸುಂದರ ವಾಗಿತ್ತು. ಡ್ರೆûವರ್ ಸೀಟಿನ ಮುಂದಿದ್ದ ಡ್ಯಾಷ್ ಬೋರ್ಡಿನ ಮೇಲೆ ನೂರಾರು ಬಟನ್ನುಗಳು, ರಿಯರ್ ವ್ಯೂ ತೋರಿಸುವ ನ್ತ್ರೀ ಕ್ಲಚ್ಚು-ಗೇರುಗಳಿಲ್ಲದ ಆಟೋ ಬಸ್ಸು. ಪ್ರಯಾಣಿಕರಿಗಾಗಿ ಎಲ್ಲರಿಗೂ ಕಾಣುವಂಥ ಸಮಯ ಮತ್ತು ಟೆಂಪರೇಚರ್ ತಿಳಿಸುವ ಡಿಜಿಟಲ್ ಬೋರ್ಡು.

ನಮ್ಮ ಶತಾಬ್ದಿ ಎಕ್ಸಪ್ರೆಸ್ ಮತ್ತು ಎಲ್ಲ ವಿಮಾನಗಳಲ್ಲಿರುವಂತೆ ಪ್ರತಿಯೊಂದು ಸೀಟಿನ ಮುಂಭಾಗದ ಸೀಟಿಗೆ ತೆರೆದಿಟ್ಟುಕೊಳ್ಳುವಂಥ ಪುಟ್ಟ ಟೇಬಲ್. ಸೀಟ್‌ಬೆಲ್ಟಗಳು, ಅಟೊಮೆಟಿಕ್ಕಾಗಿ ಬಟನ್ ಸಹಾಯದಿಂದ ತೆರೆಯುವ ಎರೆಡು ಬಾಗಿಲುಗಳು, ಎಮರ್ಜೆನ್ಸಿ ಟಾಯ್ಲೆಟ್ ಒಂದು. ನಿಜಕ್ಕೂ ಅಷ್ಟೊಂದು ಅತ್ಯಾಧುನಿಕ ಬಸ್ಸನ್ನು ನಾನು ಈ ಮುಂಚೆ ಎಲ್ಲಿಯೂ ನೋಡಿರಲಿಲ್ಲ. ನಮ್ಮಲ್ಲಿಯೂ ಈಗ ಬೆಂಗಳೂರು, ಮೈಸೂರು, ಮುಂಬೈಗಳಲ್ಲಿ ಸೊಗಸಾದ ಹವಾನಿಯಂತ್ರಿತ ಬಂದಿವೆಯಾದರೂ ಅವು ಇಷ್ಟೊಂದು ಸೌಲಭ್ಯಗಳನ್ನು ಒದಗಿಸುವುದಿಲ್ಲ.

ಸಕಲ ಸೌಕರ‌್ಯಗಳ ಬಸ್ಸು ‘ಅಬೆ’ ಯಂತೆಯೇ ಅದರ ಕ್ಯಾಪ್ಟನ್ ಡೇವಿಡ್ ಕೂಡ ಯಾವಾಗಲೂ ಥ್ರೀಪೀಸ್ ಸೂಟ್‌ನಲ್ಲಿ ಒಳ್ಳೆ ಗೆಜೆಟೆಡ್ ಆಫೀಸರ್ ಥರ ಕಂಗೊಳಿ ಸುತ್ತಿದ್ದ. ಎತ್ತರವಾಗಿ ಸಪೂರವಾಗಿದ್ದ ಡೇವಿಡ್ ಬಾಲ್ಡಿಯಾಗಿದ್ದರೂ ಎಲ್ಲರ ಗಮನ ಸೆಳೆಯುವಂಥ ಸುರದೃಪಿ ಬ್ರಿಟಿಷ್ ಮ್ಯಾನ್ ಆಗಿದ್ದ. ಮೊದಲ ದಿನ ಬಸ್ಸು ಓಡಿಸುತ್ತ ನಮ್ಮ ಟೂರ್-ಮ್ಯಾನೇಜರ್ ಅಮಿತಾಳ ಜೊತೆ ಅವನು ಮಾತನಾಡು ವಾಗ ಸ್ವಲ್ಪ ಹಿಂದೆ ಕುಳಿತಿದ್ದ ನಾನು ಯಾವುದೋ ಆಡಿಯೋ ಪ್ಲೇ ಮಾಡುತ್ತಿದ್ದಾಳೆ ಮತ್ತು ಒಬ್ಬ ಒಳ್ಳೆಯ ಮಾತುಗಾರ ಮಾತನಾಡುತ್ತಿದ್ದಾನೆ ಎಂದು ಭಾವಿ ಸಿದ್ದೆ. ಕೊನೆಗೆ ಗೊತ್ತಾಯ್ತು ಹಾಗೆ ಮಾತನಾಡುವವನು ನಮ್ಮ ಕೋಚ್-ಕ್ಯಾಪ್ಟನ್ ಡೇವಿಡ್ ಅಂತ. ಅಯ್ಯೋ, ಒಳ್ಳೆ ಡಬ್ಬಿಂಗ್ ಕಲಾವಿದನಾದರೂ ಆಗುವುದನ್ನು ಬಿಟ್ಟು ಇದೇನು ಬಸ್ಸು ಓಡಿಸುವ ಕೆಲಸ ಮಾಡುತ್ತಿದ್ದಾನೆ ಅನಿಸಿತು. ಆದರೆ ಅವನು ತನ್ನ ಕೆಲಸವನ್ನು ಅತ್ಯಂತ ಖುಷಿಯಿಂದ ಮಾಡುತ್ತಿದ್ದ ಎನ್ನು ವುದು ಅವನ ನಡುವಳಿಕೆಯಿಂದ ನಮಗೆ ಗೊತ್ತಾಗುತ್ತಿತ್ತು.

ಲಂಡನ್ನಿನ ಪ್ರಸಿದ್ಧ ಸ್ಥಳಗಳಲ್ಲದೇ ದಾರಿಯಲ್ಲಿ ಪ್ರತೀ ಐತಿಹಾಸಿಕ ಕಟ್ಟಡಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ನಮ್ಮ ಟೂರ್-ಮ್ಯಾನೇಜರಿಗೆ ಹೇಳಿ, ಬಲಕ್ಕೆ, ಎಡಕ್ಕೆ ಇರುವ ಕಟ್ಟಡಗಳನ್ನೆಲ್ಲ ನಮಗೆ ತೋರಿಸಿ ವಿವರಿಸು ವಂತೆ ಹೇಳುತ್ತಿದ್ದ. ಪ್ರತಿಯೊಬ್ಬರೂ ಬಸ್ಸಿನಿಂದ ಇಳಿಯುವಾಗ ನಗುಮೊಗದಿಂದ ಹಲೋ, ಹೈ ಹೇಳುತ್ತಿದ್ದ. ಇಂಥವೆಲ್ಲ ನಮಗೆ ತೀರಾ ಹೊಸ ಅನುಭವ. ನಮ್ಮಲ್ಲಿ ಬಸ್-ಡ್ರೈವರುಗಳು ಇಷ್ಟೆಲ್ಲಾ ತಿಳಿದುಕೊಂಡಿರು ವುದು ತೀರ ಅಪರೂಪ. ತಿಳಿದಿದ್ದರೂ ಹೀಗೆ ಹೇಳುವವರು ಇನ್ನೂ ವಿರಳ. ಮತ್ತೆ ನಾವು ಕೂಡಾ ಅವರನ್ನು ಅಷ್ಟೊಂದು ಗೌರವದಿಂದ, ಪ್ರೀತಿಯಿಂದ ಕಾಣುವು ಎನಿಸಿ ಮನಸ್ಸಿಗೆ ಪಿಚ್ಚೆನಿಸಿತು. ಲಂಡನ್ನಿನಲ್ಲಿದ್ದ ಮೂರನೇ ದಿನವಂತೂ (ಅದೇ ಅಲ್ಲಿ ನಮ್ಮ ಕಡೇ ದಿನವಾಗಿತ್ತು) ಡೇವಿಡ್‌ನೊಡನೆ ಫೋಟೊ ತೆಗೆಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದ ನಮ್ಮ ಗ್ರೂಪಿನ ಸದಸ್ಯರನ್ನು ನೋಡಬೇಕಿತ್ತು.

ಅವನು ಕೂಡ ಅತ್ಯಂತ ಗಂಭೀರ ನಗೆ ಚೆಲ್ಲುತ್ತ ಹೆಮ್ಮೆ ಮತ್ತು ಆತ್ಮಸ್ಥೈರ್ಯದಿಂದ ಎಲ್ಲರೊಡನೆ ಪೋಸು ಕೊಡುವುದನ್ನು ನೋಡಿದಾಗ ನನಗ ನಿಸಿತು, ವೃತ್ತಿ ಯಾವುದೇ ಇರಲಿ ಅದನ್ನು ನಾವು ಗೌರವಯುತವಾಗಿ ಮಾಡಿಕೊಂಡು ಹೋದರೆ ಅದಕ್ಕೊಂದು ಘನತೆ ತಾನಾಗಿ ಬರುತ್ತದೆ. ಒಳ್ಳೆಯ ಕೆಲಸದ ವಾತಾವರಣ, ಒಳ್ಳೆಯ ಬಟ್ಟೆ, ಒಳ್ಳೆಯ ನಡೆ-ನುಡಿ, ವೃತ್ತಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ಇವೆಲ್ಲವೂ ಮನುಷ್ಯನ ಮತ್ತು ಅವನ ಉದ್ಯೋಗದ ಘನತೆಯನ್ನು ಹೆಚ್ಚಿಸುತ್ತವೆ. ಇಲ್ಲೆಲ್ಲ ಪ್ರತಿಯೊಂದು ಕೆಲಸಕ್ಕೂ ಡಿಗ್ನಿಟಿ ಆಫ್ ಲೇಬರ್ ಇದೆ ಎನ್ನುವುದನ್ನು ಇಡೀ ಪ್ರವಾಸದುದ್ದಕ್ಕೂ ನಾವು ಕಂಡುಕೊಂಡೆವು. ಮನಸ್ಸು ನಮ್ಮ ಮಾತು ಕೇಳದ ಮೊಂಡು ಹುಡುಗನಂತೆ, ಕಂಪೇರ್ ಮಾಡಬಾರದು ಅಂತ ಎಷ್ಟೇ ಅಂದುಕೊಂಡರೂ ತುಲನೆ ಆಗುತ್ತದೆ, ಏಕ ಕಾಲಕ್ಕೆ ಮನಸ್ಸು ಅರಳುತ್ತದೆ, ಮುದುಡುತ್ತದೆ, ನಮ್ಮ ದೇಶದಲ್ಲಿ ಇವನ್ನು ನೋಡುವುದು ಯಾವಾಗ?

ಇನ್ನೂ ಇದೆ.

Tags

Related Articles

Leave a Reply

Your email address will not be published. Required fields are marked *

Language
Close