About Us Advertise with us Be a Reporter E-Paper

ಅಂಕಣಗಳು

ಸುಳ್ಳಿನ ಕಾರ್ಖಾನೆಗಳಲ್ಲಿ ಪ್ರೊಡಕ್ಷನ್ ಶುರುವಾಗಿದೆ!

ರೋಹಿತ್ ಚಕ್ರತೀರ್ಥ

ನಿನ್ನೆ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಎಂಬ ಲಂಡನ್ ಮೂಲದ ಸಂಸ್ಥೆಯೊಂದು ಭಾರತವನ್ನು ಮಹಿಳೆಯರಿಗೆ ಜಗತ್ತಿನಲ್ಲೇ ಅಸುರಕ್ಷಿತ ಸ್ಥಳ ಎಂದು ವರದಿ ಮಾಡಿತು. ಅಚ್ಚರಿಯೆಂದರೆ, ಭಾರತ ಅಫ್ಗಾನಿಸ್ತಾನಕ್ಕಿಂತ ಕಡೆ ಎಂಬುದು ಅದರ ಅಭಿಪ್ರಾಯ. ಹಾಗಾದರೆ ಯಾವುದು ಈ ಥಾಮ್ಸನ್ ರಾಯಿ ಟರ್ಸ್ ಫೌಂಡೇಶನ್ ? ಅದರ ಹಿನ್ನೆಲೆ ಏನು?

ಎರಡು ದಿನಗಳ ಹಿಂದೆ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ (ಟಿಆರ್‌ಎಫ್) ಎಂಬ ಬ್ರಿಟಿಷ್ ಸಂಸ್ಥೆ ಒಂದು ಸಮೀಕ್ಷಾ ಫಲಿತಾಂಶ ಬಿಡುಗಡೆ ಮಾಡಿತು. ಆ ಫಲಿತಾಂಶ/ವರದಿಯ ಪ್ರಕಾರ, ಮಹಿಳೆಯರಿಗೆ ಜಗತ್ತಿನಲ್ಲೇ ಅತ್ಯಂತ ಅಸುರಕ್ಷಿತ ಸ್ಥಳ ಭಾರತ. ಅಫ್ಗಾನಿಸ್ತಾನ ಎರಡನೇ ಅಸುರಕ್ಷಿತ ದೇಶ. ಸಿರಿಯಾ ಆ ನಂತರದ ಸ್ಥಾನದಲ್ಲಿದೆ. ಮುಂದೆ ಆ ಪಟ್ಟಿಯಲ್ಲಿ ಸೊಮಾಲಿಯ, ಸೌದಿ ಅರೇಬಿಯ, ಕಾಂಗೋ ರಿಪಬ್ಲಿಕ್, ಯೆಮನ್, ನೈಜೀರಿಯ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಸ್ಥಾನ ಪಡೆದಿವೆ. ಈ ಟಾಪ್ ಟೆನ್ ಪಟ್ಟಿಯ ಜೊತೆಗೆ, ಭಾರತದಲ್ಲಿ ಹೆಣ್ಣು ಭಯದಿಂದ ತಿರುಗುವ ಪರಿಸ್ಥಿತಿ ಇದೆ.

ಕಂಡ ಕಂಡಲ್ಲಿ ಹೆಣ್ಣುಮಕ್ಕಳ ಅತ್ಯಾಚಾರ, ಅತ್ಯಾಚಾರ ಯತ್ನ, ಲೈಂಗಿಕ ದೌರ್ಜನ್ಯ, ಈವ್ ಟೀಸಿಂಗ್ ನಡೆಯುತ್ತಿದೆ. ಅತ್ಯಂತ ದೊಡ್ಡ ಮಟ್ಟದಲ್ಲಿ ಹೆಣ್ಣುಗಳ ಕಳ್ಳಸಾಗಾಣಿಕೆ (ಟ್ರಾಫಿಕ್ಕಿಂಗ್) ನಡೆಯುತ್ತಿದೆ. ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಅತಿ ಹೆಚ್ಚಿದೆ. ಹೆಣ್ಣಿಗೆ ಸಮಾನ ಸ್ಥಾನಮಾನ ಕಲ್ಪಿಸಿಲ್ಲ. ದೇಶದಲ್ಲಿ ಹೆಣ್ಣು ತೊತ್ತಿನ ಜೀವಿಯಂತೆ ಬದುಕುವ ವಾತಾವರಣವಿದೆ ಎಂದು ಷರಾ ಬರೆಯಲಾಗಿದೆ. ಟಿಆರ್‌ಎಫ್ ತನ್ನ ವರದಿಯನ್ನು ಬಿಡುಗಡೆಗೊಳಿಸಿದ್ದೇ ತಡ, ಅದಕ್ಕಾಗಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಘಂಡಿ, ಕೂಡಲೇ ಟ್ವೀಟ್ ಮಾಡಿ, ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳಂಕ ಮೆತ್ತಿಕೊಳ್ಳುತ್ತಿದ್ದರೆ ಪ್ರಧಾನಿ ಮೋದಿಯವರು ತನ್ನ ಗಾರ್ಡನ್‌ನಲ್ಲಿ ಯೋಗಾಭ್ಯಾಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಎಂಥ ನಾಚಿಕೆಗೇಡಿನ ಸಂಗತಿ! ಎಂದು ತನ್ನ ನಂಜು ಕಾರಿಕೊಂಡಿದ್ದಾರೆ.

ನಿಮ್ಮ ಕೈಯಲ್ಲೊಂದು ಪ್ರಭಾವಶಾಲಿ ಸಂಸ್ಥೆ ಇದೆ, ಜಗತ್ತಿನ ಸಾವಿರಾರು ಪತ್ರಿಕೆಗಳನ್ನು, ಟಿವಿ ಚಾನೆಲ್‌ಗಳನ್ನು ನಿಯಂತ್ರಿಸುವ ಶಕ್ತಿ ಇದೆ ಎಂದು ಭಾವಿಸಿ. ತನಗೆ ಬೇಕಾದಂತೆ ಒಂದು ಸುದ್ದಿಯನ್ನು ರೂಪಿಸುವ, ನಿರೂಪಿಸುವ ಸಾಮರ್ಥ್ಯ ಆ ಸಂಸ್ಥೆಗಿದೆ. ಒಂದು ದೇಶ, ಸರಕಾರ ಅಥವಾ ವ್ಯಕ್ತಿಯ ವಿರುದ್ಧ ಅಪಪ್ರಚಾರ ನಡೆಸಲು ಆ ಸಂಸ್ಥೆ ನಿರ್ಧರಿಸಿದರೆ ತಡೆಯುವವರು ಯಾರು? ಥಾಮ್ಸನ್ ರಾಯಿಟರ್ಸ್ ಫೌಂಡೇಶನ್, ಮೂಲತಃ ಥಾಮ್ಸನ್ ರಾಯಿಟರ್ಸ್ ಎಂಬ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯ ಒಂದು ಅಂಗಸಂಸ್ಥೆ. ಇದು ಈಗ ಬಿಡುಗಡೆಗೊಳಿಸಿರುವ ವರದಿ ಜಗತ್ತಿನ ಸಾವಿರಾರು ಭರ್ಜರಿ ಆಹಾರ. ಅಮೆರಿಕನ್, ಯುರೋಪಿಯನ್ ಮಾಧ್ಯಮ ಗಳಂತೂ ಈ ವರದಿಯನ್ನು ಮೃಷ್ಟಾನ್ನ ಭೋಜನದಂತೆ ಸವಿಯುತ್ತಿವೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ವಿಷಯದಲ್ಲಿ ಭಾರತವೇ ಜಗತ್ತಲ್ಲಿ ನಂಬರ್ ಒನ್ ಎಂದು ಘೋಷಿಸಲು ಪಾಶ್ಚಾತ್ಯ ಮಾಧ್ಯಮಕ್ಕೆ ಅತ್ಯಂತ ಉಮೇದಿ, ಪರಮಾನಂದ! ಬೇರೆಲ್ಲ ಏಕೆ, ಪಾಕಿಸ್ತಾನದ ಮಾಧ್ಯಮಗಳು ಕೂಡ ಈ ವರದಿಯನ್ನು ಚಪ್ಪರಿಸಿ ಚಪ್ಪರಿಸಿ ಬಿತ್ತರಿಸುತ್ತಿವೆ. ಸ್ವತಃ ತಾನೇ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇನೆಂಬುದನ್ನು ಕೂಡ ಪಾಕಿಸ್ತಾನ ಈ ಹೊತ್ತಿನಲ್ಲಿ ಮರೆತಿದೆ! ಇದು ಕೂಡ ನರೇಂದ್ರ ಸರಕಾರದ ವಿರುದ್ಧ ತಾವು ಗಳಿಸಿದ ದಿಗ್ವಿಜಯ ಎಂಬಂತೆ ಕಾಂಗ್ರೆಸ್ ಮತ್ತು ಅದರ ಎಡಬಲದಲ್ಲಿರುವ ಪಕ್ಷಗಳು ಹುಚ್ಚೆದ್ದು ಕುಣಿಯುತ್ತಿವೆ! ನಮ್ಮ ದೇಶದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಖಾಸಗಿ ಸಂಸ್ಥೆಯೊಂದು ಹರಾಜಿಗಿಟ್ಟರೆ ನಮ್ಮವರೇ ಅದನ್ನು ನೆಚ್ಚಿಕೊಂಡು ಕುಣಿಯುತ್ತಿದ್ದಾರೆ ಎಂದರೆ ಏನು ಹೇಳಬೇಕು! ಇದಕ್ಕಿಂತ ಈ ದೇಶಕ್ಕೆ ದುರ್ಗತಿ ಇದೆಯೇ?

ಸಂಶೋಧನಾ ವರದಿಗಳಲ್ಲಿ ಎರಡು ವಿಧ. ಒಂದು, ಸಮಗ್ರ ಮಾಹಿತಿ ಕೋಶ (ಡೇಟಾಬೇಸ್) ಮುಂದಿಟ್ಟುಕೊಂಡು ಬರೆಯುವ ವರದಿ. ಎರಡನೆಯದ್ದು, ಎಲ್ಲರನ್ನೂ ಅಲ್ಲ – ಕೆಲವರನ್ನು ಮಾತ್ರ ಸಮೀಕ್ಷೆ ನಡೆಸಿ ಅವರು ಕೊಟ್ಟ ಉತ್ತರಗಳನ್ನೇ ಆಧಾರ ವಾಗಿಟ್ಟುಕೊಂಡು ಬರೆಯುವ ವರದಿ. ಉದಾಹರಣೆಗೆ, ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಎಷ್ಟೆಂಬುದನ್ನು ಸಂಶೋಧಿಸಬೇಕೆನ್ನಿ. ಮೊದಲ ವಿಧಾನದಲ್ಲಾದರೆ, ಭಾರತದ ಅಷ್ಟೂ ಆಸ್ಪತ್ರೆಗಳಲ್ಲಿ ಇದುವರೆಗೆ ದಾಖಲಾಗಿರುವ ಮಧುಮೇಹಿ ಗಳ ಡೇಟಾ ಪಡೆದು ಅಥವಾ ರಾಷ್ಟ್ರೀಯ ಆರೋಗ್ಯ ಇಲಾಖೆ ಹೊರತಂದ ವಾರ್ಷಿಕ ಅಂಕಿ-ಅಂಶಗಳನ್ನು ಆಧಾರವಾಗಿಟ್ಟು ಕೊಂಡು ವರದಿ ಬರೆಯಬಹುದು. ಅಥವಾ, ಎರಡನೇ ವಿಧಾನದಂತೆ, ಊರಲ್ಲಿ ಸಿಗುವ ನೂರೋ ಸಾವಿರವೋ ಮಂದಿಯನ್ನು ಮಾತಾಡಿಸಿ, ಅವರಲ್ಲಿ ಎಷ್ಟು ಜನಕ್ಕೆ ಮಧುಮೇಹ ಇದೆ ಲೆಕ್ಕ ಹಾಕಿ, ಅದನ್ನು ಸ್ಯಾಂಪಲ್ ಸ್ಪೇಸ್ ಆಗಿಟ್ಟುಕೊಂಡು ಒಂದು ಸ್ಟಾಟಿಸ್ಟಿಕ್ಸ್ ರಚಿಸಬಹುದು.

ಇವುಗಳಲ್ಲಿ ಮೊದಲ ಮಾದರಿ ಅಧಿಕೃತ. ಅಲ್ಲಿ ಸಿಗುವ ಫಲಿತಾಂಶ ಸತ್ಯಕ್ಕೆ ಬಹಳಷ್ಟು ಹತ್ತಿರ. ಎರಡನೆ ವಿಧಾನದಲ್ಲಿ ಸಿಕ್ಕ ಉತ್ತರ ಸತ್ಯಕ್ಕೆ ಹತ್ತಿರವೋ ದೂರವೋ ಹೇಳಬರುವುದಿಲ್ಲ. ಯಾಕೆಂದರೆ ಅದರ ಫಲಿತಾಂಶ ನಾವು ಯಾರನ್ನು ಮಾತಾಡಿಸಿದ್ದೇವೆ, ಅವರ ವಯಸ್ಸೆಷ್ಟು, ಯಾವ ಏರಿಯಾದಲ್ಲಿ ಮಾತಾಡಿಸಿದ್ದೇವೆ ಎಂಬೆಲ್ಲ ಅಂಶಗಳನ್ನೂ ಅವಲಂಬಿಸಿರುತ್ತದೆ. ನಮ್ಮ ಸ್ಯಾಂಪಲ್ ಸ್ಪೇಸ್ ದೊಡ್ಡದಾದಷ್ಟೂ ಸತ್ಯಕ್ಕೆ ಹತ್ತಿರ ಬರುತ್ತೇವೆ ಎನ್ನಬಹುದು. ಅದೆಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅದು ವಾಸ್ತವದ ದರ್ಪಣ ಬಿಂಬ ಆಗಿರುವುದಿಲ್ಲ ಎಂಬುದನ್ನು ಚುನಾವಣಾ ಸಮೀಕ್ಷೆಗಳೇ ಹಲವು ಬಾರಿ ರುಜುವಾತುಪಡಿಸಿವೆ. ತಮಾಷೆ ಎಂದರೆ, ಥಾಮ್ಸನ್ ರಾಯಿಟರ್ಸ್ ಸಂಸ್ಥೆ ತಯಾರಿಸಿದ ವರದಿಯನ್ನು ಹೀಗೆ ಸಮೀಕ್ಷೆ ವಿಧಾನದ ಮೂಲಕ ತಯಾರಿಸಲಾಗಿದೆ. ಆದರೆ, ಎಷ್ಟು ಜನರ ಸಮೀಕ್ಷೆ ನಡೆಸಲಾಗಿದೆ ಗೊತ್ತೆ? ಕೇವಲ 548 ಮಂದಿಯನ್ನು!

ಅವರಲ್ಲಿ 41 ಮಂದಿ ಭಾರತೀಯರಂತೆ. ಇನ್ನೂ ತಮಾಷೆಯ ಸಂಗತಿ ಎಂದರೆ, ಅವರಲ್ಲಿ ಯಾವುದೇ ಡೇಟಾ ಕೇಳಿಲ್ಲ; ನಿಮ್ಮ ಅಭಿಪ್ರಾಯಕ್ಕೆ ಏನು ಎಂದು ಕೇಳಿಲ್ಲ; ಒಟ್ಟಾರೆ, ನೀವು ಜಗತ್ತಿನಲ್ಲಿರುವ ದೇಶಗಳಿಗೆ ರ್ಯಾಂಕ್ ಕೊಡಿ ಎಂದಷ್ಟೇ ಕೇಳಲಾಗಿದೆ. ಈ ಬೃಹಸ್ಪತಿಗಳು ಕೊಟ್ಟ ಅಂಕಗಳ ಆಧಾರದ ಮೇಲೆ ಜಗತ್ತಿನ ಅಷ್ಟೂ ದೇಶಗಳ ಹಣೆಬರಹವನ್ನು ಥಾಮ್ಸನ್ ರಾಯಿಟರ್ಸ್ ಸಂಸ್ಥೆ ಬರೆದಿದೆ!

ಜಗತ್ತಿನಲ್ಲಿ ಅತ್ಯಾಚಾರ ನಡೆಯುವುದು ಹೊಸದೇನಲ್ಲ. ಹೆಣ್ಣುಗಳ ಮೇಲೆ ಮಾತ್ರವಲ್ಲ, ಗಂಡಸರು ಮತ್ತು ಮಕ್ಕಳ ಮೇಲೂ ಅತ್ಯಾಚಾರಗಳಾಗುತ್ತವೆ. ಪ್ರತಿ ಒಂದು ಲಕ್ಷ ಜನರಲ್ಲಿ ಎಷ್ಟು ಮಂದಿ ಅತ್ಯಾಚಾರಕ್ಕೊಳಗಾಗುತ್ತಾರೆ ಎಂಬ ಪಟ್ಟಿ ನೋಡಿದರೆ ಅದರಲ್ಲಿ ಕಾಣಿಸಿಕೊಳ್ಳುವ ದೇಶಗಳು ಯಾವುವು ನೋಡಿ: ದಕ್ಷಿಣ ಆಫ್ರಿಕ (ಅತ್ಯಾಚಾರಕ್ಕೊಳಗಾಗುವವರು: 132/ಲಕ್ಷಕ್ಕೆ), ಬೋಟ್‌ ಸ್ವಾನ (93), ಲೆಸೊತೊ (83), ಸ್ವಾಝಿಲ್ಯಾಂಡ್ (78), ಬರ್ಮಡಾ (68), ಸ್ವೀಡನ್ (63). ಅಂದರೆ ಅತ್ಯಧಿಕ ಪ್ರಮಾಣದಲ್ಲಿ ಅತ್ಯಾ ಚಾರಗಳು ನಡೆಯುವುದು ಆಫ್ರಿಕದ ದೇಶಗಳಲ್ಲಿ ಮಾತ್ರವಲ್ಲ, ಯುರೋಪಿನ ಅತಿ ಮುಂದುವರಿದ ಎಂಬ ಹಣೆಪಟ್ಟಿ ಹಚ್ಚಿಕೊಂಡ ಸ್ವೀಡನ್‌ನಂಥ ದೇಶಗಳಲ್ಲೂ ಕೂಡ.

ಆಸ್ಟ್ರೇಲಿಯಾದಲ್ಲಿ ಪ್ರತಿ ಲಕ್ಷಕ್ಕೆ 29 ಮಂದಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 27 ಮಂದಿ ಅತ್ಯಾಚಾರಕ್ಕೊಳಗಾಗುತ್ತಾರೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನ 94ನೆಯದು! ಇಲ್ಲಿ ಲಕ್ಷಕ್ಕೆ 1.8 ಮಂದಿ ಅತ್ಯಾಚಾರಕ್ಕೆ ಒಳಗಾಗುತ್ತಾರೆ. ನಮಗಿಂತ ಮುಂದುವರಿ ದವರು ಎಂದು ನಾವು ಭಾವಿಸಿರುವ ಸಿಂಗಾಪುರ (2.7), ರಷ್ಯ (3.4), ಸ್ಪೇನ್ (3.4), ಇಟೆಲಿ (7.6), ಮೆಕ್ಸಿಕೋ (13), ದಕ್ಷಿಣ ಕೊರಿಯಾ (13.5), ಫ್ರಾನ್ಸ್ (16), ಇಸ್ರೇಲ್ (17), ನ್ಯೂಜಿಲ್ಯಾಂಡ್ (26) ಇವರೆಲ್ಲರೂ ಅತ್ಯಾಚಾರ ಪ್ರಕರಣಗಳಲ್ಲೂ ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಭಾರತಕ್ಕಿಂತ ಕಡಿಮೆ ಅತ್ಯಾಚಾರ ಪ್ರಕರಣಗಳು ದಾಖಲಾಗುವ ಪ್ರಮುಖ ದೇಶಗಳೆಂದರೆ ಕೆನಡಾ (ಲಕ್ಷಕ್ಕೆ 1.7) ಮತ್ತು ಜಪಾನ್ (ಲಕ್ಷಕ್ಕೆ 1) ಇದು ವಾಸ್ತವ. ಆದರೆ ಟಿಆರ್‌ಎಫ್‌ಗೆ ವಾಸ್ತವದ ಅಂಕಿ-ಅಂಶಗಳು ಬೇಕಿಲ್ಲವಲ್ಲ!

ಟಿಆರ್‌ಎಫ್ ತನ್ನ ವರದಿಯಲ್ಲಿ, ಭಾರತದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಪ್ರಾಪ್ತವಯಸ್ಸಿಗೆ ಬರುವುದಕ್ಕೆ ಮುನ್ನವೇ ಬಾಲ್ಯ ವಿವಾಹಕ್ಕೆ ಗುರಿಯಾಗುತ್ತಾರೆ ಎಂಬ ಅಂಶವನ್ನೂ ದಾಖಲಿಸಿದೆ. ಎಂದಿನಂತೆ ಇದಕ್ಕೆ ಅದು ಯಾವ ಸಂಶೋಧನೆಯ ಆಧಾರ ವನ್ನೂ ಲಗತ್ತಿಸಿಲ್ಲ. ಆದರೆ ನಿಮಗೆ ವಾಸ್ತವ ಅಂಕಿ-ಅಂಶಗಳು ಬೇಕೆ? ವಿಶ್ವಸಂಸ್ಥೆ ಕೊಟ್ಟಿರುವ ವರದಿಗಳನ್ನು ಪರಿಶೀಲಿಸಿ. ಜಗತ್ತಿನಲ್ಲಿ ಬರೋಬ್ಬರಿ 75 ಕೋಟಿಯಷ್ಟು ಹೆಣ್ಣುಮಕ್ಕಳು 18 ವರ್ಷ ತುಂಬುವುದಕ್ಕೆ ಮೊದಲೇ ವಿವಾಹ ಬಂಧನಕ್ಕೊಳಗಾಗು ತ್ತಿದ್ದಾರೆ.

ಬಾಲ್ಯವಿವಾಹ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಅರೇಬಿಯಾ ಮತ್ತು ಆಫ್ರಿಕಾ ಭಾಗಗಳಲ್ಲಿ. ಆಫ್ರಿಕದ ದೇಶಗಳಲ್ಲಿ ಮದುವೆ ಯಾಗುವ ಪ್ರತಿ 10ರಲ್ಲಿ ನಾಲ್ವರು 18 ವರ್ಷಕ್ಕಿಂತ ಕೆಳಗಿನವರು. ಹಾಗೆ ವಿವಾಹವಾಗುವ ಅಪ್ರಾಪ್ತರಲ್ಲಿ ಪ್ರತಿ 7ರಲ್ಲಿ ಒಬ್ಬಾಕೆ 15 ವರ್ಷಕ್ಕಿಂತಲೂ ಚಿಕ್ಕವಳು. ಹೀಗೆ ಬಾಲ್ಯದಲ್ಲೇ ಮದುವೆಯಾಗಿ ಗಂಡನ ಮನೆ ಸೇರಿಕೊಂಡ ಹೆಣ್ಣುಗಳಿಗೆ ನಂತರ ಗಂಡನ ಮನೆಯೇ ಜೈಲು ಕೂಡ. ಯಾಕೆಂದರೆ ಅವರು ಶಾಲೆಗೆ ಹೋಗುವಂತಿಲ್ಲ, ಓದು ಮುಂದುವರಿಸುವಂತಿಲ್ಲ, ಅಪ್ರಾಪ್ತರಾಗಿರು ವಾಗಲೇ ಗರ್ಭ ಧರಿಸಬೇಕು, ಸಮಾಜದಿಂದ ವಿಮುಖರಾಗಬೇಕು, ಲೈಂಗಿಕ ಮತ್ತು ಮನೆಯೊಳಗಿನ ಹಿಂಸಾಚಾರ ಗಳನ್ನು ಅವಡುಗಚ್ಚಿ ಸಹಿಸಿಕೊಳ್ಳಬೇಕು.

ಸರಕಾರವಾಗಲೀ ಪೊಲೀಸ್ ವ್ಯವಸ್ಥೆಯಾಗಲೀ ಈ ಬಾಲ್ಯವಿವಾಹಿತೆಯರ ರಕ್ಷಣೆಗೆ ಬರುವುದಿಲ್ಲ. ಇನ್ನು ಹೆಣ್ಣುಮಕ್ಕಳ ಮರ್ಮಾಂಗದ ಮುಂದೊಗಲು ಕತ್ತರಿಸುವ ಅಮಾನವೀಯ ಕ್ರಮ ಕೂಡ ಆಫ್ರಿಕ, ಅರೇಬಿಯಾ ಪ್ರದೇಶಗಳಲ್ಲಿದೆ. ಪ್ರಪಂಚದ ಒಟ್ಟು 30 ದೇಶಗಳಲ್ಲಿ ಜಾರಿಯಲ್ಲಿರುವ ಈ ಕ್ರಮಕ್ಕೆ ಒಳಗಾಗಿರುವ ಹೆಂಗಸರು 20 ಕೋಟಿಗೂ ಅಧಿಕ. ಇವರಲ್ಲಿ ಅರ್ಧದಷ್ಟು ಮಂದಿ ಕೇವಲ ಮೂರು ದೇಶಗಳಲ್ಲಿ – ಇಂಡೋನೇಷ್ಯ, ಈಜಿಪ್ಟ್ ಮತ್ತು ಇಥಿಯೋಪಿಯಾದಲ್ಲಿದ್ದಾರೆ. ಟಿಆರ್‌ಎಫ್ ಈ ವಿಷಯ ದಲ್ಲಿ ಮೌನ ವಹಿಸಿ, ಆ ಅಮಾನವೀಯ ಆಚರಣೆಯ ಸರ್ವ ತೆಗಳಿಕೆಯನ್ನೂ ಭಾರತದ ಮೇಲೆ ಹಾಕಿಬಿಟ್ಟಿದೆ!

ನಿಮಗೆ ಸತ್ಯ ಬೇಕೆ? ವಾಸ್ತವ ಏನೆಂಬುದರ ಚಿತ್ರಣ ಬೇಕೆ? ಮೂರು ವರ್ಷಗಳ ಹಿಂದೆ ಸಿಎನ್‌ಎನ್ ಸುದ್ದಿಮಾಧ್ಯಮ ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಹೊರಹೊಮ್ಮಿದ ಈ ಸತ್ಯಗಳನ್ನು ಕಣ್ಣುಬಿಟ್ಟು ನೋಡಿ: ಪ್ರಪಂಚದಲ್ಲಿ 35%ರಷ್ಟು ಹೆಣ್ಣುಮಕ್ಕಳು ತಾವು ಜೀವನದ ಒಂದಿಲ್ಲೊಂದು ಘಟ್ಟದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ. ನಂಬು ತ್ತೀರೋ ಬಿಡುತ್ತೀರೋ, ಈಜಿಪ್ಟ್ ನ ಮಹಿಳೆಯರ ಪೈಕಿ 99%ದಷ್ಟು ಜನ ಲೈಂಗಿಕ ದೌರ್ಜನ್ಯದ ಅನುಭವವಾಗಿದೆ ಎಂದಿದ್ದಾರೆ. ದಕ್ಷಿಣ ಆಫ್ರಿಕ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಿದ್ದರೂ, ಅಲ್ಲಿ ಪ್ರತಿ 4ರಲ್ಲಿ 3 ಮಹಿಳೆಯರು ಕಳೆದೊಂದು ವರ್ಷದಲ್ಲೇ ಲೈಂಗಿಕ ಪೀಡನೆಗೆ ಗುರಿಯಾಗಿದ್ದಾರೆ.

ಲೈಂಗಿಕ ವಾಂಛೆಗಳಿಗೆ ಬಡ ದೇಶ, ಶ್ರೀಮಂತ ದೇಶ ಎಂಬ ಭೇದ ಇಲ್ಲವೇ ಇಲ್ಲ. ಅಮೆರಿಕಾದಂಥ ಅಮೆರಿಕದಲ್ಲಿ ಕೂಡ 65% ಮಂದಿ ಹೆಂಗಸರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೇ. ಉತ್ತರ ಅಮೆರಿಕದಲ್ಲಿ ನೀವು ಬೀದಿಯಲ್ಲಿ ಮಾತಾಡಿಸುವ ಯಾವುದೇ 4 ಮಂದಿಯಲ್ಲಿ ಒಬ್ಬಾಕೆ ಅಂಥದೊಂದು ದೌರ್ಜನ್ಯವನ್ನು ತನ್ನ ಬದುಕಿನಲ್ಲಿ ಎದುರಿಸಿದಾಕೆಯೇ. ಥಾಮ್ಸನ್ ರಾಯಿಟರ್ಸ್ ಇರುವ ಯುನೈಟೆಡ್ ಕಿಂಗ್‌ಡಂನಲ್ಲಿ ಇದರ ಶೇಕಡಾವಾರು 44%. ಉಳಿದಂತೆ ಡೆನ್ಮಾರ್ಕ್‌ನ 52%, ಫಿನ್ ಲ್ಯಾಂಡ್ ನ 47%, ಸ್ವೀಡನ್‌ನ 46%, ನೆದರ್‌ಲ್ಯಾಂಡ್‌ನ 45%, ಫ್ರಾನ್ಸ್ ನ 44% ಮಂದಿ ಮಹಿಳೆಯರು ಲೈಂಗಿಕವಾಗಿ ಒಂದಿಲ್ಲೊಂದು ದೌರ್ಜನ್ಯಕ್ಕೆ ಒಳಗಾದವರೇ.

ಅಮೆರಿಕದ ಕತೆ ಕೇಳುತ್ತೀರಾ? ಕೇಳಿ! ಇಲ್ಲಿ ಹೆಂಗಸರ ಮೇಲೆ ನಡೆಯುವ ಅತ್ಯಾಚಾರಗಳ ಪೈಕಿ 22%ರಷ್ಟು ಅತ್ಯಾಚಾರಗಳು ಗ್ಯಾಂಗ್ ರೇಪ್‌ಗಳು. 2016ರ ಒಂದೇ ವರ್ಷದಲ್ಲಿ ಅಮೆರಿಕದ ಠಾಣೆಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 90,185! ಆದರೆ ಈ ಸಂಖ್ಯೆ ಸಣ್ಣದು; ಅದೆಷ್ಟೋ ರೇಪ್ ಪ್ರಕರಣಗಳು ಪೊಲೀಸರವರೆಗೆ ಹೋಗುವುದೇ ಇಲ್ಲ; ಒಂದೋ ಹಣ ಕೊಟ್ಟು ಬಾಯ್ಮುಚ್ಚಿಸ ಲಾಗುತ್ತದೆ, ಇಲ್ಲವೇ ಜೀವಬೆದರಿಕೆ ಒಡ್ಡಿ ಸಂತ್ರಸ್ಥರನ್ನು ಸುಮ್ಮನಾಗಿಸುತ್ತಾರೆ. ಇನ್ನು ಕೆಲವೊಮ್ಮೆ ಪೊಲೀಸರೇ ಪ್ರಕರಣ ದಾಖಲಿ ಸುವಲ್ಲಿ ಅಸಡ್ಡೆ ತೋರುತ್ತಾರೆ. ಅಮೆರಿಕದಲ್ಲಿ 2016ರಲ್ಲಿ ನಡೆದುಹೋದ ರೇಪ್ ಪ್ರಕರಣಗಳ ಸಂಖ್ಯೆ 4,31,840 ಎಂದು ಇನ್ನೊಂದು ಖಾಸಗಿ ಏಜೆನ್ಸಿ ತನ್ನ ವರದಿ ಮುಂದಿಟ್ಟಿದೆ. ರೇಪ್, ಹಿಂಸಾಚಾರ, ಲೈಂಗಿಕ ಎಲ್ಲ ಪ್ರಕರಣಗಳನ್ನು ಒಟ್ಟು ಹಾಕಿದರೆ ಅಮೆರಿಕದಲ್ಲಿ ಪ್ರತಿ 98 ಸೆಕೆಂಡುಗಳಿಗೆ ಒಂದು ಅಂಥ ಪ್ರಕರಣ ದಾಖಲಾಗುತ್ತಿದೆ.

ಅಂದರೆ ಪ್ರತಿದಿನವೂ ಅಲ್ಲಿ ಸರಾಸರಿ 570 ಮಂದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂತ್ರಸ್ಥರು. 1998ರಿಂದ ಇಲ್ಲಿನವರೆಗೆ ಅಮೆರಿಕದಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಂಗಸರ ಸಂಖ್ಯೆ ಎಷ್ಟು ಗೊತ್ತೆ? 1,77,00,000 (ಇಲ್ಲಿನ ಜನಸಂಖ್ಯೆ ಕೇವಲ 32 ಕೋಟಿ ಎಂಬುದನ್ನು ಮರೆಯಬೇಡಿ!). ಅಚ್ಚರಿಯ ಮಾತೆಂದರೆ ಇಲ್ಲಿ ರೇಪ್ ಮಾಡಿದವರಲ್ಲಿ 99%ರಷ್ಟು ಆರೋಪಿಗಳು ಕೋರ್ಟಿನಲ್ಲಿ ಪ್ರಕರಣ ಸಾಬೀತಾಗದೆ, ಶಿಕ್ಷೆಯೂ ಇಲ್ಲದೆ (ಕೆಲವೊಮ್ಮೆ ರೇಪ್ ಮಾಡಿಸಿಕೊಂಡವರ ಮೇಲೇ ಮಾನನಷ್ಟ ಹೂಡಿ, ದುಡ್ಡೂ ಪೀಕಿ) ಹೊರ ನಡೆಯುತ್ತಾರೆ! ಅತ್ಯಾಚಾರಕ್ಕೊಳಗಾದ ಮಹಿಳೆಯರ ಪೈಕಿ 13%ರಷ್ಟು ಮಂದಿ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ; ಕೆಲವರು ದುರ್ದೈವದಿಂದ ಯಶಸ್ವಿಯೂ ಆಗುತ್ತಾರೆ. ಅಮೆರಿಕದಲ್ಲಿ ಹೆಣ್ಣುಗಳಿಗಷ್ಟೇ ಜೀವಭಯ, ಶೀಲಭಯ ಎಂದುಕೊಳ್ಳಬೇಡಿ. ದೇಶದಲ್ಲಿ ನಡೆಯುವ ಅತ್ಯಾಚಾರಗಳ ಪೈಕಿ 3%ರಷ್ಟು ಗಂಡಸರ ಮೇಲೆ ನಡೆಯುವಂಥವು.

ಇಲ್ಲಿ ಸೆರೆಮನೆಗಳಾದರೂ ಸೇಫ್ ಎನ್ನುತ್ತೀರಾ? ಅಮೆರಿಕದ ಜೈಲುಗಳಲ್ಲಿ ಪ್ರತಿ ವರ್ಷ ಸರಾಸರಿ 80,600ರಷ್ಟು ಮಂದಿ ಜೈಲಿನೊಳಗೇ ತಮ್ಮ ಸಹಜೈಲುವಾಸಿಗಳಿಂದ ಇಲ್ಲವೇ ಜೈಲಿನ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ ಎದುರಿಸಬೇಕಾಗುತ್ತದೆ! ಇನ್ನು ಈ ದೇಶದ ಸೇನೆಯಾದರೂ ಅಂಥ ದುಷ್ಕೃತ್ಯಗಳಿಂದ ದೂರವಿದೆ ಎನ್ನುವಂತಿಲ್ಲ. 2014ರ ಒಂದೇ ವರ್ಷದಲ್ಲಿ ಅಮೆರಿಕನ್ ಸೇನೆಯ ಒಳಗೇ 18,900 ಮಂದಿ ಸೈನಿಕರು ಬೇರೆ ಬೇರೆ ರೀತಿಯ ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ.

ಇವೆಲ್ಲ ವಾಸ್ತವಗಳನ್ನೂ ಗುಡಿಸಿ ಬದಿಯಲ್ಲಿಟ್ಟು ಥಾಮ್ಸನ್ ರಾಯಿಟರ್ಸ್ ಸಂಸ್ಥೆ ನಡೆಸಿದ್ದು ಸ್ಟಾಟಿಸ್ಟಿಕ್ಸ್ ನಲ್ಲಿ ಯಾವೊಂದು ಮಾನ್ಯತೆಗೂ ಪಾತ್ರವಾಗದ, ಯಾವ ಡೇಟಾಬೇಸ್‌ನ ಬೆಂಬಲವೂ ಇಲ್ಲದ, ಕೇವಲ 548 ಅಭಿಪ್ರಾಯ ದಾಖಲೀಕರಣ! ಇದಕ್ಕೆ ಅದು ಕೊಟ್ಟಿರುವ ಹೆಸರು ಪರ್‌ಸೆಪ್ಷನ್ ಪೋಲ್. ಅಂದರೆ, ನನಗೆ ಹೀಗನಿಸುತ್ತದೆ. ಇದೇ ಸತ್ಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬ ದಾಖಲಿಸುವ ಅಭಿಪ್ರಾಯದ ಸಂಗ್ರಹ. ಹೀಗೆ ಬೇಕಾಬಿಟ್ಟಿಯಾಗಿ ವರದಿ ತಯಾರಿಸಿ ಒಂದು ದೇಶದ ಮೇಲೆ ಗೂಬೆ ಕೂರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶದ ಮಾನ-ಮರ್ಯಾದೆಗಳನ್ನು ಹರಾಜು ಹಾಕಲು ಈ ಸಂಸ್ಥೆಗೆ ಅಧಿಕಾರ ಕೊಟ್ಟವರು ಯಾರು? ಸಂಸ್ಥೆ ತನ್ನ ವರದಿಯಲ್ಲಿ ಅಭಿಪ್ರಾಯ ದಾಖಲಿಸಿದ 548 ಮಂದಿಯ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದಿದೆ.

ಹಾಗಿದ್ದ ಮೇಲೆ ಆ ವರದಿ ಅಧಿಕೃತ ಹೇಗಾಗುತ್ತದೆ? ಎನ್‌ಡಿಟಿವಿಯ ಜೊತೆ ಮಾತಾಡುತ್ತಿದ್ದ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥೆ ತನ್ನ 20 ನಿಮಿಷದ ಮಾತುಕತೆಯಲ್ಲಿ ಕನಿಷ್ಠ 10 ಸಲ 2012ರ ದೆಹಲಿ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದರು. ಅಂದರೆ ದೇಶದಲ್ಲಿ ನಡೆದ ಒಂದು ಕೊಲೆ, ಒಂದು ಅತ್ಯಾಚಾರ ಆ ಇಡೀ ದೇಶದ ಹಣೆಬರಹ ಬರೆಯಲು ಸಾಕಾಗುತ್ತದೆಯೆ? ನಿರ್ಭಯಾ ಪ್ರಕರಣದಂಥ ಕೊಲೆ/ಅತ್ಯಾಚಾರಗಳು ಬೇರಾವ ದೇಶದಲ್ಲೂ ಇಲ್ಲವೇ? ವರದಿಯ ಹೆಸರಿನಲ್ಲಿ ಈ ಸಂಸ್ಥೆ ಭಾರತದ ಹೆಸರಿಗೆ ಮಸಿ ಬಳಿಯಲು ಕೂತಿರುವುದು ಸ್ಪಷ್ಟ. ಮುಂದಿನ ಲೋಕಸಭೆ ಚುನಾವಣೆಯ ಹೊತ್ತಿಗೆ ಇಂಥ ಇನ್ನಷ್ಟು ವರದಿ, ಸಂಶೋಧನೆಗಳು ಯಾವ್ಯಾವುದೋ ಫ್ಯಾಕ್ಟರಿಗಳಲ್ಲಿ ಸೃಷ್ಟಿಯಾಗಿ ಬರುವುದೂ ಸತ್ಯ. ಭಾರತ ಸರಕಾರ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ಮೇಲೆ ಕಾನೂನು ಕ್ರಮ ಜರುಗಿಸಿದರೆ ವರದಿಯನ್ನು ತಯಾರಿಸಿದ ಯಂತ್ರ ಯಾವುದು ಎಂಬುದು ತಿಳಿಯಬಹುದು.

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close