ಸ್ಥಾವರ ಸ್ಥಾಪನಗೆ ನಾಂದಿ ಹಾಡಿದ ಶೋಧ ಕಾರ್ಯ

Posted In : ಸಂಗಮ, ಸಂಪುಟ

ಕಲ್ಲಿದ್ದಲು ಆಧಾರಿತ ತಲಾ 660 ಮೆ.ವ್ಯಾ ಸಾಮರ್ಥ್ಯದ ಒಟ್ಟು 1320 ಮೆ.ವ್ಯಾ ವಿದ್ಯುತ್ ಉತ್ಪಾದಿಸಬಲ್ಲ ಶಾಖೋತ್ಪನ್ನ ವಿದ್ಯುತ್ ಘಟಕವನ್ನು ಗುಲ್ಬರ್ಗ (ಕಲಬುರಗಿ) ಜಿಲ್ಲೆಯಲ್ಲಿ ಸ್ಥಾಪಿಸಲು ಪಿಸಿಕೆಎಲ್ ಸಂಸ್ಥೆಯ ಉತ್ಸಾಹಿ ವ್ಯವಸ್ಥಾಪಕ ನಿರ್ದೆಶಕರಾಗಿದ್ದ ನವೀನ್ ಕುಮಾರ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಯಿತು. ಶಶಿಧರ್, ಭರತೇಶ್, ಲತಾ ಪಾಟೀಲ್ ಹಾಗೂ ಇತರರಿಂದ ಕೂಡಿದ್ದ ಈ ತಂಡ ಸವಾಲನ್ನು ಮನಃಪೂರ್ವಕವಾಗಿ ಸ್ವೀಕರಿಸಿತು. ಮೊದಲಿಗೆ ಸ್ಥಳ ಗುರುತಿಸುವ ಕೆಲಸ ಆಗಬೇಕಿತ್ತು. ತಂಡ ಇಡೀ ಜಿಲ್ಲೆಯಲ್ಲಿ ಸಂಚರಿಸಿ ಸೂಕ್ತ ಸ್ಥಳಕ್ಕಾಗಿ ಶೋಧನೆ ನಡೆಸಿತು. ಜಹೀರಾಬಾದ್ ಪಟ್ಟಣಕ್ಕೆ 8 ಕಿ.ಮೀ ದೂರದಲ್ಲಿನ 2000 ಎಕರೆ ಜಾಗ ಶೋಧಿಸಿದ ತಂಡ ತನಗೆ ಒಪ್ಪಿಸಿದ ಮೊದಲ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿತು. ಎರಡನೆಯದಾಗಿ ಈ ಸ್ಥಳಕ್ಕೆ ನೀರು ಸರಬರಾಜು ಮಾಡುವ ಬಗ್ಗೆ ತಂಡವು ತಜ್ಞರೊಂದಿಗೆ ಸಮೀಕ್ಷೆ ನಡೆಸಿತು.

30 ಕಿ.ಮೀ ದೂರದಲ್ಲಿರುವ ಭೀಮಾ ನದಿಯಿಂದ ನಾಲೆ ಮೂಲಕ ಬಹಳ ಸುಲಭವಾಗಿ ಈ ಸ್ಥಳಕ್ಕೆ ನೀರು ತರಬಹುದೆಂದು ತಂಡ ವರದಿ ಮಾಡಿತು. ಅಷ್ಟೇ ಅಲ್ಲ, ಈ ಸ್ಥಳ ಗುಲ್ಬರ್ಗ- ಚೆನ್ನೈ ರೈಲು ಮಾರ್ಗದ ಸಂಪರ್ಕವನ್ನೂ ಹೊಂದಿತ್ತು. ತಂಡ ನೀಡಿದ ಈ ವರದಿ ನೋಡಿ ನಾನು ಮೂಕವಿಸ್ಮಿತನಾದೆ. ಏಕೆಂದರೆ, ನಮ್ಮ ಕನಸಿನ ಯೋಜನೆಗೆ ಈ ಸ್ಥಳ ಹೇಳಿ ಮಾಡಿಸಿದಂತಿತ್ತು. ಮುಖ್ಯವಾಗಿ ಈ ಸ್ಥಳದಲ್ಲಿ ಉದ್ದೇಶಿತ ಯೋಜನೆ ಆರಂಭಿಸುವುದರಿಂದ ಪುನರ್ವಸತಿ ಮುಂತಾದ ಯಾವುದೇ ಸಮಸ್ಯೆಗಳಿರಲಿಲ್ಲ. ನನ್ನ ಮನಸ್ಸು ಗರಿಗೆದರಿತು. ಈ ಸ್ಥಳದಲ್ಲಿ ಯೋಜನೆ ಆರಂಭಿಸಿ 1000 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಕನಸು ಕಂಡೆ. ಈ ಸಮಯದಲ್ಲಿ ಕೆಲವು ಸಮಸ್ಯೆಗಳು ತಲೆ ಎತ್ತಿದವು. ಗುರುತಿಸಿದ ಸ್ಥಳವು ಕೃಷಿ ಭೂಮಿಯಾಗಿದ್ದು, ಪ್ರಮುಖವಾಗಿ ಅಲ್ಲಿ ತೊಗರಿ ಬೆಳೆಯಲಾಗುತ್ತಿತ್ತು. ನಿಜ ಹೇಳಬೇಕೆಂದರೆ, ಹಿಂದುಳಿದ ಹಾಗೂ ಒಣ ಪ್ರದೇಶವಾದ ಇಲ್ಲಿ ಬೆಳೆಯುತ್ತಿದ್ದ ತೊಗರಿ ಕಾಳಿನ ಗುಣಮಟ್ಟ ಅತ್ಯಂತ ಉತ್ಕೃಷ್ಠವಾಗಿತ್ತು.

ಇಲ್ಲಿ ಎದ್ದ ಪ್ರಶ್ನೆಯೆಂದರೆ, ತೊಗರಿ ಬೆಳೆಯಲಾ ಗುತ್ತಿರುವ ಇಂಥ ಉತ್ಕೃಷ್ಠ ಭೂಮಿಯನ್ನು ವಿದ್ಯುತ್ ಉತ್ಪಾದನೆಗಾಗಿ ಬಲಿ ಕೊಡುವುದು ಸಾಧ್ಯವೆ ಎಂಬುದಾಗಿತ್ತು. ವಿದ್ಯುತ್ ಉತ್ಪಾದನೆಗಾಗಿ ಈ ಸ್ಥಳದಲ್ಲಿ ಭೂಮಿ ಒತ್ತುವರಿ ಆಗಲಿದೆ ಎಂಬ ಸುದ್ದಿ ಕಿವಿಗೆ ಮುಟ್ಟಿದ ಕೂಡಲೆ ರೈತರು ಜಾಗೃತರಾದರು. ಹಲವಾರು ಮಂದಿ ತೊಗರಿ ಬೆಳೆಗಾರರು ಸೇರಿ, ಕೆಲವು ರಾಜಕೀಯ ಮುಖಂಡರ ನೇತೃತ್ವದಲ್ಲಿ ಹೋರಾಟ ಆರಂಭಿಸಿದರಲ್ಲದೆ, ಸರಕಾರ ಉದ್ದೇಶಿತ ಯೋಜನೆಯನ್ನು ಕೈ ಬಿಡಬೇಕೆಂದು ಒತ್ತಾಯಿಸತೊಡಗಿದರು.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರು ದಿಟ್ಟ ನಿರ್ಧಾರ ತೆಗೆದುಕೊಂಡರು. ಮುಂದಿನ 5 ವರ್ಷಗಳಲ್ಲಿ ಸರಕಾರ 5000 ಮೆ.ವ್ಯಾ ಹೆಚ್ಚುವರಿ ವಿದ್ಯುತ್ ಉತ್ಪಾದ ನೆಯ ಗುರಿ ಹೊಂದಿರುವುದರಿಂದ ಹಾಗೂ ಈ ಸಂಬಂಧ ದಲ್ಲಿ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಬದ್ಧವಾಗಿರುವುದರಿಂದ ಉದ್ದೇಶಿತ ಯೋಜನೆಯಿಂದ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂಬ ಖಚಿತ ನಿರ್ಧಾರ ಕೈಗೊಂಡರು. ತೊಗರಿ ಬೆಳೆಗಾರರಿಗೆ ಪರ್ಯಾಯ ಸ್ಥಳದಲ್ಲಿ ಉತ್ತಮ ಭೂಮಿ ಕೊಳ್ಳಲು ಸರಕಾರ ಸರಿಯಾದ ಪರಿಹಾರ ನೀಡಲಿದ್ದು, ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದ ಒಬ್ಬರಿಗೆ ವಿದ್ಯುತ್ ಸ್ಥಾವರದಲ್ಲಿ ಉದ್ಯೋಗ ನೀಡುವ ವಾಗ್ದಾನವನ್ನೂ ನೀಡಿದರು. ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸರಕಾರವೇ ಪರ್ಯಾಯ ಭೂಮಿ ನೀಡುವ ಬಗ್ಗೆ ಸಹ ಯೋಚಿಸಲಾಗುವುದೆಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.

ಈ ಯೋಜನೆಗೆ ಪ್ರಬಲ ರಾಜಕೀಯ ವಿರೋಧವಿ ದ್ದರೂ ಇಡೀ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ದೃಢ ನಿರ್ಧಾರ ತೆಗೆದುಕೊಂಡಿರುವುದನ್ನು ಮೆಚ್ಚಿದ ರೈತರು ತಮ್ಮ ಬಿಗಿನಿಲುವನ್ನು ಸಡಿಲಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿತು. ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತೊಂದು ದಿಟ್ಟ ನಿಲುವನ್ನು ಪ್ರಕಟಿಸಿದರು. ಸ್ಥಾವರಕ್ಕೆ ಅವಶ್ಯವಾದ ಸ್ಥಳಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೆ ಆರಂಭಿಸುವಂತೆ ಗುಲ್ಬರ್ಗ ಜಿಲ್ಲಾಧಿಕಾರಿಗಳಾಗಿದ್ದ ವಿಶಾಲ್ ಅವರಿಗೆ ಸೂಚಿಸಿ, ಪ್ರತಿ ಎಕರೆಗೆ ಸೂಕ್ತ ದರ ನಿಷ್ಕರಣೆ ಮಾಡಲು ಆದೇಶಿಸಿದರು. ಜಿಲ್ಲಾಧಿಕಾರಿ ವಿಶಾಲ್ ಬದ್ಧತೆಯಿಂದ ಹಾಗೂ ಅತಿ ಸೂಕ್ಷ್ಮವಾಗಿ ಭೂಸ್ವಾಧೀನ ಪ್ರಕ್ರಿಯೆ ಕೆಲಸಗಳನ್ನು ಆರಂಭಿಸಿದರು. ನನಗೆ ನೆನಪಿರುವಂತೆ ಪ್ರತಿ ಎಕರೆಗೆ 7 ಲಕ್ಷ ರು. ಮೌಲ್ಯವನ್ನು ನಿಷ್ಕರ್ಷೆ ಮಾಡಲಾಯಿತು. ಸರಕಾರ ನಿಗದಿಸಿದ ಬೆಲೆಯ ಬಗ್ಗೆ ರೈತರು ಸಂತೃಪ್ತರಾದರು. ಸುಮಾರು 2000 ಎಕರೆ ಭೂಮಿ ನೀಡಲು ರೈತರು ಮುಂದಾದರು. ಭೂಸ್ವಾಧೀನ ಪ್ರಕ್ರಿಯೆ ಕೆಲಸ ಬಿರುಸಿನಿಂದ ನಡೆಯಿತು.

ಭೂಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣವೇ ರೈತರಿಗೆ ಹಣ ಪಾವತಿಸಲು ಮುಖ್ಯಮಂತ್ರಿ 100 ಕೋಟಿ ರು.ಗಳನ್ನು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿದರು. ಗುಲ್ಬರ್ಗ ವಿದ್ಯುತ್ ಸ್ಥಾವರವು ಈಗ ಅವಶ್ಯವಾದಷ್ಟು ಭೂಮಿಯೊಂದಿಗೆ ಅತಿ ದೊಡ್ಡ ಯೋಜನೆಯಾಗಿ ರೂಪುಗೊಳ್ಳಲು ಸಜ್ಜಾಯಿತು. ಪಿಸಿಕೆಎಲ್ ಸಂಸ್ಥೆಯು ಗುಲ್ಬರ್ಗ ಬಳಿ 1320 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಸ್ಥಾವರ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಿತು. ಎರಡು ಹಂತದ ಟೆಂಡರ್ ದಾಖಲೆಗಳನ್ನು ಇದು ಒಳಗೊಂಡಿತ್ತು. ಅರ್ಹತಾ ಟೆಂಡರ್ (ಆರ್‌ಎಫ್ ಕ್ಯೂ) ಒಂದು ಹಂತದ್ದಾ ದರೆ, ದರಗಳನ್ನು ನಮೂದಿಸುವ ಆರ್ಥಿಕ ಟೆಂಡರ್ ಮತ್ತೊಂದು ಬಗೆಯದು. ನನಗೆ ಖಚಿತವಾಗಿ ನೆನಪಿರುವಂತೆ ದಾಖಲಾರ್ಹ ಸಂಖ್ಯೆಯಲ್ಲಿ 28 ಉನ್ನತ ಮಟ್ಟದ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಭಾರತದ ಪ್ರಮುಖ ಸಂಸ್ಥೆಗಳೂ ಟೆಂಡರ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಿಸಿಕೆಎಲ್ ಸಂಸ್ಥೆ ಏರ್ಪಡಿಸಿದ್ದ ಬಿಡ್ದಾರರ ಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ.

ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿದ್ದ ಕಾರ್ಯ ಚಟುವಟಿಕೆ ಹಾಗೂ ಶಕ್ತಿಯುತ ಕ್ರಮಗಳನ್ನು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಉನ್ನತ ಕಂಪನಿಗಳ ಪ್ರತಿನಿಧಿಗಳು ನಿರ್ಧಾರವನ್ನು ಶ್ಲಾಸಿದರು. ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಭೂ ಸ್ವಾಧೀನ, ನೀರು ಪೂರೈಕೆ ಹಾಗೂ ಇನ್ನಿತರ ಅಗತ್ಯ ಕ್ರಮಗಳಿಗೆ ಆದ್ಯತೆ ನೀಡಿದ್ದು ಬಿಡ್‌ನಲ್ಲಿ ಭಾಗವಹಿಸಿದ್ದವರ ಮೇಲೆ ಅಪಾರ ಪರಿಣಾಮ ಬೀರಿತು. ಈ ಯೋಜನೆಯನ್ನು ಆರಂಭಿಸಲು ಸರಕಾರ ಉತ್ಸುಕವಾಗಿರುವುದು ಅವರಿಗೆ ಬಹಳಷ್ಟು ಸಂತಸ ತಂದುಕೊಟ್ಟಿತು. ಸಭೆ ನಿರ್ಣಾಯಕ ಹಂತದಲ್ಲಿದ್ದಾಗ ಕಂಪನಿ ಪ್ರತಿನಿಧಿಗಳು ನನ್ನ ಮುಂದೆ ಒಂದು ಮಹತ್ವದ ಪ್ರಶ್ನೆ ಎತ್ತಿದರು. ಯೋಜನೆಗೆ ಕಲ್ಲಿದ್ದಲು ಪೂರೈಕೆಗೆ ಸಂಬಂಧಿಸಿದ ಮಂಜೂರು ಎಲ್ಲಿದೆ? ಎಂಬುದೇ ಈ ಪ್ರಶ್ನೆಯಾಗಿತ್ತು. ಭಾರತ ಸರಕಾರದ ಕಲ್ಲಿದ್ದಲು ಹಾಗೂ ವಿದ್ಯುತ್ ಯೋಜನೆಗಳ ಸಚಿವಾಲಯವು ಕಲ್ಲಿದ್ದಲು ಮಂಜೂರು ನೀಡುವ ಅಧಿಕಾರ ಹೊಂದಿತ್ತು. ಈ ವ್ಯವಸ್ಥೆಗೆ ‘ಲಿಂಕೇಜ್’ ಎನ್ನಲಾಗುತ್ತದೆ. ಇಂಥ ಲಿಂಕೇಜ್ ಸೌಲಭ್ಯವನ್ನು ನಾವು ರಾಯಚೂರು ಶಾಖೋತ್ಪನ್ನ ಘಟಕಕ್ಕೆ ಹೊಂದಿದ್ದೇವೆ.

ಕರ್ನಾಟಕ ವಿದ್ಯುತ್ ನಿಗಮದ (ಕೆ.ಪಿ.ಸಿ) ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಅವಧಿಯಲ್ಲಿ ಭಾರತ ಸರಕಾರ ಪ್ರತಿ ತ್ರೈಮಾಸಿಕಕ್ಕೊಮ್ಮೆ ನಡೆಸುತ್ತಿದ್ದ ಇಂಥ ಲಿಂಕೇಜ್ ಸಭೆಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ. ರಾಯಚೂರು ಶಾಖೋತ್ಪನ್ನ ಘಟಕವು ಆಗ ತೀವ್ರ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿತ್ತು. ಅಲ್ಲದೆ, ರೈಲ್ವೆ ವ್ಯಾಗೆನ್ ಕೊರತೆಯಿಂದಾಗಿ ಮಂಜೂರಾಗಿದ್ದ ಕಲ್ಲಿದ್ದಲು ಸಹ ಸಕಾಲಕ್ಕೆ ಸರಬರಾಜಾಗುತ್ತಿರಲಿಲ್ಲ. ರಾಯಚೂರು ಶಾಖೋತ್ಪನ್ನ ಘಟಕಕ್ಕೆ ಅವಶ್ಯವಾಗಿದ್ದ ಕಲ್ಲಿದ್ದಲಿನಲ್ಲಿ ಶೇ.60-70 ಭಾಗ ಮಾತ್ರ ಪೂರೈಕೆ ಆಗುತ್ತಿತ್ತು. ರಾಯಚೂರು ಘಟಕವು ಕಲ್ಲಿದ್ದಲಿನ ಮೂಲ ಸರಬರಾಜು ಸ್ಥಳದಿಂದ ಸುಮಾರು 1200 ಕಿ.ಮೀ ದೂರದಲ್ಲಿತ್ತು. ರೈಲ್ವೆ ಇಲಾಖೆಯ ವ್ಯಾಗಿನ್ ಗಳಲ್ಲಿದ್ದ ಕೊರತೆಯಿಂದಾಗಿ ಸರಬರಾಜಿನಲ್ಲಿ ತೀವ್ರ ಕುಸಿತ ಉಂಟಾಗಿತ್ತು. ನಾನು ಲಿಂಕೇಜ್ ಸಭೆಗಳಲ್ಲಿ ಕಲ್ಲಿದ್ದಲು ಪೂರೈಕೆ ಹಾಗೂ ವ್ಯಾಗಿನ್ ಗಳ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದೆ.

-ಕೆ.ಜೈರಾಜ್ 

ಐಎಎಸ್ ಅಧಿಕಾರಿ (ನಿವೃತ್ತ)

Leave a Reply

Your email address will not be published. Required fields are marked *

fifteen − ten =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top