ಸ್ವಧರ್ಮ ನಿಂದನೆ ಮೆಕಾಲೆ ಶಿಕ್ಷಣದ ಕೊಡುಗೆ

Posted In : ಸಂಗಮ, ಸಂಪುಟ

ಭಾರತದ ಜನಜೀವನವನ್ನು ಅಧ್ಯಯನ ಮಾಡಲು ಬಂದಿದ್ದ ಟಿ. ಬಿ. ಮೆಕಾಲೆ  ಭಾರತದ ಜನರ ಬದುಕನ್ನು ಕಂಡು ಮುದಗೊಂಡ. 1836 ರ ಫೆ.2 ರಂದು ಬ್ರಿಟನ್ನಿನ ಸಂಸತ್ತಿನಲ್ಲಿ ಭಾಷಣ ಮಾಡುತ್ತಾ ಹೇಳಿದ –  ನಾನು ಭಾರತದ ಉದ್ದಗಲ ಪ್ರವಾಸ ಮಾಡಿದಾಗ ನನಗೊಬ್ಬನೇ ಒಬ್ಬ ಭಿಕ್ಷುಕನಾಗಲೀ, ಕಳ್ಳನಾಗಲೀ ಕಾಣಲು ಸಾಧ್ಯವಾಗಲಿಲ್ಲ. ಆ ದೇಶ ಅಪಾರ ಸಂಪತ್ತನ್ನು ಹೊಂದಿರುವುದಷ್ಟೇ ಅಲ್ಲ ಅಲ್ಲಿನ ಜನರು ಉತ್ಕೃಷ್ಟ ನೈತಿಕ ಮೌಲ್ಯವುಳ್ಳವರಾಗಿದ್ದು, ಅಲ್ಲಿನ ಧರ್ಮ-ಸಂಸ್ಕೃತಿಯ ಉನ್ನತ ಪರಂಪರೆಯ ವೈಭವವೇ ಆ ದೇಶದ ಜನರ ಬೆನ್ನೆಲುಬಾಗಿದೆ. ಅವರ ಈ ಪರಂಪರೆಯ ಸ್ಥಾನದಲ್ಲಿ ನಮ್ಮ ಆಂಗ್ಲ ಶಿಕ್ಷಣವನ್ನು ಕೊಡದೆ ಅವರನ್ನು ಆಡಳಿತ ವ್ಯಾಪ್ತಿಯಲ್ಲಿಡಲು ಆ ಸಾಧ್ಯವೇ ಇಲ್ಲ.

ಅವರ ಸಂಸ್ಕೃತಿ-ಪರಂಪರೆಯ ಬೆನ್ನು ಮೂಳೆ ಮುರಿಯಲು ಇರುವ ಒಂದೇ ಮಾರ್ಗ ಅವರ ಶಿಕ್ಷಣ ಪದ್ಧತಿಗಳನ್ನು ಬದಲಿಸಿ ನಮ್ಮ ಶಿಕ್ಷಣ ನೀತಿಯನ್ನು ಅಲ್ಲಿ ಪ್ರತಿಷ್ಠಾಪಿಸುವುದು. ಆಗ ಕೇವಲ ಮೂವತ್ತು ವರ್ಷಗಳಲ್ಲಿ ನೋಡಲು ಮಾತ್ರ ಅವರು ಭಾರತೀಯರಂತೆ ಸ್ವಭಾವದಲ್ಲಿ ಇಂಗ್ಲಿಷರಂತೆ ಆಗುವುದು ನಿಶ್ಚಿತ  ಎಂದ. 1996 ಸೆ.22 ರಂದು ದೆಹಲಿಯ ವಿಜ್ಞಾನಭವನದಲ್ಲಿ ಶಿಕ್ಷಣ ಮಂತ್ರಿಗಳ ಸಮ್ಮೇಳನ ಜರುಗಿತ್ತು. ಮಾನವ ಸಂಪನ್ಮೂಲ ಸಚಿವ ಮುರಳಿ ಮನೋಹರ ಜೋಶಿ ಆ ಸಮ್ಮೇಳನದ ಸಂಯೋಜಕರಾಗಿದ್ದರು. ಪ್ರಧಾನಿ ವಾಜಪೇಯಿಯವರು ಕಾರ್ಯಕ್ರಮದ ಉದ್ಘಾಟನೆ ಮಾಡುವ ಮುನ್ನ ಸರಸ್ವತೀ ವಂದನೆ ಪ್ರಾರಂಭವಾದ ಕೂಡಲೇ ಬಿಜೆಪಿಯೇತರ ಶಿಕ್ಷಣ ಮಂತ್ರಿಗಳು ಗಲಾಟೆ ಎಬ್ಬಿಸುತ್ತಾ-ನಮಗೆ ಶಿಕ್ಷಣದ ಕೇಸರೀಕರಣ ಬೇಡ, ನಮಗೆ ಹಿಂದುತ್ವ ಬೇಡ ಎಂದು ಕೂಗುತ್ತಾ ಅಸಹ್ಯಕರ ದೃಶ್ಯ ನಿರ್ಮಾಣ ಮಾಡಿದರು. ಈ ಶಿಕ್ಷಣ ಮಂತ್ರಿಗಳು ಸರಸ್ವತೀ ವಂದನಾ ಕಾರ್ಯಕ್ರಮವನ್ನು ಬಹಿಷ್ಕರಿಸಿ, ಸ್ವಧರ್ಮ ನಿಂದನೆ ಮಾಡುತ್ತಾ ಈ ರಾಷ್ಟ್ರದ ಭವ್ಯಪರಂಪರೆಯನ್ನು ಧಿಕ್ಕರಿಸಿದರು.

         ಸಾಗರದ ಇಂದಿರಾ ಗಾಂಧಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಹಾಗೂ ಎನ್ ಸಿ ಸಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಕೇಸರಿ ಬಣ್ಣದ ಶಿವಾಜಿ ಮಹಾರಾಜರ ಮುಖಭಾವವುಳ್ಳ ಧ್ವಜವನ್ನು ಹಿಡಿದು  ಜೈ ಭಜರಂಗಿ ಹಾಡಿಗೆ ಹೆಜ್ಜೆ ಹಾಕುತ್ತಾ ನಡು ನಡುವೆಯೇ ಭಾರತಮಾತೆಗೆ,  ಶ್ರೀರಾಮ, ಶಿವಾಜಿಯ ಪರ ಘೊಷಣೆಯನ್ನು ಕೂಗಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೆ ಆ ಕಾರ್ಯಕ್ರಮ ಮುಗಿದಿದೆ. ಆದರೆ ಈ ಕಾರ್ಯಕ್ರಮ ಅನೈತಿಕ, ಅದೇನೋ ನಡೆಯ ಬಾರದ್ದು ನಡೆದಿದೆ ಎಂಬಂತೆ ಕನ್ನಡದ ಕೆಲ ಸುದ್ದಿ ಮಾಧ್ಯಮಗಳು ದೊಡ್ಡ ಪ್ರಮಾಣದ ಅಪಪ್ರಚಾರಕ್ಕೆ ನಿಂತು ಬಿಟ್ಟವು.

 ಈ ಮೇಲಿನ  ಮೂರೂ ಘಟನೆಗಳು ಬೇರೆ ಬೇರೆಯೇ ಆದರೆ ಮೊದಲ ಮೆಕಾಲೆಯ ಅಭಿಪ್ರಾಯಕ್ಕೆ  ನಂತರದ ಎರಡು ಘಟನೆಗಳಿಗೂ ನೇರ ಸಂಬಂಧವಿದೆ. ಹಾಗಾಗಿ ಈ ಎರಡೂ ಘಟನೆಗಳ ಬಗ್ಗೆ ಅನಾವಶ್ಯಕ  ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಈ ದೇಶದ ಮಾನ ಬಿಂದುಗಳನ್ನು ಗೌರವಿಸುವುದು ಅಪಚಾರ ಎಂದು ಹೇಳುವ ಒಂದು ವರ್ಗ ಮೆಕಾಲೆ ಶಿಕ್ಷಣದಿಂದ ಪ್ರಭಾವಗೊಂಡಿರುವುದು  ಈ ಮೂಲಕ ಗಮನಕ್ಕೆ ಬರುತ್ತದೆ. ಮಾಧ್ಯಮಗಳ  ಈ ಅಸಂಬದ್ಧ ಅಪಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ.   ವೈಚಾರಿಕತೆಯ ವಿರೋಧಕ್ಕಾಗಿ ಸುದ್ದಿ ವಾಹಿನಿಗಳು ಯಾವ ಮಟ್ಟಕ್ಕೂ ಇಳಿದು ಸುದ್ದಿ ಕೊಡ ಬಲ್ಲವು ಎನ್ನುವುದಕ್ಕೂ ಇದು ಉದಾಹರಣೆ.

ಮಾಜಿ ಮಂತ್ರಿ ಮೇಟಿಯ ಲೈಂಗಿಕ ದೃಶ್ಯಗಳನ್ನು ಎಗ್ಗಿಲ್ಲದೇ ತೋರಿಸುವಾಗ, ಸಿನಿಮಾ ನಟ-ನಟಿಯರು ತುಂಡುಡುಗೆ ಧರಿಸಿ ಕುಣಿದು ಕುಪ್ಪಳಿಸುವ ದೃಶ್ಯಗಳನ್ನು ಪ್ರದರ್ಶಿಸುವಾಗ,  ಮಿಡ್ ನೈಟ್ ಮಸಲಾ’ ಎನ್ನುವ ಶೀರ್ಷಿಕೆ ಕೊಟ್ಟು ಸಿನಿಮಾದ ಅಶ್ಲೀಲ ದೃಶ್ಯಗಳನ್ನು ಸಂಕಲನ ಮಾಡಿ ಬಿತ್ತರಿಸುವಾಗ, ನಟಿಯರ ಅಂಗಾಂಗಗಳನ್ನು ಝೂಮ್ ಮಾಡಿ ತೋರಿಸುವಾಗ ಇಲ್ಲದ ಮರ್ಯಾದೆ ಆ ಹೆಣ್ಣು ಮಕ್ಕಳು ನಮ್ಮ ಪರಂಪರೆಯ ಭಾಗವಾಗಿರುವ ಭಗವಾಧ್ವಜವನ್ನು ಹೊತ್ತೊಯ್ದು ಕುಣಿದಾಗ ಆಗುತ್ತದೆಯೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಭಾರತ ಸುದೀರ್ಘ ಪರಂಪರೆ ಇರುವ ದೇಶ. ಕೆಲ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಕಳೆದು ಆ ನಂತರ ಸ್ವಾತಂತ್ರ್ಯ ಪಡೆದು ನಮ್ಮದೇ ಸಂವಿಧಾನವನ್ನು ಹೊಂದಿರಬಹುದು. ಈ ನಡುವೆ ಭಾರತ ಜಾತ್ಯತೀತ’ ರಾಷ್ಟ್ರವೂ ಆಗಿರಬಹುದು. ಹಾಗೆಂದು ಇಲ್ಲಿನ ಶಾಶ್ವತ ಮೌಲ್ಯಗಳನ್ನು, ಚಿಂತನೆಗಳನ್ನು ಬಿಟ್ಟು ಬದುಕಬೇಕೆ ಎನ್ನುವ ಪ್ರಶ್ನೆಗಳು ಏಳುತ್ತವೆ .

ಭಗವಾಧ್ವಜ ಹಿಡಿದು ಕುಣಿದರೆ ಅದು ಒಂದು ಧರ್ಮದ ನಂಬಿಕೆಗಳನ್ನು ಪ್ರತಿನಿಧಿಸುತ್ತದೆ ಎನ್ನುವ ಕಾರಣ ಕೊಟ್ಟು ಕೆಲ ನಿರೂಪಕರು ತಾವು ತೆರೆದ ಮನಸ್ಸಿನವರು ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಜೋತು ಬಿದ್ದವರಲ್ಲ ಎಂದು ಬಿಂಬಿಸಿಕೊಳ್ಳುವ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ಹಿಂದೂ ಧರ್ಮದ ನಂಬಿಗಳೊಂದಿಗೆ ರಾಷ್ಟ್ರದ ಅಸ್ಮಿತೆ ಇದೆ ಎಂದು ತಿಳಿಯುವ ತೆರೆದ ಮನಸ್ಸು ಹೊಂದಿಲ್ಲದಿರುವುದರಿಂದಲೇ ಇಂಥಾ ಅವಾಂತರಗಳು. ದೇಶದ ಮೂಲ ನಂಬಿಕೆಗಳನ್ನು ಅಪಚಾರ ಎಂದು ಭಾವಿಸುವ  ಮನೋಧರ್ಮ ಈ ದೇಶದ ವಿದ್ಯಾವಂತರ ಮಸ್ತಿಷ್ಕದಲ್ಲಿ ಅರುಹಲಾಗಿದೆ ಎನ್ನುವುದು ಬ್ರಿಟಿಷರ ಶಿಕ್ಷಣ ಪ್ರಭಾವವೇ ಎನ್ನಲು ಇದಕ್ಕಿಂತ ಉದಾಹರಣೆ ಬೇಕೆ? ಹಾಗಾಗಿ ಸ್ವಧರ್ಮದ ನಂಬಿಕೆಗಳನ್ನು ಹೀಗಳೆಯುದರಲ್ಲೇ ನಮ್ಮ ವಿಚಾರಕ್ಕೆ ಮೆರುಗು ತರುತ್ತಿದೆ ಎಂದು ನಂಬುವ ವರ್ಗ ಸೃಷ್ಟಿಯಾಗಿರುವುದು ಇದು ದಾಸ್ಯದ ಶಿಕ್ಷಣದ ಫಲವಲ್ಲದೇ ಮತ್ತೇನು? ಧ್ವಜ ಹಿಡಿದು ಜೈ ಭಜರಂಗಿ ಎನ್ನುವ ಹಾಡಿಗೆ ಕುಣಿದು ಕುಪ್ಪಳಿಸಿದ್ದು ಅಪರಾಧ ಎನ್ನುವಂತೆ ಬಿಂಬಿಸುವುದಾದರೆ ಇಂದಿನ ಬಹುತೇಕ ಯುವಜನಾಂಗ ದಾರಿ ತಪ್ಪುತ್ತಿರುವುದೇ ತಾವು ಪ್ರಸಾರ ಮಾಡುವ ಕೀಳು ಅಭಿರುಚಿಯ ಕಾರ್ಯಕ್ರಮಗಳಿಂದ ಎನ್ನುವುದು ಯಾಕೆ ಇವರ ಅರಿವಿಗೆ ಬರುತ್ತಿಲ್ಲ?

ಬೇಡದನ್ನು ತೋರಿಸಿ ಯುವ ಜನತೆಯ ವಯಸ್ಸನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಇಲ್ಲದ  ಡೇಗಳನ್ನು ರಂಗುರಂಗಾಗಿ ತೋರಿಸುವುದರಲ್ಲಿ ಯಾವ ಸಮಾನತೆಯ ತತ್ವವಿದೆ? ಸಿನಿಮಾ ಮಂದಿಯ ಹಸಿ ಬಿಸಿ ದೃಶ್ಯಗಳನ್ನು ಬಿತ್ತರಿಸುವಾಗ ಹೋಗದ ಮರ್ಯಾದೆ ತಮ್ಮ ಪರಂಪರೆಯ ಮಾನ ಬಿಂದುಗಳನ್ನು ಗೌರವಿಸುತ್ತಾ ಅದು ಸಿನಿಮಾದಲ್ಲೇ ತೋರಿಸಿದಂಥ  ಧ್ವಜ ಹಿಡಿದು ಡಾನ್ಸ್ ಮಾಡಿದರೆ ಈ ಮಾಧ್ಯಮ ಮಂದಿಗೇಕೆ ಉರಿ? ಬುರ್ಕಾ ಧರಿಸಿ ಶಾಲಾ-ಕಾಲೇಜಿಗೆ ಬರುವಾಗ ಕಾಣದ ಅಸಮಾನತೆ, ಮುಸ್ಲಿಂ ಹೆಣ್ಣುಮಕ್ಕಳು ಬ್ಯೂಟಿ ಪಾಲರ್ ಗೆ ಹೋಗಬಾರದು ಎಂದು ಹೇಳುವಾಗ ಮಾತಾಡದವರು  ಹಿಂದೂ ನಂಬಿಕೆಗಳ  ಪ್ರಶ್ನೆ ಮಾಡುವಾಗ ಬುದ್ಧಿಜೀವಿಗಳಾಗಿ ಬಿಡುವುದೇ?

ಈ ಹೆಣ್ಮಕ್ಕಳು ಹಿಡಿದಿದ್ದ ಶಿವಾಜಿ ಮಹಾರಾಜರಿದ್ದ ಕೇಸರಿ ಧ್ವಜ ಹಾಗೂ ಅವರು ಕೂಗಿದ ಘೊಷಣೆಯ ಬಗ್ಗೆ ವಿರೋಧಿಸುವವರು ಅವರ ಪೂರ್ವಗ್ರಹವನ್ನು ಬದಿಗಿಟ್ಟು ಈ ಮೂರು ಮಾನ ಬಿಂದುಗಳ ಬಗ್ಗೆಯೇ ಮಾತಾಡುವುದಾದರೇ  ಕೇಸರಿ ಈ ದೇಶದ ಋಷಿ ಪರಂಪರೆಯ ತ್ಯಾಗ ಭಾವದ ಪ್ರತೀಕವಾದರೆ ಶ್ರಿರಾಮ ಕೋಟಿ ಕೋಟಿ ಜನರ ಆರಾಧ್ಯ ದೈವ, ಶಿವಾಜಿ ಮಹಾರಾಜರ ಬದುಕಂತೂ ಈ ದೇಶದ ಯುವ ವೃಂದಕ್ಕೆ ಆದರ್ಶದ ಮೇಲ್ಪಂಕ್ತಿ. ಈ ಮೂರೂ ಮಾನಬಿಂದುಗಳಲ್ಲಿ ಭಾರತದ ರಾಷ್ಟ್ರಜೀವನದ ಸಮ್ಮಿಳಿತವಿದೆ. ಸರ್ಕಾರಿ ಕಾಲೇಜು ಎನ್ನುವ ಕಾರಣಕ್ಕೆ ನಮ್ಮ ಪ್ರಾಚೀನ ಸರ್ವಮಾನ್ಯ ನಂಬಿಕೆಗಳು ವರ್ಜ್ಯವೇ?  ಇಷ್ಟಕ್ಕೂನೋಡಿ ಸಂಭ್ರಮಿಸಿದವರಿಗಾಗದ ಸಂಕಟ ಇವರಿಗೇಗೆ ಬಂತು?

  ಈ ಶಿಕ್ಷಣಕ್ಕೂ ಈ ಮಾಧ್ಯಮ ನಿರೂಪಕರ  ಬೌದ್ಧಿಕ ಚಿಂತನೆಗೂ ನೇರ ಸಂಬಂಧವಿದೆ ಎನ್ನುವುದು ಇದೇ ಕಾರಣಕ್ಕೇ. ಮೆಕಾಲೇ ಪ್ರಣಿತ ಶಿಕ್ಷಣದಿಂದ ಪ್ರೇರಿತನಾದವ ಈ ದೇಶದ ನಂಬಿಕೆಗಳಿಂದ ದೂರವಾಗುತ್ತಾನೆ ಅಥವಾ ಅದರ ವಿರೋಧಿಯಾಗಿ ಪರಿವರ್ತನೆಯಾಗುತ್ತಾನೆ ಆ ಮೂಲಕ ಸ್ವಧರ್ಮ ನಿಂದಕನಾಗಿ ಪರಿವರ್ತನೆಗೊಳ್ಳುತ್ತಾನೆ. ಅಂಥವರಿಗೆ ಈ ದೇಶದಲ್ಲಿ ‘ಭಾರತ್ ಮಾತಾಕೀ ಜೈ’ , ‘ವಂದೇ ಮಾತರಂ’ , ‘ಜೈ ಶ್ರೀರಾಮ್’ ಎಂಬ ಘೋಷಣೆಗಳಲ್ಲಿ ಕೋಮುಭಾವನೆಯ ಕಮಟುವಾಸನೆ ಮೂಗಿಗಪ್ಪಳಿಸುತ್ತದೆ.  ಅದೇ ಭಾರತ್ ತೇರೆ ತುಕ್ಡೇ ಹೋಂಗೆ, ಇನ್ಷಾಅಲ್ಹಾ ಇನ್ಷಾಅಲ್ಹ ಎಂದಾಗ   ಅದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಗೋಚರವಾಗುತ್ತದೆ ಎಂದರೆ ಈ ದೇಶವನ್ನು ಶಾಶ್ವತವಾಗಿ ಗುಲಾಮತನದಲ್ಲೇ ಉಳಿಸಬೇಕೆಂಬ ಆ ಮೆಕಾಲೆಯ ಕನಸು ಇನ್ನೂ ಜೀವಂತವಾಗಿದೆ ಎಂದೆನಿಸುವುದಿಲ್ಲವೇ?!

-ಡ್ಯಾನಿ ಪಿರೇರಾ

ಅಧ್ಯಾಪಕ, ಹಳ್ಳಿಮೈಸೂರು               

 

Leave a Reply

Your email address will not be published. Required fields are marked *

two × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top