ಪೊಗರೇ ಖದರ‍್ರು ಈ ಟಗರು

Posted In : ಸಿನಿಮಾಸ್

-ಪ್ರಶಾಂತ್‌

ಸ್ಯಾಂಡಲ್‌ವುಡ್‌ನಲ್ಲಿ ಪೊಗರು ತುಂಬಿದ ಟಗರಿನ ಸದ್ದು ಮಾರ್ಧನಿಸುತ್ತಿದೆ. ಕನ್ನಡ ಚಿತ್ರರಂಗ ‘ಟಗುರು’ ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಹೊಸ ಹವಾ ಸೃಷ್ಟಿಸಿದ್ದು, ಸಿನಿ ಪ್ರಿಯರಲ್ಲಿ ಕುತೂಹಲವನ್ನು ಹುಟ್ಟು ಹಾಕಿವೆ. ಕರುನಾಡ ಚಕ್ರವರ್ತಿ ಶಿವಣ್ಣನಂತೂ ನವ ಯುವಕನಂತೆ ಹಾಡಿ ಕುಣಿದು ಆ ಕುತೂಹಲವನ್ನುಇಮ್ಮಡಿಗೊಳಿಸಿದ್ದಾರೆ. ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರಿಗೆ ಕಿಚಾಯಿಸಿದ್ದಾರೆ. ತನ್ನ ನೆಚ್ಚಿನ ನಾಯಕನನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಶಿವಣ್ಣನ ಅಭಿಮಾನಿಗಳು, ಕನ್ನಡ ಸಿನಿ ಪ್ರೇಕ್ಷಕರು ಕಾತರರಾಗಿದ್ದಾರೆ.

‘ಟಗರು’. ಹೆಸರಲ್ಲೇ ಪಂಚಿಂಗ್ ಇರುವ ತನ್ನನ್ನು ಕೆಣಕಿದವರಿಗೆ ಸರಿಯಾಗಿ ಪಾಠ ಕಲಿಸುವುದೇ ಆ ಟಗರಿನ ಕೆಲಸ. ಆದರೆ ಈ ‘ಟಗರು’ ತನ್ನ ಪಾಡಿಗೆ ತಾನಿದ್ದರೂ ತನ್ನನ್ನು ಕೆಣಕುವ, ಸಮಾಜಕ್ಕೆ ಕಂಟಕವಾ ಗಿರುವ ಸಮಾಜಘಾತುಕರನ್ನ ಹೆಡೆಮುರಿಕಟ್ಟುವುದೇ ಕಾಯಕ. ಪೊಗರು ತುಂಬಿದವರಿಗೆ ಸರಿಯಾಗೇ ಪಾಠ ಹೇಳುತ್ತೆ, ಚಂದನವನದಲ್ಲಿ ಬೆಳೆದ ನಮ್ಮ ಮಜುಬೂತ್ ‘ಟಗರು’. ‘ಟಗರು’ ಎಂದರೆ ಪೊಗರಿನ ಸಂಕೇತ. ಒಬ್ಬ ವ್ಯಕ್ತಿಯ ಆ್ಯಟಿಟ್ಯೂಡನ್ನು ಇಲ್ಲಿ ಬಿಂಬಿಸಲಾಗಿದೆ.

ಸೆಂಚೂರಿ ಸ್ಟಾರ್ ಸ್ಟೈಲಿಶ್ ಲುಕ್
‘ಟಗರು’ ದುನಿಯಾ ಸೂರಿ ನಿರ್ದೇಶನದಲ್ಲಿ ಬಂದ ಚಿತ್ರ. ಇದು ಶಿವಣ್ಣ-ಸೂರಿ ಕಾಂಬಿನೇಷನ್‌ನ ಎರಡನೇ ಚಿತ್ರವೂ ಹೌದು. ‘ಕಡ್ಡಿಪುಡಿ’ ಸೂರಿ ಶಿವಣ್ಣನಿಗಾಗಿ ನಿರ್ದೇಶಿಸಿದ ಮೊದಲ ಚಿತ್ರ. ಅಲ್ಲಿ ಶಿವಣ್ಣ ಸರಳವಾಗಿ ಸಾದಾಸೀದವಾಗಿ ಕಂಡರೆ, ಇಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಂಗೊಳಿಸುತ್ತಾರೆ. ಕಥೆಗೆ ತಕ್ಕಂತೆ ಅವರ ವಾಕಿಂಗ್, ಆ್ಯಕ್ಷನ್ ಎಲ್ಲವೂ ಇಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಶಿವಣ್ಣ ಹೊಸ ಶಿವಣ್ಣನಾಗಿ ಮಿಂಚಿದ್ದಾರೆ.

ಶಿವಣ್ಣನ ಸಿನಿಮಾ ಪ್ರೀತಿ
ಶಿವಣ್ಣ ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟರಾದರೂ, ಅವರಿಗೆ ಅಹಂ ಅನ್ನೋದು ಇದುವರೆಗೆ ಸುಳಿದೇ ಇಲ್ಲ. ದೊಡ್ಮನೆಯ ಗುಣ ಅಂತಹದ್ದು.  ಅವರ ಸರಳತೆ, ಸಜ್ಜನಿಕೆ, ಇವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇದೇ ಗುಣವನ್ನು ಮೆಚ್ಚಿದ ಅವರ ಅಭಿಮಾನಿಗಳು ಕೂಡ ಶಿವಣ್ಣನನ್ನು ಆರಾಧಿಸುತ್ತಾರೆ. ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 32 ವಸಂತಗಳೇ ಕಳೆದಿವೆ. ಅಂದಿನಿಂದ ಇಂದಿನವರೆಗೂ ಅವರ ಜನಪ್ರಿಯತೆ, ನಟನೆ ಎಲ್ಲೂ ಕಳೆಗುಂದಿಲ್ಲ. ‘ಟಗರು’ ಅವರು ಅಭಿನಯದ 119ನೇ ಸಿನಿಮಾ. 1986ರ ಫೆಬ್ರವರಿ 19ರಂದೇ ಶಿವಣ್ಣ ಅವರ ಮೊದಲ ಚಿತ್ರ ‘ಆನಂದ್’ ಸೆಟ್ಟೇರಿತ್ತು. ತೆರೆಗೆ ಬಂತು. ‘ಟಗರು’ ಕೂಡ ಫೆಬ್ರವರಿಯಲ್ಲೇ ತೆರೆಗೆ ಬರುತ್ತಿರುವುದು ಮತ್ತೊಂದು ವಿಶೇಷ. ದೇವರಾಜ್, ಸುಹಾಸಿನಿ, ಭಾವನಾ, ಮಾನ್ವಿತಾ, ಧನಂಜಯ, ವಸಿಷ್ಠ ಮುಂತಾ ದವರು ಚಿತ್ರದಲ್ಲಿ ನಟಿಸಿದ್ದಾರೆ.

ರೆಬಲ್ ಆದ ಮಾನ್ವಿತಾ

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ಮಾನ್ವಿತಾ ಕೂಡ ಒಬ್ಬರು. ‘ಕೆಂಡಸಂಪಿಗೆ’ಯ ಚೆಲುವೆಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಾನ್ವಿತಾ ತಮ್ಮ ಮುಗ್ಧ ನಟನೆಯ ಮೂಲಕವೇ ಎಲ್ಲರ ಮನಗೆದ್ದವರು. ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ನವ ನಟರ ಜೊತೆಯಷ್ಟೇ ಅಲ್ಲ, ಸ್ಟಾರ್ ಜೊತೆಯೂ ಮಾನ್ವಿತಾ ಅಭಿನಯಿಸಿದ್ದಾರೆ. ಈ ಹಿಂದೆ ‘ಕನಕ’ನ ರಾಣಿಯಾಗಿ ತೆರೆಯ ಮೇಲೆ ಮಿಂಚಿದ್ದ ಮಾನ್ವಿ, ಈಗ ‘ಟಗರು’ ಚಿತ್ರದಲ್ಲಿ ರೆಬೆಲ್ ಆಗಿ ತೆರೆಗೆ ಬಂದಿದ್ದಾರೆ. ‘ಟಗರು’ ಚಿತ್ರದ ಪಾತ್ರದ ಕುರಿತು ಮಾನ್ವಿತಾ ‘ವಿ.ಸಿನಿಮಾಸ್’ನೊಂದಿಗೆ ಮಾತನಾಡಿದ್ದಾರೆ.

ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ‘ಟಗರು’. ಈ ಚಿತ್ರದಲ್ಲಿ ಶಿವಣ್ಣ ನಟಿಸಿರುವುದು ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ‘ಟಗರು’ ಮೂಲಕ ಶಿವಣ್ಣ ತೆರೆಯ ಮೇಲೆ ಗುಟುರು ಹಾಕಿದರೆ, ಮಾನ್ವಿತಾ ಸಖತ್ತಾಗೆ ಟಪಾಂಗುಚ್ಚಿ ಹಾಕಿದ್ದಾರೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಪ್ರಭುದೇವ ಅವರ ನೃತ್ಯವನ್ನು ಬಹುವಾಗಿ ಮೆಚ್ಚುತ್ತಿದ್ದ ಮಾನ್ವಿತಾ ಅವರಂತೆ ನೃತ್ಯ ಕಲಿಯಲು ನಿರ್ಧರಿಸಿದರು. ತಾನಂದುಕೊಂಡಂತೆ ನೃತ್ಯವನ್ನು ಕಲಿತರು. ಆದರೆ ಹಲವು ಚಿತ್ರಗಳಲ್ಲಿ ನಟಿಸಿದರೂ ಒಂದೊಳ್ಳೆ ಸ್ಟೆಪ್ ಹಾಕಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ‘ಟಗರು’ ಮೂಲಕ ಅವರ ಕನಸು ನನಸಾಗಿದೆ.

ಸಂಗೀತದ ಆರಾಧಕಿ

ಮಾನ್ವಿತಾ ನಿಜಜೀವನದಲ್ಲಿ ಹೇಗೆ ಸಂಗೀತದ ಆರಾಧಿಕಿಯೋ ಹಾಗೇ, ‘ಟಗರು’ ಚಿತ್ರದಲ್ಲಿ ಸಂಗೀತ ಹಾಗೂ ನೃತ್ಯದ ಆರಾಧಕಿಯಾಗಿ ಕಾಣಿಸಿಕೊಂಡಿದ್ದಾರೆ. ವರ್ಗದ ಹುಡುಗಿಯಾಗಿ, ಸ್ವತಂತ್ರವಾಗಿ ತನಗಿಷ್ಟ ಬಂದಂತೆ ನೃತ್ಯ ಮಾಡುವುದೇ ಆಕೆಯ ಕೆಲಸ. ಆದರೆ ಹೀಗೆ ನಡೆದರೆ ಯಾವೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎಂಬುದನ್ನ ಚಿತ್ರದಲ್ಲಿ ತೊರಿಸಲಾಗಿದೆ.  ‘ನಾನು ಅಪ್ಪಾಜಿ (ಡಾ.ರಾಜ್‌ಕುಮಾರ್) ಅವರನ್ನು ಹತ್ತಿರದಿಂದ ಕಂಡಿಲ್ಲ. ಆದರೆ ಅವರನ್ನ ಶಿವಣ್ಣ ಅವರಲ್ಲಿ ಕಂಡೆ’. ಅವರು ಸರಳತೆಯ ಸಾಕಾರ ಮೂರ್ತಿ. ಇನ್ನೂ ಕಲಿಯುವ ಹುಮ್ಮಸ್ಸು ಅವರಲ್ಲಿದೆ. ಮುಖ್ಯವಾಗಿ ಅವರ ಶಿಸ್ತನ್ನು ನಿಜವಾಗಿಯೂ ಎಲ್ಲರೂ ಮೈಗೂಡಿಸಿಕೊಳ್ಳಬೇಕು.

ಲಾಂಗ್ ಹಿಡಿದ ಶಿವಣ್ಣ

ಕನ್ನಡ ಚಿತ್ರರಂಗಕ್ಕೆ ಲಾಂಗ್ ಶಿವಣ್ಣ. ಅವರು ಲಾಂಗ್ ಹಿಡಿಯುವ ಪರಿ, ಎದುರಿದ್ದವರಿಗೆ ಅಬ್ಬರಿಸುವ ಡೈಲಾಗ್ಸ್ ಎಲ್ಲವೂ ವಿಭಿನ್ನ. ಆಗ ಶಿವಣ್ಣನಿಗೆ ಶಿವಣ್ಣನೇ ಸಾಟಿ ಎನ್ನುವ ಮಾತು ಅಕ್ಷರಶಃ ಸತ್ಯ ಎನ್ನಿಸುತ್ತದೆ. ‘ಟಗರು’ ಚಿತ್ರದಲ್ಲಿ ಶಿವಣ್ಣ ಲಾಂಗ್ ಎತ್ತಿದ್ದಾರೆ. ಒಮ್ಮೆ ಪೊಲೀಸ್ ಗೆಟಪ್‌ನಲ್ಲಿ, ಮತ್ತೊಮ್ಮೆ ರೌಡಿಗಳಿಗೆ ಪರೋಡಿಯಾಗಿ ಕತ್ತಿ ಹಿಡಿದು ಸೆಟೆದು ನಿಂತಿದ್ದಾರೆ. ದಂಡಂ ದಶಗುಣಂ ಎಂಬ ಮಾತಿನಂತೆ, ಲಾಂಗ್ ಹಿಡಿದು ದುಷ್ಟರನ್ನ ಸದೆಬಡಿದಿದ್ದಾರೆ. ಇನ್ನು ಚಿತ್ರದಲ್ಲಿ ಕತೆಗೆ ತಕ್ಕಂತೆ ಹಾಡುಗಳು ಮೂಡಿಬಂದಿವೆ. ಅದಕ್ಕೆ ಶಿವಣ್ಣ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದ ಕಥೆ ಏನನ್ನು ಬಯಸುತ್ತದೆಯೋ ಅದನ್ನು ನಾನು ನಿಭಾಯಿಸಿದ್ದೇನೆ ಎನ್ನುತ್ತಾರೆ ಶಿವಣ್ಣ.

Leave a Reply

Your email address will not be published. Required fields are marked *

4 × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top