About Us Advertise with us Be a Reporter E-Paper

ವಿ +

ಬದುಕು ಬಂಗಾರವಾಗಿಸಲು ದಶ ಸೂತ್ರಗಳು

- ಸಂತೋಷ್ ರಾವ್, ಪೆರ್ಮುಡ

ಚಂದ್ರನಿಗೆ ಹುಣ್ಣಿಮೆಯ ಸಂತಸ ಹೇಗೋ, ಅದೇ ರೀತಿ ಅಮಾವಾಸ್ಯೆಯ ಕಷ್ಟವೂ ಸಹಜವಾಗಿ ಬರುತ್ತದೆ. ಆದರೆ ಇದೊಂದೇ ಶಾಶ್ವತವಲ್ಲ. ಹಲವು ಸಮಸ್ಯೆಗಳು ಬಂದಾಗ ಹೇಗೆ ಎದುರಿಸಬೇಕು, ಅವುಗಳಿಂದ ಹೊರಬರುವುದು ಹೇಗೆ ಎಂಬುದಕ್ಕೆ ವಿವರಗಳಿಲ್ಲಿವೆ.

ಮಾನವನಾಗಿ ಹುಟ್ಟಿದ ಮೇಲೆ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಪ್ರತಿಯೊಬ್ಬನೂ ಹೋರಾಟ ನಡೆಸುತ್ತಾನೆ. ಕೆಲವರು ಪ್ರಥಮ ಪ್ರಯತ್ನದಲ್ಲಿ ಯಶಸ್ವಿಯಾದರೆ, ಮತ್ತೊಂದಷ್ಟು ಜನರಿಗೆ ಹಲವಾರು ಬಾರಿ ಪ್ರಯತ್ನಿಸಿದಾಗ ಮಾತ್ರವೇ ಜಯ ದಕ್ಕುತ್ತದೆ. ಅಥವಾ ನಿರಂತರ ಸೋಲುಗಳಿಂದ ಕಂಗೆಟ್ಟು ಬದುಕೇ ಮುಗಿದು ಹೋಯಿತು ಎಂದು ತೀರ್ಮಾನಿಸುವುದೂ ತಪ್ಪಾಗುತ್ತದೆ.

ಖ್ಯಾತ ಕವಿ ಮೂಗೂರು ಮಲ್ಲಪ್ಪ ಅವರು ‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ.. ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ.. ಹೇರಿಕೊಂಡು ಹೋಗೋದಿಲ್ಲ ಸತ್ತಾರ್ ಬಂಡಿ..’ ಎಂದು ಬರೆದ ವಾಕ್ಯದಲ್ಲಿ ಮಾನವ ಜೀವನದ ವಿವಿಧ ಹಂತಗಳ ಸಾಧನೆ ಹಾಗೂ ಮರಣದ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಚಂದ್ರನಿಗೆ ಹುಣ್ಣಿಮೆಯ ಸಂತಸ ಹೇಗೋ, ಅದೇ ರೀತಿ ಅಮಾವಾಸ್ಯೆಯ ಕಷ್ಟವೂ ಸಹಜವಾಗಿ ಬರುತ್ತದೆ. ಆದರೆ ಇದೊಂದೇ ಶಾಶ್ವತವಲ್ಲ. ಹೀಗಾಗಿ ಬದುಕಿನಲ್ಲಿ ಕಷ್ಟದ ಸಂದರ್ಭಗಳು ಎದುರಾದಾಗ ಕೆಳಗಿನ ಹತ್ತು ಅಂಶಗಳ ಕುರಿತು ಗಮನವಹಿಸಿ, ಜೀವನ ಸುಧಾರಿಸಿಕೊಳ್ಳಬಹುದು.

ಬೇರೆಯವರ ತಪ್ಪುಗಳಿಂದ ಕಲಿಯಿರಿ: ನಮ್ಮ ಸುತ್ತಮುತ್ತಲಿನ, ಪರಿಚಯದವರು ಮಾಡುವ ತಪ್ಪುಗಳಿಂದ ನಾವು ಪಾಠ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವೇ ಎಲ್ಲಾ ತಪ್ಪುಗಳನ್ನೂ ಮಾಡಿ ಕಲಿಯುತ್ತೇವೆಂದರೆ ಒಂದು ಜೀವನ ಸಾಕಾಗದು. ನಮ್ಮ ಗಮನಕ್ಕೆ ಬರುವ ಹಲವು ರೀತಿಯ ಪಾಠಗಳನ್ನು ಕೂಲಂಕುಶವಾಗಿ ವಿಮರ್ಶೆ ಹಾಗೂ ಅಧ್ಯಯನ ಮಾಡಿ, ನಾವು ಅದನ್ನು ಪುನರಾವರ್ತಿಸದಂತೆ ನೋಡಿಕೊಳ್ಳಬೇಕು. ಅದರಿಂದಾಗುವ ಗಂಡಾಂತರಗಳನ್ನು ಮೊದಲೇ ತಪ್ಪಿಸಬಹುದು.

ಪ್ರಾಮಾಣಿಕತೆ ಧ್ಯೇಯವಾಕ್ಯವಾಗಿರಲಿ: ಪ್ರತಿಯೊಬ್ಬನ ಜೀವನದಲ್ಲೂ ಪ್ರಾಮಾಣಿಕತೆ ಇರಬೇಕು. ಆದರೆ ಅದು ಅತಿಯಾದರೆ ಮುಳುವಾಗುವ ಸಾಧ್ಯತೆ ಅಧಿಕ. ‘ಹುಲ್ಲಾಗು ಬೆಟ್ಟದಡಿ.. ಮನಕ್ಕೆ ಮಲ್ಲಿಗೆಯಾಗು’ ಎಂಬ ಕಗ್ಗದ ಮಾತಿನಂತೆ, ಸಮಯ ಸಂದರ್ಭ ಹಾಗೂ ಸನ್ನಿವೇಶಕ್ಕೆ ಅನುಗುಣವಾಗಿ ಬಾಗುವ, ಗಟ್ಟಿ ನಿಲ್ಲುವ ಹುಲ್ಲಿನ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಎಲ್ಲಾ ಪರಿಸ್ಥಿತಿಗಳನ್ನೂ ಸಮರ್ಥವಾಗಿ ಎದುರಿಸಿ ನಿಲ್ಲಬಹುದು.

ಕೆಲಸ, ಗುರಿ ಸ್ಪಷ್ಟವಿರಲಿ: ನಾನೇಕೆ ಈ ಕೆಲಸವನ್ನು ಮಾಡುತ್ತಿದ್ದೇನೆ? ಅದರ ಫಲವೇನು ಹಾಗೂ ಕೆಲಸದಲ್ಲಿ ಯಶಸ್ವಿಯಾಗುತ್ತೇನಾ ಎಂಬ ಮೂರು ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಮತ್ತು ಆತ್ಮಸಾಕ್ಷಿ ಸಹಿತ ಉತ್ತರ ಕಂಡುಕೊಳ್ಳಿ. ಆಗ ಮಾತ್ರ ಕೆಲಸವನ್ನು ಮುಂದುವರಿಸುವ ಪ್ರಯತ್ನ ಮಾಡುವುದು ಒಳಿತು. ಮಾಡುತ್ತಿರುವ ಕೆಲಸದಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಅದಕ್ಕೆ ವಿನಿಯೋಗಿಸುವ ಶ್ರಮ, ಹಣ ಮತ್ತು ಸಮಯ ವ್ಯರ್ಥವಾಗುತ್ತದೆ. ಕೆಲಸಕ್ಕೊಂದು ಅರ್ಥವೇ ಸಗದಿರಬಹುದು.

ರಹಿತ ಗೆಳೆತನ: ಪ್ರತಿಯೊಂದು ಗೆಳೆತನದ ಹಿಂದೆಯೂ ಸ್ವಾರ್ಥ ಇರುತ್ತದಾ ಇಲ್ಲವಾ ಎಂದು ಹೇಳುವುದು ಸ್ವಲ್ಪ ಕಷ್ಟದ ಸಂಗತಿ. ಆದರೆ ಇದು ಕಹಿ ಸತ್ಯವೂ ಹೌದು. ವ್ಯಕ್ತಿಯೊಬ್ಬನ ಯಶಸ್ಸಿನ ಹಿಂದೆ ಸ್ನೇಹ ಹಾಗೂ ಸ್ನೇಹಿತರನ್ನು ಯಾವ ರೀತಿ ನಿರ್ವಹಿಸಿಕೊಂಡು ಹೋಗುತ್ತಾನೆ ಹಾಗೂ ಅವರನ್ನು ಎಲ್ಲಿಡುತ್ತಾನೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಬದುಕಿನ ಎಲ್ಲಾ ಹಂತಗಳಲ್ಲೂ ಗೆಳೆಯರನ್ನು ಬಳಸಿಕೊಂಡರೆ ಗೆಳೆತನವೇ ಯಶಸ್ಸಿಗೆ ಮುಳ್ಳಾಗಿ ಕಾಡುತ್ತದೆ. ಆದ್ದರಿಂದ ಯಾರನ್ನು ಎಲ್ಲಿ, ಯಾವಾಗ, ಮತ್ತು ಹೇಗೆ ಎಂಬ ವಿವೇಚನೆ ಬೆಳೆಸಿಕೊಳ್ಳಿ.

ಆಂತರಿಕ ಸೌಂದರ್ಯಕ್ಕಿರಲಿ ಮಹತ್ವ: ವಿಶ್ವದ ಅತಿ ದೊಡ್ಡ ಶಕ್ತಿ ವ್ಯಕ್ತಿಯೊಬ್ಬನ ಅಂತರ್‌ಸೌಂದರ್ಯ. ಮನುಷ್ಯನಲ್ಲಿ ಸಹಜವಾಗಿ ಬೇರೂರಿರುವ ಬಾಹ್ಯ ಸೌಂದರ್ಯ ಎಷ್ಟೇ ಪ್ರಮುಖವಾದರೂ ಒಳ ಮನಸ್ಸಿನ ಸೌಂದರ್ಯವು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಮನುಷ್ಯನ ಆಂತರಿಕ ಸೌಂದರ್ಯ ಅಥವಾ ಆಂತರಿಕ ವಿಚಾರ ಧಾರೆಗಳು ಅತ್ಯುತ್ತಮವಾಗಿದ್ದರೆ ಆ ವ್ಯಕ್ತಿಯು ಯಶಸ್ಸಿನೆಡೆಗೆ ಸದಾ ಮುನ್ನಡೆಯಬಲ್ಲ.

ಅರ್ಧಕ್ಕೆ ಕೆಲಸ ನಿಲ್ಲಿಸಬೇಡಿ: ಒಂದು ಕೆಲಸವನ್ನು ಕೈಗೆತ್ತಿಕೊಂಡ ಬಳಿಕ ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ನಿಲ್ಲಿಸಬೇಡಿ. ಶ್ರೀಕೃಷ್ಣ ಹೇಳಿದಂತೆ ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ’ ಕೆಲಸ ಮಾಡುವುದಷ್ಟೇ ನಮ್ಮ ಧರ್ಮವಾಗಬೇಕು ಫಲಾಫಲಗಳನ್ನು ದೇವರು ನೀಡುತ್ತಾನೆ ಎಂದರಿತು, ಕೈಗೆತ್ತಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ. ಅದಕ್ಕಿಂತ ಖುಷಿಯ ವಿಚಾರ ಇನ್ಯಾವುದೂ ಇರಲು ಸಾಧ್ಯವಿಲ್ಲ.

ವಿಚಾರಧಾರೆ ಅತ್ಯುತ್ತಮವಾಗಿದ್ದಲ್ಲಿ ಒಳ್ಳೆಯತನವಿದೆ: ಹೂವಿನಿಂದ ಪಸರಿಸುವ ಸುಗಂಧ ಗಾಳಿ ಬೀಸುವ ದಿಕ್ಕಿಗೆ ಮಾತ್ರ ಪಸರಿಸುತ್ತದೆ. ಆದರೆ ವ್ಯಕ್ತಿಯಲ್ಲಿರುವ ಒಳ್ಳೆಯ ಅಂಶಗಳು ಹಾಗೂ ಸದ್ವಿಚಾರಗಳು ಗಾಳಿಯ ಸಹಾಯವಿಲ್ಲದೆಯೂ ಹರಿದಾಡುತ್ತದೆ. ಆದ್ದರಿಂದ ನಮ್ಮ ಚಿಂತನಾಲಹರಿ, ವಿಚಾರಧಾರೆಗಳು ಒಳ್ಳೆಯತನ ನಮ್ಮಲ್ಲಿದ್ದರೆ ಅವು ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗುತ್ತದೆ.

ಸಾಧನೆಗಳಿಂದ ಮಹಾನ್ ವ್ಯಕ್ತಿಗಳಾಗಿ: ಯಾರೂ ಹುಟ್ಟಿನಿಂದಲೇ ಮಹಾನ್ ವ್ಯಕ್ತಿಗಳಾಗಿರುವುದಿಲ್ಲ. ಅವರು ಬದುಕಿದ ರೀತಿ ಹಾಗೂ ಅವರ ಸಾಧನೆಗಳು ಇತರರಿಗಿಂತ ವಿಭಿನ್ನವಾಗಿರುತ್ತದೆ. ಅದೇ ಅವರನ್ನು ಮಹಾನ್ ವ್ಯಕ್ತಿಗಳನ್ನಾಗಿ ಮಾಡುತ್ತದೆ. ಆದ್ದರಿಂದ ವ್ಯಕ್ತಿ ತನ್ನ ಕರ್ಮಗಳಿಂದ ದೊಡ್ಡ ಮನುಷ್ಯನಾಗುತ್ತಾನೆಯೇ ವಿನಃ ಆತನ ಹುಟ್ಟಿನಿಂದಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಆದ್ದರಿಂದ ಮಹಾನ್ ವ್ಯಕ್ತಿಗಳು ಬದುಕಿದ ರೀತಿ ಎಂತಹದ್ದು ಎಂದು ಗಮನಿಸಿ ನಾವೂ ರೂಢಿಸಿಕೊಳ್ಳಬೇಕು.

ಯಶಸ್ವಿ ವ್ಯಕ್ತಿಗಳೊಂದಿಗೆ: ಯಾವಾಗಲೂ ನಮ್ಮ ಅಂತಸ್ತಿಗಿಂತ ಮೇಲಿರುವ ವ್ಯಕ್ತಿಗಳೊಂದಿಗೆ ಗೆಳೆತನವನ್ನು ಸಾಧಿಸುವುದು ಯಶಸ್ವೀ ಸೂತ್ರಗಳಲ್ಲೊಂದು. ಅವರ ವಿಚಾರಧಾರೆಗಳು ನಮಗಿಂತ ಮೇಲ್ಮಟ್ಟದಲ್ಲಿದ್ದು, ನಮ್ಮ ಅಭಿವೃದ್ಧಿಗೆ ಸಹಕಾರಿ. ಅವರೊಂದಿಗಿನ ಗಳೆತನವು ನಮ್ಮ ಯಶಸ್ಸಿನ ಮೆಟ್ಟಿಲಾಗುತ್ತದೆ. ವೇಗವಾಗಿ ನಾವೂ ಅಭಿವೃದ್ಧಿ ಹೊಂದಬಹುದು.

ವಿದ್ಯಾವಂತನಿಗೆ ವಿನಯವೇ ಭೂಷಣ: ಯಶಸ್ಸಿನೆಡೆಗೆ ಸಾಗುವ ವ್ಯಕ್ತಿಗೆ ವಿದ್ಯೆ ನಿಜವಾದ ಸ್ನೇಹಿತ. ವಿದ್ಯಾವಂತನಿಗೆ ಮನ್ನಣೆ ಸಿಗಬೇಕಿದ್ದರೆ ವಿನಯವೇ ಭೂಷಣ. ಜೀವನದ ಪ್ರತಿ ಕ್ಷಣದಲ್ಲೂ ಹೊಸ ಹೊಸ ವಿಚಾರಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಿ. ಇದು ಪ್ರಯತ್ನವೆಂದರೂ ತಪ್ಪಾಗದು.

ಈ ಅಂಶಗಳಿಂದ ಬದುಕಿನ ಹತಾಶೆ, ಸೋಲು ಹಾಗೂ ಕಠಿಣ ಸಂದರ್ಭಗಳನ್ನು ಗೆದ್ದು ನಿಲ್ಲುವ ಮನೋಧರ್ಮ ಬೆಳೆಸಿಕೊಳ್ಳಬಹುದು. ಜೀವನದಲ್ಲಿ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಂಡಾಗ ಆಶಾವಾದಿಯಾಗಿ ಬೆಳೆಯಬಹುದು. ಸಮಚಿತ್ತದಿಂದ ಬದುಕನ್ನು ಸಂಭಾಳಿಸಿಕೊಂಡು ಹೋದಾಗ ಯಶಸ್ಸಿನ ಉತ್ತುಂಗಕ್ಕೆ ಏರಬಹುದು.

Tags

Related Articles

Leave a Reply

Your email address will not be published. Required fields are marked *

Language
Close