ವಿಶ್ವವಾಣಿ

ಬುಡಕಟ್ಟು ಜನರ ಮನೆ ಬಾಗಿಲಿಗೆ ಆಂಬ್ಯುಲೆನ್ಸ್ ಸೇವೆ: ಡಿಸಿಎಂ ಪರಮೇಶ್ವರ್ ಚಾಲನೆ

ಬೆಂಗಳೂರು: ಅರಣ್ಯ ಅವಲಂಬಿತ ಬುಡಕಟ್ಟು ಜನರ ಮನೆ ಬಾಗಿಲ ಬಳಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು 16 ಸಂಚಾರಿ ಆರೋಗ್ಯ(ಆಂಬ್ಯುಲೆನ್ಸ್) ಘಟಕಗಳಿಗೆ ಡಿಸಿಎಂ ಪರಮೇಶ್ವರ ಚಾಲನೆ ನೀಡಿದರು.

ವಿಧಾನಸೌಧದ ಎದುರು ಡಿಸಿಎಂ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ವಾಹನಗಳಿಗೆ ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಅರಣ್ಯ ಅವಲಂಬಿತ ಕುಟುಂಬಗಳಿಗೆ ಆರೋಗ್ಯ ಸೇವೆ ನೀಡಬೇಕು. ಅಲ್ಲಿನ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಸೇವೆ. ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಆರೋಗ್ಯ ಸೇವೆ ಕಾರ್ಯಕ್ರಮ ಅನುಷ್ಠಾನವಾಗಿದೆ ಎಂದರು.

ಈ ಯೋಜನೆಗಾಗಿ ಒಟ್ಟು 8 ಕೋಟಿ ರು.ವ್ಯಯಿಸಲಾಗಿದೆ. ಮೊದಲನೆ ಹಂತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ , ಮೈಸೂರು ಜಿಲ್ಲೆಯ ಪಿರಿಯಪಟ್ಟಣ, ಹೆಗ್ಗಡದೇವನಕೋಟೆ ಮತ್ತು ಹುಣಸೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಯಳಂದೂರು ಮತ್ತು ಗುಂಡ್ಲುಪೇಟೆಗಳಲ್ಲಿ ಘಟಕಗಳು ಕಾರ್ಯನಿರ್ವಹಿಸಲಿದೆ.

ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಶಿವಮೊಗ್ಗದ ಶಿಕಾರಿಪುರ, ಉತ್ತರಕನ್ನಡ ಜಿಲ್ಲೆಯ ಹುಳಿಯಾಳದಲ್ಲಿ ಘಟಕಗಳು ಸೇವೆ ನೀಡಲಿವೆ.

ಸುಮಾರು 8 ಕೋಟಿ ವೆಚ್ಚದಲ್ಲಿ 16 ವಾಹನಗಳು ಕಾರ್ಯ ನಿರ್ವಹಿಸಲಿವೆ. ಆದಿವಾಸಿಗಳ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಸೇವೆ ನೀಡಲಿದೆ. 8 ಜಲ್ಲೆಗಳಲ್ಲಿ ಎರಡು ಹಂತಗಳಲ್ಲಿ ವಾಹನಗಳು ಸೇವೆ ಸಲ್ಲಿಸಲಿವೆ. ಪ್ರತಿದಿನ 2 ಗ್ರಾಮಗಳಿಗೆ ಆಂಬ್ಯುಲೆನ್ಸ್ ಭೇಟಿ ನೀಡಲಿವೆ.

ಸಚಿವರಿಗೆ ಉಸ್ತುವಾರಿ ನೀಡಿಕೆಯಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಹಾಗೇನಾದರು ಇದ್ದಲ್ಲಿ ಸಿಎಂ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಸಿದ್ದುರಿಂದ ರಾತ್ರಿ ಡಿನ್ನರ್: ಸಿದ್ದರಾಮಯ್ಯ ಊಟಕ್ಕೆ ಕರೆದಿರೋದರಲ್ಲಿ ಯಾವುದೇ ವಿಶೇಷ ಇಲ್ಲ. ನಾವೆಲ್ಲ ಕುಳಿತು ಊಟ ಮಾಡ್ತೀವಿ ಅಷ್ಟೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು..

ಬೆಳಗಾವಿ ಎರಡನೇ ರಾಜಧಾನಿ?: ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವವರಿಗೆ ಸಮಗ್ರ ಕರ್ನಾಟಕ ಹೇಗೆ ಆಯ್ತು ಅಂತ ಗೊತ್ತಿಲ್ಲ ಎಂದೆನಿಸುತ್ತದೆ. ಬೀದರ್ ನಿಂದ ಚಾಮರಾಜನಗರದ ವರೆಗೆ ಸುವರ್ಣ ಕರ್ನಾಟಕ ಇರಬೇಕು. ಬಿಜೆಪಿಯವರು ಬಳ್ಳಾರಿ ಹೈದ್ರಾಬಾದ್‍‍ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಬೆಳಗಾವಿ ಎರಡನೇ ರಾಜಧಾನಿ ಕುರಿತು ಚರ್ಚೆಗೆ ಬಂದಾಗ ನಿರ್ಧಾರ ಮಾಡುತ್ತೀವೆ. ಎಲ್ಲಾ ಭಾಗದಲ್ಲಿಯೂ ಅಭಿವೃದ್ಧಿ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರತ್ಯೇಕ ರಾಜ್ಯ ಬೇಡ ಅಭಿವೃದ್ಧಿಗೆ ಹೋರಾಟ ಮಾಡಲಿ: ಪ್ರಿಯಾಂಕ್‍‍ ಖರ್ಗೆ 

ಬಿಜೆಪಿಯವರು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಶ್ರೀರಾಮುಲು ಅಂತಹವರು ಇಂತಹ ಗಿಮಿಕ್ ಮಾಡುತ್ತಿದ್ದಾರೆ. ಅಡ್ವಾಣಿ ಅವರು ಉಪ ಪ್ರಧಾನಿ ಆದಾಗ 371Jಗೆ ವಿರೋಧಿಸಿದ್ದರು. ಈಗ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವವರು ಏಕೀಕರಣದ ಇತಿಹಾಸ ತಿಳಿದುಕೊಳ್ಳಬೇಕು. ಪ್ರತ್ಯೇಕ ರಾಜ್ಯದ ಬದಲು ಅಭಿವೃದ್ಧಿಗೆ ಹೋರಾಟ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.