About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಮೇಕೆದಾಟು ಯೋಜನೆಗೆ ವಿನಾಕಾರಣ ಅಡ್ಡಿ

ಬೆಂಗಳೂರು: ರಾಜ್ಯಕ್ಕಿಂತ ತಮಿಳುನಾಡಿಗೆ ಮೇಕೆದಾಟು ಯೋಜನೆಯಿಂದ ಹೆಚ್ಚು ಅನುಕೂಲವಿದೆ. ಆದರೆ, ತಮಿಳುನಾಡು ಸರಕಾರ ರಾಜಕೀಯ ಕಾರಣಗಳಿಂದ ಯೋಜನೆಯನ್ನು ವಿರೋಧಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಮಾಜಿ ಸಿಎಂಗಳು ಹಾಗೂ ಮಾಜಿ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ, ತಮಿಳುನಾಡು ಮೇಕೆದಾಟು ವಿಚಾರ ಚರ್ಚೆಗೆ ವಿಶೇಷ ಅಧಿವೇಶನ ಕರೆದಿರುವುದು ದಿಗ್ಭ್ರಮೆ ಮೂಡಿಸಿದೆ. ತಕರಾರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಬೇಕಾದ ಅರ್ಜಿ ಸ್ವರೂಪದ ಬಗ್ಗೆಯೂ ಇತ್ಯರ್ಥ ಮಾಡಲಾಗಿದೆ. ತಮಿಳುನಾಡು ಜತೆ ನಮಗೆ ಮನಸ್ತಾಪ, ತಗಾದೆ ಬೇಕಿಲ್ಲ.

ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಹಿತವನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾವೇರಿ ನದಿ ಪ್ರಾಧಿಕಾರ ಕರ್ನಾಟಕವು ತಮಿಳುನಾಡಿಗೆ ಬಿಡುಗಡೆ ಮಾಡಲು ನಿಗದಿ ಮಾಡಿರುವ ಪ್ರಮಾಣ ವಾರ್ಷಿಕ 177.25 ಟಿಎಂಸಿ. ಉತ್ತಮ ಮಳೆ ಹಿನ್ನೆಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಕರ್ನಾಟಕ ಬಿಡುಗಡೆ ಮಾಡಿರುವ ಪ್ರಮಾಣ 397 ಟಿಎಂಸಿ. ಆದರೆ ತಮಿಳುನಾಡು ಬಳಕೆ ಮಾಡಿಕೊಂಡದ್ದು ಕೇವಲ 150 ಟಿಎಂಸಿ. ಉಳಿದ ನೀರು ಸಮುದ್ರ ಸೇರಿ ಪೋಲಾಯಿತು.

ಈಗ ಮೇಕೆದಾಟುನಲ್ಲಿ ನಾವು ಮಾಡುತ್ತಿರುವ ಯೋಜನೆಯಿಂದ ಸಂಗ್ರಹವಾಗುವ ನೀರಿನ ಪ್ರಮಾಣ ಕೇವಲ 60 ಟಿಎಂಸಿ. ವಿದ್ಯುತ್ ಉತ್ಪಾದನೆ ನಂತರ ಆ ನೀರು ಕೂಡ ತಮಿಳುನಾಡಿಗೇ ಹರಿದು ಹೋಗುತ್ತದೆ. ನಮ್ಮ ದುಡ್ಡಿನಲ್ಲಿ ಅವರಿಗಾಗಿ ನೀರು ಸಂಗ್ರಹ ಮಾಡುವ ಈ ಯೋಜನೆಯನ್ನು ಅವರು ವಿರೋಧಿಸುತ್ತಿರುವುದು ಹತ್ತಿರದಲ್ಲೇ ಇರುವ ಲೋಕಸಭೆ ಚುನಾವಣೆಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ ಎಂದರು.

ಯೋಜನೆಯಿಂದ ತಮಿಳುನಾಡಿಗೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ನೀರು ಹರಿಸಲು ಸಾಧ್ಯವಾಗುತ್ತದೆ. ಯೋಜನೆ ವ್ಯಾಪ್ತಿಯಲ್ಲಿ ಒಂದೇ ಒಂದು ಎಕರೆ ಭೂಮಿಯಲ್ಲೂ ನೀರಾವರಿ ಮಾಡಲು ಆಗುವುದಿಲ್ಲ. ಅದಕ್ಕೆ ಅವಕಾಶ ನೀಡಲೂ ಸರಕಾರ ಸಿದ್ಧವಿಲ್ಲ. ನದಿ ನೀರು ನಿರ್ವಹಣೆ ಕಾವೇರಿ ಜಲ ಆಯೋಗದ ಪರಿಮಿತಿಯಲ್ಲಿರುವುದರಿಂದ ರಾಜ್ಯ ಸರಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆಯಿಂದ ರಾಜ್ಯದ 4,996 ಹೆಕ್ಟೇರ್ ಭೂಮಿ ಮುಳುಗಡೆ ಆಗುತ್ತಿದೆ. ಇದರಲ್ಲಿ 296 ಹೆಕ್ಟೇರ್ ಮಾತ್ರ ರೆವಿನ್ಯೂ ಭೂಮಿಯಿದೆ. ಆ ಸುತ್ತಲೂ ನೀರಾವರಿಗೆ ಒಂದು ಎಕರೆ ಜಾಗ ಕೂಡ ಉಳಿಯುವುದಿಲ್ಲ. ಕೇಂದ್ರ ಸರಕಾರ ಅದೆಲ್ಲವನ್ನೂ ಕೂಲಂಕಷವಾಗಿ ಪರಾಮರ್ಶಿಯೇ ಯೋಜನೆಗೆ ಅನುಮತಿ ನೀಡಿದೆ. ನ್ಯಾಯಾಲಯ, ಕೇಂದ್ರ ಜಲ ಆಯೋಗ ಕೊಟ್ಟಿರುವ ಆದೇಶ ಮತ್ತು ಅವಕಾಶದ ಪರಿಮಿತಿಯಲ್ಲೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಿಂಥ ಒಂದಿಂಚೂ ಆಚೀಚೆ ಕದಲುವುದಿಲ್ಲ ಎಂದರು.

ಕಾನೂನು ಹೋರಾಟಕ್ಕೆೆ ಸಿದ್ಧತೆ:
ತಮಿಳುನಾಡು ತಡೆಯಾಜ್ಞೆ ತರಲು ಪ್ರಯತ್ನಿಸುತ್ತಿರುವ ಕಾರಣದಿಂದ ಈ ಬಗ್ಗೆ ಸೂಕ್ತ ಕಾನೂನು ಹೋರಾಟ ನಡೆಸಲು ಸಿದ್ಧವಿರುವಂತೆ ರಾಜ್ಯದ ಮತ್ತು ದೆಹಲಿಯ ಕಾನೂನು ತಂಡವನ್ನು ಕರೆಸಿಕೊಂಡು ಚರ್ಚೆ ನಡೆಸಲಾಗಿದೆ. ಯೋಜನೆ ಬಗ್ಗೆ ನ್ಯಾಯಾಲಯ ಮತ್ತು ಪ್ರಾಧಿಕಾರದ ಮುಂಚೆ ವಿಸ್ತಾರವಾಗಿ ವಿಷಯ ಮಂಡನೆ ಮಾಡಲು ಸಜ್ಜಾಗುವಂತೆ ಸೂಚಿಸಲಾಗಿದೆ. ಜತೆಗೆ, ಮಹದಾಯಿ ಮತ್ತ ಕೃಷ್ಣಾ ನದಿ ನೀರು ಹಂಚಿಕೆ ವಿಚಾರದ ವ್ಯಾಜ್ಯಗಳ ಕುರಿತು ಅಗತ್ಯ ಕಾನೂನು ಹೋರಾಟಕ್ಕೆ ಸಜ್ಜಾಗಿರುವಂತೆ ಸೂಚಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಮಾಜಿ ಸಿಎಂ, ನೀರಾವರಿ ಸಚಿವರ ಸಭೆ:
ಮೇಕೆದಾಟು ಮತ್ತು ರಾಜ್ಯದ ಇನ್ನಿತರ ನೀರಾವರಿ ಯೋಜನೆಗಳ ಬಗ್ಗೆ ಸಲಹೆ ಪಡೆಯುವ ಉದ್ದೇಶದಿಂದ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಹಾಗೂ ನೀರಾವರಿ ಸಚಿವರ ಸಭೆ ಕರೆದಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಸ್.ಎಂ. ಕೃಷ್ಣ, ಸದಾನಂದಗೌಡರು, ಬಿ.ಎಸ್. ಯಡಿಯೂರಪ್ಪ ಅವರಿಗೂ ಸಭೆಗೆ ಆಹ್ವಾಾನ ನೀಡಲಾಗಿತ್ತು.ಆದರೆ, ಈ ನಾಲ್ವರು ಸಭೆಗೆ ಹಾಜರಾಗಿರಲಿಲ್ಲ. ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿಿ, ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಮಾಜಿ ನೀರಾವರಿ ಸಚಿವರಾದ ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ್ ಹಾಗೂ ಎಚ್.ಕೆ ಪಾಟೀಲ್ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close