Breaking Newsಪ್ರಚಲಿತರಾಜ್ಯ
ಸ್ಮಶಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಬೆಳಗಾವಿ: ಸ್ಮಶಾನದಲ್ಲಿ ಅಂತರ್ಜಾತಿಯ ಸರಳ ವಿವಾಹವಾಗುವ ಮೂಲಕ ಮೌಢ್ಯ ವಿರೋಧಿ ಪರಿವರ್ತನಾ ದಿನವಾಗಿ ಆಚರಿಸಿದ ಘಟನೆ ಸದಾಶಿವನಗರದಲ್ಲಿರುವ ರುದ್ರಭೂಮಿ ಸಾಕ್ಷಿಯಾಯಿತು.
ಸ್ಮಶಾನ ಭೂಮಿಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಗುರುವಾರ ನಡೆದ ಮೌಡ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮ ಅನೇಕ ನೂತನ ವಿಚಾರಗಳಿಗೆ ನಾಂದಿಯಾಯಿತು. ಹಿರಿಯರ ಆಶೀರ್ವಾದ, ಹೂಗಳ ಅಕ್ಷತಾರೋಹಣ, ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ನವ ಜೋಡಿ ನವಜೀವನಕ್ಕೆ ಕಾಲಿಟ್ಟಿತು.
ಈ ಸಮಾರಂಭವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದು. ಈ ವೇಳೆ ನವದಂಪತಿಗೆ ರೂ.50 ಸಾವಿರ ಪ್ರೋತ್ಸಾಹ ಧನ ಚೆಕ್ ನೀಡಿ ಜಾರಕಿಹೊಳಿ ಶುಭ ಹಾರೈಸಿದರು.
8 ನೇ ತರಗತಿ ಓದಿ, ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮದ ಸೋಪಾನ ಬಾಳಕೃಷ್ಣ ಜಾಂಬೋಟಿ (25) ಹಾಗೂ ದ್ವಿತೀಯ ಪಿಯು ಓದಿ, ಆಸ್ಪತ್ರೆಯಲ್ಲಿ ದರ್ಜೆ ನೌಕರಿ ಮಾಡುತ್ತಿರುವ ಹಿರೇಬಾಗೇವಾಡಿಯ ರೇಖಾ ಚಂದ್ರಪ್ಪ ಗುರವಣ್ಣವರ (23) ಸ್ಮಶಾನದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಸ್ಪತ್ರೆಯಲ್ಲಿ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಸಾವಿರಾರು ಜನರ ಸಮ್ಮುಖದಲ್ಲಿ ಮದುವೆಯಾದರು.