About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಫೇಲ್ ಒಪ್ಪಂದ: ನಡೆಯದ ಸಂಸತ್‌‌ ಕಲಾಪ

ದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಕರಣ ಸಂಸತ್ತಿನಲ್ಲಿ ಮತ್ತೆ ಪ್ರತಿಧ್ವನಿಸಿದ್ದು ಯಾವುದೇ ಕಲಾಪ ನಡೆಯದೇ ಎರಡೂ ಸದನಗಳನ್ನು ನಾಳೆಗೆ ಮುಂದೂಡಲಾಯಿತು.

ಈ ವಿಷಯದ ಜತೆಗೆ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಕಾವೇರಿ ಪ್ರಕರಣ ಮತ್ತು ಟಿಡಿಪಿ ಸದಸ್ಯರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ವಿಷಯ ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿ ಪಡಿಸಿದರು.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ರಫೇಲ್ ಒಪ್ಪಂದ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪ ನಡೆಯಲು ಸಹಕರಿಸುವಂತೆ ನಿರಂತರವಾಗಿ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಅಂತಿಮವಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

ಈ ಅಧಿವೇಶನದ ನಂತರ ಚುನಾವಣೆ ನಡೆಯಲಿದೆ. ಸರಕಾರ ಎಲ್ಲ ವಿಷಯಗಳನ್ನು ಚರ್ಚಿಸಲು ಸಿದ್ಧವಿದೆ. ಇಂತಹ ವರ್ತನೆ ಯಾರಿಗೂ ಶೋಬೆ ಅಲ್ಲ. ಇತರೆ ದೇಶಗಳು ಭಾರತದಲ್ಲಿ ಏನು ನಡೆಯುತ್ತಿದೆ ಎಂದು ನಗೆಪಾಟಲಿಗೀಡಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಮನವಿ ಮಾಡಿಕೊಂಡರೂ ಸದಸ್ಯರು ಧರಣಿಯನ್ನು ಕೈಬಿಡಲಿಲ್ಲ. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಚರ್ಚೆಗೆ ಪ್ರತಿಪಕ್ಷಗಳು ಸಿದ್ಧ. ಆದರೆ ಜಂಟಿ ಸದನ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು. ಸಂಸದೀಯ ವ್ಯವಹಾರ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿಕೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕೃಷಿ ಬಿಕ್ಕಟ್ಟು, ಚಂಡಮಾರುತದಂತಹ ಪ್ರಮುಖ ವಿಷಯಗಳನ್ನು ಕುರಿತು ಚರ್ಚೆ ಮಾಡೋಣ ಎಂದು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮಾಡಿಕೊಂಡ ಮನವಿಗೆ ಸದಸ್ಯರು ಸ್ಪಂದಿಸಲಿಲ್ಲ. ಸದನದ ಕಲಾಪ ಆರಂಭವಾಗುತ್ತಿದ್ದಂತೆ ತಮಿಳುನಾಡಿನ ಸದಸ್ಯರು ಬಾವಿಯೊಳಗೆ ನುಗ್ಗಿ, ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು.

ಈ ಗದ್ದಲದ ನಡುವೆಯೇ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ರಫೇಲ್ ಪ್ರಕರಣದಲ್ಲಿ ಸಂಸತ್ತು ಮತ್ತು ಸುಪ್ರೀಂಕೋರ್ಟ್‌ಅನ್ನು ದಾರಿ ತಪ್ಪಿಸಿರುವ ಸರಕಾರದ ವಿರುದ್ಧ ನೀಡಲಾಗಿರುವ ಹಕ್ಕುಚ್ಯುತಿ ನೋಟಿಸ್‌ಅನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು. ಸಂಸತ್‌ನ ಚಳಿಗಾಲದ ಅದಿವೇಶನ ಆರಂಭವಾದ ದಿನದಿಂದ ಇದುವರೆಗೂ ಒಂದು ದಿನವೂ ಕಲಾಪ ನಡೆದಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close