ಇವರು ನಮ್ಮ ಮಕ್ಕಳೆಂದು ಯಾರಿಗೂ ತಿಳಿದಿರಲಿಲ್ಲ

Posted In : ಅಂಕಣಗಳು, ಬಾಳ ಬಂಗಾರ

ಇವರು ನಮ್ಮ ಮಕ್ಕಳೆಂದು ಯಾರಿಗೂ ತಿಳಿದಿರಲಿಲ್ಲ ‘ವಿಷ್ಣು ಬದುಕಿದ್ದಾರೆ, ನಾವು ಮರೆತರಷ್ಟೇ ಅವರಿಗೆ ಸಾವು’, ಕಳೆದ ವಾರದ ಅಂಕಣದ ಶೀರ್ಷಿಕೆಯನ್ನು ಪತ್ರಿಕೆಯ ಅನೇಕ ಓದುಗರು ಮೆಚ್ಚಿದ್ದಾರೆಂದು ಪತ್ರಿಕಾಲಯದವರು ತಿಳಿಸಿದರು. ತುಂಬಾ ಸಂತೋಷ. ಅದನ್ನು ನಾನು ಸುಮ್ಮನೆಯೇ ಬರೆದಿದ್ದಲ್ಲ. ನನ್ನ ಮನದಾಳದ ಇಂಗಿತವನ್ನು ಅಲ್ಲಿ ನಾನು ವ್ಯಕ್ತಪಡಿಸಿದ್ದೇನೆ ಅಷ್ಟೇ. ನನಗೆ ಇಲ್ಲಿಯ ತನಕ ವಿಷ್ಣು ನನ್ನಿಂದ ದೂರವಾಗಿದ್ದಾರೆ ಅಂತ ಅನ್ನಿಸಿಯೇ ಇಲ್ಲ. ಇಲ್ಲೇ ಇದ್ದಾರೆ, ನಮ್ಮ ಮಧ್ಯದಲ್ಲೇ ಇದ್ದಾರೆ.

ನಮ್ಮ ಕೆಲಸ ಕಾರ್ಯಗಳನ್ನು, ನಮ್ಮ ಚಟುವಟಿಕೆಗಳನ್ನು ಸದಾ ಕಾಲ ಮೌನದಿಂದ ಕೈಕಟ್ಟಿಕೊಂಡು ನೋಡುತ್ತಿದ್ದಾರೆ ಅಂತಲೇ ನನ್ನ ಭಾವನೆ. ನಮ್ಮವರು ಅಂತ ಅನ್ನಿಸಿಕೊಂಡವರು, ನಮ್ಮ ಪ್ರೀತಿಪಾತ್ರರು ಯಾವತ್ತೂ ನಮ್ಮನ್ನು ತೊರೆಯುವುದಿಲ್ಲ ಎನ್ನುವುದು ನನ್ನ ದೃಢವಾದ ನಂಬಿಕೆ. ಈ ದಿನ ಅವರು ದೈಹಿಕವಾಗಿ ನಮ್ಮೊಡನೆ  ಇಲ್ಲ ಅಷ್ಟೇ. ಅಷ್ಟು ಮಾತ್ರಕ್ಕೆ ಅವರ ನೆನಪುಗಳಿಗೂ ತಿಲಾಂಜಲಿ ಕೊಡುವುದು ಯಾವ ನ್ಯಾಯ. ಅದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಆ ರೀತಿಯ ತೋರಿಕೆಯ ಸಮಾಧಾನ ನನಗೆ ಅಗತ್ಯವಿಲ್ಲ.

ಬದುಕಿನ ಪಯಣದಲ್ಲಿ ಹೊಸ ಹೊಸ ಪಾತ್ರಗಳು ಎಂಟ್ರಿ ಕೊಡುತ್ತಲೇ ಇರುತ್ತವೆ, ಕೆಲವು ಪಾತ್ರಗಳು ದಾರಿ ಮಧ್ಯದಲ್ಲೇ ಮರೆಯಾಗುತ್ತಿರುತ್ತವೆ. ಅವರಿಲ್ಲದೆಯೂ ಬದುಕು ಮುಂದುವರಿಯುತ್ತದೆ. ಆದ್ದರಿಂದ ಮರೆತು ಬದುಕನ್ನು ಸಾಗಿಸಿ ಎನ್ನುವುದನ್ನು ಕೆಲವರು ಪಾಲಿಸಿಯಾಗಿಸಿಕೊಂಡು ಇತರರಿಗೂ ಅದನ್ನೆ ಪಾಲಿಸುವಂತೆ ಹೇಳುತ್ತಾರೆ. ಹೌದು, ನಿಜ. ಬದುಕು ಮುಂದುವರಿಯುತ್ತಲೇ ಇರುತ್ತದೆ. ಅದರೊಂದಿಗೆ ನಾವೂ ಮುಂದುವರಿಯುತ್ತಿರುತ್ತೇವೆ. ಹೊಸ ನೆನಪು ಗಳನ್ನು ಸೃಷ್ಟಿಸಬಹುದೇನೋ ನಿಜ, ಆದರೆ ನೆನಪುಗಳನ್ನು ಅಳಿಸಿ  ಹಾಕುವುದು ಸಾಧ್ಯವಿಲ್ಲದ ಮಾತು. ಅದು ಕೊನೆ ಯವರೆಗೂ ನಮ್ಮೊಡನೆ ಇರುತ್ತದೆ. ಆ ನೆನಪುಗಳ ಮೂಲಕ ಆ ಸುಮಧುರ ನೆನಪುಗಳ ಭಾಗವಾಗಿದ್ದವರು ಕೂಡ ನಮಗೆ ಜೀವಂತವಾಗುತ್ತಾರೆ. ಇರಲಿ ಇದಿಷ್ಟು ಶೀರ್ಷಿಕೆಯ ವಿಷಯ ಬಂದಿದ್ದಕ್ಕೆ ಹೇಳಬೇಕಾಯಿತು.

ನಮ್ಮನೆಯೋರು ತುಂಬಾ ಸ್ಟ್ರಿಕ್ಟು ಅಂತ ಹಿಂದೊಮ್ಮೆ ಹೇಳಿದ್ದು ನಿಮಗೆಲ್ಲರಿಗೂ ನೆನಪಿದ್ದಿರಬಹುದು. ಅವರಿಗೆ ನಮ್ಮ ಮಕ್ಕಳಾದ ಕೀರ್ತಿ ಮತ್ತು ಚಂದನಾ ಅಂತಂದರೆ ಬೆಟ್ಟದಷ್ಟು ಪ್ರೀತಿಯಿದ್ದರೂ ಕೆಲ ವಿಚಾರಗಳಲ್ಲಿ ಅವರು ನಿಷ್ಠುರತೆ ಯನ್ನು ಕಾಪಾಡಿಕೊಳ್ಳುತ್ತಿದ್ದರು. ಎಲ್ಲಾ ಅಪ್ಪಂದಿರೂ ಹಾಗೆಯೇ ಇರುತ್ತಾರೆ ಎಂದುಕೊಳ್ಳುತ್ತೇನೆ. ಅವರು ಮಕ್ಕಳಿಂದ ಶಿಸ್ತನ್ನು ಅಪೇಕ್ಷಿಸುತ್ತಿದ್ದರು. ಒಂದು ಚೂರೂ ಆಲಕ್ಷ್ಯ, ಬೇಜವಾಬ್ದಾರಿ ವರ್ತನೆಯನ್ನು ಸಹಿಸುತ್ತಿರಲಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಒಡನೆಯೇ ಅದನ್ನು ತಿದ್ದಿ ಹೀಗಲ್ಲ ಹಾಗೆ ಎಂದು ಹೇಳಿಬಿಡುತ್ತಿದ್ದರು. ಅವರು ನಿಷ್ಠುರತೆ ಕಾಪಾಡಿಕೊಳ್ಳುತ್ತಿದ್ದ  ವಿಚಾರಗಳಲ್ಲಿ ಸಿನಿಮಾ ಕೂಡ ಒಂದು. ಅವರೆಂದಿಗೂ ತಮ್ಮ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಕರೆದೊಯ್ಯುತ್ತಿರಲಿಲ್ಲ.

ನಮ್ಮ ಮುದ್ದು ಮಕ್ಕಳೂ ಅಷ್ಟೇ ಹಠ ಮಾಡಲು ಹೋಗುತ್ತಿರಲಿಲ್ಲ. ಅಷ್ಟು ಹೊಂದಾಣಿಕೆಯನ್ನು ಅವು ಆಗಲೇ ಬೆಳೆಸಿಕೊಂಡುಬಿಟ್ಟಿದ್ದವು. ನಿಮಗೆ ಸೆಲಬ್ರಿಟಿ ಬದುಕಿನ ಬಗ್ಗೆ ಕುತೂಹಲ ಹೆಚ್ಚಿರುತ್ತದೆ ಎನ್ನುವುದನ್ನು ಬಲ್ಲೆ. ಎಲ್ಲಿ ಹೋದರೂ ಚಿತ್ರರಂಗದ ಮಂದಿಯನ್ನು ಜನರು ಗುರುತಿಸಿ ಮುತ್ತಿಕೊಳ್ಳುವುದರಿಂದ ಖಾಸಗಿತನವನ್ನು ಕಾಪಾಡುವುದು ಕೊಂಚ ಕಷ್ಟದ ಕೆಲಸವೆ.  ಅವರ ಪ್ರೀತಿ, ವಿಶ್ವಾಸ ಕಂಡು ಸಂತೋಷವೇನೋ ಆಗುತ್ತದೆ, ಅದರೊಂದಿಗೇ ಕುಟುಂಬದವರೊಂದಿಗೆ ಏಕಾಂತದಲ್ಲಿ ಸಮಯ ಕಳೆಯಲಾಗುವುದಿಲ್ಲವೆಂಬ ದುಃಖವೂ ಅದರ ಜತೆಗೇ ಬರುತ್ತದೆ. ವಿಷ್ಣು ಸಾರ್ವಜನಿಕವಾಗಿ ಕಾಣಿಸಿ ಕೊಂಡರೂ, ಅವರ ಸ್ನೇಹ ಮತ್ತು ಅಭಿಮಾನಿಗಳ ಬಳಗ ಎಷ್ಟು ದೊಡ್ಡದಿದ್ದರೂ ಖಾಸಗಿತನವನ್ನು ಕಾಪಾಡಿಕೊಳ್ಳಲು ಇಚ್ಛಿಸುತ್ತಿದ್ದರು. ಅಂದರೆ ನಾವು ಮನೆ ಯವರು ಮಾತ್ರ ಹೊರಗಡೆ ವಿಹಾರಕ್ಕೆಂದು ಹೋದಾಗ ಅವರು ಒಬ್ಬ ಪತಿಯಾಗಲು ಇಷ್ಟಪಡುತ್ತಿದ್ದರು, ಮಕ್ಕಳಿಗೆ ತಂದೆಯಾಗಲು ಇಷ್ಟಪಡುತ್ತಿದ್ದರು, ಒಬ್ಬ ತಾಯಿಗೆ ಮಗನಾಗಲು ಇಷ್ಟಪಡುತ್ತಿದ್ದರು.

ಯಾವಾಗ ಯಾರಾದರೊಬ್ಬರು ಅವರನ್ನು ಗುರುತಿಸುತ್ತಾರೋ ಆವಾಗ ಅವರು ನಟನಾಗಿ ಬದಲಾಗಿ ಉಳಿದೆಲ್ಲಾ ನೈಜ ಬದುಕಿನ ಪಾತ್ರಗಳಿಂದ ದೂರವಾಗಬೇಕಾಗಿ ಬರುತ್ತಿತ್ತು. ಹಾಗಾದಾಗ ತುಂಬಾ ಸಂಕಟ ಪಡುತ್ತಿದ್ದರು. ಇತ್ತ ಅಭಿಮಾನಿಗಳನ್ನು ಕೂಡ ದೂರ ಮಾಡುವಂತಿರಲಿಲ್ಲ, ಕುಟುಂಬವನ್ನೂ ದೂರ ಹಾಗಿರಲಿಲ್ಲ. ಕೊನೆ ಕೊನೆಗೆ ಈ ಎರಡೂ ಬದುಕನ್ನು ಹೇಗೆ ಸರಿದೂಗಿಸಬೇಕೆನ್ನುವುದನ್ನು ಕಲಿತರು. ವೈಯಕ್ತಿಕ ಮತ್ತು ವೃತ್ತಿ ಬದುಕಿನ ನಡುವೆ ಒಂದು ಫರ್ಫೆಕ್ಟ್ ಗೆರೆಯನ್ನು ಗುರುತಿಟ್ಟುಕೊಂಡರು. ಅದರ ಪ್ರಕಾರ ವಾಗಿಯೇ ಮಕ್ಕಳು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬರುವುದನ್ನು ಇಷ್ಟಪಡದೇ ಇದ್ದುದು.

ಈಗೆಲ್ಲಾ ಸೆಲಬ್ರಿಟಿಗಳು ತಮ್ಮ ಇಡೀ ಕುಟುಂಬವನ್ನು ಮಾಧ್ಯಮಗಳ ಮುಂದೆ ತಂದು ಪರಿಚಯಿಸುತ್ತಾರೆ. ಹಾಗೆ ಮಾಡುವುದು ಅವರ ವೃತ್ತಿ ಬದುಕಿನ ಭಾಗವೆಂದು ತಿಳಿಯುತ್ತಾರೆ. ಎಲ್ಲೋ ಕೆಲವರಷ್ಟೇ ಮಾಧ್ಯಮಗಳಿಂದ ಕುಟುಂಬವನ್ನು ದೂರವಿಟ್ಟಿರಬಹುದು. ಹಿಂದೆ ಹಾಗಿರಲಿಲ್ಲ ಇಚ್ಛಿಸಿದಲ್ಲಿ ವೈಯಕ್ತಿಕ ಬದುಕನ್ನು ಎಲ್ಲ ಸೆಲಬ್ರಿಟಿಗಳೂ ಕಾಪಾಡಿಕೊಳ್ಳಬಹುದಿತ್ತು. ಮಾಧ್ಯಮಗಳೂ ಅಷ್ಟೆೆ, ಅವರ ಖಾಸಗಿತನವನ್ನು ಗೌರವಿಸುತ್ತಿದ್ದವು. 

ನಾವು ಕೂಡ ಮಕ್ಕಳು ಬೆಳೆಯುವಾಗ ನಮ್ಮ ಫೇಮ್ ಅವರಿಗೆ ತಟ್ಟದಿರಲು ಎಲ್ಲಾ ಕ್ರಮಗಳನ್ನು ಕೈಗೊಂಡೆವು. ಇದರ ಹಿಂದಿದ್ದಿದ್ದು ಒಂದೇ ಕಾರಣ, ನಮ್ಮ ಮಕ್ಕಳು ಎಲ್ಲಾ ಮಕ್ಕಳಂತೆ ಬೆಳೆಯಬೇಕು ಎನ್ನುವುದು. ತಾವು ಸ್ಪೆಷಲ್ ಎಂಬ ಭಾವನೆ ಅವರಲ್ಲಿ ಮೊಳೆಯದಂತೆ ಏನೇನು ಮಾಡಬೇಕೋ ಅವೆಲ್ಲವನ್ನೂ ನಾನೂ ವಿಷ್ಣು ಸೇರಿ ಮಾಡಿದೆವು. ಅದರಲ್ಲಿ ಯಶಸ್ವಿಯೂ ಆದೆವು. ಮಕ್ಕಳ ಮನಸ್ಸಲ್ಲಿ ಯಾವತ್ತೂ ತಾವು ಸೆಲಬ್ರಿಟಿಗಳ ಮಕ್ಕಳು ಎಂಬ ಭಾವನೆ ಬರದಂತೆ ಎಚ್ಚರ ವಹಿಸಿದೆವು. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ, ಆ ಚಿಕ್ಕ ವಯಸ್ಸಿನಲ್ಲಿ ಅವೇನನ್ನು ನೋಡುತ್ತವೆಯೋ, ಏನನ್ನು ಕಲಿಯುತ್ತವೆಯೋ ಅವೇ ಅವರ  ಬದುಕನ್ನು ನಿರೂಪಿಸುವುದು. ಮಕ್ಕಳೂ ಈ ವಿಚಾರವನ್ನು ಅರಿತು ಕೊಂಡು ಅದರಂತೆಯೇ ನಡೆದುಕೊಂಡಿದ್ದು ನನಗೆ ಸಖತ್ ಆಶ್ಚರ್ಯವಾಗಿತ್ತು. ನಿಮಗೊಂದು ವಿಚಾರ ಹೇಳಬೇಕು ನಮ್ಮ ಮಕ್ಕಳು ಬೆಂಗಳೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಸೇರಿಸಿದ್ದೆವು.

ಅವರ ಸಹಪಾಠಿಗಳ್ಯಾರಿಗೂ ಅವರ ತಂದೆ ತಾಯಿಯರು ನಾವೆಂಬ ವಿಚಾರ ಗೊತ್ತೇ ಇರಲಿಲ್ಲ. ಆಡಳಿತ ಮಂಡಳಿಯವರೂ ನಮ್ಮ ಕೋರಿಕೆಗೆ ಸ್ಪಂದಿಸಿದ್ದರು. ಕೀರ್ತಿ ಮತ್ತು ಚಂದನಾ ಇಬ್ಬರೂ ನಮ್ಮ ಮಕ್ಕಳೆಂದು ತಿಳಿದರೆ ಶಾಲೆಯಲ್ಲಿ ಅವರಿಗೆ ಸಿಗುತ್ತಿದ್ದ ಉಪಚಾರ ಮತ್ತು ಅವರ ಸ್ನೇಹಿತರು ಅವರನ್ನು ನಡೆಸಿಕೊಳ್ಳುವ ರೀತಿ ಬದಲಾಗುತ್ತವೆ ಎನ್ನುವುದು ನಮ್ಮ ಲೆಕ್ಕಾಚಾರ. ಮುಂಚೆಯೇ ಹೇಳಿದಂತೆ ಅವರಿಗೆ ನಾರ್ಮಲ್ ಬದುಕನ್ನು ಕಟ್ಟಿಕೊಡಬೇಕೆನ್ನುವುದು ವಿಷ್ಣು ಮತ್ತು ನನ್ನ ಮುಖ್ಯ ಆಶಯವಾಗಿತ್ತು. ಕಾಲ ಹೀಗೆಯೇ ಸಾಗಿತು. ಮಕ್ಕಳು ನಮ್ಮ ಕಣ್ಣ ಮುಂದೆಯೇ ನಾವಂದುಕೊಂಡಂತೆಯೇ ಬೆಳೆದು  ದೊಡ್ಡವರಾಗುತ್ತಿದ್ದರು. ಅಲ್ಲಿಯವರೆಗೆ ಸ್ಕೂಲ್‌ನಲ್ಲಿ ಇವರಿಬ್ಬರೂ ನಮ್ಮ ಮಕ್ಕಳೆಂದು ಯಾರಿಗೂ ತಿಳಿದಿರಲಿಲ್ಲ. ಎಷ್ಟುದಿನ ಶಾಲೆಯಲ್ಲಿ ನಮ್ಮ ಮಕ್ಕಳು ವಿಷ್ಣುವರ್ಧನ್- ಭಾರತಿ ಮಕ್ಕಳು ಎನ್ನುವುದನ್ನು ಮುಚ್ಚಿಡಬಹುದೋ ಎಂಬುದು ನಮಗೇ ಗೊತ್ತಿರಲಿಲ್ಲ. ಕಡೆಗೂ ಆ ವಿಚಾರ ಹೊರ ಬರುವ ದಿನ ಬಂದಿತು.

-ಭಾರತಿ ವಿಷ್ಣುವರ್ಧನ್ 

One thought on “ಇವರು ನಮ್ಮ ಮಕ್ಕಳೆಂದು ಯಾರಿಗೂ ತಿಳಿದಿರಲಿಲ್ಲ

  1. ಮೇಡಂ ಭಾರತಿಯವರೇ,
    ನಾನು ವಿಷ್ಣುವರ್ಧನ್ ಹಾಗೂ ನಿಮ್ಮ ಅಭಿಮಾನಿ. ನಾನು ಈ ಪತ್ರವನ್ನು ನಿಮಗೆ ಅಮೇರಿಕೆಯಿಂದ ಬರೆಯುತ್ತಿದ್ದೇನೆ. ವಿಷಯ ಮೇಲಿನ ಅಂಕಣಕ್ಕೆ ನೇರವಾಗಿ ಸಂಬಂಧಿಸದೆ ಇದ್ದರೂ, ನನ್ನರೆಡು ಮನದಾಳದ ಮಾತುಗಳನ್ನು ನಿಮ್ಮವರೆಗೆ ತಲುಪಿಸಲು ಈ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದೇನೆ. ಮೈಸೂರಿನಲ್ಲಿ ಶ್ರೀ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಕುರಿತಾದ ಸುದ್ದಿ ಟಿವಿ ಯಲ್ಲಿ ಪ್ರಸಾರವಾಗುತ್ತಿತ್ತು, ಬಡವರು ನಮ್ಮ ಭೂಮಿಯನ್ನು ದಯವಿಟ್ಟು ಕಿತ್ತುಕೊಳ್ಳಬೇಡಿ ಅಂತ ಗೋಳಿಡುತ್ತಿರುವ ದೃಷ್ಯ ಮನ ಕಲಕುವಂತಿತ್ತು. ಇದನ್ನು ನೀವು ನೋಡಲಿಲ್ಲವೇ? ಇದರ ಬಗ್ಗೆ ನಿಮಗೇನೂ ಅನಿಸಲಿಲ್ಲವೇ? ಹೋಗಲಿ ಇದೆಲ್ಲ ಅಭಿಮಾನಿಗಳು ಹಾಗೂ ಸರಕಾರದ ಕೆಲಸ ಅಂತಾನೆ ಇಟ್ಕೊಳ್ಳೋಣ, ನೀವು ಒಂದು ಮಾತು ಹೇಳಬಹುದಲ್ಲಾ ವಿಷ್ಣುವರ್ಧನ್ ಅವರನ್ನು ಮನದಲ್ಲಿ ಜೀವಂತವಾಗಿರಿಸೋಣ, ( ‘ಅವ್ರು ನಮ್ಮನ್ನು ಬಿಟ್ಟು ಹೋಗಿಲ್ಲ ನಮ್ಮೆಲ್ಲರ ಜೊತೆಗೆ ಇದ್ದಾರೆ ‘ ಇದು ಡೈಲಾಗ್ಗಳಿಗೆ ಸೀಮಿತಿವಾಗಬಾರದ್ಷ್ಟೇ! )ಇಷ್ಟ ಜನರ ಸಮಾಧಿಯ ಮೇಲೆ ಅವರ ಸಮಾಧಿ ಕಟ್ಟುವುದು ಬೇಡ ಅಂತ. ನಾನು ದೂರದಲ್ಲಿ ಇರುವುದರಿಂದ ಅಲ್ಲಿಯ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಅಷ್ಟೊಂದು ಮಾಹಿತಿ ಇರುವುದಿಲ್ಲ. ನೀವು ಈಗಾಗಲೇ ಇದರ ಬಗ್ಗೆ ಪ್ರತಿಕ್ರಯಿಸಿದ್ದರೆ ದಯವಿಟ್ಟು ಈ ಸಾಲುಗಳನ್ನು ಮರೆತುಬಿಡಿ. ಇಲ್ಲವಾದಲ್ಲಿ ಇದಕ್ಕೊಂದು ಪರಿಹಾರ ನೀವೇ ಸೂಚಿಸಿ, ನಿಮ್ಮ ಮಾತನ್ನು ಯಾರೂ ಅಲ್ಲಗಳೆಯಲಾರರು ಯಂದು ಭಾವಿಸಿದ್ದೇನೆ.
    ಧನ್ಯವಾದಗಳು.

Leave a Reply

Your email address will not be published. Required fields are marked *

three × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top